ವಿಶ್ವರಂಗ
ದೃಶ್ಯ ಒಂದು : ಮೈಸೂರಿನ ಒಂದು ರಸ್ತೆಯಲ್ಲಿ ಹದಿನೆಂಟು ತುಂಬಿರದ ಹುಡುಗನೊಬ್ಬ ಬೈಕು ಚಲಾಯಿಸಿಕೊಂಡು ಹೋಗುತ್ತಿದ್ದಾನೆ. ಆತನ ಹಿಂದೆ ಕುಳಿತ ತಂದೆಯ ಮುಖದಲ್ಲಿ ತನ್ನ ಮಗ ಬೈಕ್ ಚಲಾಯಿಸುವ ಬಗ್ಗೆ ಅತೀವ ಹೆಮ್ಮೆ. ಅದೇ ಬಡಾವಣೆಯಲ್ಲಿರುವ ಕಾರಣ ಅವರ ಬಗ್ಗೆ ತಿಳಿದುಕೊಂಡೆ. ಆತ ಶಿಸ್ತಿನ ಮನುಷ್ಯ. ಸ್ವಲ್ಪವೂ ಕೆಟ್ಟ ಹೆಸರು ಪಡೆದುಕೊಂಡಿಲ್ಲ. ಆದರೆ ಹದಿನೆಂಟು ದೂರದ ಮಾತು, ಹದಿನಾರು ಕೂಡ ತುಂಬದ ಮಗ ಬೈಕು ಓಡಿಸುವುದು ಆತನಿಗೆ ಹೆಮ್ಮೆ. ನಮ್ಮ ಸಮಾಜದಲ್ಲಿ ಹದಿನೆಂಟು ತುಂಬದ ಲಕ್ಷಾಂತರ ಮಕ್ಕಳು ರಾಜಾರೋಷವಾಗಿ ರಸ್ತೆಯಲ್ಲಿ ಬೈಕು, ಕಾರು ಚಲಾಯಿಸುತ್ತಿದ್ದಾರೆ.
ರಸ್ತೆ ಅಪಘಾತದಲ್ಲಿ ಪ್ರತಿ ನೂರು ಸಾವಿನಲ್ಲಿ ಆರು ಮಂದಿ ಹದಿನೆಂಟು ವರ್ಷಕ್ಕಿಂತ ಕಡಿಮೆ ಇರುವವರು ವಾಹನ ಚಲಾಯಿಸುತ್ತಿದ್ದರು ಎನ್ನುವುದು ತಿಳಿದು ಬಂದಿದೆ. ಹದಿನೆಂಟಕ್ಕಿಂತ ಮುಂಚೆ ವಾಹನ ಚಲಾಯಿಸಲು ಅನುಮತಿಯನ್ನು ನಮ್ಮ ಕಾನೂನು ನೀಡುವುದಿಲ್ಲ. ಆದರೆ ಈ ಕಾನೂನು ಯಾರೂ ಪಾಲಿಸುತ್ತಿಲ್ಲ. ಇದು ತಪ್ಪು ಎನ್ನುವುದು ಸಮಾಜದಲ್ಲಿ ಚರ್ಚೆ ಕೂಡ ಆಗುವುದಿಲ್ಲ.
ದೃಶ್ಯ ಎರಡು : ತಿಂಗಳ ಮೊದಲ ವಾರ ಮತ್ತು ಕೊನೆಯ ವಾರದಲ್ಲಿ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಪೊಲೀಸರು ನಿಂತಿರುತ್ತಾರೆ. ರಸ್ತೆಯಲ್ಲಿ ದ್ವಿಚಕ್ರ ಚಲಾಯಿಸುವರಲ್ಲಿ 70 ಪ್ರತಿಶತಕ್ಕೂ ಹೆಚ್ಚಿನ ಜನ ತಲೆಗೆ ಹೆಲ್ಮೆಟ್ ಹಾಕುವುದಿಲ್ಲ. ಬಹಳಷ್ಟು ಜನ ಅದನ್ನು ಬೈಕಿನಲ್ಲಿ ತಗಲಾಕಿರುತ್ತಾರೆ. ಪೊಲೀಸರನ್ನುನೋಡಿದ ತಕ್ಷಣ ಅದನ್ನು ತಲೆಗೆ ಏರಿಸುತ್ತಾರೆ. ಹೆಣ್ಣು, ಗಂಡು ಮತ್ತು ವಯಸ್ಸಿನ ಭೇದವಿಲ್ಲದೆ ಪೊಲೀಸರನ್ನು ಕಂಡ ತಕ್ಷಣ ವಾಹನ ನಿಲ್ಲಿಸಿ, ವಿರುದ್ಧ ದಿಕ್ಕಿನಲ್ಲಿ ಹೋಗುವುದು ಕಂಡಿದ್ದೇನೆ. ನಾವು ಮಾಡಿದ್ದು ತಪ್ಪು ಎನ್ನುವ ಲವಲೇಶ ಭಾವನೆಯೂ ಅವರಲ್ಲಿ ಕಾಣುವುದಿಲ್ಲ. ಬದಲಿಗೆ ಹೇಗಾದರೂ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳದೆ ಇದ್ದರೆ ಸಾಕು ಎನ್ನುವ ಆ ಕ್ಷಣದ ಭಾವನೆ ಅವರಿಂದ ಇನ್ನೊಂದು ತಪ್ಪು ಮಾಡಿಸುತ್ತದೆ.
ಇದನ್ನೂ ಓದಿ: Rangaswamy Mookanahalli Column: ಕೇಳಿದ್ದೆಲ್ಲಾ ಭಗವಂತ ನೀಡುತ್ತಾನೆ ಎಂದೇನಿಲ್ಲ !
ಯಾವ ಅಪರಾಧಿ ಭಾವವೂ ಇಲ್ಲದೆ ವಿರುದ್ಧ ದಿಕ್ಕಿನಲ್ಲಿ ವಾಹನವನ್ನು ಚಲಾಯಿಸುತ್ತಾರೆ. ಪೊಲೀಸರು ಕೂಡ ಕಡಿಮೆಯಿಲ್ಲ. ನಡು ರಸ್ತೆಗೆ ಬಂದು ಸವಾರರನ್ನು ಹಿಡಿಯುತ್ತಾರೆ. ರಸ್ತೆಯ ಅರ್ಧ ಭಾಗವನ್ನು ವಾಹನಗಳು ಆಕ್ರಮಿಸಿಕೊಳ್ಳುವುದರಿಂದ ಅವರು ಟ್ರಾಫಿಕ್ ಜಾಮ್‌ಗೆ ಕೂಡ ಕಾರಣರಾಗುತ್ತಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಬೇಕು ಅಲ್ವಾ ? ಆದರೆ ಅಂಗೈ ಹುಣ್ಣು ಸಮಾಜಕ್ಕೆ ಕಾಣುವುದೇ ಇಲ್ಲ.
ದೃಶ್ಯ ಮೂರು : ವಾಹನವನ್ನು ತೀರಾ ಬಲಭಾಗದಲ್ಲಿ ನಿಧಾನವಾಗಿ ಚಲಾಯಿಸುತ್ತಾ ಮೊಬೈಲಿ ನಲ್ಲಿ ಮಾತಾಡುವುದು, ಮೊಬೈಲ್ ಸ್ಕ್ರೋಲ್ ಮಾಡುವುದು ಅತಿ ಸಾಮಾನ್ಯ. ಸಿಂಗ್ನಲ್ ಜಂಪ್ ಮಾಡುವುದು, ಗಾಡಿಯ ಕಿಟಕಿ ಕೆಳಗಿಳಿಸಿ ಹಿಂದೆ ಮುಂದೆ ನೋಡದೆ ಉಗಿಯುವುದು ಕೂಡ ಇವತ್ತಿಗೆ ನಮ್ಮ ಸಮಾಜದಲ್ಲಿ ಸಾಮಾನ್ಯ. ರಸ್ತೆಯಲ್ಲಿ ಕಸ ಎಸೆಯುವುದು ನಮ್ಮ ಜನ್ಮಸಿದ್ಧ ಹಕ್ಕು.
ದೃಶ್ಯ ನಾಲ್ಕು: ಸೈಟು ನೋಂದಣಿ ಮಾಡಿಸಿಕೊಳ್ಳಬೇಕು. ಇವತ್ತಿಗೆ ಸ್ಟ್ಯಾಂಪ್ ಡ್ಯೂಟಿ ಶೇ.7.65 ಆಗಿ ಹೋಗಿದೆ. ಸ್ಟ್ಯಾಂಪ್ ಡ್ಯೂಟಿ ಉಳಿಸಬೇಕಲ್ಲ. ಏನು ಮಾಡುವುದು? ನೂರು ರೂಪಾಯಿ ಮೌಲ್ಯದ ಜಾಗವನ್ನು ಐವತ್ತು ರುಪಾಯಿಗೆ ನೋಂದಣಿ ಮಾಡಿಸಿಕೊಳ್ಳುವುದು. ಉಳಿದ ಐವತ್ತು ರೂಪಾಯ ನಗದು ರೂಪದಲ್ಲಿ ನೀಡುವುದು. ಎಷ್ಟು ಸುಲಭ ಅಲ್ವಾ? ಇವತ್ತಿಗೆ ಇದು ಅಲಿಖಿತ ನಿಯಮ. ಈ ರೀತಿ ನಾವುಮಾಡುವುದಿಲ್ಲ, ದಯಮಾಡಿ ಪೂರ್ಣ ಮೌಲ್ಯಕ್ಕೆ ನೋಂದಣಿ ಮಾಡಿಕೊಡಿ ಎಂದರೂ ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ಮಾರುಕಟ್ಟೆ ಬಂದು ನಿಂತಿದೆ. ಇನ್ನು ಸರಕಾರಕ್ಕೆ ನೀಡುವ ತೆರಿಗೆ ಯನ್ನು ತಪ್ಪಿಸಿಕೊಳ್ಳಲು, ಸಾಧ್ಯವಾದಷ್ಟೂ ಕಡಿಮೆ ನೀಡಲು ನಮ್ಮ ಸಭ್ಯ ನಾಗರಿಕರು ಮಾಡುವ ಕಸರತ್ತುಗಳನ್ನು ನಾನು ಇಲ್ಲಿ ವಿವರಿಸಲು ಹೋಗುವುದಿಲ್ಲ.
ದೃಶ್ಯ ಐದು: ಕ್ರಿಕೆಟ್ ಆಟವನ್ನು ನೋಡುತ್ತಾ, ಹೇಗೆ ಬ್ಯಾಟ್ ಮಾಡಬೇಕು, ಹೇಗೆ ಬೌಲಿಂಗ್ ಮಾಡ ಬೇಕಿತ್ತು, ಹೇಗೆ ಫೀಲ್ಡಿಂಗ್ ಮಾಡಬೇಕು, ಇತ್ಯಾದಿ ರನ್ನಿಂಗ್ ಕಾಮೆಂಟರಿ ನೀಡುತ್ತಾ ಸರ್ವಜ್ಞರಂತೆ ಮಾತಾಡುವ ಜನ ಕೊನೆ ಪಕ್ಷ ಗಲ್ಲಿ ಕ್ರಿಕೆಟ್'ನಲ್ಲಿಯಾದರೂ ಚಾಂಪಿಯನ್ ಎನ್ನಿಸಿ ಕೊಂಡಿದ್ದರೆ ಹೋಗಲಿ ಬಿಡು ಎನ್ನಬಹುದು. ಜೀವನದಲ್ಲಿ ಕೈಯಲ್ಲಿ ಬ್ಯಾಟ್ ಆಂಡ್ ಬಾಲ್ ಮುಟ್ಟದ ಜನ ಅಂತರಾಷ್ಟ್ರೀಯ ಕ್ರಿಕೆಟ್ ಆಟವನ್ನು ವಿಶ್ಲೇಷಿಸುವುದು ನೋಡಿದಾಗೆ ಮನಸ್ಸಿನಲ್ಲಿ ನಗು ಬರುತ್ತದೆ.
ದೃಶ್ಯ ಆರು : ಬುದ್ಧಿ ಬಂದಾಗಿನಿಂದ ಕೇಳುತ್ತಿರುವ ಮಾತು, ‘ಇದು ಗೊತ್ತ, ಇದು ಇಂತಹವರಿಗೆ ಸೇರಿದ್ದು, ಇದು ಅವರ ಜಾಗ, ಇದರಲ್ಲಿ ಅವರ ಬಂಡವಾಳವಿದೆ’. ರಾಜಕಾರಣಿ ಹೆಸರು ಕಾಲಕ್ಕೆ ತಕ್ಕಂತೆ ಬದಲಾಗಿದೆ. ಆದರೆ ಜನರ ಮನಸ್ಥಿತಿ ಮಾತ್ರ ಬದಲಾಗಿಲ್ಲ. ಇವತ್ತಿಗೂ ಇದು ಅವನದು, ಇವನದು, ಇದು ಅವರ ಜಾಯಿಂಟ್ ವೆಂಚರ್ ಇತ್ಯಾದಿ ಹೇಳುವುದು ನಿಲ್ಲಿಸುವುದಿಲ್ಲ. ಗುಂಪಿನಲ್ಲಿ ಎಲ್ಲರೂ ರಾಜಕಾರಣಿಗಳ ಬಗ್ಗೆ, ಅವರು ಅನೈತಿಕವಾಗಿ ಮಾಡಿರುವ ಆಸ್ತಿಯ ಬಗ್ಗೆ ಮಾತಾಡು ತ್ತಾರೆ. ಆದರೆ ಯಾರೊಬ್ಬರೂ, ಹೌದು ಸಾಹಿತ್ಯ ಲೋಕಕ್ಕೆ ಸೇರಿದವರು ಕೂಡ, ಈತ ಭ್ರಷ್ಟ ಹೀಗಾಗಿ ನಾನು ಈತನ ಸರಕಾರ ನೀಡುವ ಪುರಸ್ಕಾರ ಸ್ವೀಕರಿಸುವುದಿಲ್ಲ, ಈತನ ಕೈಯಿಂದ ಸ್ವೀಕರಿಸುವು ದಿಲ್ಲ ಎನ್ನುವ ಮಾತನ್ನು ಆಡುವುದಿಲ್ಲ. ಪರಮನೀಚ, ಪರಮ ಭ್ರಷ್ಟ ಎಂದು ಯಾವ ರಾಜಕಾರಣಿ ಯನ್ನು ಹಂಗಿಸಿದ್ದರೋ ಅದೇ ರಾಜಕಾರಣಿಯ ಪಕ್ಕದಲ್ಲಿ ಹೆಮ್ಮೆಯಿಂದ ನಿಂತು ಫೋಟೋ ತೆಗೆಸಿ ಕೊಳ್ಳುತ್ತಾರೆ. ಊರವರ ಮುಂದೆ ನನಗವನು ಗೊತ್ತು, ದೋಸ್ತು ಎಂದು ಹೇಳಿಕೊಂಡು ತಿರುಗುತ್ತಾರೆ.
ಮೇಲಿನ ಅಷ್ಟೂ ವಿಚಾರಗಳು ಊರು, ಸಮಯಗಳ ಅಂತರವಿಲ್ಲದೆ, ವಯಸ್ಸು ಮತ್ತು ಲಿಂಗಭೇದ ವಿಲ್ಲದೆ ಘಟಿಸುತ್ತಲೆ ಇರುತ್ತದೆ. ಇಷ್ಟೂ ವಿಚಾರಗಳಲ್ಲಿ ನಾವು ಭಾಗಿಯಾಗಿದ್ದಾಗ ನಮಗದು ತಪ್ಪು ಎಂದು ಕೂಡ ಅನ್ನಿಸುವುದಿಲ್ಲ. ಆದರೆ ನಾವೆಲ್ಲರೂ ಸಮಾಜಕ್ಕೆ ಬುದ್ಧಿವಾದ ಹೇಳುವ ದರ್ದಿಗೆ ಮಾತ್ರ ಬಹುಬೇಗ ಬಿದ್ದು ಬಿಡುತ್ತೇವೆ. ಸಮಾಜದ ವಿಚಾರದಲ್ಲಿ ಇದು ನಿಷಿದ್ಧವಾಗಿ ಬಿಡುತ್ತದೆ. ಅಂದರೆ ಸಮಾಜದಬೇರೊಬ್ಬರು ಇದನ್ನು ಮಾಡಿದ್ದಾರೆ ಎನ್ನುವ ಗಾಳಿಸುದ್ದಿಸಿಕ್ಕರೂ ಸಾಕು ಕಣ್ರೀ, ಮಾಡಿದ್ದರೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳದೆ ಜಗತ್ತಿನ ಎಲ್ಲಾ ನೈತಿಕತೆಗೆ ಆತನನ್ನು ಕಟ್ಟಿ ಮುಳುಗಿಸಿಬಿಡುತ್ತಾರೆ.
ಇದರರ್ಥ ಎಲ್ಲರೂ ಅನೈತಿಕತೆಯ ಹಾದಿ ಹಿಡಿದಿದ್ದಾರೆ ಎಂದಲ್ಲ. ಅಥವಾ ಮೆಜಾರಿಟಿ ಮಾಡಿದರೆ ಅದು ಸರಿ ಎನ್ನುವುದೂ ಅಲ್ಲ. ನನ್ನ ಈ ಸಾಲುಗಳ ಉದ್ದೇಶ ಸ್ಪಷ್ಟ. ಜನರ ಮುಖಕ್ಕೆ ಕನ್ನಡಿ ಹಿಡಿಯುವುದು ಅಷ್ಟೇ. ನಾವೇನೂ ಮಹಾಸುಭಗರು ಎನ್ನುವ ಟೊಳ್ಳುತನವಿದೆಯಲ್ಲ ಅದಕ್ಕಿಂತ ದೊಡ್ಡ ಆತ್ಮವಂಚನೆ ಬೇರೇನೂ ಇಲ್ಲ. ನಾವು ಮಾಡಿದ ತಪ್ಪು ಸಣ್ಣದು ಎನ್ನುವ ಭಾವನೆಯೇ ತಪ್ಪು. ಹೆಲ್ಮೆಟ್ ಹಾಕದಿರುವುದು,
ತೆರಿಗೆ ವಂಚನೆ, ಐದು ರೂಪಾಯಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡದೆ ಹೂಡಿಕೆ ತಜ್ಞರತರಹ ಮುಖವಾಡ ಹಾಕುವುದು, ಪಟ್ಟಿ ದೊಡ್ಡದು. ರಾಜಕಾರಣಿಗಳನ್ನು ಅಥವಾ ಇನ್ನಾ ರನ್ನೋ ಕಳ್ಳರು, ಸುಳ್ಳರು, ನೈತಿಕತೆ ಇಲ್ಲದವರು ಎನ್ನುವ ಪಟ್ಟದಲ್ಲಿ ಸುಲಭವಾಗಿ ಕೂರಿಸುವ ಸಮಾಜ, ಜನ ಸ್ವಲ್ಪ ಆತ್ಮಾವಲೋಕನ ಕೂಡ ಮಾಡಿಕೊಳ್ಳಲಿ ಎನ್ನುವುದು ಈ ಬರಹದ ಉದ್ದೇಶ.
ದೊಡ್ಡ ಮಟ್ಟದಲ್ಲಿ ತೆರಿಗೆ ವಂಚನೆ ಮಾಡಿದರೆ ಮಾತ್ರ ಅವರು ಕೆಟ್ಟವರು, ದೊಡ್ಡ ಮಟ್ಟದಲ್ಲಿ ಲೂಟ ಮಾಡಿದವರು ಮಾತ್ರ ಕಳ್ಳರು ಎನ್ನುವ ನಮ್ಮ ಜನರ ಭಾವನೆ ಬದಲಾಗಬೇಕಿದೆ. ಇಲ್ಲಿ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ವಂಚನೆಯಲ್ಲಿ ಭಾಗಿಯಾಗಿದ್ದೇವೆ. ಆದರೆ ಎಂದಿಗೂ ನಮ್ಮ ಕಡೆಗೆ ನಾವು ಬೆಟ್ಟು ಮಾಡಿ ತೋರಿಸಿಕೊಳ್ಳುವುದಿಲ್ಲ. ಬಲಿಷ್ಠ ವ್ಯಕ್ತಿಗೆ ಸುಳ್ಳು ಹೇಳಿದರೆ ಆತನಿಗೆ ಕೋಪ ಬರುತ್ತದೆ. ಅದೇ ಸಮಾಜದಲ್ಲಿನ ಜನರಿಗೆ ನಿಜ ಹೇಳಿ ನೋಡಿ ! ಅವರಿಗೆ ಕೋಪ ಬರುತ್ತದೆ. ಅವರ ಮುಖಕ್ಕೆ ಮಾತ್ರ ಕನ್ನಡಿಯನ್ನು ಹಿಡಿಯಲು ಹೋಗಬಾರದು. ನನ್ನ ಆಪ್ತ ಸ್ನೇಹಿತನೊಬ್ಬನಿದ್ದಾನೆ. ಆದರೆ ಆತನ ಒಂದು ಗುಣವನ್ನು ನಾನು ಕಂಡರೂ ಕಾಣದಂತೆ ಇರುವುದರಿಂದ ನಮ್ಮ ಸ್ನೇಹ ಉಳಿದುಕೊಂಡಿದೆ.
ನಾನು ಏನೇ ಕೊಂಡುಕೊಂಡರೂ ಎಷ್ಟು ಕೊಟ್ಟೆ ಎಂದ ಕೇಳುತ್ತಾನೆ. ಇಷ್ಟು ಎಂದ ತಕ್ಷಣ, ನೀನು ಜಾಸ್ತಿ ಕೊಟ್ಟಿದ್ದೀಯ, ಮಾರುಕಟ್ಟೆಯಲ್ಲಿ ಇದಕ್ಕೆ ಇಷ್ಟು ಬೆಲೆಯಿಲ್ಲ ಎಂದು, ತಾನು ಅದೇ ತರಹದ ವಸ್ತುವಿಗೆ ಎಷ್ಟು ಕಡಿಮೆ ಕೊಟ್ಟೆ ಎಂದು ಹೇಳಿಕೊಂಡು ಸಮಾಧಾನ ಪಡುವುದು ಆ ಗುಣ. ಅವನು ಮಾಡಿದ್ದೇ ಬೆಸ್ಟ್!
ಆತನ ಸುತ್ತಮುತ್ತ ಇರುವವರು ಟೋಪಿ ಹಾಕಿಸ್ಕೊಂಡಿದ್ದಾರೆ ಎನ್ನುವುದು ಅವನ ಭಾವನೆ. ನಾವು ಮಾಡಿದ ತಪ್ಪು ಸಣ್ಣದು, ಬೇರೆಯವರು ಮಾಡಿದ್ದು ದೊಡ್ಡದು. ಅವರು ಮಾಡಬಾರದು, ಅದು ಅಪರಾಧ ! ನಾನು ಮಾಡಿದರೆ ಅದು ಓಕೆ, ಚಲ್ತಾ ಹೈ!
ಒಟ್ಟಾರೆ ಸಮಾಜದ ಜನರನ್ನು ಮೆಚ್ಚಿಸಲು ಜನಾರ್ದನನಿಂದಲೇ ಸಾಧ್ಯವಾಗಲಿಲ್ಲ ಎಂದಮೇಲೆ ಸಾಮಾನ್ಯ ಮನುಷ್ಯರ ಕೈಲಿ ಹೇಗೆ ಸಾಧ್ಯ? ಇದನ್ನು ಕಂಡು ನಮ್ಮ ಕೆ ಎಸ್ ನರಸಿಂಹಸ್ವಾಮಿ ಯವರು ಒಂದೊಳ್ಳೆ ಕವನ ಬರೆದಿದ್ದಾರೆ. ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ! ಎನ್ನುತ್ತಾರೆ.
ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು
ಬಂತಲ್ಲ ಬೇಸಿಗೆ, ’ಕೆಟ್ಟಬಿಸಿಲ’ ಎಂದರು
ಮಳೆ ಬಿತ್ತೊ, ‘ಬಿಡದಲ್ಲ ಶನಿ!’ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ಚಿಗುರ ಚಿನ್ನದ ನಡುವೆ ಹೂವ ಬಯಸುವರು
ಹೂಗಳ ಕಾಲದಲ್ಲಿ ಹಣ್ಣ ಹೊಗಳುವರು;
‘ಹಣ್ಣಿನ ಗಾತ್ರ ಪೀಚು’ ಎಂದಿವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ನಿಂತವರ ಕೇಳುವರು: ನೀನೇಕೆ ನಿಂತೆ ?
ಮಲಗಿದರೆ ಗೊಣಗುವರು: ನಿನಗಿಲ್ಲ ಚಿಂತೆ!
ಓಡಿದರೆ ಬೆನ್ನ ಹಿಂದೆಯೆ ಇವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ಓದಿದರೆ ಹೇಳುವರು: ಮತ್ತೊಮ್ಮೆ ಬರಿಯೊ!
ಬರೆದಿಡಲು ಬೆದಕುವರು: ಬರವಣಿಗೆ ಸರಿಯೊ?
ಇವರ ಬಯಕೆಗಳೇನೊ! ಇವರದೇ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ನಾನು ಭಾರತಕ್ಕೆ ವಾಪಸ್ಸು ಮರಳಿ ಬಂದ ಪ್ರಥಮ ದಿನಗಳಲ್ಲಿ ನನಗೆ ಭಾರತದ ರಸ್ತೆಗಳಲ್ಲಿರುವ ಕಸ, ಹಾರನ್, ಇಲ್ಲಿನ ಜನಜಂಗುಳಿ ಬಿಟ್ಟು ಬೇರೇನೂ ಕಾಣುತ್ತಿರಲಿಲ್ಲ.
ಇಲ್ಲಿ ಬದುಕುವುದು ಹೇಗೆ ? ಸಮಾಜ ಗಬ್ಬೆದ್ದು ಹೋಗಿದೆ ಎನ್ನುವ ಮನಸ್ಥಿತಿಯಲ್ಲಿದ್ದೆ. ನಂಬಿಕೆ ಬದುಕಿಗೆ ಬಹಳ ಮುಖ್ಯ. ದೃಷ್ಟಿಯಂತೆ ಸೃಷ್ಟಿ ಎನ್ನುವುದು ಅರಿವಾಗುತ್ತಾ ಹೋಯ್ತು. ಇಲ್ಲಿನ ಬದುಕು ಕೂಡ ದಶಕ ಮುಗಿಸಿದೆ. ಒಂದು ಸಣ್ಣ ಕಥೆಯೊಂದಿಗೆ ಇವತ್ತಿನ ಬರಹಕ್ಕೆ ವಿರಾಮ ಹಾಡುವೆ.
ಹತ್ತಾರು ಇಲಿಗಳನ್ನು ವಿಜ್ಞಾನಿಗಳು ನೀರಿನಲ್ಲಿ ಹಾಕುತ್ತಾರೆ. ಅವುಗಳು ಇಪ್ಪತ್ತು ನಿಮಿಷದಲ್ಲಿ ಈಜಲಾಗದೆ ಮುಳುಗಿ ಸಾಯುತ್ತವೆ. ಮತ್ತೊಮ್ಮೆ ಹತ್ತಾರು ಇಲಿಗಳನ್ನು ನೀರಿಗೆ ಹಾಕುತ್ತಾರೆ. ಈ ಬಾರಿ ಕೂಡ ಅವುಗಳು ಇಪ್ಪತ್ತು ನಿಮಿಷದಲ್ಲಿ ಸಾಯುವ ಹಂತಕ್ಕೆ ಹೋಗುತ್ತವೆ, ಆದರೆ ಮುಳುಗುವ ಮುನ್ನ ರಕ್ಷಣೆ ಮಾಡುತ್ತಾರೆ.
ಒಂದೆರಡು ದಿನ ಅವುಗಳನ್ನು ಕಾಪಾಡಿ ಮತ್ತೆ ನೀರಿಗೆ ಹಾಕುತ್ತಾರೆ. ಈ ಬಾರಿ ವಿಜ್ಞಾನಿಗಳಿಗೆ ಆಶ್ಚರ್ಯ ಕಾದಿತ್ತು. ಇಪ್ಪತ್ತು ನಿಮಿಷವಾದರೂ ಅವು ಮುಳುಗಲಿಲ್ಲ, ಬರೋಬ್ಬರಿ ಇಪ್ಪತ್ತು ಗಂಟೆ ಅವು ಸಾಯದೆ, ಮುಳುಗಡೆ ಈಜಾಡುತ್ತಲೆ ಇದ್ದವಂತೆ ! ಇದಕ್ಕೇನು ಕಾರಣ ಎಂದು ವಿಜ್ಞಾನಿಗಳು ಗಮನಿಸಿದಾಗ ‘ನಂಬಿಕೆ’ ಎನ್ನುವುದು ಗೊತ್ತಾಯಿತಂತೆ! ಯಾರೋ ಬರುತ್ತಾರೆ ರಕ್ಷಣೆ ಮಾಡುತ್ತಾರೆ ಎನ್ನುವನಂಬಿಕೆ, ಅನುಭವ ಅವುಗಳನ್ನು ಇಪ್ಪತ್ತು ಗಂಟೆ ಈಜು ಹೊಡೆಸಿತ್ತು !
ಇಲಿ ಇಪ್ಪತ್ತು ಗಂಟೆ ನಂಬಿಕೆಯಲ್ಲಿ ಬದುಕಬಲ್ಲದು ಎಂದರೆ ನಾವು ಮನುಷ್ಯರು, ಒಂದೊಳ್ಳೆ ಸಮಾಜದ ನಿರ್ಮಾಣ ನಮ್ಮೆಲ್ಲರ ಹೊಣೆ. ಇವತ್ತಲ್ಲ ನಾಳೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ನನ್ನದು. ಆದರೆ ನೈತಿಕತೆ ಎನ್ನುವುದು ಒನ್ ವೇ ಟ್ರಾಫಿಕ್ ಆಗಬಾರದು ಅಷ್ಟೆ.