Rangaswamy Mookanahalli Column: ಮಕ್ಕಳನ್ನು ಬೆಳೆಸುವಲ್ಲಿ ಸೋಲುತ್ತಿದ್ದೇವೆಯೇ ?
ಯುರೋಪಿಯನ್ನರಲ್ಲಿ ನಾನು ಕಂಡ ಮತ್ತು ಇಷ್ಟಪಡುವ ಅಂಶವೆಂದರೆ, ‘ಬಾಲಭಾಷೆ’ ಎಂದು ಅವರು ಸುಮ್ಮನೆ ಮುದ್ದುಮುದ್ದಾಗಿ ತಪ್ಪುತಪ್ಪು ಉಚ್ಚಾರಣೆ ಮಾಡುವುದಿಲ್ಲ. ಮಗುವಿನೊಂದಿಗೆ ಸಹಜವಾಗಿ ಮಾತನಾಡುತ್ತಾರೆ. ಮನೆಯ ಎಲ್ಲಾ ಕೆಲಸಗಳಲ್ಲಿ ಮಗು ವನ್ನು ಭಾಗಿಯನ್ನಾಗಿ ಮಾಡುತ್ತಾರೆ. ಅವರಿಗೆ ಯಾವುದೇ ವಿಶೇಷ ಆದ್ಯತೆಯನ್ನು ನೀಡುವುದಿಲ್ಲ.


ವಿಶ್ವರಂಗ
ನಾವು ಬೇರೆ ದೇಶಕ್ಕೆ ಪ್ರವಾಸ ಹೋದಾಗ ಅತ್ಯಂತ ಮುಖ್ಯವಾಗಿ ನೆನಪಿಡಬೇಕಾದ ಅಂಶ- ನಾವು ನಮ್ಮ ದೇಶವನ್ನು ಪ್ರತಿನಿಧಿಸುತ್ತಿದ್ದೇವೆ ಎನ್ನುವುದು. ನಾವು ನಮ್ಮ ದೇಶದ ರಾಯ ಭಾರಿಗಳು. ಹೌದು, ಸರಕಾರ, ಸಮಾಜ ನಮ್ಮನ್ನು ‘ರಾಯಭಾರಿ’ ಎಂದು ನೇಮಿಸಿಲ್ಲ; ಆದರೆ ಆ ರೀತಿ ನಮ್ಮ ನೆಲ, ಜಲ, ಭಾಷೆಗೆ ಕುಂದು ಬಾರದಂತೆ ನಡೆದುಕೊಳ್ಳುವುದು ನಮ್ಮ ಕರ್ತವ್ಯ. ಭಾರತದ ಜನಸಂಖ್ಯೆ ಎಷ್ಟು ಎಂದು ನಿಖರವಾಗಿ ಗೊತ್ತಿಲ್ಲ. ಹಲವಾರು ಪತ್ರಿಕೆ ಗಳು 130 ಕೋಟಿ, 140 ಕೋಟಿ ಎಂದು ಇನ್ನೂ ಬರೆಯುತ್ತಿವೆ. ವಯಸ್ಸಿನಲ್ಲಿ, ಜ್ಞಾನದಲ್ಲಿ ಹಿರಿಯ ರಾದ ದೇವೇಗೌಡ ಅವರು ತೀರಾ ಇತ್ತೀಚೆಗೆ ‘150 ಕೋಟಿ ಜನಸಂಖ್ಯೆಯ ಭಾರತ ದಲ್ಲಿ’ ಎಂದು ಹೇಳಿದ ಮಾತು ನನಗಂತೂ ಆಶ್ಚರ್ಯ ಮತ್ತು ಖುಷಿ ಎರಡನ್ನೂ ಒಟ್ಟಿಗೆ ತಂದಿತು.
ಕಾರಣ ಸ್ಪಷ್ಟ, ಈ ವಯಸ್ಸಿನಲ್ಲಿ ಅವರಿಗಿರುವ ಸಾಮಾನ್ಯ ಜ್ಞಾನ! ಇರಲಿ. ಈ ಮಾತು ಇಲ್ಲೇಕೆ ಉಲ್ಲೇಖ ಮಾಡಿದೆ ಎಂದರೆ, 150 ಕೋಟಿಗೂ ಹೆಚ್ಚಿರುವ ಭಾರತದ ಎಲ್ಲರಿಗೂ ‘ಎಟಿಕ್ವೆಟ್ಸ್’ ಅಂದರೆ ಸನ್ನಡತೆ, ಶಿಷ್ಟಾಚಾರ ಕಲಿಸುವುದು ಸುಲಭದ ಮಾತಲ್ಲ. ಹೀಗಾಗಿ ಭಾರತ ಎಂದರೆ ವಿದೇಶಿಯರ ಮನಸ್ಸಿನಲ್ಲಿ ಇಂದಿಗೂ ‘ಕೊಂಪೆ, ಗಲೀಜು’ ಎನ್ನುವ ಅಭಿಪ್ರಾಯ ಬೇರೂರಿದೆ. ಅದನ್ನು ನಾವು ತಪ್ಪು ಎಂದು ಖಂಡಿಸಿ ಪ್ರಯೋಜನವಿಲ್ಲ. ನಮ್ಮ ನಡತೆಯನ್ನು ತಿದ್ದಿಕೊಂಡರೆ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ. ನಾವು ಹೇಳದೆ ಅವರಿಗೂ ನಮ್ಮ ಬದಲಾವಣೆ ಕಾಣುತ್ತದೆ.
ಇದನ್ನೂ ಓದಿ: Rangaswamy Mookanahalli Column: ಹಣಕಾಸು ನಿರ್ವಹಣೆ ಬಹಳ ಮುಖ್ಯ !
ಮೊದಲೇ ಹೇಳಿದಂತೆ 150 ಕೋಟಿ ಜನರನ್ನು ತಿದ್ದುವುದು ಅಸಾಧ್ಯ. ಆದರೆ ವಿದೇಶ ಪ್ರಯಾಣ ಮಾಡುವಷ್ಟು ವಿದ್ಯೆ, ಹಣ ಇರುವವರನ್ನು ತಿದ್ದುವುದು ಕಷ್ಟವಲ್ಲ ಎನ್ನುವುದು ನನ್ನ ಭಾವನೆಯಾಗಿತ್ತು. ಆದರೆ ಪ್ರತಿ ಬಾರಿ ವಿದೇಶ ಪ್ರಯಾಣ ಮುಗಿಸಿ ಬಂದ ನಂತರ ಈ ಭಾವನೆಯ ಬಗ್ಗೆ ಸಂದೇಹ ಬರುತ್ತದೆ. ಅದಕ್ಕೆ ಕಾರಣಗಳು ಹಲವು. ಈ ಬಾರಿ ನಮ್ಮ ಪ್ರಯಾಣವು ನನ್ನ ಬದುಕಿನ 40 ಪ್ರತಿಶತ ಸಮಯವನ್ನು ಕಳೆದ ಸ್ಪೇನ್ ಗೆ ಹೋಗುವುದು, ನಂತರ ನೆದರ್ಲ್ಯಾಂಡ್ ಮತ್ತು ಡೆನ್ಮಾರ್ಕ್ ದೇಶಗಳನ್ನು ನೋಡಿಕೊಂಡು ಬರುವುದು ಎಂದು ತೀರ್ಮಾನವಾಗಿತ್ತು.
23 ದಿನಗಳ ಪ್ರವಾಸದಲ್ಲಿ ಯುರೋಪಿಯನ್ ಜನರ ಜತೆಗೆ ಹಲವಾರು ಭಾರತೀಯ ರೊಂದಿಗೂ ಸಮಯ ಕಳೆಯುವ ಸುಯೋಗ ಒದಗಿ ಬಂತು. ಸಂಬಂಧವಿಲ್ಲದ ಹಲವಾರು ಭಾರತೀಯರು, ಏರ್ ಪೋರ್ಟ್‌ನಲ್ಲಿ, ಯಾವುದೋ ಹಡಗಿನಲ್ಲಿ, ಟೂರಿಸ್ಟ್ ಬಸ್‌ನಲ್ಲಿ, ರೈಲು ನಿಲ್ದಾಣದಲ್ಲಿ, ಕಾಫಿ ಶಾಪಿನಲ್ಲಿ ಸಿಕ್ಕವರು- ಹೀಗೆ. ಕೆಲವರ ಜತೆಗಿನ ಮಾತುಕಥೆಯು ಕೇವಲ ‘ಹಾಯ್, ಬಾಯ್’ಗೆ ಸೀಮಿತವಾಗಿದ್ದರೆ, ಕೆಲವರ ಜತೆಗೆ ಸ್ವಲ್ಪ ಹೆಚ್ಚು ಮಾತು ಕೂಡ ಆಗಿತ್ತು.
ಒಟ್ಟು ಸಾರಾಂಶ ಮಾತ್ರ ಎಲ್ಲೆಡೆ ಸೇಮ್. ಯುರೋಪಿನ ಫ್ಲೈಟ್‌ಗಳಲ್ಲಿ ಎಲ್ಲವೂ ಅಚ್ಚು ಕಟ್ಟು. ಕುಳಿತುಕೊಳ್ಳುವುದರಿಂದ ಹಿಡಿದು, ವಿಮಾನ ನಿಂತಾಗ ಇಳಿಯುವಾಗ ಕೂಡಾ ಶಿಸ್ತು, ಸಂಯಮ ಎದ್ದು ಕಾಣುತ್ತಿತ್ತು. ಅವರು ಅನೌನ್ಸ್ ಮಾಡಿದ ರೀತಿಯಲ್ಲಿ ಜನ ಎದ್ದು ಹೋಗುತ್ತಿದ್ದರು.

ಇನ್ನು ಇಂಟರ್‌ನ್ಯಾಷನಲ್ ಫ್ಲೈಟ್‌ಗಳಲ್ಲಿ ಕೂಡ ಕತಾರ್‌ವರೆಗೆ ಇದ್ದುದರಲ್ಲಿ ವಾಸಿ. ಕತಾರ್ ಕಡೆಯಿಂದ ಬೆಂಗಳೂರಿಗೆ ಬರುವ ಮತ್ತು ಬೆಂಗಳೂರಿನಿಂದ ಕತಾರ್ ಕಡೆಗೆ ಹೋಗುವ ಫ್ಲೈಟ್‌ಗಳಲ್ಲಿ ಅದೇ ಅಶಿಸ್ತು, ದುರಹಂಕಾರ, ದುರ್ನಡತೆ ಕಾಣಸಿಗುತ್ತಿತ್ತು. ನಾವು ಹಣವನ್ನು ಗಳಿಸಿಕೊಂಡೆವು, ಆದರೆ ಸನ್ನಡತೆಯನ್ನು ಮಾತ್ರ ಕಲಿಯಲಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಾ ಹೋಯ್ತು. ಎಲ್ಲರೂ ಹೀಗೆಯೇ ಎನ್ನುವ ಸಿನಿಕತನ ನನಗಿಲ್ಲ. ನಾವು ನಮ್ಮ ಅನುಭವಗಳ ಮುದ್ದೆ! ನನಗಾದ ಅನುಭವ ಇಲ್ಲಿದೆ.
ಕತಾರ್ ನಗರದಿಂದ ಬೆಂಗಳೂರಿಗೆ ಬರಲೆಂದು ಕಾಯುತ್ತಿದ್ದಾಗ, ಬಹುತೇಕ ಭಾರತೀಯರು ವಿಡಿಯೋ ಕಾಲ್ ಮಾಡಿ ತಮ್ಮ ಮನೆಯ ಸದಸ್ಯರೊಂದಿಗೆ ತಮ್ಮ ತಮ್ಮ ಭಾಷೆಗಳಲ್ಲಿ ಜೋರಾಗಿ, ಬೇರೆ ಯಾರೊಬ್ಬರ ಬಗ್ಗೆಯೂ ಗಮನವಿರದಂತೆ ಮಾತನಾಡುತ್ತಿದ್ದರು. ಬೇರೆಯವರ ಖಾಸಗಿತನವನ್ನು ನಾವು ಉಲ್ಲಂಸುತ್ತಿದ್ದೇವೆ ಎನ್ನುವ ಕಿಂಚಿತ್ತು ಭಾವನೆಯೂ ಅವರಲ್ಲಿ ಕಾಣಲಿಲ್ಲ.
ನಲವತ್ತು, ಐವತ್ತರ ಅಂಕಲ್‌ಗಳಂತೂ ವಿಡಿಯೋ ಕಾಲ್‌ನಲ್ಲಿ ಏರ್‌ಪೋರ್ಟ್ ತೋರಿಸುವ ನೆಪದಲ್ಲಿ ಎಲ್ಲರನ್ನೂ ತೋರಿಸುತ್ತಿದ್ದರು. ಒಂದು ಭಾರತೀಯ ಕುಟುಂಬದ ನಾಲ್ಕು ಜನ ಸದಸ್ಯರ ವರ್ತನೆ ಮರೆಯುವಂತಿಲ್ಲ! ದಂಪತಿಗಳು ಹಾಗೂ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿನ ನಾಲ್ಕು ಜನರ ಕುಟುಂಬವದು. ಆ ಹುಡುಗನಿಗೆ 10-12 ವಯಸ್ಸಿರ ಬಹುದು.
ನಾಲ್ಕೈದು ವಯಸ್ಸಿನ ಮಕ್ಕಳಿಗಿಂತ ಕಡೆಯಾಗಿ ವರ್ತಿಸುತ್ತಿದ್ದ. ಅವನನ್ನು ನಿಯಂತ್ರಿಸಲು ಪೋಷಕರಿಗೆ ಆಗಲಿಲ್ಲ. ಅತಿ ಮುದ್ದುಮಾಡಿ ಸಾಕಿದುದರ ಫಲವದು. ಮನೆಯಲ್ಲಿ ತಿದ್ದದೆ, ಏರ್‌ಪೋರ್ಟ್‌ನಲ್ಲಿ ಮಗು ಸುಶಿಕ್ಷಿತವಾಗಿ ವರ್ತಿಸಲಿ ಎನ್ನುವ ಪೋಷಕರ ಎಲ್ಲಾ ಕಸರತ್ತು ಗಳು ಕೂಡ ನೀರಿನಲ್ಲಿ ಹೋಮ ಮಾಡಿದಂತೆ ವ್ಯರ್ಥವಾಯಿತು. ಕಷ್ಟದಿಂದ ಬೆಳೆದು ಬಂದು ಯಶಸ್ಸು, ಒಂದಷ್ಟು ಹಣ ನೋಡಿದ ಭಾರತೀಯ ಪೋಷಕರನ್ನು ಅವರು ಪ್ರತಿ ಬಿಂಬಿಸುತ್ತಿದ್ದರು.
‘ನಾವು ಕಷ್ಟಪಟ್ಟು ಬೆಳೆದೆವು, ನಮ್ಮ ಮಕ್ಕಳಿಗೆ ಉತ್ತಮ ಬದುಕು ನೀಡಬೇಕು’ ಎನ್ನುವ ಭರದಲ್ಲಿ ಅವುಗಳಿಗೆ ‘ನೋ, ಇಲ್ಲ’ ಎನ್ನುವುದನ್ನು ಕಲಿಸುವುದು ಮರೆತಿರುವ ಒಂದು ವರ್ಗದ ಪೋಷಕರು ಹೇಗಿರುತ್ತಾರೋ ಥೇಟ್ ಅವರ ಹಾಗೆ ಇದ್ದರು ಅನ್ನಿ. ಸಮಸ್ಯೆ ಶುರು ವಾಗುವುದು ಇಲ್ಲಿಂದ. ಹೀಗೆ ಬೆಳೆದ ಮಕ್ಕಳು, ‘ಜಗತ್ತು-ಜನ ಇರುವುದೇ ನಮ್ಮ ಸೇವೆಗೆ’ ಎನ್ನುವಂತೆ ವರ್ತಿಸುತ್ತವೆ. ಪೋಷಕರಿಗೂ ಆ ಮಗುವಿನ ವರ್ತನೆಯಿಂದ ಮುಜುಗರ ವಾಗುತ್ತಿತ್ತು.
ಆದರೇನು, ಸನ್ನಡತೆ ಕಲಿಸುವುದರಲ್ಲಿ ಅವರು ಸೋತಿದ್ದರು. ಅಮೆರಿಕದಿಂದ ಪ್ರಯಾಣ ಮಾಡುತ್ತಾ ಬಂದಿದ್ದ ಒಂದು ಭಾರತೀಯ ಕುಟುಂಬವೂ ಕಣ್ಣಿಗೆ ಬಿತ್ತು. ಆಜುಬಾಜು ಅದೇ ವಯಸ್ಸಿನ ಎರಡು ಮಕ್ಕಳು ಅವರಿಗೂ ಇದ್ದವು. ಮಾತು, ಮಾತು, ಮಾತು! ಅಮೆರಿಕದಿಂದ ಈ ಕಡೆಗೆ ಬರುತ್ತಿರುವ ಒಂದಲ್ಲ ನೂರಾರು ಮಕ್ಕಳನ್ನು ಕಂಡಿದ್ದೇನೆ.
ಅವರೆಲ್ಲರಲ್ಲೂ ಇದ್ದ ಒಂದು ಸಾಮಾನ್ಯ ಅಂಶವೆಂದರೆ ಮಾತು. ತಮ್ಮನ್ನು ಮೀರಿದ ಜ್ಞಾನಿಗಳು ಜಗತ್ತಿನಲ್ಲಿಲ್ಲ ಎನ್ನುವ ಭ್ರಮೆಯನ್ನು ಅಮೆರಿಕದ ವಿದ್ಯಾಭ್ಯಾಸ ಅವರಿಗೆ ಕಲಿಸಿಬಿಟ್ಟಿದೆ. ಮತ್ತೊಮ್ಮೆ, ಈ ಮಕ್ಕಳ ಪೋಷಕರದೂ ಅದೇ ಕಥೆ- ಹಳ್ಳಿಯಲ್ಲಿ ಕನ್ನಡ ಅಥವಾ ಅವರ ಮಾತೃಭಾಷೆಯಲ್ಲಿ ಕಲಿತಿರುತ್ತಾರೆ.
ಮಕ್ಕಳ ಇಂಗ್ಲಿಷ್ ಮಾತಿಗೆ ಅವರು ಮರುಳಾಗಿಬಿಟ್ಟಿರುತ್ತಾರೆ. ಇಂಗ್ಲಿಷ್ ಭಾಷೆ ಬಂದ ಮಾತ್ರಕ್ಕೆ ಅವರು ಜ್ಞಾನಿಗಳಲ್ಲ ಎಂದು ಅವರಿಗೆ ಹೇಳುವುದು ಹೇಗೆ? ಬೆಂಗಳೂರಿನಲ್ಲಿ ಇಳಿದು ನಂತರ ಮಂಗಳೂರಿಗೆ ಹೋಗಬೇಕಿದ್ದ ಆ ಕುಟುಂಬದ ವ್ಯಕ್ತಿ ನನ್ನೊಂದಿಗೆ ಕನ್ನಡ ದಲ್ಲಿ ಮಾತಿಗಿಳಿದರು.
ನಾನು ರಮ್ಯಳ ಜತೆಯಲ್ಲಿ ಕನ್ನಡ ಮಾತಾಡುವುದು ಕೇಳಿ ನನ್ನೊಂದಿಗೆ ಸಂಭಾಷಣೆಗೆ ಇಳಿದಿದ್ದರು. ಕಥೆ ಸೇಮ್- ಹಳ್ಳಿಯಲ್ಲಿ ಓದಿದ ಹುಡುಗ ತನ್ನ ಪ್ರತಿಭೆಯಿಂದ ಅಮೆರಿಕ ಪಾಲಾಗಿ 25 ವರ್ಷ ಕಳೆದ ಕಥೆ. ಇಲ್ಲಿಗೆ ಬರಬೇಕು ಎನ್ನುವ ಆಸೆ, ಆದರೆ ಬರಲಾಗದ ಅಸಹಾಯಕತೆಯ ಕಥೆ.
ಮಕ್ಕಳು ನಿಧಾನವಾಗಿ ಕೈತಪ್ಪುತ್ತಿರುವುದನ್ನು ನೋಡುವ ಬದುಕು. ವಾಪಸ್ಸು ಹೋಗೋಣ ಅಂದರೆ ಇಬ್ಬರು ಮಕ್ಕಳೂ ‘ನೋ’ ಎಂದು ಒಂದೇ ದನಿಯಲ್ಲಿ ಹೇಳುತ್ತಾರೆ ಎಂದರವರು. ಹದಿಹರೆಯಕ್ಕೆ ಕಾಲಿಡುತ್ತಿರುವ ಮಗಳ ಮೇಲೆ ಪ್ರಭಾವ ಬೀರುವ ಸಹಪಾಠಿ ಸಂಗಡಿಗರ ಕಾರಣ ಮಗಳು ರೆಬೆಲ್ ಆಗಿದ್ದಾಳೆ ಎನ್ನುವುದು ಅವರ ಅನಿಸಿಕೆ. ಒಟ್ಟಾರೆ ಹೇಳಬೇಕೆಂದರೆ, ಒಂದಷ್ಟು ಹಣ ಮಾಡಿದ ಭಾರತೀಯ ಪೋಷಕರಿಗಿಂತ ಸಾವಿರ ಪಾಲು ವಾಸಿ. ಮಕ್ಕಳೂ ಅಷ್ಟೇ, ಕನ್ನಡ ಬರುವುದೇ ಇಲ್ಲ ಎನ್ನುವಷ್ಟು ಇಂಗ್ಲಿಷ್ ಮಾತನಾಡುವುದು ಬಿಟ್ಟರೆ ಸನ್ನಡತೆಯಲ್ಲಿ ಪೂರ್ಣ ಅಂಕ ನೀಡಬಹುದು.
ನನ್ನ ತಮ್ಮ ಲಕ್ಷ್ಮೀಕಾಂತ ಕೂಡ ಕಳೆದ 25 ವರ್ಷದಿಂದ ಯುರೋಪಿನ ಹಲವಾರು ನಗರಗಳಲ್ಲಿ ವಾಸಿಸಿ, ಅಮೆರಿಕದಲ್ಲೂ ಆರು ವರ್ಷ ಇದ್ದು, ಸದ್ಯಕ್ಕೆ ನೆದಲ್ಯಾಂಡ್‌ನ ಹೇಗ್ ನಗರದಲ್ಲಿ ಬದುಕು ಕಂಡುಕೊಂಡಿದ್ದಾನೆ. ನಾನು ಬಾರ್ಸಿಲೋನಾ ನಗರದಲ್ಲಿದ್ದಾಗ ಅವನು ಕೂಡ ಡಾಕ್ಟರೇಟ್ ಮಾಡಲು ಬಂದಿದ್ದ. ಸ್ಪೇನ್ ದೇಶದ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದಾನೆ.
ಎರಡು ದಶಕ ನಾನೂ ಅಲ್ಲಿ ವಾಸ ಮಾಡಿದ ಕಾರಣ, ಯುರೋಪಿಯನ್ನರು ಮಕ್ಕಳನ್ನು ಬೆಳೆಸುವುದನ್ನು ನೋಡಿದ್ದೇನೆ. ಅನನ್ಯಳನ್ನು ಕೂಡ ಹಾಗೆ ಬೆಳೆಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಅವರು ಮಾಡಿದ್ದು ಎಲ್ಲವೂ ಸರಿ ಎನ್ನುವ ಪೈಕಿ ನಾನಲ್ಲ. ಅವರ ಒಳ್ಳೆಯ ಅಂಶಗಳನ್ನು ಹೊಗಳಲು, ಅಳವಡಿಸಿಕೊಳ್ಳಲು ಹಿಂಜರಿಯುವುದು ಕೂಡ ಇಲ್ಲ.
ಹಣದ ಮೌಲ್ಯ, ಸಂಪನ್ಮೂಲಗಳ ಮೌಲ್ಯವನ್ನು ಅದೆಷ್ಟು ಚೆನ್ನಾಗಿ ಹೇಳಿಕೊಡುತ್ತಾರೆ ಎಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ನನ್ನ ತಮ್ಮನ ಮಗ ಏನೇಕೋ ರಾವ್ ಅಲೋ ನ್ಸೋ ಇನ್ನೂ ಎರಡು ವರ್ಷದ ಕೂಸು. ತಿಂಡಿ, ಊಟ ಅವನೇ ಮಾಡಿಕೊಳ್ಳಬೇಕು. ಕತ್ತಿಗೊಂದು ನ್ಯಾಪ್ ಕಿನ್ ಕಟ್ಟಿ, ಮಕ್ಕಳಿಗೆ ಎಂದಿರುವ ಕುರ್ಚಿಯ ಮೇಲೆ ಕೂರಿಸಿ ಬಿಡುತ್ತಾರೆ.
‘ಊಟ-ತಿಂಡಿ ನೆಲಕ್ಕೆ ಎಸೆಯಬಾರದು’ ಎಂದು ಅವನಿಗೆ ಹೇಳಿದ್ದಾರೆ. ಆದರೂ ಅದು ಮಗು, ಒಂದೆರಡು ತುಂಡುಗಳನ್ನು ನೆಲಕ್ಕೆ ಎಸೆದ. ಊಟವಾದ ನಂತರ ಅವರಮ್ಮ ವಿರ್ಜಿನಿಯ ಅದನ್ನು ಸ್ವಚ್ಛಗೊಳಿಸಲು ಹೇಳಿದಳು. ಮಗುವಿನ ಕೈಗೆ ಮುಲಾಜಿಲ್ಲದೆ ಪೊರಕೆ ನೀಡಿ ಗುಡಿಸಲು ಹೇಳಿದಳು. ನಂತರ ನ್ಯಾಪ್‌ಕಿನ್ ಬಳಸಿ ಒರೆಸುವಂತೆ ತಾಕೀತು ಮಾಡಿ ದಳು. ಆ ಮಗು ಗೊಣಗಾಡದೆ ಎಲ್ಲವನ್ನೂ ಮಾಡಿತು. ಅವನಿಗೆ ಅರ್ಥವಾಗುತ್ತೆ, ಅರ್ಥ ವಾಗುವುದಿಲ್ಲ ಈ ಯಾವುದನ್ನೂ ಯೋಚಿಸದೆ ಆಕೆ ಹೇಳುತ್ತಿದ್ದುದು ಒಂದೇ ಮಾತು- “ನೀನು ಕಸ ಸೃಷ್ಟಿ ಮಾಡಿದರೆ ನೀನೇ ಅದನ್ನು ಸ್ವಚ್ಛಗೊಳಿಸಬೇಕು".
ಯುರೋಪಿಯನ್ನರಲ್ಲಿ ನಾನು ಕಂಡ ಮತ್ತು ಇಷ್ಟಪಡುವ ಇನ್ನೊಂದು ಅಂಶವೆಂದರೆ, ‘ಬಾಲಭಾಷೆ’ ಎಂದು ಅವರು ಸುಮ್ಮನೆ ಮುದ್ದು ಮುದ್ದಾಗಿ ತಪ್ಪುತಪ್ಪು ಉಚ್ಚಾರಣೆ ಮಾಡುವುದಿಲ್ಲ. ಮಗುವಿನೊಂದಿಗೆ ಸಹಜವಾಗಿ ಮಾತನಾಡುತ್ತಾರೆ. ಮನೆಯ ಎಲ್ಲಾ ಕೆಲಸಗಳಲ್ಲಿ ಮಗುವನ್ನು ಭಾಗಿಯನ್ನಾಗಿ ಮಾಡುತ್ತಾರೆ. ಅವರಿಗೆ ಯಾವುದೇ ವಿಶೇಷ ಆದ್ಯತೆಯನ್ನು ನೀಡುವುದಿಲ್ಲ.
ಸೂಪರ್ ಮಾರ್ಕೆಟ್‌ನಿಂದ ತಂದ ಸಾಮಾನುಗಳನ್ನು ಬೇರ್ಪಡಿಸಿ ಫ್ರಿಜ್‌ನಲ್ಲಿಡಲು ಎರಡು ವರ್ಷದ ಪುಟಾಣಿ ಏನೇಕೋ ಸಹಾಯ ಮಾಡುವುದನ್ನು ನೋಡುವುದೇ ಚೆಂದ. ಅದಕ್ಕೇ ಅಲ್ಲವೇ ನಮ್ಮ ಹಿರಿಯರು ‘ಬಿತ್ತಿದಂತೆ ಬೆಳೆ ಸುಳ್ಳಲ್ಲ’ ಎಂದದ್ದು?! ಸಣ್ಣ ಪುಟ್ಟ ವಿಷಯ ಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವುದು, ಮನೆಬಿಟ್ಟು ಓಡಿಹೋಗುವುದು, ಗುರುಹಿರಿಯರಿಗೆ ವಿರುದ್ಧ ಮಾತಾಡುವುದು ಇವೆಲ್ಲವನ್ನೂ ನಮಗೆ ಗೊತ್ತಿಲ್ಲದೆಯೇ ನಾವೇ ನಮ್ಮ ಮಕ್ಕಳಿಗೆ ಕಲಿಸಿರುತ್ತೇವೆ. ಆದರೆ ನಮಗೆ ಅದು ಗೊತ್ತೇ ಆಗಿರುವುದಿಲ್ಲ.
ಮಕ್ಕಳನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸ್ವತಂತ್ರರಾಗಲು ಬಿಡಬೇಕು. ಹೌದು, ‘ಬಿಡಬೇಕು’ ನ್ನುವ ಪದಬಳಕೆ ಭಾರತೀಯ ಪೋಷಕರಿಗೆ ಹೆಚ್ಚು ಅನ್ವಯ. ಮಕ್ಕಳು ಖಂಡಿತ ಕಲಿಯುತ್ತಾರೆ. ನೀವು-ನಾವು ಬಿಡಬೇಕು, ಅಷ್ಟೇ. ಸನ್ನಡತೆಯ ಜತೆಗೆ, ಹಣದ ಮೌಲ್ಯ, ಅದಕ್ಕೂ ಹೆಚ್ಚಾಗಿ ಮೌಲ್ಯ ವಿರುವುದು ಸಂಪನ್ಮೂಲಗಳಿಗೆ, ಸಂಬಂಧಗಳಿಗೆ ಎನ್ನುವುದನ್ನು ಕಲಿಸಬೇಕು. ಬದುಕೆಂದರೆ ಅದು ಕೇವಲ ಒಂದು ಆಯಾಮವಲ್ಲ.
ಹಲವಾರು ಆಯಾಮಗಳು, ಸಾಧ್ಯತೆಗಳು ವ್ಯಕ್ತಿತ್ವವನ್ನು ರೂಪಿಸುತ್ತವೆ ಎನ್ನುವುದನ್ನು ನಾವು ತಿಳಿಸಬೇಕು. ಹಣ ಮಾಡಬೇಕು, ಅದಕ್ಕಾಗಿ ಚೆನ್ನಾಗಿ ಓದಬೇಕು ಎನ್ನುವ ಭ್ರಮಾ ಲೋಕದಲ್ಲಿರುವ ಭಾರತೀಯ ಪೋಷಕರು, ‘ನೀನು ಮಾಡಿದ ಕಸ, ನೀನೇ ಸ್ವಚ್ಛ ಮಾಡ ಬೇಕು’ ಎನ್ನುವುದು ಯಾವಾಗ? ನಿನ್ನ ಬದುಕಿನ ಜವಾಬ್ದಾರಿ ನಿನ್ನದು, ಅದನ್ನು ಕಟ್ಟಿ ಕೊಳ್ಳುವ ಪ್ರಯತ್ನ ನಿಲ್ಲದಿರಲಿ, ಸಹಾಯಕ್ಕೆ ನಾವಿದ್ದೇವೆ ಎನ್ನುವುದು ಯಾವಾಗ? ತುತ್ತು ಮಾಡಿ ಬಾಯಿಗಿಟ್ಟರೆ, ತುತ್ತಿನ ಬೆಲೆ ತಿಳಿಯುವುದು ಯಾವಾಗ?