ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ಇಂದಿರಾ ನೂಯಿ ಸೀರೆಯುಟ್ಟ ಸಿಂಹಿಣಿಯ ಅಪ್ರತಿಮ ಯಾನ

ಒಮ್ಮೆ ಪ್ರಮುಖ ಇಂಟರ್‌ವ್ಯೂ ಒಂದಕ್ಕೆ ಅವರು ಕಷ್ಟಪಟ್ಟು ಉಳಿಸಿದ 50 ಡಾಲರ್‌ನಲ್ಲಿ ಅಗ್ಗದ ಸೂಟ್ ಖರೀದಿಸಿ ಧರಿಸಿದ್ದರು. ಆದರೆ ಅದು ಅವರಿಗೆ ಕಿಂಚಿತ್ತೂ ಒಪ್ಪುತ್ತಿರಲಿಲ್ಲ, ಇತರ ಅಭ್ಯರ್ಥಿಗಳ ಮುಂದೆ ಅವರು ನಗೆಪಾಟಲಿಗೀಡಾದರು. ಆ ದಿನ ಕಣ್ಣೀರು ಹಾಕುತ್ತಾ ಮನೆಗೆ ಬಂದ ಇಂದಿರಾ ಅವರಿಗೆ ಅವರ ಮೆಂಟರ್ ನೀನು ನೀನಾಗಿಯೇ ಇರು ಎಂದು ನೀಡಿದ ಸಲಹೆ ಅವರ ಜೀವನದ ಮಂತ್ರವಾಯಿತು.

ಒಂದೊಳ್ಳೆ ಮಾತು

ಜಗತ್ತಿನ ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಇಂದಿರಾ ನೂಯಿ ಅವರ ಯಶಸ್ಸಿನ ಹಿಂದೆ ಕೇವಲ ಅಂಕಿಅಂಶಗಳಿಲ್ಲ, ಬದಲಾಗಿ ಅಚಲವಾದ ಆತ್ಮವಿಶ್ವಾಸ ಮತ್ತು ಭಾರತೀಯ ಸಂಸ್ಕಾರದ ಬೇರುಗಳಿವೆ. ಚೆನ್ನೈನ ಮಧ್ಯಮವರ್ಗದ ಕುಟುಂಬದಿಂದ ಜಾಗತಿಕ ಕಾರ್ಪೊರೇಟ್ ಜಗತ್ತಿನ ಶಿಖರದವರೆಗೆ ಅವರು ನಡೆಸಿದ ಹಾದಿ ಪ್ರತಿಯೊಬ್ಬರಿಗೂ ದಾರಿದೀಪ.

ಇಂದಿರಾ ಅವರ ನಾಯಕತ್ವದ ಗುಣಗಳು ಮೊಳಕೆಯೊಡೆದಿದ್ದು ಅವರ ಮನೆಯ ಊಟದ ಮೇಜಿನ ಮೇಲೆ. ಅವರ ತಾಯಿ ಶಾಂತಾ ಅವರು ಪ್ರತಿದಿನ ರಾತ್ರಿ ಇಂದಿರಾ ಮತ್ತು ಅವರ ಸಹೋದರಿಗೆ ಒಂದು ಸವಾಲು ನೀಡುತ್ತಿದ್ದರು: ನೀವು ಈ ದೇಶದ ಪ್ರಧಾನಮಂತ್ರಿಯಾದರೆ, ಇಂದಿನ ಈ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತೀರಿ? ಎಂಬ ಪ್ರಶ್ನೆಗೆ ಇಬ್ಬರೂ ಭಾಷಣ ಸಿದ್ಧಪಡಿಸಬೇಕಿತ್ತು.

ಈ ಅಭ್ಯಾಸವು ಇಂದಿರಾ ಅವರಲ್ಲಿ ಚಿಕ್ಕ ವಯಸ್ಸಿನ ಜಗತ್ತನ್ನು ನೋಡುವ ದೃಷ್ಟಿಕೋನ ವನ್ನು ಬದಲಿಸಿತು. ಅಂದು ಮನೆಯೊಳಗೆ ಮಾಡಿದ ಭಾಷಣಗಳೇ ಮುಂದೆ ವಿಶ್ವದ ದೊಡ್ಡ ವೇದಿಕೆಗಳಲ್ಲಿ ಅವರು ಅಬ್ಬರಿಸಲು ನಾಂದಿ ಹಾಡಿದವು.

ಇದನ್ನೂ ಓದಿ: ‌Roopa Gururaj Column: ಅಂಡಮಾನ್‌ ಜರವಾ ಬುಡಕಟ್ಟಿನವರ ಅಶ್ವಿನಿ ದೇವತೆ ಡಾ.ರತನ್‌ ಚಂದ್ರಕರ್

22ನೇ ವಯಸ್ಸಿನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದಾಗ ಅವರ ಕೈಲಿದ್ದಿದ್ದು ಕೇವಲ 500 ಡಾಲರ್ ಮತ್ತು ಕಣ್ಣ ತುಂಬಾ ಕನಸುಗಳು. ಫೀಸು ಕಟ್ಟಲು ಹಣವಿಲ್ಲದೆ, ರಾತ್ರಿ ಪಾಳಿಯಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡಿದರು.

ಒಮ್ಮೆ ಪ್ರಮುಖ ಇಂಟರ್‌ವ್ಯೂ ಒಂದಕ್ಕೆ ಅವರು ಕಷ್ಟಪಟ್ಟು ಉಳಿಸಿದ 50 ಡಾಲರ್‌ನಲ್ಲಿ ಅಗ್ಗದ ಸೂಟ್ ಖರೀದಿಸಿ ಧರಿಸಿದ್ದರು. ಆದರೆ ಅದು ಅವರಿಗೆ ಕಿಂಚಿತ್ತೂ ಒಪ್ಪುತ್ತಿರಲಿಲ್ಲ, ಇತರ ಅಭ್ಯರ್ಥಿಗಳ ಮುಂದೆ ಅವರು ನಗೆಪಾಟಲಿಗೀಡಾದರು. ಆ ದಿನ ಕಣ್ಣೀರು ಹಾಕುತ್ತಾ ಮನೆಗೆ ಬಂದ ಇಂದಿರಾ ಅವರಿಗೆ ಅವರ ಮೆಂಟರ್ ನೀನು ನೀನಾಗಿಯೇ ಇರು ಎಂದು ನೀಡಿದ ಸಲಹೆ ಅವರ ಜೀವನದ ಮಂತ್ರವಾಯಿತು.

ಮುಂದಿನ ಇಂಟರ್‌ವ್ಯೂಗೆ ಅವರು ಧೈರ್ಯದಿಂದ ತಮ್ಮ ಸಂಸ್ಕೃತಿಯ ಸಂಕೇತವಾದ ರೇಷ್ಮೆ ಸೀರೆ ಉಟ್ಟು ಹೋದರು. ಅಲ್ಲಿ ಅವರ ಬಟ್ಟೆಯ ಬಣ್ಣಕ್ಕಿಂತ ಅವರ ಬುದ್ಧಿವಂತಿಕೆ ಯ ಹೊಳಪು ಸಂದರ್ಶಕರನ್ನು ಬೆರಗುಗೊಳಿಸಿತು. ಅಂದು ಅವರು ಗೆದ್ದಿದ್ದು ಕೇವಲ ಕೆಲಸವನ್ನಲ್ಲ, ಬದಲಾಗಿ ಜಗತ್ತಿನ ಎದುರು ತಮ್ಮ ಅಸ್ತಿತ್ವವನ್ನು.

ಸಿಇಒ ಕಿರೀಟ ಮತ್ತು ತಾಯಿಯ ಪಾಠ: 2006ರಲ್ಲಿ ಪೆಪ್ಸಿಕೋದ ಸಿಇಒ ಆಗಿ ನೇಮಕ ಗೊಂಡ ದಿನ, ಅತ್ಯಂತ ಸಂಭ್ರಮದಿಂದ ಮನೆಗೆ ಓಡಿ ಬಂದರು. ಆದರೆ ಮನೆಯೊಳಗೆ ಕಾಲಿಡುತ್ತಿದ್ದಂತೆ ಅವರ ತಾಯಿ, ಮೊದಲು ಹೋಗಿ ಹಾಲು ತಗೊಂಡು ಬಾ ಎಂದರು.

ಇಂದಿರಾ ಅವರು ಅಸಮಾಧಾನದಿಂದ ಹಾಲು ತಂದು, ಅಮ್ಮಾ ನಾನಿಂದು ಪೆಪ್ಸಿಕೋದ ಸಿಇಒ ಆಗಿದ್ದೇನೆ, ಆ ಸಂಭ್ರಮ ನಿನಗೆ ಬೇಡವೇ? ಎಂದು ಕೇಳಿದರು. ಆಗ ಅವರ ತಾಯಿ, ನೀನು ಆಫೀಸಿನಲ್ಲಿ ಸಿಇಒ ಇರಬಹುದು, ಆದರೆ ಮನೆಯೊಳಗೆ ಕಾಲಿಟ್ಟಾಗ ಮೊದಲು ಮಗಳು, ಹೆಂಡತಿ ಮತ್ತು ತಾಯಿ. ಆ ಸಿಇಒ ಕಿರೀಟವನ್ನು ಗ್ಯಾರೇಜ್‌ನ ಬಿಟ್ಟು ಒಳಗೆ ಬಾ ಎಂದರು. ಈ ಘಟನೆ ಇಂದಿರಾ ಅವರಿಗೆ ಅಧಿಕಾರಕ್ಕಿಂತ ಕರ್ತವ್ಯ ಮತ್ತು ವಿನಯ ದೊಡ್ಡದು ಎಂದು ಕಲಿಸಿತು.

ಪೆಪ್ಸಿಕೋದ ಚುಕ್ಕಾಣಿ ಹಿಡಿದಾಗ ಕಂಪನಿ ಲಾಭದತ್ತ ಸಾಗುತ್ತಿದ್ದರೂ, ಇಂದಿರಾ ಅವರಿಗೆ ಸಮಾಜದ ಆರೋಗ್ಯದ ಚಿಂತೆಯಿತ್ತು. ಅವರು ಪೆಪ್ಸಿಕೋವನ್ನು ಕೇವಲ ‘ಜಂಕ್ ಫುಡ್’ ಕಂಪನಿಯನ್ನಾಗಿ ಉಳಿಸಲು ಇಷ್ಟಪಡಲಿಲ್ಲ. ಟ್ರೋಪಿಕಾನಾ ಮತ್ತು ಕ್ವೇಕರ್ ಓಟ್ಸ್‌ನಂತಹ ಆರೋಗ್ಯಕರ ಉತ್ಪನ್ನಗಳತ್ತ ಗಮನ ಹರಿಸಿದಾಗ ವಾಲ್‌ಸ್ಟ್ರೀಟ್‌ನ ದಿಗ್ಗಜರು ಆಕೆಯನ್ನು ಟೀಕಿಸಿದರು.

ಹೆಣ್ಣುಮಗಳೊಬ್ಬಳು ಕಂಪನಿಯನ್ನು ಮುಳುಗಿಸುತ್ತಿದ್ದಾಳೆ ಎಂದು ಹೀಯಾಳಿಸಿದರು. ಆದರೆ ಇಂದಿರಾ ಅಳುಕಲಿಲ್ಲ. ಅವರು ಅಽಕಾರದಿಂದ ಕೆಳಗಿಳಿಯುವಾಗ ಪೆಪ್ಸಿಕೋ ಕಂಪನಿಯ ವಾರ್ಷಿಕ ಆದಾಯ 35 ಬಿಲಿಯನ್‌ನಿಂದ 63.5 ಬಿಲಿಯನ್ ಡಾಲರ್‌ಗೆ ಏರಿತ್ತು!

ಇಂದು ಅವರ ಚಿತ್ರ ಅಮೆರಿಕಾದ ಸ್ಮಿತ್ಸೋನಿಯನ್ ನ್ಯಾಷನಲ್ ಪೋರ್ಟ್ರೇಟ್ ಗ್ಯಾಲರಿ ಯಲ್ಲಿ ಸ್ಥಾನ ಪಡೆದಿದೆ. ಕ್ರಿಕೆಟ್ ಮೇಲಿನ ಅಪಾರ ಪ್ರೀತಿಯಿಂದ ಐಸಿಸಿಯ ಮೊದಲ ಮಹಿಳಾ ಸ್ವತಂತ್ರ ನಿರ್ದೇಶಕಿಯಾಗಿಯೂ ಅವರು ಕೆಲಸ ಮಾಡುತ್ತಿದ್ದಾರೆ.

ಇಂದಿನ ದಿನಗಳಲ್ಲಿ ಭಾರತೀಯರಾದ ನಾವೇ ನಮ್ಮ ಸಂಸ್ಕೃತಿ, ಪದ್ಧತಿ , ತೊಡುಗೆಗಳನ್ನು ಗೌರವಿಸದೆ ಅತ್ತ ಪಾಶ್ಚಾತ್ಯ ಸಂಸ್ಕೃತಿಯನ್ನೂ ಸಂಪೂರ್ಣವಾಗಿ ನಮ್ಮದಾಗಿಸಿಕೊಳ್ಳ ಲಾಗದೆ ತ್ರಿಶಂಕುಸ್ವರ್ಗದಲ್ಲಿ ಇದ್ದೇವೆ. ಎಲ್ಲಿ ನೋಡಿದರೂ ಅಂಧ ಅನುಕರಣೆಯ ಟೊಳ್ಳು ಜೀವನವನ್ನು ನಡೆಸುತ್ತಿರುವ ಹಾದಿ ತಪ್ಪಿದ ಯುವ ಸಮುದಾಯ.

ವಿದ್ಯೆಗಿಂತ, ಸಾಮಾಜಿಕ ಜಾಲತಾಣ ರೀಲ್ಸ್‌ʼಗಳಲ್ಲಿ ಕಳೆದು ಹೋಗಿರುವ ಜನರು. ಒಳ್ಳೆಯ ವಿದ್ಯೆ, ನಮ್ಮ ಭಾರತೀಯ ಸಂಸ್ಕಾರ ಇವುಗಳ ಬೀಜವನ್ನು ಮಕ್ಕಳಲ್ಲಿ ಬಿತ್ತದಿದ್ದರೆ ಒಂದು ಉತ್ತಮ ಸಮಾಜವನ್ನು ನಿರೀಕ್ಷಿಸುವುದು ಕೂಡ ಕನಸಾಗುತ್ತದೆ.

ರೂಪಾ ಗುರುರಾಜ್

View all posts by this author