ಗಂಟಾಘೋಷ
ಸಮಾಜದ ಕಟ್ಟಕಡೆಯ ಬಡ ಹಾಗೂ ಮಧ್ಯಮ ವರ್ಗದ ಯುವಕರಿಗೆ ಮುಖ್ಯವಾಹಿನಿಗೆ ಬರಲು, ತಮ್ಮ ಬಡತನದ ರೇಖೆಯನ್ನು ದಾಟಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸರಕಾರಿ ಉದ್ಯೋಗಗಳೇ ಏಕೈಕ ಪ್ರಮುಖ ಮತ್ತು ಭದ್ರವಾದ ಮೆಟ್ಟಿಲಾಗಿವೆ. ಈ ಕಾರಣಕ್ಕಾಗಿಯೇ ಹಳ್ಳಿಗಳ ಯುವಕರು ಯಾವುದೇ ಸೌಲಭ್ಯಗಳಿಲ್ಲದ ಸಣ್ಣ ಕೊಠಡಿಗಳಲ್ಲಿ ದಿನಗಟ್ಟಲೆ ನಿದ್ದೆಗೆಟ್ಟು, ಹಗಲಿರುಳು ಕಷ್ಟಪಟ್ಟು ಕಣ್ಣಿನಲ್ಲಿ ಎಣ್ಣೆ ಬಿಟ್ಟು ಓದುತ್ತಾರೆ.
ಒಂದು ಪ್ರಾಮಾಣಿಕ ಪರೀಕ್ಷಾ ವ್ಯವಸ್ಥೆಯು ಅಂತಹ ಬಡ ಪ್ರತಿಭೆಗಳಿಗೆ ಯಾವುದೇ ಶಿಫಾರಸು ಅಥವಾ ಹಣವಿಲ್ಲದೆಯೂ ತಮ್ಮ ಕಠಿಣ ಪರಿಶ್ರಮದಿಂದ ಮಾತ್ರ ಉನ್ನತ ಹುದ್ದೆಯನ್ನು ಅಲಂಕರಿ ಸಲು ಸಮಾನ ಅವಕಾಶವನ್ನು ಕಲ್ಪಿಸುತ್ತದೆ. ಆದರೆ, ಪ್ರಸ್ತುತ ಜೀರ್ಣಗೊಂಡಿರುವ ನೇಮಕಾತಿ ವ್ಯವಸ್ಥೆಯು ಅಂತಹ ಪ್ರಾಮಾಣಿಕ ಯುವಕರ ಆ ಕನಸುಗಳನ್ನು ಕ್ರೂರವಾಗಿ ದಮನಿಸುತ್ತಿದೆ. ಹಗರಣಗಳು ಮತ್ತು ವಿಳಂಬದ ಸರಪಣಿಯಿಂದ ಕೂಡಿರುವ ಇಂದಿನ ಸಿಸ್ಟಮ್, ಬಡ ವಿದ್ಯಾರ್ಥಿ ಗಳಲ್ಲಿ ಅತಿಯಾದ ಹತಾಶೆ ಹಾಗೂ ಅಸಾಮರ್ಥ್ಯದ ಭಾವನೆಯನ್ನು ಸೃಷ್ಟಿಸಿದ್ದು, ಕಷ್ಟಪಟ್ಟು ಓದಿದರೂ ನ್ಯಾಯ ಸಿಗುವುದಿಲ್ಲ ಎಂಬ ಆತಂಕ ಅವರನ್ನು ಮಾನಸಿಕವಾಗಿ ಕುಗ್ಗಿಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಸರಕಾರಿ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆಗಳು ಸಂಪೂರ್ಣವಾಗಿ ವಿವಾದ, ಹಗರಣ ಹಾಗೂ ಭ್ರಷ್ಟಾಚಾರದ ಗೂಡಾಗಿ ಮಾರ್ಪಟ್ಟಿವೆ. ಪಿಎಸ್‌ಐ ನೇಮಕಾತಿ ಹಗರಣ, ಕೆಇಎ ನಡೆಸಿದ ಎಫ್ʼಡಿಎ, ಎಸ್‌ಡಿಎ ಹಾಗೂ ವಿವಿಧ ನಿಗಮ ಮಂಡಳಿ ಪರೀಕ್ಷೆಗಳಲ್ಲಿ ಬಯಲಾದ ಬ್ಲೂಟೂತ್ ಮತ್ತು ಸ್ಮಾರ್ಟ್ ವಾಚ್ ಅಕ್ರಮಗಳು ಇಡೀ ಆಡಳಿತ ಯಂತ್ರದ ವೈಫಲ್ಯವನ್ನು ಎತ್ತಿ ತೋರಿಸಿವೆ. ಇದರ ಜೊತೆಗೆ ನಿರಂತರವಾಗಿ ವರದಿಯಾಗುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ರಾಜ್ಯದ ನೇಮಕಾತಿ ವ್ಯವಸ್ಥೆಯ ಮಾನವನ್ನು ಸಾರ್ವಜನಿಕ ವಾಗಿ ಹರಾಜು ಹಾಕಿವೆ.
ಇದನ್ನೂ ಓದಿ: Gururaj Gantihole Column: ಲೈಕ್-ಶೇರ್ʼಗಳ ಭರಾಟೆಯಲ್ಲಿ ಸುದ್ದಿಯೆಷ್ಟು, ಸತ್ಯವೆಷ್ಟು ?
ಇದರಿಂದಾಗಿ, ಸರಕಾರಿ ಉದ್ಯೋಗದ ಕನಸು ಹೊತ್ತ ಯುವಕರು ಪರೀಕ್ಷೆ ಬರೆಯುವ ಮುನ್ನವೇ ತೀವ್ರ ಹತಾಶೆಗೆ ಒಳಗಾಗುವಂತಹ ದುಃಸ್ಥಿತಿ ನಿರ್ಮಾಣವಾಗಿದೆ. ತಾವು ಬರೆಯಲಿರುವ ಪರೀಕ್ಷೆಯ ‘ಪೇಪರ್ ಲೀಕ್’ ಆಗಿದೆಯೇ ಅಥವಾ ಯಾರಾದರೂ ‘ಬ್ಲೂಟೂತ್ ಕಾಪಿ’ ಮಾಡುತ್ತಿದ್ದಾರೆಯೇ ಎಂಬ ಆತಂಕದ ಸುದ್ದಿಗಳನ್ನೇ ಅವರು ಪ್ರತಿದಿನ ನೋಡುವಂತಾಗಿದೆ. ನಿರಂತರವಾಗಿ ನಡೆಯುತ್ತಿರುವ ಈ ವಂಚನೆಗಳು, ಇಡೀ ನೇಮಕಾತಿ ವ್ಯವಸ್ಥೆಯ ಮೇಲಿದ್ದ ನಂಬಿಕೆಯನ್ನೇ ಅಭ್ಯರ್ಥಿಗಳು ಸಂಪೂರ್ಣವಾಗಿ ಕಳೆದುಕೊಳ್ಳುವಂತೆ ಮಾಡಿವೆ.
ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿರುವುದು ಇತ್ತೀಚಿನ ಪಶುವೈದ್ಯಾಧಿಕಾರಿಗಳ ನೇಮಕಾತಿ ಯಲ್ಲಿ ಕೇಳಿಬಂದಿರುವ 80 ಲಕ್ಷ ರೂಪಾಯಿ ಲಂಚದ ಬೃಹತ್ ಹಗರಣ. ಕೆಪಿಎಸ್ಸಿ ನಡೆಸಿದ 400 ಪಶುವೈದ್ಯಾಧಿಕಾರಿಗಳ ಹುದ್ದೆಯ ನೇಮಕಾತಿಯಲ್ಲಿ, ಆಯ್ಕೆಯಾಗಲು ಅಭ್ಯರ್ಥಿಗಳಿಂದ ಮಧ್ಯವರ್ತಿಗಳು ಬರೋಬ್ಬರಿ 80 ಲಕ್ಷ ರೂಪಾಯಿಗಳ ಭಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪಗಳು ಹಾಗೂ ಆಡಿಯೋಗಳು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿವೆ. ಕೇವಲ ಹಣಕ್ಕಾಗಿ ಒಎಂಆರ್ ಶೀಟ್‌ಗಳನ್ನು ತಿದ್ದಲು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ಸ್ವತಃ ಉನ್ನತ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎನ್ನುವ ತನಿಖಾ ವರದಿಗಳು ವ್ಯವಸ್ಥೆಯ ಕೆಟ್ಟ ಮುಖವನ್ನು ಅನಾವರಣಗೊಳಿಸಿವೆ.
ಸರಕಾರಿ ಹುದ್ದೆಯನ್ನು ಪ್ರತಿಭೆಯ ಆಧಾರದ ಮೇಲೆ ಪಡೆಯುವ ಬದಲು, ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಕೊಟ್ಟು ಖರೀದಿಸುವ ‘ಸಂತೆ’ಯನ್ನಾಗಿ ಮಾಡಿರುವ ಇಂತಹ ಹಗರಣಗಳು, ಹಗಲಿರುಳು ಓದುವ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಪಾಲಿಗೆ ಮರಣಶಾಸನವಾಗಿ ಪರಿಣಮಿಸಿವೆ.
ಕೆಎಎಸ್ ಮತ್ತು ನೇಮಕಾತಿ ವಿಳಂಬದ ಪೆಡಂಭೂತ
ಭ್ರಷ್ಟಾಚಾರದ ಜೊತೆಗೆ ಅಭ್ಯರ್ಥಿಗಳನ್ನು ಕಾಡುತ್ತಿರುವ ಮತ್ತೊಂದು ದೊಡ್ಡ ಪೆಡಂಭೂತ ಎಂದರೆ ‘ಮಿತಿಮೀರಿದ ವಿಳಂಬ’. ಇದಕ್ಕೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸುವ ಕೆಎಎಸ್ ಪರೀಕ್ಷೆಗಳೇ ಅತ್ಯುತ್ತಮ ಉದಾಹರಣೆ. ಒಂದು ಕೆಎಎಸ್ ಅಧಿಸೂಚನೆ ಹೊರಬಿದ್ದು, ಪೂರ್ವಭಾವಿ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಮುಗಿದು ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಸಿಗಲು ಕನಿಷ್ಠ 4 ರಿಂದ 5 ವರ್ಷಗಳೇ ಬೇಕಾಗುತ್ತವೆ. ಹೀಗೇಕೆ? ಪರೀಕ್ಷೆಗೂ, ಅಂತಿಮ ಫಲಿತಾಂಶ ಕ್ಕೂ ಇಷ್ಟೊಂದು ಸುದೀರ್ಘ ಅಂತರ ಏಕೆ ಬೇಕು ಎಂಬುದು ಪ್ರಾಮಾಣಿಕವಾಗಿ ಓದುವ ಪ್ರತಿ ಯೊಬ್ಬ ಅಭ್ಯರ್ಥಿಯನ್ನು ಕಾಡುತ್ತಿರುವ ಯಕ್ಷಪ್ರಶ್ನೆಯಾಗಿದೆ.
ಈ ಸುದೀರ್ಘ ವಿಳಂಬಕ್ಕೆ ಇತ್ತೀಚೆಗೆ ಪೂರ್ಣಗೊಂಡ 2017-18ನೇ ಸಾಲಿನ ‘ಕೆಎಎಸ್’ (106 ಹುದ್ದೆ ಗಳು) ನೇಮಕಾತಿಯೇ ಜ್ವಲಂತ ಸಾಕ್ಷಿಯಾಗಿದೆ. ಈ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯು 2020ರಲ್ಲಿ ನಡೆದಿತ್ತು. ಆದರೆ, ಇದರ ಅಂತಿಮ ಆಯ್ಕೆ ಪಟ್ಟಿಯು ಪ್ರಕಟವಾದದ್ದು ಬರೋಬ್ಬರಿ ಎರಡು ವರ್ಷಗಳ ನಂತರ, ಅಂದರೆ 2022ರಲ್ಲಿ! ಹಾಗೂ 2024ರಲ್ಲಿ ಶುರುವಾದ 364 ಹುದ್ದೆಗಳ ನೇಮಕಾತಿ ಯು ಇನ್ನೂ ಮುಗಿದಿಲ್ಲ.
ಸಾಮಾನ್ಯವಾಗಿ ಅಧಿಸೂಚನೆ ಹೊರಡಿಸಿದ ನಂತರ ಪೂರ್ವಭಾವಿ ಪರೀಕ್ಷೆ ನಡೆಯಲು ಹಲವು ತಿಂಗಳುಗಳ ವಿಳಂಬವಾಗುತ್ತದೆ. ತದನಂತರ ಕೀ ಉತ್ತರಗಳಿಗೆ ಆಕ್ಷೇಪಣೆ, ನ್ಯಾಯಾಲಯದ ಮೆಟ್ಟಿಲೇರುವುದು, ತಡೆಯಾeಗಳು, ಮುಖ್ಯ ಪರೀಕ್ಷೆಯ ಮೌಲ್ಯಮಾಪನದಲ್ಲಿನ ವಿಪರೀತ ವಿಳಂಬ ಹಾಗೂ ಆಡಳಿತಾತ್ಮಕ ಇಚ್ಛಾಶಕ್ತಿಯ ಕೊರತೆಯೇ ಈ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ.
ಒಂದೆಡೆ ಯುಪಿಎಸ್ಸಿ ಪ್ರತಿ ವರ್ಷ ನಿಯಮಿತವಾಗಿ ಹಾಗೂ ಶಿಸ್ತುಬದ್ಧವಾಗಿ ಐಎಎಸ್ ಪರೀಕ್ಷೆ ಗಳನ್ನು ನಡೆಸಿ ಕೇವಲ ಹನ್ನೊಂದು ತಿಂಗಳಲ್ಲಿ ಅಂತಿಮ ಫಲಿತಾಂಶ ನೀಡುವಾಗ, ನಮ್ಮ ಕೆಪಿಎಸ್ಸಿಗೆ ಮಾತ್ರ ಒಂದು ಪ್ರಕ್ರಿಯೆ ಮುಗಿಸಲು ಏಕಿಷ್ಟು ವರ್ಷಗಳು ಬೇಕು ಎಂಬುದು ಸಂಶಯಾ ಸ್ಪದವಾಗಿದೆ. ಆಯೋಗದ ಈ ಸುದೀರ್ಘ ಕಾಯುವಿಕೆಯ ಆಟದಲ್ಲಿ ಅಭ್ಯರ್ಥಿಗಳ ವಯೋಮಿತಿ ಮೀರುತ್ತದೆ. ಕುಟುಂಬದ ಆಸರೆಯಾಗಬೇಕಿದ್ದ ಯುವಕರು ವರ್ಷಗಟ್ಟಲೆ ಫಲಿತಾಂಶಕ್ಕಾಗಿ ಕಾಯುತ್ತಾ ಕೂರುವುದರಿಂದ, ಅವರ ಆರ್ಥಿಕ ಹಾಗೂ ಮಾನಸಿಕ ಸಂಕಷ್ಟಗಳು ಹೇಳತೀರದಷ್ಟು ಹೆಚ್ಚಾಗುತ್ತವೆ.
ಕೆಪಿಎಸ್ಸಿ ಮತ್ತು ಕೆಇಎ ನಡುವಿನ ಗೊಂದಲ
ಇನ್ನು ಅಭ್ಯರ್ಥಿಗಳನ್ನು ಇನ್ನಿಲ್ಲದಂತೆ ಕಾಡುತ್ತಿರುವ ಮತ್ತೊಂದು ಸಮಸ್ಯೆ ಎಂದರೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಧಿಕಾರ ನಡುವಿನ ಅಽಕಾರ ವ್ಯಾಪ್ತಿಯ ಗೊಂದಲ. ವಾಸ್ತವದಲ್ಲಿ ಕೆಪಿಎಸ್ಸಿ ನೇಮಕಾತಿಗಳಿಗಾಗಿಯೇ ಸಂವಿಧಾನಬದ್ಧವಾಗಿ ರಚನೆಯಾದ ಸಂಸ್ಥೆ. ಆದರೆ, ಹಿಂದಿನ ಹಲವು ನೇಮಕಾತಿಗಳಲ್ಲಿನ ವಿವಾದಗಳಿಂದಾಗಿ ಇದರ ಮೇಲೆ ನಂಬಿಕೆ ಕಳೆದುಕೊಂಡ ಸರಕಾರಗಳು, ಹುzಗಳ ನೇಮಕಾತಿ ಜವಾಬ್ದಾರಿಯನ್ನು ಕೆಇಎ ಹೆಗಲಿಗೆ ಹಾಕುತ್ತಿವೆ.
ಆದರೆ ವಾಸ್ತವದಲ್ಲಿ ಕೆಇಎ ಮೂಲತಃ ಸಿಇಟಿ ಅಂತಹ ಶೈಕ್ಷಣಿಕ ಪ್ರವೇಶಾತಿ ಪರೀಕ್ಷೆಗಳನ್ನು ನಡೆಸಲು ರಚನೆಯಾದ ಸಂಸ್ಥೆಯೇ ಹೊರತು, ಸ್ಪರ್ಧಾತ್ಮಕ ನೇಮಕಾತಿ ಪರೀಕ್ಷೆಗಳನ್ನು ನಡೆಸಲು ಅದಕ್ಕೆ ಪೂರ್ಣ ಪ್ರಮಾಣದ ಮೂಲಸೌಕರ್ಯವಾಗಲೀ, ಪರಿಣತಿಯಾಗಲೀ ಇಲ್ಲ. ಇದರಿಂದಾಗಿ ಯಾವ ಪರೀಕ್ಷೆಯನ್ನು ಯಾರು ನಡೆಸುತ್ತಾರೆ, ಪಠ್ಯಕ್ರಮವೇನು, ಹಾಗೂ ನಿಯಮಗಳೇನು ಎಂಬ ಬಗ್ಗೆ ಅಭ್ಯರ್ಥಿಗಳಲ್ಲಿ ತೀವ್ರ ಗೊಂದಲ ಸೃಷ್ಟಿಯಾಗಿದೆ. ನೇಮಕಾತಿ ನಡೆಸುವ ಸಾಮರ್ಥ್ಯ ಇಲ್ಲದಿದ್ದರೂ ಕೆಇಎ ನಿಗಮ ಮಂಡಳಿಗಳ ಪರೀಕ್ಷೆಗಳನ್ನು ನಡೆಸಲು ಹೋಗಿ, ಬ್ಲೂಟೂತ್ ಹಗರಣಗಳಿಗೆ ಸಾಕ್ಷಿಯಾಗಿರುವುದು ಇಡೀ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.
ಇದರ ಜೊತೆಗೆ, ಕೆಇಎ ಬಳಿ ನೇಮಕಾತಿ ಪ್ರಕ್ರಿಯೆಗಳನ್ನು ನಿಭಾಯಿಸುವ ಕಾಯಂ ತಜ್ಞರಾಗಲೀ ಅಥವಾ ದೋಷರಹಿತ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ನುರಿತ ಮಂಡಳಿಯಾಗಲೀ ಇಲ್ಲದಿರುವುದು ಮತ್ತಷ್ಟು ಅವಾಂತರಗಳಿಗೆ ಕಾರಣವಾಗಿದೆ. ಇತ್ತೀಚಿನ ಹಲವು ಪರೀಕ್ಷೆಗಳಲ್ಲಿ ಕೇವಲ ಗೂಗಲ್ ಅನುವಾದದ ಮೊರೆಹೋಗಿ ಕನ್ನಡದ ಪ್ರಶ್ನೆಗಳನ್ನು ಅಕ್ಷರಶಃ ಕೊಲೆ ಮಾಡಿದ್ದು ಹಾಗೂ ಪಠ್ಯಕ್ರಮದ ಹೊರಗಿನಿಂದ ಪ್ರಶ್ನೆಗಳನ್ನು ಕೇಳಿದ್ದು ಅಭ್ಯರ್ಥಿಗಳ ತೀವ್ರ ಆಕ್ರೋಶಕ್ಕೆ ಗುರಿಯಾ ಗಿತ್ತು.
ಒಂದೆಡೆ ಕೆಪಿಎಸ್ಸಿ ತನ್ನ ಮಿತಿಮೀರಿದ ವಿಳಂಬ ಧೋರಣೆಯಿಂದ ಅಭ್ಯರ್ಥಿಗಳನ್ನು ಹೈರಾಣಾಗಿ ಸುತ್ತಿದ್ದರೆ, ಇನ್ನೊಂದೆಡೆ ಕೆಇಎ ಪರೀಕ್ಷಾ ನಿರ್ವಹಣೆಯ ಮೂಲಭೂತ ಜ್ಞಾನವೂ ಇಲ್ಲದೆ ಯಡವಟ್ಟುಗಳನ್ನು ಮಾಡುತ್ತಿದೆ. ಈ ಎರಡು ಸಂಸ್ಥೆಗಳ ನಡುವಿನ ಹಗ್ಗಜಗ್ಗಾಟ ಹಾಗೂ ಯಾವ ಇಲಾಖೆಯ ಪರೀಕ್ಷೆಯನ್ನು ಯಾವ ಸಂಸ್ಥೆಗೆ ವಹಿಸಬೇಕು ಎಂಬ ಬಗ್ಗೆ ಸರಕಾರದ ಬಳಿ ಸ್ಪಷ್ಟ ನೀತಿ ಇಲ್ಲದಿರುವುದರಿಂದ, ಹಗಲಿರುಳು ಕಷ್ಟಪಟ್ಟು ಓದುವ ಪ್ರಾಮಾಣಿಕ ಅಭ್ಯರ್ಥಿಗಳು ಮಾತ್ರ ಈ ವ್ಯವಸ್ಥೆಯ ಬಲಿಪಶುಗಳಾಗುತ್ತಿzರೆ.
ಪರಿಹಾರಗಳು
ಈ ಕೆಟ್ಟ ವ್ಯವಸ್ಥೆಗೆ ಕೇವಲ ತೇಪೆ ಹಚ್ಚುವ ಬದಲು, ಸಂಪೂರ್ಣ ಪುನಾರಚನೆ ಆಗಬೇಕಿದೆ. ಇದಕ್ಕಾಗಿ ಈ ಕೆಳಗಿನ ತಂತ್ರeನ ಆಧಾರಿತ ಸುಧಾರಣೆಗಳು ಅತ್ಯಗತ್ಯ:
೧. ಶೈಕ್ಷಣಿಕ ಮತ್ತು ನೇಮಕಾತಿ ಪರೀಕ್ಷೆಗಳಿಗೆ ಪ್ರತ್ಯೇಕ ಪ್ರಾಧಿಕಾರ: ಕೆಇಎ ಕೇವಲ ಶೈಕ್ಷಣಿಕ ಪ್ರವೇಶಾತಿಗಳಿಗೆ ಮಾತ್ರ ಸೀಮಿತವಾಗಬೇಕು. ಸರಕಾರಿ ಹುದ್ದೆಗಳ ನೇಮಕಾತಿಗಾಗಿ ಸಂಪೂರ್ಣ ಪ್ರತ್ಯೇಕವಾದ, ಅತ್ಯಾಧುನಿಕ ತಂತ್ರeನ ಆಧಾರಿತ ನೂತನ ಪರೀಕ್ಷಾ ಪ್ರಾಧಿಕಾರವನ್ನು ಹುಟ್ಟುಹಾಕಬೇಕು.
೨. ಕಡ್ಡಾಯವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT): ಪ್ರಶ್ನೆಪತ್ರಿಕೆ ಮುದ್ರಣ, ಸಾಗಾಣಿಕೆ ಮತ್ತು ಒಎಂಆರ್ ಶೀಟ್ ತಿದ್ದುವ ಹಗರಣಗಳಿಗೆ ಶಾಶ್ವತ ಬ್ರೇಕ್ ಹಾಕಲು, ರಾಜ್ಯದ ಪ್ರತಿಯೊಂದು ನೇಮಕಾತಿ ಪರೀಕ್ಷೆಯನ್ನೂ ಕಡ್ಡಾಯವಾಗಿ ಕಂಪ್ಯೂಟರ್ ಆಧಾರಿತವಾಗಿ (Computer Based Test) ನಡೆಸಬೇಕು. ಇದರಿಂದ ಪೇಪರ್ ಲೀಕ್ ಆಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
೩. ಬೃಹತ್ ಪ್ರಶ್ನೆ ಬ್ಯಾಂಕ್ ಮತ್ತು ಅಲ್ಗಾರಿದಮ್ ಬಳಕೆ: ಪ್ರಶ್ನೆಪತ್ರಿಕೆ ಸಿದ್ಧಪಡಿಸುವಲ್ಲಿ ಮಾನವ ಹಸ್ತಕ್ಷೇಪ ಸಂಪೂರ್ಣವಾಗಿ ನಿಲ್ಲಬೇಕು. ನೂರಾರು ಪ್ರಶ್ನೆಗಳಿರುವ ‘ಕ್ವೆಶ್ಚನ್ ಬ್ಯಾಂಕ್’ ಅನ್ನು ಸಿದ್ಧಪಡಿಸಬೇಕು. ಪರೀಕ್ಷೆಯ ದಿನದಂದು, ಪರೀಕ್ಷೆ ಪ್ರಾರಂಭವಾಗುವ ಕೇವಲ ಐದು ನಿಮಿಷಗಳ ಮೊದಲು ಕಂಪ್ಯೂಟರ್ ಪ್ರೋಗ್ರಾಮ್ ಅಥವಾ ಅಲ್ಗಾರಿದಮ್ ತಾನಾಗಿಯೇ ಪ್ರಶ್ನೆಗಳನ್ನು ಆಯ್ಕೆ ಮಾಡಿ ಅಭ್ಯರ್ಥಿಗಳ ಪರದೆಗೆ ರವಾನಿಸುವಂತಾಗಬೇಕು. ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರಶ್ನೆಗಳ ಕ್ರಮ ಬದಲಾಗುವುದರಿಂದ ನಕಲು ಮಾಡಲು ಸಾಧ್ಯವಿರುವುದಿಲ್ಲ.
೪. ನಿಗದಿತ ಕಾಲಮಿತಿಯಲ್ಲಿ ನೇಮಕಾತಿ ಪ್ರಕ್ರಿಯೆ ಅಂತ್ಯ: ನೇಮಕಾತಿ ವಿಳಂಬವನ್ನು ತಪ್ಪಿಸಲು, ಅಧಿಸೂಚನೆ ಹೊರಡಿಸಿದ ದಿನದಿಂದ ಹಿಡಿದು ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಮಾಡುವವರೆಗೆ ಕಟ್ಟುನಿಟ್ಟಾದ ಕಾಲಮಿತಿಯನ್ನು (ಉದಾಹರಣೆಗೆ 6 ರಿಂದ 8 ತಿಂಗಳು) ನಿಗದಿ ಪಡಿಸಬೇಕು. ಯಾವುದೇ ಕಾರಣಕ್ಕೂ ಈ ಕಾಲಮಿತಿಯನ್ನು ಮೀರುವಂತಿಲ್ಲ ಎಂಬ ಕಾನೂನು ಜಾರಿಗೆ ತರಬೇಕು. ವಿಳಂಬವಾದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು.
೫. ಸಂದರ್ಶನದ ಕಡ್ಡಾಯ ವಿಡಿಯೋ ಚಿತ್ರೀಕರಣ ಮತ್ತು ನ್ಯಾಯಾಂಗ ಸಮಿತಿ ಪರಿಶೀಲನೆ: ಸಂದರ್ಶನ ಪ್ರಕ್ರಿಯೆಯಲ್ಲಿ ನಡೆಯುವ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವನ್ನು ತಡೆಯಲು, ಪ್ರತಿಯೊಂದು ಸಂದರ್ಶನವನ್ನು ಕಡ್ಡಾಯವಾಗಿ ಸಂಪೂರ್ಣ ವಿಡಿಯೋ ರೆಕಾರ್ಡಿಂಗ್ ಮಾಡಬೇಕು. ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗೂ ಮತ್ತು ಸಂದರ್ಶನದಲ್ಲಿ ನೀಡಲಾದ ಅಂಕಗಳಿಗೂ ಭಾರೀ ಪ್ರಮಾಣದ ವ್ಯತ್ಯಾಸಗಳು ಕಂಡುಬಂದರೆ, ಅದನ್ನು ತಕ್ಷಣವೇ ಗಂಭೀರವಾಗಿ ಪರಿಗಣಿಸಬೇಕು.
ಲಿಖಿತ ಪರೀಕ್ಷೆಯಲ್ಲಿ ಅತಿ ಕಡಿಮೆ ಅಂಕ ಪಡೆದವರಿಗೆ ಸಂದರ್ಶನದಲ್ಲಿ ಅತ್ಯಧಿಕ ಅಂಕಗಳನ್ನು ನೀಡುವಂತಹ ಅನುಮಾನಾಸ್ಪದ ಪ್ರಕರಣಗಳನ್ನು ಕಡ್ಡಾಯವಾಗಿ ಪರಿಶೀಲಿಸಲು ನಿವೃತ್ತ ನ್ಯಾಯಾಽಶರನ್ನೊಳಗೊಂಡ ಒಂದು ‘ಸ್ವತಂತ್ರ ನ್ಯಾಯಾಂಗ ಸಮಿತಿ’ಯನ್ನು ರಚಿಸಬೇಕು.
ಕನ್ನಡಿಗರ ತೆರಿಗೆ ಹಣದಿಂದ ನಡೆಯುವ ಆಡಳಿತ ವ್ಯವಸ್ಥೆಗೆ ನೈಜ ಮತ್ತು ಪ್ರಾಮಾಣಿಕ ಪ್ರತಿಭೆಗಳು ಆಯ್ಕೆಯಾಗಬೇಕಾದರೆ, ಪ್ರಸ್ತುತ ಇರುವ ನೇಮಕಾತಿ ವ್ಯವಸ್ಥೆಯಲ್ಲಿ ಈ ತಂತ್ರಜ್ಞಾನ ಆಧಾರಿತ ಕ್ರಾಂತಿಕಾರಿ ಬದಲಾವಣೆಗಳು ತುರ್ತಾಗಿ ಆಗಬೇಕಿದೆ. ಹಗರಣ ನಡೆದಾಗ ಕೇವಲ ತನಿಖೆ ಮಾಡುವು ದಕ್ಕಿಂತ, ಹಗರಣಕ್ಕೆ ಆಸ್ಪದವೇ ಇರದಂತಹ ದೋಷರಹಿತ, ತಂತ್ರಜ್ಞಾನ ಚಾಲಿತ ‘ಸಿಸ್ಟಮ್’ ನಿರ್ಮಾಣ ಮಾಡುವುದು ಇಂದಿನ ತುರ್ತು ಅಗತ್ಯ. ಆಗ ಮಾತ್ರ ರಾಜ್ಯದ ಲಕ್ಷಾಂತರ ಯುವಕರ ಭವಿಷ್ಯ ಸುರಕ್ಷಿತವಾಗಿರುತ್ತದೆ.
ಈ ಭ್ರಷ್ಟ ವ್ಯವಸ್ಥೆಯ ಅತಿದೊಡ್ಡ ಬಲಿಪಶುಗಳೆಂದರೆ ಹಳ್ಳಿಗಳಿಂದ ನಗರಗಳಿಗೆ ಬಂದು ನೆಲೆಸಿರುವ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು. ಸಣ್ಣ ಕೊಠಡಿಗಳಲ್ಲಿ ಬಾಡಿಗೆಗಿದ್ದು, ಮನೆಯಿಂದ ಬರುವ ಅಲ್ಪ ಹಣದಲ್ಲಿ ಜೀವನ ಸಾಗಿಸುತ್ತಾ, ಹಗಲಿರುಳು ಕಷ್ಟಪಟ್ಟು ಓದುವ ಲಕ್ಷಾಂತರ ಯುವಜನತೆಯ ಭವಿಷ್ಯವು ಇಂತಹ ಅಕ್ರಮಗಳಿಂದಾಗಿ ಕಮರಿಹೋಗುತ್ತಿದೆ.
ಇದೆಲ್ಲವನ್ನೂ ನೋಡುತ್ತಿರುವಾಗ, ಕೇವಲ ಒಂದು ಪ್ರಾಮಾಣಿಕ ಪರೀಕ್ಷೆಯಿಂದ ಪ್ರಾಮಾಣಿಕ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುವ ಈ ಬಡ ವಿದ್ಯಾರ್ಥಿಗಳ ಕನಸು ಈ ಭ್ರಷ್ಟ ವ್ಯವಸ್ಥೆಯಲ್ಲಿ ಎಂದಾದರೂ ನನಸಾಗುವುದೇ ಎಂಬ ಕರಾಳ ಪ್ರಶ್ನೆ ಪ್ರತಿಯೊಬ್ಬರನ್ನು ಕಾಡುತ್ತಿದೆ.