ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‌Mohan Vishwa Column: ದಶಕದಲ್ಲಿ ಬದಲಾದ ಭಾರತೀಯ ರೈಲ್ವೆ

ರೈಲ್ವೆ ಸಚಿವಾಲಯವು ವೇಗ, ಸುರಕ್ಷತೆ, ಆಧುನೀಕರಣ, ವಿದ್ಯುದೀಕರಣ, ಸರಕು ಸಾಗಣೆ, ಪ್ರಯಾಣಿಕರ ಅನುಕೂಲತೆ ಹಾಗೂ ಡಿಜಿಟಲ್ ವ್ಯವಸ್ಥೆಗಳ ಮೇಲೆ ವಿಶೇಷ ಗಮನಹರಿಸಿತು. ಈ ಬದಲಾವಣೆಯ ಮೊದಲ ಸೂಚನೆ ಬಜೆಟ್‌ನಲ್ಲಿಯೇ ಕಂಡು ಬಂತು. 2013-14ರಲ್ಲಿ ಭಾರತೀಯ ರೈಲ್ವೆಗೆ ವಾರ್ಷಿಕ ಬಂಡವಾಳ ವೆಚ್ಚ ಸುಮಾರು ರೂ.28000 ಕೋಟಿ ಮಟ್ಟದಲ್ಲಿದ್ದರೆ, 2025-26ರ ವೇಳೆಗೆ ಅದು ರೂ.2.5 ಲಕ್ಷ ಕೋಟಿಗೆ ತಲುಪಿದೆ.

ವೀಕೆಂಡ್‌ ವಿತ್‌ ಮೋಹನ್

ರೈಲ್ವೆಯಲ್ಲಿ ಹೂಡಿಕೆ ಮಾಡುವುದು ಎಂದರೆ ಕೇವಲ ಹಳಿಗಳನ್ನು ನಿರ್ಮಿಸುವುದಲ್ಲ; ಅದು ದೇಶದ ಆರ್ಥಿಕ ಬೆಳವಣಿಗೆ, ರಾಷ್ಟ್ರೀಯ ಭದ್ರತೆ, ಉದ್ಯೋಗ ಸೃಷ್ಟಿ ಹಾಗೂ ಪ್ರಾದೇಶಿಕ ಸಮತೋಲನದ ಅಭಿವೃದ್ಧಿಗೆ ಹೂಡಿಕೆ ಮಾಡಿದಂತಾಗಿದೆ.

ಭಾರತೀಯ ರೈಲ್ವೆಯಲ್ಲಿ 2014ಕ್ಕೂ ಮುನ್ನ ಬಂಡವಾಳ ಹೂಡಿಕೆ ತೀರಾ ಕಡಿಮೆ ಇತ್ತು. ಹೊಸ ಮಾರ್ಗಗಳ ನಿರ್ಮಾಣ, ಡಬ್ಲಿಂಗ್, ಗೇಜ್ ಪರಿವರ್ತನೆ ಹಾಗೂ ವಿದ್ಯುದೀಕರಣದ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿದ್ದವು, ಅನೇಕ ಯೋಜನೆಗಳು ವರ್ಷಗಳ ಕಾಲ ಅಪೂರ್ಣವಾಗಿ ಉಳಿದಿದ್ದವು. 2012ರಲ್ಲಿ ಪ್ರಕಟವಾದ ಅನಿಲ್ ಕಾಕೋದ್ಕರ್ ಸಮಿತಿ ವರದಿಯು ರೈಲ್ವೆ ಸುರಕ್ಷತೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿತ್ತು.

ಮುಂದಿನ ಐದು ವರ್ಷಗಳಲ್ಲಿ ಸುರಕ್ಷತೆಗಾಗಿ ಸುಮಾರು ರೂ.1 ಲಕ್ಷ ಕೋಟಿ ವಿಶೇಷ ಹೂಡಿಕೆ ಅಗತ್ಯವಿದೆ ಎಂದು ವರದಿ ಶಿಫಾರಸು ಮಾಡಿತ್ತು. ಇದೇ ಅವಽಯಲ್ಲಿ ಹಲವು ಅಪಘಾತಗಳು ಸಂಭವಿಸಿದ್ದರಿಂದ ರೈಲ್ವೆಯ ಸುರಕ್ಷತೆ ಕುರಿತು ದೇಶವ್ಯಾಪಿ ಚರ್ಚೆ ನಡೆಯಿತು. 2014ರ ನಂತರ ಭಾರತೀಯ ರೈಲ್ವೆಯನ್ನು ಕೇವಲ ಸಾರಿಗೆ ಇಲಾಖೆಯಾಗಿ ನೋಡದೇ, ದೇಶದ ಆರ್ಥಿಕ ಅಭಿವೃದ್ಧಿ ಯ ಎಂಜಿನ್ ಎಂಬ ದೃಷ್ಟಿಯಿಂದ ಪರಿಗಣಿಸಲಾಯಿತು.

ರೈಲ್ವೆ ಸಚಿವಾಲಯವು ವೇಗ, ಸುರಕ್ಷತೆ, ಆಧುನೀಕರಣ, ವಿದ್ಯುದೀಕರಣ, ಸರಕು ಸಾಗಣೆ, ಪ್ರಯಾಣಿ ಕರ ಅನುಕೂಲತೆ ಹಾಗೂ ಡಿಜಿಟಲ್ ವ್ಯವಸ್ಥೆಗಳ ಮೇಲೆ ವಿಶೇಷ ಗಮನಹರಿಸಿತು. ಈ ಬದಲಾವಣೆ ಯ ಮೊದಲ ಸೂಚನೆ ಬಜೆಟ್‌ನಲ್ಲಿಯೇ ಕಂಡು ಬಂತು. 2013-14ರಲ್ಲಿ ಭಾರತೀಯ ರೈಲ್ವೆಗೆ ವಾರ್ಷಿಕ ಬಂಡವಾಳ ವೆಚ್ಚ ಸುಮಾರು ರೂ.28000 ಕೋಟಿ ಮಟ್ಟದಲ್ಲಿದ್ದರೆ, 2025-26ರ ವೇಳೆಗೆ ಅದು ರೂ.2.5 ಲಕ್ಷ ಕೋಟಿಗೆ ತಲುಪಿದೆ.

ಒಂದು ದಶಕದಲ್ಲಿ ಸುಮಾರು ಒಂಬತ್ತು ಪಟ್ಟು ಹೆಚ್ಚಳವಾಗಿದೆ. ಇದು ಭಾರತೀಯ ರೈಲ್ವೆಯ ಇತಿಹಾಸದ ಅತಿ ದೊಡ್ಡ ಬಂಡವಾಳ ಹೂಡಿಕೆಯಾಗಿದೆ. ಹೆಚ್ಚಿದ ಬಂಡವಾಳ ಹೂಡಿಕೆಯಿಂದ ವರ್ಷಗಳ ಕಾಲ ನನೆಗುದಿಗೆ ಬಿದ್ದಿದ್ದ ಅನೇಕ ಯೋಜನೆಗಳಿಗೆ ವೇಗ ಸಿಕ್ಕಿತು. ಹೊಸ ರೈಲು ಮಾರ್ಗ ಗಳು, ಡಬ್ಲಿಂಗ್, ಸೇತುವೆಗಳು, ಸುರಂಗಗಳು, ವಿದ್ಯುದೀಕರಣ ಹಾಗೂ ನಿಲ್ದಾಣಗಳ ಅಭಿವೃದ್ಧಿ ಅಭೂತಪೂರ್ವ ವೇಗದಲ್ಲಿ ಆರಂಭವಾಯಿತು.

ಇದನ್ನೂ ಓದಿ: Mohan Vishwa Column: ಬ್ರಿಟನ್‌ ಪ್ರಧಾನಿಗಳ ರಾಜೀನಾಮೆ ಸರಮಾಲೆ

2014ಕ್ಕೂ ಮೊದಲು ವರ್ಷಕ್ಕೆ ಸರಾಸರಿ ಸುಮಾರು 1500 ಕಿ.ಮೀ. ಹೊಸ ಹಳಿ, ಡಬ್ಲಿಂಗ್ ಮತ್ತು ಗೇಜ್ ಪರಿವರ್ತನೆ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. 2014ರ ನಂತರ ಈ ಪ್ರಮಾಣವು ಸರಾಸರಿ 2900ರಿಂದ 3000 ಕಿ.ಮೀ.ಗೆ ಏರಿತು. ಇದು ಹಿಂದಿನ ದಶಕಕ್ಕೆ ಹೋಲಿಸಿದರೆ ಸುಮಾರು ಎರಡು ಪಟ್ಟು ಹೆಚ್ಚಳ. ಇದರ ಪರಿಣಾಮವಾಗಿ ದೆಹಲಿ-ಮುಂಬೈ, ದೆಹಲಿ- ಹೌರಾ, ಚೆನ್ನೆ -ಬೆಂಗಳೂರು, ಮುಂಬೈ-ಅಹಮದಾಬಾದ್, ಹೌರಾ-ಚೆನ್ನೆ ಸೇರಿದಂತೆ ದೇಶದ ಪ್ರಮುಖ ರೈಲು ಮಾರ್ಗಗಳಲ್ಲಿ ಸಂಚಾರ ಸಾಮರ್ಥ್ಯ ಹೆಚ್ಚಾಯಿತು.

ಇಂದಿನ ಭಾರತದಲ್ಲಿ ರೈಲ್ವೆ ಕೇವಲ ಪ್ರಯಾಣಿಕರನ್ನು ಸಾಗಿಸುವ ವ್ಯವಸ್ಥೆಯಲ್ಲ. ಇದು ಕೈಗಾರಿಕೆ ಗಳಿಗೆ ಕಚ್ಚಾ ವಸ್ತು ತಲುಪಿಸುತ್ತದೆ, ರೈತರ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸುತ್ತದೆ, ಸೇನಾ ಪಡೆಗಳಿಗೆ ಗಡಿ ಪ್ರದೇಶಗಳಲ್ಲಿ ವೇಗವಾಗಿ ತಲುಪಲು ನೆರವಾಗುತ್ತದೆ ಮತ್ತು ದೇಶದ ಏಕೀಕರಣ ವನ್ನು ಬಲಪಡಿಸುತ್ತದೆ.

2014ರ ನಂತರ ಭಾರತೀಯ ರೈಲ್ವೆಯಲ್ಲಿ ಸಂಭವಿಸಿದ ಅತಿದೊಡ್ಡ ಬದಲಾವಣೆ ಎಂದರೆ ಸುರಕ್ಷತಾ ವ್ಯವಸ್ಥೆಯ ಆಧುನೀಕರಣ ಮತ್ತು ಸಂಪೂರ್ಣ ವಿದ್ಯುದೀಕರಣದತ್ತ ನಡೆದ ವೇಗದ ಪಯಣ. ಭಾರತೀಯ ರೈಲ್ವೆ ಪ್ರತಿದಿನ ಸುಮಾರು 2.3 ಕೋಟಿ ಪ್ರಯಾಣಿಕರನ್ನು ಹಾಗೂ ಲಕ್ಷಾಂತರ ಟನ್ ಸರಕುಗಳನ್ನು ಸಾಗಿಸುತ್ತದೆ. ಇಷ್ಟು ದೊಡ್ಡ ವ್ಯವಸ್ಥೆಯಲ್ಲಿ ಅಪಘಾತಗಳನ್ನು ಸಂಪೂರ್ಣ ವಾಗಿ ತಡೆಯುವುದು ಸವಾಲಿನ ಕೆಲಸ, ಆದರೂ ಕಳೆದ ಒಂದು ದಶಕದಲ್ಲಿ ಅಪಘಾತಗಳ ಸಂಖ್ಯೆ ಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.

204ರಿಂದ 2014ರ ವರೆಗೆ ಸರಾಸರಿ ವರ್ಷಕ್ಕೆ ಸುಮಾರು 170 ರೈಲು ಅಪಘಾತಗಳು ಸಂಭವಿಸು ತ್ತಿದ್ದವು. ಆದರೆ 2014ರ ನಂತರ ಸುರಕ್ಷತಾ ಕ್ರಮಗಳನ್ನು ಬಲಪಡಿಸಿದ ಪರಿಣಾಮ, ಈ ಸಂಖ್ಯೆ ಕ್ರಮೇಣ ಇಳಿಯಿತು. ಇತ್ತೀಚಿನ ವರ್ಷಗಳಲ್ಲಿ ರೈಲು ಅಪಘಾತಗಳ ಸಂಖ್ಯೆ ವರ್ಷಕ್ಕೆ ಸುಮಾರು 10- 20ರ ನಡುವೆ ದಾಖಲಾಗಿದ್ದು, ಈ ಸಾಧನೆಯ ಹಿಂದೆ ಹಳೆಯ ಹಳಿಗಳ ನವೀಕರಣ, ಟ್ರ್ಯಾಕ್ ಪರಿಶೀಲನೆಗೆ ಯಂತ್ರಗಳ ಬಳಕೆ, ಆಧುನಿಕ ಸಿಗ್ನಲಿಂಗ್, ಸೇತುವೆಗಳ ವೈಜ್ಞಾನಿಕ ಪರಿಶೀಲನೆ ಹಾಗೂ ಸುರಕ್ಷತಾ ಹೂಡಿಕೆ ಪ್ರಮುಖ ಕಾರಣಗಳಾಗಿವೆ.

ಒಂದು ಕಾಲದಲ್ಲಿ ರೈಲು ಅಪಘಾತಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದದ್ದು, ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳು. ವಾಹನ ಚಾಲಕರ ನಿರ್ಲಕ್ಷ , ಎಚ್ಚರಿಕೆ ವ್ಯವಸ್ಥೆಯ ಕೊರತೆ ಮತ್ತು ದೃಶ್ಯಮಾನದ ಸಮಸ್ಯೆಗಳಿಂದ ಅನೇಕ ದುರಂತಗಳು ಸಂಭವಿಸುತ್ತಿದ್ದವು.

2014ರ ನಂತರ ಈ ಸಮಸ್ಯೆಯ ಪರಿಹಾರವನ್ನು ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಳ್ಳಲಾಯಿತು. ಸಾವಿರಾರು ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ಮುಚ್ಚುವುದು, ಮೇಲ್ಸೇತುವೆ ಹಾಗೂ ಕೆಳ ಸೇತುವೆ ನಿರ್ಮಿಸುವುದು ಅಥವಾ ಮಾನವಸಹಿತ ವ್ಯವಸ್ಥೆಯಾಗಿ ಪರಿವರ್ತಿಸುವ ಕೆಲಸ ನಡೆಯಿತು.

ಹಿಂದಿನ ದಶಕಗಳಲ್ಲಿ ಭಾರತೀಯ ರೈಲುಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿದ್ದ ICF ಕೋಚ್‌ಗಳು ಅಪಘಾತ ಸಂಭವಿಸಿದಾಗ ಒಂದರ ಮೇಲೆ ಒಂದು ಹತ್ತುವ ಸಾಧ್ಯತೆ ಹೆಚ್ಚಾಗಿತ್ತು. ಇದರಿಂದ ಪ್ರಾಣಹಾನಿ ಪ್ರಮಾಣವೂ ಹೆಚ್ಚಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಜರ್ಮನಿಯ ತಂತ್ರಜ್ಞಾನ ಆಧಾರಿತ LHB ಕೋಚ್‌ಗಳನ್ನು ವೇಗವಾಗಿ ಅಳವಡಿಸಲಾಯಿತು. ಇದು ಪ್ರಯಾಣಿಕರ ಸುರಕ್ಷತೆ ಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ.

ಭಾರತೀಯ ರೈಲ್ವೆಯ ಅತ್ಯಂತ ಮಹತ್ವಾಕಾಂಕ್ಷೆಯ ಸುರಕ್ಷತಾ ಯೋಜನೆಗಳಲ್ಲಿ ಒಂದಾಗಿದೆ ಕವಚ್. ಇದು ಭಾರತದ ಅಭಿವೃದ್ಧಿಪಡಿಸಲಾದ "Automatic Train Protection' ವ್ಯವಸ್ಥೆ ಯಾಗಿದ್ದು, ಮಾನವ ತಪ್ಪಿನಿಂದ ಸಂಭವಿಸಬಹುದಾದ ಅಪಘಾತಗಳನ್ನು ತಡೆಯಲು ವಿನ್ಯಾಸ ಗೊಳಿಸಲಾಗಿದೆ.

2014ರಲ್ಲಿ ಭಾರತೀಯ ರೈಲ್ವೆಯ ಬ್ರಾಡ್‌ಗೇಜ್ ಜಾಲದ ಸುಮಾರು 21000 ಕಿ.ಮೀ. ಮಾತ್ರ ವಿದ್ಯುದೀ ಕೃತವಾಗಿತ್ತು. ಉಳಿದ ಮಾರ್ಗಗಳಲ್ಲಿ ಡೀಸೆಲ್ ಎಂಜಿನ್‌ಗಳೇ ಪ್ರಮುಖವಾಗಿದ್ದವು. ಆದರೆ ಕಳೆದ ಒಂದು ದಶಕದಲ್ಲಿ ವಿದ್ಯುದೀಕರಣದಲ್ಲಿ ದಾಖಲೆ ಮಟ್ಟದ ಸಾಧನೆ ಕಂಡುಬಂದಿದೆ.

2025ರ ವೇಳೆಗೆ ಭಾರತೀಯ ರೈಲ್ವೆಯ 99%ಕ್ಕೂ ಹೆಚ್ಚು ಬ್ರಾಡ್ʼಗೇಜ್ ಜಾಲ ವಿದ್ಯುದೀಕೃತವಾಗಿದೆ. ವಿಶ್ವದ ಅತಿದೊಡ್ಡ ವಿದ್ಯುದೀಕೃತ ರೈಲು ಜಾಲಗಳಲ್ಲಿ ಭಾರತವೂ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂದಿನ ಭಾರತೀಯ ರೈಲ್ವೆ ಕೇವಲ ಹಳಿಗಳ ಮೇಲಿನ ವ್ಯವಸ್ಥೆಯಲ್ಲ; ಅದು ಡಿಜಿಟಲ್ ಮೂಲಸೌಕರ್ಯವನ್ನೂ ಅಳವಡಿಸಿಕೊಂಡಿದೆ.

ಆನ್‌ಲೈನ್ ಟಿಕೆಟ್ ವ್ಯವಸ್ಥೆಯ ಸಾಮರ್ಥ್ಯದಲ್ಲಿ ಭಾರೀ ಹೆಚ್ಚಳ, ರೈಲುಗಳ ನೈಜ ಸಮಯದ ಸ್ಥಳ ಮಾಹಿತಿ, GPS ಆಧಾರಿತ ಟ್ರ್ಯಾಕಿಂಗ್, ಡ್ರೋನ್ ಮೂಲಕ ಸೇತುವೆ ಹಾಗೂ ಹಳಿಗಳ ಪರಿಶೀಲನೆ, ಕೃತಕ ಬುದ್ಧಿಮತ್ತೆ ಬಳಸಿ ನಿರ್ವಹಣಾ ವ್ಯವಸ್ಥೆ, ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆ. ಈ ಬದಲಾವಣೆಗಳು ಭಾರತೀಯ ರೈಲ್ವೆಯನ್ನು ವಿಶ್ವದ ಅತ್ಯಾಧುನಿಕ ರೈಲು ವ್ಯವಸ್ಥೆಗಳ ಸಾಲಿನಲ್ಲಿ ನಿಲ್ಲಿಸಿವೆ.

ಒಂದು ಕಾಲದಲ್ಲಿ ಭಾರತದ ಈಶಾನ್ಯ ರಾಜ್ಯಗಳು ರೈಲ್ವೆ ಅಭಿವೃದ್ಧಿಯಿಂದ ಸಾಕಷ್ಟು ಹಿಂದೆ ಉಳಿದಿದ್ದವು. ಅನೇಕ ರಾಜ್ಯ ರಾಜಧಾನಿಗಳಿಗೆ ರೈಲು ಸಂಪರ್ಕವೇ ಇರಲಿಲ್ಲ. 2014ರ ನಂತರ ಈ ಪ್ರದೇಶಕ್ಕೆ ವಿಶೇಷ ಆದ್ಯತೆ ನೀಡಲಾಯಿತು. ಅರುಣಾಚಲ ಪ್ರದೇಶ ಮೊದಲ ಬಾರಿಗೆ ಬ್ರಾಡ್‌ಗೇಜ್ ರೈಲು ಸಂಪರ್ಕ ಪಡೆಯಿತು, ಮೇಘಾಲಯ ಮೊದಲ ಬಾರಿಗೆ ರೈಲು ನಕ್ಷೆಯಲ್ಲಿ ಸ್ಥಾನ ಪಡೆಯಿತು. ತ್ರಿಪುರಾದ ರಾಜಧಾನಿ ಅಗರ್ತಲಾ ಬ್ರಾಡ್ʼಗೇಜ್ ಜಾಲಕ್ಕೆ ಸಂಪರ್ಕಿಸಲ್ಪಟ್ಟಿತು.

ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ಕಡೆಗೆ ಹೊಸ ರೈಲು ಮಾರ್ಗಗಳ ನಿರ್ಮಾಣಕ್ಕೆ ವೇಗ ದೊರೆಯಿತು. ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಬೋಗಿಬೀಲ ಸೇತುವೆ ಭಾರತದ ಅತಿ ಉದ್ದದ ಸೇತುವೆಗಳಲ್ಲಿ ಒಂದಾಗಿದೆ. ಈ ಸೇತುವೆಯಿಂದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳ ನಡುವಿನ ಸಂಪರ್ಕ ಸುಧಾರಿಸಿದ್ದು, ಸೇನೆಯ ತ್ವರಿತ ಸಂಚಾರಕ್ಕೂ ಇದು ಮಹತ್ವದ ನೆರವಾಗಿದೆ.

ಭಾರತೀಯ ರೈಲ್ವೆಯ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದ್ದದ್ದು ಪ್ರಯಾಣಿಕ ಮತ್ತು ಸರಕು ರೈಲುಗಳು ಒಂದೇ ಹಳಿಯಲ್ಲಿ ಸಂಚರಿಸುತ್ತಿದ್ದದ್ದು. ಇದರಿಂದ ಎರಡೂ ಸೇವೆಗಳ ವೇಗ ಮತ್ತು ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀಳುತ್ತಿತ್ತು. ಈ ಸಮಸ್ಯೆಗೆ ಪರಿಹಾರವಾಗಿ Dedicated Freight Corridor ಯೋಜನೆಗೆ ವೇಗ ನೀಡಲಾಯಿತು. ದಾದ್ರಿ (ಉತ್ತರ ಪ್ರದೇಶ)ದಿಂದ ಜವಾಹರಲಾಲ್ ನೆಹರು ಬಂದರು (ಮಹಾರಾಷ್ಟ್ರ)ವರೆಗೆ, ಲೂಧಿಯಾನಾದಿಂದ ಸೋನನಗರವರೆಗೆ ಸುಮಾರು 2800 ಕಿ.ಮೀ.ಗಿಂತ ಹೆಚ್ಚಿನ ಉದ್ದದ ಈ ಕಾರಿಡಾರ್‌ಗಳಿಂದ ಸರಕು ರೈಲುಗಳು ವೇಗವಾಗಿ ಸಂಚರಿಸಲು ಅವಕಾಶ ದೊರೆತಿದೆ.

ಕಳೆದ ಒಂದು ದಶಕದಲ್ಲಿ ಭಾರತೀಯ ರೈಲ್ವೆ ಸರಕು ಸಾಗಣೆಯಲ್ಲೂ ಹೊಸ ದಾಖಲೆಗಳನ್ನು ನಿರ್ಮಿಸಿದೆ. ಕಲ್ಲಿದ್ದಲು, ಉಕ್ಕು, ಸಿಮೆಂಟ, ಧಾನ್ಯ, ರಾಸಾಯನಿಕಗಳು ಮತ್ತು ಕಂಟೇನರ್ ಸಾಗಣೆ ಯಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಕಂಡುಬಂದಿದೆ. ಇದರ ಪರಿಣಾಮವಾಗಿ ರೈಲ್ವೆಯ ಆದಾಯ ಹೆಚ್ಚುವುದರ ಜೊತೆಗೆ, ದೇಶದ ಲಾಜಿಸ್ಟಿಕ್ಸ್ ವೆಚ್ಚ ಕಡಿಮೆಯಾಗಲು ಸಹ ನೆರವಾಗಿದೆ. ‌

ಕೈಗಾರಿಕೆಗಳ ಸ್ಪರ್ಧಾತ್ಮಕ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಇದಕ್ಕೆ ಮಹತ್ವದ ಪಾತ್ರವಿದೆ. ರೈಲ್ವೆ ಯಲ್ಲಿ ಹೂಡಿಕೆ ಮಾಡುವುದು ಎಂದರೆ ಕೇವಲ ಹಳಿಗಳನ್ನು ನಿರ್ಮಿಸುವುದಲ್ಲ; ಅದು ದೇಶದ ಆರ್ಥಿಕ ಬೆಳವಣಿಗೆ, ರಾಷ್ಟ್ರೀಯ ಭದ್ರತೆ, ಉದ್ಯೋಗ ಸೃಷ್ಟಿ ಹಾಗೂ ಪ್ರಾದೇಶಿಕ ಸಮತೋಲನದ ಅಭಿವೃದ್ಧಿಗೆ ಹೂಡಿಕೆ ಮಾಡಿದಂತಾಗಿದೆ.

2014ರ ನಂತರದ ಭಾರತೀಯ ರೈಲ್ವೆಯ ಪರಿವರ್ತನೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಕೇವಲ ಹೊಸ ರೈಲುಗಳ ಸಂಖ್ಯೆಯನ್ನು ನೋಡುವುದಷ್ಟೇ ಸಾಲದು. ವಿದ್ಯುದೀಕರಣ, ಸುರಕ್ಷತೆ, ಆಧುನಿಕ ತಂತ್ರಜ್ಞಾನ, ಸೇತುವೆಗಳು, ಸುರಂಗಗಳು, ಈಶಾನ್ಯ ಭಾರತದ ಸಂಪರ್ಕ, ಸರಕು ಸಾಗಣೆಯ ಕ್ರಾಂತಿ ಹಾಗೂ ವಿಶ್ವಮಟ್ಟದ ಮೂಲಸೌಕರ್ಯ ನಿರ್ಮಾಣದ ಸಂಪೂರ್ಣ ಚಿತ್ರಣವನ್ನು ನೋಡ ಬೇಕಾಗುತ್ತದೆ, ಇವೆಲ್ಲವೂ ಭಾರತೀಯ ರೈಲ್ವೆಯ ಹೊಸ ಅಧ್ಯಾಯವಾಗಿದೆ.

ಮೋಹನ್‌ ವಿಶ್ವ

View all posts by this author