ವೀಕೆಂಡ್ ವಿತ್ ಮೋಹನ್
ಜಗತ್ತಿನ ರಾಜಕೀಯದಲ್ಲಿ ಕೆಲವು ಬದಲಾವಣೆಗಳು ಒಂದು ನಾಯಕತ್ವದ ಅವಧಿಯಲ್ಲಿ ವೇಗ ಪಡೆದುಕೊಳ್ಳುತ್ತವೆ. 2014ರಲ್ಲಿ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಭಾರತವು ತನ್ನ ಸಾಂಪ್ರದಾಯಿಕ ರಾಜತಾಂತ್ರಿಕ ಸಂಬಂಧಗಳನ್ನು ಮುಂದುವರಿಸಿ ಕೊಂಡೇ, ಅಮೆರಿಕದಿಂದ ರಷ್ಯಾವರೆಗೆ, ಯುರೋಪಿನಿಂದ ಮಧ್ಯಪ್ರಾಚ್ಯದವರೆಗೆ, ಜಪಾನ್‌ನಿಂದ ಆಫ್ರಿಕಾವರೆಗೆ ಮತ್ತು ಜಾಗತಿಕ ದಕ್ಷಿಣದ ರಾಷ್ಟ್ರಗಳಿಂದ ಇಂಡೋ-ಪೆಸಿಫಿಕ್‌ವರೆಗೆ ತನ್ನ ಸಂಪರ್ಕವನ್ನು ವಿಸ್ತರಿಸಿದೆ.
ಬದಲಾಗುತ್ತಿರುವ ಭಾರತದ ಜಾಗತಿಕ ಪಾತ್ರವನ್ನು ಅರ್ಥಮಾಡಿಕೊಳ್ಳಲು ಬ್ರಿಕ್ಸ್ (BRICS) ಅತ್ಯಂತ ಪ್ರಮುಖ ವೇದಿಕೆ. ಇಂದು ಬ್ರಿಕ್ಸ್ ಕೇವಲ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ಸಂಘಟನೆಯಲ್ಲ; ವಿಸ್ತರಣೆಯ ನಂತರ ಇದು ಜಾಗತಿಕ ಆರ್ಥಿಕತೆ ಮತ್ತು ರಾಜಕೀಯದಲ್ಲಿ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಿದೆ. 2026ರಲ್ಲಿ ಭಾರತ ಬ್ರಿಕ್ಸ್ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಸೆಪ್ಟೆಂಬರ್ 12 ಮತ್ತು 13ರಂದು ನವದೆಹಲಿಯಲ್ಲಿ 18ನೇ ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸು ತ್ತಿರುವುದು, ಮೋದಿ ಯುಗದಲ್ಲಿ ಭಾರತದ ಹೆಚ್ಚುತ್ತಿರುವ ಜಾಗತಿಕ ಪ್ರಭಾವಕ್ಕೆ ಮತ್ತೊಂದು ಪ್ರಮುಖ ಉದಾಹರಣೆಯಾಗಿದೆ. ಆರಂಭದಲ್ಲಿ ನಾಲ್ಕು ರಾಷ್ಟ್ರಗಳಿಂದ ಪ್ರಾರಂಭವಾದ ವೇದಿಕೆ ಇಂದು 11 ಪೂರ್ಣ ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ವಿಸ್ತೃತ ಸಂಘಟನೆಯಾಗಿ ಬೆಳೆದಿದೆ.
ಭಾರತವು 2012, 2016, 2021 ಮತ್ತು 2026ರಲ್ಲಿ ನಾಲ್ಕು ಬಾರಿ ಬ್ರಿಕ್ಸ್ ಅಧ್ಯಕ್ಷ ಸ್ಥಾನ ವಹಿಸಿದೆ. ಮೋದಿ ಪ್ರಧಾನಿಯಾದ ನಂತರ 2016 ಮತ್ತು 2021ರಲ್ಲಿ ಭಾರತ ಬ್ರಿಕ್ಸ್ ಅನ್ನು ಮುನ್ನಡೆಸಿತು; ಈಗ 2026ರಲ್ಲಿ ಮೂರನೇ ಬಾರಿಗೆ ಮೋದಿ ಅವರ ಪ್ರಧಾನಮಂತ್ರಿ ಅವಧಿಯಲ್ಲಿ ಭಾರತ ಅಧ್ಯಕ್ಷತೆ ವಹಿಸುತ್ತಿದೆ. ಮೋದಿ ಯುಗದಲ್ಲಿ ಭಾರತವು ಬ್ರಿಕ್ಸ್ ವೇದಿಕೆಯಲ್ಲಿ ನಿರಂತರವಾಗಿ ಸಕ್ರಿಯ ನಾಯಕತ್ವದ ಪಾತ್ರ ವಹಿಸಿದೆ.
ಇದನ್ನೂ ಓದಿ: Mohan Vishwa Column: ಹಿಮಾಲಯದ ಮಡಿಲಿನ ಜಲಪ್ರಳಯ
2016ರಲ್ಲಿ ಗೋವಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆ ಮೋದಿ ಸರ್ಕಾರದ ವಿದೇಶಾಂಗ ನೀತಿಯ ಪ್ರಮುಖ ಘಟ್ಟವಾಗಿತ್ತು. ಆ ಸಮಯದಲ್ಲಿ ಭಯೋತ್ಪಾದನೆ ವಿರುದ್ಧದ ಹೋರಾಟ, ಆರ್ಥಿಕ ಸಹಕಾರ, ಜಾಗತಿಕ ಆಡಳಿತ ಸುಧಾರಣೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಹಿತಾಸಕ್ತಿಗಳು ಭಾರತದ ಪ್ರಮುಖ ಆದ್ಯತೆಗಳಾಗಿದ್ದವು.
ಭಯೋತ್ಪಾದನೆಯ ವಿರುದ್ಧ ಬ್ರಿಕ್ಸ್ ರಾಷ್ಟ್ರಗಳ ಸಾಮೂಹಿಕ ನಿಲುವಿಗೆ ಭಾರತ ವಿಶೇಷ ಒತ್ತು ನೀಡಿತು. ಇದು ಭಾರತದ ಭದ್ರತಾ ಕಾಳಜಿಗಳನ್ನು ಜಾಗತಿಕ ವೇದಿಕೆಯಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿ ಸುವ ಪ್ರಯತ್ನ ವಾಗಿತ್ತು. 2021ರಲ್ಲಿ ಕೋವಿಡ್-19 ಸಾಂಕ್ರಾಮಿಕದ ನೆರಳಿನಲ್ಲಿ ಭಾರತ ಬ್ರಿಕ್ಸ್ ಅಧ್ಯಕ್ಷತೆ ವಹಿಸಿಕೊಂಡಾಗ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿತ್ತು.
ಆರೋಗ್ಯ ಭದ್ರತೆ, ಲಸಿಕೆ, ಡಿಜಿಟಲ್ ಸಹಕಾರ, ಆರ್ಥಿಕ ಪುನಶ್ಚೇತನ ಮತ್ತು ಬಹುಪಕ್ಷೀಯ ವ್ಯವಸ್ಥೆ ಯ ಬಲವರ್ಧನೆ ಪ್ರಮುಖ ವಿಷಯಗಳಾದವು. ಮೋದಿ ಸರ್ಕಾರವು ಕೋವಿಡ್ ಅವಧಿಯಲ್ಲಿ ‘ವಿಶ್ವದ ಔಷಧಾಲಯ’ ಎಂಬ ಭಾರತದ ಸಾಮರ್ಥ್ಯವನ್ನು ಜಾಗತಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿತು. ಬ್ರಿಕ್ಸ್ ವೇದಿಕೆಯಲ್ಲೂ ಆರೋಗ್ಯ ಮತ್ತು ಲಸಿಕೆ ಸಹಕಾರಕ್ಕೆ ಮಹತ್ವ ನೀಡಲಾ ಯಿತು.
ಹೀಗಾಗಿ ಬ್ರಿಕ್ಸ್ ಅನ್ನು ಕೇವಲ ರಾಜಕೀಯ ವೇದಿಕೆಯಾಗಿ ಅಲ್ಲದೆ, ಜಾಗತಿಕ ಸವಾಲುಗಳಿಗೆ ಸಾಮೂಹಿಕ ಪರಿಹಾರ ಹುಡುಕುವ ವೇದಿಕೆಯಾಗಿ ರೂಪಿಸುವ ಭಾರತದ ಪ್ರಯತ್ನ ಮುಂದುವರಿ ಯಿತು. ಮೋದಿ ಸರ್ಕಾರದ ವಿದೇಶಾಂಗ ನೀತಿಯ ಒಂದು ಪ್ರಮುಖ ಲಕ್ಷಣವೆಂದರೆ ‘ಜಾಗತಿಕ ದಕ್ಷಿಣ’ದ ರಾಷ್ಟ್ರಗಳ ಧ್ವನಿಯನ್ನು ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿ ಬಲಪಡಿಸುವ ಪ್ರಯತ್ನ. ಈ ದೃಷ್ಟಿಕೋನವೇ ಬ್ರಿಕ್ಸ್‌ನಲ್ಲಿ ಭಾರತದ ಪಾತ್ರಕ್ಕೆ ಹೊಸ ಆಯಾಮ ನೀಡಿದೆ.
ವಿಶ್ವದ ಆರ್ಥಿಕತೆ ಮತ್ತು ಜನಸಂಖ್ಯೆಯ ದೊಡ್ಡ ಭಾಗ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿದ್ದರೂ, ಜಾಗತಿಕ ಹಣಕಾಸು ಸಂಸ್ಥೆಗಳು ಮತ್ತು ನಿರ್ಧಾರ ಕೈಗೊಳ್ಳುವ ವ್ಯವಸ್ಥೆಗಳಲ್ಲಿ ಅವುಗಳ ಪ್ರತಿನಿಧಿತ್ವ ಇನ್ನೂ ಅಸಮತೋಲನದಲ್ಲಿದೆ ಎಂಬುದು ಭಾರತದ ದೀರ್ಘಕಾಲದ ವಾದ. ಮೋದಿ ಸರ್ಕಾರವು ಈ ಪ್ರಶ್ನೆಯನ್ನು ವಿವಿಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೆಚ್ಚು ಸಕ್ರಿಯವಾಗಿ ಮುಂದಿಟ್ಟಿದೆ. 2024ರಲ್ಲಿ ಬ್ರಿಕ್ಸ್‌ನ ‘ಪಿಪಿಪಿ’ ಆಧಾರದ ಮೇಲೆ, ಜಾಗತಿಕ ಜಿಡಿಪಿ ಪಾಲು ಶೇಕಡ 39%ಕ್ಕೆ ಏರಿತ್ತು.
2024ರ ಬ್ರಿಕ್ಸ್ ದೇಶಗಳ ಒಟ್ಟಾರೆ ಆರ್ಥಿಕ ಬೆಳವಣಿಗೆ ಶೇಕಡ 4% ಆಗಿದ್ದರೆ, ಜಾಗತಿಕ ಬೆಳವಣಿಗೆ ಶೇಕಡ 3.3% ಆಗಿತ್ತು. ಇದರ ಅರ್ಥವನ್ನು ಸರಳವಾಗಿ ಹೇಳುವುದಾದರೆ, ಜಗತ್ತಿನ ಆರ್ಥಿಕ ಚಟುವಟಿಕೆಯ ದೊಡ್ಡ ಭಾಗ ಈಗ ಸಾಂಪ್ರದಾಯಿಕ ಪಶ್ಚಿಮ ಆರ್ಥಿಕತೆಗಳ ಹೊರಗಡೆಯೂ ನಡೆಯುತ್ತಿದೆ. ಭಾರತ, ಚೀನಾ, ರಷ್ಯಾ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಹಾಗೂ ಹೊಸದಾಗಿ ಸೇರಿರುವ ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಏಷ್ಯಾದ ರಾಷ್ಟ್ರಗಳು ಸೇರಿ ಜಾಗತಿಕ ಆರ್ಥಿಕ ಸಮೀಕರಣವನ್ನು ಬದಲಾಯಿಸುವಷ್ಟು ದೊಡ್ಡ ಶಕ್ತಿಯನ್ನು ಹೊಂದಿವೆ.
ಇಂತಹ ದೊಡ್ಡ ವೇದಿಕೆಯಲ್ಲಿ ಭಾರತದ ಸ್ಥಾನ ವಿಶೇಷ ಏಕೆ? ಮೊದಲ ಕಾರಣ ಭಾರತವು ವಿಶ್ವದ ಪ್ರಮುಖ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿದೆ. ಎರಡನೇ ಕಾರಣ ಭಾರತದ ಜನಸಂಖ್ಯೆ ಮತ್ತು ಮಾರುಕಟ್ಟೆ, ಮೂರನೇ ಕಾರಣ ತಂತ್ರಜ್ಞಾನ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿ ಭಾರತ ನಿರ್ಮಿಸಿರುವ ಮಾದರಿ, ನಾಲ್ಕನೇ ಕಾರಣ ಭಾರತದ ರಾಜತಾಂತ್ರಿಕ ಸಾಮರ್ಥ್ಯ.
ಒಂದು ಕಡೆ ಅಮೆರಿಕ, ಜಪಾನ್, ಆಸ್ಟ್ರೇಲಿಯಾದೊಂದಿಗೆ ಕ್ವಾಡ್ (QUAD); ಮತ್ತೊಂದು ಕಡೆ ರಷ್ಯಾ ದೊಂದಿಗೆ ದೀರ್ಘಕಾಲದ ರಕ್ಷಣಾ ಮತ್ತು ಇಂಧನ ಸಂಬಂಧ; ಮಧ್ಯಪ್ರಾಚ್ಯದಲ್ಲಿ ಯುಎಇ ಮತ್ತು ಸೌದಿ ಅರೇಬಿಯಾದಂತಹ ರಾಷ್ಟ್ರಗಳೊಂದಿಗೆ ತಂತ್ರಾತ್ಮಕ ಸಹಕಾರ; ಯುರೋಪಿನೊಂದಿಗೆ ವ್ಯಾಪಾರ ಮತ್ತು ತಂತ್ರಜ್ಞಾನ ಸಹಕಾರ; ಆಫ್ರಿಕಾ ರಾಷ್ಟ್ರಗಳೊಂದಿಗೆ ಅಭಿವೃದ್ಧಿ ಸಹಭಾಗಿತ್ವ, ಇವೆಲ್ಲದರ ನಡುವೆ ಭಾರತ ಬ್ರಿಕ್ಸ್‌ನಲ್ಲೂ ಸಕ್ರಿಯವಾಗಿದೆ.
ಮೋದಿ ಸರ್ಕಾರದ ಅವಧಿಯಲ್ಲಿ ಭಾರತ ಡಿಜಿಟಲ್ ತಂತ್ರಜ್ಞಾನವನ್ನು ವಿದೇಶಾಂಗ ನೀತಿಯ ಪ್ರಮುಖ ಸಾಧನವಾಗಿಯೂ ಬಳಸಿದೆ. ಯುಪಿಐ, ಡಿಜಿಟಲ್ ಪಾವತಿ ವ್ಯವಸ್ಥೆ, ಡಿಜಿಟಲ್ ಸಾರ್ವಜನಿಕ ಮೂಲ ಸೌಕರ್ಯ ಮತ್ತು ಆಧಾರ್‌ನಂತಹ ವ್ಯವಸ್ಥೆಗಳು ಭಾರತದ ಡಿಜಿಟಲ್ ಪಬ್ಲಿಕ್ ಮೂಲಸೌಕರ್ಯ ಮಾದರಿ ಯನ್ನು ಜಾಗತಿಕ ಚರ್ಚೆಯ ಭಾಗವನ್ನಾಗಿ ಮಾಡಿವೆ. ಈಗ 2026ರ ಬ್ರಿಕ್ಸ್ ಅಧ್ಯಕ್ಷತೆಯಲ್ಲಿ ಭಾರತ ಸದಸ್ಯ ರಾಷ್ಟ್ರಗಳ ಕೇಂದ್ರ ಬ್ಯಾಂಕ್ ಡಿಜಿಟಲ್ ಕರೆನ್ಸಿಗಳ ನಡುವೆ ಸಂಪರ್ಕ ಸಾಧಿಸುವ ಪ್ರಸ್ತಾವವನ್ನು ಮುಂದಿಟ್ಟಿದೆ. ಇದು ಮೋದಿ ಸರ್ಕಾರದ ‘ಆತ್ಮನಿರ್ಭರ ಭಾರತ’ದ ಅಂತಾರಾಷ್ಟ್ರೀಯ ಆಯಾಮವನ್ನು ತೋರಿಸುತ್ತದೆ.
ಭಾರತವು ಜಾಗತಿಕ ವ್ಯವಸ್ಥೆಯಿಂದ ದೂರ ಹೋಗಲು ಬಯಸುವುದಿಲ್ಲ; ಬದಲಾಗಿ ಜಾಗತಿಕ ವ್ಯವಸ್ಥೆಯಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು, ಅಗತ್ಯವಿದ್ದಲ್ಲಿ ಪರ್ಯಾಯ ವ್ಯವಸ್ಥೆ ಗಳನ್ನೂ ನಿರ್ಮಿಸಲು ಬಯಸುತ್ತದೆ. 2024ರ ಬ್ರಿಕ್ಸ್ ವಿಸ್ತರಣೆ ಭೌಗೋಳಿಕ ವ್ಯಾಪ್ತಿಯನ್ನು ಮತ್ತಷ್ಟು ಬದಲಿಸಿತು. ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ಸೇರಿದಂತೆ ಹೊಸ ರಾಷ್ಟ್ರಗಳು ಸದಸ್ಯತ್ವ ಪಡೆದವು; ಇಂಡೋನೇಷ್ಯಾ ನಂತರ ಪೂರ್ಣ ಸದಸ್ಯವಾಯಿತು.
ಹೀಗಾಗಿ ಬ್ರಿಕ್ಸ್ ಈಗ ದಕ್ಷಿಣ ಅಮೆರಿಕದಿಂದ ಏಷ್ಯಾವರೆಗೆ, ಆಫ್ರಿಕಾದಿಂದ ಮಧ್ಯಪ್ರಾಚ್ಯವರೆಗೆ ವ್ಯಾಪಿಸಿರುವ ದೊಡ್ಡ ವೇದಿಕೆಯಾಗಿದೆ. ಇದರೊಂದಿಗೆ ಮೋದಿ ಸರ್ಕಾರದ ‘ಗ್ಲೋಬಲ್ ಸೌತ್’ ರಾಜತಾಂತ್ರಿಕತೆಗೆ ಬ್ರಿಕ್ಸ್ ಹೊಸ ಅವಕಾಶವನ್ನು ನೀಡಿದೆ. 2026ರ ಶೃಂಗಸಭೆ, ಏಳು ವರ್ಷಗಳ ನಂತರ ಕ್ಸಿ ಜಿನ್‌ಪಿಂಗ್ ಅವರ ಭಾರತ ಭೇಟಿಗೆ ಸಾಕ್ಷಿಯಾಗಲಿದೆ. 2020ರ ಗಡಿ ಸಂಘರ್ಷದ ನಂತರ ಭಾರತ ಮತ್ತು ಚೀನಾ ಸಂಬಂಧದಲ್ಲಿ ಉಂಟಾದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಇದು ಮಹತ್ವದ ಬೆಳವಣಿಗೆ. ಆದರೆ ಭಾರತ ತನ್ನ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಅಗತ್ಯವಿರುವಲ್ಲಿ ಸಂವಾದದ ಮಾರ್ಗವನ್ನು ತೆರೆದಿಡುತ್ತಿದೆ.
ಮೋದಿ ಅವರ ಬ್ರಿಕ್ಸ್ ದೃಷ್ಟಿಕೋನವನ್ನು ಒಂದು ವಾಕ್ಯದಲ್ಲಿ ಹೇಳಬೇಕಾದರೆ, ಭಾರತವು ಜಾಗತಿಕ ವ್ಯವಸ್ಥೆಯ ಪ್ರೇಕ್ಷಕನಾಗಿರಬಾರದು; ವ್ಯವಸ್ಥೆಯನ್ನು ರೂಪಿಸುವ ದೇಶವಾಗಬೇಕು. ಈ ದೃಷ್ಟಿಕೋನ ಕಳೆದ ದಶಕದ ಭಾರತದ ವಿದೇಶಾಂಗ ನೀತಿಯಲ್ಲಿ ಹಲವು ಸಂದರ್ಭಗಳಲ್ಲಿ ಕಾಣಿಸಿಕೊಂಡಿದೆ. ಬ್ರಿಕ್ಸ್‌ನಲ್ಲಿಯೂ ಭಾರತದ ಗುರಿ ಕೇವಲ ತನ್ನ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವುದಲ್ಲ.
ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹಣಕಾಸು, ತಂತ್ರಜ್ಞಾನ, ಆರೋಗ್ಯ, ಆಹಾರ ಮತ್ತು ಇಂಧನ ಭದ್ರತೆ, ಡಿಜಿಟಲ್ ಸಂಪರ್ಕ ಹಾಗೂ ಸುಸ್ಥಿರ ಅಭಿವೃದ್ಧಿಯ ಅವಕಾಶಗಳನ್ನು ಹೆಚ್ಚಿಸುವುದು ಭಾರತದ ವಿಶಾಲ ಉದ್ದೇಶ. ಇದರಿಂದಲೇ ಜಾಗತಿಕ ದಕ್ಷಿಣ ಎಂಬ ಪರಿಕಲ್ಪನೆ ಮೋದಿ ಅವರ ವಿದೇಶಾಂಗ ನೀತಿಯ ಪ್ರಮುಖ ಪದವಾಗಿ ಪರಿಣಮಿಸಿದೆ. ಇಂದು ಬ್ರಿಕ್ಸ್ ಜಾಗತಿಕ ಜಿಡಿಪಿಯ ಪಿಪಿಪಿ ಆಧಾರದ ಮೇಲೆ ಸುಮಾರು 40% ಶೇಕಡದಷ್ಟು ಪಾಲನ್ನು ಹೊಂದಿರುವ ಮಟ್ಟಕ್ಕೆ ಬೆಳೆದಿದೆ. ಈ ಅಂಕಿಅಂಶಗಳ ಹಿಂದೆ ಕೇವಲ ಆರ್ಥಿಕ ಶಕ್ತಿ ಮಾತ್ರವಿಲ್ಲ; ಬದಲಾಗಿ ಭವಿಷ್ಯದ ಜಾಗತಿಕ ರಾಜಕೀಯದಲ್ಲಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೊಂದಿರುವ ರಾಷ್ಟ್ರಗಳ ಸಮೂಹವಿದೆ.
ಹೀಗಾಗಿ ಮೋದಿ ಯುಗದ ಬ್ರಿಕ್ಸ್ ಕಥೆಯನ್ನು ಕೇವಲ ಭಾರತ ಬ್ರಿಕ್ಸ್‌ನ ಸದಸ್ಯ ಎಂಬ ಒಂದು ಸಾಲಿನಲ್ಲಿ ಮುಗಿಸಲು ಸಾಧ್ಯವಿಲ್ಲ. 2014ರ ನಂತರ ಭಾರತವು ಈ ವೇದಿಕೆಯಲ್ಲಿ ತನ್ನ ಧ್ವನಿ ಯನ್ನು ಹೆಚ್ಚು ಸ್ಪಷ್ಟಗೊಳಿಸಿದೆ. 2016ರಲ್ಲಿ ಗೋವಾದಲ್ಲಿ ನಾಯಕತ್ವ ನೀಡಿತು, 2021ರಲ್ಲಿ ಕೋವಿಡ್ ನಂತರದ ಜಾಗತಿಕ ಪುನಶ್ಚೇತನದ ಸಂದರ್ಭದಲ್ಲಿ ವೇದಿಕೆಯನ್ನು ಮುನ್ನಡೆಸಿತು. 2024-25ರ ವಿಸ್ತರಣೆಯ ನಂತರ ಹೊಸ ಭೌಗೋಳಿಕ ಮತ್ತು ಆರ್ಥಿಕ ವಾಸ್ತವಿಕತೆಯೊಂದಿಗೆ ಬ್ರಿಕ್ಸ್ ಬದಲಾಗಿದೆ, ಈಗ 2026ರಲ್ಲಿ ಭಾರತವೇ ಅದರ ಅಧ್ಯಕ್ಷ ಸ್ಥಾನದಲ್ಲಿದೆ.