ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ವರ್ಷದಲ್ಲಿ ಎರಡೇ ಬಾರಿ ದರ್ಶನ ಕೊಡುವ ಹಾಸನಾಂಬೆ ದೇವಿ

ಇಲ್ಲಿನ ಸೊಬಗಿಗೆ ಬೆರಗಾಗಿ ಈ ಕ್ಷೇತ್ರದ ನೆಲೆಸಿದರು ಎನ್ನುವ ಪುರಾಣವಿದೆ. ವೈಷ್ಣವಿ, ಕೌಮಾರಿ, ಮಾಹೇಶ್ವರಿ ದೇವಿ ಇವರು ನಗುವ ದೇವತೆಗಳಾದ ‘ಹಸನಾಂಬೆಯರು’ (ಹಸನ- ನಗು, ಅಂಬೆ- ತಾಯಿ). ಈ ಮೂವರೂ ದೇವಿಯರು ಹುತ್ತದ ರಚನೆಯಲ್ಲಿ ನೆಲೆಸಿದರು. ಈ ದೇವಿಯರು ನೆಲೆಸಿದ ಕ್ಷೇತ್ರ ‘ಹಾಸನಾಂಬೆ’ಯೇ ಆಡುಮಾತಿನಲ್ಲಿ ‘ಹಾಸನ’ ವಾಯಿತು.

ವರ್ಷದಲ್ಲಿ ಎರಡೇ ಬಾರಿ ದರ್ಶನ ಕೊಡುವ ಹಾಸನಾಂಬೆ ದೇವಿ

-

ಒಂದೊಳ್ಳೆ ಮಾತು

ಗೊಮ್ಮಟೇಶನ ನೆಲೆವೀಡು, ಬೇಲೂರು -ಹಳೇಬೀಡು ಶಿಲ್ಪಕಲೆಗಳ ತವರೂರು ಎಂಬ ಖ್ಯಾತಿ ಪಡೆದು, ಸಪ್ತ ಮಾತೃಕೆ ದೇವತೆಗಳು ನೆಲೆಸಿದ ಪುಣ್ಯಕ್ಷೇತ್ರ ‘ಹಾಸನ’. ಇಲ್ಲಿ ನೆಲೆಸಿರುವ ಹಾಸನಾಂಬೆ ದೇವಿ ಇಲ್ಲಿಯ ಗ್ರಾಮ ದೇವತೆ. ಕಾಶಿಯ ಸಪ್ತಮಾತೃಕೆಯರಾದ ಬ್ರಾಹ್ಮಿ, ಕೌಮಾರಿ, ವೈಷ್ಣವಿ, ಮಾಹೇಶ್ವರಿ, ವಾರಾಹಿ, ಇಂದ್ರಾಣಿ, ಚಾಮುಂಡಿಯರು ಸುತ್ತಾಡಲು ದಕ್ಷಿಣ ಭಾಗಕ್ಕೆ ಬಂದರು.

ಇಲ್ಲಿನ ಸೊಬಗಿಗೆ ಬೆರಗಾಗಿ ಈ ಕ್ಷೇತ್ರದ ನೆಲೆಸಿದರು ಎನ್ನುವ ಪುರಾಣವಿದೆ. ವೈಷ್ಣವಿ, ಕೌಮಾರಿ, ಮಾಹೇಶ್ವರಿ ದೇವಿ ಇವರು ನಗುವ ದೇವತೆಗಳಾದ ‘ಹಸನಾಂಬೆಯರು’ (ಹಸನ- ನಗು, ಅಂಬೆ- ತಾಯಿ). ಈ ಮೂವರೂ ದೇವಿಯರು ಹುತ್ತದ ರಚನೆಯಲ್ಲಿ ನೆಲೆಸಿದರು. ಈ ದೇವಿಯರು ನೆಲೆಸಿದ ಕ್ಷೇತ್ರ ‘ಹಾಸನಾಂಬೆ’ಯೇ ಆಡುಮಾತಿನಲ್ಲಿ ‘ಹಾಸನ’ ವಾಯಿತು.

ಈ ಪ್ರದೇಶವನ್ನು ಮೊದಲು ಸಿಂಹಾಸನಾಪುರಿ ಎಂದು ಕರೆಯುತ್ತಿದ್ದರು. ಮಿಕ್ಕ ಮೂವರು ಚಾಮುಂಡಿ, ವಾರಾಹಿ ಮತ್ತು ಇಂದ್ರಾಣಿ ದೇವಿಯರು ಹಾಸನದ ಸಮೀಪ ಇರುವ ದೇವಿಗೆರೆ ಹೊಂಡದ ಬಾವಿಯಲ್ಲಿ ನೆಲೆಸಿದರೆ, ಬ್ರಾಹ್ಮಿದೇವಿ ಸಮೀಪದ ಕೆಂಚಮ್ಮನ ಕೋಟೆಯಲ್ಲಿ ನೆಲೆಸಿzಳೆ ಎನ್ನುವ ಐತಿಹ್ಯವಿದೆ.

ಇದನ್ನೂ ಓದಿ: Roopa Gururaj Column: ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು

ಹೊಯ್ಸಳರ ಕಾಲದಲ್ಲಿ ಈ ಪ್ರದೇಶವನ್ನು ಹಾಸನ ಪಟ್ಟಣ ಎಂದು ಆಳಿದರು. ಹೊಯ್ಸಳರ ರಾಜಧಾನಿ ಬೇಲೂರು ಮತ್ತು ಹಳೇಬೀಡು ಹತ್ತಿರವಿರುವುದರಿಂದ ಹಾಸನ ಪಟ್ಟಣ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಯಿತು. ಭಕ್ತಾದಿಗಳು ಅರ್ಪಿಸುವ ಆಭರಣಗಳಿಂದ ಸಾಲಂಕೃತಳಾಗಿ ಕಂಗೊಳಿಸುವ ದೇವಿಯನ್ನು ಕಂಡ ಕೆಲವು ಕಳ್ಳರು, ಆಭರಣ ಕದಿಯಲು ಬಂದು, ಬಾಗಿಲ ಬೀಗ ಒಡೆದು ಒಳಹೋಗಿ ಆಭರಣ ತೆಗೆಯಲು ಕೈ ಹಾಕಿದಾಗ ಕೋಪಗೊಂಡ ದೇವಿಯು ಕಳ್ಳರಿಗೆ ಅಲ್ಲಿಯೇ ಕಗುವಂತೆ ಶಾಪ ಕೊಡುತ್ತಾಳೆ.

ಹೀಗೆ ಕದ ನಾಲ್ಕು ಕಳ್ಳರಿಗೆ ಗರ್ಭಗುಡಿಯ ಪಕ್ಕದ ‘ಕಳ್ಳಪ್ಪನ ಗುಡಿ’ ಕಟ್ಟಿದ್ದಾರೆ. ಗುಡಿಯ ಪಕ್ಕದಲ್ಲಿ 5 ಅಡಿ ಉದ್ದದ ಒಂದು ಕಂಬವನ್ನೂ ಸ್ಥಾಪಿಸಿದ್ದಾರೆ. ಹಾಲಪ್ಪನ ಗದ್ದುಗೆ ಎಂದು ಇದಕ್ಕೆ ಪೂಜೆ ಸಲ್ಲಿಸುತ್ತಾರೆ. ಸಪ್ತ ಮಾತೃಕೆಯರ ಗರ್ಭಗುಡಿಯ ಬಲಭಾಗದಲ್ಲಿ ‘ವೀರಭದ್ರ ಸ್ವಾಮಿ’ ನೆಲೆಸಿದ್ದು ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

ದೇವಿಯ ಎಡಭಾಗದಲ್ಲಿ ‘ದರ್ಬಾರ್ ಗಣಪತಿ’ ನೆಲೆಸಿದ್ದಾನೆ. ದೀಪಾವಳಿಯ ಬಲಿಪಾಡ್ಯಮಿ ದಿನ ಸಿದ್ದೇಶ್ವರ ಸ್ವಾಮಿ ಜಾತ್ರೆ-ರಥೋತ್ಸವ ನಡೆಯುತ್ತದೆ. ಮುಂಜಾನೆ ದೇವಿಗೆ ವಿಶೇಷವಾದ ಪೂಜೆ ಅರ್ಪಿಸಿ ನಂತರ ಜಾತ್ರೆ ನಡೆಸುತ್ತಾರೆ. ಮಾರನೇ ದಿನ ಕೆಂಡೋತ್ಸವ ಸೇವೆ ನಡೆಸುತ್ತಾರೆ.

ದಸರಾ ಜಾತ್ರೆಯಂತೆ ಇಲ್ಲಿನ ಜಾತ್ರೆ ಕಂಗೊಳಿಸುತ್ತದೆ. ಆಶ್ವಯಜ ಮಾಸದ ನವರಾತ್ರಿ ಮುಗಿದು ಅಕ್ಟೋಬರ್ ಕೊನೆ ಅಥವಾ ನವೆಂಬರ್ ಆರಂಭದಲ್ಲಿ ಬರುವ ಗುರುವಾರದ ದಿನ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯುತ್ತಾರೆ. ಆಗ ಅರಸು ವಂಶದವರು-ಪುರೋಹಿತರು-ಜಿಲ್ಲಾಧಿಕಾರಿ ಗಳು-ಗಣ್ಯರು-ಪತ್ರಿಕಾ ಮಾಧ್ಯಮದವರು ಹಾಜರಿರುತ್ತಾರೆ.

ಬಾಗಿಲು ತೆಗೆಯುವ ಮೊದಲು ಅರಸು ಮನೆತನದ ಸಂಪ್ರದಾಯದಂತೆ ಗರ್ಭಗುಡಿಯ ಹೊರಗೆ ವಿವಿಧ ಪೂಜೆಗಳನ್ನು ಶಾಸ್ತ್ರೋಕ್ತವಾಗಿ ಮಾಡಿ ಬಾಳೆಕಂಬವನ್ನು ಕಡಿಯಲಾಗುತ್ತದೆ. ಆಶ್ವಯಜ ಮಾಸದ ನವರಾತ್ರಿ ನಂತರದ ಗುರುವಾರ ಬಾಗಿಲು ತೆಗೆದರೆ ದೀಪಾವಳಿ ಬಲಿಪಾಡ್ಯಮಿ ದಿನ ಪೂಜೆ ಮಾಡಿ ಬಾಗಿಲು ಹಾಕುತ್ತಾರೆ. ಅಂದರೆ ಬಾಗಿಲು ತೆಗೆದ ಮೇಲೆ ಏಳು ದಿನಕ್ಕೆ ಕಡಿಮೆಯಾಗದಂತೆ 16 ದಿನಗಳೊಳಗೆ ದೇವಿಯ ದರ್ಶನಕ್ಕೆ ಅವಕಾಶವಿದೆ. ಬಾಗಿಲು ತೆಗೆದ ದಿನವೇ ಯಾವ ಪೂಜೆ ಅಲಂಕಾರವೂ ಇಲ್ಲದ ದೇವಿಯ ದರ್ಶನ ಮಾಡಿದರೆ ಅದನ್ನು ‘ವಿಶ್ವರೂಪ ದರ್ಶನ’ ಎನ್ನುತ್ತಾರೆ. ಬಾಗಿಲು ತೆಗೆದ ನಂತರವೇ ದೇವ ಸ್ಥಾನದ ಅಲಂಕಾರ, ಸುಣ್ಣ-ಬಣ್ಣ ಮಾಡುತ್ತಾರೆ.

ದೀಪಾವಳಿಯ ಬಲಿಪಾಡ್ಯಮಿಯ ದಿನ ಎಲ್ಲರ ಸಮ್ಮುಖದಲ್ಲಿ ದೇವಸ್ಥಾನದ ಬಾಗಿಲು ಹಾಕುತ್ತಾರೆ. ಒಂದು ವರ್ಷ ಕಳೆದ ಮೇಲೆಯೇ ಗರ್ಭಗುಡಿಯ ಬಾಗಿಲು ತೆಗೆಯುವುದು. ಅಲ್ಲಿಯ ತನಕ ಗರ್ಭ ಗುಡಿಯ ದ್ವಾರಕ್ಕೆ ನಿತ್ಯಪೂಜೆ, ಸಪ್ತಾಹ ಪೂಜೆ ಹಾಗೂ ಮಾಸಿಕ ಪೂಜೆಗಳು ನಡೆಯುತ್ತವೆ. ಅಚ್ಚರಿಪಡುವ ವಿಷಯ ಎಂದರೆ ದೇವಸ್ಥಾನದಲ್ಲಿ ಪವಾಡ ಸದೃಶ ಘಟನೆಗಳು ನಡೆಯುತ್ತವೆ.

ಆ ಆಸಕ್ತಿಕರ ಸಂಗತಿಗಳು ಹೀಗಿವೆ: ವರ್ಷಕ್ಕೊಮ್ಮೆ ದೇವಾ ಲಯದ ಬಾಗಿಲು ತೆಗೆದ ಮೇಲೆ ದರ್ಶನದ ವೇಳೆ ಅದೇ ವರ್ಷ ಹಚ್ಚಿಟ್ಟ ದೀಪ ಮುಂದಿನ ವರ್ಷ ಬಾಗಿಲು ತೆಗೆಯುವವರೆಗೂ ನಂದದೆಯೇ ಹಾಗೇ ಇರುತ್ತದೆ. ದೇವಿಯ ಅಲಂಕಾರಕ್ಕೆ ಏರಿಸಿದ ತಾಜಾ ಹೂವುಗಳು ವರ್ಷ ವಾದರೂ ಬಾಡದೆ ಹಾಗೇ ನಳನಳಿಸುತ್ತಿರುತ್ತದೆ.

ದೇವಿಯ ಮುಂದೆ ನೈವೇದ್ಯಕ್ಕೆಂದು ಇಟ್ಟ ಅಕ್ಕಿಯು ಅನ್ನ ಪ್ರಸಾದವಾಗಿರುತ್ತದೆ. ದೇವಿಯ ಇಂಥ ವಿಚಿತ್ರ ಲೀಲೆ ಯನ್ನು ಕಣ್ತುಂಬಿಕೊಳ್ಳಲು ನೆರೆಹೊರೆ ರಾಜ್ಯಗಳಿಂದಲೂ ಲಕ್ಷಾಂತರ ಜನರು ಬರುತ್ತಾರೆ. ಈಗ ದರ್ಶನಕ್ಕೆ ತೆರೆದಿರುವ ಹಾಸನಾಂಬೆಯ ದರ್ಶನ ಮಾಡಿ ನಾವೆಲ್ಲರೂ ಅವಳ ಕೃಪೆಗೆ ಪಾತ್ರರಾಗೋಣ.