ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shishir Hegde Column: ಇತಿಹಾಸವನ್ನು ಗಬ್ಬೆಬ್ಬಿಸುವ ದೇಸೀ ‘ಅಪಸ್ವರಾಗಳು’

ದೆಹಲಿಯಲ್ಲಿ ಒಂದಿಷ್ಟು ಇತಿಹಾಸಕಾರರು ಮತ್ತವರ ಶಿಷ್ಯವೃಂದವಿದೆ. ಅವರ ಕೆಲಸವೇ ಅದು. ಆಗೀಗ ಭಾರತದ ಇತಿಹಾಸದ ಯಾವುದಾದರೊಂದು ಚಿಕ್ಕ ಘಟನೆಯನ್ನು ಕೈಗೆತ್ತಿಕೊಳ್ಳುವುದು. ಅದನ್ನು ಇಂದಿನ ಆಧುನಿಕ ನೈತಿಕ ನ್ಯಾಯಾಲಯದಲ್ಲಿ ತಂದು ವಿಚಾರಣೆಗೆ ನಿಲ್ಲಿಸುವುದು. ಆ ಮೂಲಕ ನಮ್ಮ ಇತಿಹಾಸ ವನ್ನು ತಪ್ಪಾಗಿ ಮತ್ತು ಕೆಟ್ಟದಾಗಿ ನಿರೂಪಿಸುವುದು. ಇದು ಬಾಯಿ ಚಟವೋ, ಉದ್ದೇಶ ಪೂರ್ವಕವೋ, ಇವರಿಗೆ ಇದುವೇ ಬದುಕೋ ಅಥವಾ ವಿಕೃತ ಆನಂದವೋ- ತಿಳಿಯದು.

ಶಿಶಿರ ಕಾಲ

ದೆಹಲಿಯಲ್ಲಿ ಒಂದಿಷ್ಟು ಇತಿಹಾಸಕಾರರು ಮತ್ತವರ ಶಿಷ್ಯವೃಂದವಿದೆ. ಅವರ ಕೆಲಸವೇ ಅದು. ಆಗೀಗ ಭಾರತದ ಇತಿಹಾಸದ ಯಾವುದಾದರೊಂದು ಚಿಕ್ಕ ಘಟನೆಯನ್ನು ಕೈಗೆತ್ತಿಕೊಳ್ಳುವುದು. ಅದನ್ನು ಇಂದಿನ ಆಧುನಿಕ ನೈತಿಕ ನ್ಯಾಯಾಲಯದಲ್ಲಿ ತಂದು ವಿಚಾರಣೆಗೆ ನಿಲ್ಲಿಸುವುದು. ಆ ಮೂಲಕ ನಮ್ಮ ಇತಿಹಾಸ ವನ್ನು ತಪ್ಪಾಗಿ ಮತ್ತು ಕೆಟ್ಟದಾಗಿ ನಿರೂಪಿಸುವುದು. ಇದು ಬಾಯಿ ಚಟವೋ, ಉದ್ದೇಶಪೂರ್ವಕವೋ, ಇವರಿಗೆ ಇದುವೇ ಬದುಕೋ ಅಥವಾ ವಿಕೃತ ಆನಂದವೋ- ತಿಳಿಯದು. ಇವರಿಗೆಲ್ಲ ಚಾಲ್ತಿಯಲ್ಲಿರಲು ಪುರುಸೊತ್ತಾದಾಗ ಕಾಂಟ್ರವರ್ಸಿ ಅನಿವಾರ್ಯವೇ ಇರಬೇಕು, ಗೊತ್ತಿಲ್ಲ. ಹಿಂದಿ ನಟಿ, ಬುದ್ಧಿಜೀವಿ ಬೇಗಂ ಸ್ವರಾ ಭಾಸ್ಕರ್ ಮತ್ತಿನ್ನೊಂದು ಅಧಿಕ ಪ್ರಸಂಗದ ಅಪಸ್ವರ ತೆಗೆದು ಸದ್ಯ ಸುದ್ದಿಯಲ್ಲಿದ್ದಾಳೆ !

ನಿಮಗೆ ಸ್ವಲ್ಪ ಹಿನ್ನೆಲೆ ಹೇಳಿ ಬಿಡುತ್ತೇನೆ. 2018ರಲ್ಲಿ ಬಿಡುಗಡೆಯಾದ ಹಿಂದಿ ಚಲನಚಿತ್ರ ‘ಪದ್ಮಾ ವತ್’. ದೊಡ್ಡ ಬಜೆಟ್ಟಿನ ಕಲರ್ ಫುಲ್ ಚಲನಚಿತ್ರ. ಇದು ಐತಿಹಾಸಿಕ ಸಾಕ್ಷ್ಯ ಚಿತ್ರವಲ್ಲ. 13ನೇ ಶತಮಾನದ ಇತಿಹಾಸದ ತುಣುಕುಗಳನ್ನು ಆಧಾರವಾಗಿಟ್ಟುಕೊಂಡು ಸುಮಾರು ಎರಡು ಶತಮಾನದ ನಂತರ ಸೂಫಿ ಕವಿ ಮಲಿಕ್ ಮೊಹಮ್ಮದ್ ಜಯಸಿ ಬರೆದ ಮಹಾಕಾವ್ಯವನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಿದ ಇಪ್ಪತ್ತೊಂದನೇ ಶತಮಾನದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚಲನಚಿತ್ರ. ಹಾಗಾಗಿ ಚಿತ್ರದಲ್ಲಿ ಕಾಣುವ ಹಲವಾರು ಘಟನೆಗಳು ನಿಜವೇ ಆದರೂ ಇದು ಅಂದಿನ ಸ್ಥಿತಿಗತಿಯನ್ನು ತಿಳಿಸುವ ಇತಿಹಾಸ- ಡಾಕ್ಯುಮೆಂಟರಿ ಅಲ್ಲ. ಹಾಗಾದರೆ ಚಲನಚಿತ್ರ ದ ಕಥೆಯಲ್ಲಿ ಏನಾಗುತ್ತದೆ?

ಮೇವಾಡದ (ಇಂದಿನ ರಾಜಸ್ಥಾನ) ರಾಜ ರತನ್ ಸಿಂಗ್. ದೆಹಲಿಯನ್ನು ಅಳುತ್ತಿದ್ದ ಅವುದ್ದೀನ್ ಖಿಲ್ಜಿಗೆ ರತನ್ ಸಿಂಗ್‌ನ ಹೆಂಡತಿ ಪದ್ಮಾವತಿಯ ಅಪ್ರತಿಮ ರೂಪದ ಬಗ್ಗೆ ಕೇಳಿ ತಿಳಿಯುತ್ತದೆ. ಖಿಲ್ಜಿ- ರತನ್ ಸಿಂಗ್‌ನನ್ನು ಮೋಸದಿಂದ ಬಂಧಿಸುತ್ತಾನೆ. ಆಮೇಲೆ ಪದ್ಮಾವತಿ ಅವನನ್ನು ಖಿಲ್ಜಿ ಯಿಂದ ಬಿಡಿಸಿಕೊಂಡು ಬರುತ್ತಾಳೆ. ನಂತರ ಖಿಲ್ಜಿ ಮೇವಾಡದ ಮೇಲೆ ಮತ್ತೆ ದಾಳಿ ಮಾಡುತ್ತಾನೆ. ಇನ್ನೇನು ರತನ್ ಸಿಂಗ್ ಸೋಲುವುದು ಖಚಿತವಾಗುತ್ತಿದ್ದಂತೆ, ಅಳಿದುಳಿದ ಸೈನಿಕರು ಕೊನೆಯ ಹೋರಾಟಕ್ಕೆ ತಯಾರಾಗುತ್ತಾರೆ. ಇತ್ತ ಪದ್ಮಾವತಿ ಮತ್ತು ಹೆಂಗಸರು ಇನ್ನು ಬದುಕುಳಿಯುವು ದಕ್ಕಿಂತ ಸಾಯುವುದೇ ಮೇಲೆಂದು ಸಾಮೂಹಿಕ ದೇಹ ತ್ಯಾಗಕ್ಕೆ ಅಣಿಯಾಗುತ್ತಾರೆ. ಕೊನೆಯಲ್ಲಿ ರಾಣಿ ಪದ್ಮಾವತಿ ಸೂಚ್ಯವಾಗಿ ಬೂದಿ ಯಾಗುತ್ತಾಳೆ- ಖಿಲ್ಜಿಗೆ ಸಿಗುವುದಿಲ್ಲ. ಫಿಲಂ ಮುಗಿಯುತ್ತದೆ.

ಇದನ್ನೂ ಓದಿ: Shishir Hegde Column: ಇದೆಲ್ಲಾ ಕಾಮನ್‌ ಸಾರ್‌, ಸ್ವಲ್ಪ ಅಡ್ಜಸ್ಟ್‌ ಮಾಡ್ಕೊಳ್ಳಿ !

ಯಾವುದೇ ಇಂತಹ ಚಿತ್ರಕಥೆ ಬಿಡುಗಡೆಯಾದಾಗ, ಅದರಲ್ಲೂ ಇಂತಹ ಬಹು ಆಧಾರಿತ ಕಾಲ್ಪನಿಕ ಕಥೆಗಳು ಚಲನಚಿತ್ರವಾದಾಗ ಸತ್ಯ ಸುಳ್ಳಿನ ನಡುವೆ ಒಂದಿಷ್ಟು ಗೊಂದಲವುಂಟಾಗಿ ಬಿಡುತ್ತದೆ. ಘಟನೆಗಳು ಸತ್ಯವಾಗಿರುವುದರಿಂದ ಅದರ ಸುತ್ತ ಹೆಣೆದ ಕಾಲ್ಪನಿಕ ಕಥೆಗಳೂ ಸತ್ಯವೆನಿಸಿ ಬಿಡುತ್ತವೆ. ಇಲ್ಲಿ ಅವುದ್ದೀನ್ ಖಿಲ್ಜಿ ಮೇವಾಡದ ಚಿತ್ತೂರಿನ ಕೋಟೆಯ ಮೇಲೆ ದಾಳಿ ಮಾಡಿದ್ದು ನಿಜ. ಆದರೆ ಪದ್ಮಾವತಿ, ಅವಳ ಸೌಂದರ್ಯ, ಖಿಲ್ಜಿ ಅವಳ ಮೇಲೆ ಆಸೆ ಪಟ್ಟದ್ದು, ಕೊನೆಯಲ್ಲಿ ಬೆಂಕಿಗೆ ಹಾರುವ ಜೌಹರ್ ಅವು ಯಾವುದೂ ಸಾಕ್ಷ ವಿರುವ ಇತಿಹಾಸವಲ್ಲ. ಹಾಗಂತ ಜೌಹರ್‌ ನಂತಹ ಮಹಿಳೆಯರು ಸಾಮೂಹಿಕ ಚಿತೆಗೆ ಹಾರುವ, ಪ್ರಾಣತ್ಯಾಗ ಮಾಡಿರುವ ಘಟನೆ ನಮ್ಮ ನೆಲದಲ್ಲಿ ನಡೆದಿರುವುದು ಸುಳ್ಳಲ್ಲ.

ಹಾಗಾದರೆ ಸ್ವರಾ ಭಾಸ್ಕರ್ ರಗಳೆ ಏನು? ‘ಇತ್ತೀಚಿನ ಒಂದು ಕಾರ್ಯಕ್ರಮದಲ್ಲಿ ನಾನು ಪದ್ಮಾವತ್ ಚಲಚಿತ್ರ ನೋಡುವಾಗ ಯೋಚಿಸುತ್ತಿದ್ದೆ. ಒಂದು ವೇಳೆ ಇಂದು ನಾನೇ ಅತ್ಯಾಚಾರ ಸಂತ್ರಸ್ತೆ ಯಾಗಿದ್ದರೆ, ಈ ಪ್ರಾಣತ್ಯಾಗ ಮಾಡುವ ಘಟನೆ ಏನು ಪಾಠ ಮಾಡುತ್ತದೆ? ಅತ್ಯಾಚಾರ ಸಂತ್ರಸ್ತೆ ಯಾಗಿ ಬದುಕುಳಿಯು ವುದೇ ಅವಮಾನ ಅನಿಸುವುದಿಲ್ಲವೇ? ಗೌರವವನ್ನು ಉಳಿಸಿಕೊಳ್ಳಲು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ನಾನೇ ಹೇಡಿಯೆನಿಸಿಕೊಳ್ಳುವುದಿಲ್ಲವೇ? ನಾವು ಅತ್ಯಾಚಾರ ಆ ಹೆಣ್ಣಿನ ಅಂತ್ಯ ಎಂದು ಹೇಳುತ್ತಿದ್ದೇವೆಯೇ? ಅವರಿಗೆ ಬದುಕುವ ಹಕ್ಕಿಲ್ಲವೇ?’ ಒಟ್ಟಾರೆ ಇಂತಹ ಸಮಾಜ ನಮ್ಮದು, ಇತ್ಯಾದಿ ಅವಳ ಮಾತು- ಸಾರಾಂಶ- ಪುಕಾರು.

Screenshot_3lady

ಅತ್ಯಾಚಾರ ಸಂತ್ರಸ್ತೆ ಯಾವುದೇ ಸಾಮಾಜಿಕ ಅವಮಾನಗಳಿಗೆ ಒಳಗಾಗಬಾರದು, ಮತ್ತು ಆಕೆ ಗೌರವಕ್ಕೆ, ನ್ಯಾಯಕ್ಕೆ, ಮತ್ತು ಹೆಚ್ಚಿನ ಪ್ರೀತಿಗೆ ಅರ್ಹಳು. ದೂಸ್ರಾ ಮಾತೇ ಇಲ್ಲ. ಏಕೆಂದರೆ ಸಮಾಜದೊಳಗಿನ ವಿಕೃತಿಗೆ ಬಲಿಯಾದವಳು ಅವಳು. ಆದರೆ ಇಂಥದ್ದೊಂದು ಲೋಪ ವಿಚಾರ ವನ್ನು ಸಮಾಜ ಒಪ್ಪಿಕೊಳ್ಳ ಬೇಕೆಂದರೆ ಅದಕ್ಕೆ ಇತಿಹಾಸ ಸೊಟ್ಟ ಮಾಡಿ ತಿರುಚಬೇಕೆಂದಿಲ್ಲವಲ್ಲ! ನಮ್ಮ ಹಿಂದಿನ ಮಹಿಳೆಯರು ಹೇಡಿಗಳೆನ್ನಬೇಕೆಂದಿಲ್ಲವಲ್ಲ! ಇಂದಿನ ಅತ್ಯಾಚಾರ ಸಂತ್ರಸ್ತೆಯ ವಿಚಾರ ಹೇಳುವ ಭರದಲ್ಲೂ ಇಂತಹ ಇತಿಹಾಸ ಸುಳ್ಳಾಗಿಸಿ ಹೇಳುವ ಕೆಲಸಗಳು ಅಧಿಕ ಪ್ರಸಂಗ ವಲ್ಲದೆ ಇನ್ನೇನು?

ಜೌಹರ್- ಅಂದಿನ ಚಿತ್ತೋರ್ ಮಹಿಳೆಯರ ನಡೆಯನ್ನು ಪ್ರಶ್ನಿಸುವ ಮೊದಲು ಅವರು ಅಂದು ಎದುರಿಸಿದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ? ಅಂತಹ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಅವರಿಗೆ ಬೇರೆ ಏನಾದರೂ ಪರ್ಯಾಯವಿತ್ತಾ ಎಂದೂ ಕೇಳದಿದ್ದರೆ ಹೇಗೆ?

ಭಾರತದಲ್ಲಿ ರಾಜ ಮನೆತನಗಳು ಎಷ್ಟು ಸಾವಿರ ವರ್ಷದಿಂದ ಇದ್ದುವು ಎಂದು ನಿಖರವಾಗಿ ಹೇಳು ವುದು ಕಷ್ಟ. ಋಗ್ವೇದಕ್ಕಿಂತ ಹಿಂದಿನ ಇತಿಹಾಸ ಯಾರಿಗೂ ಈಗ ಗೊತ್ತಿಲ್ಲ. ಆದರೆ ದಾಖಲೆಗಳೇ ಹೇಳುವಂತೆ, ವೇದಕಾಲದಿಂದಲೂ ಭಾರತೀಯ ಯುದ್ಧಚಿಂತನೆಗಳಲ್ಲಿ ಯುದ್ಧಕ್ಕೂ ಕೆಲವು ನೀತಿ-ನಿಯಮಗಳಿರಬೇಕು ಎಂಬ ಕಲ್ಪನೆ ಇತ್ತು. ಸೈನಿಕನ ಹಿಂದಿನಿಂದ, ಶಸ್ತ್ರವಿಲ್ಲದವನ ಮೇಲೆ, ಶರಣಾಗತನಾದವನ ಮೇಲೆ ದಾಳಿ ಮಾಡುತ್ತಿರಲಿಲ್ಲ.

ಯುದ್ಧ ಮಾಡುವಾಗ ಕೂಡ ದೇಹದಾರ್ಢ್ಯಕ್ಕನುಗುಣವಾಗಿಯೇ ಯುದ್ಧಕ್ಕೆ ಆಯ್ಕೆ ಮಾಡಿಕೊಳ್ಳ ಲಾಗುತ್ತಿತ್ತು. ಸೈನಿಕರನ್ನು ಬಿಟ್ಟು ಉಳಿದವರ ಮೇಲೆ, ಜನಸಾಮಾನ್ಯರ ಮೇಲೆ, ಕೃಷಿ ಬೆಳೆ, ಗದ್ದೆ ಇವುಗಳ ಮೇಲೆ ದಾಳಿ ಮಾಡುತ್ತಿರಲಿಲ್ಲ. ಸೂರ್ಯಾಸ್ತವಾದ ಮೇಲೆ ಯುದ್ಧ ಮಾಡುತ್ತಿರಲಿಲ್ಲ ಇತ್ಯಾದಿ. ಅದೆಲ್ಲದಕ್ಕಿಂತ ಹೆಚ್ಚಾಗಿ ಯಾವುದೇ ರಾಜ, ಅವನ ಸೈನ್ಯ ಯುದ್ಧದಲ್ಲಿ ಸೋತ ನಂತರ ಅಲ್ಲಿ ಯಾರಿಗೂ, ಯಾವುದಕ್ಕೂ ಹೆಚ್ಚಿನ ಹಾನಿ ಮಾಡುತ್ತಿರಲಿಲ್ಲ. ಗೆದ್ದ ರಾಜ ಸೋತ ರಾಜನನ್ನು ಬದಲಿಸುತ್ತಿದ್ದ. ಇಲ್ಲವೇ ಹೆಚ್ಚಾಗಿ ಅದೇ ರಾಜ ಮುಂದುವರಿದು ಗೆದ್ದವನಿಗೆ ಕಪ್ಪ- ಟ್ಯಾಕ್ಸ್ ಕೊಡುವ ಒಪ್ಪಂದವಾಗುತ್ತಿತ್ತು.

ಪ್ರಯಾಗ್‌ರಾಜ್‌ನ ಸಮುದ್ರಗುಪ್ತನ ಶಾಸನಗಳು- ಹೀಗೆ ಹಲವಾರು ಶಾಸನಗಳಲ್ಲಿ ಹೆಚ್ಚಾಗಿ ಸೋತ ರಾಜನನ್ನೇ ಪುನಃ ನೇಮಿಸುವ ಸಾಕ್ಷ್ಯಗಳು ನಮ್ಮ ನೆಲದ ಇತಿಹಾಸದುದ್ದಕ್ಕೂ ಸಿಗುತ್ತದೆ. ಬಹುತೇಕ ಯುದ್ಧಗಳಲ್ಲಿ ಎದುರಿನ ರಾಜನನ್ನು ಕೂಡ ಕೊಲ್ಲುತ್ತಿರಲಿಲ್ಲ. ಹಾಗೆಂದ ಮಾತ್ರಕ್ಕೆ ಭಾರತೀಯ ರಾಜರು ಜನಸಾಮಾನ್ಯರ ಮೇಲೆ ಎಂದೂ ದೌರ್ಜನ್ಯ ಮಾಡಲಿಲ್ಲ ಎನ್ನುವುದು ಸರಿಯಲ್ಲ. ಉದಾಹರಣೆಗೆ, ಚೋಳ ರಾಜೇಂದ್ರನ ಚಾಲುಕ್ಯರ ವಿರುದ್ಧದ ದಾಳಿಯನ್ನು ವಿವರಿಸುವ ಹೊಟ್ಟೂರು ಶಾಸನದಲ್ಲಿ ಮಹಿಳೆಯರು, ಮಕ್ಕಳು ಮತ್ತು ಬ್ರಾಹ್ಮಣರ ಹತ್ಯೆ, ದೇಶದ ಲೂಟಿ ಮತ್ತು ಹೆಣ್ಣುಮಕ್ಕಳನ್ನು ಸೆರೆ ಹಿಡಿದ ವಿಚಾರಗಳಿವೆ.

ಇದು ಎದುರಾಳಿಯ ರಾಜನ ಶಾಸನವಾದ್ದರಿಂದ ಅದರ ಸತ್ಯಾಸತ್ಯತೆಯನ್ನು ಎಚ್ಚರಿಕೆಯಿಂದ ನೋಡಬೇಕು; ಆದರೆ ಭಾರತೀಯ ರಾಜವಂಶಗಳ ನಡುವಿನ ಯುದ್ಧವೂ ಕೆಲವೊಮ್ಮೆ ಭೀಕರ ವಾಗಿತ್ತು ಎಂಬುದನ್ನು ಇದು ತೋರಿಸುತ್ತದೆ.

ಇದೆಲ್ಲ ರಾಜರುಗಳ ಒಳ್ಳೆಯತನ ಎನ್ನುವುದಕ್ಕಿಂತ ಸಾಮಾನ್ಯ ಜ್ಞಾನವಾಗಿತ್ತು. ಒಮ್ಮೆ ಯುದ್ಧದಲ್ಲಿ ಗೆದ್ದ ನಂತರ, ನೆಲ ಅವರದಾದ ನಂತರ ಅಲ್ಲಿ ಏನೇ ಹಾನಿ ಮಾಡಿದರೂ ಅದು ಅವರಿಗೇ ನಷ್ಟ. ಅದರಲ್ಲೂ ವರ್ಕಿಂಗ್ ಕ್ಲಾಸ್- ಜನಸಾಮಾನ್ಯರ ಸಮಾಜವನ್ನು ಹಾಳು ಮಾಡಿಬಿಟ್ಟರೆ ವಶವಾದ ರಾಜ್ಯ ಅಂಗೈ ಹುಣ್ಣಿನಂತೆ ಆಗಿಬಿಡುತ್ತದೆ. ಇಡೀ ಆಡಳಿತವನ್ನು ಬದಲಿಸಬೇಕಾಗುತ್ತದೆ.

ಆಮೇಲೆ ಅಂತರ್ ದಂಗೆಗಳಾಗುತ್ತವೆ, ನಿಭಾಯಿಸಬೇಕು ಇತ್ಯಾದಿ. ಹಾಗಾಗಿ ಅಂದಿನ ಯುದ್ಧಗಳೇ ನಿದ್ದರೂ ರಾಜ್ಯ ವಿಸ್ತಾರಕ್ಕೆ, ಬಲವರ್ಧನೆಗೆ, ಗೌರವಕ್ಕೆ ಇತ್ಯಾದಿ ಕಾರಣಕ್ಕೆ ಆಗಿದ್ದವೇ ಹೊರತು ಲೂಟಿ ಮಾಡಲು, ಶತ್ರು ಸೈನ್ಯದ ಮಕ್ಕಳನ್ನು ಕೊಲ್ಲಲು, ಸಾಮೂಹಿಕ ಅತ್ಯಾಚಾರ, ಧ್ವಂಸ ಮಾಡಲು ಯುದ್ಧಗಳಾಗುತ್ತಿರಲಿಲ್ಲ. ಯಾವುದೇ ಎರಡು ಭಾರತೀಯ ರಾಜರುಗಳ ನಡುವಿನ ಯುದ್ಧದಲ್ಲಿ ಸಾಮೂಹಿಕ ಬಲಾತ್ಕಾರ, ಮಕ್ಕಳ- ಜನಸಾಮಾನ್ಯರ ನರಮೇಧ ನಡೆದ ಉದಾಹರಣೆ ಗಳೆಷ್ಟಿವೆ?! ರಾಜರುಗಳ ಕ್ರೌರ್ಯ ಸಾಮರ್ಥ್ಯ ಭಿನ್ನವೇ ಇರಬಹುದು. ಕ್ರೂರ ರಾಜರು ಇಲ್ಲಿ ಆಗಿರಲೇ ಇಲ್ಲವೆಂದಲ್ಲ.

ಅಶೋಕನ ಕಳಿಂಗ ಯುದ್ಧದಲ್ಲಿ? ಆದರೆ ಯುದ್ಧ ಯುದ್ಧಭೂಮಿಗಷ್ಟೇ ಸೀಮಿತವಾಗಿರುತ್ತಿತ್ತು. ಯುದ್ಧ ಮುಗಿದ ಮೇಲೆ- ಯುದ್ಧ ಹಾನಿಯ ಪರಿಣಾಮಗಳಿದ್ದರೂ ಅಲ್ಲಿ ಬದುಕು ಮುನ್ನಡೆಯು ತ್ತಿತ್ತು. ಆದರೆ ಇದೆಲ್ಲ ತೀವ್ರ ಬದಲಾದದ್ದು, ರಣ ಭೀಕರವಾಗಿದ್ದು ಇಸ್ಲಾಂ ದಾಳಿಕೋರರ ಲೂಟಿ ಶುರುವಾದ ನಂತರ. ಹಂಪಿಗೆ ಒಮ್ಮೆ ಹೋಗಿ ನೋಡಿದರೆ ಅಲ್ಲಿ ಕಾಣುವ ಅವಶೇಷಗಳು ಅಂದಿನ ಸಾಮ್ರಾಜ್ಯದ ವೈಭವವನ್ನು ಕಟ್ಟಿಕೊಟ್ಟರೆ, ಅದೇ ಅವಶೇಷಗಳು ಅಂದಿನ ಬಹಮನಿ ದಾಳಿಕೋರರ ಕ್ರೌರ್ಯ ಮತ್ತು ಧ್ವಂಸ ಕಲ್ಪಿಸಿ ಕಣ್ಣಂಚಿನಲ್ಲಿ ಹನಿ ಜಿನುಗುವಂತೆ ಪೀಡಿಸುತ್ತವೆ.

ಎಲ್ಲಿ ಇಸ್ಲಾಂ ಲೂಟಿಕೋರರ ದಾಳಿಯಾಗಿದೆಯೋ ಬಹುತೇಕ ಅಲ್ಲ ನರಮೇಧ, ಸಾಮೂಹಿಕ ಅತ್ಯಾಚಾರಗಳು ಲಕ್ಷ-ಲಕ್ಷದ ಲೆಕ್ಕದಗಿವೆ. ಅಷ್ಟೆ ಕ್ರೌರ್ಯವನ್ನೆದುರಿಸಿಯೂ ಭಾರತ ಉಳಿದು ಕೊಂಡಿರುವುದೇ ಆಶ್ಚರ್ಯ. ಅಷ್ಟು ಕ್ರೌರ್ಯ, ನರಮೇಧಗಳು. ಇಸ್ಲಾಂ ದಾಳಿಕೋರರು ತೈಮೂರ್, ನಾದಿರ್ ಶಾಹ್, ತುಘಲಕ್, ಟಿಪ್ಪು, ಬಾಬರ್- ಇವರೆಲ್ಲರ ಕ್ರೌರ್ಯಕ್ಕೆ ಹೋಲಿಕೆಯೇ ಇಲ್ಲ. ಅವರು ಇಲ್ಲಿ ಯುದ್ಧಾನಂತರ ಮಾಡಿದ ಧ್ವಂಸ, ಲೂಟಿ, ಹರಿಸಿದ ರಕ್ತ ಇವುಗಳಿಗೆ ಲೆಕ್ಕವೇ ಇಲ್ಲ.

ಲೆಕ್ಕ ಇಟ್ಟಿದ್ದರೆ ಇಂದು ನಾವು ನೋಡುವ ಇತಿಹಾಸ ಬೇರೆಯದೇ ರೀತಿಯಲ್ಲಿ ಕಾಣಿಸಿರುತ್ತಿತ್ತು. ಅದು ನಮ್ಮ ಕೊರತೆ. ದಾಳಿಕೋರರ ಯುದ್ಧದಲ್ಲಿ ಕೋಟೆ ಪತನವಾಗುವುದು, ಸೋಲುವುದು ಎಂದರೆ ಏನು? ಸೆರೆ, ಗುಲಾಮಗಿರಿ, ಅತ್ಯಾಚಾರ. ಅದಕ್ಕಿಂತ ಸಾವೇ ಸಹ್ಯ ಎಂದೆನಿಸಿದಾಗಲೇ ಅಲ್ಲವೇ ಇಂಥದ್ದೊಂದು ಕೆಲಸಕ್ಕೆ ಮನುಷ್ಯ ಗುಂಪಿನಲ್ಲಿ ಮುಂದಾಗುವುದು? ಈ ಘಟನೆಯನ್ನು ಇಂದಿನ ದಿನಮಾನಸಕ್ಕೆ ಹೋಲಿಸಿ, ‘ಏನೂ ಮಾಡಲಾಗದೆ ಹೋದಾಗ ಅತ್ಯಾಚಾರವನ್ನು ಮಲಗಿ ಅನುಭವಿಸಬೇಕು, ಆಮೇಲೆ ಎದುರಿಸಿ ಬದುಕಬೇಕು. ಬದಲಿಗೆ ಚಿತ್ತೂರ್‌ನ ಹೆಂಗಸರಂತೆ, ಹೇಡಿ ಯಂತೆ ಸಾಯಬಾರದು’ ಎಂದರೆ? ಸ್ವರಾ ಭಾಸ್ಕರ್‌ರಂತಹ ಎಡಬಿಡಂಗಿಗಳಿಗೆ ಏನು ಹೇಳಬೇಕು? ಜೌಹರ್ ಅನ್ನು ವೈಭವೀಕರಿಸುವುದು ತಪ್ಪು. ಆದರೆ ಇದೆಲ್ಲದರ ಹಿಂದಿರುವ ನಿಜ ಇತಿಹಾಸವನ್ನೇ ಬಿಟ್ಟು, ಹೀಗೆ ತಿರುಪಿ ಬಾಯಿಗೆ ಬಂದಂತೆ ಬಡಬಡಾಯಿಸಿದರೆ?

ಸ್ವರಾ ಭಾಸ್ಕರ್, ದೆಹಲಿಯ ಇನ್ನುಳಿದ ಎಡ-ಬಿಡಂಗಿ ಇತಿಹಾಸಕಾರರ ಹೊಟ್ಟೆ ಪಾಡು ಇದು ಎಂದೆನಿಸುತ್ತದೆ. ಇಂತಹ ತಲೆಬುಡವಿಲ್ಲದ ಸೀವಾದಿಗಳ ದೊಡ್ಡ ದಂಡೇ ಇದೆ. ಅವರದೇ ಎರಡು ಮಾತು ಒಂದಕ್ಕೊಂದು ಹೋಲಿಕೆಯಾಗುವುದಿಲ್ಲ. ಉದಾ, ಹೀಗೆ ಇತಿಹಾಸ ತಿರುಚುವ ಅವರೇ ಇನ್ನೊಂದು ವೇದಿಕೆಯಲ್ಲಿ ಕೂತು ಹೆಣ್ಣು- ಅವಳ ದೇಹ- ಅವಳ ಸ್ವಾತಂತ್ರ್ಯ ಎಂದು ಭಾಷಣ ಕುಟ್ಟುತ್ತಾರೆ. ಆಮೇಲೆ ಮೇವಾಡದ ಮಹಿಳೆಯರು ಅತ್ಯಾಚಾರ, ಆಮೇಲೆ ಅಂದಿನ ಭೀಕರತೆಗೆ ಹೆದರಿ ಜೀವ ಬಿಡುವುದೇ ಒಳಿತು ಎನ್ನುವ ಸ್ಥಿತಿಯಲ್ಲಿ ದೇಹತ್ಯಾಗ ಮಾಡಿದವರು ಹೇಡಿಗಳಾಗಿ ಬಿಡುತ್ತಾರೆ! ಅವರ ದೇಹದ ಮೇಲೆ ಅವರಿಗೆ ಹಕ್ಕಿಲ್ಲ ಎಂಬ ವಿತಂಡ ವರಸೆ.

ಆದರೆ ಸ್ವರಾ ಭಾಸ್ಕರ್ ಖಂಡಿಸುವ ಧಾವಂತದಲ್ಲಿ ಅವಳು ಹೇಳಿದ್ದೇ ಸರಿಯಿಲ್ಲ ಎಂದು ಹೇಳು ತ್ತಿಲ್ಲ. ಭಾರತ ತನ್ನ ಸಮಾಜದ ಲೈಂಗಿಕ ಹಿಂಸೆಯ ಕ್ರೂರ ವಾಸ್ತವದೊಂದಿಗೆ ಹೋರಾಡುತ್ತಿದೆ ಎನ್ನುವುದನ್ನು ಅಂಕೆ ಸಂಖ್ಯೆಗಳೇ ಹೇಳುತ್ತವೆ. ಸರಕಾರೀ ವರದಿಯ ಪ್ರಕಾರ 2023ರಲ್ಲಿ 29,670 ಅತ್ಯಾಚಾರಗಳು ದಾಖಲಾಗಿವೆ. ದಾಖಲಾಗದವು ಇನ್ನೆಷ್ಟೋ. ಪ್ರತಿಯೊಬ್ಬ ಅತ್ಯಾಚಾರ ಸಂತ್ರಸ್ತೆಗೂ ನ್ಯಾಯಯುತವಾಗಿ, ಗೌರವಯುತವಾಗಿ ಬದುಕನ್ನು ಕಟ್ಟಿಕೊಳ್ಳುವುದು ಹಕ್ಕು. ಅದಕ್ಕೆ ಬೇಕಾದ ವಾತಾವರಣ, ವ್ಯವಸ್ಥೆ, ಮನೋಭಾವ ಸಮಾಜದಲ್ಲಿ ಬೇಕು. ಅದಕ್ಕಿಂತ ಹೆಚ್ಚಾಗಿ ಒಂದೇ ಒಂದು ಅತ್ಯಾಚಾರವೂ ಸಹ್ಯವಲ್ಲ. ಅತ್ಯಾಚಾರ ಹೆಚ್ಚಾಗಿ ಸಮಾಜದ ಗಂಡಿನ ಪಾಲಿನ ವಿಕೃತಿ. ಯಾವುದೇ ನಾಗರೀಕ ಸಮಾಜದಲ್ಲಿ ಅತ್ಯಾಚಾರ ಸೊನ್ನೆಯಾಗಬೇಕು. ಸರಿಯಾದ ಸಮಾಜದಲ್ಲಿ ಅತ್ಯಾಚಾರಿ ಯ ಬದುಕು ಘೋರವಾಗಬೇಕೆ ವಿನಃ ಸಂತ್ರಸ್ತೆಯದಲ್ಲ.

ಆದರೆ ಇಂತಹ ವಾಸ್ತವವನ್ನು ಹೇಳಲು ಇತಿಹಾಸವನ್ನು ತಮ್ಮಿಷ್ಟದಂತೆ ಬಳಸುವುದು ಸರಿಯಲ್ಲ. ಇಂದು ಒಬ್ಬ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಅವಳು ಬದುಕುಳಿಯುವ ಬದಲು ಸಾಯಬೇಕಿತ್ತು ಎನ್ನುವುದು ಅನಾಗರಿಕ. ಅಂತೆಯೇ ಚಿತ್ತೋರ್ ಅಥವಾ ಜೌಹರ್ ವಿಷಯ ಬಂದಾಗ, ಇತಿಹಾಸದ ವಿಷಯ ಬಂದಾಗ, ಅದನ್ನು ವಿವೇಚಿಸದೆ ಅಂದಿನ ಹೆಣ್ಣಿನ ಹೇಡಿತನ ಎಂದು ಹೇಳುವುದು ಕೂಡ ಅಷ್ಟೇ ಅನಾಗರಿಕ, ಅಸಂವೇದಿ. ಇಸ್ಲಾಂ ದಾಳಿಕೋರ ಸುಲ್ತಾನ್‌ಗಳು ಮುತ್ತಿಗೆ ಹಾಕಿ ಕೋಟೆಯ ಬಾಗಿಲು ಮುರಿದಾಗ ಅವರ ಪರಿಸ್ಥಿತಿ ಹೇಗಿರಬಹುದು ಎನ್ನುವುದನ್ನು ಗೌರವಯುತವಾಗಿಯೇ ಅರ್ಥಮಾಡಿ ಕೊಳ್ಳುವುದು ನಮ್ಮ ಇಂದಿನ ಹೊಣೆಗಾರಿಕೆ.

ಇತಿಹಾಸವನ್ನು ಯಾವತ್ತೂ ಇದ್ದ ಹಾಗೆಯೇ ಓದಬೇಕು- ನೋಡಬೇಕು. ಅದು ಬಿಟ್ಟು ನಮ್ಮ ಬಾಯಿ ತೆವಲಿಗೆ, ಅಗ್ಗದ ಪ್ರಚಾರಕ್ಕೆ ಹಿಂದೆ ಆದವರನ್ನು ಇಂದಿನ ಸೈದ್ಧಾಂತಿಕ ಸಂಘರ್ಷಗಳಿಗೆ ಎಳೆದು ತರಬಾರದು. ಅವರು ಬದುಕಿದ್ದ ಕಾಲದ ಐತಿಹಾಸಿಕ ಪರಿಸ್ಥಿತಿಗಳನ್ನು ಹಾಗೆಯೇ ಅರ್ಥ ಮಾಡಿಕೊಳ್ಳುವುದು ನಾವು ನಮ್ಮ ಪೂರ್ವಜರಿಗೆ ತೋರಬಹುದಾದ ಕನಿಷ್ಠ ಸೌಜನ್ಯ. ಇತಿಹಾಸ ಯಾರನ್ನೂ ಮೆಚ್ಚಿಸಲಿಕ್ಕೆ ಇರುವುದು ಅಲ್ಲ. ಅಥವಾ ನಾವೇ ಶ್ರೇಷ್ಠ ಅಥವಾ ಅನಾಗರಿಕರಾಗಿದ್ದೆವು ಎಂದು ವಾದ ಮಾಡಲು ಕೂಡ ಅಲ್ಲ.

ವೈಯಕ್ತಿಕ ಸಿದ್ಧಾಂತಗಳನ್ನು ದೃಢಪಡಿಸಲು ಇತಿಹಾಸದ ಬೇಕಾದ ತುಣುಕನ್ನು ಮಾತ್ರ ಎತ್ತಿ ಹೇಳುವುದು, ಸಾಕ್ಷ್ಯವಾಗಿ ಬಳಸಿಕೊಳ್ಳುವುದು ನಾವೇ ನಮಗೆ ಮಾಡಿಕೊಳ್ಳಬಹುದಾದ ದ್ರೋಹ ವಲ್ಲದೆ ಇನ್ನೇನು? ಇತಿಹಾಸವನ್ನು ನಮ್ಮ ಸಿದ್ಧಾಂತಕ್ಕೆ ಸಾಕ್ಷಿಯಾಗಿಸಿಕೊಳ್ಳುವುದಕ್ಕಿಂತ ಮೊದಲು, ಅದು ಏನು ಹೇಳುತ್ತದೆ ಎಂಬುದನ್ನು ಕೇಳುವಷ್ಟು ಪ್ರಾಮಾಣಿಕತೆ ನಮಗಿರಬೇಕು. ನಮ್ಮ ಪೂರ್ವಜರು ದೇವತೆಗಳಾಗಿರಲಿಲ್ಲ; ದಾನವರೂ ಆಗಿರಲಿಲ್ಲ. ಅವರು ನಮ್ಮಂತೆಯೇ ಅವರವರ ಕಾಲದ ಮನುಷ್ಯರಾಗಿದ್ದರು. ಅಷ್ಟೆ.

ಶಿಶಿರ್‌ ಹೆಗಡೆ

View all posts by this author