ಶಶಾಂಕಣ
ನಾಗರಿಕ ಸೌಕರ್ಯಗಳಿಗಾಗಿ ಸದಾ ಹಪಹಪಿಸುತ್ತಿರುವ ಆಧುನಿಕ ಮನುಷ್ಯನಿಗೆ, ಮರುಭೂಮಿ ಯೊಂದನ್ನು ನಿರ್ಮಿಸಲು ಸಾಧ್ಯವಿದೆಯೆ? ಅದೂ ಕೇವಲ 50 ವರ್ಷಗಳಲ್ಲಿ? ಅಂಥದೊಂದು ‘ಸಾಹಸ’ (ದುರಂತ) ಕಳೆದ ಶತಮಾನದಲ್ಲಿ ನಡೆದಿದೆ. ಆ ಮರುಭೂಮಿಯನ್ನು ನಿರ್ಮಿಸಿ, ಸಾವಿರಾರು ಜನರ ಬದುಕನ್ನು ದುರ್ಭರಗೊಳಿಸಿಯಾಗಿದೆ.
ಮನುಷ್ಯನು ತನ್ನ ಅಭಿವೃದ್ಧಿಪಥವನ್ನು ಅನುಸರಿಸುವ ಭರದಲ್ಲಿ, ಡರ್ಟಿ ಪಾತ್ (ಕೊಳಕು ದಾರಿ) ಅನ್ನು ಅನುಸರಿಸಿದರೆ, ವಿಶಾಲ ಮರುಭೂಮಿಯನ್ನು ನಿರ್ಮಿಸಬಹುದು ಎಂದು ಆ ದುರಂತ ತೋರಿಸಿಕೊಟ್ಟಿದೆ. ಆ ದುರಂತವು ಜಗದ್ವಿಖ್ಯಾತವೂ ಹೌದು; ಮನುಷ್ಯನೇ ನಿರ್ಮಿಸಿದ ಮರುಭೂಮಿಯ ಈ ಕೆಟ್ಟ ಉದಾಹರಣೆಯು ಸಾಕಷ್ಟು ಅಧ್ಯಯನಕ್ಕೂ ಒಳಗಾಗಿದೆ, ಕುಖ್ಯಾತವೂ ಆಗಿದೆ.. ಆದರೆ.. ಆದರೆ...ಇಪ್ಪತ್ತನೆಯ ಶತಮಾನದಲ್ಲಿ ನಡೆದ ಈ ದುರಂತದಿಂದ ನಾವು ಪಾಠ ಕಲಿತಿದ್ದೇವೆಯೆ? ಇಲ್ಲ.. ಖಂಡಿತವಾಗಿಯೂ ಇಲ್ಲ.
ಇದೇಕೆ ಈಗ ನೆನಪಾಯಿತು ಎಂದರೆ, ನಮ್ಮ ರಾಜ್ಯದಲ್ಲಿ ಜನರ ಬದುಕನ್ನು ದುರ್ಭರಗೊಳಿಸುವ ಹಲವು ಯೋಜನೆಗಳು ಈಗಾಗಲೇ ಚಾಲ್ತಿಯಲ್ಲಿದ್ದು, ಈಗ ಅಂಥ ‘ಪಟ್ಟಿ’ಗೆ ಇನ್ನೊಂದು ಯೋಜನೆ ಯನ್ನು ಸೇರ್ಪಡೆ ಮಾಡಲು ಎಲ್ಲಾ ಸಿದ್ಧತೆಗಳೂ ನಡೆಯುತ್ತಿವೆ. ಆ ಯೋಜನೆಯೇ ವರದಾ-ಬೇಡ್ತಿ-ಆಘನಾಶಿನಿ ನದಿ ಜೋಡಣೆ ಯೋಜನೆ.
ಈಗಾಗಲೇ ಪರಿಸರ ತಜ್ಞರು ಗುರುತಿಸಿರುವಂತೆ ಅಧಿಕಾರಶಾಹಿ-ರಾಜಕಾರಣಿ- ಕಂಟ್ರಾಕ್ಟರ್ ಗಳು ಕೈಜೋಡಿಸಿ, ಹಣ ಗಳಿಸಲು ಪರಿಸರವನ್ನು ಎಷ್ಟು ಬೇಕಾದರೂ ಹಾಳುಗೆಡವಬಲ್ಲರು ಎಂಬ ಹೇಳಿಕೆಗೆ ಪೂರಕವೇನೋ ಎಂಬಂತೆ, ಈ ಹೊಸ ‘ನದಿ ಜೋಡಣೆ’ಯನ್ನು ಜಾರಿಗೆ ತರಲು ಸಿದ್ಧತೆ ಗಳು ನಡೆಯುತ್ತಿವೆ, ವರದಿಗಳು ಸಿದ್ಧವಾಗುತ್ತಿವೆ.
ಇದನ್ನೂ ಓದಿ: Shashidhara Halady Column: ವಿದ್ಯಾರ್ಥಿಯೊಬ್ಬನು ಹೊಳೆಯುವ ಚಾಕು ಹಿಡಿದದ್ದು !
ಇಷ್ಟನ್ನು ಓದುತ್ತಿರುವಂತೆಯೇ, ನಮ್ಮ ನಾಡಿನ ಕೆಲವು ‘ಅಭಿವೃದ್ಧಿಪರ’ ಜನರು ತಕ್ಷಣ ಕೇಳುವು ದುಂಟು- “ಎಲ್ಲಾ ಯೋಜನೆಗಳನ್ನೂ ಏಕೆ ವಿರೋಧಿಸಬೇಕು? ನಮ್ಮಲ್ಲಿನ ಎಲ್ಲರಿಗೂ ಸೌಲಭ್ಯಗಳು ಬೇಡವೆ? ನಾಗರಿಕ ಸೌಲಭ್ಯ ಬೇಕೆಂದರೆ ಕೆಲವು ತ್ಯಾಗ ಮಾಡಲೇಬೇಕು! ಬೆಂಗಳೂರಿಗೆ ಕುಡಿಯುವ ನೀರನ್ನು ತರಬೇಕೆಂದರೆ, ವಿಶಾಲ ರಸ್ತೆ ಬೇಕೆಂದರೆ ‘ಪರಿಸರನಾಶ’ ಎಂದು ನೋಡುತ್ತಾ ಕುಳಿತರೆ ಆಗುವುದಿಲ್ಲ!" ಅಂತ.
ನಿಜ, ಬೆಳೆಯುತ್ತಿರುವ ನಗರಗಳಿಗೆ, ಪಟ್ಟಣಗಳಿಗೆ ನೀರು ಬೇಕು, ಅಲ್ಲಿ ವಾಸಿಸುವ ಜನರಿಗೆ ‘ಕುಡಿಯುವ’ ನೀರು ಬೇಕು. ಅದನ್ನು ಒದಗಿಸುವುದು ಸರಕಾರದ ಕರ್ತವ್ಯವೂ ಹೌದು. ಆದರೆ, ಅದೇ ಸಮಯದಲ್ಲಿ, ಜನರ ಭವಿಷ್ಯದ ಹಿತಾಸಕ್ತಿಯನ್ನು ಕಾಪಾಡುವುದು ಸಹ ಸರಕಾರದ ಕರ್ತವ್ಯ ಎಂಬುದನ್ನು ಈ ‘ಕೆಲವರು’ ಮರೆಯುತ್ತಾರೆ!
ಈಗ, ಅಂದರೆ ಇಪ್ಪತ್ತೊಂದನೆಯ ಶತಮಾನದ ಮೂರನೆಯ ದಶಕದಲ್ಲಿ ವಾಸಿಸುತ್ತಿರುವ ಪ್ರಜ್ಞಾ ವಂತ ಜನರೆಲ್ಲರೂ ಒಂದು ವಿಚಾರವನ್ನು ಗಮನಿಸಬೇಕು, ಇದುವರೆಗೂ ಗಮನಿಸದೇ ಇದ್ದಲ್ಲಿ ಗುರುತಿಸಬೇಕು: ಅದೇನೆಂದರೆ, ‘ಅಭಿವೃದ್ಧಿ ಸಾಧಿಸಲು ಪರಿಸರವನ್ನು ನಾಶಪಡಿಸುವ ಕಾಲ ಮುಗಿದುಹೋಯಿತು.
ಕಾಡು, ಹುಲ್ಲುಗಾವಲು, ಪರ್ವತಗಳನ್ನು ನಾಶಪಡಿಸಿ ಅಭಿವೃದ್ಧಿ ಕಾಮಗಾರಿ ನಡೆಸುವ ಕಾಲ ಇದಲ್ಲ. ನಾವು ಅಷ್ಟು ಸಿರಿವಂತರಲ್ಲ. ಇನ್ನೇನಿದ್ದರೂ, ಜವಾಬ್ದಾರಿಯುತ ಅಭಿವೃದ್ಧಿ ಕೆಲಸ ಗಳನ್ನು ಕೈಗೊಳ್ಳಬೇಕು’. ಕಳೆದ ಶತಮಾನದಲ್ಲಿ, ಡ್ಯಾಮ್, ರಸ್ತೆಗಳ ನಿರ್ಮಾಣಕ್ಕೆ, ಇತರ ಉದ್ದೇಶ ಗಳಿಗೆ ಕಾಡನ್ನು ಕಡಿದುಹಾಕುವುದು ತೀರಾ ಸಾಮಾನ್ಯ ಸಂಗತಿ ಎನಿಸಿತ್ತು (ಉದಾ: ಶರಾವತಿ ಜಲವಿದ್ಯುತ್ ಯೋಜನೆ).
ಬಹುಶಃ, ಆಗ ನಮ್ಮ ದೇಶ ತುಸು ಹಿಂದುಳಿದಿತ್ತು ಮತ್ತು ಅಂಥ ಸಂದರ್ಭದಲ್ಲಿ ಪರಿಸರ ರಕ್ಷಣೆಯು ಕಡಿಮೆ ಆದ್ಯತೆಯ ವಿಷಯವಾಗಿತ್ತು ಎಂದು ತಿಳಿದು, ಪರಿಸರ ನಾಶ ಮಾಡಿ ಅಭಿವೃದ್ಧಿ ಕೆಲಸ ಕೈಗೊಂಡರು. ಅದು ಅಂದಿನ ಅಗತ್ಯ ಎಂದು ಹೇಳಲೂಬಹುದು.
ಆದರೆ, ಈಗ ಕಾಲ ಬದಲಾಗಿದೆ. ನಮ್ಮಲ್ಲಿ ಉಳಿದುಕೊಂಡಿರುವ ಪರಿಸರವು ಬಹಳ ಸೂಕ್ಷ್ಮವಾಗಿದೆ, ಅಮೂಲ್ಯವಾಗಿದೆ. ಇಂದು ಅಭಿವೃದ್ಧಿಗಾಗಿ, ಬೆಂಗಳೂರಿನಂಥ ನಗರಕ್ಕೆ ನೀರು ತರಲು, ರಸ್ತೆ ಅಥವಾ ಮೆಟ್ರೋ ಮಾರ್ಗ ನಿರ್ಮಿಸಲು ಪರಿಸರವನ್ನು ನಾಶಪಡಿಸುವ ಮತ್ತು ಮರಗಳನ್ನು ಕಡಿಯುವಷ್ಟು ಶ್ರೀಮಂತರಾಗಿ ನಾವು ಉಳಿದಿಲ್ಲ. ಈಗ ಉಳಿದಿರುವ ಪರಿಸರವನ್ನು ಪೂರ್ತಿಯಾಗಿ ರಕ್ಷಿಸಿಕೊಂಡು, ಅಭಿವೃದ್ಧಿಯನ್ನು ಸಾಧಿಸುವುದು ಇಂದಿನ ಆದ್ಯತೆಯಾಗಬೇಕು. ಇದನ್ನು ರಾಜಕಾರಣಿಗಳು, ಜನಸಾಮಾನ್ಯರು, ಪ್ರಾಜ್ಞರು ಗುರುತಿಸುವ ಅಗತ್ಯವಿದೆ. ಈ ಬರಹದ ಆರಂಭ ದಲ್ಲಿ, ಮನುಷ್ಯನೇ ನಿರ್ಮಿಸಿದ ಮರುಭೂಮಿಯ ಕುರಿತು ಪ್ರಸ್ತಾಪಿಸಿದೆ.
ಅದೇ, ಅರಾಲ್ (ಅರಾಲ್‌ಕುಮ್) ಮರುಭೂಮಿ. ಆ ಪ್ರದೇಶದಲ್ಲಿ ಅರಾಲ್ ನದಿ, ಅದೇ ಹೆಸರಿನ ಸರೋವರ ಇತ್ತು. ಆಧುನಿಕ ಮನುಷ್ಯನು ತನ್ನ ಜಲದಾಹಕ್ಕಾಗಿ ಕೈಗೊಂಡ ಅಭಿವೃದ್ಧಿ ಕಾಮಗಾರಿ ಯಿಂದಾಗಿ, ಈಗ ಅಲ್ಲಿ ಅದೇ ಹೆಸರಿನ ಮರುಭೂಮಿ ಇದೆ! ಇದು ರಷ್ಯಾ ಮತ್ತು ಅದರ ಸರಹದ್ದಿನ ದೇಶಗಳಲ್ಲಿ ಹರಡಿದೆ.
ಅಲ್ಲಿನವರು ‘ಅಭಿವೃದ್ಧಿ’ಯ ಹೆಸರಿನಲ್ಲಿ ನಿರ್ಮಿಸಿದ ಮರುಭೂಮಿಯ ಉದಾಹರಣೆಯು ನಮ್ಮ ರಾಜ್ಯದವರಿಗೆ ಇಂದು ತುರ್ತು ಪಾಠ ಎನಿಸಬೇಕು. 1960ರ ದಶಕದ ತನಕ ರಷ್ಯಾದಲ್ಲಿ ‘ಅರಾಲ್ ಸಮುದ್ರ’ ಎಂಬ ವಿಶಾಲವಾದ ಸರೋವರವಿತ್ತು. ಸಿಹಿನೀರಿನಿಂದ ತುಂಬಿದ್ದ, ಲಕ್ಷಾಂತರ ಜನರಿಗೆ, ಜೀವಿಗಳಿಗೆ ಆಶ್ರಯ ನೀಡಿದ್ದ, ಎರಡು ಪ್ರಮುಖ ಬಂದರುಗಳನ್ನೂ ಹೊಂದಿದ್ದ ಜಲರಾಶಿ ಯಾಗಿತ್ತು ಈ ‘ಸಮುದ್ರ’.
ಆ ಸರೋವರದಲ್ಲಿ ದೊಡ್ಡ ದೊಡ್ಡ ಹಡಗುಗಳು ಸರಕು ಸಾಗಾಣಿಕೆಯನ್ನು ಮಾಡುತ್ತಿದ್ದವು. ಅದೀಗ ಬರಡುಭೂಮಿ, ಮರುಭೂಮಿಯಾಗಿ ಪರಿವರ್ತನೆಗೊಂಡಿದೆ! ಆ ವಿಶಾಲ ಸರೋವರ ಇದ್ದ ಜಾಗವನ್ನು ಇಂದು ಅರಾಕುಮ್ ಮರುಭೂಮಿ ಎಂದು ಕರೆಯುತ್ತಿದ್ದಾರೆ! ಜಗತ್ತಿನ ಅತಿ ದೊಡ್ಡ ಪ್ರಾಕೃತಿಕ ದುರಂತಗಳಲ್ಲಿ (ಮಾನವ ನಿರ್ಮಿತ) ಇದು ಒಂದು ಎಂಬ ಕುಖ್ಯಾತಿ ಗಳಿಸಿದೆ.
1960ರಲ್ಲಿ ಅರಾಲ್ ಸಮುದ್ರವು ಸುಮಾರು 435 ಕಿ.ಮೀ. ಉದ್ದವಿತ್ತು, 290 ಕಿ.ಮೀ. ಅಗಲವಿತ್ತು. ರಷ್ಯಾದ ಕಜಕಿಸ್ತಾನ ಮತ್ತು ಉಜ್‌ಬೆಕಿಸ್ತಾನ ಪ್ರಾಂತ್ಯಗಳ ನಡುವೆ ಸುಮಾರು 68000 ಚದರ ಕಿ.ಮೀ. ವಿಸ್ತಾರಕ್ಕೆ ವ್ಯಾಪಿಸಿಕೊಂಡಿತ್ತು. 1970ರ ದಶಕದಲ್ಲಿ ಅದು ಜಗತ್ತಿನ ನಾಲ್ಕನೆಯ ಅತಿ ದೊಡ್ಡ ಸರೋವರ! ಎರಡು ನದಿಗಳು ಅರಾಲ್ ಸರೋವರಕ್ಕೆ ನೀರುಣಿಸುತ್ತಿದ್ದವು. ಆ ಸರೋವರದ ಸುತ್ತಲೂ ಹಳ್ಳಿಗಳಿದ್ದವು, ಊರುಗಳಿದ್ದವು, ಬಂದರುಗಳಿದ್ದವು,
ಪುರಾತನ ಕಾಲದ ಒಂದು ಸಂಸ್ಕೃತಿ ಇತ್ತು. ಸರೋವರವನ್ನು ಆಶ್ರಯಿಸಿ ವಿವಿಧ ಪ್ರಾಣಿ-ಪಕ್ಷಿ ಗಳಿದ್ದವು, 22 ಪ್ರಭೇದದ ಮೀನುಗಳಿದ್ದವು. ಅವುಗಳಲ್ಲಿ ನಾಲ್ಕು ಪ್ರಭೇದದ ಮೀನುಗಳು, ಕೇವಲ ಅರಾಲ್ ಸರೋವರದಲ್ಲಿ ಮಾತ್ರ ಕಾಣ ಸಿಗುತ್ತಿದ್ದವು.
ಆ ವಿಶಾಲ ಸರೋವರವಿದ್ದ ಜಾಗದಲ್ಲಿ ಇಂದು ವಿಶಾಲ ಮರುಭೂಮಿ ಇದೆ. ಹಿಂದೆ ಇದ್ದ ನದಿ ಮತ್ತು ಸರೋವರದ ಅವಶೇಷ ಎನ್ನಬಹುದಾದ ಜಾಗಗಳು ಈಗ ಇವೆ. ಆ ಸರೋವರಕ್ಕೆ ವಿಶಿಷ್ಟ ಎನಿಸಿದ್ದ ನಾಲ್ಕು ಪ್ರಭೇದದ ಮೀನುಗಳು ಈ ಭೂಮಿಯಿಂದಲೇ ಕಣ್ಮರೆಯಾಗಿವೆ.ಈ ಮಾನವ ನಿರ್ಮಿತ ಪ್ರಾಕೃತಿಕ ದುರಂತಕ್ಕೆ ಮುಖ್ಯ ಕಾರಣವೆಂದರೆ ಅಭಿವೃದ್ಧಿಯ ಹೆಸರಿನಲ್ಲಿ ಕೈಗೊಂಡ ವಿವೇಚನಾರಹಿತ ನೀರಾವರಿ ಯೋಜನೆಗಳು!
ಹಿಂದೆ ಅಲ್ಲಿದ್ದ ಸೋವಿಯತ್ ಸರಕಾರವು ಅಲ್ಲಿದ್ದ ಎರಡು ನದಿಗಳಿಗೆ ಸಾಲು ಸಾಲು ಅಣೆಕಟ್ಟು ಗಳನ್ನು ಕಟ್ಟಿಸಿತು. 30ಕ್ಕೂ ಹೆಚ್ಚು ಅಣೆಕಟ್ಟುಗಳನ್ನು, ಒಡ್ಡುಗಳನ್ನು ಕಟ್ಟಲಾಯಿತು. ಅಲ್ಲಿನ ನದಿಯನ್ನು ‘ನದಿ ತಿರುವು’ ಯೋಜನೆಗೆ ಯಶಸ್ವಿಯಾಗಿ ಒಳಪಡಿಸಲಾಯಿತು. ಅದರ ನೀರನ್ನು ಬಳಸಿ ಹತ್ತಿ ಬೆಳೆದರು. ಅಂದು ‘ಬಿಳಿ ಚಿನ್ನ’ ಎಂದು ಕರೆಯಲ್ಪಟ್ಟ ಹತ್ತಿಯನ್ನು ಬೆಳೆದು, ರಫ್ತು ಮಾಡಿ, ಅಭಿವೃದ್ಧಿ ಸಾಧಿಸುವ ಯೋಜನೆಗೆ ಜಾರಿಗೆ ಬಂತು.
ಇದಕ್ಕಾಗಿ ಅಂದು ರಷ್ಯಾದ ಭಾಗವಾಗಿದ್ದ ಕಜಕಿಸ್ತಾನ ಮತ್ತು ಉಜ್‌ಬೆಕಿಸ್ತಾನದ ವಿಶಾಲ ಬಯಲು ಗಳ ಉಪಯೋಗವಾಯಿತು. ಕಣ್ಣು ಹಾಯಿಸಿದಷ್ಟು ದೂರದವರೆಗೆ ಹತ್ತಿ ಹೊಲಗಳು ತಲೆಯೆ ತ್ತಿದವು. 1988ರಲ್ಲಿ ಉಜ್ಬೆಕಿಸ್ತಾನ್ ಜಗತ್ತಿನಲ್ಲೇ ಅತಿ ಹೆಚ್ಚು ಹತ್ತಿ ರಫ್ತು ಮಾಡುವ ಪ್ರಾಂತ್ಯ ಎಂಬ ಹೆಸರು ಗಳಿಸಿತು.
ಆಘಾತಕಾರಿ ವಿಚಾರವೆಂದರೆ, ಅರಾಲ್ ಸಮುದ್ರಕ್ಕೆ ನೀರನ್ನು ಒದಗಿಸುತ್ತಿದ್ದ ಆ ಎರಡು ನದಿಗಳ ನೀರನ್ನು ಈ ರೀತಿ ಹತ್ತಿ ಬೆಳೆಯಲು ಉಪಯೋಗಿಸಿದರೆ, ಅರಾಲ್ ಸಮುದ್ರವು ಕ್ರಮೇಣ ಒಣಗಿ ಹೋಗುತ್ತದೆ ಎಂಬ ವಿಚಾರವು ಅಲ್ಲಿನ ಸರಕಾರದ ಇಲಾಖೆಗಳಿಗೆ, ಅಧಿಕಾರಿಗಳಿಗೆ, ಎಂಜಿನಿಯರು ಗಳಿಗೆ ಗೊತ್ತಿತ್ತು. ಇದರಿಂದಾಗಿ ಅರಾಲ್ ಸಮುದ್ರ ಬರಡಾಗುತ್ತದೆ ಎಂಬ ವಿಚಾರವನ್ನು ಸರಕಾರದ ಇಲಾಖೆಗಳು ಚರ್ಚಿಸಿಯೂ ಇದ್ದವು!
ಆದರೆ, ಅರಾಲ್ ಸಮುದ್ರದ ಉಳಿವಿಗಿಂತಲೂ, ಹಣದ ಬೆಳೆ ಎನಿಸಿದ ಹತ್ತಿ ತರುತ್ತಿದ್ದ ಆದಾಯಕ್ಕೆ ಹೆಚ್ಚಿನ ಮಹತ್ವ ನೀಡಲಾಯಿತು. 1960ರಲ್ಲಿ ವಿಶಾಲ ಸರೋವರ, ಆದರೆ 1990ರ ಸಮಯಕ್ಕೆ ಅರಾಲ್ ಸರೋವರದ ಶೇ.40ರಷ್ಟು ಭಾಗ ಒಣಗಿಹೋಗಿತ್ತು. ಅಲ್ಲಿದ್ದ ಬಂದರುಗಳಲ್ಲಿ ನಿಂತಿದ್ದ ಮಧ್ಯಮ ಗಾತ್ರದ ಹಡಗುಗಳು, ಅಲ್ಲೇ ಮರಳಿನ ಮೇಲೆ ಬಂಧಿಯಾದವು.
ಜತೆಗೆ, ಪ್ರತಿವರ್ಷ ನೀರಿನ ಮಟ್ಟ ಒಂದೇ ಸಮನೆ ಕಡಿಮೆಯಾಗುತ್ತಲೇ ಹೋಗುತ್ತಿತ್ತು! 2010ರ ವೇಳೆಗೆ ಅರಾಲ್ ಸಮುದ್ರವು ಶೇ.90ರಷ್ಟು ಒಣಗಿ ಹೋಗಿತ್ತು. ಸರೋವರವು ಇಬ್ಭಾಗವಾಗಿ, ಉತ್ತರ ಅರಾಲ್ ಮತ್ತು ದಕ್ಷಿಣ ಅರಾಲ್ ಎಂಬ ಎರಡು ಪುಟ್ಟ ಸರೋವರಗಳು ರೂಪುಗೊಂಡವು!
ಜಗತ್ತಿನ ನಾಲ್ಕನೆಯ ಅತಿದೊಡ್ಡ ಸರೋವರ ಎಂಬ ಖ್ಯಾತಿಯು, ಮರುಭೂಮಿಯಲ್ಲಿ ಹುದುಗಿ ಹೋಯಿತು. ಆ ಸರೋವರದ ಸುತ್ತಲೂ ಇದ್ದ ಹಳ್ಳಿಗಳ ಜನರು ಕಂಗೆಟ್ಟರು, ಹಾರುವ ಧೂಳಿ ನಿಂದಾಗಿ ಶ್ವಾಸಕೋಶ ಕಾಯಿಲೆಗಳಿಗೆ ಒಳಗಾದರು. 2000ರ ನಂತರ ಈ ಸರೋವರವನ್ನು ಪುನರು ಜ್ಜೀವನಗೊಳಿಸುವ ಕುರಿತು ಸ್ವಲ್ಪ ಕೆಲಸ ನಡೆಯಿತು.
ಕಜಕಿಸ್ತಾನ ಮತ್ತು ಉಜ್‌ಬೆಕಿಸ್ತಾನ ಮತ್ತು ಸುತ್ತಲಿನ ಇತರ ಮೂರು ದೇಶಗಳು ಸೂಕ್ತ ಕ್ರಮ ಕೈಗೊಂಡು, ಅರಾಲ್ ಸಮುದ್ರಕ್ಕೆ ಮತ್ತೆ ಜೀವ ತುಂಬಬೇಕು ಎಂಬ ಒತ್ತಡಕ್ಕೆ ಸಿಲುಕಿ, ಒಪ್ಪಂದಕ್ಕೆ ಬಂದವು. 2000ರಲ್ಲಿ ಯುನೆಸ್ಕೋ, 2004ರಲ್ಲಿ ವಿಶ್ವಬ್ಯಾಂಕ್ ಈ ಜಲಮೂಲವನ್ನು ಪುನರುಜ್ಜೀವನ ಗೊಳಿಸಲು ಕಾರ್ಯಸೂಚಿಗಳನ್ನು ಹಾಕಿಕೊಂಡು, ಸ್ವಲ್ಪ ಕೆಲಸವೂ ನಡೆದಿದೆ.
ಆದರೆ ಈಗಲೂ ವಿಶಾಲ ಪ್ರದೇಶದಲ್ಲಿ ಹತ್ತಿ ಬೆಳೆದು ರಫ್ತು ಮಾಡುತ್ತಿರುವ ಉಜ್‌ಬೆಕಿಸ್ತಾನವು ಇದರಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ.
ಆ ವಿಶಾಲ ಮರುಭೂಮಿ ಸೃಷ್ಟಿಸಿದ ಮಾನವನ ದುಸ್ಸಾಹಸವನ್ನು ನಮ್ಮ ರಾಜ್ಯದವರು ನೆನಪಿಸಿ ಕೊಳ್ಳುವ ಕಾಲ ಇದಾಗಿದೆ. “ವ್ಯರ್ಥವಾಗಿ ಪಶ್ಚಿಮದತ್ತ ಹರಿದು ಹೋಗಿ, ಸಮುದ್ರ ಸೇರುತ್ತಿರುವ ನೀರನ್ನು ಪೂರ್ವಕ್ಕೆ ತಿರುಗಿಸಿ, ದೂರದ ಬೆಂಗಳೂರು, ತುಮಕೂರು, ಕೋಲಾರ ಮತ್ತು ಇತರ ಪ್ರದೇಶಗಳಿಗೆ ನೀರನ್ನುಒದಗಿಸುವುದು"- ಇಂಥ ಅರ್ಥ ಬರುವ ಹೇಳಿಕೆಯನ್ನು ನಮ್ಮ ರಾಜ್ಯದಲ್ಲಿ ಹಲವರು ಆಗಾಗ ಹೇಳುತ್ತಿರುತ್ತಾರೆ. ಅವರಲ್ಲಿ ಕೆಲವು ಅಭಿಯಂತರರೂ ಸೇರಿದ್ದಾರೆ, ರಾಜಕೀಯ ದವರೂ ಇದ್ದಾರೆ. ಈ ಹೇಳಿಕೆಯು ಅದೆಷ್ಟು ಬಾಲಿಶ, ಅಪ್ರಬುದ್ಧ, ಸ್ವಾರ್ಥ ಲಾಲಸೆಯಿಂದ ಕೂಡಿದೆ ಎಂಬುದನ್ನು, ಮುಂದಿನ ದಶಕದಲ್ಲಿ ನಮ್ಮ ಜನರೇ ಗುರುತಿಸುತ್ತಾರೆ.
ಏಕೆಂದರೆ, ‘ವ್ಯರ್ಥವಾಗಿ ಹರಿದು ಸಮುದ್ರ ಸೇರುವ ನೀರು’ ಎಂಬ ಪರಿಕಲ್ಪನೆಯೇ ಸರಿಯಲ್ಲ ಎಂದು ಹಲವು ಪರಿಸರ ತಜ್ಞರು ಆಧಾರಸಹಿತ ಹೇಳಿದ್ದಾರೆ. ಜತೆಗೆ, ಪಶ್ಚಿಮದತ್ತ ಹರಿಯುವ ನದಿ ಗಳನ್ನು ಆಶ್ರಯಿಸಿದ ಊರುಗಳಿಗೆ ಮುಂದೆ ನೀರು ದೊರಕದೇ ಇರುವ ಅಪಾಯವೂ ಈ ಯೋಜನೆ ಯಿಂದ ಇದೆ.
ಜತೆಗೆ, ಇಂಥ ಯೋಜನೆಗಳಿಂದ ಅರಣ್ಯ ನಾಶವಾದಾಗ, ಅದು ಆ ಅರಣ್ಯ ಇದ್ದ ಪ್ರದೇಶದ ಅವನತಿ ಮಾತ್ರವಲ್ಲ, ಆ ಅರಣ್ಯದ ಸುತ್ತಲೂ ಸುಮಾರು 50 ರಿಂದ 100 ಕಿ.ಮೀ. ದೂರದ ಕೃಷಿಭೂಮಿಯ ಅವನತಿಯೂ ಹೌದು. ಉದಾಹರಣೆಗೆ, ಶಿರಸಿ, ಯಲ್ಲಾಪುರದ ಕಾಡುಗಳಿಂದಾಗಿ, ಇಂದು ದೂರದ ಹಾವೇರಿ, ಧಾರವಾಡದ ಕೃಷಿಕರಿಗೆ ಅಗತ್ಯವಿರುವ ಮಳೆಯಾಗುತ್ತದೆ!
ಆ ಕಾಡು ನಾಶವಾದರೆ, ದೂರದೂರಿನ ಕೃಷಿಕರೂ ಅಪಾರ ಸಂಕಟ ಅನುಭವಿಸಲೇಬೇಕಾದೀತು. ಆದ್ದರಿಂದ, ‘ಪಶ್ಚಿಮದತ್ತ ಹರಿಯುವ ನೀರು ವ್ಯರ್ಥ, ಪಶ್ಚಿಮ ಘಟ್ಟಗಳ ಕಾಡಿನ ಸ್ವಲ್ಪ ಭಾಗ ನಾಶ ಮಾಡಿ, ಕಾಮಗಾರಿ ಕೈಗೊಂಡರೆ ಹೆಚ್ಚಿನ ನಷ್ಟವಾಗುವುದಿಲ್ಲ’ ಎಂಬರ್ಥ ಬರುವ ಸಮಜಾಯಿಷಿ ಗಳು, ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಅರ್ಥವಿಲ್ಲದ ಸಮಜಾಯಿಷಿ ಎಂದೇ ಹೇಳಬೇಕಾಗು ತ್ತದೆ.
ಈಗಾಗಲೇ, ದಟ್ಟ ಅರಣ್ಯವಿರುವ ಪ್ರದೇಶದಲ್ಲಿ ಎತ್ತಿನ ಹೊಳೆ ಯೋಜನೆಯನ್ನು ಕೈಗೊಂಡು, ಸಾಕಷ್ಟು ಕಾಡನ್ನು ನಾಶಪಡಿಸಲಾಗಿದೆ. ಬೇಡ್ತಿ-ವರದಾ ನದಿ ಜೋಡಣೆಯ ಹೆಸರಿನಲ್ಲಿ ಇನ್ನಷ್ಟು ಕಾಡನ್ನು ನಾಶಪಡಿಸಿದರೆ, ಮುಂದಿನ ದಶಕಗಳಲ್ಲಿ ನಮ್ಮ ರಾಜ್ಯದಲ್ಲಿ ಇನ್ನಷ್ಟು ಬಿಕ್ಕಟ್ಟು ಎದುರಾದೀತು.
ಇದರ ಜತೆಯಲ್ಲೇ, ಬೇರೆ ಬೇರೆ ಪ್ರದೇಶಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ಕಾಡು ಪ್ರದೇಶಗಳನ್ನು, ಹುಲ್ಲುಗಾವಲುಗಳನ್ನು, ಬೆಟ್ಟ ಪ್ರದೇಶಗಳನ್ನು ನಿರಂತರವಾಗಿ ನಾಶಪಡಿಸಲಾಗುತ್ತಿದೆ. ಇದು ಸಲ್ಲದು. ನಮ್ಮ ರಾಜ್ಯದ ಅಭಿವೃದ್ಧಿಗಾಗಿ, ಪರಿಸರವನ್ನು ನಾಶಪಡಿಸುವ ಕಾಲ ಹೊರಟು ಹೋಯಿತು. ಈಗ ಏನೇ ಅಭಿವೃದ್ಧಿ ನಡೆಸಬೇಕಾದರೂ, ಇರುವ ಪರಿಸರವನ್ನು ರಕ್ಷಿಸಿಕೊಂಡೇ ಯೋಜನೆಗಳನ್ನು ತಯಾರಿಸಬೇಕು.
ಇದರಿಂದ, ಯೋಜನೆಗಳನ್ನು ಅನುಷ್ಠಾನಗೊಳಿಸಲು, ಹೆಚ್ಚು ಹಣ ಬೇಕಾದೀತು, ನಿಜ; ಆದರೆ, ಪರಿಸರವನ್ನು ನಾಶಪಡಿಸಿ, ಕಾಮಗಾರಿಗಳನ್ನು ಕೈಗೊಳ್ಳುವ ಕಾಲ ಇದಲ್ಲ. ಇಂಥ ಪ್ರಮುಖ ವಿಚಾರವನ್ನು ನಮ್ಮ ಪ್ರಭುತ್ವ ಮತ್ತು ಪ್ರಾಜ್ಞರು ಅರಿತುಕೊಳ್ಳಬೇಕಾದ ತುರ್ತು ಅಗತ್ಯ ಇಂದಿನದಾಗಿದೆ.