Rangaswamy Mookanahalli Column: ಹಣಕಾಸು ನಿರ್ವಹಣೆ ಬಹಳ ಮುಖ್ಯ !
ಇಂದಿಗೂ ಕೋಟ್ಯಂತರ ಜನರು ಅವರ ನಿಜವಾದ ಹೆಸರಿಗಿಂತ ‘ಜಾಕ್ ಸ್ಪಾರೋ’ ಎಂದೇ ಅವರನ್ನು ಗುರುತಿಸುತ್ತಾರೆ. ನಂತರದ್ದು ಯಶಸ್ಸಿನ ಉತ್ತುಂಗದ ಕಥೆ. 2005ರಲ್ಲಿ ‘ಚಾರ್ಲಿ ಆಂಡ್ ಚಾಕೊಲೇಟ್ ಫ್ಯಾಕ್ಟರಿ’ ಚಿತ್ರ ದೊಡ್ಡ ಮಟ್ಟದ ಯಶಸ್ಸನ್ನು ಕಾಣುತ್ತದೆ. 2006ರಲ್ಲಿ ‘ಪೈರೇಟ್ಸ್ ಆಫ್ ಕೆರಿಬಿಯನ್ ಡೆಡ್ ಮ್ಯಾನ್ಸ್ ಚೆಸ್ಟ್’ ಚಿತ್ರ ಹೊರಬರುತ್ತದೆ. ಈ ವೇಳೆಗೆ ಕೇವಲ ಮತ್ತು ಕೇವಲ ಜಾನಿ ಈ ಚಿತ್ರದಲ್ಲಿ ಇದ್ದಾರೆ ಎಂಬ ಒಂದೇ ಕಾರಣಕ್ಕೆ ಸಿನಿಮಾ ವೀಕ್ಷಿಸಲು ಬರುವ ಕೋಟ್ಯಂತರ ಅಭಿಮಾನಿಗಳನ್ನು ಆತ ಸಂಪಾ ದಿಸಿರುತ್ತಾರೆ.

ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ

ವಿಶ್ವರಂಗ
ರಂಗಸ್ವಾಮಿ ಮೂಕನಹಳ್ಳಿ
ಜಾನಿ ಡೆಪ್ಪ್ ಹೆಸರು ಕೇಳದವರು ಇವತ್ತಿಗೆ ವಿರಳ. ಜಾನಿ ಡೆಪ್ಪ್‌ನ ಆಸ್ತಿ ಇಂದಿಗೆ, ಅಂದರೆ 2024ರಲ್ಲಿ ಬರೋಬ್ಬರಿ 150 ಮಿಲಿಯನ್ ಅಮೆರಿಕನ್ ಡಾಲರ್! ಭಾರತೀಯ ರುಪಾಯಿಯಲ್ಲಿ 1250 ಕೋಟಿ ರುಪಾಯಿ! ಇದು ದೊಡ್ಡ ಮೊತ್ತ ಅನ್ನಿಸುತ್ತದೆ ಅಲ್ವಾ? ಆದರೆ ನಿಮಗೆ ತಿಳಿದಿರಲಿ, ಆತ ತನ್ನ ಉತ್ತುಂಗದಲ್ಲಿ 900 ಮಿಲಿಯನ್ ಡಾಲರ್ ಒಡೆಯರಾಗಿದ್ದರು. 750 ಮಿಲಿಯನ್ ಡಾಲರ್ ಸಂಪ ತ್ತನ್ನು ಆತ ಕಳೆದುಕೊಂಡಿದ್ದು ಏಕೆ? ಆತನ ತಪ್ಪೇನು? ಅಂಥ ಭಾರಿ ಕುಸಿತ ಕಂಡು ಕೂಡ ಆತ ದಿವಾಳಿಯಾಗದೆ ಉಳಿದುಕೊಂಡಿದ್ದು ಹೇಗೆ? ಆತನ ಜೀವನದಿಂದ ನಾವು ಕಲಿಯಬಹುದಾದ ಪಾಠವೇನು? ಎನ್ನುವುದನ್ನು ತಿಳಿದುಕೊಳ್ಳೋಣ. ಜಾನಿ ಡೆಪ್ಪ್ ಎಂದಾಕ್ಷಣ ನಮಗೆ ನೆನಪಿಗೆ ಬರು ವುದು ‘ಪೈರೇಟ್ಸ್ ಆಫ್ ಕೆರಿಬಿಯನ್’ ಸಿನಿಮಾ. ಇದರಲ್ಲಿನ ಆತನ ಕ್ಯಾಪ್ಟನ್ ಸ್ಟಾರೋ ಪಾತ್ರ ವಿಶ್ವ ವಿಖ್ಯಾತಿ ಪಡೆದಿದೆ.
‘ಪೈರೇಟ್ಸ್ ಆಫ್ ಕೆರಿಬಿಯನ್’ ಸರಣಿ ಸಿನಿಮಾ ಜಗತ್ತಿನಾದ್ಯಂತ ಗಳಿಸಿದ ಹಣ, ಹತ್ತತ್ತಿರ ನಾಲ್ಕೂವರೆ ಬಿಲಿಯನ್ ಅಮೆರಿಕನ್ ಡಾಲರ್! ಅಂದರೆ, ಭಾರತೀಯ ರುಪಾಯಿಯಲ್ಲಿ 37,580 ಕೋಟಿ ರುಪಾಯಿ. ಇಷ್ಟು ದೊಡ್ಡ ಮಟ್ಟದ ಯಶಸ್ಸು ಕಂಡ ಸಿನಿಮಾದ ನಾಯಕನಾಗಿ ಜಾನಿ ಒಮ್ಮೆಲೇ ಯಶಸ್ಸು ಕಾಣಲಿಲ್ಲ. ಜಾನಿ ಕ್ರಿಸ್ಟೋಫರ್ ಡೆಪ್ಪ್ 1963ರ ಜೂನ್ 10ರಂದು ಅಮೆರಿಕದ ಕೆಂಟುಕಿಯ ಒವೆನ್ಸ್‌ಬರೊ ಎಂಬಲ್ಲಿ ಜನಿಸಿದರು. ಅಪ್ಪ ಎಂಜಿನಿಯರ್, ಅಮ್ಮ ರೆಸ್ಟೋರೆಂಟ್ ಒಂದರಲ್ಲಿ ವೇಟ್ರೆಸ್ ಆಗಿ ದುಡಿಯುತ್ತಿರುತ್ತಾರೆ.
12ರ ಬಾಲಕನಾಗಿದ್ದಾಗ ಜಾನಿಗೆ ಅಮ್ಮನಿಂದ ಗಿಟಾರ್ ಉಡುಗೊರೆಯಾಗಿ ಸಿಗುತ್ತದೆ. ಇಲ್ಲಿಂದ ಸಂಗೀತದ ಕಡೆಗೆ ಜಾನಿ ಒಲವು ಹೆಚ್ಚಾಗುತ್ತದೆ. 3-4 ಸ್ನೇಹಿತರನ್ನು ಸೇರಿಸಿಕೊಂಡು ಜಾನಿ ತನ್ನ ಮನೆಯ ಗ್ಯಾರೇಜ್‌ನಲ್ಲಿ ಗಿಟಾರ್ ನುಡಿಸುವುದು ಮಾಡುತ್ತಿರುತ್ತಾನೆ. ಆದರೆ, ಆತನಿಗೆ ಸಂಗೀತದಲ್ಲಿ ಅಪಾರ ಒಲವು ಮೂಡುವ ಸಮಯದಲ್ಲಿ ಆತನ ಹೆತ್ತವರು ಬೇರೆಯಾಗುತ್ತಾರೆ.
ಇದನ್ನೂ ಓದಿ: Rangaswamy Mookanahalli Column: ಭಾಷೆ ಎಂಬುದು ಬುದ್ಧಿವಂತಿಕೆಯ ಲಕ್ಷಣವಲ್ಲ
ಬೇಸರಗೊಂಡ ಜಾನಿ ಡ್ರಗ್ಸ್ ಸೇವನೆಯನ್ನು ಶುರುಮಾಡುತ್ತಾನೆ. 16ನೇ ವಯಸ್ಸಿನಲ್ಲಿ ಜೀವನವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ತೆಗೆದುಕೊಂಡು, ಶಾಲೆಯಿಂದ ‘ಡ್ರಾಪ್ ಔಟ್’ ಆಗಲು ಮತ್ತು ಸಂಗೀತವನ್ನು ಪೂರ್ಣಪ್ರಮಾಣದಲ್ಲಿ ತೆಗೆದುಕೊಳ್ಳಲು ನಿರ್ಧರಿಸುತ್ತಾನೆ. ಅಲ್ಲಿನ ‘ದಿ ಕಿಡ್ಸ್’ ಎಂಬ ಸ್ಥಳೀಯ ಬ್ಯಾಂಡ್‌ನಲ್ಲಿ ಸೇರ್ಪಡೆಯಾಗುತ್ತಾನೆ. ಅಲ್ಲಿ ಪರವಾಗಿಲ್ಲ ಎನ್ನುವ ಮಟ್ಟಿನ ಯಶಸ್ಸು ಕಾಣುತ್ತಾನೆ.
ನಿಕೋಲಸ್ ಕೇಜ್ ಎಂಬ ದೊಡ್ಡ ಹಾಲಿವುಡ್ ನಟನನ್ನು ಭೇಟಿ ಮಾಡಿದ್ದು ಜಾನಿಯ ಪಾಲಿಗೆ ‘ತಿರುವಿನ ಘಟ್ಟ’ವಾಗುತ್ತದೆ. ಮ್ಯೂಸಿಕ್ ಇಂಡಸ್ಟ್ರಿಯ ದೊಡ್ಡ ಹೆಸರುಗಳನ್ನು ಜಾನಿಗೆ ಪರಿಚಯಿ ಸುತ್ತಾರೆ ನಿಕೋಲಸ್ ಕೇಜ್. ಜಾನಿ ಆಗ 20ರ ತರುಣ. ಯಶಸ್ಸೆಂಬುದು ಯಾರಿಗೂ ಅಷ್ಟು ಸುಲಭ ವಾಗಿ ಒಲಿಯುವುದಿಲ್ಲ ಎನ್ನುವುದು ಜಾನಿ ವಿಷಯದಲ್ಲೂ ನಿಜವಾಗುತ್ತದೆ.

ಯಾವುದರಿಂದಲೂ ಹೇಳಿಕೊಳ್ಳುವ ಬ್ರೇಕ್ ಸಿಗುವುದಿಲ್ಲ. ಹೊಟ್ಟೆಪಾಡಿಗಾಗಿ ವಾರಕ್ಕೆ 30 ಡಾಲರ್ ಆದಾಯ ನೀಡುವ ಸೇಲ್ಸ್‌ಮ್ಯಾನ್ ವೃತ್ತಿಯನ್ನು ಜಾನಿ ಆ ದಿನಗಳಲ್ಲಿ ಮಾಡುತ್ತಾರೆ. 1984ರಲ್ಲಿ ‘ನೈಟ್‌ಮೇರ್ ಆನ್ ಎಲ್ಮ್ ಸ್ಟ್ರೀಟ್’ ಎನ್ನುವ ಚಿತ್ರದಲ್ಲಿ ತಮ್ಮ ನಟನಾ ಕೌಶಲವನ್ನು ಪ್ರದರ್ಶಿಸಲು ಜಾನಿಗೆ ಅವಕಾಶ ಸಿಗುತ್ತದೆ. 1990ರಲ್ಲಿ ‘ಬೇಬಿ’ ಎನ್ನುವ ಸಿನಿಮಾ ಅವರನ್ನು ಚಲನ ಚಿತ್ರೋದ್ಯಮ ದಲ್ಲಿ ತಳವೂರುವಂತೆ ಮಾಡುತ್ತದೆ.
ಈ ಮಧ್ಯೆ ಸಾಕಷ್ಟು ಚಿತ್ರಗಳಲ್ಲಿ ಪಾತ್ರ ಗಿಟ್ಟಿಸಿಕೊಳ್ಳುವ ಜಾನಿ ಯಶಸ್ಸಿನ ಮೆಟ್ಟಿಲುಗಳನ್ನು ಏರು ತ್ತಾ ಹೋಗುತ್ತಾರೆ. 1997ರಲ್ಲಿ ಬಂದ ‘ಡಾನಿ ಬ್ರಾಸ್ಕೊ’ ಎಂಬ ಚಿತ್ರ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾ ಗುತ್ತದೆ. ಜಾನಿ ಡೆಪ್ಪ್ ಜೀವನದ ಅತಿದೊಡ್ಡ ಹಿಟ್, ಅತಿ ಮುಖ್ಯವಾದ ‘ಪೈರೇಟ್ಸ್ ಆಫ್ ದಿ ಕೆರಿಬಿ ಯನ್’ ಚಿತ್ರ 2003ರಲ್ಲಿ ಬಿಡುಗಡೆಯಾಗಿ, ಜಾನಿ ಜಗತ್ತಿನಾದ್ಯಂತ ಮನೆಮಾತಾಗುವಂತೆ ಮಾಡು ತ್ತದೆ. ಈ ಚಿತ್ರದ ‘ಕ್ಯಾಪ್ಟನ್ ಜಾಕ್’ ಪಾತ್ರ ಅಥವಾ ‘ಜಾಕ್ ಸ್ಪಾರೋ’ ಎನ್ನುವ ಹೆಸರು ಅವರಿಗೆ ಅಡ್ಡಹೆಸರಿನಂತೆ ಅಂಟಿಕೊಂಡು ಬಿಡುತ್ತದೆ.
ಇಂದಿಗೂ ಕೋಟ್ಯಂತರ ಜನರು ಅವರ ನಿಜವಾದ ಹೆಸರಿಗಿಂತ ‘ಜಾಕ್ ಸ್ಪಾರೋ’ ಎಂದೇ ಅವರನ್ನು ಗುರುತಿಸುತ್ತಾರೆ. ನಂತರದ್ದು ಯಶಸ್ಸಿನ ಉತ್ತುಂಗದ ಕಥೆ. 2005ರಲ್ಲಿ ‘ಚಾರ್ಲಿ ಆಂಡ್ ಚಾಕೊಲೇಟ್ ಫ್ಯಾಕ್ಟರಿ’ ಚಿತ್ರ ದೊಡ್ಡ ಮಟ್ಟದ ಯಶಸ್ಸನ್ನು ಕಾಣುತ್ತದೆ. 2006ರಲ್ಲಿ ‘ಪೈರೇಟ್ಸ್ ಆಫ್ ಕೆರಿಬಿಯನ್ ಡೆಡ್ ಮ್ಯಾನ್ಸ್ ಚೆಸ್ಟ್’ ಚಿತ್ರ ಹೊರಬರುತ್ತದೆ. ಈ ವೇಳೆಗೆ ಕೇವಲ ಮತ್ತು ಕೇವಲ ಜಾನಿ ಈ ಚಿತ್ರದಲ್ಲಿ ಇದ್ದಾರೆ ಎಂಬ ಒಂದೇ ಕಾರಣಕ್ಕೆ ಸಿನಿಮಾ ವೀಕ್ಷಿಸಲು ಬರುವ ಕೋಟ್ಯಂತರ ಅಭಿಮಾನಿಗಳನ್ನು ಆತ ಸಂಪಾದಿಸಿರುತ್ತಾರೆ.
2007ರಲ್ಲಿ ‘ಪೈರೇಟ್ಸ್ ಆಫ್ ಕೆರಿಬಿಯನ್ ಅಟ್ ವರ್ಲ್ಡ್ಸ್ ಎಂಡ್’ ಸಿನಿಮಾ ಬಿಡುಗಡೆಯಾಗುತ್ತದೆ. ಆದರೆ ಅದು ಹಿಂದಿನ ‘ಕೆರಿಬಿಯನ್’ ಸರಣಿಯ ಮ್ಯಾಜಿಕ್ ಅನ್ನು ಪುನರಾವರ್ತಿಸುವಲ್ಲಿ ಸೋಲು ತ್ತದೆ. ಸೋಲು-ಗೆಲುವು ನೆರಳಿನಂತೆ ಸದಾ ಹಿಂದೆ ಅಥವಾ ಮುಂದೆ ಇದ್ದೇ ಇರುತ್ತವೆ. ಇದರಲ್ಲಿ ಸಮಯದ ಕರಾಮತ್ತು ಬಹಳವಿರುತ್ತದೆ.
ಗೆಲುವನ್ನು ಸೋಲನ್ನಾಗಿ, ಸೋಲನ್ನು ಗೆಲುವನ್ನಾಗಿ ಮಾರ್ಪಡಿಸುವ ಶಕ್ತಿ ಸಮಯಕ್ಕಿದೆ. ಸಮಯ ವನ್ನು ಸರಿಯಾಗಿ ದುಡಿಸಿಕೊಳ್ಳುವ ವಿನಯ, ಬುದ್ಧಿವಂತಿಕೆ ನಮ್ಮದಾಗಿರಬೇಕು. ಜಾನಿ ಡೆಪ್ಪ್ ಎಡವಿದ್ದು ಇಲ್ಲೇ. 2000ನೇ ಇಸವಿಯಿಂದ ಒಂದು ಚಿತ್ರಕ್ಕೆ ಹತ್ತತ್ತಿರ 20 ಮಿಲಿಯನ್ ಡಾಲರ್ ಹಣವನ್ನು ಸಂಭಾವನೆಯಾಗಿ ಪಡೆಯುಲು ಶುರುಮಾಡಿದ್ದ ಜಾನಿ, ಕೆಲವೊಂದು ಸಿನಿಮಾಗಳಲ್ಲಿ ‘ಪ್ರಾಫಿಟ್ ಶೇರಿಂಗ್’ ಅಗ್ರಿಮೆಂಟ್ ಕೂಡ ಮಾಡಿಕೊಳ್ಳುತ್ತಾರೆ.
2010ರಲ್ಲಿ ‘ಅಲಿಸ್ ಇನ್ ವಂಡರ್‌ಲ್ಯಾಂಡ್’ ಸಿನಿಮಾ ಸೂಪರ್‌ಹಿಟ್ ಎನಿಸಿಕೊಳ್ಳುತ್ತದೆ. 2011ರಲ್ಲಿ ‘ಪೈರೇಟ್ಸ್ ಆಫ್ ಕೆರಿಬಿಯನ್ ಸ್ಟ್ರೇಂಜರ‍್ಸ್ ಟೈಡ್’ ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತದೆ. ಈ ಸರಣಿಯಲ್ಲಿ ಈ ಚಿತ್ರವೊಂದೇ ಜಗತ್ತಿನಾದ್ಯಂತ 1 ಬಿಲಿಯನ್ ಡಾಲರ್ ಸಂಗ್ರಹಣೆ ಮಾಡುತ್ತದೆ. ಇದು ಜಾನಿ ಬದುಕಿನ ಯಶಸ್ಸಿನ ತುಟ್ಟತುದಿ ಎನ್ನಬಹುದು. ಯಶಸ್ಸು ಪಡೆದುಕೊಳ್ಳುವುದು, ಪಡೆದುಕೊಂಡ ಯಶಸ್ಸನ್ನು ಉಳಿಸಿಕೊಳ್ಳುವುದಕ್ಕಿಂತ ಸುಲಭ. ಯಶಸ್ಸನ್ನು ದಕ್ಕಿಸಿಕೊಳ್ಳುವುದು ಎಲ್ಲರಿಗೂ ಸಾಧ್ಯವಿಲ್ಲ.
ಒಂದು ಕಾಲಕ್ಕೆ, ವಾರಕ್ಕೆ 30 ಡಾಲರ್ ಸಿಗುವ ಸೇಲ್ಸ್‌ಮ್ಯಾನ್ ವೃತ್ತಿಯಲ್ಲಿದ್ದ ಜಾನಿ ಡೆಪ್ಪ್ ಹಣ ಕಾಸು ನಿರ್ವಹಣೆಯಲ್ಲಿ ಸೋಲುತ್ತಾರೆ. ಬದುಕು ಸದಾ ಹೀಗೇ ಇರುವುದಿಲ್ಲ, ಅದು ಯಾವಾಗ ಬೇಕಾದರೂ ಬದಲಾಗಬಹುದು ಎನ್ನುವ ಸಾಮಾನ್ಯ ಜ್ಞಾನ ಅವರಲ್ಲಿ ಇಲ್ಲವಾಗುತ್ತದೆ. ಈ ಸಮಯದಲ್ಲಿ ಅವರ ಒಟ್ಟು ನಿವ್ವಳ ಆಸ್ತಿ 900 ಮಿಲಿಯನ್ ಡಾಲರ್ ಆಗಿರುತ್ತದೆ. ಈ ಮೊತ್ತ ಇನ್ನಷ್ಟು ಹೆಚ್ಚಾಗಿರಬಹುದಿತ್ತು. ಆದರೆ ಜಾನಿ ಡೆಪ್ಪ್ ಜೀವನಶೈಲಿ ಬದಲಾಗಿಹೋಗುತ್ತದೆ.
ಅವರ ಖರ್ಚು ತಿಂಗಳಿಗೆ 4 ಮಿಲಿಯನ್ ಡಾಲರ್ (33 ಕೋಟಿ ರುಪಾಯಿ) ಎಂದರೆ ನೀವು ಊಹಿಸಿ ಕೊಳ್ಳಬಹುದು. ಯಾಚ್, ಪ್ರೈವೇಟ್ ಜೆಟ್, ಹೆಂಡ, ಹೆಣ್ಣು, ಐಷಾರಾಮಿ ಜೀವನ ಅವರ ಹಣವನ್ನು ಕರಗಿಸುತ್ತಾ ಹೋಗುತ್ತವೆ. ನಂತರದ ದಿನಗಳಲ್ಲಿ ಬಂದ ಚಲನಚಿತ್ರಗಳು ಹಿಂದಿನ ಯಶಸ್ಸು ನೀಡುವಲ್ಲಿ ವಿಫಲವಾಗುತ್ತವೆ.
2000ನೇ ಇಸವಿಯಿಂದಲೇ ಐಷಾರಾಮಿ ಜೀವನದಲ್ಲಿ ಲೋಲುಪ್ತನಾಗಿದ್ದ ಜಾನಿಯನ್ನು ಯಶಸ್ಸು ಕೈಹಿಡಿದಿತ್ತು. 2010ರ ನಂತರ ಯಶಸ್ಸಿನ ಶಿಖರಾಗ್ರದಲ್ಲಿ ತಪ್ಪನ್ನು ತಿದ್ದಿಕೊಳ್ಳುವ ಬದಲು ಜಾನಿ ಅದೇ ತಪ್ಪನ್ನು ಮಾಡುತ್ತಾರೆ. ಹೀಗಾಗಿ 2017ರ ವೇಳೆಗೆ ತಮ್ಮ ಸಂಪತ್ತಿನ ಬಹುಭಾಗವನ್ನು ಕಳೆದು ಕೊಳ್ಳುತ್ತಾರೆ. 2010ರಿಂದ 2017ರವರೆಗಿನ ಅವಧಿಯಲ್ಲಿ ಜಾನಿ ಕಳೆದುಕೊಂಡ ಆಸ್ತಿಯ ಮೊತ್ತ 650 ಮಿಲಿಯನ್ ಡಾಲರ್. ಇದು ಭಾರತೀಯ ರುಪಾಯಿಯಲ್ಲಿ 5428 ಕೋಟಿ!
ಸಮಯವು ನಮ್ಮ ಪರ ಇರುವವರೆಗೆ ಎಲ್ಲವೂ ಸರಿಯಾಗಿರುತ್ತದೆ, ಒಮ್ಮೆ ಅದು ಕೈಕೊಡಲು ಶುರುಮಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಜಾನಿ ಡೆಪ್ಪ್ ಜೀವನ ಉದಾಹರಣೆ. ಇತರರ ಜೀವನ ದಿಂದ/ ತಪ್ಪುಗಳಿಂದ ಕಲಿಯಬೇಕು, ಆದರೆ ಕೆಲವರು ಕಲಿಯುವುದಿಲ್ಲ ಎನ್ನುವುದಕ್ಕೆ ಕೂಡ ಜಾನಿ ಉದಾಹರಣೆ. ಈ ರೀತಿ, ಒಲಿದುಬಂದ ಯಶಸ್ಸು, ಕೀರ್ತಿ, ಹಣವನ್ನು ಸರಿಯಾಗಿ ಬಳಸಿಕೊಳ್ಳದೆ ಕೈಚೆಲ್ಲಿದವರ ದೊಡ್ಡ ಪಟ್ಟಿಯಿದೆ.
2017ರಲ್ಲಿ, ಹಣಕಾಸು ಸರಿಯಾಗಿ ನಿರ್ವಹಣೆ ಮಾಡಿಲ್ಲ, ಹಣವನ್ನು ದುರ್ಬಳಕೆ ಮಾಡಿಕೊಂಡಿ ದ್ದಾರೆ/ತಮ್ಮ ಅನುಕೂಲಕ್ಕೆ ಬಳಸಿಕೊಂಡಿದ್ದಾರೆ ಎನ್ನುವ ಆರೋಪಗಳನ್ನು ಮಾಡಿ ತಮ್ಮ ಬಿಸಿನೆಸ್ ಮ್ಯಾನೇಜರ್‌ಗಳಾದ ಜೋಯಲ್ ಮತ್ತು ರಾಬರ್ಟ್ ಮಂಡೇಲ ಅವರ ಮೇಲೆ ಕೇಸು ದಾಖಲಿಸುತ್ತಾರೆ.
ಇದಕ್ಕೆ ಪ್ರತಿಯಾಗಿ ಆ ಮ್ಯಾನೇಜರ್‌ಗಳು ಕೂಡ ಜಾನಿ ಮಾಡುತ್ತಿದ್ದ ಖರ್ಚಿನ ಲೆಕ್ಕಾಚಾರ ವೆಲ್ಲವನ್ನೂ ನ್ಯಾಯಾಲಯದ ಮುಂದೆ ತೆರೆದಿಡುತ್ತಾರೆ. “ಈ ಮಟ್ಟದ ಖರ್ಚುಮಾಡುತ್ತಾ ಹೋದರೆ ಬೀದಿಗೆ ಬರುವುದು ಗ್ಯಾರಂಟಿ ಎಂದು ಎಷ್ಟು ಹೇಳಿದರೂ ಆತ ಕೇಳಲಿಲ್ಲ. ಆತನದು ಸ್ವಾರ್ಥಭರಿತ, ಅಜಾಗರೂಕ ಮತ್ತು ಬೇಜವಾಬ್ದಾರಿಯುತ ಜೀವನಶೈಲಿ" ಎನ್ನುವ ಪ್ರತ್ಯಾರೋಪ ಮಾಡುತ್ತಾರೆ.
ನ್ಯಾಯಾಲಯವು ಈ ವಿಚಾರದಲ್ಲಿ ತೀರ್ಪುನೀಡುವ ಮುನ್ನವೇ ಜಾನಿ ಡೆಪ್ಪ್ ತಮ್ಮ ಮ್ಯಾನೇಜರ್ ಗಳ ಜತೆ ಕುಳಿತು ಮಾತುಕತೆ ನಡೆಸುವ ಮೂಲಕ ಈ ವಿವಾದವನ್ನು ಬಗೆಹರಿಸಿಕೊಳ್ಳುತ್ತಾರೆ. ಅಂಬರ್ ಹರ್ಡ್ ಎಂಬ ಮಹಿಳೆಯನ್ನು ಜಾನಿ ಡೆಪ್ಪ್ 2015ರಲ್ಲಿ ಮದುವೆಯಾಗಿರುತ್ತಾರೆ. ಆದರೆ, ಜಾನಿ ಡೆಪ್ಪ್ ಹೊಡೆಯುತ್ತಾರೆ, ಬೈಯುತ್ತಾರೆ ಎಂಬ ಆರೋಪವನ್ನು ಹೊರಿಸಿ ಅಂಬರ್ 2016ರಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಾರೆ.
ಆಗ ನ್ಯಾಯಾಲಯವು, “ಜಾನಿ ಡೆಪ್ಪ್‌ರ ಹೆಸರಿಗೆ ಕಳಂಕ ತರುವ ಸಲುವಾಗಿ ಈ ರೀತಿ ಮಾಡಲಾಗಿದೆ; ಹೀಗಾಗಿ ವಿಚ್ಛೇದನದ ಬಾಬತ್ತು 2 ಮಿಲಿಯನ್ ಡಾಲರ್ ಹಣವನ್ನು ಡೆಪ್ಪ್ ಕೊಡಬೇಕು ಹಾಗೂ ಹೆಸರು ಹಾಳು ಮಾಡಿದ ಸಲುವಾಗಿ 10 ಮಿಲಿಯನ್ ಡಾಲರ್ ಹಣವನ್ನು ಜಾನಿಗೆ ಅಂಬರ್ ಕೊಡಬೇಕು" ಎನ್ನುವ ತೀರ್ಪನ್ನು ನೀಡುತ್ತದೆ.
‘ಗೆಲ್ಲುತ್ತಿದ್ದಾಗ ರಾಜ್ಯವೆಲ್ಲಾ ಬಳಗ, ಸೋತಾಗ ಖಾಲಿ ಮನೆ’ ಎನ್ನುವುದನ್ನು ಮನನ ಮಾಡಿಸುವುದೇ ಈ ವಿಷಯವನ್ನು ಇಲ್ಲಿ ಬರೆದಿದ್ದರ ಉದ್ದೇಶ. ಜಾನಿ ಡೆಪ್ಪ್ ಸಿನಿಮಾ ಮಾಡುವುದು ನಿಲ್ಲಿಸಿಲ್ಲ, ಆತನ ಚಿತ್ರಗಳು ಬರುತ್ತಿವೆ. ಪರವಾಗಿಲ್ಲ ಎನ್ನುವ ಮಟ್ಟದ ಹೆಸರು ಮತ್ತು ಕಲೆಕ್ಷನ್ ಕೂಡ ಮಾಡುತ್ತಿವೆ. ಆದರೆ ಅಂದಿನ ಯಶಸ್ಸು ಮರಳಿ ಸಿಕ್ಕಿಲ್ಲ. ಬದುಕೆಂದರೆ ಯಾವಾಗ ಬೇಕಾದರೂ ಬದಲಾಗಬಹುದು ನೋಡಿ- ಜಾನಿ ಡೆಪ್ಪ್ ನಾಳೆ ಹಿಂದಿನ ಎತ್ತರವನ್ನು ಮರಳಿ ಏರಬಹುದು ಅಥವಾ ಅದಕ್ಕಿಂತ ಹೆಚ್ಚಿನ ಯಶಸ್ಸು ಕಾಣಬಹುದು.
ಜಾನಿ ತಮ್ಮ ತಪ್ಪಿನಿಂದ ಪಾಠ ಕಲಿತಿದ್ದರೆ ಆಗ ಬದುಕನ್ನು ನಿಭಾಯಿಸುವುದು ಸುಲಭ. ಜಾನಿ ಡೆಪ್ಪ್ ಜೀವನ ನಮಗೆ ಹಲವು ಪಾಠಗಳನ್ನು ಹೇಳುತ್ತದೆ, ಕೇಳುವ ಕಿವಿ ನಮ್ಮದಾಗಿರಬೇಕು: ಗೆಲುವು, ಯಶಸ್ಸು ಬಂದಾಗ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಹಣ ಮತ್ತು ಕೀರ್ತಿ ಎರಡೂ ಮನುಷ್ಯನ ಅತಿದೊಡ್ಡ ಶತ್ರುಗಳಾಗಿ ಬದಲಾಗಿಬಿಡುತ್ತವೆ. ಇದಕ್ಕೆ ನಾವು ನೂರಾರು ಉದಾಹರಣೆಗಳನ್ನು ಕಾಣಬಹುದು. ಇವೆರಡೂ ತಲೆಗೆ ಇಳಿಯದಂತೆ ಸಂಯಮದಿಂದ ಇದ್ದವರು ಮಾತ್ರ ನಿಜಾರ್ಥದಲ್ಲಿ ಜಯಶೀಲರಾಗುತ್ತಾರೆ.
ಕುಳಿತು ತಿನ್ನುವವನಿಗೆ ಮಾತ್ರವಲ್ಲ, ಮಿತಿಯಿಲ್ಲದೆ ಖರ್ಚು ಮಾಡುವವರ ಕುಡಿಕೆ ಕೂಡ ಖಾಲಿ ಯಾಗುತ್ತದೆ. ಆದಾಯಕ್ಕೆ ಮೀರಿದ ಖರ್ಚು ಮಾಡುತ್ತಾ ಹೋದರೆ ಏನಾಗುತ್ತದೆ ಎನ್ನುವುದಕ್ಕೆ ಜಾನಿ ಅವರ ಬದುಕು ಉದಾಹರಣೆ. ಎಷ್ಟೇ ಹಣ ಸಂಪಾದಿಸಿರಲಿ ಅದರ ನಿರ್ವಹಣೆ ಸರಿಯಾಗಿ ಮಾಡ ಬೇಕು. ನಿರ್ವಹಣೆ ಸರಿಯಾಗಿರದಿದ್ದರೆ, ದೊಡ್ಡ ಹಡಗಿನಲ್ಲಿ ಸಣ್ಣ ರಂಧ್ರ ಮಾಡುವ ಕೆಲಸವನ್ನು ಅದು ಮಾಡುತ್ತದೆ. ಸಮಯ ಸರಿಯುತ್ತ ಹಡಗು ಮುಳುಗುತ್ತದೆ.
ನಾವ್ಯಾರೇ ಆಗಿರಲಿ, ಎಷ್ಟೇ ಪ್ರಸಿದ್ಧರಾಗಿರಲಿ, ಹಣವಂತರಾಗಿರಲಿ ನಮ್ಮೊಳಗೆ ಒಬ್ಬ ಪುಟ್ಟ ಅಕೌಂ ಟೆಂಟ್ ಇರಬೇಕಾಗುತ್ತದೆ. ಈ ವರ್ಷ ನಾನು ಗಳಿಸಿದ ಹಣವೆಷ್ಟು? ಅದರಲ್ಲಿ ಖರ್ಚೆಷ್ಟು? ಯಾವ ವಿಷಯಕ್ಕೆ ಎಷ್ಟು ಖರ್ಚಾಗಿದೆ? ಉಳಿದ ಹಣವೆಷ್ಟು? ಉಳಿದಿದ್ದರೆ ಅದನ್ನು ಎಲ್ಲಿ ಹೂಡಿಕೆ ಮಾಡಲಾಗಿದೆ? ನನ್ನ ಇಂದಿನ ಹಣಕಾಸು ಸ್ಥಿತಿಯೇನು? ಈ ಎಲ್ಲ ಅವಲೋಕನವನ್ನು ಪ್ರಸಿದ್ಧರು, ಹಣವಂತರು ಮಾತ್ರವಲ್ಲ ಪ್ರತಿಯೊಬ್ಬರೂ ಮಾಡಬೇಕು.
ಬದುಕು ಎಲ್ಲರಿಗೂ ಪ್ರಸಿದ್ಧಿ ಮತ್ತು ಹಣವನ್ನು ಕರುಣಿಸುವುದಿಲ್ಲ. ಅವು ಸಿಕ್ಕಾಗ ಅದನ್ನು ಪ್ರೀತಿ ಯಿಂದ ನೋಡಿಕೊಳ್ಳಬೇಕು. ಮನಸ್ಸಿನ ಮೇಲೆ ನಿಯಂತ್ರಣ ಹೊಂದಬೇಕು. ಮೋಜು ಮಾಡುವುದೇ ಜೀವನವಲ್ಲ. ಸಮಾಜ ಹಾಕಿರುವ ಪರಿಧಿಯಲ್ಲಿ, ನಮ್ಮ ಲಕ್ಷ್ಮಣರೇಖೆ ಎಳೆದುಕೊಂಡು ಬದುಕ ಬೇಕು.
ಮಾಡಿದ ಎಲ್ಲಾ ಕೆಲಸಗಳೂ ಗೆಲ್ಲುತ್ತವೆ, ಯಶಸ್ಸು ತಂದುಕೊಡುತ್ತವೆ ಎನ್ನುವ ಗ್ಯಾರಂಟಿಯನ್ನು ಯಾರೂ ಕೊಡಲಾಗುವುದಿಲ್ಲ. ಪ್ರಯತ್ನಪಡುತ್ತಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮಾರುಕಟ್ಟೆ ಯಲ್ಲಿ ಇರಬೇಕು. ಇರುವಿಕೆ ಬಹಳ ಮುಖ್ಯ. ‘ಕ್ವಿಟ್’ ಎನ್ನದೆ ಮಾರುಕಟ್ಟೆಯಲ್ಲಿ ಇದ್ದರೆ ಸಾಕು, ಸೋಲು-ಗೆಲುವು ಎರಡೂ ಯಾವುದೋ ಒಂದು ಮೂಲೆಯಲ್ಲಿ ಜತೆಯಾಗುತ್ತವೆ.