ಗೋವಿಂದ ರಾವ್, ಬೆಂಗಳೂರು
2047ರ ವೇಳೆಗೆ ಆತ್ಮನಿರ್ಭರ ಮತ್ತು ವಿಕಸಿತ ಭಾರತ ಗುರಿ ಸಾಧಿಸಲು ಗಣಿಗಾರಿಕೆ ಸುಧಾರಣೆಯಷ್ಟೇ ಅಲ್ಲ, ದೇಶೀಯ ಖನಿಜ ಬೇಸ್ ಅನ್ನು ಭದ್ರಪಡಿಸಿಕೊಳ್ಳುವುದು ಅತ್ಯಂತ ಮುಖ್ಯ. ಸರಕಾರವು 2015ರಿಂದ ಗಣಿಗಾರಿಕೆ ಚೌಕಟ್ಟಿನಲ್ಲಿ ಬದಲಾವಣೆಗಳನ್ನು ಮಾಡುತ್ತಾ ಬಂದಿದ್ದು, ಪಾರದರ್ಶಕ ಹರಾಜು ಪ್ರಕ್ರಿಯೆ, ಪರಿಶೋಧನೆ ಹಾಗೂ ಖನಿಜ ಸಂಪನ್ಮೂಲಗಳ ತ್ವರಿತ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ.
ಭಾರತದ ಖನಿಜ ಸುರಕ್ಷತೆಯು ಕೇವಲ ಗಣಿಗಾರಿಕೆಗೆ ಸಂಬಂಧಿಸಿದ ವಿಷಯವಲ್ಲ. ಅದು ಬೃಹತ್ ಆರ್ಥಿಕ ಭದ್ರತೆ ಪ್ರಶ್ನೆ. ಮೂಲಸೌಕರ್ಯ, ಉಕ್ಕು, ರಕ್ಷಣಾ ಕ್ಷೇತ್ರ, ಎಲೆಕ್ಟ್ರಿಕ್ ವಾಹನಗಳು (ಇವಿ), ನವೀಕರಿಸಬಹು ದಾದ ಇಂಧನ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳಿಗೆ ಖನಿಜಗಳು ಅತ್ಯಗತ್ಯ. ದೇಶದಲ್ಲಿ ವಿಶ್ವಾಸಾರ್ಹವಾದ ದೇಶೀಯ ಖನಿಜ ಪೂರೈಕೆ ಸಿಗದಿದ್ದರೆ, ಆಮದುಗಳ ಮೇಲೆ ನಮ್ಮ ಆರ್ಥಿಕ ಹಾಗೂ ಕಾರ್ಯತಂತ್ರದ ಅವಲಂಬನೆ ನಿರಂತರವಾಗಿ ಹೆಚ್ಚುತ್ತಲೇ ಇರುತ್ತದೆ. ಭಾರತದ ಖನಿಜ ತೆರಿಗೆ ವ್ಯವಸ್ಥೆಯು ಸುಮಾರು 35 ವರ್ಷಗಳಿಂದ ಕಾನೂನು ವಿವಾದಗಳ ಕೇಂದ್ರ ಬಿಂದುವಾಗಿತ್ತು.
1957ರ ಎಂ.ಎಂ.ಡಿ.ಆರ್. ಕಾಯಿದೆಯು ಖನಿಜ ಅಭಿವೃದ್ಧಿಯ ಮೇಲಿನ ಕೇಂದ್ರದ ಅಧಿಕಾರ ಹಾಗೂ ಖನಿಜ ಹಕ್ಕುಗಳ ಮೇಲೆ ತೆರಿಗೆ ವಿಧಿಸುವ ರಾಜ್ಯಗಳ ಅಧಿಕಾರದ ನಡುವಿನ ಸಂಬಂಧ ವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸದಿರುವುದೇ ಈ ಮೂಲ ಸಮಸ್ಯೆಗೆ ಕಾರಣವಾಗಿತ್ತು. ಸಂವಿಧಾನವು ರಾಜ್ಯಗಳಿಗೆ ಖನಿಜ ಹಕ್ಕುಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ನೀಡಿದೆಯಾದರೂ, ಖನಿಜ ಅಭಿವೃದ್ಧಿಯ ಹಿತದೃಷ್ಟಿಯಿಂದ ಕೇಂದ್ರವು ಆ ಅಧಿಕಾರಕ್ಕೆ ಮಿತಿಗಳನ್ನು ಹೇರಬಹುದು. ಆದರೆ 1957ರ ಕಾಯಿದೆಯು ಆ ಮಿತಿಗಳನ್ನು ಸ್ಪಷ್ಟಪಡಿಸಿರಲಿಲ್ಲ.
ಇದು ಪರಸ್ಪರ ವಿರೋಧಾಭಾಸದ ವ್ಯಾಖ್ಯಾನಗಳಿಗೆ ಹಾಗೂ ಪುನರಾವರ್ತಿತ ಕಾನೂನು ಹೋರಾಟ ಗಳಿಗೆ ದಾರಿ ಮಾಡಿಕೊಟ್ಟಿತ್ತು. ಈ ವಿಷಯದಲ್ಲಿ ಸುಪ್ರೀಂಕೋರ್ಟ್ ಕಾಲಕಾಲಕ್ಕೆ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. 1989ರಲ್ಲಿ ‘ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ ವರ್ಸಸ್ ತಮಿಳುನಾಡು ಸರಕಾರ’ದ ಪ್ರಕರಣದಲ್ಲಿ, ಏಳು ನ್ಯಾಯಾಧೀಶರ ಪೀಠವು ರಾಯಲ್ಟಿಯನ್ನು ತೆರಿಗೆ ಎಂದು ಪರಿಗಣಿಸಿ ರಾಜ್ಯಗಳ ಹೆಚ್ಚುವರಿ ತೆರಿಗೆಯನ್ನು ನಿರ್ಬಂಧಿಸಿತ್ತು. ಆದರೆ 2004ರಲ್ಲಿ ಮತ್ತೊಂದು ಐವರು ನ್ಯಾಯಾಧೀಶರ ಸಂವಿಧಾನ ಪೀಠವು 1989ರ ತೀರ್ಪನ್ನು ಪ್ರಶ್ನಿಸಿತು.
ಇದನ್ನೂ ಓದಿ: Lokesh Kayarga Column: ಇನ್ನಷ್ಟು ವೀರಪ್ಪನ್ ಹುಟ್ಟಿಕೊಳ್ಳದಿರಲಿ
‘ರಾಯಲ್ಟಿ ಒಂದು ತೆರಿಗೆ’ ಎಂಬ ಪದವು ಮುದ್ರಣ ದೋಷ (ಟೈಪೋಗ್ರಾಫಿಕಲ್ ಎರರ್) ಎಂದು ಅಭಿಪ್ರಾಯಪಟ್ಟು, ರಾಯಲ್ಟಿ ಎನ್ನುವುದು ತೆರಿಗೆಯಲ್ಲ ಬದಲಿಗೆ ಒಪ್ಪಂದದ ಪಾವತಿಯಾಗಿದೆ ಎಂದು ತಿಳಿಸಿತು. ಅಲ್ಲದೆ, ರಾಜ್ಯಗಳು ಭೂಮಿಯ ಖನಿಜ ಇಳುವರಿಯ ಆಧಾರದ ಮೇಲೆ ಭೂ ತೆರಿಗೆ ವಿಧಿಸಬಹುದು ಎಂದು ಸಮರ್ಥಿಸಿತು.
2024ರಲ್ಲಿ ‘ಮಿನರಲ್ ಏರಿಯಾ ಡೆವಲಪ್‌ಮೆಂಟ್ ಅಥೋರಿಟಿ ವರ್ಸಸ್ ಸೇಲ್ (SAIL)’ ಪ್ರಕರಣ ದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ದೀರ್ಘಕಾಲದ ವಿವಾದಕ್ಕೆ ಅಂತ್ಯ ಹಾಡಿತು. ರಾಯಲ್ಟಿ ಎಂಬುದು ತೆರಿಗೆಯಲ್ಲ ಎಂದು ಸ್ಪಷ್ಟಪಡಿಸಿದ ಈ ತೀರ್ಪು, ಖನಿಜ ಹಕ್ಕುಗಳು ಮತ್ತು ಖನಿಜಯುಕ್ತ ಭೂಮಿಯ ಮೇಲೆ ತೆರಿಗೆ ವಿಧಿಸುವ ರಾಜ್ಯಗಳ ಸಾಂವಿಧಾನಿಕ ಅಧಿಕಾರವನ್ನು ಎತ್ತಿಹಿಡಿಯಿತು. ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಅಂಗೀಕಾರ ಗೊಂಡು, ಮರುದಿನವೇ ರಾಜ್ಯಸಭೆಯ ಅನುಮೋದನೆಯನ್ನೂ ಪಡೆದಿರುವ ‘ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2026’ ಯು ಖನಿಜ ತೆರಿಗೆಗೆ ಸಂಬಂಧಿಸಿದಂತೆ ಹೆಚ್ಚು ಏಕರೂಪದ, ಮುನ್ಸೂಚನೆ ನೀಡಬಲ್ಲ ಮತ್ತು ಹೂಡಿಕೆ ಸ್ನೇಹಿ ವ್ಯವಸ್ಥೆಯನ್ನು ರೂಪಿಸುವ ಗುರಿ ಹೊಂದಿದೆ.
ಸುಪ್ರೀಂಕೋರ್ಟ್ ಗುರುತಿಸಿರುವ ಅಧಿಕಾರವನ್ನು ಈಗ ಕೇಂದ್ರ ಸರಕಾರ ಚಲಾಯಿಸುತ್ತಿದೆ. ಖನಿಜ ಹಕ್ಕು ಗಳು ಮತ್ತು ಖನಿಜಯುಕ್ತ ಭೂಮಿಯ ಮೇಲಿನ ಹೆಚ್ಚುವರಿ ರಾಜ್ಯ ತೆರಿಗೆಗಳು, ಸೆಸ್‌ಗಳು ಹಾಗೂ ಲೆವಿಗಳ ಮೇಲೆ ಸ್ಪಷ್ಟ ಶಾಸನಾತ್ಮಕ ಮಿತಿಗಳನ್ನು ಸ್ಥಾಪಿಸಲು ಈ ಮಸೂದೆ ಯತ್ನಿಸುತ್ತದೆ. ಒಂದು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಣಿಗಾರಿಕೆ ಕಂಪನಿಯು, ಕೇವಲ ಆ ಖನಿಜ ಅಲ್ಲಿ ಸಿಗುತ್ತದೆ ಎಂಬ ಒಂದೇ ಕಾರಣಕ್ಕೆ ಸಂಪೂರ್ಣ ಭಿನ್ನವಾದ ತೆರಿಗೆಯ ಹೊರೆಯನ್ನು ಎದುರಿಸ ಬಾರದು.
ರಾಜ್ಯ ಮಟ್ಟದ ಅನಿರೀಕ್ಷಿತ ತೆರಿಗೆಗಳಿಂದ ಖನಿಜಗಳ ಬೆಲೆಗಳು ಮತ್ತು ಹೂಡಿಕೆಯ ನಿರ್ಧಾರಗಳು ಹದಗೆಡದಂತೆ ತಡೆಯಲು ಪ್ರಸ್ತಾವಿತ ವ್ಯವಸ್ಥೆಯು ಹೆಚ್ಚಿನ ಏಕರೂಪತೆಯನ್ನು ಬಯಸುತ್ತದೆ. 2024ರ ತೀರ್ಪು ಖನಿಜ ಹಕ್ಕುಗಳ ತೆರಿಗೆ ಹಾಗೂ ಭೂ ತೆರಿಗೆಯನ್ನು ಪ್ರತ್ಯೇಕಿಸಿದ್ದರಿಂದ, ರಾಜ್ಯಗಳು ಭೂ ತೆರಿಗೆಯ ಮೂಲಕ ಹೆಚ್ಚುವರಿ ಶುಲ್ಕ ವಿಧಿಸಲು ಅವಕಾಶವಿತ್ತು. ಇದನ್ನು ತಡೆಯಲು ಈ ತಿದ್ದುಪಡಿಯು ಕೇಂದ್ರ ಸರಕಾರದ ಚೌಕಟ್ಟನ್ನು ಖನಿಜಯುಕ್ತ ಭೂಮಿಗೂ ವಿಸ್ತರಿಸುತ್ತದೆ. ತೆರಿಗೆ ಅಥವಾ ಸೆಸ್ ಎಂಬ ಹೆಸರಿನಲ್ಲಿ ರಾಜ್ಯಗಳು ನಿರ್ಬಂಧಗಳನ್ನು ಮೀರುವುದನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.
ಲಿಥಿಯಂ, ಕೋಬಾಲ್ಟ್, ನಿಕಲ್ ಮತ್ತು ಅಪರೂ ಪದ ಭೂಮಿಯ ಖನಿಜಗಳ (Rare Earth Elements) ಬೇಡಿಕೆಯು ಎಲೆಕ್ಟ್ರಿಕ್ ವಾಹನಗಳು, ಬ್ಯಾಟರಿಗಳು ಮತ್ತು ಸುಧಾರಿತ ತಂತ್ರಜ್ಞಾನಗಳ ವಿಸ್ತರಣೆಯಿಂದಾಗಿ ತೀವ್ರವಾಗಿ ಹೆಚ್ಚುತ್ತಿದೆ. ದೇಶೀಯ ಉತ್ಪಾದನೆಯು ಆಕರ್ಷಕವಾಗಿರದಿದ್ದರೆ, ಭಾರತವು ವಿದೇಶಿ ಸರಬರಾಜುಗಳ ಮೇಲೆ ಮತ್ತಷ್ಟು ಅವಲಂಬಿತವಾಗಬೇಕಾಗುತ್ತದೆ. ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತ 2047ರ ಗುರಿಯನ್ನು ಸಾಧಿಸಲು ಗಣಿಗಾರಿಕೆ ಸುಧಾರಣೆಯಷ್ಟೇ ಅಲ್ಲ, ದೇಶೀಯ ಖನಿಜ ಬೇಸ್ ಅನ್ನು ಭದ್ರಪಡಿಸಿ ಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.
ಸರಕಾರವು 2015ರಿಂದ ಗಣಿಗಾರಿಕೆ ಚೌಕಟ್ಟಿನಲ್ಲಿ ಬದಲಾವಣೆಗಳನ್ನು ಮಾಡುತ್ತಾ ಬಂದಿದ್ದು, ಪಾರದರ್ಶಕ ಹರಾಜು ಪ್ರಕ್ರಿಯೆ, ಪರಿಶೋಧನೆ ಹಾಗೂ ಖನಿಜ ಸಂಪನ್ಮೂಲಗಳತ್ವರಿತ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. 2023 ಮತ್ತು 2025ರ ಎಂ.ಎಂ.ಡಿ.ಆರ್. ಸುಧಾರಣೆಗಳು, ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳು ಸೇರಿದಂತೆ ಪರಿಶೋಧನೆ ಮತ್ತು ಉತ್ಪಾದನಾ ಅವಕಾಶಗಳನ್ನು ಮತ್ತಷ್ಟು ವಿಸ್ತರಿಸಿವೆ.
ಕಲ್ಲಿದ್ದಲು ಬ್ಲಾಕ್‌ಗಳಿಗೆ ಬ್ಯಾಂಕ್ ಖಾತರಿಗಳ ಬದಲಾಗಿ ವಿಮಾ ಸುರಕ್ಷತಾ ಬಾಂಡ್‌ಗಳನ್ನು ಪರಿಚ ಯಿಸಿರುವುದು, ಗಣಿ ಕಾರ್ಯಾಚರಣೆಯನ್ನು ಚುರುಕುಗೊಳಿಸುವ ಹೊಸ ಹರಾಜು ನಿಯಮಗಳು ಮತ್ತು ನಿರ್ಣಾಯಕ ಹಾಗೂ ಕಾರ್ಯತಂತ್ರದ ಖನಿಜ ಬ್ಲಾಕ್‌ಗಳ ಮುಂದಿನ ಹರಾಜುಗಳು ಈ ವಿಶಾಲವಾದ ಸುಧಾರಣಾ ಕ್ರಮಗಳಲ್ಲಿ ಸೇರಿವೆ. ಗಣಿಗಾರಿಕೆಗೆ ಹಣಕಾಸು ಒದಗಿಸುವುದನ್ನು ಸುಲಭಗೊಳಿಸುವುದು ಮತ್ತು ಕಾರ್ಯಾಚರಣೆಯನ್ನು ವೇಗವಾಗಿ ಆರಂಭಿಸುವುದು ಈ ಎಲ್ಲ ಕ್ರಮಗಳ ಮುಖ್ಯ ಉದ್ದೇಶವಾಗಿದೆ.