ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Pramod Mohan Hegde Column: ಈ ಕಲಿಯುಗದಲ್ಲಿ ರಸ್ತೆಯೇ ಯುದ್ಧಭೂಮಿ

ಮಹಾಭಾರತ ಯುದ್ಧವಾದರೂ ಸಂಜೆ ಮೇಲೆ ವಿರಾಮ ಪಡೆಯುತ್ತಿತ್ತು. ಆದರೆ, ರಸ್ತೆ ಎಂಬ ಯುದ್ಧ ಭೂಮಿ ಸಂಜೆ ಮೇಲೆಯೇ ಹೆಚ್ಚು ವ್ಯಸ್ತವಾಗಿರುವಂಥ ಯುದ್ಧಭೂಮಿ. ಸಾಮಾನ್ಯವಾಗಿ ಹೆಣ್ಣುಮಕ್ಕಳು ಗಾಡಿ ಓಡಿಸುವುದು ಭಯಾನಕವಾಗಿರುತ್ತದೆ ಎಂದು ಅಣಕಿಸುತ್ತಾರೆ. ಆದರೆ, ಒಮ್ಮೆ ಬೆಳಗ್ಗೆ ಶಾಲೆಗೆ ತಡವಾಯಿತೆಂದು ಮಕ್ಕಳನ್ನು ಬಿಡಲು ಹೋಗುವ ತಂದೆ ಓಡಿಸುವ ಗಾಡಿ ನೋಡಿದರೆ ಇನ್ನೂ ಭಯಾನಕವಾಗಿರುತ್ತದೆ.

ನಗರನೋಟ

ಪ್ರಮೋದ ಮೋಹನ ಹೆಗಡೆ

ದ್ವಾಪರ ಯುಗದಲ್ಲಿ ಕುರುಕ್ಷೇತ್ರ ಎಂಬ ಒಂದೇ ಒಂದು ಯುದ್ಧಭೂಮಿಯಿತ್ತು. ಅಲ್ಲಿ ಕೌರವ-ಪಾಂಡವರು ಧರ್ಮ ಮತ್ತು ಅಧಿಕಾರಕ್ಕಾಗಿ ಶಸ್ತ್ರಗಳನ್ನು ಹಿಡಿದು ಮುಖಾಮುಖಿಯಾಗಿದ್ದರು. ಆದರೆ ಈ ಕಲಿಯುಗದಲ್ಲಿ, ಪ್ರತಿಯೊಬ್ಬ ನಾಗರಿಕನೂ ಪ್ರತಿದಿನವೂ ಕಾಲಿಡುವ ರಸ್ತೆಯೇ ನಿಜವಾದ ಯುದ್ಧಭೂಮಿಯಾಗಿದೆ.

ವ್ಯತ್ಯಾಸವೇನೆಂದರೆ, ಇಲ್ಲಿ ಶಸ್ತ್ರಗಳ ಜಾಗದಲ್ಲಿ ಕಾರು-ಬೈಕುಗಳಿವೆ, ಯೋಧರ ಜಾಗದಲ್ಲಿ ಸಾಮಾನ್ಯ ಜನರಿದ್ದಾರೆ ಮತ್ತು ವೈರಿಗಳ ಜಾಗದಲ್ಲಿ ನಮ್ಮದೇ ಅತಿಯಾದ ವೇಗ, ಅಹಂಕಾರ ಹಾಗೂ ತಾಳ್ಮೆಯಿಲ್ಲದ ಮನಸ್ಥಿತಿಯಿದೆ. ಬೆಳಗ್ಗೆ ಮನೆಯಿಂದ ಹೊರಡುವಾಗ ‘ಸುರಕ್ಷಿತವಾಗಿ ಹಿಂದಿರುಗಿ ಬರುವೆ’ ಎಂಬ ಭರವಸೆಯೂ ಇಲ್ಲದಷ್ಟರ ಮಟ್ಟಿಗೆ ನಾವು ಓಡಾಡುವ ರಸ್ತೆಗಳು, ಎದುರಾಗುವ ಗಾಡಿಗಳು ಭಯ ಹುಟ್ಟಿಸಿವೆ. ಸಾವು ಎಲ್ಲಿಂದ, ಯಾವ ರೂಪದಲ್ಲಿ ಬರುತ್ತದೋ ತಿಳಿಯದ ಭಯದ ಪ್ರತಿಯೊಬ್ಬ ವಾಹನ ಸವಾರನೂ ಪಯಣಿಸಬೇಕಾದ ದುಸ್ಥಿತಿ ಇಂದು ನಿರ್ಮಾಣವಾಗಿದೆ.

ಮಹಾಭಾರತ ಯುದ್ಧವಾದರೂ ಸಂಜೆ ಮೇಲೆ ವಿರಾಮ ಪಡೆಯುತ್ತಿತ್ತು. ಆದರೆ, ರಸ್ತೆ ಎಂಬ ಯುದ್ಧಭೂಮಿ ಸಂಜೆ ಮೇಲೆಯೇ ಹೆಚ್ಚು ವ್ಯಸ್ತವಾಗಿರುವಂಥ ಯುದ್ಧಭೂಮಿ. ಸಾಮಾನ್ಯವಾಗಿ ಹೆಣ್ಣುಮಕ್ಕಳು ಗಾಡಿ ಓಡಿಸುವುದು ಭಯಾನಕವಾಗಿರುತ್ತದೆ ಎಂದು ಅಣಕಿಸುತ್ತಾರೆ. ಆದರೆ, ಒಮ್ಮೆ ಬೆಳಗ್ಗೆ ಶಾಲೆಗೆ ತಡವಾಯಿತೆಂದು ಮಕ್ಕಳನ್ನು ಬಿಡಲು ಹೋಗುವ ತಂದೆ ಓಡಿಸುವ ಗಾಡಿ ನೋಡಿದರೆ ಇನ್ನೂ ಭಯಾನಕವಾಗಿರುತ್ತದೆ.

ಇದನ್ನೂ ಓದಿ: Roopa Gururaj Column: ದೇವಕಿ ಅಮ್ಮ: ಕೇರಳದ ವನಮಾತೆಯ ಸ್ಪೂರ್ತಿದಾಯಕ ಕಥೆ

ಒನ್ ವೇಯಲ್ಲಿ ಉಲ್ಟಾ ಬರುವುದು ಈಗ ಏನೂ ತಪ್ಪೇ ಅಲ್ಲ. ಕಾರು ಅಥವಾ ಇನ್ಯಾವುದಾದರೂ ದೊಡ್ಡ ಗಾಡಿ ತಪ್ಪು ದಾರಿಯಲ್ಲಿ ಬಂದರೆ ಬೈಕ್‌ನವರು ಅಡ್ಡ ಹಾಕಿ ಅವರನ್ನು ಹಿಂದೆ ಕಳಿಸಿರು ವಂಥ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿವೆ. ಅದೇ ಒಂದು ವೇಳೆ ಬೈಕ್ ಅಥವಾ ಸ್ಕೂಟಿ ಎದುರು ದಿಕ್ಕಿನಿಂದ ಬಂದು ಅವರಿಗೇನಾದರೂ ವಾಪಸ್ ಹೋಗಿ ಎಂದರೆ, ‘ಪಕ್ಕದಲ್ಲಿ ಜಾಗ ಇದ್ಯಲಾ ಗುರು ಹೋಗು’ ಅಂತ ರೇಗುತ್ತಾರೆ ಹೊರತು ಒಂದು ಸಲ ಮುಂದಿಟ್ಟ ಹೆಜ್ಜೆ ಹಿಂದಿಡೋ ಮಾತೇ ಇಲ್ಲ ಎಂಬ ನೋಟ ಬೀರುತ್ತಾರೆ.

ಒಂದೇ ಒಂದು ಮಾತು ಅಧಿಕವಾಗಿ ಹೇಳಿದರೂ ರಣರಂಗದಲ್ಲಿ ಯುದ್ಧ ಶುರುವಾಗುತ್ತದೆ. ಫುಟ್‌ಪಾತ್ ಮೇಲೆ ಬೈಕ್ ಓಡಿಸುವುದು ಸಹಜವಾಗಿ ಬಿಟ್ಟಿವೆ. ಅದೇ ರೀತಿ ರಸ್ತೆ ಮಧ್ಯದಲ್ಲಿ ಕೆಜಿಎ- ರಾಕಿ ಭಾಯ್ ರೀತಿ ಯಾರಿಗೂ, ಯಾವ ಗಾಡಿಗೂ ಲೆಕ್ಕಿಸದೇ ಒಂದು ಕೈಯಲ್ಲಿ ಫೋನು ಇಟ್ಟುಕೊಂಡು ಇನ್ನೊಂದು ಕೈಯನ್ನು ಗಾಡಿಗಳಿಗೆ ನಿಲ್ಲಿಸಲು ಸನ್ನೆ ಮಾಡುತ್ತಾ ಹೋಗುವುದು ಕೂಡ ಸಹಜವಾಗಿಬಿಟ್ಟಿವೆ.

ಫುಟ್‌ಪಾತ್ ಮೇಲೆ ಬೈಕ್ ಓಡಿಸುವದು ಎಷ್ಟು ತಪ್ಪೋ, ರಸ್ತೆ ಮಧ್ಯೆ ಬೇಜವಾಬ್ದಾರಿಯಲ್ಲಿ ನಡೆಯುವುದು ಅಷ್ಟೇ ತಪ್ಪು. ಅದರಲ್ಲೂ ಕೆಲವೊಮ್ಮೆ ಚಿಕ್ಕ ಮಕ್ಕಳನ್ನು ರಸ್ತೆಯ ಬದಿಯಲ್ಲಿ ಕರೆದುಕೊಂಡು ಹೋಗುವುದನ್ನು ನೋಡಿದಾಗ ಭಯವಾಗುತ್ತದೆ. ಯಾವುದೇ ಸ್ಕೂಟಿ ಚಾಲಕ ರಾದರೂ ಒಂದು ಕೈ ಮಾತ್ರ ಗಾಡಿಯ ಆಕ್ಸಿಲರೇಟರ್ ಮೇಲಿರುತ್ತದೆ. ಇನ್ನೊಂದು ಕೈಯಲ್ಲಿ ಫೋನ್ ಹಿಡಿದುಕೊಂಡು ಕೆಲವರು ಮಾತನಾಡುತ್ತಿರುತ್ತಾರೆ, ಇನ್ನೂ ಕೆಲವರು ರೀಲ್ಸ್ ನೋಡುತ್ತಾ ಹೋಗುತ್ತಾರೆ.

Screenshot_2 ok

‘ಫೋನ್ ಬಿಡಿ ಬಾಸ್’ ಅಂತ ಹೇಳಿದರೆ ಸಾಕು ಯುದ್ಧಕ್ಕೆ ಕರೆಕೊಟ್ಟಂತೆ ಲೆಕ್ಕ. ಇಬ್ಬರು ಚಿಕ್ಕ ಮಕ್ಕಳು, ಹೆಂಡತಿಯನ್ನು ಕೂರಿಸಿಕೊಂಡು ಹೋಗುವ ಮನೆಯ ಯಜಮಾನ ಕೂಡ ಫೋನ್ ಬಳಸುವುದನ್ನು ನೋಡಿದಾಗ ಮದುವೆಯಾಗಿ ಹೀಗೆ ಬಾಳುವುದಕ್ಕಿಂತ ಸಿಂಗಲ್ ಆಗಿರುವುದೇ ಒಳ್ಳೆಯದು, ಹೇಗೂ ‘ಸತ್ತರೆ ಒಂದೇ ಜೀವ’ ಅಂತನಿಸುತ್ತದೆ.

ರಸ್ತೆ ಎಂಬ ಯುದ್ಧಭೂಮಿಯಲ್ಲಿ ಇಂಥ ಚಕ್ರವ್ಯೂಹಗಳನ್ನು ದಾಟಿದರೂ ಇನ್ನೊಂದು ವಿಶೇಷ ಪ್ರವೇಶ ಇರುತ್ತದೆ. ಅದು ಯಾವಾಗ ಎಲ್ಲಿ ಹೇಗೆ ಪ್ರವೇಶವಾಗುತ್ತದೆ ಎನ್ನುವುದು ಕಷ್ಟ. ಅವರೇ ಈ ಡೆಲಿವರಿ ಬಾಯ್ಸ! ಈ ಸ್ವಿಗ್ಗಿ, ಬ್ಲಿಂಕಿಟ್, ಜೊಮಾಟೊ ಎಲ್ಲರೂ ಕಾಂಪಿಟೇಶನ್‌ನಲ್ಲಿ ‘ನಾವು ಕೇವಲ 5 ನಿಮಿಷದಲ್ಲಿ ನಿಮ್ಮ ಮನೆ ಬಾಗಿಲಿಗೆ ಡೆಲಿವರಿ ಕೊಡ್ತೀವಿ’ ಅಂತ ಹೇಳಿ ಇಲ್ಲಿ ಡೆಲಿವರಿ ಬಾಯ್ಸ್ ಯದ್ವಾತದ್ವಾ ಗಾಡಿ ಓಡಿಸುವ ಹಾಗೆ ಮಾಡಿದ್ದಾರೆ. ಸಮಯಕ್ಕೆ ಸರಿಯಾಗಿ ತಲುಪಬೇಕು ಎಂಬ ಒತ್ತಡದಲ್ಲಿ ಅವರು ಗಾಡಿ ನುಗ್ಗಿಸಿಕೊಂಡು ಹೋಗುವುದನ್ನು ಕಂಡಾಗ ಗಾಬರಿಯಾಗುತ್ತದೆ.

ಇಷ್ಟೇ ಅಲ್ಲ, ಯುದ್ಧದ ತೀವ್ರತೆ ಇನ್ನೂ ಹೆಚ್ಚಾಗುತ್ತದೆ. ಅದಕ್ಕೆ ನಮ್ಮ ರಸ್ತೆಗಳೇ ಕಾರಣ. ಯಾವಾಗ ಯಾವ ರಸ್ತೆ ಅರ್ಧ ಮುಚ್ಚುತ್ತಾರೆ, ಅರ್ಧ ಹೊಂಡ ತೋಡುತ್ತಾರೆ, ಎಲ್ಲಿ ಯಾವಾಗ ಟ್ರಾಫಿಕ್ ಜಾಮ್ ಆಗುತ್ತದೆ ಎನ್ನುವುದೇ ಕಷ್ಟ. ಸದ್ಯ ರಸ್ತೆಯ ಪರಿಸ್ಥಿತಿಯನ್ನು ನೋಡಿದಾಗ ಶ್ರೀನಿವಾಸ ನಗರವನ್ನು ಶ್ರೀ‘ನೋವಾಸ’ನಗರ ಎನ್ನಬಹುದು ಅನಿಸುತ್ತದೆ.

ಪ್ರತಿ ರಸ್ತೆಯ ಬದಿಯಲ್ಲೂ ಗಾಡಿಗಳು ನಿಲ್ಲಿಸಿರುತ್ತಾರೆ. ‘ಒಂದು ಚೂರು ಸೈಡ್‌ಗೆ ನಿಲ್ಲಿಸಬಹುದಿತ್ತು’ ಅಥವಾ ‘ಗುರು ನಿಮ್ ಗಾಡಿಯಿಂದಾನೇ ಇಷ್ಟು ಟ್ರಾಫಿಕ್ ಆಗಿದ್ದು’ ಅಂತ ಹೇಳಿದರೆ ಸಾಕು, ‘ಏನ್ ಎರಡ್ ನಿಮಿಷ ಕಾಯಕ್ಕಾಗಲ್ವ’ ಎಂಬ ಉತ್ತರದ ಜತೆಗೆ ಜಗಳವೇ ಶುರುವಾಗುತ್ತದೆ ಹೊರತು ಬೇರೆ ಏನೂ ಆಗುವುದಿಲ್ಲ. ಎಲ್ಲರೂ ರೇಜ್ ಬೇಟ್ ಮೂಡ್‌ನಲ್ಲಿಯೇ ಇರುತ್ತಾರೆ. ರಸ್ತೆಗಳಲ್ಲಿ, ಕೆಲವು ಕಾರ್ನರ್‌ಗಳಲ್ಲಿ ಕಾರು ಪಾರ್ಕ್ ಆಗಿರುವುದನ್ನು ಕಂಡಾಗ ಆ ಗಾಡಿಗಳನ್ನು ಪುಡಿ ಮಾಡಿಯೇ ಹೋಗೋಣ ಎಂಬಷ್ಟು ಕೋಪ ಬರುತ್ತದೆ. ಹೇಗೆ ನಿಲ್ಲಿಸಬೇಕು, ಎಲ್ಲಿ ನಿಲ್ಲಿಸಬೇಕು ಎಂಬ ಸಣ್ಣ ಸಾಮಾನ್ಯ ಪ್ರಜ್ಞೆಯೂ ಯಾರಲ್ಲಿಯೂ ಇಲ್ಲವೇ? ಎಂಬ ಪ್ರಶ್ನೆ ಮೂಡುತ್ತದೆ. ಹೀಗೆ ಕಾರ್ನರ್‌ನಲ್ಲಿ ನಿಲ್ಲಿಸಿದ ಗಾಡಿಯಿಂದಾಗಿ ನನ್ನ ಗೆಳೆಯನೊಬ್ಬನಿಗೆ ಒಮ್ಮೆ ಆಕ್ಸಿಡೆಂಟ್ ಕೂಡ ಆಗಿತ್ತು.

ಇನ್ನು ಸಿಟಿ ಬಿಟ್ಟು ಸ್ವಲ್ಪ ಹೊರಗೆ ಹೋಗೋಣ, ನೈಸ್ ಅಥವಾ ಎಕ್ಸ್‌ಪ್ರೆಸ್‌ವೇಯಲ್ಲಿ ಹೋಗೋಣ ಎಂದರೆ ವ್ಹೀಲಿಂಗ್ ಮಾಡುವ ದುರುಳರ ಕಾಟ. ರೊಂಯ್ಯನೆ ನಮ್ಮ ಪಕ್ಕದಲ್ಲೇ ಒಂದೇ ಚಕ್ರದಲ್ಲಿ ಹೋಗುವ ಇವರಿಂದ, ಸರಿಯಾಗಿ ಚಲಾಯಿಸುವವರೇ ಕಕ್ಕಾಬಿಕ್ಕಿಯಾಗಿ ಲೇನ್ ತಪ್ಪುವ ಪ್ರಸಂಗ. ಇವರು ಸಾಯುವುದಿಲ್ಲ, ರಸ್ತೆಯ ಮೇಲಿರುವ ಇತರರನ್ನು ಸಾಯಿಸುತ್ತಾರೆ.

ಹೀಗೆ ಕೆಲವು ಅಂಕಿ-ಅಂಶಗಳನ್ನು ನೋಡುತ್ತಿದ್ದೆ. ಭಾರತೀಯ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವರದಿಗಳ ಪ್ರಕಾರ, ನಮ್ಮ ದೇಶದಲ್ಲಿ ಪ್ರತಿವರ್ಷ ಸರಾಸರಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ರಸ್ತೆ ಅಪಘಾತಗಳಲ್ಲಿ ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ಅಂದರೆ, ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ವ್ಯಕ್ತಿ ರಸ್ತೆಯಲ್ಲಿ ಪ್ರಾಣ ತೆರುತ್ತಿದ್ದಾನೆ.

ಬೆಂಗಳೂರಿನಂಥ ಮಹಾನಗರಗಳಲ್ಲಿ ದಿನನಿತ್ಯ ಸಂಭವಿಸುವ ಸಣ್ಣಪುಟ್ಟ ಘರ್ಷಣೆಗಳು, ರಸ್ತೆ ಗುಂಡಿಗಳಿಂದಾಗಿ ಬಿದ್ದು ಪ್ರಾಣ ಕಳೆದುಕೊಳ್ಳುವ ದ್ವಿಚಕ್ರ ವಾಹನ ಸವಾರರು, ಮತ್ತು ಹೆದ್ದಾರಿ ಗಳಲ್ಲಿ ನಡೆಯುವ ಭೀಕರ ಅಪಘಾತಗಳು ಕೇವಲ ಸುದ್ದಿಯ ತುಣುಕುಗಳಾಗಿ ಉಳಿಯದೆ, ಸಾವಿರಾರು ಕುಟುಂಬಗಳ ಭವಿಷ್ಯವನ್ನೇ ಕತ್ತಲಿಗೆ ತಳ್ಳುತ್ತಿವೆ. ಸಿಗ್ನಲ್ ಜಂಪ್ ಮಾಡುವ ಧಾವಂತ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಮತ್ತು ವಾಹನ ಚಾಲನೆಯಲ್ಲಿ ಮೊಬೈಲ್ ಬಳಕೆಯಂಥ ಸಣ್ಣ ಅಜಾಗರೂಕತೆಗಳು ಜೀವ ತೆಗೆಯುವ ದುರಂತಗಳಾಗಿ ಮಾರ್ಪಡುತ್ತಿವೆ.

ಮಾನವನ ಮನಸ್ಥಿತಿ ಮತ್ತು ವರ್ತನೆಯೇ ಈ ಅಸಲಿ ಯುದ್ಧಕ್ಕೆ ಪ್ರಮುಖ ಕಾರಣ. ‘ವೇಗವೇ ಸಾವು, ತಾಳ್ಮೆಯೇ ಜೀವನ’, ‘ನಿಧಾನವೇ ಪ್ರಧಾನ’ ಎಂಬ ಹಿತವಚನಗಳನ್ನು ನಾವು ಬಸ್ ಹಿಂದೆ ಮಾತ್ರ ನೋಡುತ್ತೇವೆಯೇ ಹೊರತು, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿಲ್ಲ. ವಾಹನದ ಸೀಟಿನ ಮೇಲೆ ಕುಳಿತ ತಕ್ಷಣ ಮನುಷ್ಯ ತನ್ನ ವಿವೇಕವನ್ನು ಬಲಿಕೊಟ್ಟು, ಆವೇಶಕ್ಕೆ ಒಳಗಾಗುತ್ತಾನೆ.

ಈ ರಕ್ತಸಿಕ್ತ ಯುದ್ಧವನ್ನು ಕೊನೆಗಾಣಿಸಲು ನಾಗರಿಕರಾದ ನಾವು ತಕ್ಷಣವೇ ಜಾಗೃತರಾಗಬೇಕಿದೆ. ರಸ್ತೆಯಲ್ಲಿ ಜಯಿಸುವುದು ಎಂದರೆ ವೇಗವಾಗಿ ಗುರಿ ತಲುಪುವುದಲ್ಲ, ಸುರಕ್ಷಿತವಾಗಿ ತಲುಪುವುದು ಎಂಬುದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಡಬೇಕು. ಗಾಡಿ ಓಡಿಸುವಾಗ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು.

ಸ್ವಲ್ಪ ಸಮಯ ತಡವಾದರೂ ಪರವಾಗಿಲ್ಲ, ಜೀವ ಉಳಿಯುವುದು ಮುಖ್ಯ ಎಂಬ ತಾಳ್ಮೆಯನ್ನು ಮೈಗೂಡಿಸಿಕೊಳ್ಳಬೇಕು. ಪಾದಚಾರಿಗಳು, ಮಕ್ಕಳು ಮತ್ತು ವಯೋವೃದ್ಧರಿಗೆ ರಸ್ತೆ ದಾಟಲು ಮೊದಲ ಆದ್ಯತೆ ನೀಡುವುದು ನಮ್ಮ ನೈತಿಕ ಕರ್ತವ್ಯವಾಗಬೇಕು. ಒಬ್ಬೊಬ್ಬನೂ ತನ್ನ ಕರ್ತವ್ಯ ಮಾಡುತ್ತೇನೆ ಎಂದು ನಿರ್ಧಾರ ತೆಗೆದುಕೊಂಡರೆ ಎಲ್ಲರಿಗೂ ಒಳಿತಾಗುತ್ತದೆ.

ಅದೇ ರೀತಿ, ಸರಕಾರ ಮತ್ತು ಪೊಲೀಸರು ಕೂಡ ಜವಾಬ್ದಾರಿ ತೆಗೆದುಕೊಳ್ಳಬೇಕು. ಕೇವಲ ದಂಡ ವಿಧಿಸುವುದಕ್ಕೆ ಮಾತ್ರ ಸೀಮಿತವಾಗಬಾರದು. ಇತ್ತೀಚೆಗೆ ನಗರ ಸಚಿವ ಕೃಷ್ಣಭೈರೇಗೌಡ ಅವರು ಫುಟ್‌ಪಾತ್ ತೆರವುಗೊಳಿಸಿದ ಹಾಗೆಯೇ ಬೇಕಾಬಿಟ್ಟಿ ಪಾರ್ಕ್ ಮಾಡಲಾದ ಗಾಡಿಗಳಿಗೂ ಸರಿಯಾದ ವ್ಯವಸ್ಥೆ ಒದಗಿಸಿದರೆ ಉತ್ತಮ. ಗಿರಿನಗರದಿಂದ ವಿಜಯನಗರ ಹೋಗಲು ಇರುವುದೇ ಒಂದು ಸರಿಯಾದ ದಾರಿ. ಅದನ್ನು ಇಷ್ಟು ದಿನ ವೈಟ್ ಟಾಪಿಂಗ್ ಕಾರಣಕ್ಕೆ ಮುಚ್ಚಲಾಗಿತ್ತು.

ಅದನ್ನು ಈಗ ತೆರೆಯಲಾಗಿದೆ. ಆದರೆ, ಅರ್ಧ ಭಾಗದಷ್ಟು ರಸ್ತೆ ಗಾಡಿಗಳ ಪಾರ್ಕಿಂಗ್ ಲಾಟ್ ಆಗಿದೆ. ವೈಟ್ ಟಾಪಿಂಗ್‌ಗಿಂತ ಮೊದಲೇ ಪರವಾಗಿರಲಿಲ್ಲ ಎಂಬ ಭಾವನೆ ಬರುತ್ತದೆ. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದರ ಜೊತೆಗೆ, ಚಾಲನಾ ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿ ಲಂಚಕ್ಕೆ ಅವಕಾಶ ನೀಡದೆ ಕಠಿಣ ಪರೀಕ್ಷೆಗಳನ್ನು ನಡೆಸಬೇಕು.

ಖಾಸಗಿ ವಾಹನಗಳ ಈ ವಿಪರೀತ ದಟ್ಟಣೆಗೆ ಕಡಿವಾಣ ಹಾಕಲು ಸರಕಾರವು ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸುಗಮ ಹಾಗೂ ವೇಗವಾಗಿ ಸಿಗುವಂತೆ ಮೇಲ್ದರ್ಜೆಗೇರಿಸಬೇಕಿದೆ. ಪ್ರತಿಯೊಬ್ಬರೂ ಪ್ರತ್ಯೇಕ ವಾಹನ ಹಿಡಿದು ರಸ್ತೆಗೆ ಇಳಿಯುವ ಬದಲು, ಸಾರ್ವಜನಿಕ ಸಾರಿಗೆ ಬಳಕೆಗೆ ಆದ್ಯತೆ ನೀಡಿದರೆ ರಸ್ತೆಯ ಮೇಲಿನ ಅರ್ಧದಷ್ಟು ಯುದ್ಧದ ತೀವ್ರತೆ ತಾನಾಗಿಯೇ ಕಡಿಮೆಯಾಗುತ್ತದೆ.

ಇದರ ಜೊತೆಗೆ, ಸಾಲು ಸಾಲು ಕಾರುಗಳನ್ನು ತಂದು ರಸ್ತೆಬದಿಯ ಪಾರ್ಕ್ ಮಾಡುವವರ ವಿರುದ್ಧ ಸರಕಾರ ಪಾರ್ಕಿಂಗ್ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಸ್ವಂತ ಪಾರ್ಕಿಂಗ್ ಜಾಗವಿಲ್ಲದಿದ್ದರೂ ವಾಹನ ಕೊಂಡು ರಸ್ತೆ ಬದಿ ದೂಳು ತಿನ್ನಿಸುವ ಪ್ರವೃತ್ತಿಗೆ ಕಡಿವಾಣ ಬಿzಗ ಮಾತ್ರ ನಗರದ ಮುಖ್ಯ ರಸ್ತೆಗಳು ಉಸಿರಾಡಲು ಸಾಧ್ಯ.

ರಸ್ತೆ ಎಂಬುದು ಎರಡು ಜಾಗಗಳನ್ನು ಜೋಡಿಸುವ ಸೇತುವೆಯಾಗಬೇಕೇ ಹೊರತು, ಯುದ್ಧಭೂಮಿ ಯಾಗಬಾರದು. ನಾವು ಜೀವಿಸುತ್ತಿರುವ ಕಲಿಯುಗದಲ್ಲಿ ತಾಂತ್ರಿಕತೆ ಎಷ್ಟೇ ಮುಂದುವರಿದಿದ್ದರೂ, ಮಾನವೀಯ ಮೌಲ್ಯ ಮತ್ತು ಜೀವದ ಬೆಲೆಗಿಂತ ದೊಡ್ಡದು ಯಾವುದೂ ಇಲ್ಲ. ನಿಯಮಗಳ ಪಾಲನೆ, ಪರಸ್ಪರ ಗೌರವ ಮತ್ತು ತಾಳ್ಮೆಯಿಂದ ಮಾತ್ರ ನಾವು ಈ ‘ರಸ್ತೆ ಯುದ್ಧ’ವನ್ನು ಶಮನಗೊಳಿಸಲು ಸಾಧ್ಯ. ಸರಕಾರದ ದೃಢ ಸಂಕಲ್ಪ ಮತ್ತು ನಾಗರಿಕರ ಜವಾಬ್ದಾರಿಯುತ ನಡವಳಿಕೆ ಒಂದಾದಾಗ ಮಾತ್ರ ನಮ್ಮ ಪ್ರತಿಯೊಂದು ಪ್ರಯಾಣವೂ ಸುಖಕರ ಹಾಗೂ ಸುರಕ್ಷಿತ ಭವಿಷ್ಯದತ್ತ ಸಾಗುವ ಹಾದಿಯಾಗುತ್ತದೆ.