ವಿದ್ಯಮಾನ
ಸನಾತನ ಧರ್ಮದಲ್ಲಿ, ಯುದ್ಧಗಳನ್ನು ಧರ್ಮದ ಅವಿಭಾಜ್ಯ ಅಂಗವೆಂದು ಸಂಪೂರ್ಣ ವಾಗಿ ಸಮರ್ಥಿಸಲಾಗಿದೆ. ಧರ್ಮವನ್ನು ಎತ್ತಿ ಹಿಡಿಯಲು ಅಥವಾ ದುರ್ಬಲರು ಮತ್ತು ಮುಗ್ಧರನ್ನು ರಕ್ಷಿಸಲು ಹೋರಾಡಿದರೆ ಯುದ್ಧವು ಸಂಪೂರ್ಣವಾಗಿ ಸ್ವೀಕಾರಾರ್ಹವಾಗಿದೆ. ಯಾವ ಸಂದರ್ಭದಲ್ಲಿ ಯುದ್ಧ ಅನಿವಾರ್ಯ ಅಥವಾ ಕರ್ತವ್ಯವಾಗುತ್ತದೆ ಎನ್ನುವು ದನ್ನು ಭಗವದ್ಗೀತೆಯಲ್ಲಿ ವಿಸ್ಕೃತವಾಗಿ ಚರ್ಚಿಸ ಲಾಗಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವನ್ನು ಒಂದ ಒಂದು ರೀತಿ ಯಿಂದ ಇಡೀ ಜಗತ್ತು ಅನುಭವಿಸುತ್ತಿದೆ. ಯುದ್ಧ ಅಂದಮೇಲೆ ಪ್ರಾಣ ಹಾಗೂ ಆಸ್ತಿಪಾಸ್ತಿ ಗಳ ಹಾನಿ ಸ್ವಾಭಾವಿಕ ಎನ್ನುವವರಿದ್ದಾರೆ. ಅದು ನಿಜವೇ ಆದರೂ, ಇನ್ನೂ ಕಣ್ಣುಬಿಡು ತ್ತಿದ್ದ ನೂರಾರು ಮುಗ್ಧ ಶಾಲಾ ಮಕ್ಕಳ ಸಾವಿನ ನೋವು, ಸಾಮೂಹಿಕ ಅಂತ್ಯಸಂಸ್ಕಾರದ ಗೋಳು ಮರೆಯುವಂಥಾದ್ದಲ್ಲ.
’Every thing is fair in war and love’ ಎನ್ನುವುದು ಪಾಶ್ಚಾತ್ಯ ಚಿಂತನೆ, ಭಾರತೀಯ ಚಿಂತನೆಯಲ್ಲ. ಭಾರತದಲ್ಲಿ ಯುದ್ಧಕ್ಕೆ ದೀರ್ಘ ಇತಿಹಾಸವೇ ಇದೆ. ಭಾರತ ಕಂಡಷ್ಟು ಯುದ್ಧಗಳನ್ನು ಬೇರಾವ ದೇಶವೂ ಕಂಡಿರಲಿಕ್ಕಿಲ್ಲ.
ವೇದಕಾಲದಿಂದಲೂ ಯುದ್ಧಗಳು ನಡೆದಿರುವುದನ್ನು ನಾವು ಕೇಳುತ್ತೇವೆ. ಆದರೆ ಭಾರತ ದಲ್ಲಿ ಯುದ್ಧಕ್ಕೂ ಒಂದು ನೀತಿಯಿದೆ. ಅದಕ್ಕೆ ವಿಧಿ ನಿಷಿದ್ಧಗಳಿವೆ. ಧರ್ಮ ನಿರ್ಣಯಕ್ಕೆ ಎಲ್ಲ ಸಾಧ್ಯತೆಗಳು ಮುಗಿದಾಗ ಮಾತ್ರ ಯುದ್ಧವನ್ನು ಭಾರತೀಯ ಸಂಸ್ಕೃತಿ ಅಪ್ಪಿಕೊಳ್ಳು ತ್ತದೆ, ಹಾಗಾಗಿಯೇ ಇಲ್ಲಿನ ಯುದ್ಧವನ್ನು ಧರ್ಮಯುದ್ಧವೆಂದೇ ಕರೆಯ ಲಾಗುತ್ತದೆ.
ಸಾಮ, ದಾನ, ಭೇದ ಎನ್ನುವ ಮೂರು ಉಪಾಯಗಳು ಫಲ ನೀಡದಿದ್ದಾಗ ಮಾತ್ರ ಭಾರತ ದಲ್ಲಿ ದಂಡವನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಭಾರತೀಯರು ಶಾಂತಿಪ್ರಿಯರು, ಎರಡು ಮಾತಿಲ್ಲ; ಆದರೆ ಯುದ್ಧವನ್ನು, ಯುದ್ಧದ ನೀತಿಯನ್ನು ಜಗತ್ತಿಗೆ ಕಲಿಸಿದವರು ಭಾರತೀಯರೇ ಆಗಿದ್ದಾರೆ ಎಂದರೆ ತಪ್ಪಾಗಲಾರದು. ಸಮಾಜ ಜೀವನದ ಎಲ್ಲ ಆಯಾಮ ಗಳಿಗೂ ರಾಮಾಯಣ ಆದರ್ಶವಾದಂತೆ, ಯುದ್ಧಕ್ಕೂ ರಾಮ-ರಾವಣರ ನಡುವಿನ ತ್ರೇತಾಯುಗದ ಯುದ್ಧವೇ ಇಂದಿಗೂ ಮಾದರಿಯಾಗಿದೆ.
ಇದನ್ನೂ ಓದಿ: Vinayaka V Bhat Column: ಇದು, ಮಾವು ಮಿಡಿವ ಆ ಮಿಡಿಗೆ ಜನ ತುಡಿಯುವ ಕಾಲ
‘ಗಗನಂ ಗಗನಾಕಾರಂ ಸಾಗರಃ ಸಾಗರೋಪಮಾ ರಾಮರಾವಣಯೋರ್ಯುದ್ಧಂ ರಾಮ ರಾವಣಯೋರಿವ’- ಸಮುದ್ರ ಹಾಗೂ ಆಕಾಶದ ಅಳತೆಗೆ ಹೇಗೆ ಹೋಲಿಕೆಯಾಗಿ ಇನ್ನೊಂದು ವಸ್ತುವನ್ನು ಹೇಳಲಾಗುವುದಿಲ್ಲವೋ, ರಾಮ-ರಾವಣರ ಯುದ್ಧಕ್ಕೂ ಅವರ ಯುದ್ಧವೇ ಸಾಟಿ, ಬೇರೆ ಸಾಟಿಯೇ ಇಲ್ಲ.
ಸುಮಾರು ಏಳು ದಿನಗಳ ಕಾಲ ನಡೆದ ರಾಮ-ರಾವಣರ ಯುದ್ಧವೇ ಇಂದಿಗೂ ಯುದ್ಧ ಗಳಿಗೆಲ್ಲ ತಾಯಿ. ರಾಮನು ಅತಿಪರಾಕ್ರಮಶಾಲಿಯಾಗಿದ್ದರೂ, ರಾವಣನ ಸಂಹಾರ ಮಾಡುವ ಮುನ್ನ ಒಮ್ಮೆ ರಾವಣನನ್ನು ಸೋಲಿಸಿ, ಅವನಿಗೆ ಅವಕಾಶವೊಂದನ್ನು ನೀಡುತ್ತಾನೆ: ಲಂಕೆಗೆ ಹಿಂದಿರುಗಿ ಮತ್ತೆ ಸಿದ್ಧನಾಗಿ ಬರಲು ಹೇಳುತ್ತಾನೆ.
ಏಕೆ? ಅಂದೇ ರಾವಣನನ್ನು ಕೊಲ್ಲಲು ರಾಮನಿಗೆ ಸಾಮರ್ಥ್ಯವಿರಲಿಲ್ಲವೇ? ಸುಮ್ಮನೆ ಏಕೆ ಹೋಗಬಿಟ್ಟ? ಅವಕಾಶ ಸಿಕ್ಕಿದಾಗ ಹಾಕಿ ಅಂದೇ ಅವನನ್ನು ಬಡಿದು ಹಾಕಬೇಕಿತ್ತು ಎಂದು ಹೇಳುವವರಿರಬಹುದು. ಹೇಗಿದ್ದರೂ ಅವತ್ತಿನ ದಿನ ಸಾಕಷ್ಟು ಜನರ ಮೇಲೆ ಯುದ್ಧಮಾಡಿ ದಣಿದಿದ್ದ ರಾವಣನನ್ನು ಮುಗಿಸುವ ಸದವಕಾಶವನ್ನು ರಾಮನು ಏಕೆ ಕೈಬಿಟ್ಟ?ರಾಮನೆಂಥಾ ಪರಾಕ್ರಮಶಾಲಿ ಎಂಬುದನ್ನು ವಾಲ್ಮೀಕಿಗಳು ರಾಮಾಯಣದಲ್ಲಿ ನಮಗೆ ಆಗಾಗ ತಿಳಿಸುತ್ತಲೇ ಬಂದಿದ್ದಾರೆ.
ಸರಿಸಾಟಿಯಾದ ಪ್ರತಿನಾಯಕನೊಬ್ಬ ಇರುವಾಗ, ನಾಯಕನ ವಿಜಯವು ನಿರ್ಣಾಯಕ ವಾಗಿರಬೇಕಿದ್ದರೆ, ಪ್ರತಿನಾಯ ಕನಾದವನು ತನ್ನ ಪೂರ್ಣಬಲದಿಂದ ಕದನ ಮಾಡುತ್ತಿರ ಬೇಕು. ಏನೋ, ದೌರ್ಬಲ್ಯವಿದ್ದ ಸಂದರ್ಭದಲ್ಲಿ ಸೋಲಿಸಿದರೆ ಅದಕ್ಕೆ ಅಷ್ಟಾಗಿ ಬೆಲೆ ಯಿರುವುದಿಲ್ಲ ಮತ್ತು ನಾಯಕನ ಪರಾಕ್ರಮಕ್ಕೆ ಅದೊಂದು ಕಳಂಕವೂ ಆಗಬಹುದು. ಎಂದೇ ಶ್ರೀರಾಮನು ಇದಾವುದಕ್ಕೂ ಆಸ್ಪದವನ್ನೇ ಕೊಡಲಿಲ್ಲ. ಜತೆಗೆ, ರಾವಣನಿಗೆ ಆತ್ಮಾವಲೋಕನ ಪಶ್ಚಾತ್ತಾಪಗಳಿಗೆ ಶ್ರೀರಾಮನು ಸಂದರ್ಭವೊದಗಿಸಿಕೊಟ್ಟ.
ಇವನೊಬ್ಬನಿಂದ ಸಂಪೂರ್ಣ ಲಂಕಾ ವಾಸಿಗಳು ನಾಶವಾಗುವುದನ್ನು ತಡೆಯಲು ಸರ್ವ ಪ್ರಯತ್ನ ಮಾಡಿದ್ದ. ಹೀಗೆ ತಪ್ಪುಹಾದಿಯನ್ನು ಬಿಡಲು ಒಂದು ಅನಿರೀಕ್ಷಿತವಾದ ಅವಕಾಶ ದೊರೆತಾಗಲೂ, ದೌಷ್ಟ್ಯ, ಅಹಂಕಾರಗಳು ಮೈಗೂಡಿಬಿಟ್ಟಿದ್ದಲ್ಲಿ ಆ ಅವಕಾಶ ವನ್ನು ಪೋಲು ಮಾಡುವುದಾಗುತ್ತದೆ. ಮುಂದಿನ ದಿನ ಮತ್ತೆ ರಾಮ-ರಾವಣರ ಯುದ್ಧ ವಾರಂಭವಾದಾಗ ಅತ್ಯುಗ್ರವಾಗಿ ಅದು ನಡೆಯಿತು.
ಎರಡು ಬಾರಿ ರಾವಣನನ್ನು ರಾಮನು ಪರಾಜಯಗೊಳಿಸಿದ ಮೇಲೆ ಈಗ ಮೂರಕ್ಕೆ ಮುಕ್ತಾಯವೆಂಬಂತೆ ಸಂಹಾರದ ಸಂದರ್ಭ. ಶ್ರೀರಾಮನು ರಾವಣನ ಹೃದಯಕ್ಕೆ ಗುರಿಯಿಟ್ಟನು. ಬ್ರಹ್ಮಾಸ್ತ್ರ ಪ್ರಯೋಗವನ್ನು ಮಾಡಿ, ರಾವಣಸಂಹಾರವನ್ನು ಮಾಡಿ ತನ್ನ ಅವತಾರದ ಧ್ಯೇಯೋದ್ದೇಶವನ್ನು ರಾಮಚಂದ್ರನು ಪೂರೈಸಿದ.
ಇಲ್ಲಿಯವರೆಗೆ ಭಾರತದಲ್ಲಿ ನಡೆದ ಯುದ್ಧಗಳಲ್ಲಿ ರಾಮ-ರಾವಣರ ನಡುವಿನ ಯುದ್ಧ ವನ್ನು ಅತ್ಯಂತ ಭೀಕರವೆಂದು ಪರಿಗಣಿಸಲಾಗಿದೆ. ಅವರ ಬಿಲ್ಲುಗಳ ಠೇಂಕಾರ ಶಬ್ದ ಗಳಿಂದಲೇ ಸಾವಿರಾರು ಸೈನಿಕರು ನೆಲಕ್ಕುರುಳಿದ್ದರಂತೆ. ರಾಮನು ರಾವಣನನ್ನು ಸಾಂಪ್ರ ದಾಯಿಕ ಆಯುಧಗಳಿಂದ ಸೋಲಿಸಲಿಲ್ಲ; ಆದರೆ ಬೆಂಕಿ, ಗಾಳಿ ಮತ್ತು ಸೂರ್ಯನ ಶಕ್ತಿಯನ್ನು ಒಳಗೊಂಡಿರುವ ನಿರ್ದಿಷ್ಟವಾದ ಆಯುಧದಿಂದ ಸೋಲಿಸಿದನು.
ಈ ಯುದ್ಧವು ವಿಮಾನಗಳು (ಹಾರುವ ರಥಗಳು) ಮತ್ತು ಮಂತ್ರಗಳಿಂದ ಚಾಲಿತವಾದ ಶಸ್ತ್ರಾಸ್ತ್ರಗಳು ಸೇರಿದಂತೆ ಮುಂದುವರಿದ ತಂತ್ರಜ್ಞಾನವನ್ನು ಒಳಗೊಂಡಿತ್ತು. ರಾವಣನು ನಾಗಪಾಶ (ಸರ್ಪ-ಬಾಣಗಳು) ಮತ್ತು ಮಾಯಾ ಈಟಿಯಂಥ ಭ್ರಮೆಗಳನ್ನು ಬಳಸಿದನು; ರಾಮನಿಗೆ ಋಷಿಗಳಿತ್ತ ದಿವ್ಯಾಸ್ತ್ರಗಳು ಮತ್ತು ಇಂದ್ರನ ಈಟಿಯಿಂದ ಇವುಗಳನ್ನು ಎದುರಿಸ ಲಾಯಿತು.
ಯುದ್ಧದಲ್ಲಿ ರಾವಣನ ಮರಣದ ನಂತರ, ರಾಮನು ತನ್ನ ಶತ್ರುವಿಗೆ ಸರಿಯಾದ ಅಂತ್ಯ ಕ್ರಿಯೆಗಳನ್ನು ಆದೇಶಿಸುವ ಮೂಲಕ, ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ಅತ್ಯುನ್ನತ ಸದ್ಗುಣವನ್ನು ಪ್ರದರ್ಶಿಸಿದ. ವೈರತ್ವವು ಸಾವಿನೊಂದಿಗೆ ಕೊನೆಗೊಳ್ಳಬೇಕು, ದ್ವೇಷವನ್ನು ಮರಣದೊಂದಿಗೆ ಮುಕ್ತಾಯಗೊಳಿಸಬೇಕು.
‘ಮರಣಾಂತಾನಿ ವೈರಾನಿ ನಿವೃತ್ತಂ ನ ಪ್ರಯೋಜನಮ್ ಕ್ರಿಯತಾಮಸ್ಯ ಸಂಸ್ಕಾರೋ ಮಮಾಪೇಷ್ಯ ತಥಾ ತವ’- ’ರಾವಣನೊಂದಿಗಿನ ನನ್ನ ವೈರತ್ವ ಎನ್ನುವುದು ಅವನ ಮರಣದಲ್ಲಿ ಪರಿಸಮಾಪ್ತಿಯಾಯ್ತು; ಈಗ ಆತ ನಿನಗೆ ಹೇಗೆ ಸಹೋದರನೋ ನನಗೂ ಸಹೋದರನೇ ಆಗಿದ್ದಾನೆ. ಶಾಸ್ತ್ರೋಕ್ತವಾಗಿ ನೀನು ಆತನ ಅಂತ್ಯಸಂಸ್ಕಾರ ಮಾಡಲು ಒಪ್ಪದಿದ್ದರೆ ನಾನು ಮಾಡುತ್ತೇನೆ’ ಎನ್ನುವ ಮೂಲಕ ಮನುಷ್ಯತ್ವಕ್ಕೆ ಹೊಸ ಭಾಷ್ಯ ಬರೆಯುತ್ತಾನೆ.
ರಾಮ-ರಾವಣರ ನಡುವಿನ ಯುದ್ಧವನ್ನು ಬೇರೆ ಯಾವ ಯುದ್ಧಕ್ಕೂ ಹೋಲಿಸಲಾಗದು ಎಂಬುದು ಪ್ರತ್ಯಕ್ಷದರ್ಶಿಯಾಗಿದ್ದ ಆಂಜನೇಯನ ಅನಿಸಿಕೆ. ಮಹಾಭಾರತದಲ್ಲಿನ ಕುರುಕ್ಷೇತ್ರ ಯುದ್ಧದ ಆರಂಭದಲ್ಲಿ, ಅರ್ಜುನನ ರಥದ ಮೇಲೆ ಬಂದು ಕುಳಿತು ಯುದ್ಧ ವನ್ನು ವೀಕ್ಷಣೆ ಮಾಡಬೇಕು ಎಂದು ಆಂಜನೇಯನಲ್ಲಿ ವಿನಂತಿಸಲಾಯಿತಂತೆ.
ಅದಕ್ಕೆ ಆಂಜನೇಯ, ‘ನಿಮ್ಮದೊಂದು ಕೌಟುಂಬಿಕ ಜಗಳ ರಾಮ-ರಾವಣರ ಯುದ್ಧವನ್ನು ನೋಡಿದ ನಾನು ಇದನ್ನ ಯುದ್ಧ ಎನ್ನಲಾದೀತೆ?’ ಎಂದು ಕೇಳಿದ್ದನಂತೆ. ಇನ್ನು ಕೌರವ-ಪಾಂಡವರ ನಡುವಿನ 18 ದಿನಗಳ ಕುರುಕ್ಷೇತ್ರ ಯುದ್ಧವಂತೂ ಇನ್ನೊಂದು ದೃಷ್ಟಿಯಿಂದ ದಾಖಲೆಯೇ ಸರಿ.
ಹದಿನೆಂಟು ಅಕ್ಷೋಹಿಣಿ ಸೇನೆ ಒಂದು ಕಡೆ ಬಂದು ನಿಂತು ಹದಿನೆಂಟು ದಿನ ಕಾದಾಡಿವೆ. ಒಂದು ಅಕ್ಷೋಹಿಣಿಯೆಂದರೆ ಸುಮಾರು ಎರಡು ಲಕ್ಷದ ಹದಿನೆಂಟು ಸಾವಿರದ ಏಳು ನೂರು ಯೋಧರು ಹಾಗೂ ಆನೆ-ಕುದುರೆಗಳ ಕಡಿ. (21,870 ರಥಗಳು, 21,870 ಆನೆಗಳು 65,610 ಕುದುರೆಗಳು ಹಾಗೂ 1,19,750 ಸೈನಿಕರು) ಹೀಗೆ, ಏಳು ಅಕ್ಷೋಹಿಣಿ ಸೇನೆ ಪಾಂಡವರ ಪರವಾಗಿದ್ದರೆ ಹನ್ನೊಂದು ಅಕ್ಷೋಹಿಣಿ ಸೇನೆ ಕೌರವರ ಪರವಾಗಿ ಒಟ್ಟೂ ಹದಿನೆಂಟು ಅಕ್ಷೋಹಿಣಿ. ಅಂದರೆ ಸುಮಾರು ಎರಡು ಮಿಲಿಯನ್ ಸೈನಿಕರು ಎದುರು ಬದುರು ನಿಂತು ಯುದ್ಧಮಾಡಿರುವ ಇನ್ನೊಂದು ಇತಿಹಾಸವಿಲ್ಲ.
ಪ್ರಾಚೀನ ಭಾರತವು ಪ್ರತಿ ಯುಗದಲ್ಲಿ ಅನೇಕ ಯುದ್ಧಗಳಿಗೆ ಸಾಕ್ಷಿಯಾಗಿದೆ. ಕೆಲವು ಪ್ರಸಿದ್ಧ ಯುದ್ಧಗಳೆಂದರೆ, ವೇದಕಾಲದ ಹತ್ತು ರಾಜರ ಯುದ್ಧ, ತ್ರೇತಾಯುಗದಲ್ಲಿ ರಾಮ ಮತ್ತು ರಾವಣರ ನಡುವಿನ ಯುದ್ಧ ಮತ್ತು ದ್ವಾಪರ ಯುಗದಲ್ಲಿ ಕುರುಕ್ಷೇತ್ರ ಯುದ್ಧ. ಇದಲ್ಲದೆ, ಇತರ ಅನೇಕ ಯುದ್ಧಗಳನ್ನು ವಿವಿಧ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಭಾರತವು ಯುದ್ಧ, ಶಸ್ತ್ರಾಸ್ತ್ರಗಳು ಮತ್ತು ಸಮರ ಕಲೆಗಳ ಶ್ರೀಮಂತ ಇತಿಹಾಸವನ್ನು ಹೊಂದಿದೆ ಎನ್ನುವುದನ್ನು ಅದು ಸೂಚಿಸುತ್ತದೆ. ಯಜುರ್ವೇದದ ಭಾಗವಾದ ಧನುರ್ವೇದವು ಬಿಲ್ಲುಗಾರಿಕೆ ಮತ್ತು ಮಿಲಿಟರಿ ವಿಜ್ಞಾನದ ಬಗ್ಗೆ ವ್ಯವಹರಿಸುತ್ತದೆ.
‘ಧನುರ್ವೇದ’ ಎಂಬ ಪದವು ಸಾಮಾನ್ಯವಾಗಿ ಬಿಲ್ಲು-ಬಾಣಗಳ ವಿಜ್ಞಾನವನ್ನು ಸೂಚಿಸು ತ್ತದೆ. ಧನುರ್ವೇದವು ಮುಖ್ಯವಾಗಿ ಶಸಾಸಗಳು ಮತ್ತು ತರಬೇತಿ, ಯುದ್ಧ ನೀತಿಶಾಸ್ತ್ರ, ಯುದ್ಧ ತಂತ್ರ ಮತ್ತು ಸೇನಾ ಸಂಯೋಜನೆಯನ್ನು ಒಳಗೊಂಡಿದೆ ಮತ್ತು ಕುದುರೆಗಳು, ಆನೆಗಳು ಇತ್ಯಾದಿಗಳಿಗೆ ತರಬೇತಿ ನೀಡುವುದರ ಕುರಿತು ವ್ಯವಹರಿಸುತ್ತದೆ.
ಇನ್ನು ಅಗ್ನಿ ಪುರಾಣವು ಶಸ್ತ್ರಾಸ್ತ್ರಗಳ ಬಗ್ಗೆಯೂ ವ್ಯವಹರಿಸುತ್ತದೆ. ಸನಾತನ ಧರ್ಮ ದಲ್ಲಿ, ಯುದ್ಧಗಳನ್ನು ಧರ್ಮದ ಅವಿಭಾಜ್ಯ ಅಂಗವೆಂದು ಸಂಪೂರ್ಣವಾಗಿ ಸಮರ್ಥಿಸ ಲಾಗಿದೆ. ಧರ್ಮವನ್ನು ಎತ್ತಿಹಿಡಿಯಲು ಅಥವಾ ದುರ್ಬಲರು ಮತ್ತು ಮುಗ್ಧರನ್ನು ರಕ್ಷಿಸಲು ಹೋರಾಡಿದರೆ ಯುದ್ಧವು ಸಂಪೂರ್ಣವಾಗಿ ಸ್ವೀಕಾರಾರ್ಹವಾಗಿದೆ.
ಯಾವ ಸಂದರ್ಭದಲ್ಲಿ ಯುದ್ಧ ಅನಿವಾರ್ಯ ಅಥವಾ ಕರ್ತವ್ಯವಾಗುತ್ತದೆ ಎನ್ನುವು ದನ್ನು ಭಗವದ್ಗೀತೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಮನು ಮತ್ತು ಕೌಟಿಲ್ಯನ ಪ್ರಕಾರ, ಬಾಹ್ಯ ಆಕ್ರಮಣದ ವಿರುದ್ಧ ಆತ್ಮರಕ್ಷಣೆಗಾಗಿ ಮಾತ್ರವಲ್ಲದೆ ವಿಜಯದ ಮೂಲಕ ಪ್ರದೇಶದ ವಿಸ್ತರಣೆಗಾಗಿ ಯುದ್ಧಗಳು ನಡೆಯುತ್ತಿದ್ದವು. ಇದಲ್ಲದೆ, ರಾಜನು ನೈಸರ್ಗಿಕ ಶತ್ರುವನ್ನು ನಾಶಪಡಿಸುವ ಗುರಿಯನ್ನು ಹೊಂದಿರುತ್ತಿದ್ದ.
ಕಾರಣ, ಅವನು ಮೊದಲು ಶತ್ರುವನ್ನು ತೊಡೆದುಹಾಕದಿದ್ದರೆ, ಅವನು ಶತ್ರುಗಳಿಂದ ನಿರ್ಮೂಲನೆಯಾಗಬೇಕಾಗುತ್ತದೆ ಎನ್ನುವ ನೀತಿ. ಇರಾನಿನ ಮೇಲಿನ ಯುದ್ಧಕ್ಕೆ ಅಮೆರಿಕ ಹಾಗೂ ಇಸ್ರೇಲ್ ದೇಶಗಳು ನೀಡುತ್ತಿರುವ ಕಾರಣವೂ ಇದೇ ಆಗಿದೆ. ನಾವು ಈಗ ಮತಾಂಧ ರಿಂದ ಆಳಲ್ಪಡುತ್ತಿರುವ ಇರಾನಿನ ಬಲವನ್ನು ತಗ್ಗಿಸದಿದ್ದರೆ, ಅವರೇ ಜಗತ್ತಿನ ಮೇಲೆ ಎರಗುತ್ತಿದ್ದರು ಎನ್ನುವುದು ಅವರ ವಾದ.
ಯುದ್ಧದ ಸಮಯದಲ್ಲಿ ಭಾರತದ ರಾಜರು ನೈತಿಕತೆಗಳಿಗೆ ಬದ್ಧರಾಗಿರುತ್ತಿದ್ದರು ಎಂದು ಅನೇಕ ದಾಖಲೆಗಳಿಂದ ಸಿದ್ಧವಾಗುತ್ತದೆ. ಗ್ರೀಕ್ ವಿದ್ವಾಂಸರ ದಾಖಲೆಗಳು ಸಹ ಭಾರತ ದಲ್ಲಿ ಯುದ್ಧ ಪ್ರಕ್ರಿಯೆಯಲ್ಲಿ ಯಾವುದೇ ನಾಗರಿಕರಿಗೆ ಹಾನಿಯಾಗುತ್ತಿರಲಿಲ್ಲ ಎಂದು ಉಲ್ಲೇಖಿಸಿದ್ದಾರೆ.
ಗ್ರೀಕ್ ರಾಯಭಾರಿ ಮೆಗಾಸ್ತನೀಸ್ ಹೇಳುತ್ತಾನೆ, ‘ಇತರ ರಾಷ್ಟ್ರಗಳಲ್ಲಿ ಯುದ್ಧದ ಸ್ಪರ್ಧೆ ಗಳಲ್ಲಿ ಮಣ್ಣನ್ನು ಧ್ವಂಸಗೊಳಿಸುವುದು ಮತ್ತು ಆ ಮೂಲಕ ಅದನ್ನು ಕೃಷಿ ಮಾಡದ ತ್ಯಾಜ್ಯವಾಗಿಸುವುದು ಸಾಮಾನ್ಯವಾಗಿದೆ; ಆದರೆ ಇದಕ್ಕೆ ವಿರುದ್ಧವಾಗಿ ಭಾರತದಲ್ಲಿ ರೈತರನ್ನು ಪವಿತ್ರತಮ ವರ್ಗವೆಂದು ಪರಿಗಣಿಸಲಾಗುತ್ತದೆ.
ನೆರೆಹೊರೆಯಲ್ಲಿ ಯುದ್ಧ ನಡೆಯುತ್ತಿರುವಾಗಲೂ ಮಣ್ಣನ್ನು ಉಳುಮೆ ಮಾಡುವವರು ಯಾವುದೇ ಅಪಾಯ ಪ್ರಜ್ಞೆಯಿಂದ ತೊಂದರೆಗೊಳಗಾಗುವುದಿಲ್ಲ, ಸಂಘರ್ಷವನ್ನು ನಡೆಸುವಲ್ಲಿ ಎರಡೂ ಕಡೆಯವರು ಪರಸ್ಪರ ಹತ್ಯೆ, ಸಾವು-ನೋವಿನಲ್ಲಿ ಬಳಲುತ್ತಾರಾ ದರೂ ಕೃಷಿಯಲ್ಲಿ ತೊಡಗಿರುವ ರೈತರಿಗೆ ಯಾವುದೇ ಕಿರುಕುಳವಿಲ್ಲದೆ ಉಳಿಯಲು ಅವಕಾಶ ಮಾಡಿಕೊಡುತ್ತಿದ್ದರು’.
ಇದಲ್ಲದೆ ಅವರು ಶತ್ರುವಿನ ದೇಶವನ್ನು ಬೆಂಕಿಯಿಂದ ಧ್ವಂಸಗೊಳಿಸುವುದಿಲ್ಲ ಅಥವಾ ನಿಸರ್ಗವನ್ನು ಹಾಳುಗೆಡುವುದಿಲ್ಲ, ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಶತ್ರುವಿನಿಂದ ಯಾವುದೇ ಹಾನಿಯಾಗುವುದಿಲ್ಲ, ಏಕೆಂದರೆ ಈ ವರ್ಗದ ಜನರನ್ನು ಸಾರ್ವ ಜನಿಕ ಉಪಕಾರಕರೆಂದು ಪರಿಗಣಿಸಲಾಗುತ್ತದೆ ಎಂದು ಆತ ಉಲ್ಲೇಖಿಸುತ್ತಾನೆ.
ಮಹಾಭಾರತ, ರಾಮಾಯಣ, ಧನುರ್ವೇದ ಮತ್ತು ವೇದಗಳಲ್ಲಿ ಯುದ್ಧದ ನೀತಿಶಾಸ್ತ್ರ ಮತ್ತು ತೊಡಗಿಸಿಕೊಳ್ಳುವಿಕೆಯ ನಿಯಮಗಳು ಹೀಗಿದ್ದವು: ಯುದ್ಧದ ಸ್ಥಳ ಮತ್ತು ಸಮಯವನ್ನು ಮೊದಲೇ ನಿರ್ದಿಷ್ಟಪಡಿಸಬೇಕು. ಯುದ್ಧವು ಹಗಲಿನಲ್ಲಿ ಮಾತ್ರ ನಡೆಯ ಬೇಕು. ಒಬ್ಬ ಯೋಧನ ಮೇಲೆ ಅನೇಕ ಯೋಧರು ದಾಳಿ ಮಾಡಕೂಡದು.
ನಿರಾಯುಧ ಯೋಧನಿಗೆ ಹಾನಿ ಮಾಡುವಂತಿಲ್ಲ. ಸೊಂಟದ ಕೆಳಗೆ ಶತ್ರುವನ್ನು ಹೊಡೆಯುವಂತಿರಲಿಲ್ಲ, ಭೂಮಿಗೆ ಯಾವುದೇ ರೀತಿಯಲ್ಲಿ ಹಾನಿಯಾಗಬಾರದು. ಮಹಿಳೆ ಯರು, ಮಕ್ಕಳು, ರೋಗಿಗಳು ಮತ್ತು ರೈತರು ಯುದ್ಧದಲ್ಲಿ ಬಾಧಿತರಾಗಬಾರದು ಮತ್ತು ಯುದ್ಧ ಕೈದಿಗಳನ್ನು ಗೌರವದಿಂದ ಕಾಣಬೇಕು, ವಿಷಪೂರಿತ ಶಸ್ತ್ರಾಸ್ತ್ರಗಳು ಮತ್ತು ಬಾಣದ ತಲೆಗಳನ್ನು ನಿಷೇಧಿಸಲಾಗಿತ್ತು.
ಇಡೀ ಜನಸಂಖ್ಯೆಯನ್ನು ಅಳಿಸಿ ಹಾಕುವ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ನಿಷೇಧಿಸಲಾಗಿತ್ತು. ಪ್ರಜ್ಞಾಹೀನರಾಗಿ ಮಲಗಿರುವ, ಅಂಗವಿಕಲನಾಗಿರುವ, ಆಯುಧ ವಿಲ್ಲದ ಅಥವಾ ಭಯದಿಂದ ಪೀಡಿತನಾಗಿರುವ ಮತ್ತು ಆಶ್ರಯಕ್ಕಾಗಿ ಬಂದ ಶತ್ರುವನ್ನು ಕೊಲ್ಲಬಾರದು. ಹೋರಾಟದಲ್ಲಿ ಕೆಳಗೆ ಬಿದ್ದವರನ್ನು, ಯುದ್ಧರಂಗದಿಂದ ಬೆನ್ನು ತೋರಿಸಿ ಪಲಾಯನ ಮಾಡುವವರನ್ನು, ಶರಣಾಗತರನ್ನು ಶರಣಾಗತಿಯ ಸಂಕೇತವಾಗಿ ತನ್ನ ಕೂದಲನ್ನು ಬಿಚ್ಚುವ ಅಥವಾ ತನ್ನ ಶಸ್ತ್ರಾಸ್ತ್ರಗಳನ್ನು ಕೆಳಕ್ಕೆ ಎಸೆಯುವ ಯಾರೇ ಆದರೂ ಅವರಿಗೆ ತೊಂದರೆ ಕೊಡಬಾರದು.
ವಿಷಯುಕ್ತ ಶಸ್ತ್ರಾಸ್ತ್ರಗಳನ್ನು ಬಳಸುವ ಕ್ರಿಯೆಯನ್ನು ಹೇಡಿತನವೆಂದು ಪರಿಗಣಿಸಬೇಕು ಇತ್ಯಾದಿ. ಅನಾದಿ ಕಾಲದಿಂದಲೂ, ಭಾರತವು ಯುದ್ಧದ ಸಮಯದಲ್ಲಿಯೂ ಜೀವದ ಘನತೆ, ಮಾನವ ಸಹಾನುಭೂತಿ ಮತ್ತು ನೈತಿಕತೆಯ ಪ್ರಾಬಲ್ಯಕ್ಕೆ ಹೆಚ್ಚಿನ ಮೌಲ್ಯವನ್ನು ನೀಡುವ ನಾಗರಿಕತೆಯಾಗಿದೆ. ಕೇವಲ ವಿಜಯ ಅಥವಾ ಸೇಡಿಗಾಗಿ ಯುದ್ಧವನ್ನು ನಡೆಸುವ ಅನೇಕ ದೇಶಗಳಿಗಿಂತ ಭಿನ್ನವಾಗಿ, ಭಾರತೀಯ ವಿಶ್ವ ದೃಷ್ಟಿಕೋನವು ಅದರ ಪ್ರಾಚೀನ ಧಾರ್ಮಿಕ, ಆಧ್ಯಾತ್ಮಿಕ ಮತ್ತು ತಾತ್ವಿಕ ಪರಂಪರೆಯಲ್ಲಿ ಬೇರೂರಿದೆ.
ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯನ್ನು ಒಳಗೊಂಡಿರುವ ಭಾರತೀಯ ಸಶಸ್ತ್ರ ಪಡೆಗಳು ಆಧುನಿಕ ಯುದ್ಧದಲ್ಲಿಯೂ ಈ ತತ್ವಗಳನ್ನು ಅಳವಡಿಸಿಕೊಳ್ಳುತ್ತಲೇ ಸಾಗಿವೆ. ಪಾಕಿಸ್ತಾನದಂಥ ನೆರೆರಾಷ್ಟ್ರಗಳ ತೀವ್ರ ಪ್ರಚೋದನೆಯ ಸಂದರ್ಭಗಳಲ್ಲಿಯೂ ಭಾರತವು ಈ ನಿಲುವನ್ನು ಸತತವಾಗಿ ಉಳಿಸಿಕೊಂಡಿರುವುದು ವಿಶೇಷವಾಗಿದೆ.
ರಾಮಾಯಣ ಮತ್ತು ಮಹಾಭಾರತದ ಕಾಲದಿಂದಲೂ, ಭಾರತೀಯ ಯುದ್ಧನೀತಿ ಶಾಸ್ತ್ರ ವು ಕೇವಲ ಸಾಹಿತ್ಯಿಕ ಆದರ್ಶವಾದವಾಗಿರಲಿಲ್ಲ; ಅವು ಮೂಲಭೂತ ನಿಯಮ ಗಳಾಗಿದ್ದು ಇಂದಿಗೂ ಭಾರತೀಯ ಸಶಸ್ತ್ರ ಪಡೆಗಳ ನೀತಿಯಲ್ಲಿ ಪ್ರತಿಧ್ವನಿಸುತ್ತಿವೆ. ಜಾಗತಿಕವಾಗಿ ಅತ್ಯಂತ ಶಿಸ್ತುಬದ್ಧ ಮತ್ತು ಗೌರವಾನ್ವಿತ ಮಿಲಿಟರಿ ಪಡೆಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟ ಭಾರತೀಯ ಸೇನೆ, ಈ ಯುದ್ಧ ನೈತಿಕತೆಯನ್ನು ಅಚಲ ಬದ್ಧತೆ ಯೊಂದಿಗೆ ಎತ್ತಿ ಹಿಡಿಯುತ್ತಿದೆ.
ನಾಗರಿಕ ಪ್ರದೇಶಗಳ ಮೇಲೆ ವಿವೇಚನಾರಹಿತ ದಾಳಿ ಅಥವಾ ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡಿರುವ ಕೆಲವು ಯುದ್ಧ ತಂತ್ರಗಳನ್ನು ಒಳಗೊಂಡಿರುವ ಕೆಲವು ರಾಷ್ಟ್ರಗಳಿಗಿಂತ ಭಿನ್ನವಾಗಿ, ಭಾರತವು ಅಂಥ ತಂತ್ರಗಳ ವಿರುದ್ಧ ದೃಢವಾದ ನಿಲುವನ್ನು ಉಳಿಸಿಕೊಂಡಿದೆ.
ಪಾಕಿಸ್ತಾನದ ವಿರುದ್ಧದ ಅತ್ಯಂತ ತೀವ್ರವಾದ ಮಿಲಿಟರಿ ಕಾರ್ಯಾಚರಣೆಗಳ ಸಂದರ್ಭ ದಲ್ಲಿಯೂ, ಭಾರತದ ಮಿಲಿಟರಿ ನಾಯಕತ್ವವು ನಾಗರಿಕ ಸಾವು-ನೋವುಗಳನ್ನು ತಪ್ಪಿಸಲು ಮತ್ತು ಸಾಮಾನ್ಯ ನಾಗರಿಕರನ್ನು ರಕ್ಷಿಸಲು ಸ್ಪಷ್ಟ ನಿರ್ದೇಶನಗಳನ್ನು ನೀಡಿತ್ತು.
ಇತ್ತೀಚಿನ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯಲ್ಲಿಯೂ ಈ ಅಭ್ಯಾಸವು ಮತ್ತೆ ಸ್ಪಷ್ಟವಾಯಿತು, ಗಡಿಯುದ್ದಕ್ಕೂ ಭಾರತೀಯ ನಾಗರಿಕ ಗ್ರಾಮಗಳ ಮೇಲೆ ಪಾಕಿಸ್ತಾನದ ತೀವ್ರ ಶೆಲ್ ದಾಳಿಯ ಹೊರತಾಗಿಯೂ ಭಾರತೀಯ ಮಿಲಿಟರಿಯು, ಶತ್ರು ಹೋರಾಟ ಗಾರರು, ಭಯೋತ್ಪಾದಕ ನೆಲೆಗಳು ಮತ್ತು ಆಯಕಟ್ಟಿನ ಜಾಗಗಳನ್ನು ಮಾತ್ರ ಗುರಿಯಾಗಿಸಿ ಕೊಂಡಿತ್ತು ಎನ್ನುವುದನ್ನು ಗಮನಿಸಬಹುದಾಗಿದೆ.
ಇತರ ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳ ಅಸ್ಪಷ್ಟ ಅಥವಾ ಆಕ್ರಮಣಕಾರಿ ಪರಮಾಣು ಸಿದ್ಧಾಂತಗಳಿಗೆ ವ್ಯತಿರಿಕ್ತವಾಗಿ, ಭಾರತವು ತನ್ನ ಪರಮಾಣು ಪರೀಕ್ಷೆಗಳನ್ನು ನಡೆಸಿದಾಗ, ‘ಭಾರತವು ಎಂದಿಗೂ ಪರಮಾಣು ದಾಳಿಯನ್ನು ತಾನಾಗಿ ಪ್ರಾರಂಭಿಸುವುದಿಲ್ಲ, ಆದರೆ ದಾಳಿ ಮಾಡಿದರೆ ನಿರ್ಣಾಯಕವಾಗಿ ಪ್ರತಿಕ್ರಿಯಿಸುವ ಹಕ್ಕನ್ನು ಉಳಿಸಿಕೊಳ್ಳುತ್ತದೆ’ ಎಂದು ಭರವಸೆ ನೀಡಿತ್ತು.
ಯುದ್ಧವು ಕ್ರೂರತೆಯ ಪರಾಕಾಷ್ಠೆಯನ್ನು ಮುಟ್ಟುವ ಈ ಕಾಲದಲ್ಲಿಯೂ, ಯುದ್ಧದ ನೈತಿಕತೆಗೆ ಭಾರತದ ಪ್ರಾಚೀನ ಮತ್ತು ಆಧುನಿಕ ಬದ್ಧತೆಯು ಅಪರೂಪದ ಮತ್ತು ಅಗತ್ಯ ವಾದ ಉದಾಹರಣೆಯಾಗಿ ಜಗತ್ತಿನ ಮುಂದೆ ನಿಂತಿದೆ.