ಒಳನೋಟ
ಗಣೇಶ್ ಭಟ್
ಇತ್ತೀಚೆಗೆ ಭಾರತ ಸರಕಾರವು ಲೋಕಸಭೆಯಲ್ಲಿ ವಿದೇಶಿ ದೇಣಿಗೆ ನಿಯಂತ್ರಣ ಕಾನೂನು (ಎಫ್ಸಿಆರ್‌ಎ) ಅನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಮಂಡಿಸಿತ್ತು. ಎಫ್ʼಸಿಆರ್‌ಎ ಅಡಿಯಲ್ಲಿ ವಿದೇಶಿ ದೇಣಿಗೆಯನ್ನು ಪಡೆದಿರುವ ಹಾಗೂ ಪಡೆಯುತ್ತಿರುವ ಸಂಸ್ಥೆಗಳು ಹಾಗೂ ಸರಕಾರೇತರ ಸಂಘಟನೆಗಳು(ಎನ್‌ಜಿಓ) ತಮ್ಮ ಎಫ್ʼಸಿಆರ್‌ಎ ನೋಂದಣಿಯನ್ನು ಹಿಂದಿರುಗಿ ಸಲು ಬಯಸಿದರೆ, ನೋಂದಣಿ ರದ್ದಾದರೆ ಅಥವಾ ನೋಂದಣಿಯ ಅವಧಿ ಮೀರಿದ ಸಂದರ್ಭ ಗಳಲ್ಲಿ ಆ ಸಂಸ್ಥೆಯು ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ವಿದೇಶಿ ದೇಣಿಗೆಯ ಸಹಾಯದಿಂದ ನಿರ್ಮಿಸಿಕೊಂಡ ಸ್ವತ್ತುಗಳು ಅಥವಾ ಸ್ಥಿರಾಸ್ಥಿಗಳನ್ನು ನಿರ್ವಹಿಸುವಲ್ಲಿದ್ದ ಕಾನೂನು ಅಡ್ಡಿ ಗಳನ್ನು ನಿವಾರಿಸಲು ಈ ತಿದ್ದುಪಡಿಯನ್ನು ಮಾಡಲಾಗಿದೆ ಎಂದು ಸರಕಾರವು ಹೇಳಿದೆ. ಆದರೆ, ಈ ಕಾನೂನು ಸರಕಾರೇತರ ಸಂಘಟನೆಗಳ ಸ್ವತ್ತುಗಳನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಸರಕಾರವು ಮಾಡಿದ ಅತೀ ಕ್ರೂರ ಕಾನೂನಾಗಿದೆ ಎಂದು ಸಂಘಟನೆಗಳು, ಎನ್‌ಜಿಓಗಳು ಹಾಗೂ ಚರ್ಚ್‌ಗಳು ಆಪಾದಿಸಿವೆ.
ಕೇರಳದ ಚರ್ಚ್‌ಗಳು ಈ ತಿದ್ದುಪಡಿಯು ‘ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ಬೆದರಿಕೆಯಾಗಿದೆ’ ಎಂದು ಹೇಳಿವೆ. ಕೇರಳ ಕ್ಯಾಥೋಲಿಕ್ ಬಿಷ ಕೌನ್ಸಿಲ್ ಈ ಉದ್ದೇಶಿತ ಕಾನೂನು; ಅಲ್ಪಸಂಖ್ಯಾತ ಸಂಸ್ಥೆ ಗಳು ನಡೆಸುತ್ತಿರುವ ಸೇವಾ ಚಟುವಟಿಕೆಗಳನ್ನು, ಹಾಳು ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದೆ.
ಉದ್ದೇಶಿತ ಕಾನೂನು ದತ್ತಿ ಹಾಗೂ ಧಾರ್ಮಿಕ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಹೇಳಿದೆ. ರಾಷ್ಟ್ರೀಯ ಭದ್ರತೆಯ ನೆಪದಲ್ಲಿ ಜಾರಿಗೊಳಿಸಲಾಗುತ್ತಿರುವ ಈ ತಿದ್ದುಪಡಿಯು ಸಮಾಜಸೇವಾ ಸಂಸ್ಥೆಗಳನ್ನು ಹತ್ತಿಕ್ಕುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯ ಭಾರತೀಯ ಮುಖ್ಯಸ್ಥ ಅಕಾರ್ ಅಹಮ್ಮದ್ ಪಟೇಲ್ ಹೇಳಿದ್ದಾರೆ.
ಎಲ್ಲ ವಿರೋಧ ಪಕ್ಷಗಳು ಈ ತಿದ್ದುಪಡಿಯನ್ನು ವಿರೋಧಿಸಿವೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ತಿದ್ದುಪಡಿಯು ಆರ್‌ಎಸ್‌ಎಸ್‌ಗೆ ಅನುಕೂಲ ಮಾಡಿಕೊಡುವ ಉದ್ದೇಶ ದೊಂದಿಗೆ ರೂಪಿತವಾಗಿದೆ ಎಂದು ದೂರಿದ್ದಾರೆ. ಎಫ್ʼಸಿಆರ್‌ಎಯ ಉದ್ದೇಶಿತ ತಿದ್ದುಪಡಿಯ ಪ್ರಕಾರ ಚರ್ಚ್ʼಗಳು ಅಥವಾ ಸರಕಾರೇತರ ಸಂಘಟನೆಗಳು ಎಫ್ʼಸಿಆರ್‌ಎಯ ಅಡಿಯಲ್ಲಿ ವಿದೇಶಿ ಆರ್ಥಿಕ ನೆರವನ್ನು ಪಡೆಯುತ್ತಿದ್ದು, ಆ ಸಂಸ್ಥೆಗಳು ಎಫ್ʼಸಿಆರ್‌ಎ ನೋಂದಣಿಯ ಪರವಾನಗಿ ಯನ್ನು ಸಕಾಲದಲ್ಲಿ ನವೀಕರಿಸುವಲ್ಲಿ ವಿಫಲವಾದರೆ, ಎಫ್ʼಸಿಆರ್‌ಎ ಕಾನೂನಿನ ಉಲ್ಲಂಘನೆ ನಡೆಸಿ ಎಫ್ʼಸಿಆರ್‌ಎ ಲೈಸೆನ್ಸ್ ರದ್ದಾದರೆ ಅಥವಾ ಅಮಾನತುಗೊಳಿಸಲ್ಪಟ್ಟರೆ ಹೊಸದಾಗಿ ರೂಪುಗೊಳ್ಳಲ್ಪಡುವ ಸರಕಾರಿ ಇಲಾಖೆಯು ಅಂತಹ ಸಂಘಟನೆಗಳ ಕಟ್ಟಡ ಹಾಗೂ ಉಪಕರಣ ಗಳನ್ನು ತನ್ನ ವಶಕ್ಕೆ ಪಡೆದುಕೊಳ್ಳಲಿದೆ.
ಎನ್‌ಜಿಓಗಳು ಎಫ್ʼಸಿಆರ್‌ಎ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಈ ಮೊದಲು ಸಂಸ್ಥೆಗಳ ನಿರ್ದೇಶಕರನ್ನು ಮಾತ್ರ ಬಾಧ್ಯಸ್ಥರನ್ನಾಗಿ ಮಾಡಲಾಗುತ್ತಿತ್ತು. ಹೊಸ ನಿಯಮದ ಪ್ರಕಾರ ಉಲ್ಲಂಘಿಸಿದ ಸಂಸ್ಥೆಗಳ ನಿರ್ದೇಶಕರು ಮಾತ್ರವಲ್ಲದೆ, ಅವುಗಳ ಪಾಲುದಾರರು, ಟ್ರಸ್ಟಿಗಳು, ಆಡಳಿತ ಮಂಡಳಿಗಳ ಸದಸ್ಯರು ಕೂಡಾ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ: Ganesh Bhat Column: ಭಾರತವು ರಕ್ಷಣಾ ಕ್ಷೇತ್ರದಲ್ಲಿ ಏಕೆ ಸ್ವಾವಲಂಬಿಯಾಗಬೇಕು ?
ಬದಲಾದ ಕಾನೂನಿನ ಅನ್ವಯ ವಿದೇಶಿ ದೇಣಿಗೆಯನ್ನು ಸಂಸ್ಥೆಗಳು ನಿಗದಿ ಪಡಿಸಿದ ಕಾಲಮಿತಿ ಯೊಳಗೆ ಉಪಯೋಗಿಸಬೇಕು. ಎಫ್ʼಸಿಆರ್‌ಎ ಸಂಬಂಧಿತ ಅಪರಾಧಗಳ ತನಿಖೆಯನ್ನು ತನಿಖೆ ಮಾಡಲು ರಾಜ್ಯಗಳ ತನಿಖಾ ಸಂಸ್ಥೆಗಳು ಇಚ್ಛಿಸಿದರೆ ಅವುಗಳು ಕೇಂದ್ರ ತನಿಖಾ ಸಂಸ್ಥೆಗಳ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕು. ಬದಲಾದ ಕಾನೂನಿನ ಪ್ರಕಾರ ಎಫ್ʼಸಿಆರ್‌ಎ ಅಪರಾಧ ವೆಸಗಿದವರ ಜೈಲು ಶಿಕ್ಷೆಯ ಅವಧಿಯನ್ನು 5 ವರ್ಷಗಳಿಂದ ಒಂದು ವರ್ಷಕ್ಕೆ ಇಳಿಸ ಲಾಗಿದೆ.
ಬದಲಾಗುತ್ತಿರುವ ಕಾನೂನಿನ ಅನ್ವಯ ಸಂಸ್ಥೆಯೊಂದು ವಿದೇಶಿ ದೇಣಿಗೆಯು ಸಾಕು ಎಂದು ನಿರ್ಧರಿಸಿ ಪರವಾನಗಿಯನ್ನು ನವೀಕರಿಸದೆ ಇದ್ದರೆ ಅಥವಾ ಪರವಾನಗಿಯನ್ನು ಹಿಂತಿರುಗಿಸಿ ದರೂ ವಿದೇಶಿ ದೇಣಿಗೆಯ ಸಹಕಾರದಿಂದ ನಿರ್ಮಿಸಿದ ಸ್ಥಿರ ಹಾಗೂ ಚರಾಸ್ಥಿಗಳೆಲ್ಲವನ್ನೂ ಸರಕಾರಕ್ಕೆ ಬಿಟ್ಟುಕೊಡಬೇಕಾಗುತ್ತದೆ. ಈ ವಿಷಯವು ಎನ್‌ಜಿಓಗಳನ್ನು ಚಿಂತೆಗೆ ದೂಡಿದೆ. ಆದರೆ, ಎಫ್ʼಸಿಆರ್‌ಎ ಲೈಸೆನ್ಸ್ ಅನ್ನು ಊರ್ಜಿತವಾಗಿ ಇಟ್ಟುಕೊಳ್ಳುವುದು ಅಸಾಧ್ಯವಾದ ವಿಷಯವೇನೂ ಅಲ್ಲ.
ಸಂಸ್ಥೆಯು ಪ್ರತಿ ವರ್ಷ ಕೇಂದ್ರದ ಗೃಹ ಮಂತ್ರಾಲಯಕ್ಕೆ ಎಫ್ʼಸಿ-4 ನಮೂನೆಯಲ್ಲಿ ವಾರ್ಷಿಕ ಆರ್ಥಿಕ ವರದಿಯನ್ನು ಸಲ್ಲಿಸಬೇಕು. ಈ ಕೆಲಸವನ್ನು ಪ್ರತಿ ವರ್ಷ ಡಿಸೆಂಬರ್ 31ರ ಒಳಗಾಗಿ ಪೂರೈಸಬೇಕು. ಸಂಸ್ಥೆಯು ತಾನು ಪಡೆದುಕೊಂಡ ವಿದೇಶಿ ದೇಣಿಗೆಯ ವಿವರ ಹಾಗೂ ಅದನ್ನು ಹೇಗೆ ಮತ್ತು ಎಷ್ಟು ಪ್ರಮಾಣದಲ್ಲಿ ಸದುಪಯೋಗ ಪಡಿಸಿಕೊಳ್ಳಲಾಗಿದೆ ಎಂಬ ವಿವರಗಳನ್ನು ಈ ವರದಿಯಲ್ಲಿ ತಿಳಿಸಬೇಕು. ಒಂದು ವರ್ಷ ವಿದೇಶಿ ದೇಣಿಗೆಯನ್ನು ಪಡೆದುಕೊಳ್ಳದೇ ಇದ್ದರೂ ಆ ವರ್ಷ ‘ನಿಲ’ ಎಂದು ನಮೂದಿಸಿ ಎಫ್ʼಸಿ-4 ಅನ್ನು ಸಲ್ಲಿಸಬೇಕು.
ಎಫ್ʼಸಿ-4 ವರದಿಯು ಚಾರ್ಟರ್ಡ್ ಅಕೌಂಟೆಂಟಿನಿಂದ ಪ್ರಮಾಣೀಕೃತಗೊಂಡಿರಬೇಕು. ಬ್ಯಾಂಕ್ ಸ್ಟೇಮೆಂಟ್, ತ್ರೈಮಾಸಿಕ ವರದಿಯನ್ನು(ಎಫ್ʼಸಿ-1) ತನ್ನ ವೆಬ್ಸೈಟ್‌ನಲ್ಲಿ ಪ್ರಕಟಿಸಬೇಕು. ಇದೇನೂ ಅಸಾಧ್ಯವಾದ ಕೆಲಸವೇನಲ್ಲ. ಹೀಗಾಗಿ ತಿದ್ದುಪಡಿಯಿಂದಾಗಿ ಎಫ್ʼಸಿಆರ್‌ಎ ಲೈಸೆನ್ಸ್‌ನ ಮರು ನವೀಕರಣ ಬಹಳ ಕಠಿಣವಾಗಲಿದೆ ಎನ್ನುವ ವಾದದಲ್ಲಿ ಹುರುಳಿಲ್ಲ.
ಸಮಸ್ಯೆ ಇರುವುದು ಎಫ್ʼಸಿಆರ್‌ಎ ನಿಯಮಗಳನ್ನು ಮೀರಿ ವಿದೇಶಿ ದೇಣಿಗೆಯನ್ನು ದುರುಪಯೋಗಪಡಿಸಿಕೊಳ್ಳುವ ಎನ್ʼಜಿಓಗಳಿಗೆ ಮಾತ್ರ. 2015ರಿಂದ ಈ ವರೆಗೆ ಸುಮಾರು 22,407 ಸಾವಿರ ಸರಕಾರೇತರ ಸಂಘಟನೆಗಳು ಎಫ್ʼಸಿಆರ್‌ಎಯನ್ನು ಉಲ್ಲಂಘಿಸಿ ತಮ್ಮ ವಿದೇಶಿ ದೇಣಿಗೆ ಪಡೆಯುವ ಪರವಾನಗಿಯನ್ನು ಕಳೆದುಕೊಂಡಿವೆ.
15,081 ಸಂಘಟನೆಗಳ ಎಫ್ʼಸಿಆರ್‌ಎ ಲೈಸೆನ್ಸ್ʼಗಳ ಅವಧಿ ಮುಗಿದಿದೆ. ಕೆಲವು ಸಂಘಟನೆಗಳು ವಿದೇಶಿ ದೇಣಿಗೆಯನ್ನು ದೇಶ ವಿರೋಧಿ ಚಟುವಟಿಕೆಗಳಿಗೆ, ಧರ್ಮ ಪ್ರಚಾರಕ - ಮತಾಂತರಗಳಿಗೆ ಬಳಸಿಕೊಂಡಿರುವ ಕಾರಣಗಳಿಂದ ಪರವಾನಗಿ ಕಳೆದುಕೊಂಡಿವೆ. ಪ್ರಸ್ತುತ ದೇಶದಲ್ಲಿ 14,539 ಸಂಸ್ಥೆಗಳು ಮಾತ್ರ ಎಫ್ʼಸಿಆರ್‌ಎ ಲೈಸೆನ್ಸ್ʼಗಳನ್ನು ಉಳಿಸಿಕೊಂಡಿವೆ.
ವಾಲಂಟರಿ ಹೆಲ್ತ್ ಅಸೋಸಿಯೇಷನ್ ಆಫ್ ಇಂಡಿಯಾ , ಇಂಡೋ ಗ್ಲೋಬಲ್ ಸೋಶಿಯಲ್ ಸರ್ವೀಸ್ ಸೊಸೈಟಿ, ಚರ್ಚಸ್ ಆಕ್ಸಿಲಿಯರಿ ಫಾರ್ ಸೋಶಿಯಲ್ ಆಕ್ಷನ್(ಕಾಸಾ), ಇವ್ಯಾಂಜೆಲಿಕಲ್ ಫೆಲೋಶಿಪ್ ಆಫ್ ಇಂಡಿಯಾ, ಆಕ್ಸ್ ಫಾಮ್ ಇಂಡಿಯಾ, ವರ್ಲ್ಡ್ ವಿಷನ್ ಇಂಡಿಯಾ, ಸೆಂಟರ್ ಫಾರ್ ಪಾಲಿಸಿ ರಿಸರ್ಚ್, ರಾಜೀವ್ ಗಾಂಧಿ ಫೌಂಡೇಶನ್, ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್, ಸಿಎನ್‌ಐ ಸಿನೋಡಿಕಲ್ ಬೋರ್ಡ್ ಆಫ್ ಸೋಶಿಯಲ್ ಸರ್ವೀಸ್ ಮೊದಲಾದ ಸಂಸ್ಥೆಗಳು ಎಫ್ʼಸಿಆರ್‌ಎ ಪರವಾನಗಿಯನ್ನು ಕಳೆದುಕೊಂಡಿವೆ. ಈ ಎಲ್ಲ ಸಂಸ್ಥೆಗಳು ಅನುಮತಿ ಪಡೆಯದ ಕ್ಷೇತ್ರಗಳಲ್ಲಿ ವಿದೇಶಿ ದೇಣಿಗೆಯನ್ನು ವಿನಿಯೋಗಿಸಿದ ಆರೋಪವನ್ನು ಹೊಂದಿವೆ.
ರಾಜೀವ್ ಗಾಂಧಿ ಫೌಂಡೇಶನ್, ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್ʼಗಳು ಚೀನಾದ ರಾಯಭಾರಿ ಕಚೇರಿಯಿಂದ ದೇಣಿಗೆಯನ್ನು ಪಡೆದ ಆರೋಪದಲ್ಲಿ ತಮ್ಮ ಎಫ್ʼಸಿಆರ್‌ಎ ನೋಂದಣಿಯನ್ನು ಕಳೆದುಕೊಂಡಿವೆ. ದೇಶದ ಆರ್ಥಿಕ ಹಿತಾಸಕ್ತಿಗಳಿಗೆ ತೊಂದರೆಯುಂಟು ಮಾಡುವ ಚಟುವಟಿಕೆ ಗಳಿಗೆ, ದೇಶ ವಿರೋಧಿ ಪ್ರತಿಭಟನೆಗಳಿಗೆ ಹಾಗೂ ಸರಕಾರದ ವಿರುದ್ಧದ ಕಾನೂನು ಹೋರಾಟಗಳಿಗೆ ವಿದೇಶಿ ದೇಣಿಗೆಯನ್ನು ಬಳಸಿದ ಅರೋಪದಲ್ಲಿ ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಸಂಸ್ಥೆಯು ಎಫ್ʼಸಿಆರ್‌ಎ ಪರವಾನಗಿಯನ್ನು ಕಳೆದುಕೊಂಡಿದೆ.
ಭಾರತದ ಎನ್‌ಜಿಓಗಳು ದೊಡ್ಡ ಪ್ರಮಾಣದಲ್ಲಿ ವಿದೇಶಿ ದೇಣಿಗೆಯನ್ನು ಪಡೆಯುತ್ತಿವೆ. 2017 ಹಾಗೂ 2022ರ ನಡುವಿನ 5 ವರ್ಷಗಳ ಅವಧಿಯಲ್ಲಿ 88000 ಕೋಟಿ ರುಪಾಯಿಗಳಷ್ಟು ದೊಡ್ಡ ಮೊತ್ತದ ವಿದೇಶಿ ದೇಣಿಗೆ ಭಾರತಕ್ಕೆ ಹರಿದು ಬಂದಿದೆ. 2022 ರಲ್ಲಿಯೇ 22000 ಕೋಟಿ ರುಪಾಯಿಗಳ ದೇಣಿಗೆ ಭಾರತಕ್ಕೆ ಬಂದಿತ್ತು. ವಿದೇಶಿ ಏಜೆನ್ಸಿಗಳು ದೇಶದ ಕಾನೂನು, ಆಡಳಿತ ವ್ಯವಸ್ಥೆಯ ಮೇಲೆ ಪ್ರಭಾವ ಬೀರಲು ದೇಣಿಗೆಯನ್ನು ಕೊಡುತ್ತವೆ.
ತಮ್ಮ ಕಾರ್ಯಸೂಚಿಯನ್ನು ಪೂರೈಸಲು ಸರಕಾರದ ಮೇಲೆ ಒತ್ತಡ ಹೇರಲು ಎನ್‌ಜಿಓಗಳಿಗೆ ಆರ್ಥಿಕ ನೆರವು ನೀಡುತ್ತವೆ. ಭಾರತ ವಿರೋಧಿ ಜೋರ್ಜ್ ಸೋರೋಸ್ ತನ್ನ ಓಪನ್ ಸೊಸೈಟಿ ಫೌಂಡೇಶನ್ ಮೂಲಕ ಮಾನವ ಹಕ್ಕು, ನ್ಯಾಯಾಂಗ ವ್ಯವಸ್ಥೆಯ ಸುಧಾರಣೆ ಮೊದಲಾದ ಹೆಸರಿನಲ್ಲಿ ಭಾರತದ ರಾಜಕೀಯ, ಆರ್ಥಿಕ ಹಾಗೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ಹಸ್ತಕ್ಷೇಪ ಮಾಡಲು ಭಾರತದ ಎನ್‌ಜಿಓಗಳಿಗೆ ಹಣ ಸುರಿಯುತ್ತಿದ್ದ ಅರೋಪ ಇದೆ.
ವಿದೇಶಿ ದೇಣಿಗೆಯ ನೆರವಿನಿಂದ ಚರ್ಚ್ ಬೆಂಬಲಿತ ಎನ್ʼಜಿಓಗಳು ತೂತುಕ್ಕುಡಿಯಲ್ಲಿನ ಸ್ಟರ್ಲಿಂಗ್ ತಾಮ್ರದ ಅದಿರು ಸಂಸ್ಕರಣಾ ಘಟಕದ ವಿರುದ್ಧವಾಗಿ ಜನರನ್ನು ಎತ್ತಿ ಕಟ್ಟಲು ಕೆಲಸ ಮಾಡಿದ್ದವು. ಮಣಿಪುರ ಹಿಂಸಾಚಾರದ ಹಿಂದೆಯೂ ವಿದೇಶಿ ಶಕ್ತಿಗಳು ಕೆಲಸ ಮಾಡಿವೆ. ದೇಶದ ಆಂತರಿಕ ವಿಷಯಗಳ ಮೇಲೆ ಹಸ್ತಕ್ಷೇಪ ನಡೆಸುವ ವಿದೇಶಿ ಶಕ್ತಿಗಳನ್ನು ವಿಫಲಗೊಳಿಸಲು, ಧಾರ್ಮಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಭಾರತಕ್ಕೆ ವಿದೇಶಗಳಿಂದ ಹರಿದುಬರುವ ದೇಣಿಗೆಗಳು ಹಾಗೂ ಅವುಗಳ ವಿನಿಯೋಗಗಳ ಮೇಲೆ ನಿಯಂತ್ರಣ ಹೇರದೆ ಅನ್ಯ ಮಾರ್ಗವಿಲ್ಲ.
ಹೀಗಾಗಿ ಭಾರತವು ವಿದೇಶಿ ದೇಣಿಗೆಗಳನ್ನು ಪಡೆಯುವ ಸಂಸ್ಥೆಗಳ ಚಟುವಟಿಕೆಗಳಲ್ಲಿ ಪಾರ ದರ್ಶಕತ್ವವನ್ನು ತರಲು ಹಾಗೂ ದೇಣಿಗೆಯ ದುರುಪಯೋಗವನ್ನು ತಡೆಗಟ್ಟಲು ಎಫ್ʼಸಿಆರ್‌ಎ ಕಾನೂನುಗಳನ್ನು ಬಿಗಿಗೊಳಿಸುತ್ತಿದೆ.