ಮನಿ ಮೈಂಡೆಡ್
ಈ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಎಷ್ಟು ಜನಪ್ರಿಯವಾಗಿವೆ ಎಂದರೆ, ಕೈಯಲ್ಲಿ ಮೊಬೈಲ್ ಇದ್ದರೆ ಸಾಕು, ಏನನ್ನಾದರೂ ಖರೀದಿಸಬಹುದು. ಬಿಎಂಟಿಸಿ ಬಸ್ಸಿನಲ್ಲೂ ಕಂಡಕ್ಟರ್ ಈಗ ಚಿಲ್ಲರೆಗೆ ಜಗಳವಾಡುವ ದೃಶ್ಯ ಕಾಣಿಸುತ್ತಿಲ್ಲ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಬಹುದು. ಆದರೆ ಈಗ ಕೆಲವು ಮಂದಿ ತಮ್ಮ ಅಂಗಡಿಯಲ್ಲಿ ‘ಯುಪಿಐ ಬೇಡ, ನಗದು ಕೊಡಿ’ ಎಂಬ ಬೋರ್ಡ್ ಹಾಕಿ ನಿಂತರೆ ಯಾರಿಗೆ ನಷ್ಟ? ಸ್ವತಃ ಅವರಿಗೇ ಅಲ್ಲವೇ? ಯುಪಿಐ ಇದ್ದಲ್ಲಿಗೆ ಆ ಗ್ರಾಹಕರು ಹೋಗುತ್ತಾರೆ ಅಷ್ಟೇ.
ರಾಜ್ಯ ವಾಣಿಜ್ಯ ಇಲಾಖೆ ಸಾವಿರಾರು ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ ಜಾರಿಗೊಳಿಸಿರುವುದು ಸಂಚಲನ ಮೂಡಿಸಿದೆ. ಬೇಕರಿ, ಕಾಂಡಿಮೆಂಟ್ಸ್‌ಗಳಿಗೆ, ಚಹಾ ಮಾರಾಟ ಮಾಡುವವರಿಗೆ 20-30 ಲಕ್ಷ ಕಟ್ಟಿ ಎಂದರೆ ಪಾಪ, ಅವರು ಎಲ್ಲಿಂದ ತಂದಾರು? ಇದು ಅನ್ಯಾಯವಲ್ಲವೇ ಎಂಬ ಕಾಳಜಿ ಸಹಜ. ಆದರೆ ವಾಸ್ತವವೇನು? ಯುಪಿಐ ಮೂಲಕ ನಡೆದಿರುವ ಹಣಕಾಸು ವರ್ಗಾವಣೆಗಳ ಅಧಾರದಲ್ಲಿ ಇಲಾಖೆ ನೋಟಿಸ್ ಕಳಿಸಿದ್ದು, 40 ಲಕ್ಷ ರುಪಾಯಿಗೂ ಹೆಚ್ಚು ಹಣದ ವರ್ಗಾವಣೆಗಳ ಬಗ್ಗೆ ವಿವರಗಳನ್ನು ಕೋರಿದೆ.
ಇದನ್ನು ವಿರೋಧಿಸಿ ವರ್ತಕರು ಅಂಗಡಿಗಳನ್ನು ಮುಚ್ಚಿ ಬಂದ್ ನಡೆಸುವ ಬೆದರಿಕೆ ಹಾಕಿದ್ದಾರೆ. ಆದರೆ ಇದು ಅಂಥ ಪರಿಣಾಮಕಾರಿಯೂ ಆಗದು. ಏಕೆಂದರೆ ಯುಪಿಐ ಈಗ ಪ್ರತಿ ದಿನವೂ 65 ಕೋಟಿಗೂ ಹೆಚ್ಚು ಹಣಕಾಸು ವರ್ಗಾವಣೆಗಳನ್ನು ನಿರ್ವಹಿಸುವ ಮೂಲಕ ವೀಸಾವನ್ನೂ ಹಿಂದಿಕ್ಕಿ, ಜಗತ್ತಿನ ಮುಂಚೂಣಿಯಲ್ಲಿರುವ ರಿಯಲ್ ಟೈಮ್ ಪೇಮೆಂಟ್ ಸಿಸ್ಟಮ್ ಆಗಿದೆ.
ಇದನ್ನೂ ಓದಿ:Keshav Prasad B Column: ಶ್ರೀಮಂತರಾಗಬೇಕೆಂದರೆ ತಾಳ್ಮೆಯೇ ನಿಮ್ಮ ದಿವ್ಯಮಂತ್ರವಾಗಬೇಕು !
ಮತ್ತೆ ಹಳೆಯ ನಗದು ವ್ಯವಹಾರಕ್ಕೆ ಮರಳುವುದು ಕನಸಿನ ಮಾತಷ್ಟೇ. ಈಗಾಗಲೇ ಇಷ್ಟೊಂದು ಅನುಕೂಲಕರವಾಗಿರುವ ಯುಪಿಐ ಬಳಕೆ ಮುಂದಿನ 10 ವರ್ಷಗಳಲ್ಲಿ ಎಷ್ಟೊಂದು ವ್ಯಾಪಕವಾಗಬಹುದು ಎಂದು ಆಲೋಚಿಸಿ. ಆಗ ಅಸಂಘಟಿತ ವಲಯದ ಅಸಂಖ್ಯಾತ ವ್ಯಾಪಾರಿಗಳ ಲೆಕ್ಕಗಳು ಸಿಗಲಿವೆ. ಜಿಎಸ್‌ಟಿಯಿಂದ ತಪ್ಪಿಸಿಕೊಂಡರೂ, ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಬಹುದು.
ಯುಪಿಐ ಕ್ರಾಂತಿ ಸಂಭವಿಸುವುದಕ್ಕೆ ಮುನ್ನ ಭಾರತದಲ್ಲಿ ನಗದು ವ್ಯವಹಾರ ‘ಕಿಂಗ್’ ಆಗಿತ್ತು. ಹೀಗಾಗಿ ಯಾರ ಬಳಿ ಎಷ್ಟು ಆದಾಯ ಇದೆ ಎಂಬುದನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿತ್ತು. ಈಗಲೂ ಕ್ಯಾಶ್ ವ್ಯವಹಾರವನ್ನೇ ಹೆಚ್ಚು ನಡೆಸುವವರ ಆದಾಯ ಮೂಲ ಪತ್ತೆ ಹಚ್ಚುವುದು ಕಷ್ಟ.
ಆದರೆ ಭವಿಷ್ಯದ ದಿನಗಳಲ್ಲಿ ಎಲ್ಲಾದರೊಂದು ಕಡೆ ಮಾಡುವ ಖರ್ಚುಗಳನ್ನು ಸರಕಾರಿ ಇಲಾಖೆಗಳು ಸುಲಭವಾಗಿ ಪತ್ತೆ ಹಚ್ಚಲಿವೆ. ಈಗಾಗಲೇ ಉದ್ಯೋಗಿಗಳು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ವೇಳೆಯಲ್ಲಿ, ಫಾರ್ಮ್ 16 ಇಲ್ಲದಿದ್ದರೂ, ಪರ್ವಾಗಿಲ್ಲ ಎನ್ನುತ್ತಾರೆ ಚಾರ್ಟರ್ಡ್ ಅಕೌಂಟೆಂಟ್ ಗಳು. ಏಕೆಂದರೆ ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್ ಗಳಲ್ಲಿ ಆದಾಯದ ಲೆಕ್ಕ ಸಿಗುತ್ತದೆ.
ಷೇರುಗಳ ಕೊಡು-ಕೊಳ್ಳುವಿಕೆ, ಪ್ರಾಪರ್ಟಿಗಳ ಖರೀದಿ-ಮಾರಾಟ, ಚಿನ್ನದ ಶಾಪಿಂಗ್, ಹೀಗೆ ಎಲ್ಲ ಕಡೆಯಲ್ಲೂ ನಗದು ಬಳಕೆಗೆ ಮಿತಿಯನ್ನು ವಿಧಿಸಲಾಗುತ್ತಿದೆ. ಉದಾಹರಣೆಗೆ ನೀವೊಂದು ಸೈಟ್ ಅಥವಾ ಫ್ಲಾಟ್ ಅನ್ನು, ಇಲ್ಲವೇ ಬಂಗಾರವನ್ನು ಖರೀದಿಸುತ್ತೀರಿ ಎಂದು ಭಾವಿಸಿ. 2 ಲಕ್ಷ ರುಪಾಯಿಗಿಂತ ಹೆಚ್ಚು ಮೊತ್ತವನ್ನು ನಗದು ರೂಪದಲ್ಲಿ ನೀಡಲು ಸಾಧ್ಯವಿಲ್ಲ.

ಒಂದೋ ಚೆಕ್, ಬ್ಯಾಂಕ್ ಡ್ರಾಫ್ಟ್ ಅಥವಾ ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಕೌಂಟ್‌ನಿಂದ ವರ್ಗಾಯಿಸಬೇಕು. ಹೀಗಾಗಿ ತೆರಿಗೆಯಿಂದ ನುಣುಚಿಕೊಳ್ಳಲಾಗದು. 10 ಲಕ್ಷ ರುಪಾಯಿಗಿಂತ ಹೆಚ್ಚಿನ ಪ್ರಾಪರ್ಟಿ ಖರೀದಿಸುವಾಗ ನಿಮ್ಮ ಪ್ಯಾನ್ ವಿವರವನ್ನು ನಮೂದಿಸಲೇಬೇಕು.
ಭಾರತದಲ್ಲಿ ರಾತ್ರೋರಾತ್ರಿ ಈ ಬೆಳವಣಿಗೆ ಆಗಿದ್ದಲ್ಲ. ಹಾಗಂತ ತೀರಾ ಹಳೆ ಕಾಲದ್ದೂ ಅಲ್ಲ. ದೇಶದಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ) ಮೊದಲ ಬಾರಿಗೆ 2016ರಲ್ಲಿ ಪರಿಚಯವಾಯಿತು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಇದರ ನೇತೃತ್ವ ವಹಿಸಿದೆ. ಬಳಿಕ ಬ್ಯಾಂಕುಗಳು ಯುಪಿಐ ಆಧಾರಿತ ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್ ಗಳಲ್ಲಿ ಅಪ್‌ಲೋಡ್ ಮಾಡಿದವು.
2010ರಲ್ಲಿ ಪೇಟಿಎಂ, 2015ರಲ್ಲಿ ಫೋನ್ ಪೇ, 2016ರಲ್ಲಿ ‘ಭೀಮ್’ (ಭಾರತ್ ಇಂಟರ್ ಫೇಸ್ ಫಾರ್ ಮನಿ), 2017ರಲ್ಲಿ ಗೂಗಲ್ ಪೇ ಬಿಡುಗಡೆಯಾಗಿ, ಜನರಿಗೆ ಹಣಕಾಸು ವರ್ಗಾವಣೆಗಳನ್ನು ಸುಲಭ ವಾಗಿಸಿದವು. ಇದು ಕಳೆದ ದಶಕದ ಅತಿ ದೊಡ್ಡ ಕ್ರಾಂತಿಗಳಂದು ಎಂದರೆ ಅತಿಶಯವಲ್ಲ. ಹತ್ತು ವರ್ಷದ ಹಿಂದೆ ಇದನ್ನು ಯೋಚಿಸಲೂ ಸಾಧ್ಯವಿರಲಿಲ್ಲ!
ಭಾರತವು ಕಳೆದೊಂದು ದಶಕದಲ್ಲಿ ನಗದು ಬಳಕೆಯ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಡಿಜಿಟಲ್ ಪೇಮೆಂಟ್ ಹೆಚ್ಚಿಸಲು ನೀತಿಗಳನ್ನು ರಚಿಸಿದೆ. 2016ರ ಡಿಮಾನಿಟೈಸೇಶನ್‌ನ ಉದ್ದೇಶಗಳಲ್ಲಿ ಡಿಜಿಟಲ್ ಪೇಮೆಂಟ್ ಗಳನ್ನು ಪ್ರೋತ್ಸಾಹಿಸುವುದೂ ಸೇರಿತ್ತು. ಈಗಲೂ ಕೆಲ ವ್ಯಾಪಾರಿಗಳು ಒಂದಕ್ಕಿಂತ ಹೆಚ್ಚು ಯುಪಿಐಗಳು, ಸಂಬಂಧಿಕರ ಹೆಸರಿನಲ್ಲಿ ಬ್ಯಾಂಕ್ ಖಾತೆ ಗಳನ್ನು ಬಳಸುವ ಮೂಲಕ ಜಿಎಸ್‌ಟಿಯನ್ನು ತಪ್ಪಿಸಲು ಯತ್ನಿಸುತ್ತಾರೆ. ಆದರೆ ಭವಿಷ್ಯದ ದಿನಗಳಲ್ಲಿ ಇದಕ್ಕೂ ಕಡಿವಾಣ ಬೀಳುವ ನಿರೀಕ್ಷೆ ಇದೆ.
ಹೀಗಾಗಿ ವೃಥಾ ತೊಂದರೆಗೆ ಸಿಲುಕುವುದಕ್ಕಿಂತ, 40 ಲಕ್ಷ ರುಪಾಯಿಗಿಂತ ಹೆಚ್ಚಿನ ವಹಿವಾಟು ಆದಾಗ ಜಿಎಸ್‌ಟಿ ಅಡಿಯಲ್ಲಿ ನೋಂದಣಿಯಾಗಿ ಸಂಘಟಿತ ಚೌಕಟ್ಟಿನಲ್ಲಿ ಮುಂದುವರಿಯುವುದು ಉತ್ತಮವಲ್ಲವೇ ಎಂಬ ಆತ್ಮಾವಲೋಕನವನ್ನು ವ್ಯಾಪಾರಿಗಳು ಮಾಡಿಕೊಳ್ಳಬೇಕಾಗಿದೆ.
ಅಷ್ಟಕ್ಕೂ 40 ಲಕ್ಷಕ್ಕೂ ಹೆಚ್ಚು ವ್ಯಾಪಾರವೇ ಆಗಿರಲಿ, ಹಣಕಾಸು ವರ್ಗಾವಣೆಯೇ ಆಗಿರಲಿ, ಅದು ಸಣ್ಣದೇ? ಖಂಡಿತಾ ಅಲ್ಲ. ಆದ್ದರಿಂದ ಯುಪಿಐ, ಜಿಎಸ್‌ಟಿ ಬೇಡ ಎಂದರೆ ಅದು ಹೇಗೆ ಸಾಧ್ಯ? ರಾಜ್ಯ ವಾಣಿಜ್ಯ ಇಲಾಖೆ ಏಕೆ ಸಾವಿರಾರು ವ್ಯಾಪಾರಿಗಳಿಗೆ ನೋಟಿಸ್ ಕಳಿಸಿದೆ? ಇದು ತೆರಿಗೆ ಭಯೋತ್ಪಾದನೆಯಲ್ಲವೇ? ಎಂಬ ವಾದವಿದೆ. ಆದರೆ ಅದು ಚರ್ಚೆಗೆ ಸೀಮಿತ ಪ್ರಶ್ನೆಯಾಗಬಹುದು.
ನೋಟಿಸ್ ಪಡೆದಿರುವವರು ಏನು ಮಾಡಬೇಕು? ಎಂಬ ಅರಿವು ಈಗ ನಿರ್ಣಾಯಕ. ಮೊದಲನೆಯ ದಾಗಿ, ನೋಟಿಸ್ ಕಂಡು ಟೆಲಿಗ್ರಾಂ ಕಂಡ ಹಾಗೆ ಭಯಪಡಬೇಕಿಲ್ಲ. ಇದು ಯುಪಿಐ ವರ್ಗಾವಣೆ ಅಧರಿಸಿ ಇಷ್ಟು ಜಿಎಸ್‌ಟಿ ಕಟ್ಟಬೇಕು ಎಂದು ಕೇಳಿರುವ ನೋಟಿಸ್ ಅಷ್ಟೇ. ನೀವು ಒಂದು ವೇಳೆ ಕಲ್ಲಂಗಡಿ, ಬಾಳೆಹಣ್ಣು, ಮಾವು, ಸೀಬೆ ಕಾಯಿ, ತರಕಾರಿ ಮಾರಿದ್ದರೆ, ಒಂದು ಕೋಟಿ ವ್ಯವಹಾರ ವನ್ನು ಯುಪಿಐನಲ್ಲಿ ಮಾಡಿದ್ದರೂ, ಜಿಎಸ್‌ಟಿ ಅನ್ವಯಿಸುವುದಿಲ್ಲ.
ಜಿಎಸ್‌ಟಿಯಲ್ಲೂ ಶೇಕಡಾ 5, ಶೇ.12, ಶೇ.18, ಶೇ.28 ಎಂಬ ಸ್ತರಗಳಿವೆ. ನೀವು ಮಾರಾಟ ಮಾಡಿದ ಉತ್ಪನ್ನ ಯಾವ ಕೆಟಗರಿಯಲ್ಲಿ ಇದೆ ಎಂಬುದನ್ನು ತಿಳಿಸಬಹುದು. ಅಥವಾ ವ್ಯಾಪಾರೇತರ ಸಾಲದ ವರ್ಗಾವಣೆಯಾಗಿದ್ದರೆ, ಅದರ ವಿವರಗಳನ್ನು ನೀಡಿದರೆ ಸಾಕು. ವಿವರಣೆಯನ್ನು ನೀಡಲು ಕಾಲಾವಕಾಶವೂ ಇದೆ. ಎರಡನೆಯದಾಗಿ, 40 ಲಕ್ಷ ರು. ಮೀರಿದ ಹಣಕಾಸು ವರ್ಗಾವಣೆಯಾಗಲಿ, ವಹಿವಾಟಾಗಲಿ ಸಣ್ಣದಲ್ಲ.
ಹೀಗಾಗಿಯೇ ಜಿಎಸ್‌ಟಿ ವ್ಯವಸ್ಥೆಯಲ್ಲಿ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿ ವಾರ್ಷಿಕ 40 ಲಕ್ಷ ರು. ದಾಟಿದ ವ್ಯವಹಾರಕ್ಕೆ ಶೇಕಡಾ 5ರಿಂದ 28ರ ತನಕ ತೆರಿಗೆ ಇರುತ್ತದೆ. ಸೇವೆಗಳ ಮಾರಾಟಗಾರರಿಗೆ 20 ಲಕ್ಷ ರುಪಾಯಿ ದಾಟಿದ ಬಳಿಕ ತೆರಿಗೆ ಇರುತ್ತದೆ. ಸೇವೆಗಳ ಮಾರಾಟ ಎಂದರೆ, ಅಕೌಂಟಿಂಗ್, ಕನ್ಸಲ್ಟೆನ್ಸಿ, ಸಾರಿಗೆ ಇತ್ಯಾದಿಗಳು ಸೇವೆಗಳಲ್ಲಿ ಬರುತ್ತವೆ.
ಬೀದಿ ಬದಿಯಲ್ಲಿ ಹಣ್ಣು-ತರಕಾರಿಗಳನ್ನು ಮಾರಾಟ ಮಾಡುವವರಿಗೆ ಜಿಎಸ್‌ಟಿ ಬರುತ್ತದೆಯೇ? ಎಂಬ ಪ್ರಶ್ನೆಯನ್ನು ಅನೇಕ ಮಂದಿ ಕೇಳುತ್ತಿದ್ದಾರೆ. ಬೀದಿ ಬದಿಯಲ್ಲಿ ಮಾರಾಟ ಮಾಡುವ ಹಲವಾರು ಹಣ್ಣು-ತರಕಾರಿಗಳಿಗೆ ಜಿಎಸ್‌ಟಿ ಇರುವುದಿಲ್ಲ. ಅಂಥ ತರಕಾರಿ ಮತ್ತು ಹಣ್ಣುಗಳ ಮೂಲಕ ನೀವು ಲಕ್ಷಗಟ್ಟಲೆ ಅಥವಾ ಕೋಟಿ ರುಪಾಯಿ ಆದಾಯ ಗಳಿಸಿದರೂ. ಅದಕ್ಕೆ ಜಿಎಸ್‌ಟಿ ಅನ್ವಯವಾಗುವುದಿಲ್ಲ. ತಾಜಾ ತರಕಾರಿಗಳು, ಆಲೂಗಡ್ಡೆ, ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ, ಕ್ಯಾಬೇಜ್, ಕ್ಯಾರೆಟ, ಬೀಟ್‌ರೂಟ್, ತೆಂಗಿನಕಾಯಿ, ಆಪಲ, ಚೆರ್ರಿ, ಪೀಚ್, ಬಾಳೆ ಹಣ್ಣು, ಮಾವಿನ ಹಣ್ಣು , ಪೈನಾಪಲ್, ಸೀಬೆಕಾಯಿ, ಕಿತ್ತಳೆ, ಮ್ಯಾಂಡರಿನ್, ದ್ರಾಕ್ಷಿ, ಬಾದಾಮಿ, ವಾಲ್‌ನಟ, ಪಿಸ್ತಾಗಳಿಗೆ ಜಿಎಸ್‌ಟಿ ಇರುವುದಿಲ್ಲ.
ಒಣಗಿದ ಹರ್ಬಲ್, ಡ್ರೈ ಪ್ಲಾಂಟ್, ಪ್ರಿಸರ್ವ್‌ಡ್ ತರಕಾರಿಗಳು, ಒಣಗಿಸಿದ ತೊಗಟೆಗಳು, ಬೇರುಗಳು, ನೀರಿನಲ್ಲಿ ಕುದಿಸಿದ, ಶೈತ್ಯೀಕರಿಸಿದ, ಹೆಚ್ಚುವರಿ ಸಕ್ಕರೆ ಪಾಕದಲ್ಲಿರುವ, ಉಪ್ಪಿನಲ್ಲಿ ಹಾಕಿರುವ, ಹೆಪ್ಪುಗಟ್ಟಿಸಿದ ತರಕಾರಿಗಳ ಮಾರಾಟಕ್ಕೆ ಶೇಕಡಾ 5 ಜಿಎಸ್‌ಟಿ ಇರುತ್ತದೆ. ಹಣ್ಣುಗಳ ಜ್ಯೂಸ್ ಮತ್ತು ತರಕಾರಿಗಳ ಜ್ಯೂಸ್ ಮೇಲೆ ಶೇಕಡಾ 12 ಜಿಎಸ್‌ಟಿ ಅನ್ವಯವಾಗುತ್ತದೆ.
ಜೆಲ್ಲಿಗಳು, ಫ್ರೂಟ್ ಜ್ಯಾಮ್ ಮೇಲೆ ಶೇಕಡಾ 12-18 ಜಿಎಸ್‌ಟಿ ಇರುತ್ತದೆ. ದಿನಸಿ ಅಂಗಡಿಯಲ್ಲಿ ಮಾರುವ ಸಾಮಾನ್ಯ ಅಕ್ಕಿ ಇರಬಹುದು, ಬಾಸ್ಮತಿ ಇರಬಹುದು, 5 ಪರ್ಸೆಂಟ್ ಜಿಎಸ್‌ಟಿ ಇರುತ್ತದೆ. ಈ ರೀತಿಯ ಅರಿವು ಅಗತ್ಯ. ಎಷ್ಟೋ ಮಂದಿಗೆ ಇದು ಒಟ್ಟು ವಹಿವಾಟಿನ ಮೇಲಿನ ತೆರಿಗೆಯೇ ಹೊರತು, ಆದಾಯ ಅಥವಾ ಲಾಭದ ಮೇಲಿನದ್ದಲ್ಲ ಎಂಬುದೂ ತಿಳಿದಿಲ್ಲ. ಲಾಯರ್, ಡಾಕ್ಟರ್ ಗಳಿಗೆ ಜಿಎಸ್‌ಟಿ ಇಲ್ಲ ಎಂಬುದೂ ಗೊತ್ತಿಲ್ಲ!
ನೋಡಿ, ಜಿಎಸ್‌ಟಿ ಕಂಪೋಸಿಷನ್ ಕಾಯಿದೆ ಅಡಿಯಲ್ಲಿ ವರ್ಷಕ್ಕೆ 1.50 ಕೋಟಿ ರು. ವ್ಯಾಪಾರ ನಡೆಸಿದರೂ, ಕೇವಲ 1 ರಿಂದ 6 ಪರ್ಸೆಂಟ್ ಜಿಎಸ್‌ಟಿ ಕಟ್ಟಿದರೆ ಸಾಕು. ವರ್ಷಕ್ಕೆ ಒಂದೂವರೆ ಕೋಟಿ ರುಪಾಯಿಗಳಷ್ಟು ವಹಿವಾಟು ನಡೆಸಿದರೂ, ಒಂದು ಪರ್ಸೆಂಟ್ ಲೆಕ್ಕದಲ್ಲಿ ಒಂದೂವರೆ ಲಕ್ಷ ರುಪಾಯಿ ಜಿಎಸ್‌ಟಿ ಕಟ್ಟಿದರೆ ಸಾಕಾಗುತ್ತದೆ.
ರೆಸ್ಟೋರೆಂಟ್ ನಡೆಸುವವರಿಗೆ ಶೇಕಡಾ 6 ಬರಬಹುದು. ಅದಕ್ಕಿಂತ ಹೆಚ್ಚು ಇರುವುದಿಲ್ಲ. ಹೀಗಾಗಿ ಬಹುಪಾಲು ಚಿಲ್ಲರೆ ವ್ಯಾಪಾರಿಗಳಿಗೆ ಇದು ಅನುಕೂಲಕರ. ಬೆಂಗಳೂರಿನ 66000ಕ್ಕೂ ಹೆಚ್ಚು ಕಾಂಡಿಮೆಂಟ್ಸ್, ಬೇಕರಿಗಳು ಇವೆ. ಅಸಂಘಟಿತ ವಲಯದ ಅನೇಕ ಬೇಕರಿ, ಟೀ-ಕಾಫಿ ಶಾಪ್‌ಗಳು, ರಸ್ತೆ ಬದಿಯ ದೋಸೆ ಕ್ಯಾಂಟೀನ್‌ಗಳು ಲಕ್ಷಗಟ್ಟಲೆ ವ್ಯವಹಾರ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಅಂಥವರು ಜಿಎಸ್‌ಟಿ ಪರಿಧಿಗೆ ಬಂದು ಸಂಘಟಿತರಾಗುವುದು ಒಳ್ಳೆಯದಲ್ಲವೇ? ಇವತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಜಿಎಸ್‌ಟಿ ಪ್ರಮುಖ ಅದಾಯ ಮೂಲವಾಗಿದ್ದು, ರಾಷ್ಟ್ರ ನಿರ್ಮಾಣ ದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಜಿಎಸ್‌ಟಿಗೆ ಮುನ್ನ 2016ರಲ್ಲಿ ಇಡೀ ವರ್ಷದಲ್ಲಿ ಕೇವಲ 8.63 ಲಕ್ಷ ಕೋಟಿ ರುಪಾಯಿ ಪರೋಕ್ಷ ತೆರಿಗೆ ಸಂಗ್ರಹವಾಗಿತ್ತು. 2024ರಲ್ಲಿ 22.08 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು! ಈ ವರ್ಷ ಮಾಸಿಕ ಸರಾಸರಿ ಸಂಗ್ರಹ 1.84 ಲಕ್ಷ ಕೋಟಿ ರುಪಾಯಿ! ಈಗ ಹೇಳಿ ಜಿಎಸ್‌ಟಿ, ಯುಪಿಐ ಬೇಡವೇ?