ಶೂನ್ಯಸಮಯ
ಶಶಿ ತರೂರ್
ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ ಅಧಿವೇಶನದಿಂದ ಮತ್ತೊಮ್ಮೆ ಒಂದು ಸಂಗತಿ ಸ್ಪಷ್ಟ ವಾಗಿದೆ. ನಮ್ಮ ಪ್ರಜಾಪ್ರಭುತ್ವದ ದೇಗುಲವಾಗಿರುವ ಸಂಸತ್ತನ್ನು ಸಂಪೂರ್ಣ ಅಸ್ತವ್ಯಸ್ತತೆಯಿಂದ ಹೊರತಂದು, ಅದರ ಮೂಲ ಸ್ವರೂಪಕ್ಕೆ ಮರಳಿಸಲು ತುರ್ತು ಕ್ರಮ ಕೈಗೊಳ್ಳಬೇಕಾಗಿದೆ. ಪಕ್ಷಪಾತದ ರಾಜಕಾರಣ ಮತ್ತು ಪ್ರಬುದ್ಧ ರಾಜನೀತಿಯ ನಡುವೆ ಸಮತೋಲನ ಸಾಧಿಸುವಲ್ಲಿ ನಾವು ವಿಫಲವಾಗಿರುವುದು ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಅತ್ಯಂತ ದೊಡ್ಡ ದೌರ್ಬಲ್ಯ ವಾಗಿ ಉಳಿದಿದೆ.
ಕೆಲವು ವಿಷಯಗಳನ್ನು ಚರ್ಚಿಸಲೇಬೇಕು ಎಂಬ ನಿಲುವಿನಲ್ಲಿ ಪ್ರತಿಪಕ್ಷ ಪಟ್ಟುಹಿಡಿದಿದೆ. ಆದರೆ ಚರ್ಚೆ ಮತ್ತು ರಾಜಕೀಯ ಹೊಂದಾಣಿಕೆಯನ್ನು ದೌರ್ಬಲ್ಯದ ಸಂಕೇತವೆಂದು ಭಾವಿಸುವ ಸರಕಾರವನ್ನು ಅದು ಎದುರಿಸುತ್ತಿದೆ. ತನ್ನ ಮಾತು ಕೇಳಿಸಿಕೊಳ್ಳದಿದ್ದರೆ ಸದನದ ಕಲಾಪಕ್ಕೆ ಅಡ್ಡಿಪಡಿಸುವ ಮಾರ್ಗವನ್ನು ಪ್ರತಿಪಕ್ಷವು ನಿರಂತರವಾಗಿ ಆಯ್ಕೆ ಮಾಡುತ್ತಿದೆ. ಸರಕಾರವೂ ಪ್ರತಿಪಕ್ಷದ ಕೆಲವು ಬೇಡಿಕೆಗಳನ್ನಾದರೂ ನೋಡಿ, ಅವುಗಳನ್ನು ಪರಿಗಣಿಸಲು ನಿರಾಕರಿಸುತ್ತಿದೆ. ಇದರ ಪರಿಣಾಮವಾಗಿ ಸಮಯ, ತೆರಿಗೆದಾರರ ಹಣ ಮತ್ತು ಅರ್ಥಪೂರ್ಣ ಚರ್ಚೆ ಎಲ್ಲವೂ ವ್ಯರ್ಥವಾಗುತ್ತಿವೆ.
ಇದರ ಜತೆಗೆ ಸಂಸದರು ಸಚಿವರನ್ನು ಪ್ರಶ್ನಿಸುವ ಅವಕಾಶಗಳೂ ಕಳೆದುಹೋಗುತ್ತಿವೆ. ಶೂನ್ಯ ವೇಳೆಯಲ್ಲಿ ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸುವ ಅವಕಾಶ, ನಿಯಮ 377ರ ಅಡಿಯಲ್ಲಿ ರಾಷ್ಟ್ರೀಯ ಮಹತ್ವದ ವಿಚಾರಗಳನ್ನು ಎತ್ತಿ ಹಿಡಿಯುವ ಅವಕಾಶ, ಮಸೂದೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ದಾಖಲಿಸುವ ಅವಕಾಶಗಳು ಕೂಡ ಕಳೆದು ಹೋಗುತ್ತಿವೆ. ಆದರೆ ಇವೆಲ್ಲದರ ನಡುವೆ ಸರಕಾರ ಮಾತ್ರ ಗದ್ದಲದ ನಡುವೆಯೇ ಮಸೂದೆಗಳನ್ನು ಸುಲಭವಾಗಿ ಅಂಗೀಕರಿಸುತ್ತಿದೆ.
ಸರಕಾರ ಮತ್ತು ಪ್ರತಿಪಕ್ಷದ ನಡುವಿನ ಸಂಬಂಧ ಹಿಂದೆಂದೂ ಕಾಣದಷ್ಟು ಕಹಿಯಾಗಿ ಮಾರ್ಪಟ್ಟಿದೆ. ಆದರೆ ಇದು ಯಾವತ್ತೂ ಹೀಗಿರಲಿಲ್ಲ. ಒಂದು ಕಾಲದಲ್ಲಿ ನಮ್ಮ ಸಾರ್ವಜನಿಕ ಜೀವನದಲ್ಲಿ ಮೂಲಭೂತ ಸೌಜನ್ಯವೊಂದು ಇತ್ತು. ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮನ್ನು ಯುವ ಪ್ರತಿಪಕ್ಷ ಸಂಸದನಾಗಿ ಜವಾಹರಲಾಲ್ ನೆಹರು ಅಪಾರ ಸೌಜನ್ಯದಿಂದ ನಡೆಸಿಕೊಂಡಿದ್ದನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಿದ್ದರು. ರಾಜೀವ್ ಗಾಂಧಿ ಅವರು ಅಮೆರಿಕದಲ್ಲಿ ವಾಜಪೇಯಿ ಅವರಿಗೆ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ನೋಡಿಕೊಂಡಿದ್ದರು. ನರಸಿಂಹ ರಾವ್ ಅವರು ಕಾಶ್ಮೀರ ಕುರಿತ ಮಹತ್ವದ ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಅವರನ್ನು ಜಿನೀವಾಗೆ ಕಳುಹಿಸಿದ್ದರು. ಇಂತಹ ಪಕ್ಷಾತೀತ ಸೌಜನ್ಯ ಇಂದು ಊಹಿಸಲೂ ಅಸಾಧ್ಯವಾಗುವಷ್ಟು ಅಪರೂಪವಾಗಿದೆ.
ಇದನ್ನೂ ಓದಿ: Shashi Tharoor: ಅಡ್ವಾಣಿ ಪರ ಶಶಿ ತರೂರ್ ಬ್ಯಾಟಿಂಗ್; ಕಾಂಗ್ರೆಸ್‌ಗೆ ತೀವ್ರ ಮುಜುಗರ!
ಇದರ ಬದಲಿಗೆ ಭಾರತೀಯ ರಾಜಕಾರಣ ಪರಸ್ಪರ ದೂಷಣೆ ಮತ್ತು ರಾಕ್ಷಸೀಕರಣದ ಸಮರವಾಗಿ ಬದಲಾಗಿದೆ. ಎರಡೂ ಕಡೆಯವರು ತಾವೇ ಸಂಪೂರ್ಣ ಸತ್ಯ ಮತ್ತು ನೈತಿಕತೆಯ ಪ್ರತಿನಿಧಿಗಳು ಎಂಬಂತೆ ಬಿಂಬಿಸಿಕೊಳ್ಳುತ್ತಾರೆ. ಅವರ ಪಾಲಿಗೆ ಎದುರಾಳಿಗಳು ಸರಿಪಡಿಸಲಾಗದ, ಸಂಪೂರ್ಣ ವಾಗಿ ದೋಷಯುಕ್ತ ವ್ಯಕ್ತಿಗಳ ಗುಂಪು.
ಆಡಳಿತ ಪಕ್ಷದ ದೃಷ್ಟಿಯಲ್ಲಿ ಭಿನ್ನಮತವನ್ನು ರಾಷ್ಟ್ರವಿರೋಧ ಎಂದು ಕರೆಯಲಾಗುತ್ತದೆ. ಪ್ರತಿಪಕ್ಷವು ತನ್ನನ್ನು ನಿರ್ದಯ ಹಾಗೂ ಅಪಾರ ಸಂಪನ್ಮೂಲ ಹೊಂದಿರುವ ಕೌರವ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿರುವ ಸಂಖ್ಯೆಯಲ್ಲಿ ಕಡಿಮೆ ಇರುವ ಪಾಂಡವರ ಗುಂಪಿನಂತೆ ಬಿಂಬಿಸಿ ಕೊಳ್ಳುತ್ತದೆ.
ಆದರೆ ಪರಸ್ಪರ ನಂಬಿಕೆಯ ಕನಿಷ್ಠ ನೆಲೆಯಿಲ್ಲದೆ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ. ನಮ್ಮ ಅತ್ಯಂತ ಕಠಿಣ ರಾಜಕೀಯ ಎದುರಾಳಿಗಳಿಗೂ ದೇಶದ ಹಿತದ ಬಗ್ಗೆ ಕಾಳಜಿ ಇದೆ ಎಂಬ ಮೂಲಭೂತ ನಂಬಿಕೆ ಇರಬೇಕು. ಅವರು ದೇಶದ ಸೇವೆಯನ್ನು ಹೇಗೆ ಮಾಡಬೇಕು ಎಂಬ ವಿಚಾರದಲ್ಲಿ ನಮ್ಮೊಂದಿಗೆ ತೀವ್ರವಾಗಿ ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ ಅವರ ಉದ್ದೇಶ ದೇಶದ ಹಿತವೇ ಎಂಬ ನಂಬಿಕೆ ಇರಬೇಕು.
ರಾಜಕೀಯ ಎದುರಾಳಿಗಳನ್ನು ಅಸ್ತಿತ್ವಕ್ಕೇ ಬೆದರಿಕೆಯೊಡ್ಡುವ ಶತ್ರುಗಳಂತೆ ನೋಡಲು ಆರಂಭಿಸಿ ದಾಗ, ಉತ್ತಮ ಆಡಳಿತಕ್ಕೆ ಅಗತ್ಯವಿರುವ ಸಾಮಾನ್ಯ ನೆಲೆಯೇ ಕಣ್ಮರೆಯಾಗುತ್ತದೆ. ಪ್ರಜಾ ಪ್ರಭುತ್ವದ ಮೇಲಿನ ಈ ನಂಬಿಕೆಯ ಕುಸಿತ ಎಲ್ಲರ ಒಟ್ಟಾರೆ ವೈಫಲ್ಯವಾಗಿದೆ. ಅಧಿಕಾರದಲ್ಲಿದ್ದಾಗ ಆಡಳಿತ ಪಕ್ಷವಾಗಿದ್ದವರು ಎಷ್ಟು ರಾಜಿ ಮಾಡಿಕೊಳ್ಳದವರಾಗಿದ್ದರೋ, ಅಧಿಕಾರದಿಂದ ಹೊರಗಿದ್ದಾಗ ಅದೇ ಪಕ್ಷದವರು ಅಷ್ಟೇ ರಾಜಿ ಮಾಡಿಕೊಳ್ಳದವರಾಗಿದ್ದರು.
ಒಮ್ಮೆ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುವುದನ್ನು ಕಾರ್ಯಾಂಗವನ್ನು ಹೊಣೆಗಾರನನ್ನಾಗಿ ಮಾಡುವ ಪ್ರಮುಖ ಅಸವೆಂದು ಸಮರ್ಥಿಸಿದ್ದ ನಾಯಕರೇ ಅಧಿಕಾರಕ್ಕೆ ಬಂದ ನಂತರ ತಮ್ಮ ನಿಲುವನ್ನು ಬದಲಾಯಿಸಿದರು. ಅಧಿಕಾರದಲ್ಲಿ ಕುಳಿತಾಗ ನೀವು ನಿಂತಿರುವ ಜಾಗವೇ ನಿಮ್ಮ ನಿಲುವನ್ನು ನಿರ್ಧರಿಸುತ್ತದೆ ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ. ಹಠಾತ್ತನೆ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುವುದು ಕ್ಷಮಿಸಲಾಗದ ಅಪರಾಧವಾಗಿ ಕಾಣತೊಡಗಿತು. ಹಲವು ವರ್ಷಗಳ ಕಾಲ ಇದೇ ತಂತ್ರಗಳನ್ನು ಅನುಭವಿಸಿದ್ದ ಪ್ರತಿಪಕ್ಷವು ಈಗ ನೀಡಲಾಗುತ್ತಿರುವ ಉಪದೇಶವನ್ನು ಒಪ್ಪಿಕೊಳ್ಳಲು ನಿರಾಕರಿಸುವುದರಲ್ಲಿ ಆಶ್ಚರ್ಯವೇನಿಲ್ಲ.
ಸಾಂಪ್ರದಾಯಿಕ ‘ಗೋಲ್ಡನ್ ರೂಲ್’ ಅಂದರೆ, ನೀವು ಇತರರು ನಿಮ್ಮೊಂದಿಗೆ ಹೇಗೆ ನಡೆದುಕೊಳ್ಳ ಬೇಕೆಂದು ಬಯಸುತ್ತೀರೋ, ಹಾಗೆಯೇ ನೀವು ಇತರರೊಂದಿಗೆ ನಡೆದುಕೊಳ್ಳಿ ಎಂದು ಹೇಳುತ್ತದೆ. ಆದರೆ ಭಾರತೀಯ ರಾಜಕಾರಣದ ಹೊಸ ನಿಯಮ ಇದಕ್ಕಿಂತ ಸರಳವೂ ಹೆಚ್ಚು ವಿನಾಶಕಾರಿಯೂ ಆಗಿದೆ: ‘ಅವರು ನಿಮಗೆ ಹೇಗೆ ನಡೆದುಕೊಂಡರೋ, ನೀವು ಅವರೊಂದಿಗೆ ಹಾಗೆಯೇ ನಡೆದು ಕೊಳ್ಳಿ.’
ಸಂಸದೀಯ ಕಾರ್ಯಕ್ಷಮತೆ ಮತ್ತು ಚುನಾವಣಾ ಯಶಸ್ಸಿನ ನಡುವೆ ಕೂಡ ಒಂದು ದೊಡ್ಡ ಅಂತರವಿದೆ. ಸಂಸದರನ್ನು ಆಯ್ಕೆ ಮಾಡುವುದು, ಮತ್ತೆ ಆಯ್ಕೆ ಮಾಡುವುದು, ಅವರು ಪ್ರಶ್ನೋತ್ತರ ವೇಳೆಯಲ್ಲಿ ಸಚಿವರನ್ನು ಎಷ್ಟು ಸಮರ್ಥವಾಗಿ ಪ್ರಶ್ನಿಸಬಲ್ಲರು ಅಥವಾ ಒಂದು ದೋಷಪೂರಿತ ಮಸೂದೆಯನ್ನು ಎಷ್ಟು ಆಳವಾಗಿ ವಿಶ್ಲೇಷಿಸಬಲ್ಲರು ಎಂಬುದರ ಆಧಾರದ ಮೇಲೆ ಬಹುತೇಕ ನಡೆಯುತ್ತಿಲ್ಲ. ಮತದಾರರು ತಮ್ಮ ಸಂಸದರನ್ನು ಅವರು ಕ್ಷೇತ್ರದ ಜನರ ಕೆಲಸಗಳನ್ನು ಎಷ್ಟು ಪರಿಣಾಮಕಾರಿಯಾಗಿ ಮಾಡಿಕೊಡುತ್ತಾರೆ ಮತ್ತು ಸ್ಥಳೀಯ ರಾಜಕೀಯದಲ್ಲಿ ಅವರಿಗೆ ಎಷ್ಟು ಪ್ರಭಾವವಿದೆ ಎಂಬುದರ ಆಧಾರದ ಮೇಲೆ ನಿರ್ಣಯಿಸುತ್ತಾರೆ.
ಹೀಗಾಗಿ ಸಂಸತ್ತಿನ ಒಳಗೆ ಪ್ರದರ್ಶಿಸಬೇಕಾಗಿದ್ದ ಬೌದ್ಧಿಕ ಸಾಮರ್ಥ್ಯ ಮತ್ತು ರಾಜಕೀಯ ಕೌಶಲ್ಯ ಗಳು ಈಗ ದೂರದರ್ಶನ ಸ್ಟುಡಿಯೋಗಳಿಗೆ ವಲಸೆ ಹೋಗಿವೆ. ಇದರ ಪರಿಣಾಮವಾಗಿ ಪಕ್ಷದ ವಿಪ್‌ಗಳು ಸಂಸದರನ್ನು ಸದನದ ಬಾವಿಗೆ ಇಳಿಸಿ, ಸಂಘಟಿತವಾಗಿ ಘೋಷಣೆ ಕೂಗುವಂತೆ ಮಾಡಿ ಕಲಾಪಕ್ಕೆ ಅಡ್ಡಿಪಡಿಸಿದಾಗ, ಪಕ್ಷದ ನಾಯಕರು ಒಂದು ಸ್ಪಷ್ಟ ಸಂದೇಶವನ್ನು ನೀಡುತ್ತಾರೆ. ಅಂದರೆ, ಸಂಸದೀಯ ಶ್ರೇಷ್ಠತೆಗಿಂತ ಪಕ್ಷಪಾತದ ಆಕ್ರಮಣಶೀಲತೆಯನ್ನೇ ಅವರು ಹೆಚ್ಚು ಮೌಲ್ಯ ಯುತವೆಂದು ಪರಿಗಣಿಸುತ್ತಾರೆ.
ಒಂದು ಕಾಲದಲ್ಲಿ ರಾಜಕೀಯ ಪಕ್ಷಗಳು ತಮ್ಮ ನಾಯಕರಲ್ಲಿ ವಿಭಿನ್ನ ರೀತಿಯ ಕೌಶಲ್ಯಗಳಿಗೆ ಮೌಲ್ಯ ನೀಡುತ್ತಿದ್ದವು. ಒಂದು ಕಡೆ ಜನರನ್ನು ದೊಡ್ಡ ಪ್ರಮಾಣದಲ್ಲಿ ಸಂಘಟಿಸುವ ಬೀದಿ ರಾಜಕಾರಣದ ಸಾಮರ್ಥ್ಯವಿತ್ತು. ಮತ್ತೊಂದೆಡೆ ಸಂಸತ್ತಿನಲ್ಲಿ ಪರಿಣಾಮಕಾರಿಯಾಗಿ ವಾದ ಮಂಡಿಸುವ ಸಂಸತ್ತಿನ ರಾಜಕಾರಣದ ಸಾಮರ್ಥ್ಯವಿತ್ತು. ಆದರೆ ಬೀದಿ ರಾಜಕಾರಣ ಸಂಸತ್ತಿ ನೊಳಗೆ ನುಗ್ಗಿದಾಗ, ಸಂಸತ್ತಿನ ರಾಜಕಾರಣಕ್ಕೆ ಜಾಗವೇ ಉಳಿಯುವುದಿಲ್ಲ. ಇದರಿಂದ ನಮ್ಮ ಪ್ರಜಾಸತ್ತಾತ್ಮಕ ಸಂವಾದ ಬಡವಾಗುತ್ತದೆ. ದೇಶದ ಪ್ರಗತಿಯ ಕುರಿತು ರಾಷ್ಟ್ರೀಯ ಒಮ್ಮತ ಮೂಡುವ ಸಾಧ್ಯತೆಯೂ ಕುಂಠಿತವಾಗುತ್ತದೆ.
ಸಂಸತ್ತಿನ ಸ್ಥಾಯಿ ಸಮಿತಿಗಳು ಮತ್ತು ಇತರ ಸಂಸದೀಯ ಸಮಿತಿಗಳಲ್ಲಿ ಇನ್ನೂ ಕೆಲವು ಉತ್ತಮ ಕೆಲಸಗಳು ನಡೆಯುತ್ತಿವೆ. ಆದರೆ ಅವು ಬಹುತೇಕ ಮಾಧ್ಯಮಗಳ ಗಮನದಿಂದ ದೂರದ ನಡೆಯು ತ್ತವೆ. ಕ್ಯಾಮೆರಾಗಳ ಅನುಪಸ್ಥಿತಿಯ ಅವು ನಡೆಯುತ್ತವೆ. ಏಕೆಂದರೆ ಕ್ಯಾಮೆರಾಗಳು ಇದ್ದಾಗ ಚರ್ಚೆ ಮತ್ತು ವಿಚಾರ ವಿನಿಮಯಕ್ಕಿಂತ ಗದ್ದಲ ಮತ್ತು ಅಡ್ಡಿಪಡಿಸುವಿಕೆಗೆ ಹೆಚ್ಚಿನ ಪ್ರಚಾರ ದೊರೆಯುತ್ತದೆ.
ಆದರೆ ಸಾರ್ವಜನಿಕರು ಸಂಸತ್ತಿನಲ್ಲಿ ಕಾಣುವುದೇನು? ಗದ್ದಲ, ಅಡ್ಡಿಪಡಿಸುವಿಕೆ, ಸಂವಾದದ ಕೊರತೆ ಮತ್ತು ಸಂವಹನದ ಸಂಪೂರ್ಣ ಕುಸಿತ. ಸಂಸತ್ತಿನ ಕಾರ್ಯವೈಖರಿ ಕುರಿತು ದೇಶಾದ್ಯಂತ ಜನರಲ್ಲಿ ನಿರಾಸೆ ಹೆಚ್ಚುತ್ತಿದೆ. ಶಾಸನಾತ್ಮಕ ಮಾನದಂಡಗಳ ಕುಸಿತವನ್ನು ಆಡಳಿತದಲ್ಲಿರುವ ವ್ಯವಸ್ಥೆ ಮತ್ತಷ್ಟು ತೀವ್ರ ಗೊಳಿಸಿದೆ. ಪ್ರಸ್ತುತ ಸರಕಾರವು ಶಾಸಕಾಂಗದ ಬಗ್ಗೆ ತನ್ನಲ್ಲಿರುವ ತಿರಸ್ಕಾರವನ್ನು ಬಹುತೇಕ ಮುಚ್ಚಿಡಲೂ ಪ್ರಯತ್ನಿಸುತ್ತಿಲ್ಲ. ಪ್ರತಿಪಕ್ಷದೊಂದಿಗೆ ತೊಡಗಿಸಿ ಕೊಂಡು ಚರ್ಚಿಸುವ ಬದಲು, ಅದರ ಮೇಲೆ ತನ್ನ ನಿರ್ಧಾರಗಳನ್ನು ಹೇರಲು ಅದು ಹೆಚ್ಚು ಒಲವು ತೋರುತ್ತಿದೆ.
ಜವಾಹರಲಾಲ್ ನೆಹರು ಅವರಂತೆ ಸಂಸತ್ತಿಗೆ ಪ್ರತಿದಿನವೂ ಹಾಜರಾಗಿ, ಅದನ್ನು ಭಾರತೀಯ ಪ್ರಜಾಪ್ರಭುತ್ವದ ಹೃದಯ ಬಡಿತವೆಂದು ಪರಿಗಣಿಸುವ ಬದಲು, ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಸದನಗಳಿಗೆ ಅಪರೂಪವಾಗಿ ಮಾತ್ರ ಹಾಜರಾಗುತ್ತಾರೆ.
ಕಳೆದ ಕೆಲವು ವರ್ಷಗಳಲ್ಲಿ ಸರಕಾರವು ಸಂಸತ್ತನ್ನು ಸಮಾಲೋಚನೆ ಮತ್ತು ಚರ್ಚೆ ನಡೆಯುವ ಪ್ರಜಾಪ್ರಭುತ್ವದ ವೇದಿಕೆಯಿಂದ, ಕಾರ್ಯಾಂಗದ ನಿರ್ಧಾರಗಳನ್ನು ಪ್ರಕಟಿಸುವ ನೋಟಿಸ್ ಬೋರ್ಡ್‌ನಂತೆಯೂ, ಆ ನಿರ್ಧಾರಗಳಿಗೆ ಕಾನೂನುಬದ್ಧತೆ ನೀಡುವ ರಬ್ಬರ್ ಸ್ಟಾಂಪ್‌ನಂತೆಯೂ ಪರಿವರ್ತಿಸಿದೆ. ಸಂಸತ್ತಿನ ಮಹತ್ವವನ್ನು ವ್ಯವಸ್ಥಿತವಾಗಿ ಕುಗ್ಗಿಸುವ ಈ ಪ್ರವೃತ್ತಿ ನಮ್ಮ ಪ್ರಜಾ ಪ್ರಭುತ್ವ ವ್ಯವಸ್ಥೆಯ ಹೃದಯವನ್ನೇ ಒಡೆಯವಂತಿದೆ.
ದುರಂತವೆಂದರೆ, ಈ ಸಂಸ್ಥೆಯ ಸ್ವಂತ ರಕ್ಷಕರೇ ಅದನ್ನು ಒಳಗಿನಿಂದಲೇ ಟೊಳ್ಳಾಗಲು ಅವಕಾಶ ನೀಡುತ್ತಿzರೆ. ಸಾರ್ವಜನಿಕರು ಒಂದು ಹಂತದಲ್ಲಿ ಸಂಸತ್ತನ್ನು ಕಳೆದುಕೊಂಡರೂ ಅದನ್ನು ಕಳೆದುಕೊಂಡಿರುವುದನ್ನೇ ಗಮನಿಸದಂತಹ ಅಪಾಯಕಾರಿ ಸ್ಥಿತಿಯತ್ತ ನಾವು ಸಾಗುತ್ತಿದ್ದೇವೆ.
ಆದರೆ ಸಂಸತ್ತಿಗೆ ಇರುವ ಎಲ್ಲ ಉದ್ದೇಶ ಮತ್ತು ಅರ್ಥವನ್ನು ಕಳೆದುಕೊಳ್ಳಲು ಅವಕಾಶ ನೀಡಿದರೆ, ಕೊನೆಗೆ ನಮ್ಮ ಪ್ರಜಾಪ್ರಭುತ್ವದಲ್ಲಿ ಏನು ಉಳಿಯುತ್ತದೆ? ಪ್ರಜಾಪ್ರಭುತ್ವಕ್ಕೆ ಅಪರೂಪದ ಹಾಗೂ ಸೂಕ್ಷ ವಾದ ಸಮತೋಲನದ ಅಗತ್ಯವಿದೆ. ಚುನಾವಣೆಯ ಸಂದರ್ಭದಲ್ಲಿ ರಾಜಕಾರಣಿಗಳು ತಮ್ಮ ಸಿದ್ಧಾಂತಗಳ ಬಗ್ಗೆ ತೀವ್ರವಾದ ನಿಲುವು ಹೊಂದಿರಬೇಕು. ಆದರೆ ಮತಪೆಟ್ಟಿಗೆಗಳು ತಮ್ಮ ತೀರ್ಪು ನೀಡಿದ ನಂತರ, ದೇಶದ ಒಟ್ಟಾರೆ ಪ್ರಗತಿಗಾಗಿ ಸಕ್ರಿಯವಾಗಿ ಸಹಕರಿಸಬೇಕು.
ಇದು ಆರೋಗ್ಯಕರ ರಾಜಕೀಯ ಸಂಸ್ಕೃತಿಯನ್ನು ನಿರ್ಮಿಸಲು ಅತ್ಯಗತ್ಯವಾದ ತತ್ವ. ಪ್ರಜಾ ಪ್ರಭುತ್ವದ ಇತಿಹಾಸ, ಜಗತ್ತಿನ ವಿವಿಧ ಪ್ರಜಾಪ್ರಭುತ್ವಗಳ ಅನುಭವಗಳು ಮತ್ತು ಸಾರ್ವಜನಿಕ ಸೇವೆಯ ಬದಲಾಗು ತ್ತಿರುವ ಸ್ವರೂಪದಿಂದ ನಾವು ಇದಕ್ಕೆ ಸಂಬಂಧಿಸಿದ ಅಮೂಲ್ಯ ಪಾಠಗಳನ್ನು ಕಲಿಯಬಹುದು.
ರಾಷ್ಟ್ರೀಯ ಹಿತಾಸಕ್ತಿಯನ್ನು ಪಕ್ಷದ ನಡುವಿನ ಪೈಪೋಟಿಗಿಂತ ಮೇಲಿಟ್ಟುಕೊಳ್ಳಬೇಕು ಎಂಬ ವಿಚಾರದಲ್ಲಿ ಎರಡೂ ಕಡೆಯವರು ಒಮ್ಮತಕ್ಕೆ ಬಂದರೆ, ಆಡಳಿತವು ಅಡ್ಡಿಪಡಿಸುವ ರಾಜಕಾರಣ ದಿಂದ ರಚನಾತ್ಮಕ ಸಹಕಾರದತ್ತ ಸಾಗಬಹುದು. ಇದು ಪಕ್ಷದ ಸಿದ್ಧಾಂತಗಳನ್ನು ಬಿಟ್ಟುಕೊಡು ವುದು ಅಥವಾ ಸ್ವಂತ ತತ್ವಗಳನ್ನು ತ್ಯಜಿಸುವುದು ಎಂದಾಗುವುದಿಲ್ಲ. ಬದಲಾಗಿ, ರಾಜಕೀಯ ಪಕ್ಷಗಳು ಪ್ರಗತಿಯತ್ತ ಸಾಗಲು ವಿಭಿನ್ನ ಮಾರ್ಗಗಳನ್ನು ಸೂಚಿಸಬಹುದು ಎಂಬುದನ್ನು ಒಪ್ಪಿಕೊಳ್ಳುವುದು. ಆದರೆ ಅಂತಿಮ ಗುರಿ ಒಂದೇ ಆಗಿರಬೇಕು. ಅದು ದೇಶದ ಜನರ ಕಲ್ಯಾಣ, ಸುರಕ್ಷತೆ ಮತ್ತು ಸಮೃದ್ಧಿ.
ಇದಕ್ಕೆ ಒಂದು ಸರಳ ಪರಿಹಾರವಿದೆ. ಇತರ ದೇಶಗಳಲ್ಲಿ ಯಶಸ್ವಿಯಾಗಿ ಬಳಸಲಾಗಿರುವ ವ್ಯವಸ್ಥೆ ಯೊಂದನ್ನು ನಾವು ಅಳವಡಿಸಿಕೊಳ್ಳಬಹುದು. ವಾರದಲ್ಲಿ ಒಂದು ದಿನ ಅಥವಾ ಪ್ರತಿದಿನ ಎರಡು ಗಂಟೆಗಳ ಕಾಲ ಪ್ರತಿಪಕ್ಷಕ್ಕೆ ಸಂಪೂರ್ಣವಾಗಿ ಮೀಸಲಿಡಬಹುದು. ಆ ಅವಧಿಯಲ್ಲಿ ಪ್ರತಿಪಕ್ಷವು ತಾನು ಅಗತ್ಯವೆಂದು ಭಾವಿಸುವ ಯಾವುದೇ ವಿಷಯವನ್ನು ಎತ್ತಿಹಿಡಿಯಲು ಅವಕಾಶ ನೀಡಬಹುದು.
ಉಳಿದ ಸಮಯದಲ್ಲಿ ಸಂಸತ್ತಿನ ಕಲಾಪ ಯಾವುದೇ ಅಡ್ಡಿಯಿಲ್ಲದೆ ಮುಂದುವರಿಯಲು ಅವಕಾಶ ನೀಡಬಹುದು. ಇಂತಹ ರಾಜಿ ವ್ಯವಸ್ಥೆಯನ್ನು ಜಾರಿಗೆ ತರುವಷ್ಟು ಕಲ್ಪನಾಶಕ್ತಿ ಅಥವಾ ದೂರದೃಷ್ಟಿ ಸರಕಾರದಲ್ಲಿರುವ ಯಾರಿಗೂ ಇಲ್ಲವೇ?
(ಲೇಖಕರು ತಿರುವನಂತಪುರಂನ ಕಾಂಗ್ರೆಸ್ ಸಂಸದ)