ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prakash Shesharaghavachar Column: ಆತ್ಮಾವಲೋಕನ ಮಾಡಿಕೊಳ್ಳಿ, ಆತ್ಮವಂಚನೆಯನ್ನಲ್ಲ

ಸೀಟು ಹಂಚಿಕೆಯ ಗೊಂದಲ ಬಗೆಹರಿಸಲು ಮಹಾಘಟಬಂಧನ ವಿಫಲವಾಯಿತು. ಐದಾರು ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಪರಸ್ಪರ ಕಾದಾಡಿದರು. ಇದಕ್ಕೆ ವ್ಯತಿರಿಕ್ತವಾಗಿ ಸ್ವತಃ ಅಮಿತ್ ಶಾ ಮೂರು ದಿನ ಪಟನಾದಲ್ಲಿ ಝಾಂಡಾ ಹೂಡಿ ಬಿಜೆಪಿಯಲ್ಲಿನ ಅಸಮಾಧಾನಿತ ರನ್ನು ಮತ್ತು ಬಂಡಾಯವೆದಿದ್ದ ಅಭ್ಯರ್ಥಿಗಳನ್ನು ಕರೆದು ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿದರು.

ಪ್ರಕಾಶಪಥ

ಪ್ರಕಾಶ್‌ ಶೇಷರಾಘವಾಚಾರ್

ಮೋದಿ ಮತ್ತು ಅಮಿತ್ ಶಾರಂಥ ಆಕ್ರಮಣಕಾರಿ ನಾಯಕರನ್ನು ಎದುರಿಸುವುದು ಕಠಿಣ ವಾದ ಸವಾಲು. ಅವರನ್ನು ಮಣಿಸಲು ದಿನದ ೨೪ ಗಂಟೆ ಕೆಲಸ ಮಾಡಿದರೂ ಸಾಲದು. ಅಂಥದ್ದರಲ್ಲಿ ರಾಹುಲ್ ಗಾಂಧಿಯವರು ಪದೇ ಪದೆ ವಿದೇಶ ಪ್ರವಾಸಕ್ಕೆ ತೆರಳಿ ಅರೆಕಾಲಿಕ ರಾಜಕಾರಣಿಯ ಹಾಗೆ ರಾಜಕೀಯದಲ್ಲಿ ತೊಡಗಿಸಿಕೊಂಡಿರು ವುದು ಕಾಂಗ್ರೆಸ್‌ನ ಹಿನ್ನಡೆಗೆ ಬಹುಮುಖ್ಯ ಕಾರಣವಾಗಿದೆ.

ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಬಿಹಾರದ ಚುನಾವಣೆಯ ಫಲಿ ತಾಂಶ ಪ್ರಕಟವಾದ ತರುವಾಯ ಸುದ್ದಿ ವಾಹಿನಿಗಳೊಂದಿಗೆ ಮಾತನಾಡುತ್ತಾ, “ವೋಟು ಚೋರಿ ಕೇವಲ ಕಲ್ಪನೆ. ಮತಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದಾಗ 900 ಮತದಾರರನ್ನು ಸ್ಥಳಾಂತರವಾಗಿದ್ದಾರೆ ಎಂದು ಕೈಬಿಡಲಾಗಿತ್ತು.

ನಾವು ಚುನಾವಣಾ ಆಯೋಗಕ್ಕೆ ಸೂಕ್ತ ದಾಖಲೆಯನ್ನು ಸಲ್ಲಿಸಿದ ನಂತರ ಆ ಎಲ್ಲಾ ಹೆಸರನ್ನು ಮತ್ತೆ ಸೇರ್ಪಡೆ ಮಾಡಲಾಯಿತು. ನೀವು ನೆಲಮಟ್ಟದಲ್ಲಿ ಕೆಲಸ ಮಾಡದೆ ಚುನಾವಣೆಯಲ್ಲಿ ಸೋತು ‘ಮತಗಳ್ಳತನವಾಗಿದೆ’ ಎಂದು ಹೇಳಿದರೆ ಅದನ್ನು ಒಪ್ಪಲಾ ಗುವುದಿಲ್ಲ" ಎಂದರು. ಅಸಾದುದ್ದೀನ್ ಓವೈಸಿಗೆ ಅರ್ಥವಾಗಿರುವುದು ರಾಹುಲ್ ಗಾಂಧಿ ಯವರಿಗೆ ಅರ್ಥವಾಗುವುದಿಲ್ಲ.

ಬಿಹಾರ ವಿಧಾನಸಭೆಯ 234 ಸ್ಥಾನಗಳಲ್ಲಿ ಎನ್‌ಡಿಎ ಒಕ್ಕೂಟವು 202 ಸ್ಥಾನಗಳನ್ನು ಬಾಚಿಕೊಂಡು ದಾಖಲೆಯನ್ನು ನಿರ್ಮಿಸಿತು. ಮಹಾಘಟಬಂಧನವು ತಿಣುಕಾಡಿ ೩೫ ಸ್ಥಾನಗಳನ್ನು ಪಡೆಯಿತು. “ನವೆಂಬರ್ ೧೮ರಂದು ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವೆ" ಎಂದು ಘೋಷಿಸಿದ್ದ ತೇಜಸ್ವಿ ಯಾದವ್ ೨೫ ಸೀಟು ಗೆದ್ದು ಕೂದಲೆಳೆಯ ಅಂತರದಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕನ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Prakash Raghavachar Column: ಆಳುಗರನ್ನು ಅಹಂಕಾರ, ಅಟ್ಟಹಾಸ ಅಮರಿಕೊಂಡರೆ...

2024ರ ಲೋಕಸಭಾ ಚುನಾವಣೆಯ ನಂತರ ಮೋದಿ ಮ್ಯಾಜಿಕ್ ತಗ್ಗಿದೆ ಎಂದು ವಿಶ್ಲೇಷಣೆ ಮಾಡುತ್ತಿದ್ದವರ ಬಾಯಿ ಮುಚ್ಚಿಸುವಂತೆ ಬಿಜೆಪಿಯು ಹರಿಯಾಣ, ಮಹಾರಾಷ್ಟ್ರ, ದೆಹಲಿಯ ನಂತರ ಈಗ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿ ‘ಮೋದಿ ಹವಾ ಬಲವಾಗಿದೆ, ಅವರ ಜನಪ್ರಿಯತೆಯ ಮೋಡಿ ಕುಗ್ಗಿಲ್ಲ’ ಎಂಬು ದನ್ನು ಸಾಬೀತುಪಡಿಸಿದೆ.

ಲೋಕಸಭಾ ಚುನಾವಣೆಯಲ್ಲಿ 99 ಸ್ಥಾನಗಳಿಸಿ ದೇಶವನ್ನೇ ಗೆದ್ದ ಹಮ್ಮಿನಲ್ಲಿದ್ದ ಕಾಂಗ್ರೆಸ್‌ ನ ಶಕ್ತಿಯು ಚುನಾವಣೆಯಿಂದ ಚುನಾವಣೆಗೆ ಕುಸಿದಿದೆ; ಹೀಗಾಗಿ, ತನ್ನ ಸೋಲಿನ ಚರ್ಚೆಯ ಹಾದಿ ತಪ್ಪಿಸಲು ಅದು ಹುಟ್ಟುಹಾಕಿರುವ ತಂತ್ರವೇ ‘ವೋಟು ಚೋರಿ’ಯ ಆರೋಪ ವಾಗಿದೆ.

ಇಪ್ಪತ್ತು ವರ್ಷಗಳಿಂದ ಬಿಹಾರದ ಅನಭಿಷಿಕ್ತ ದೊರೆಯಾಗಿ ವಿಜೃಂಭಿಸುತ್ತಿರುವ ನಿತೀಶ್ ಕುಮಾರ್ ಮತ್ತೆ ತಮ್ಮ ಜನಪ್ರಿಯತೆಯ ಕಮಾಲ್ ತೋರಿಸಿದರು. ಅಧಿಕಾರ ವಿರೋಧಿ ಅಲೆಯು ಇಲ್ಲವಾಗಿ ಅಧಿಕಾರಸ್ಥರ ಪರವಾದ ಅಲೆಯಾಗಿ ಜನಾದೇಶ ಪರಿವರ್ತನೆ ಯಾಗಿತ್ತು. ಎನ್‌ಡಿಎ ಆರಂಭಿಕ ಮುನ್ನಡೆಯನ್ನು ಸಾಧಿಸಿದ ಕೂಡಲೇ ಕಾಂಗ್ರೆಸ್ ವಕ್ತಾರ ಪವನ್ ಖೇರಾ “ಖಂಡಿತವಾಗಿಯೂ ಜ್ಞಾನೇಶ್ ಕುಮಾರ್ ಬಿಹಾರದ ಜನರ ಮೇಲೆ ಮೇಲುಗೈ ಸಾಧಿಸುತ್ತಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ" ಎಂದು ತಮ್ಮ ವೈಫಲ್ಯಕ್ಕೆ ಚುನಾ ವಣಾ ಆಯೋಗವನ್ನು ದೂಷಿಸಿ ಕೈ ತೊಳೆದುಕೊಂಡು ಬಿಟ್ಟರು.

Congress

ಮೋದಿ ಮತ್ತು ಅಮಿತ್ ಶಾರಂಥ ಆಕ್ರಮಣಕಾರಿ ನಾಯಕರನ್ನು ಎದುರಿಸುವುದು ಕಠಿಣವಾದ ಸವಾಲು. ಅವರನ್ನು ಮಣಿಸಲು ದಿನದ ೨೪ ಗಂಟೆ ಕೆಲಸ ಮಾಡಿದರೂ ಸಾಲದು. ಅಂಥದ್ದರಲ್ಲಿ ರಾಹುಲ್ ಗಾಂಧಿಯವರು ಪದೇ ಪದೆ ವಿದೇಶ ಪ್ರವಾಸಕ್ಕೆ ತೆರಳಿ ಅರೆಕಾಲಿಕ ರಾಜಕಾರಣಿಯ ಹಾಗೆ ರಾಜಕೀಯದಲ್ಲಿ ತೊಡಗಿಸಿಕೊಂಡಿರುವುದು ಕಾಂಗ್ರೆಸ್ ಹಿನ್ನಡೆಗೆ ಬಹುಮುಖ್ಯ ಕಾರಣವಾಗಿದೆ. ಚುನಾವಣಾ ಆಯೋಗವು ವಿಶೇಷ ಮತ ಪರಿಷ್ಕರಣೆಯ ಅಭಿಯಾನ ಬಿಹಾರದಲ್ಲಿ ಕೈಗೊಂಡಿತು.

ಇದಕ್ಕೆ ಕಾಂಗ್ರೆಸ್ ಮತ್ತು ಆರ್ ಜೆಡಿ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿ ಸರ್ವೋಚ್ಛ ನ್ಯಾಯಲಯದಲ್ಲಿ ಪ್ರಶ್ನಿಸಿ ಮುಖಭಂಗ ಮಾಡಿಕೊಂಡವು. ಬಿಹಾರದಲ್ಲಿ ಆಗ ತಿಂಗಳಲ್ಲಿ ರಾಹುಲ್ ಗಾಂಧಿಯವರು ಹದಿನಾರು ದಿನಗಳ ‘ವೋಟರ್ ಅಧಿಕಾರ ಯಾತ್ರೆ’ ಕೈಗೊಂಡರು. ಈ ವಿಷಯವು ಜನರನ್ನು ಭಾವನಾತ್ಮಕವಾಗಿ ಜೋಡಿಸುವುದಿಲ್ಲ ಎಂಬುದು ಅವರಿಗೆ ಅರ್ಥವೇ ಆಗಲಿಲ್ಲ. ಈ ಯಾತ್ರೆಯಿಂದ ಕಾಂಗ್ರೆಸ್ ಕಾರ್ಯಕರ್ತರ ಶ್ರಮ, ಪಕ್ಷದ ಸಂಪನ್ಮೂಲ ಮತ್ತು ನಾಯಕರ ಅಮೂಲ್ಯ ಸಮಯ ಹಾಳಾಯಿತು, ಅಷ್ಟೇ!

ಈ ಚುನಾವಣೆಯಲ್ಲಿ ‘ಮತ ಪರಿಷ್ಕರಣೆ’ಯನ್ನು ರಾಹುಲ್ ಗಾಂಧಿಯವರು ಬಹುದೊಡ್ಡ ಚರ್ಚಾವಿಷಯವನ್ನಾಗಿ ತೆಗೆದುಕೊಂಡಿದ್ದು ಎನ್‌ಡಿಎ ಮಿತ್ರಕೂಟದ ಪಾಲಿಗೆ ವರವಾ ಯಿತು. ಇಪ್ಪತ್ತು ವರ್ಷದ ನಿತೀಶ್ ಸರಕಾರದ ವೈಫಲ್ಯ, ಕಳೆದ ಎರಡು ವರ್ಷಗಳಲ್ಲಿ ಕಳಪೆ ಕಾಮಗಾರಿಗೆ ಕುಸಿದು ಬಿದ್ದ ಇಪ್ಪತ್ತಕ್ಕೂ ಹೆಚ್ಚು ಸೇತುವೆಗಳು, ಲಕ್ಷಾಂತರ ಬಿಹಾರಿ ಯುವಕರು ತಮ್ಮ ರಾಜ್ಯದಲ್ಲಿ ಕೆಲಸವಿಲ್ಲದೆ ಬೇರೆ ರಾಜ್ಯಗಳಿಗೆ ವಲಸೆ ಹೋಗುವುದು ಮತ್ತು ಹಾಡುಹಗಲೇ ನಡೆದ ಹತ್ಯೆಗಳು ಚುನಾವಣಾ ಪ್ರಚಾರದ ಪ್ರಮುಖ ಚರ್ಚಾ ವಿಷಯವೇ ಆಗಲಿಲ್ಲ.

ಕರ್ನಾಟಕದಲ್ಲಿ ಕಾಂಗ್ರೆಸ್ 2023ರಲ್ಲಿ ಅಧಿಕಾರಕ್ಕೆ ಬಂದಿದ್ದು ೪೦ ಪರ್ಸೆಂಟ್ ಕಮಿಷನ್ ಆರೋಪದ ಮೇಲೆ. ಅಂದು ಅಧಿಕಾರಸ್ಥ ರಾಜ್ಯ ಬಿಜೆಪಿ ನಾಯಕರು ಇದನ್ನು ಹಗುರವಾಗಿ ತೆಗೆದುಕೊಂಡು ದುಬಾರಿ ಬೆಲೆ ತೆತ್ತರು. ಬಿಹಾರದಲ್ಲಿ ನಿತೀಶ್ ಆಡಳಿತದ ಒಂದೇ ಒಂದು ಭ್ರಷ್ಟಾಚಾರ ಪ್ರಕರಣವನ್ನಾಗಲೀ ಅಥವಾ ಅಭಿವೃದ್ಧಿಯ ಹಿನ್ನಡೆಯನ್ನಾಗಲೀ ಮುಖ್ಯ ವಿಷಯ ಮಾಡದೆ ಕಾಂಗ್ರೆಸ್ಸಿಗರು ಕೇವಲ ವೋಟು ಚೋರಿಯನ್ನು ಬಲವಾಗಿ ನಂಬಿದರು.

ಬಿಹಾರದಲ್ಲಿ ಆರ್‌ಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡರೆ ಮಾತ್ರ ಕಾಂಗ್ರೆಸ್‌ಗೆ ಉಳಿಗಾಲ. ಆದರೂ ಕಾಂಗ್ರೆಸ್ ಧೀಮಾಕು ಹೇಗಿತ್ತೆಂದರೆ, ಲಾಲು ಮತ್ತು ತೇಜಸ್ವಿ ಯಾದವ್ ದೆಹಲಿಗೆ ಹೋಗಿ ರಾಹುಲ್‌ರವರಿಗೆ ಫೋನ್ ಮಾಡಿದರೆ ಅದನ್ನು ಅವರು ಸ್ವೀಕರಿಸಲಿಲ್ಲವಂತೆ. ಕೊನೆಗೆ ಅವರಿಬ್ಬರು ಕೆ.ಸಿ.ವೇಣುಗೋಪಾಲ್‌ರ ಭೇಟಿಗೆ ಹೋಗಬೇಕಾಯಿತು.

ಮಹಾಘಟಬಂಧನ್ ಕೂಟವು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದಾಗ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಭಾಗಿಯಾದರು. ಹೀಗೆ ರಾಜಕೀಯವಾಗಿ ಪ್ರಮುಖನಲ್ಲದ ವ್ಯಕ್ತಿಯನ್ನು ಕಳುಹಿಸಲಾಯಿತು. ಮತ್ತೊಂದು ಪ್ರಮಾದವೆಂದರೆ, ರಾಹುಲ್ ಗಾಂಧಿ ಯವರು ಬಿಹಾರದಲ್ಲಿ ಕೈಗೊಂಡ ವೋಟರ್ ಅಧಿಕಾರ ಯಾತ್ರೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ರವರೊಂದಿಗೆ ಪ್ರಚಾರದಲ್ಲಿ ಭಾಗಿಯಾಗಿದ್ದು. ಯಾವ ಪಕ್ಷದವರು ಬಿಹಾರಿಗಳನ್ನು ‘ಟಾಯ್ಲೆಟ್ ತೊಳೆಯುವವರು’ ಎಂದೆ ಹೀನಾಯವಾಗಿ ಅಪಮಾನ ಮಾಡಿದ್ದರೋ ಅವರೊಂದಿಗೆ ರಾಹಲ್ ಮತ್ತು ತೇಜಸ್ವಿ ಯಾದವ್ ಚುನಾ ವಣಾ ಸಮಯದಲ್ಲಿ ವೇದಿಕೆ ಹಂಚಿಕೊಂಡಿದ್ದು ಆತ್ಮಹತ್ಯೆಗೆ ಸಮನಾಗಿತ್ತು.

ತೇಜಸ್ವಿ ಯಾದವ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ಕಾಂಗ್ರೆಸ್ ತಕರಾರು ಮಾಡಿತು. ಕೊಲಂಬಿಯಾ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿಯವರು ಚುನಾವಣಾ ಪ್ರಚಾರವನ್ನು ತಡವಾಗಿ ಆರಂಭಿಸಿದರು. ಮೈತ್ರಿಕೂಟದಲ್ಲಿ ಸೀಟು ಹಂಚಿಕೆಯ ಗೊಂದಲ ಬಗೆಹರಿಯಲೇ ಇಲ್ಲ. ಐದಾರು ಕ್ಷೇತ್ರದಲ್ಲಿ ಪರಸ್ಪರ ಕಾದಾಟವು ನಡೆದು ಹೋಯಿತು. ನಿತೀಶ್ ಕುಮಾರರ ವಯಸ್ಸಿನ ಬಗ್ಗೆ ಲೇವಡಿ ಮಾಡಲಾಯಿತು.

ಸಾಲದ್ದಕ್ಕೆ ಮೋದಿಯವರ ತಾಯಿಯವರನ್ನು ಪ್ರಚಾರದ ವಿಡಿಯೋದಲ್ಲಿ ಬಳಸಿಕೊಂಡು ಮೋದಿಯವರ ಕೈಗೆ ಪ್ರಬಲ ಅಸ್ತ್ರ ಕೊಡಲಾಯಿತು. ಮೋದಿಯವರು ಅದನ್ನು ಸಮರ್ಥ ವಾಗಿ ಬಳಸಿಕೊಂಡು ವಿಶೇಷವಾಗಿ ಮಹಿಳೆಯರ ಸಹಾನುಭೂತಿ ಗಳಿಸುವುದರಲ್ಲಿ ಸಫಲ ರಾದರು.

ಸೀಟು ಹಂಚಿಕೆಯ ಗೊಂದಲ ಬಗೆಹರಿಸಲು ಮಹಾಘಟಬಂಧನ ವಿಫಲವಾಯಿತು. ಐದಾರು ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಪರಸ್ಪರ ಕಾದಾಡಿದರು. ಇದಕ್ಕೆ ವ್ಯತಿರಿಕ್ತವಾಗಿ ಸ್ವತಃ ಅಮಿತ್ ಶಾ ಮೂರು ದಿನ ಪಟನಾದಲ್ಲಿ ಝಾಂಡಾ ಹೂಡಿ ಬಿಜೆಪಿ ಯಲ್ಲಿನ ಅಸಮಾಧಾನಿತರನ್ನು ಮತ್ತು ಬಂಡಾಯವೆದಿದ್ದ ಅಭ್ಯರ್ಥಿಗಳನ್ನು ಕರೆದು ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿದರು.

ಬಿಹಾರದ ವಿಕಾಸಶೀಲ ಪಾರ್ಟಿಯ ಮುಖೇಶ್ ಸಹಾನಿಯವರನ್ನು ಉಪಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ರಾಹುಲ್ ಪ್ರಮುಖ ಪಾತ್ರ ವಹಿಸಿದರು. ಫಲಿತಾಂಶ ಬಂದಾಗ ಆ ಪಾರ್ಟಿಯು ಒಂದು ಸೀಟನ್ನೂ ಗೆದ್ದಿರಲಿಲ್ಲ, ಸ್ವತಃ ಮುಖೇಶ್ ಸಹಾನಿ ಪರಾಭವಗೊಂಡಿದ್ದರು. ಲಾಲೂ ಪ್ರಸಾದ್ ಯಾದವ್ ಅವಧಿಯ ‘ಜಂಗಲ್ ರಾಜ್’ ಹಣೆಪಟ್ಟಿಯನ್ನೂ, ಆ ದಿನಗಳ ಕರಾಳ ಅನುಭವವನ್ನೂ ಬಿಹಾರದ ಜನತೆ ಇಪ್ಪತ್ತು ವರ್ಷದ ತರುವಾಯವೂ ಮರೆತಿಲ್ಲ.

ಈ ಚುನಾವಣೆಯಲ್ಲಿ ಬಿಜೆಪಿಯು ಇಟ್ಟ ನಿರ್ಣಾಯಕ ಹೆಜ್ಜೆಯೆಂದರೆ- ಜನರಿಗೆ ಆ ಕರಾಳ ದಿನವನ್ನು ನೆನಪಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಿದ್ದು. ಜನತೆಯಿಂದ ಇದಕ್ಕೆ ಸೂಕ್ತ ಸ್ಪಂದನೆಯೂ ದೊರೆಯಿತು. ಬಿಹಾರದ ಮೊದಲ ಹಂತದ ಚುನಾವಣೆಯ ಮುನ್ನ ರಾಹುಲ್ ಗಾಂಧಿಯವರು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ೨೫ಲಕ್ಷ ವೋಟು ಚೋರಿಯಾಗಿದೆ ಎಂದು ಪತ್ರಿಕಾಗೋಷ್ಠಿ ಮಾಡಿದರು, ಆದರೆ ಬಿಹಾರದಲ್ಲಿ ಇದು ಶೂನ್ಯ ಪರಿಣಾಮ ಬೀರಿತು.

ಮತ ಪರಿಷ್ಕರಣೆಯಲ್ಲಿ ೬೮.೫ ಲಕ್ಷ ಮತದಾರರನ್ನು ಕೈಬಿಡಲಾಯಿತು ಮತ್ತು ೨೧.೩ ಲಕ್ಷ ಮತದಾರರನ್ನು ಸೇರಿಸಲಾಯಿತು. ಚುನಾವಣೆಯ ನಂತರ ಕಾಂಗ್ರೆಸ್ ಪಾರ್ಟಿಗೆ ರಾಜೀ ನಾಮೆ ಕೊಟ್ಟ ಶಕೀಲ್ ಅಹಮ್ಮದ್ ಅವರನ್ನು ಇದರ ಬಗ್ಗೆ ಪ್ರಶ್ನಿಸಿದಾಗ, “೬೫ ಲಕ್ಷ ಮತದಾರರನ್ನು ಕೈಬಿಟ್ಟಿರುವಾಗ ೬೫ ಜನರು ಇದರ ವಿರುದ್ಧ ಏಕೆ ಪ್ರತಿಭಟಿಸಲಿಲ್ಲ?" ಎಂದು ಪ್ರಶ್ನಿಸಿದರು.

‘ಜೆನ್ ಜೀ’ ಪೀಳಿಗೆಯವರನ್ನು ಸೆಳೆಯಲು ಟಿ-ಶರ್ಟ್ ಧರಿಸಿದರೆ, ಕಿಂದಜೋಗಿಗಳ ಹಾಗೆ ತಮ್ಮನ್ನು ಬೆಂಬಲಿಸುತ್ತಾರೆ ಎಂಬ ಮತ್ತೊಂದು ಭ್ರಮೆಯಲ್ಲಿ ರಾಹುಲ್ ಇದ್ದಾರೆ. ಮತದಾನದ ಅಂಕಿ-ಅಂಶ ಕಂಡಾಗ ‘ಜೆನ್ ಜೀ’ ವರ್ಗವು ಇವರ ಮೈತ್ರಿಕೂಟವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದುದು ಗೊತ್ತಾಯಿತು.

ಕೈಗೆಟುಕುವ ಯೋಜನೆಗಳನ್ನು ಎನ್‌ಡಿಎ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿ ದರೆ, ಮಹಾಘಟಬಂಧನವು ‘ಅಽಕಾರಕ್ಕೆ ಬಂದ ಇಪ್ಪತ್ತು ದಿನದಲ್ಲಿ ಬಿಹಾರದ ಪ್ರತಿ ಯೊಂದು ಕುಟುಂಬದ ಒಬ್ಬರಿಗೆ ಸರಕಾರಿ ಉದ್ಯೋಗ ನೀಡುವ’ ಭರವಸೆಯನ್ನು ಕೊಟ್ಟಿತು. ಆದರೆ ಜನತೆ ಇದನ್ನು ನಂಬಲಿಲ್ಲ.

ಬಿಹಾರದ ಕಾಂಗ್ರೆಸ್ ಸಂಸದ ತಾರೀಖ್ ಅನ್ವರ್ ಅವರು, “ಕಾಂಗ್ರೆಸ್ ಕೇವಲ ೫೦ ಸ್ಥಾನ ಗಳಲ್ಲಿ ಸ್ಪರ್ಧಿಸಬೇಕಿತ್ತು; ನಮಗೆ ಸಂಘಟನೆಯ ಶಕ್ತಿ ಇಲ್ಲದಿದ್ದರೂ ೬೧ ಸ್ಥಾನಗಳಿಗೆ ಸ್ಪರ್ಧಿಸಿದ್ದು ತಪ್ಪಾಯಿತು" ಎಂದು ಹೇಳಿದರು. “ಮಹಿಳೆಯರ ಖಾತೆಗಳಿಗೆ ಹತ್ತು ಸಾವಿರ ರುಪಾಯಿಯನ್ನು ವರ್ಗಾವಣೆ ಮಾಡಿದ ಕಾರಣ ಎನ್‌ಡಿಎಗೆ ಚುನಾವಣೆ ಗೆಲ್ಲಲು ಸಾಧ್ಯ ವಾಯಿತು" ಎಂದು ಹೇಳುವ ಮೂಲಕ ಈ ರಾಜಕೀಯ ವಿರೋಧಿಗಳು ತಮ್ಮ ಸೋಲನ್ನು ಮುಚ್ಚಿಕೊಳ್ಳಲು ಹರಸಾಹಸಪಟ್ಟರು.

ಮಹಿಳೆಯರು ಹಣ ಪಡೆದು ವೋಟು ಹಾಕಿದರು ಎಂದು ಹೇಳಿ ಅವರಿಗೆ ಮಸಿ ಬಳಿದರು. 2010ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿ(ಯು) ಮೈತ್ರಿಕೂಟ 206 ಸೀಟು ಗಳಿಸಿತ್ತು. ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಿದ್ದು ಯುಪಿಎ ಒಕ್ಕೂಟ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಆ ಚುನಾವಣೆಯಲ್ಲಿ ಗೆದ್ದ ಸ್ಥಾನ ಕೇವಲ ನಾಲ್ಕು!

ಪ್ರಶಾಂತ್ ಕಿಶೋರ್ ಅವರ ‘ಜನವಿಕಾಸ್ ಪಾರ್ಟಿ’ ಒಂದೂ ಸ್ಥಾನವನ್ನು ಪಡೆಯದೆ, ‘ಚುನಾವಣಾ ತಜ್ಞರು ಸಲಹೆಯಲ್ಲಿ ನುರಿತವರು, ಆದರೆ ಚುನಾವಣೆ ಎದುರಿಸುವುದರಲ್ಲಿ ಅಲ್ಲ’ ಎಂಬುದನ್ನು ಸಾಬೀತುಪಡಿಸಿತು. ಕಾಂಗ್ರೆಸ್ ಪಕ್ಷವು ವೋಟು ಚೋರಿ ಎಂಬ ಭ್ರಮಾತ್ಮಕ ನಂಬಿಕೆಯಿಂದ ಹೊರ ಬಂದು ವಾಸ್ತವತೆಯನ್ನು ಅರ್ಥೈಸಿಕೊಳ್ಳಬೇಕಾಗಿದೆ. ಸೋಲು ಎಂಬುದು ಆತ್ಮಾವಲೋಕನಕ್ಕೆ ದಾರಿಯಾಗಬೇಕೇ ವಿನಾ ಆತ್ಮವಂಚನೆಗಲ್ಲ...

(ಲೇಖಕರು ಬಿಜೆಪಿಯ ವಕ್ತಾರರು)