Keshava Prasad B Column: ಇತರರನ್ನು ಶ್ರೀಮಂತರನ್ನಾಗಿಸಿದ ಭಾರತೀಯ ಉದ್ಯಮಿಗಳು !
ಟಾಟಾ ಸಮೂಹವನ್ನೇ ತೆಗೆದುಕೊಳ್ಳಿ. ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯ 28 ಲಕ್ಷ ಕೋಟಿ ರುಪಾಯಿ. ಇದರಲ್ಲಿ ೧೪ ಲಕ್ಷ ಕೋಟಿ ಸಂಪತ್ತು ಹೂಡಿಕೆದಾರರ ಪಾಲಾಗಿದೆ. ಅದೇ ರೀತಿ ರಿಲಾ ಯನ್ಸ್ ಇಂಡಸ್ಟ್ರೀಸ್‌ನ ಮಾರುಕಟ್ಟೆ ಮೌಲ್ಯ ೨೩ ಲಕ್ಷ ಕೋಟಿ. ಇದರಲ್ಲಿ ೧೨ ಲಕ್ಷ ಕೋಟಿ ರುಪಾಯಿಗಳು ಹೂಡಿಕೆದಾರರಿಗೆ ಸೇರಿವೆ.
-
ಮನಿ ಮೈಂಡೆಡ್
ನಮ್ಮಲ್ಲಿನ ಎಡಪಕ್ಷಗಳು (ಸಿಪಿಐ ಮತ್ತು ಸಿಪಿಎಂ) ನಿರಂತರವಾಗಿ ದೊಡ್ಡ ಬಿಸಿನೆಸ್‌ಗಳನ್ನು, ಉದ್ದಿಮೆದಾರರನ್ನು ಟೀಕಿಸುತ್ತಿದ್ದವು. ತಮ್ಮ ವೈಯಕ್ತಿಕ ಸ್ವಾರ್ಥಲಾಲಸೆಗಾಗಿ, ಅಧಿಕಾರದ ಗದ್ದುಗೆ ಏರುವ ಸಲುವಾಗಿ, ಬೃಹತ್ ಕೈಗಾರಿಕಾ ಸಮೂಹಗಳನ್ನು ಖಳನಾಯಕರಂತೆ ಚಿತ್ರಿಸುತ್ತಿದ್ದವು. ತಮ್ಮನ್ನು ಬಡವರ, ದೀನರ, ಕಾರ್ಮಿಕರ ಪಕ್ಷವೆಂದು ಸೋಗು ಹಾಕಿ ಕೊಳ್ಳುತ್ತಿದ್ದವು. ವರ್ಗ ಸಂಘರ್ಷವೇ ಈ ಎಡಪಕ್ಷಗಳ ಬಂಡವಾಳವಾಗಿತ್ತು. ಆದರೆ ಇದರಿಂದಾಗಿ ದೇಶದ ಆರ್ಥಿಕ ಅಭಿವೃದ್ಧಿಗೆ ಉಂಟಾಗಿದ್ದ ಹಾನಿ ಮಾತ್ರ ಅಷ್ಟಿಷ್ಟಲ್ಲ.
ಇನ್ಫೋಸಿಸ್ ಕಂಪನಿಯ ಸ್ಥಾಪಕ ನಾರಾಯಣ ಮೂರ್ತಿಯವರು ತಮ್ಮ ಮೊಮ್ಮಗನಿಗೆ 240 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ನೀಡಿದಾಗ, ಕೆಲವರು ಟೀಕಿಸಿದ್ದರು. ದುರದೃಷ್ಟವ ಶಾತ್ ನಮ್ಮಲ್ಲಿ ಉದ್ಯಮಿಗಳ ಬಗೆಗಿನ ಕುಹಕಗಳು ‘ಟೇಕನ್ ಫಾರ್ ಗ್ರಾಂಟೆಡ್’ ಎನ್ನುವಷ್ಟು ಸಲೀಸು. ಆದರೆ ಎಂದಾದರೂ, ಇನ್ಫೋಸಿಸ್ ಎಷ್ಟು ಮಂದಿ ಉದ್ಯೋಗಿಗಳನ್ನು ಕೋಟ್ಯಧಿಪತಿ ಗಳನ್ನಾಗಿಸಿದೆ? ಎಷ್ಟು ಮಂದಿ ಷೇರುದಾರರನ್ನು ಕೋಟ್ಯಧಿಪತಿ, ಲಕ್ಷಾಧಿಪತಿಗಳನ್ನಾಗಿಸಿದೆ ಎಂದು ಯೋಚಿಸಬೇಡವೇ?!
ನೋಡಿ, ಮಾರುಕಟ್ಟೆ ಬಂಡವಾಳ ಮೌಲ್ಯದ ದೃಷ್ಟಿಯಿಂದ, ಅಂದರೆ ಷೇರುಪೇಟೆಯಲ್ಲಿ ಕಂಪನಿ ಯ ಷೇರುಗಳ ಒಟ್ಟು ಮೌಲ್ಯದ ಲೆಕ್ಕಾಚಾರದಿಂದ ನೋಡಿದರೆ, ಇನ್ಫೋಸಿಸ್ ದೇಶದ ಏಳನೇ ಅತಿ ದೊಡ್ಡ ಕಂಪನಿಯಾಗಿದೆ. ಹೀಗಿದ್ದರೂ, ಅದರ ಸ್ಥಾಪಕರಾದ ನಾರಾಯಣಮೂರ್ತಿ ಯವರಾಗಲಿ, ನಂದನ್ ನಿಲೇಕಣಿಯವರಾಗಲಿ ವೈಯಕ್ತಿಕವಾಗಿ ಅಪಾರ ಸಂಪತ್ತು ಹೊಂದಿರುವ ದೇಶದ ಮೊದಲ 100 ಶ್ರೀಮಂತರ ಪಟ್ಟಿಯಲ್ಲಿ ಕೆಳಗಿದ್ದಾರೆ!
ಇದರ ಅರ್ಥ? ಇನ್ಫೋಸಿಸ್ ಸಂಪತ್ತಿನಲ್ಲಿ ಬಹುಪಾಲೂ ಬೇರೆಯವರಿಗೆ ಸೇರಿದೆ. ದೇಶೀಯ ಸಾಂಸ್ಥಿಕ ಹೂಡಿಕೆದಾರ ಸಂಸ್ಥೆಗಳು, ಜಾಗತಿಕ ಹೂಡಿಕೆದಾರರು, ಮ್ಯೂಚುವಲ್ ಫಂಡ್‌ಗಳು ಮತ್ತು ಲಕ್ಷಾಂತರ ಜನಸಾಮಾನ್ಯರಿಗೆ ಷೇರುಗಳ ಮೂಲಕ ಸಂಪತ್ತು ಹಂಚಿಕೆಯಾಗಿದೆ.
ಇದನ್ನೂ ಓದಿ: Keshava Prasad B Column: ವಾರಕ್ಕೆ 48 ಗಂಟೆ ಕೆಲಸ ಸಾಕೆಂದ ಹೊಸ ಕಾರ್ಮಿಕ ನೀತಿ !
ಸರಳವಾಗಿ ಒಂದು ಲೆಕ್ಕಾಚಾರ. ಇನ್ಫೋಸಿಸ್‌ನ ಬಂಡವಾಳ ಮಾರುಕಟ್ಟೆ ಮೌಲ್ಯವು ೬.೪ ಲಕ್ಷ ಕೋಟಿ ರುಪಾಯಿ. ಅದರಲ್ಲಿ ಸ್ಥಾಪಕ ನಾರಾಯಣಮೂರ್ತಿ, ನಂದನ್ ನಿಲೇಕಣಿ, ಕ್ರಿಸ್ ಗೋಪಾಲ ಕೃಷ್ಣನ್, ಅಶೋಕ್ ಅರೋರಾ, ಎಸ್.ಡಿ. ಶಿಬುಲಾಲ, ಎನ್.ಎಸ್.ರಾಘವನ್ ಮತ್ತು ಕೆ.ದಿನೇಶ್ ಅವರ ಪಾಲು 13 ಪರ್ಸೆಂಟ್ ಮಾತ್ರ. ಇದರ ಮೌಲ್ಯ ಸುಮಾರು 83700 ಕೋಟಿ ರುಪಾಯಿಗಳು. ಆದ್ದರಿಂದ ಇನ್ಫೋಸಿಸ್‌ನ ೬ ಲಕ್ಷದ 40 ಸಾವಿರ ಕೋಟಿ ರುಪಾಯಿಗಳಲ್ಲಿ ಏಳು ಮಂದಿ ಸ್ಥಾಪಕರು, 83700 ಕೋಟಿ ರುಪಾಯಿಗಳನ್ನು ಮಾತ್ರ ಹೊಂದಿದ್ದಾರೆ. ಮಿಕ್ಕಿದ ಎಲ್ಲ ಸಂಪತ್ತೂ ಇತರರನ್ನು ಸಿರಿವಂತರನ್ನಾಗಿಸಿದೆ. ಆದರೆ ಎಲ್ಲೂ ಅವರು ಇದನ್ನೆಲ್ಲ ಹೇಳಿಕೊಂಡಿಲ್ಲ!
ಟಾಟಾ ಸಮೂಹವನ್ನೇ ತೆಗೆದುಕೊಳ್ಳಿ. ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯ 28 ಲಕ್ಷ ಕೋಟಿ ರುಪಾಯಿ. ಇದರಲ್ಲಿ ೧೪ ಲಕ್ಷ ಕೋಟಿ ಸಂಪತ್ತು ಹೂಡಿಕೆದಾರರ ಪಾಲಾಗಿದೆ. ಅದೇ ರೀತಿ ರಿಲಾ ಯನ್ಸ್ ಇಂಡಸ್ಟ್ರೀಸ್‌ನ ಮಾರುಕಟ್ಟೆ ಮೌಲ್ಯ ೨೩ ಲಕ್ಷ ಕೋಟಿ. ಇದರಲ್ಲಿ ೧೨ ಲಕ್ಷ ಕೋಟಿ ರುಪಾಯಿ ಗಳು ಹೂಡಿಕೆದಾರರಿಗೆ ಸೇರಿವೆ. ಸುನಿಲ್ ಮಿತ್ತಲ್ ಅವರ ಭಾರ್ತಿ ಎಂಟರ್‌ಪ್ರೈಸಸ್‌ನ ಬಂಡವಾಳ ಮೌಲ್ಯ ೧೪ ಲಕ್ಷ ಕೋಟಿ ರುಪಾಯಿಗಳಾಗಿದ್ದರೆ, ಹೂಡಿಕೆದಾರರಿಗೆ ೬.೮ ಲಕ್ಷ ಕೋಟಿ ಸೇರಿದೆ.
ಬಜಾಜ್ ಗ್ರೂಪ್‌ನ ಮೌಲ್ಯ 14.8 ಲಕ್ಷ ಕೋಟಿ ರುಪಾಯಿಗಳಾಗಿದ್ದರೆ, ಷೇರುದಾರರ ಹಣ ೬ ಲಕ್ಷ ಕೋಟಿ. ಮಹೀಂದ್ರಾ ಗ್ರೂಪ್‌ನ ಮೌಲ್ಯ ೭ ಲಕ್ಷ ಕೋಟಿ ರುಪಾಯಿಗಳಾಗಿದ್ದರೆ, ಷೇರುದಾರರ ಸಂಪತ್ತು ೫ ಲಕ್ಷ ಕೋಟಿಗಳಾಗಿವೆ. ಅದಾನಿ ಗ್ರೂಪ್‌ನ ಮಾರುಕಟ್ಟೆ ಮೌಲ್ಯ 14.8 ಲಕ್ಷ ಕೋಟಿ ಗಳಾಗಿದ್ದರೆ, ಷೇರುದಾರರ ಸಂಪತ್ತು ೪.೫ ಲಕ್ಷ ಕೋಟಿಯಾಗಿದೆ.
ಆದಿತ್ಯ ಬಿರ್ಲಾದ ಮೌಲ್ಯ ೮.೮ ಲಕ್ಷ ಕೋಟಿ ರುಪಾಯಿಗಳಾಗಿದ್ದರೆ, ಷೇರುದಾರರ ಸಂಪತ್ತು ೪.೩ ಲಕ್ಷ ಕೋಟಿಯಾಗಿದೆ. ಜೊಮ್ಯಾಟೊ ಮತ್ತು ಬ್ಲಿಂಕ್‌ಇಟ್‌ನ ಹೋಲ್ಡಿಂಗ್ ಕಂಪನಿಯಾದ ಎಟರ್ನಲ್ ಲಿಮಿಟೆಡ್ ೩ ಲಕ್ಷ ಕೋಟಿ ರುಪಾಯಿ ಮೌಲ್ಯದ ಕಂಪನಿಯಾಗಿದೆ. ಇದರ ಸ್ಥಾಪಕ ದೀಪೇಂದರ್ ಗೋಯಲ್ ಹೊಂದಿರುವ ಪಾಲು ಶೇಕಡಾ ೪ ಕ್ಕಿಂತಲೂ ಕಡಿಮೆ. ಆನ್‌ಲೈನ್ ಬ್ರೋಕರೇಜ್ ಸಂಸ್ಥೆಯಾಗಿರುವ ಗ್ರೊ ಕಂಪನಿಯ ಮಾರುಕಟ್ಟೆ ಮೌಲ್ಯವು ೯೭ ಸಾವಿರ ಕೋಟಿ ರುಪಾಯಿಗಳಾಗಿದ್ದರೆ, ಅದರ ಕಾಲು ಭಾಗಕ್ಕಿಂತಲೂ ಕಡಿಮೆ ಪಾಲು ನಾಲ್ವರು ಸ್ಥಾಪಕರದ್ದಾಗಿದೆ.
ಜಾಗತಿಕ ಟ್ರೆಂಡ್ ಗಮನಿಸಿದರೆ, ಎನ್ವಿಡಿಯಾದ ಮಾರುಕಟ್ಟೆ ಮೌಲ್ಯ 4362 ಶತಕೋಟಿ ಡಾಲರ್ ನಷ್ಟಿದ್ದರೆ, ಸ್ಥಾಪಕ ಜೆನ್ಸನ್ ಹ್ಯುಯಾಂಗ್ ಅವರ ಪಾಲು 164 ಶತಕೋಟಿ ಡಾಲರ್ ಮಾತ್ರ. ಅದೇ ರೀತಿ ಆಪಲ್ ಕಂಪನಿಯ ಮೌಲ್ಯ 4115 ಶತಕೋಟಿ ಡಾಲರ್‌ನಷ್ಟಿದ್ದರೆ, ಸ್ಥಾಪಕ ಸ್ಟೀವ್ ಜಾಬ್ ರ ಪಾಲು ಕೇವಲ ೧ ಪರ್ಸೆಂಟಿಗಿಂತಲೂ ಕಡಿಮೆ.
ಟೆಸ್ಲಾದ ಮೌಲ್ಯ 1427 ಶತಕೋಟಿ ಡಾಲರ್ ಆಗಿದ್ದರೆ, ಸ್ಥಾಪಕ ಎಲಾನ್ ಮಸ್ಕ್ ಅವರ ಪಾಲು 281 ಶತಕೋಟಿ ಡಾಲರ್ ಮಾತ್ರ. ಹಾಗಾದರೆ ಇದೇಕೆ ಹೈಲೈಟ್ ಆಗುವುದಿಲ್ಲ?! ಸಾಮಾನ್ಯವಾಗಿ ಫೋರ್ಬ್ಸ್, ಫಾರ್ಚ್ಯೂನ್, ಹುರುನ್ ಇಂಡಿಯಾ ನಿಯತಕಾಲಿಕೆಗಳು ಮತ್ತು ಸಂಶೋಧನಾ ಸಂಸ್ಥೆಗಳು ಭಾರತದ ಅತಿ ಶ್ರೀಮಂತ ಉದ್ಯಮಿಗಳ ಪಟ್ಟಿಯನ್ನು ಪ್ರತಿ ವರ್ಷ ಪ್ರಕಟಿಸುತ್ತವೆ.
ಅದರಲ್ಲಿ ಮುಕೇಶ್ ಅಂಬಾನಿ, ಗೌತಮ್ ಅದಾನಿ, ಸಾವಿತ್ರಿ ಜಿಂದಾಲ, ಸುನಿಲ್ ಮಿತ್ತಲ್, ರಾಧಾ ಕೃಷ್ಣ ಧಮಾನಿ, ದಿಲೀಪ್ ಸಾಂಘ್ವಿ, ಬಜಾಜ್ ಕುಟುಂಬ, ಸೈರಸ್ ಪೂನಾವಾಲಾ, ಕುಮಾರ ಮಂಗಲಂ ಬಿರ್ಲಾ, ಹಿಂದುಜಾ ಕುಟುಂಬ, ಲಕ್ಷ್ಮೀ ಮಿತ್ತಲ, ಅಜೀಂ ಪ್ರೇಮ್ ಜಿ, ಉದಯ್ ಕೋಟಕ್ ಮೊದಲಾದವರು ಇರುತ್ತಾರೆ.
ಇವರೆಲ್ಲರೂ ಕೋಟ್ಯಂತರ ರುಪಾಯಿ ಅಲ್ಲ, ಕೋಟ್ಯಂತರ ಡಾಲರ್ ಲೆಕ್ಕದಲ್ಲಿ ನಿವ್ವಳ ಸಂಪತ್ತು ಗಳಿಸಿರುವ ಲೆಕ್ಕವನ್ನು ಈ ನಿಯತಕಾಲಿಕೆಗಳು ಪ್ರಕಟಿಸುತ್ತವೆ. ಕೆಲವರು ಸಂಭ್ರಮದಿಂದ ಪಟ್ಟಿ ಯನ್ನು ಓದಿದರೆ, ಮತ್ತೆ ಕೆಲವರು “ಅಯ್ಯೋ, ಈ ಅದೃಷ್ಟ ನಮಗಿಲ್ಲವಲ್ಲ" ಎಂದು ಕೊರಗ ಬಹುದು. ಆದರೆ ಭಾರತದ ಉದ್ಯಮಿಗಳು, ಟಾಟಾ ಗ್ರೂಪ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇತರರು ತಮ್ಮ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಿದವರ ಸಂಪತ್ತನ್ನೂ ಇದೇ ವೇಳೆ ಹೆಚ್ಚಿಸಿದ್ದಾರೆ.
ಅವರ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನು ಕೋಟ್ಯಧಿಪತಿಗಳನ್ನಾಗಿಸಿದ್ದಾರೆ, ಲಕ್ಷಾಧಿಪತಿಗಳನ್ನಾಗಿಸಿದ್ದಾರೆ. ಅವರು ಅದ್ಭುತ ಯಶಸ್ಸು ಗಳಿಸಿದ ಉದ್ಯಮಿಯಾಗಿ ಹೊರ ಹೊಮ್ಮುವ ಪ್ರಕ್ರಿಯೆಯಲ್ಲಿ ಲಕ್ಷಾಂತರ ಮಂದಿ ತಮ್ಮ ಬದುಕನ್ನೂ ಕಟ್ಟಿಕೊಂಡಿದ್ದಾರೆ. ಈ ಪರಿವರ್ತನೆಯನ್ನು ಫೋರ್ಬ್ಸ್, ಫಾರ್ಚ್ಯೂನ್, ಹುರುನ್ ಶ್ರೀಮಂತರ ಪಟ್ಟಿಯಲ್ಲಿ ವಿವರಿಸುವು ದಿಲ್ಲ!
ಕೇವಲ ಮುಕೇಶ್ ಅಂಬಾನಿ, ಅದಾನಿಯವರ ನಿವ್ವಳ ಸಂಪತ್ತು ಎಷ್ಟಿದೆ? ಹಾಗೂ ಅವರು ಯಾವ್ಯಾವ ಉದ್ದಿಮೆ ಸಮೂಹಗಳ ಮಾಲೀಕರಾಗಿದ್ದಾರೆ ಎಂಬುದನ್ನು ಮಾತ್ರ ತೋರಿಸುತ್ತವೆ. ಪರಿಣಾಮವಾಗಿ ಮೇಲ್ನೋಟಕ್ಕೆ ಈ ಶ್ರೀಮಂತ ಉದ್ಯಮಿಗಳ ಕೈಯ ಸಮಸ್ತ ಸಂಪತ್ತೂ ಸಂಗ್ರಹ ವಾಗಿದೆ ಎಂಬ ಮಿಥ್ಯೆ ಸೃಷ್ಟಿಯಾಗುತ್ತದೆ. ಸಾಲದ್ದಕ್ಕೆ ತಥಾಕಥಿಕ ಸಮಾಜವಾದಿ ರಾಜಕಾರಣಿಗಳು, ಈ ದೇಶದಲ್ಲಿ ಉದ್ಯಮಿಗಳನ್ನು ಖಳ ನಾಯಕರಂತೆ ಬಿಂಬಿಸಿದ್ದಾರೆ.
ಒಮ್ಮೆ ಇತಿಹಾಸದ ಪುಟಗಳನ್ನು ತೆರೆದು ನೋಡಿ. ಎಡಪಕ್ಷಗಳು (ಸಿಪಿಐ ಮತ್ತು ಸಿಪಿಎಂ) ನಿರಂತರ ವಾಗಿ ದೊಡ್ಡ ಬಿಸಿನೆಸ್‌ಗಳನ್ನು, ಉದ್ದಿಮೆದಾರರನ್ನು ಟೀಕಿಸು ತ್ತಿದ್ದವು. ತಮ್ಮ ವೈಯಕ್ತಿಕ ಸ್ವಾರ್ಥ ಲಾಲಸೆಗಾಗಿ, ಅಧಿಕಾರದ ಗದ್ದುಗೆ ಏರುವ ಸಲುವಾಗಿ, ಬೃಹತ್ ಕೈಗಾರಿಕಾ ಸಮೂಹಗಳನ್ನು ಖಳನಾಯಕರಂತೆ ಚಿತ್ರಿಸುತ್ತಿದ್ದವು.
ತಮ್ಮನ್ನು ಬಡವರ, ದೀನರ, ಕಾರ್ಮಿಕರ ಪಕ್ಷವೆಂದು ಸೋಗು ಹಾಕಿಕೊಳ್ಳುತ್ತಿದ್ದವು. ವರ್ಗ ಸಂಘರ್ಷವೇ ಈ ಎಡಪಕ್ಷಗಳ ಬಂಡವಾಳವಾಗಿತ್ತು. ಆದರೆ ಇದರಿಂದಾಗಿ ದೇಶದ ಆರ್ಥಿಕ ಅಭಿವೃದ್ಧಿಗೆ ಉಂಟಾಗಿದ್ದ ಹಾನಿ ಮಾತ್ರ ಅಷ್ಟಿಷ್ಟಲ್ಲ. ಮಾಡಿದ ಕರ್ಮ ಕಾಡದೆ ಬಿಡುವುದೇ? ಅದಕ್ಕಾಗಿಯೇ ಇವತ್ತು ದೇಶದ ರಾಜಕಾರಣದ ಭೂಪಟದಲ್ಲಿ ಎಡಪಕ್ಷಗಳು ಹೇಳ ಹೆಸರಿಲ್ಲ ದಂತಾಗಿವೆ.
ಎಡಪಕ್ಷಗಳ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನದ್ದೂ ಇದರಲ್ಲಿ ಪಾಲು ಇದೆ. ಅದು ನಾನಾ ಹಂತಗಳಲ್ಲಿ ನಿರ್ದಿಷ್ಟ ಉದ್ಯಮಿಗಳನ್ನು ಟಾರ್ಗೆಟ್ ಮಾಡಿದೆ. ಆದರೆ ತೊಂಬತ್ತರ ದಶಕದ ವೇಳೆಗೆ ಖಾಸಗೀಕರಣದ ಅವಶ್ಯಕತೆಯ ಅರಿವೂ ಉಂಟಾಗಿತ್ತು. ನಂತರ ಕ್ರಮೇಣ ಕಾಲ ಬದಲಾ ಯಿತು.
ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರು ರತನ್ ಟಾಟಾ ವಿರುದ್ಧ ದಂಗೆ ಎದ್ದು ಪಶ್ಚಿಮ ಬಂಗಾಳದ ಸಿಂಗೂರ್‌ನಲ್ಲಿನ ನ್ಯಾನೊ ಕಾರು ತಯಾರಿಕಾ ಘಟಕ ಸ್ಥಳಾಂತರ ವಾಗುವಂತೆ ಮಾಡಿದರು. ಈ ಕುರಿತ ಭಾರಿ ಪ್ರತಿಭಟನೆಗಳು ಮಮತಾ ಬ್ಯಾನರ್ಜಿಯವರಿಗೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಗಳಿಸಲು ನೆರವಾದವು.
ಆದರೆ 20 ವರ್ಷಗಳ ಬಳಿಕ ಮತ್ತೆ ಟಾಟಾ ಗ್ರೂಪ್ ಅನ್ನು ರಾಜ್ಯಕ್ಕೆ ಬಂಡವಾಳ ಹೂಡಿಕೆ ಮಾಡು ವಂತೆ ಆಹ್ವಾನಿಸಿದ್ದಾರೆ. ಕೇಳಿದರೆ, ನಮಗೆ ಟಾಟಾ ಗ್ರೂಪ್ ವಿರುದ್ಧ ಸಿಟ್ಟಿಲ್ಲ, ಅಂದಿನ ಎಡಪಕ್ಷಗಳು ರೈತರ ಅನುಮತಿ ಇಲ್ಲದೆ ಟಾಟಾ ಗ್ರೂಪಿಗೆ ಭೂಮಿ ಕೊಟ್ಟದ್ದು ತಪ್ಪು ಎನ್ನುತ್ತಾರೆ. ಒಟ್ಟಿನಲ್ಲಿ ಆಗ ತೊಂದರೆಯಾಗಿದ್ದು ರತನ್ ಟಾಟಾ ಅವರಂಥ ಮೇರು ಉದ್ಯಮಿಗೆ ಎನ್ನುವುದನ್ನು ಮರೆಯು ವಂತಿಲ್ಲ.
ಅಮೆಜಾನ್ ಕಂಪನಿಯ ಜೆಫ್ ಬಿಜೋಸ್ ಕಳೆದ ವರ್ಷ ಸಂದರ್ಶನವೊಂದರಲ್ಲಿ ಹೀಗೆ ಸಲಹೆ ಕೊಟ್ಟಿದ್ದರು: ವಿಶ್ವದ ಶ್ರೀಮಂತರ ಪಟ್ಟಿಯನ್ನು ರಚಿಸುವಾಗ, ಅವರು ತಮಗಾಗಿ ಹೊಂದಿರುವ ಸಂಪತ್ತಿನ ಬದಲಿಗೆ, ಇತರರಿಗೆ ಅವರು ಎಷ್ಟು ಸಂಪತ್ತು ಸೃಷ್ಟಿಸಿದ್ದಾರೆ ಎಂಬುದನ್ನು ತಿಳಿಸಬೇಕು.
ನಿಜವಲ್ಲವೇ. ಇದು ಉದ್ಯಮಿಗಳ ಕಡೆಗೆ ಸಮಾಜ ನೋಡುವ ದೃಷ್ಟಿಕೋನವನ್ನೇ ಬದಲಿಸಲಿದೆ. ಅಮೆಜಾನ್‌ನಿಂದ ಜೆಫ್ ಬಿಜೋಸ್ ವೈಯಕ್ತಿಕವಾಗಿ ನೂರಿನ್ನೂರು ಕೋಟಿ ಡಾಲರ್ ಗಳಿಸಿದ್ದಿರ ಬಹುದು. ಆದರೆ ಅವರ ಅಮೆಜಾನ್ ಹೂಡಿಕೆದಾರರ ಸಂಪತ್ತನ್ನು ೨ ಲಕ್ಷ ಕೋಟಿ ಡಾಲರ್‌ಗೂ ಹೆಚ್ಚಿನ ಮಟ್ಟಕ್ಕೆ ಏರಿಸಿದೆ.
ಭಾರತದಲ್ಲಿ ಹಲವಾರು ದಶಕಗಳಿಂದಲೂ ಉದ್ಯಮಿಗಳನ್ನು ಖಳನಾಯಕರಂತೆ ಬಿಂಬಿಸುವ ಕೆಲಸವನ್ನು ರಾಜಕಾರಣಿಗಳು ಮಾಡಿzರೆ. ನೆಹರು ಅವರು ಉಕ್ಕಿನ ಕಾರ್ಖಾನೆಗಳನ್ನು ‘ಅಧುನಿಕ ಭಾರತದ ದೇವಾಲಯಗಳು’ ಎಂದೇ ಕರೆದಿದ್ದರು. ಆದರೆ ಸರಕಾರಿ ಸ್ವಾಮ್ಯ ಅಥವಾ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಆದ್ಯತೆ ನೀಡಿದರು.
ಅವರಿಗೆ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಖಾಸಗಿ ಕೈಗಾರಿಕಾ ವಲಯಕ್ಕೆ ಮೂಲ ಸೌಕರ್ಯಗಳನ್ನು ಒದಗಿಸುವುದರಲ್ಲಿ ಅಷ್ಟಾಗಿ ನಂಬಿಕೆ ಇದ್ದಿರಲಿಲ್ಲ. ಇಂದಿರಾ ಗಾಂಧಿಯವ ರಂತೂ ಖಾಸಗಿ ವಲಯದ ಉದ್ದಿಮೆಗಳನ್ನು ಮತ್ತಷ್ಟು ದೂರವಿಟ್ಟರು. 1969ರಲ್ಲಿ ೧೪ ಪ್ರಮುಖ ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದರು.
ವಿಮೆ, ಕಲ್ಲಿದ್ದಲು ಕ್ಷೇತ್ರವನ್ನು ರಾಷ್ಟ್ರೀಕೃತಗೊಳಿಸಿದರು. ಭಾರಿ ಉದ್ದಿಮೆಗಳು ಬೆಳೆಯದಂತೆ 1973ರಲ್ಲಿ ಮೊನೊಪೊಲಿಸ್ ಆಂಡ್ ರಿಸ್ಟ್ರಿಕ್ಟಿವ್ ಟ್ರೇಡ್ ಪ್ರಾಕ್ಟೀಸಸ್ ಕಾಯಿದೆಯನ್ನು ಜಾರಿಗೊಳಿಸಿ ದರು. 2009ರಲ್ಲಿ ಇದನ್ನು ಪೂರ್ಣವಾಗಿ ರದ್ದುಪಡಿಸಲಾಯಿತು. 1991ರಲ್ಲಿ ಆರ್ಥಿಕ ಉದಾರೀಕರಣ ದ ನಂತರ ದೇಶ ಖಾಸಗೀಕರಣಕ್ಕೂ ಕ್ರಮೇಣ ಮುಕ್ತವಾಯಿತು.
ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ಪ್ರಧಾನಿಗಳಿಗಿಂತಲೂ ಭಿನ್ನ. ದೇಶದ ಆರ್ಥಿಕ ಅಭಿವೃದ್ಧಿಗೆ ಉದ್ಯಮಿಗಳು ನೀಡಿರುವ ಕೊಡುಗೆಯನ್ನು ಅವರು ಬಹಿರಂಗವಾಗಿಯೇ ಗುರುತಿಸಿ ದರು. ಉದ್ಯಮಸ್ನೇಹಿ ನೀತಿಗಳನ್ನು ಅಳವಡಿಸಿದರು. ‘ಈಸ್ ಆಫ್ ಡೂಯಿಂಗ್ ಬಿಸಿನೆಸ್’ ಸರಕಾರದ ಮಹತ್ತ್ವಾಕಾಂಕ್ಷೆಯ ನೀತಿಗಳಂದಾಗಿದೆ.
ನೀವು ಯುನಿಕಾರ್ನ್‌ಗಳ ಬಗ್ಗೆ ಕೇಳಿರಬಹುದು. ಅಂದರೆ 100 ಕೋಟಿ ಡಾಲರ್‌ಗೂ ಹೆಚ್ಚು ಮೌಲ್ಯ ವಿರುವ ಸ್ಟಾರ್ಟ್‌ಅಪ್‌ಗಳು. ಭಾರತದಲ್ಲಿ ಇವತ್ತು ಅಂಥ ೭೩ ಯುನಿಕಾರ್ನ್‌ಗಳು ಇವೆ! ಅಮೆರಿಕ, ಚೀನಾ ಬಿಟ್ಟರೆ ಅತಿ ಹೆಚ್ಚು ಯುನಿಕಾರ್ನ್‌ಗಳು ಈಗ ಭಾರತದಲ್ಲಿವೆ ಎಂಬುದು ವಿಶೇಷ! ಇದು ಕಾಲ ಬದಲಾಗಿರುವ ಕಥೆ.