ಮನಿ ಮೈಂಡೆಡ್
ಜಗತ್ತಿನ ಇತ್ತೀಚಿನ ಈ ವಿದ್ಯಮಾನಗಳನ್ನೊಮ್ಮೆ ಗಮನಿಸಿ. ಫ್ರಾನ್ಸ್, ಬೆಲ್ಜಿಯಂ, ಸ್ಪೇನ್, ಚಿಲಿಯಲ್ಲಿ ಹಠಾತ್ತನೆ ಗಲಭೆಗಳ ಕಿಡಿ ಹತ್ತಿಕೊಂಡಿವೆ. ಮೇಲ್ನೋಟಕ್ಕೆ ಇವು ವಿದ್ಯಾರ್ಥಿಗಳ, ಯುವಕರ ಅಥವಾ ಸಾರ್ವಜನಿಕರ ಹಕ್ಕುಗಳಿಗಾಗಿ ನಡೆಯುತ್ತಿರುವ ಪ್ರತಿಭಟನೆಗಳಂತೆ ಕಂಡು ಬರುತ್ತಿವೆ. ಆದರೆ, ಈ ಬೆಂಕಿಯ ಹಿಂದೆ ಭಾರಿ ಜಿಯೊ ಪಾಲಿಟಿಕ್ಸ್ನ ನೆರಳಿದೆ. ನೋಡಿ, ಯುರೋಪಿನ ಎರಡು ರಾಷ್ಟ್ರ ಗಳಾದ - ಮತ್ತು ಬೆಲ್ಜಿಯಂ, ಇರಾನ್ ವಿಚಾರದಲ್ಲಿ ಅಮೆರಿಕದ ಮಿಲಿಟರಿ ದಾಳಿ ಹಾಗೂ ನಿಲುವು ಗಳನ್ನು ಬಹಿರಂಗವಾಗಿ ವಿರೋಧಿಸಿದವು.
ಫಲಿತಾಂಶ? ಕೆಲವೇ ದಿನಗಳಲ್ಲಿ ಶಾಲೆಗಳನ್ನು ಸರಿಪಡಿಸಿ ಎಂಬ ಹೆಸರಿನಲ್ಲಿ ಧರಣಿ ಶುರುವಾ ಯಿತು. ಇಂದು - ಮತ್ತು ಬೆಲ್ಜಿಯಂ ಬೀದಿ ಗಲಭೆಗಳಿಂದ ಹೊತ್ತಿ ಉರಿಯುತ್ತಿವೆ! ತೈಲ ಸಂಪದ್ಭರಿತ ವೆನೆಜುವೆಲಾ ದಲ್ಲಿ ಅಧ್ಯಕ್ಷರನ್ನೇ ಅಪಹರಿಸಿ ಪದಚ್ಯುತಗೊಳಿಸಿ ಅಮೆರಿಕ ಬೆಂಬಲಿತ ಆಡಳಿತ ಬದಲಾವಣೆಯನ್ನು ಮಾಡಲಾ ಯಿತು. ಈ ಕೃತ್ಯವನ್ನು ಚಿಲಿ ಖಂಡಿಸಿತು. ಬೆನ್ನಲ್ಲೇ ಶಿಕ್ಷಣ ಸುಧಾರಣೆಯ ನೆಪದಲ್ಲಿ ಬೃಹತ್ ಆಂದೋಲನ ಉಂಟಾಗಿದ್ದು, ಚಿಲಿಯ ಶಾಂತಿಯನ್ನೇ ಧೂಳಿಪಟಗೊಳಿಸಿದೆ.
ಇರಾನ್ ಯುದ್ಧದಲ್ಲಿ ಅಮೆರಿಕಕ್ಕೆ ಸೈ ಹೇಳದಿದ್ದ ಸ್ಪೇನ್ನಲ್ಲಿ ಏನಾಗಿದೆ ಗೊತ್ತೇ? ಯುವಕರು ಹಾಸ್ಟೆಲ್ ಮತ್ತು ಮನೆ ಬಾಡಿಗೆ ಇಳಿಸಿ ಎಂದು ಬೀದಿಗಿಳಿದಿದ್ದಾರೆ. ಸ್ಪೇನ್ ಹೈರಾಣಾಗಿದೆ. ಈ ದೇಶಗಳಲ್ಲಿ ಎದ್ದಿರುವ ಅಶಾಂತಿ ಕೇವಲ ಕಾಕತಾಳೀಯವೇ? ಅಥವಾ ಅಮೆರಿಕದ ಷರತ್ತುಗಳಿಗೆ ಮಣಿಯದ ದೇಶಗಳ ಆಂತರಿಕ ಅಡಿಪಾಯವನ್ನೇ ಅಲುಗಾಡಿಸುವ ಜಾಗತಿಕ ಸಂಚಿನ ಮಾದರಿಯೇ? ಅಮೆರಿಕದ ಒತ್ತಡಕ್ಕೆ ಪ್ರಪಂಚದ ಅನೇಕ ದೇಶಗಳು ಶರಣಾಗುತ್ತಿರ ಬಹುದು. ಆದರೆ, ಭಾರತ ಮಾತ್ರ ತನ್ನ ಜನತೆಯ ಹಿತಕ್ಕಾಗಿ ಬದ್ಧತೆಯಿಂದ ಅಚಲವಾಗಿ ನಿಂತಿದೆ. ಏನೇನು ಮಾಡಬೇಕೋ ಅದನ್ನು ಮಾಡುತ್ತಿದೆ. ಅಮೆರಿಕ ತನ್ನಿಷ್ಟದಂತೆ ಹೇರಲು ಬಂದ ವ್ಯಾಪಾರ ಒಪ್ಪಂದವನ್ನು ಭಾರತ ಸ್ಪಷ್ಟವಾಗಿ ತಿರಸ್ಕರಿಸಿತು.
ಇದನ್ನೂ ಓದಿ; Keshava Prasad B Column: ನರೇಂದ್ರ ಮೋದಿ: ಆತ್ಮನಿರ್ಭರ ಭಾರತದ ಬುನಾದಿ
ಟ್ರಂಪ್ ಸರ್ಕಾರದ ತೀವ್ರ ಒತ್ತಡದ ನಡುವೆಯೂ ರಷ್ಯಾದಿಂದ ಅಗ್ಗದ ತೈಲ ಖರೀದಿಸುವುದನ್ನು ಖಡಾಖಂಡಿತವಾಗಿ ಮುಂದುವರಿಸಿತು. ಅಮೆರಿಕದ ಸುಂಕದ ಬೆದರಿಕೆಗಳು ಭಾರತದ ಆರ್ಥಿಕತೆಯ ಮುಂದೆ ನಡೆಯಲಿಲ್ಲ. ನಿಮಗೆ ನೆನಪಿರಬಹುದು. 2025ರ ಜುಲೈ-ಆಗಸ್ಟ್ನಲ್ಲಿ ಟ್ರಂಪ್ ‘ಟ್ರುತ್ ಸೋಶಿಯಲ್’ ಜಾಲತಾಣದಲ್ಲಿ ಮತ್ತು ಮಾಧ್ಯಮ ಸಂದರ್ಶನಗಳಲ್ಲಿ ಭಾರತದ ಆರ್ಥಿಕತೆಯನ್ನು ಸತ್ತ ಆರ್ಥಿಕತೆ (ಡೆಡ್ ಇಕಾನಮಿ) ಎಂದು ವ್ಯಂಗ್ಯವಾಡಿದ್ದರು.
ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿಸುವುದನ್ನು ಮುಂದು ವರಿಸಿದ್ದು ಅಮೆರಿಕದ ಅಸಮಾಧಾನಕ್ಕೆ ಕಾರಣವಾಗಿತ್ತು. ಟ್ರಂಪ್ ತಮ್ಮ ಪೋಸ್ಟ್ನಲ್ಲಿ, ರಷ್ಯಾ ದಿಂದ ಭಾರತ ತೈಲ ಖರೀದಿಸುವುದರ ಬಗ್ಗೆ ನನಗೆ ಚಿಂತೆಯಿಲ್ಲ, ಆ ಎರಡೂ ಮೃತ ಆರ್ಥಿಕತೆಗಳು ಒಟ್ಟಿಗೆ ಕೆಳಕ್ಕೆ ಕುಸಿಯಲಿ ಎಂದು ಕಿಡಿಕಾರಿದ್ದರು. ಭಾರತವು ಅಮೆರಿಕದ ಸರಕುಗಳ ಮೇಲೆ ಅತ್ಯಂತ ಹೆಚ್ಚಿನ ಆಮದು ಸುಂಕಗಳನ್ನು ವಿಧಿಸುತ್ತಿದೆ ಮತ್ತು ವ್ಯಾಪಾರ ಒಪ್ಪಂದಗಳಿಗೆ ಅಮೆರಿಕದ ಷರತ್ತುಗಳಂತೆ ಒಪ್ಪುತ್ತಿಲ್ಲ ಎಂದು ಅವರು ಆರೋಪಿಸಿದ್ದರು. ಭಾರಿ ಟಾರಿ-ಗಳನ್ನು ಘೋಷಿಸಿದ್ದರು.
ಇದು ಭಾರತದ ರಫ್ತು ವಲಯಕ್ಕೆ ಮತ್ತು ಆರ್ಥಿಕತೆಗೆ ದೊಡ್ಡ ಹೊಡೆತ ನೀಡುವ ತಂತ್ರವಾಗಿತ್ತು. ಆದರೆ ಭಾರತವು ಶೇಕಡಾ 7ಕ್ಕಿಂತ ಹೆಚ್ಚಿನ ಜಿಡಿಪಿ ಪ್ರಗತಿಯೊಂದಿಗೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುನ್ನುಗ್ಗುತ್ತಿದ್ದು, ಟ್ರಂಪ್ ಅವರ ಹೇಳಿಕೆ ವಾಸ್ತವಕ್ಕೆ ದೂರವಾದ ರಾಜಕೀಯ ಹೇಳಿಕೆಯಷ್ಟೇ ಆಗಿತ್ತು.
ನಂತರದ ದಿನಗಳಲ್ಲಿ ಭಾರತದ ಆರ್ಥಿಕ ಸ್ಥಿರತೆಯನ್ನು ಕಂಡು, ಸ್ವತಃ ಟ್ರಂಪ್ ಅವರೇ ಭಾರತವು ಶೇಕಡಾ 7 ದರದಲ್ಲಿ ಅತ್ಯುತ್ತಮವಾಗಿ ಬೆಳೆಯುತ್ತಿದೆ ಎಂದು ಒಪ್ಪಿಕೊಳ್ಳಬೇಕಾಯಿತು. ವಿಪರ್ಯಾಸ ನೋಡಿ, ಇಷ್ಟು ದಿನ ರಷ್ಯಾದಿಂದ ತೈಲ ಖರೀದಿಸುತ್ತಿದ್ದ ಭಾರತದ ಮೇಲೆ ನಿರ್ಬಂಧ ಹೇರುವುದಾಗಿ ಮತ್ತು ಹೆಚ್ಚುವರಿ ಸುಂಕಗಳನ್ನು ವಿಧಿಸುವುದಾಗಿ ಬೆದರಿಕೆ ಹಾಕುತ್ತಿದ್ದ ಅಮೆರಿಕ, ಇತ್ತೀಚೆಗೆ ರಷ್ಯಾದಿಂದಲೇ ನೇರವಾಗಿ ಡೀಸೆಲ್ ಆಮದು ಮಾಡಿಕೊಳ್ಳಲು ಸಮ್ಮತಿಸಿ, ತನ್ನದೇ ನಿರ್ಬಂಧಗಳನ್ನು ಸಡಿಲಗೊಳಿಸಿದೆ.
ಅಮೆರಿಕದ ಮಾರುಕಟ್ಟೆಯಲ್ಲಿ ಡೀಸೆಲ್ ಬೆಲೆ ಏರಿಕೆಯಾಗಿ ಸಾರ್ವಕಾಲಿಕ ದಾಖಲೆ ಬರೆದಿತ್ತು. ಇದು ಸರಕು ಸಾಗಣೆ, ಕೃಷಿ ಮತ್ತು ಉತ್ಪಾದನಾ ವಲಯದ ಮೇಲೆ ತೀವ್ರ ಹೊಡೆತ ನೀಡಿ, ಅಮೆರಿಕ ದಲ್ಲಿ ಹಣದುಬ್ಬರ ಹೆಚ್ಚಾಗಲು ಕಾರಣವಾಯಿತು. ಜಾಗತಿಕವಾಗಿ ತೈಲ ಶುದ್ಧೀಕರಣ ಕೇಂದ್ರಗಳ ಕೊರತೆ ಎದುರಾದ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಅಗತ್ಯವಿರುವಷ್ಟು ಡೀಸೆಲ್ ಉತ್ಪಾದಿಸಲು ಸಾಧ್ಯ ವಾಗಲಿಲ್ಲ.
ನವೆಂಬರ್ನಲ್ಲಿ ಮಧ್ಯಂತರ ಚುನಾವಣೆ ಸಮೀಪಿಸುತ್ತಿರುವಂತೆ ರಾಜಕೀಯವಾಗಿ ಸಾರ್ವಜನಿಕರ ಆಕ್ರೋಶವನ್ನು ಶಮನಗೊಳಿಸಲು ಮತ್ತು ಇಂಧನ ದರಗಳನ್ನು ತಕ್ಷಣವೇ ಇಳಿಸಲು ಟ್ರಂಪ್ ಆಡಳಿತಕ್ಕೆ ಬೇರೆ ದಾರಿಯೇ ಉಳಿದಿರಲಿಲ್ಲ. ಕೇವಲ ನೇರ ಆಮದು ಮಾತ್ರವಲ್ಲದೆ, ಭಾರತ ಮತ್ತು ಟರ್ಕಿಯಂತಹ ದೇಶಗಳು ರಷ್ಯಾದ ಕಚ್ಚಾ ತೈಲವನ್ನು ಸಂಸ್ಕರಿಸಿ ಉತ್ಪಾದಿಸಿದ ಡೀಸೆಲ್ ಅನ್ನು ಸಹ ಅಮೆರಿಕ ಮತ್ತು ಯುರೋಪ್ ದೇಶಗಳು ಮೊದಲಿನಿಂದಲೂ ಪರೋಕ್ಷವಾಗಿ ಖರೀದಿಸುತ್ತಲೇ ಬಂದಿದ್ದವು. ಈಗ ನೇರವಾಗಿಯೇ ರಷ್ಯಾದಿಂದ ಡೀಸೆಲ್ ತರಿಸಿಕೊಳ್ಳಲು ಮುಂದಾಗಿದೆ.
ಇರಲಿ, ಜಗತ್ತಿನ ಇತರೆಡೆ ಪ್ರಯೋಗಿಸಿದ ಅದೇ ‘ಅಶಾಂತಿಯ ಸೂತ್ರ’ವನ್ನು ಭಾರತದಲ್ಲೂ ಪರೀಕ್ಷಿ ಸಲು ಯತ್ನಿಸಲಾಗಿದೆಯೇ? ನೀಟ್ ಗೊಂದಲದ ನೆಪ ಮತ್ತು ‘ಫಿಕ್ಸ್ ದಿ ಸ್ಕೂಲ್ಸ್’ ತಂತ್ರಗಳನ್ನು ಭಾರತದ ಜನತೆ ಹಾಗೂ ಸರ್ಕಾರ ವಿವೇಚನೆಯಿಂದ ಮೆಟ್ಟಿ ನಿಂತವು. ಈಗ, ‘ಬಲವಂತದ ಮತ ಕಳವು’ (ವೋಟ್ ಚೋರಿ) ಎಂಬ ಹೊಸ ಕಿಡಿಯೊಂದನ್ನು ಹಚ್ಚಿ ದೇಶದಲ್ಲಿ ಗಲಭೆ ಎಬ್ಬಿಸಲು ಯತ್ನಿಸಲಾಗುತ್ತಿದೆ.
ಐಎನ್ಡಿಐಎ ಒಕ್ಕೂಟದ ಬೆಂಬಲಿತ ನೇಹಾ ಬೋರಾ ಆಡಿದ ಮಾತುಗಳು ಪ್ರಜಾಪ್ರಭುತ್ವದ ಆಶಯ ಗಳನ್ನೇ ಬೆಚ್ಚಿಬೀಳಿಸುವಂತಿವೆ. ಬಾಂಗ್ಲಾದೇಶದಲ್ಲಿ ನಡೆದ ‘ಇಸ್ಲಾಮಿಕ್ ಆಡಳಿತ ಬದಲಾವಣೆ’ಯ ದಂಗೆಯೇ ನಮಗೆ ಸ್ಪೂರ್ತಿ ಎಂದು ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. 140 ಕೋಟಿ ಜನರ ಸಂವಿಧಾನಾತ್ಮಕ ತೀರ್ಪನ್ನು ಬದಿಗೊತ್ತಿ, ಬೀದಿ ಗಲಭೆಗಳ ಮೂಲಕ ಅಧಿಕಾರ ಕಸಿಯುವ ಈ ‘ಆಮದು ಮಾಡಿಕೊಂಡ ಅಶಾಂತಿ’ ಯಾರ ಹಿತಾಸಕ್ತಿಗಾಗಿ ಎಂಬುದು ಚಿಂತಿಸಬೇಕಾದ ವಿಷಯ.
ಸ್ವೀಡನ್ ಮೂಲದ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ಅವರು ಕಾಕ್ರೋಚ್ ಪಾರ್ಟಿಯ ಪ್ರತಿಭಟನೆಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಂತೂ, ‘ಹೌದು ಈ ಸರ್ಕಾರದ ಬದಲಾವಣೆಗೋಸ್ಕರ ನಡೆಯುತ್ತಿರುವ ಹೋರಾಟವಿದು. ಅದರಲ್ಲಿ ತಪ್ಪೇನು?’ ಎಂದು ಹೇಳಿದ್ದಾರೆ.
ಅರೆ! ತಪ್ಪೇನೂ ಇಲ್ಲ, ಆದರೆ ಅದಕ್ಕೆ ಚುನಾವಣೆಯನ್ನು ಎದುರಿಸುವುದನ್ನು ಬಿಟ್ಟು ಪ್ರತಿಭಟನೆ ಯ ನೆಪದಲ್ಲಿ ಅರಾಜಕತೆ ಸೃಷ್ಟಿಸುವುದು ಸರಿಯೇ? ಇನ್ನೊಂದೆಡೆ, ಅಮೆರಿಕದ ಖ್ಯಾತ ಗಾಯಕಿ ಮೇರಿ ಮಿಲ್ಬೆನ್ ಭಾರತದ ಯುವಜನತೆಗೆ ನೀಡಿದ ಎಚ್ಚರಿಕೆ ಕಣ್ಣು ತೆರೆಸುವಂತಿದೆ. ಅಮೆರಿಕದ ಕೆಲವು ದೇಣಿಗೆದಾರರು ಭಾರತದ ಯುವಕರನ್ನು ಪ್ರಚೋದಿಸಿ, ದೇಶದಲ್ಲಿ ಅಶಾಂತಿ ಸೃಷ್ಟಿಸಲು ಹಣ ಸುರಿಯುತ್ತಿದ್ದಾರೆ. ನರೇಂದ್ರ ಮೋದಿಯವರನ್ನು ಕೆಳಗಿಳಿಸುವುದೇ ಅವರ ಗುರಿ. ಆದರೆ ಯುವಕರೇ, ನೆನಪಿಡಿ; ನಿಮ್ಮ ಕೆಲಸ ಮುಗಿದ ತಕ್ಷಣ ಈ ವಿದೇಶಿ ದೇಣಿಗೆದಾರರು ನಿಮ್ಮನ್ನು ಕಸದಂತೆ ಬಿಸಾಡುತ್ತಾರೆ.
ಭಾರತದ ಪ್ರಗತಿ ಇರುವುದು ಪ್ರಜಾಪ್ರಭುತ್ವದ ಸಶಕ್ತತೆಯಲ್ಲಿ ಹೊರತು ಬೀದಿ ರಂಪಾಟದಲ್ಲಲ್ಲ ಎಂದು ಅವರು ನೇರವಾಗಿ ಕಿವಿಮಾತು ಹೇಳಿದ್ದಾರೆ. ‘ಇದು ಮೌನವಾಗಿರಬೇಕಾದ ಸಮಯವಲ್ಲ. ಅಭಿಜಿತ್ ದೀಪ್ಕೆ ಮತ್ತು ಅವರ ಕಾಕ್ರೋಚ್ ಪಾರ್ಟಿಗೆ ಅಮೆರಿಕದಲ್ಲಿರುವ ವ್ಯಕ್ತಿಗಳು ಹಣ ನೀಡುತ್ತಾರೆ. ಅವರೆಲ್ಲ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿರೋಧಿಗಳು’ ಎಂದು ಮೇರಿ ಮಿಲ್ಬೆನ್ ಹೇಳಿದ್ದಾರೆ.
ಅಮೆರಿಕದಲ್ಲಿ ಈ ಮೋದಿ ವಿರೋಧಿಗಳು ಕನ್ಸರ್ವೇಟಿವ್ ಗ್ಲೋಬಲ್ ಲೀಡರ್ಗಳ ವಿರುದ್ಧ ಆಯಾ ದೇಶದಿಂದ ಇಲ್ಲಿಗೆ ಬರುವವರಲ್ಲಿ ಆಯ್ಕೆ ಮಾಡಿಕೊಂಡು, ಅವರ ತಲೆ ಕೆಡಿಸಿ ವಾಪಸ್ ಕಳಿಸುತ್ತಾರೆ. ಅಂಥವರು ತಾಯ್ನಾಡಿಗೆ ಬಂದು ಗೊಂದಲ, ದೊಂಬಿ, ಗಲಭೆ ಸೃಷ್ಟಿಸುತ್ತಾರೆ. ಇದರಲ್ಲಿ ಯಾರೊಬ್ಬರೂ ಯಶಸ್ವಿಯಾಗಿರುವುದಿಲ್ಲ. ಆದರೆ ಇವರ ಉಪಟಳದಿಂದ ಅಭಿವೃದ್ಧಿ ಮತ್ತು ಆಡಳಿತದ ಮೇಲೆ ಪರಿಣಾಮ ಬೀರುತ್ತದೆ.
ಭಾರತದಲ್ಲಿ ಹೊಸ ಧ್ವನಿಯೊಂದು ಏಳಲು ಸಮಯ. ಭಾರತದ ಮಣ್ಣಿನ ಹುಟ್ಟಿ, ಬೆಳೆದು ಶಿಕ್ಷಣ ಪಡೆದವರು ಎದ್ದು ನಿಂತು ಸಂಘಟಿತರಾಗಿ ಕಾಕ್ರೋಚ್ ಪಾರ್ಟಿಯ ವಿಧ್ವಂಸಕ ಮನೋಭಾವ ವನ್ನು ಶಾಂತಿಯುತವಾಗಿ ವಿರೋಧಿಸಬೇಕು. ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿ ಯಲು ಯಾವಾಗಲೂ ಒಂದು ಪ್ರತಿ ಚಳುವಳಿ ಇರಬೇಕು ಎಂದು ಅವರು ಹೇಳಿದ್ದಾರೆ. ಸದ್ಯದ ಸನ್ನಿವೇಶ ನೋಡಿದರೆ, ಮೇರಿ ಮಿಲ್ಬೆನ್ ಅವರ ಸಲಹೆಗಳು ಎಷ್ಟು ಮಹತ್ವಪೂರ್ಣ ಎಂಬುದು ಅರ್ಥವಾಗುತ್ತದೆ.
ಇಂದು ಜಗತ್ತಿನ ಪ್ರತಿಯೊಂದು ಶಕ್ತಿಯ ಕಣ್ಣೂ ಭಾರತದ ಮೇಲಿದೆ. ಅಮೆರಿಕ ತನ್ನ ವ್ಯಾಪಾರ ಷರತ್ತುಗಳಿಗೆ ಬಗ್ಗಲಿಲ್ಲ ಎಂದು ಕೋಪಗೊಂಡಿದ್ದರೆ, ಚೀನಾ ತನ್ನ ತಯಾರಿಕಾ ಸಾಮ್ರಾಜ್ಯ ಭಾರತದ ಪಾಲಾಗುತ್ತಿದೆ ಎಂದು ಆತಂಕದಲ್ಲಿದೆ. ಪಾಕಿಸ್ತಾನವು ಯಾವುದೇ ಕ್ಷಣದಲ್ಲಿ ಪಿಒಕೆ ಕೈತಪ್ಪಿಹೋಗಬಹುದು ಎಂಬ ಭಯದಲ್ಲಿದೆ.
ಬೆಳೆಯುತ್ತಿರುವ ರಾಷ್ಟ್ರದ ಮೇಲೆ ಎಷ್ಟೊಂದು ದೇಶಗಳ, ಎಲಾನ್ ಮಸ್ಕ್ ರಂತಹ ಕಾರ್ಪೊರೇಟ್ ಕುಳಗಳ ವಕ್ರ ದೃಷ್ಟಿ ನೋಡಿ. ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಸಂಸದೆ ಪ್ರಮೀಳಾ ಜಯಪಾಲ್ ಭಾರತೀಯ ಮೂಲದವರಾಗಿದ್ದರೂ, ಎಂಥಾ ಮೂರ್ಖತನದ ಹೇಳಿಕೆ ನೀಡುತ್ತಿದ್ದಾರೆ ನೋಡಿ- ‘ಎಡೆ ಪ್ರಜಾಪ್ರಭುತ್ವ ವನ್ನು ರಕ್ಷಿಸುವುದು ಅತ್ಯಗತ್ಯ ಕೆಲಸವಾಗಿದೆ, ಮತ್ತು ಅಮೆರಿಕಾದ ಜನರಂತೆ ಭಾರತದ ಜನರೂ ಸಹ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳಿಗೆ ಅರ್ಹರಾಗಿದ್ದಾರೆ.
ಇಂತಹ ಸಂದರ್ಭಗಳಲ್ಲಿ ಅಹಿಂಸಾತ್ಮಕ ಚಳವಳಿಗಳು ಅನಿವಾರ್ಯವಾಗಿವೆ, ಮತ್ತು ಭಾರತದಲ್ಲಿ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳನ್ನು ವಿರೋಧಿಸಲು ಅಹಿಂಸಾತ್ಮಕ ಪ್ರತಿಭಟನೆಗಳಲ್ಲಿ ತೊಡಗಿರುವ ಭಾರತೀಯ ಜನರೊಂದಿಗೆ ನಾನು ನಿಲ್ಲುತ್ತೇನೆ. 13 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಭಾರತ ಸರ್ಕಾರವು ಕೈಗೊಂಡಿರುವ ಕ್ರಮಗಳ ಬಗ್ಗೆ ನನಗೆ ತೀವ್ರ ಕಳವಳವಿದೆ. ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕುಗಳನ್ನು ದುರ್ಬಲಗೊಳಿಸಲು ಇಲ್ಲಿ ನಮ್ಮ ದೇಶದಲ್ಲಿ ಟ್ರಂಪ್ ಆಡಳಿತವು ಮಾಡುತ್ತಿರುವ ತಂತ್ರದಂತೆಯೇ ಇದು ಕಾಣಿಸುತ್ತಿದೆ’ ಎನ್ನುತ್ತಾರೆ!
ಎಂಥಾ ಅವಿವೇಕಿ ಸಂಸದೆ ಈಕೆ. ಒಂದೆಡೆ ಜಾಗತಿಕ ಸಂಚುಗಳು ನಡೆಯುತ್ತಿದ್ದರೂ, ಆರ್ಥಿಕತೆಯ ವಿಚಾರದಲ್ಲಿ ಭಾರತ ಇಡೀ ಜಗತ್ತನ್ನೇ ಬೆರಗುಗೊಳಿಸುತ್ತಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಭಾರತದ ಆರ್ಥಿಕತೆಯು 2026 ಮತ್ತು 2027 ಎರಡೂ ವರ್ಷಗಳಲ್ಲಿ ಶೇಕಡಾ 7ರಷ್ಟು ಬೆಳೆಯುವ ನಿರೀಕ್ಷೆಯಿದೆ.
ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದೆ. ಐಎಂಎಫ್ ಪ್ರಕಾರ, ಭಾರತವು ತನ್ನ ವ್ಯಾಪಾರ ನಿಯಮ ಗಳನ್ನು ಸರಳಗೊಳಿಸಿ, ಕೃತಕ ಬುದ್ಧಿಮತ್ತೆ ಮತ್ತು ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡರೆ, ತನ್ನ ಉತ್ಪಾದಕತೆಯನ್ನು ಶೇಕಡಾ 40ರಷ್ಟು ಹೆಚ್ಚಿಸಿಕೊಳ್ಳಬಹುದು. ಅಂದರೆ, ಪ್ರತಿ ದಶಕಕ್ಕೆ ಕರ್ನಾಟಕ ರಾಜ್ಯದ ಇಡೀ ಆರ್ಥಿಕ ಉತ್ಪಾದನೆಗೆ ಸಮನಾದ ಕೊಡುಗೆಯನ್ನು ಭಾರತದ ಜಿಡಿಪಿಗೆ ಹೆಚ್ಚುವರಿಯಾಗಿ ಸೇರಿಸಬಹುದು!
ಗಡಿಗಳಲ್ಲಿ ಶತ್ರುಗಳು, ಆಂತರಿಕವಾಗಿ ಗಲಭೆ ಎಬ್ಬಿಸುವ ಯತ್ನಗಳು, ಜಾಗತಿಕ ಮಟ್ಟದಲ್ಲಿ ತೈಲ-ಆರ್ಥಿಕತೆಯ ಬೆದರಿಕೆಗಳು... ಎಷ್ಟೇ ಚಕ್ರವ್ಯೂಹಗಳನ್ನು ಹೆಣೆದರೂ, 140 ಕೋಟಿ ಜನರ ಆಶೋ ತ್ತರ ಹೊತ್ತ ‘ಭಾರತ’ ಎಂಬ ನೌಕೆ ಮುನ್ನುಗ್ಗುತ್ತಲೇ ಇದೆ. ಹೀಗಿದ್ದರೂ, ಮಿಲ್ಬೆನ್ ಹೇಳಿರುವಂತೆ ಅಭಿವೃದ್ಧಿ ಮತ್ತು ಆಡಳಿತದ ಮೇಲೆ ದೇಶ ವಿರೋಧಿಗಳು ಕೆಟ್ಟ ಪ್ರಭಾವ ಬೀರದಂತೆ ಎಚ್ಚರ ವಹಿಸಬೇಕಾಗಿದೆ.