ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Keshava Prasad B Column: ಚೀನಾದಲ್ಲಿ ಡಿಗ್ರಿ ಇಲ್ಲದಿದ್ದರೆ ದುಡ್ಡಿನ ಬಗ್ಗೆ ರೀಲ್ಸ್‌ ಮಾಡುವಂತಿಲ್ಲ !

ಭಾರತದನಾದರೂ ಇಂಥ ಕಾನೂನು ಜಾರಿಯಾದರೆ? ಪರಿಸ್ಥಿತಿಯನ್ನು ಆಲೋಚಿಸುವುದೂ ಕಷ್ಟ ವಾದೀತು. ಏಕೆಂದರೆ ನಮ್ಮಲ್ಲಿ ಜ್ಯೋತಿಷಿಗಳು, ಗುರುಗಳ ಸೋಗಿನಲ್ಲಿ ಯಾರ‍್ಯಾರೋ, ಹಣಕಾಸು-ಸಂಪತ್ತು-ಆರೋಗ್ಯ-ರಾಜಕೀಯ ಭವಿಷ್ಯದ ತನಕ ಬ್ರಹ್ಮಾಂಡವನ್ನೂ ಗಂಟೆಗಟ್ಟಲೆ ಹೇಳಿ‌ ಬಿಡುತ್ತಾರೆ. ಸಕಲ ಸಮಸ್ಯೆಗಳಿಗೂ ಪರಿಹಾರಗಳನ್ನು ಚಿಟಿಕೆ ಹೊಡೆದಂತೆ ಕೊಟ್ಟು ಬಿಡುತ್ತಾರೆ. ಆದರೆ ಅವರಿಗೆ ಆಯಾ ವಿಷಯಗಳಲ್ಲಿ ಪದವಿ ಇದೆಯೇ? ಡಿಗ್ರಿ ಕಾಲೇಜು ಮೆಟ್ಟಿಲು ಹತ್ತಿದ್ದಾರೆಯೇ? ಯಾರಿಗೂ ಗೊತ್ತಿಲ್ಲ!

ಮನಿ ಮೈಂಡೆಡ್

ಭಾರತದಲ್ಲಿ ಹಣಕಾಸು ವಿಚಾರಗಳ ಬಗ್ಗೆ ಕಂಟೆಂಟ್ ಕ್ರಿಯೇಟರ್‌ಗಳು, ಇನ್ ಫ್ಲುಯೆನ್ಸರ್‌ ಗಳಿಗೆ ನಿಯಮವಿದೆ. ಆದರೆ ಡಿಗ್ರಿ ಮಾಡಿರಲೇಬೇಕು ಎಂಬ ಚೀನಾ ಮಾದರಿಯ ನಿಯಮ ಇಲ್ಲ. ಹೀಗಿದ್ದರೂ ಷೇರು ಮಾರುಕಟ್ಟೆಯ ನಿಯಂತ್ರಕ ‘ಸೆಬಿ’ ಕೆಲವು ನಿಯಮಾವಳಿಗಳನ್ನು ಜಾರಿ ಗೊಳಿಸಿದೆ. ಅದರ ಪ್ರಕಾರ ಸೆಬಿಯ ನೋಂದಾಯಿತ ಸಂಸ್ಥೆಗಳು/ಸಲಹೆಗಾರರು ಮಾತ್ರ ಸಲಹೆಗಳನ್ನು ನೀಡಬಹುದು.

ಚೀನಾದಂದು ಗಮನ ಸೆಳೆಯುವ ಕಾನೂನು ಬಂದಿದೆ. ಇನ್ನು ಮುಂದೆ ಅಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಸಿಕ್ಕವರೆಲ್ಲ ಹಣಕಾಸು ವಿಚಾರಗಳ ಬಗ್ಗೆ ರೀಲ್ಸ್, ವಿಡಿಯೋ, ಪಾಡ್ ಕಾ ಮಾಡುವ ಹಾಗಿಲ್ಲ. ಫೈನಾನ್ಸ್, ಆರೋಗ್ಯ, ಶಿಕ್ಷಣ, ಕಾನೂನು ವಿಷಯದ ಬಗ್ಗೆ ರೀಲ್ಸ್ ಅಥವಾ ವಿಡಿಯೋ ಮಾಡುವವರು ಸ್ವತಃ ಆಯಾ ವಿಷಯಗಳಲ್ಲಿ ಕನಿಷ್ಠ ಪದವಿಯನ್ನು ಗಳಿಸಿರಬೇಕು. ‌ಇತರರು ಅಪ್ಪಿತಪ್ಪಿ ಏನಾದರೂ ಕಂಟೆಂಟ್ ಮಾಡಿದರೆ ಭಾರಿ ದಂಡ ಕಟ್ಟಬೇಕಾಗುತ್ತದೆ!

ಭಾರತದನಾದರೂ ಇಂಥ ಕಾನೂನು ಜಾರಿಯಾದರೆ? ಪರಿಸ್ಥಿತಿಯನ್ನು ಆಲೋಚಿಸುವುದೂ ಕಷ್ಟವಾದೀತು. ಏಕೆಂದರೆ ನಮ್ಮಲ್ಲಿ ಜ್ಯೋತಿಷಿಗಳು, ಗುರುಗಳ ಸೋಗಿನಲ್ಲಿ ಯಾರ‍್ಯಾರೋ, ಹಣಕಾಸು-ಸಂಪತ್ತು-ಆರೋಗ್ಯ-ರಾಜಕೀಯ ಭವಿಷ್ಯದ ತನಕ ಬ್ರಹ್ಮಾಂಡವನ್ನೂ ಗಂಟೆಗಟ್ಟಲೆ ಹೇಳಿ‌ ಬಿಡುತ್ತಾರೆ. ಸಕಲ ಸಮಸ್ಯೆಗಳಿಗೂ ಪರಿಹಾರಗಳನ್ನು ಚಿಟಿಕೆ ಹೊಡೆದಂತೆ ಕೊಟ್ಟು ಬಿಡುತ್ತಾರೆ. ಆದರೆ ಅವರಿಗೆ ಆಯಾ ವಿಷಯಗಳಲ್ಲಿ ಪದವಿ ಇದೆಯೇ? ಡಿಗ್ರಿ ಕಾಲೇಜು ಮೆಟ್ಟಿಲು ಹತ್ತಿದ್ದಾರೆಯೇ? ಯಾರಿಗೂ ಗೊತ್ತಿಲ್ಲ! ನಕಲಿ ಆಹಾರ ತಜ್ಞರು ಯುಟ್ಯೂಬ್ ಮೂಲಕ ಸಮಸ್ತ ಕಾಯಿಲೆಗಳಿಗೂ ಪರಿಹಾರ ಹೇಳುತ್ತಾರೆ. ಇವರು ಹೇಳುವುದರಲ್ಲಿ ಅಸಲಿ ಯಾವುದು-ನಕಲಿ ಯಾವುದು? ಸತ್ಯ-ಸುಳ್ಳು ಯಾವುದು ಎಂದು ಜಾಲಾಡಬೇಕಾಗುತ್ತದೆ.

ನಕಲಿಗಳ ಹಾವಳಿ ತಡೆಗೆ ಕಠಿಣ ಕಾನೂನು ಅವಶ್ಯಕ ಎನ್ನಿಸುತ್ತದೆ. ಆದರೆ ಇದಕ್ಕೆ ಇನ್ನೂ ವಿಭಿನ್ನ ಆಯಾಮಗಳೂ ಇವೆ. ಸಾಮಾಜಿಕ ಜಾಲತಾಣಗಳಲ್ಲಿ ವಿಷಯ-ವಸ್ತುಗಳ ನಿಖರತೆ, ವಿಶ್ವಾಸಾರ್ಹತೆ ಹೆಚ್ಚಿಸಲು ಈ ಕ್ರಮ ಅಗತ್ಯ ಎಂದು ಚೀನಾ ಈ ನಿಯಮವನ್ನು ತಂದಿದೆ. ಆದರೆ ಇದರಿಂದಾಗಿ ವಾಕ್ ಸ್ವಾತಂತ್ರ್ಯಕ್ಕೆ ಸೆನ್ಸಾರ್‌ಶಿಪ್‌ನ ಕಡಿವಾಣವಾಗಲಿದೆ ಎಂಬ ಟೀಕೆಯೂ ಕೇಳಿ ಬಂದಿದೆ.

ಇದನ್ನೂ ಓದಿ: Keshava Prasad B Column: ಮನೆ ಖರೀದಿಸುತ್ತೀರಾ ? ಕೇಂದ್ರವೇ ಕೊಡುತ್ತೆ 1.80 ಲಕ್ಷ ರೂಪಾಯಿ !

ಆದರೆ ಭಾರತ ಮತ್ತು ಚೀನಾದ ಸರಕಾರಗಳ ವ್ಯವಸ್ಥೆ ವಿಭಿನ್ನ. ಅಲ್ಲಿ ಸರ್ವಾಧಿಕಾರಿ ಅಧ್ಯಕ್ಷರ ಆಡಳಿತ. ನಮ್ಮಲ್ಲಿ ಸಂಪೂರ್ಣ ಪ್ರಜಾಪ್ರಭುತ್ವ. ಇಲ್ಲಿ ಸ್ವಾತಂತ್ರ್ಯದ ತಂಗಾಳಿ ಹೆಚ್ಚು. ಅಲ್ಲಿನ ಪರಿಸ್ಥಿತಿ ಹಾಗಿಲ್ಲ. ಅಮೆರಿಕ ಮೂಲದ ಯುಟ್ಯೂಬ, ಫೇಸ್‌ಬುಕ್, ಎಕ್ಸ್, ಇನ್ ಸ್ಟಾಗ್ರಾಮ್ ಯಾವುದಕ್ಕೂ ಚೀನಾದಲ್ಲಿ ಅವಕಾಶ ಇಲ್ಲ. ‌

ಈ ಭರ್ಜರಿ ನಿಷೇಧಕ್ಕೆ ‘ಗ್ರೇಟ್ ಫೇರ್‌ವಾಲ್’ ಎಂಬ ಹೆಸರಿದೆ. ಅಮೆರಿಕ ಮಾತ್ರವಲ್ಲ, ಯಾವುದೇ ವಿದೇಶದ ಜಾಲತಾಣಗಳಿಗೆ ಚೀನಾದಲ್ಲಿ ಬಾಗಿಲು ಮುಚ್ಚಲಾಗಿದೆ. ಚೀನಾದ್ದೇ ಸೋಷಿಯಲ್ ಮೀಡಿಯಾಗಳು ಇವೆ. ಜತೆಗೆ ಅದರಲ್ಲಿಯೂ ಇದೀಗ ಹೊಸ ನಿಯಮಗಳು ಜಾರಿಯಾಗುತ್ತಿವೆ. ಸೂಕ್ಷ್ಮ ವಿಚಾರಗಳನ್ನು ಜಾಲತಾಣಗಳಲ್ಲಿ ಚರ್ಚಿಸುವವರು ಡಿಗ್ರಿಗಳನ್ನು ಹೊಂದಿರಲೇಬೇಕು.

2025ರ ಅಕ್ಟೋಬರ್ ೨೫ರಿಂದ ಈ ಹೊಸ ಕಾನೂನು ಜಾರಿಯಾಗಿದೆ. ಚೀನಾದ ಡುಯಿನ್, ವೈಬು, ಬಿಲಿಬಿಲಿ ಜಾಲತಾಣಗಳಿಗೆ ಈ ಸಂಬಂಧವಾಗಿ ಸೂಚಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಕಾನೂನು ತರಲಾಗಿದೆ ಎಂದು ಚೀನಾದ ಸೈಬರ್ ಸ್ಪೇಸ್ ಆಡಳಿತ ತಿಳಿಸಿದೆ.

Shut yur mouth

ಇನ್ ಫ್ಲುಯೆನ್ಸರ್‌ಗಳು ಇನ್ನು ಮುಂದೆ ಚೀನಾದಲ್ಲಿ ತಾವು ಮಂಡಿಸುವ ವಿಷಯಕ್ಕೆ ಸಂಬಂಧಿಸಿ, ತಮ್ಮ ಅನುಭವ, ಡಿಗ್ರಿ, ಸರ್ಟಿಫಿಕೇಶನ್, ಪ್ರೊಫೆಷನಲ್ ಲೈಸೆನ್ಸ್ ಬಗ್ಗೆ ದೃಢಪಡಿಸಬೇಕಾಗುತ್ತದೆ. ತಪ್ಪಿದರೆ 14000 ಡಾಲರ್ ತನಕ ದಂಡ ಕಟ್ಟಬೇಕಾಗುತ್ತದೆ. ರುಪಾಯಿ ಲೆಕ್ಕದಲ್ಲಿ ಇದು ಸುಮಾರು 12.50 ಲಕ್ಷವಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ನೀಡುವ ಜಾಹೀರಾತು ಮತ್ತು ಪ್ರಮೋಷನ್‌ ಗಳಿಗೂ ಕಾನೂನಿನ ಅಂಕುಶ ಬಿದ್ದಿದೆ.

ವೈದ್ಯಕೀಯ ಉತ್ಪನ್ನಗಳು, ಸಪ್ಲಿಮೆಂಟ್ಸ್ ಮತ್ತು ಹೆಲ್ತ್‌ ಫುಡ್‌ಗಳನ್ನು ‘ಶೈಕ್ಷಣಿಕ ಉದ್ದೇಶ’ದ ಹೆಸರಿನಲ್ಲಿ ಪ್ರಚಾರ ಮಾಡುವಂತಿಲ್ಲ. ಇದು ದಿಕ್ಕುತಪ್ಪಿಸುವ ಜಾಹೀರಾತಾಗುತ್ತದೆ ಎಂದು ಚೀನಾ ಸರಕಾರ ತಿಳಿಸಿದೆ. ಹೀಗಿದ್ದರೂ, ಚೀನಿ ಸರಕಾರದ ನೀತಿಯನ್ನು ವಿರೋಧಿಸುವವರೂ ಇದ್ದಾರೆ.

ಇದರಿಂದ ಡಿಗ್ರಿ ಆದವರಿಗೆ ಮಾತ್ರ ಸೆನ್ಸಿಟಿವ್ ವಿಷಯಗಳ ಬಗ್ಗೆ ಜಾಲತಾಣಗಳಲ್ಲಿ ಚರ್ಚಿಸುವ ಹಕ್ಕು ಸಿಗುತ್ತದೆ. ಉಳಿದವರ ಮಾತಿಗೆ ಬೆಲೆ ಸಿಗದಂತಾಗುತ್ತದೆ. ಇದು ಸರಿಯಲ್ಲ ಎಂಬ ವಾದವಿದೆ. ಈ ಮಾತಿನಲ್ಲೂ ಸತ್ಯಾಂಶ ಇದೆ. ಉದಾಹರಣೆಗೆ ಒಬ್ಬ ವ್ಯಕ್ತಿ ಡಿಗ್ರಿ ಪಡೆಯದಿದ್ದರೂ, ಅನುಭವದ ಆಧಾರದಲ್ಲಿ ಯಾವುದಾದರೂ ಕ್ಷೇತ್ರದಲ್ಲಿ ಮೇಲೆ ಬಂದಿರುತ್ತಾನೆ. ಆತನಿಗೆ ಡಿಗ್ರಿ ಸರ್ಟಿಫಿಕೇಟ್ ಇಲ್ಲ ಎಂಬ ಕಾರಣ ಕೊಟ್ಟು, ಅದರ ಬಗ್ಗೆ ಮಾತನಾಡುವಂತಿಲ್ಲ ಎಂಬ ಕಾನೂನು ಹೇರಿದರೆ ಒಪ್ಪಲಾದೀತೆ? ನಮ್ಮಲ್ಲಿ ಅನೇಕ ಮಂದಿಯ ಡಿಗ್ರಿಗೂ, ಅವರು ಮಾಡುವ ಕೆಲಸಕ್ಕೂ ಯಾವುದೇ ಸಂಬಂಧವೇ ಇರುವುದಿಲ್ಲ.

ಉದಾಹರಣೆಗೆ ಎಂಜಿನಿಯರಿಂಗ್ ಓದಿದವರೂ ಪರ್ತಕರ್ತರಾಗುತ್ತಾರೆ. ಯಾವುದೋ ಕಂಪನಿ ಯಲ್ಲಿ ಟೆಕ್ನಿಶಿಯನ್ ಆಗಿರುತ್ತಾರೆ. ಇನ್ನು ಬಿಎ, ಕಾಮರ್ಸ್ ಕಲಿತವರೂ ಸಂಬಂಧವೇ ಇರದ ಯಾವುದೋ ಕೆಲಸಗಳನ್ನು ಮಾಡುತ್ತಿರುತ್ತಾರೆ. ಅವರಿಗೆಲ್ಲ ‘ಇದು ನಿಮ್ಮ ಕೆಲಸವಲ್ಲ’ ಎಂದು ನಿರಾಕರಿಸಲು ಸಾಧ್ಯವೇ? ಇವತ್ತು ಯಾವುದೋ ಕೋರ್ಸ್ ಮಾಡಿದವರು ಯಾವುದೋ ಕೆಲಸದಲ್ಲಿ ಇದ್ದುಕೊಂಡು, ಮತ್ಯಾವುದೋ ಕಂಟೆಂಟ್‌ಗಳನ್ನು ಕ್ರಿಯೇಟ್ ಮಾಡುತ್ತಾರೆ.

ಐಟಿ ಕೆಲಸದಲ್ಲಿದ್ದವರು ಇದ್ದಕ್ಕಿದ್ದಂತೆ, ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು ಕಂಟೆಂಟ್ ಕ್ರಿಯೇಟರ್ ಆಗಿ ಯಶಸ್ಸು ಗಳಿಸುತ್ತಾರೆ. ಅವರಿಗೆ ನಿರ್ಬಂಧ ವಿಧಿಸುವುದು ಸರಿಯೇ? ಡಿಗ್ರಿ ಓದಿದವರೂ ಜನರನ್ನು ದಾರಿ ತಪ್ಪಿಸುವುದಿಲ್ಲವೇ? ವಂಚಿಸುವುದಿಲ್ಲವೇ? ಎಂಬ ಪ್ರಶ್ನೆಗಳು ಸ್ವಾಭಾವಿಕ.

ಹಾಗಂತ ಈ ಡಿಬೇಟ್ ಅಷ್ಟು ಸುಲಭವಾಗಿ ಮುಗಿಯುವಂಥದ್ದಲ್ಲ. ಏಕೆಂದರೆ ಇವತ್ತು ಇನ್ ಫ್ಲುಯೆನ್ಸರ್‌ಗಳು ಒಂದಕ್ಕೆ ಎರಡು ವೈಭವೀಕರಿಸಿ ಹೇಳುತ್ತಾರೆ. ಲೈಕ್ಸ್, ಕಮೆಂಟ್, ಶೇರ್‌ಗಳ ಬೆನ್ನು ಬಿದ್ದು, ಸಾಂಪ್ರದಾಯಿಕ ವಿಷಯ ತಜ್ಞರೇ ಬೆಚ್ಚಿಬೀಳುವಂತೆ ಪರ್ಯಾಯ ತಜ್ಞರಾಗುತ್ತಿದ್ದಾರೆ. ಆದರೆ ಇಂಥ ಕಂಟೆಂಟ್ ಕ್ರಿಯೇಟರ್ ಗಳು ಯಾವುದೇ ಔಪಚಾರಿಕ ಶೈಕ್ಷಣಿಕ ಅರ್ಹತೆ ಇಲ್ಲದೆಯೇ ಕೊಡುವ ಹಣಕಾಸು, ಆರೋಗ್ಯ, ಶಿಕ್ಷಣ, ಕಾನೂನು ವಿಚಾರಗಳ ವಿಶ್ವಾಸಾರ್ಹತೆ ಎಷ್ಟಿರುತ್ತದೆ? ಇದೆಷ್ಟು ಸರಿ ಎಂಬುದು ಚರ್ಚೆಯಾಗಬೇಕಾದ್ದೇ.

ಸಂಕೀರ್ಣವಾದ ವಿಷಯಗಳನ್ನು ಅತಿಯಾಗಿ ಸರಳಗೊಳಿಸಿದಾಗ, ಅದು ಜನರ ದಿಕ್ಕು ತಪ್ಪಿಸುವಂತೆ ವೇಗವಾಗಿ ಹರಡುವ ಅಪಾಯ ಜಾಲತಾಣಗಳಲ್ಲಿ ಇದ್ದೇ ಇರುತ್ತದೆ. ಇನ್ ಫ್ಲುಯೆನ್ಸರ್‌ಗಳು ಮಾರುಕಟ್ಟೆಯ ಮೇಲೆ ಗಣನೀಯ ಪ್ರಭಾವ ಬೀರುತ್ತಾರೆ. ಈ ಕಾರಣಕ್ಕಾಗಿಯೇ ಕಾರ್ಪೊರೇಟ್ ವಲಯದ ಕಂಪನಿಗಳು ಜಾಲತಾಣಗಳಿಗೆ ಜಾಹೀರಾತು ನೀಡುತ್ತಿವೆ.

ಗ್ರಾಹಕರ ವರ್ತನೆ, ಶಾಪಿಂಗ್ ನಿರ್ಧಾರಗಳ ಮೇಲೆ ಕಂಟೆಂಟ್ ಕ್ರಿಯೇಟರ್‌ಗಳು ಪ್ರಭಾವ ಬೀರು ತ್ತಿರುವುದು ಸುಳ್ಳಲ್ಲ. ಆದ್ದರಿಂದ ಬ್ರ್ಯಾಂಡ್ ಸ್ಟ್ರಾಟಜಿಗಳು, ಸೋಷಿಯಲ್ ಟ್ರೆಂಡ್‌ಗಳನ್ನು ಸೃಷ್ಟಿಸು ವಲ್ಲಿ ಇವರ ಪಾತ್ರ ಕಂಡುಬರುತ್ತಿದೆ. ಕಂಟೆಂಟ್ ಕ್ರಿಯೇಷನ್ ಇವತ್ತು ಅನೇಕ ಮಂದಿಗೆ ಪೂರ್ಣ ಪ್ರಮಾಣದ ಉದ್ಯೋಗವಾಗಿದೆ. ಹವ್ಯಾಸಿಗಳಿಗೆ ಆದಾಯದ ಮೂಲವಾಗಿದೆ.

ಇನ್ ಫ್ಲುಯೆನ್ಸರ್ ಮಾರ್ಕೆಟಿಂಗ್ ಟ್ರೆಂಡ್ ಕಾಣಿಸಿದೆ. ಅಂದರೆ ನಾನಾ ಬ್ರ್ಯಾಂಡ್‌ಗಳು ಭಾರಿ ಸಂಖ್ಯೆಯಲ್ಲಿ ಫಾಲೋವರ್ ಗಳನ್ನು ಹೊಂದಿರುವ ಕಂಟೆಂಟ್ ಕ್ರಿಯೇಟರ್ಸ್ ಜತೆಗೆ ವೈಯಕ್ತಿಕ ವಾಗಿ ಒಪ್ಪಂದ ಮಾಡಿಕೊಂಡು ತಮ್ಮ ಉತ್ಪನ್ನಗಳ ಪ್ರಚಾರ ಮಾಡುತ್ತವೆ. ಈ ಇನ್ ಫ್ಲುಯೆನ್ಸರ್‌ ಗಳು ತಜ್ಞರಂತೆ ಉತ್ಪನ್ನಗಳ ಬಗ್ಗೆ ಮಾತನಾಡುತ್ತಾರೆ, ಖರೀದಿಸುವಂತೆ ಜನರನ್ನು ಉತ್ತೇಜಿಸುತ್ತಾರೆ. ಅವರ ಶಿಫಾರಸುಗಳು ಮಾರುಕಟ್ಟೆಯಲ್ಲಿ ಗ್ರಾಹಕರ ಮೇಲೆ ಪ್ರಭಾವ ಬೀರುತ್ತವೆ.

ಭಾರತದಲ್ಲಿಯೂ ಇನ್ ಫ್ಲುಯೆನ್ಸರ್ ಮಾರ್ಕೆಟ್ ವೇಗವಾಗಿ ಬೆಳೆಯುತ್ತಿದೆ. ನಮ್ಮಲ್ಲಂತೂ ಚೀನಾ ಮಾದರಿಯಲ್ಲಿ ವಿದೇಶಿ ಜಾಲತಾಣಗಳಿಗೆ ಅಂಥ ಬ್ಯಾನ್ ಇಲ್ಲ. ಯುಟ್ಯೂಬ್, ಇನ್ಸ್ಟಾಗ್ರಾಮ್, ಲಿಂಕ್ಡ್ ಇನ್, ಎಕ್ಸ್ ಎಲ್ಲವೂ ಮುಕ್ತ ಮುಕ್ತ. ಇಲ್ಲಿ ದಂಡಿಯಾಗಿ ಫೈನಾನ್ಸ್, ಹೆಲ್ತ್ ಇನ್ ಫ್ಲುಯೆನ್ಸರ್‌ಗಳು ಸಿಗುತ್ತಾರೆ. ಇವರು ಸಂಕೀರ್ಣ ವಿಷಯಗಳನ್ನು ಸರಳವಾಗಿ ಜನರಿಗೆ ತಿಳಿಸುವ ಶೈಕ್ಷಣಿಕ ಉದ್ದೇಶಕ್ಕಾಗಿ ಹಣಕಾಸು ಸಲಹೆಗಳನ್ನು ಕೊಡುತ್ತಾರೆ. ಇದರಿಂದ ರಿಟೇಲ್ ಹೂಡಿಕೆದಾರ‌ ರಿಗೆ ಹೂಡಿಕೆಯ ತಿಳಿವಳಿಕೆ ಹೆಚ್ಚುತ್ತದೆ. ‌

ಶಾಲೆ-ಕಾಲೇಜುಗಳಲ್ಲಿ ಇಂಥ ಶಿಕ್ಷಣದ ಕೊರತೆ ಇರುವುದರಿಂದ ಯುಟ್ಯೂಬ್, ಫೇಸ್ ಬುಕ್, ವಾಟ್ಸ್ ಆಪ್‌ಗಳೇ ಅಘೋಷಿತ ವಿಶ್ವ ವಿದ್ಯಾಲಯಗಳಾಗಿವೆ. ಇಲ್ಲಿ ಪಾಮರರೇ ಪಂಡಿತರ ಪೋಸು ಕೊಟ್ಟರೆ ಮಾತ್ರ ಕಷ್ಟ. ಅದಕ್ಕಾಗಿ ‘ಸೆಬಿ’ಯ ಮಾರ್ಗದರ್ಶನ ಅಗತ್ಯವಾಗಿದೆ. ಕೆಲವು ಅಂದಾಜಿನ ಪ್ರಕಾರ ಇದು ವಾರ್ಷಿಕ ೧೮ ಪರ್ಸೆಂಟ್ ಲೆಕ್ಕದಲ್ಲಿ ವೃದ್ಧಿಸುತ್ತಿದ್ದು, ಮಾರ್ಕೆಟ್ ಗಾತ್ರ 3000 ಕೋಟಿ ರುಪಾಯಿಗಳಾಗಿದೆ.

ಆಟೊಮೇಟಿವ್, ಕನ್‌ಸ್ಯೂಮರ್ ಗೂಡ್ಸ್ ಕೆಟಗರಿಯಲ್ಲಿರುವ ಕಂಪನಿಗಳು ಹೆಚ್ಚು ಫಾಲೋವರ್‌ ಗಳನ್ನು ಹೊಂದಿರುವ ಮೈಕ್ರೊ ಮತ್ತು ನ್ಯಾನೊ-ಇನ್-ಯೆನ್ಸರ್ ಗಳ ಜತೆಗೆ ಒಪ್ಪಂದ ಮಾಡಿ‌ ಕೊಳ್ಳುತ್ತಿವೆ. ಹಾಗಾದರೆ ಭಾರತದಲ್ಲಿ ಹಣಕಾಸು ವಿಚಾರಗಳ ಬಗ್ಗೆ ಕಂಟೆಂಟ್ ಕ್ರಿಯೇಟರ್‌ಗಳು, ಇನ್ ಫ್ಲುಯೆನ್ಸರ್‌ಗಳಿಗೆ ಏನಾದರೂ ನಿಯಮ ಇದೆಯೇ? ಖಂಡಿತಾ ಇದೆ. ಆದರೆ ಡಿಗ್ರಿ ಮಾಡಿರಲೇ ಬೇಕು ಎಂಬ ಚೀನಾ ಮಾದರಿಯ ನಿಯಮ ಇಲ್ಲ.

ಹೀಗಿದ್ದರೂ ಷೇರು ಮಾರುಕಟ್ಟೆಯ ನಿಯಂತ್ರಕ ‘ಸೆಬಿ’ ಕೆಲವು ನಿಯಮಾವಳಿಗಳನ್ನು ಜಾರಿ ಗೊಳಿಸಿದೆ. ಅದರ ಪ್ರಕಾರ ಸೆಬಿಯ ನೋಂದಾಯಿತ ಸಂಸ್ಥೆಗಳು ಮತ್ತು ಸಲಹೆಗಾರರು ಮಾತ್ರ ಹೂಡಿಕೆಯ ಸಲಹೆಗಳನ್ನು ನೀಡಬಹುದು. ಉಳಿದವರು ಇಂಥ ಷೇರು, ಮ್ಯೂಚುವಲ್ ಫಂಡ್‌ ಗಳಲ್ಲಿ ಹೂಡಿಕೆ ಮಾಡಿರಿ ಎಂದು ಯಾರಿಗೂ ಸಲಹೆಯನ್ನು ನೀಡುವಂತಿಲ್ಲ.

ಯುಟ್ಯೂಬ್, ಫೇಸ್‌ಬುಕ್, ಇನ್ಸ್ಟಾಗ್ರಾಮ್ ಮೊದಲಾದವುಗಳಲ್ಲಿ ಷೇರುಗಳ ಖರೀದಿಗೆ ರೆಕಮಂಡೇ ಶನ್ ಕೊಡುವಂತಿಲ್ಲ. ಮಾತ್ರವಲ್ಲದೆ ಎಜುಕೇಷನಲ್ ಕಂಟೆಂಟ್ ಮಲ್ಲಿ ಲೈವ್ ಮಾರ್ಕೆಟ್ ಡೇಟಾಗಳನ್ನು ನೀಡುವಂತಿಲ್ಲ. ಮೂರು ತಿಂಗಳು ಹಳೆಯ ಡೇಟಾಗಳನ್ನು ಮಾತ್ರ ಕೊಡಬಹುದು. ಇದು ಹೂಡಿಕೆದಾರರನ್ನು ದಿಕ್ಕು ತಪ್ಪಿಸಬಹುದು.

ಒಂದು ವೇಳೆ ಈ ನಿಯಮವನ್ನು ತಪ್ಪಿದರೆ ಅಂಥ ಕಂಟೆಂಟ್ ಗಳನ್ನು ನಿಷೇಧಿಸಬಹುದು. ದಂಡ ವನ್ನು ಕೂಡ ‘ಸೆಬಿ’ಯು ವಿಧಿಸಬಹುದು. ಆಸ್ತಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ. ಹೂಡಿಕೆದಾರರ ಹಿತಾಸಕ್ತಿಯನ್ನು ರಕ್ಷಿಸುವುದು ಇದರ ಉದ್ದೇಶವಾಗಿದೆ.

“ಭಾರತದಲ್ಲೂ ಹಣಕಾಸು ವಿಚಾರಗಳ ಇನ್ ಫ್ಲುಯೆನ್ಸರ್ ಗಳು ದೊಡ್ಡ ದನಿಯಾಗುತ್ತಿದ್ದಾರೆ. ಆದ್ದರಿಂದ ಸೆಬಿಯ ನಿರ್ದೇಶನದಿಂದ ಒಂದು ಕಡೆ ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಯಾದರೆ, ಮತ್ತೊಂದು ಕಡೆ ಇನ್ ಫ್ಲುಯೆನ್ಸರ್‌ಗಳ ವಿಶ್ವಾಸಾರ್ಹತೆ, ವೃತ್ತಿಪರತೆ ಹೆಚ್ಚಲೂ ಸಹಕಾರಿ ಯಾಗಲಿದೆ. ಒಂದು ಪಾರದರ್ಶಕ ಚೌಕಟ್ಟು, ಉತ್ತರದಾಯಿತ್ವ ಇರುವುದು ಉತ್ತಮ" ಎನ್ನುತ್ತಾರೆ ಕಂಟೆಂಟ್ ಕ್ರಿಯೇಟರ್ ನೇಹಾ ನಗರ್.

ಸೆಬಿಯ 2025ರ ಇನ್ವೆಸ್ಟರ್ಸ್ ಸರ್ವೆ ಪ್ರಕಾರ ೬೨ ಪರ್ಸೆಂಟ್ ರಿಟೇಲ್ ಹೂಡಿಕೆದಾರರು ಸೋಷಿ ಯಲ್ ಮೀಡಿಯಾದಲ್ಲಿ ಇನ್ ಫ್ಲುಯೆನ್ಸರ್‌ಗಳ ರೆಕಮಂಡೇಷನ್‌ಗಳನ್ನು ಕೇಳಿಕೊಂಡು ಹೂಡಿಕೆ ಮಾಡಿzರೆ! ಸೆಬಿಯ ಪ್ರಕಾರ ಇನ್ ಫ್ಲುಯೆನ್ಸರ್‌ಗಳು ತಾವು ಪ್ರಮೋಟ್ ಮಾಡುವ ಉತ್ಪನ್ನಗಳು ಮತ್ತು ಅವುಗಳ ಕಂಪನಿಗಳ ಜತೆಗೆ ವ್ಯಾವಹಾರಿಕ ಸಂಬಂಧ ಇದ್ದರೆ, ಅದನ್ನು ಬಹಿರಂಗಪಡಿಸ ಬೇಕು. ಅವುಗಳನ್ನು ಗೌಪ್ಯವಾಗಿಟ್ಟು ಹಣಕಾಸು ವಿಚಾರಗಳನ್ನು ಹೇಳುವಂತಿಲ್ಲ. ಉತ್ಪನ್ನಗಳ ಪ್ರಚಾರ ಮಾಡುವಂತಿಲ್ಲ. ಷೇರು ಹೂಡಿಕೆಯ ಶಿಫಾರಸು ದೂರದ ಮಾತು.

ಸೋಶಿಯಲ್ ಇನ್ ಫ್ಲುಯೆನ್ಸರ್‌ಗಳಿಗೆ ಸ್ವಯಂ ನಿಯಂತ್ರಣವೂ ಅಗತ್ಯ. ಇದು ಹೆಚ್ಚು ಪರಿಣಾಮ ಕಾರಿ. ಭಾರತದಲ್ಲಿ ಸಾಂಪ್ರದಾಯಿಕ ಮಾಧ್ಯಮಗಳು ಈ ಹಿಂದಿನಿಂದಲೂ ಇದನ್ನು ಪಾಲಿಸುತ್ತಾ ಬಂದಿವೆ. ಆದರೆ ಜಾಲತಾಣಗಳಲ್ಲಿ ಕಂಟೆಂಟ್ ಕ್ರಿಯೇಟರ್‌ಗಳೂ ಇದೇ ಹಾದಿಯಲ್ಲಿದ್ದರೆ, ಅವರ ವಿಶ್ವಾಸಾರ್ಹತೆಯೂ ವೃದ್ಧಿಸುತ್ತದೆ. ಇಲ್ಲದಿದ್ದರೆ ಕಠಿಣ ಕಾಯಿದೆಗಳು ಭವಿಷ್ಯದ ದಿನಗಳಲ್ಲಿ ಅನಿವಾರ್ಯವಾಗಬಹುದು.

ಕೇಶವ ಪ್ರಸಾದ್​ ಬಿ

View all posts by this author