ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Prakash Shesharaghavachar Column: ಸಚಿವ ಖರ್ಗೆಯವರು ಆರೆಸ್ಸೆಸ್‌ ಬ್ರ್ಯಾಂಡ್‌ ಅಂಬಾಸಿಡರೇ ?

ಖ್ಯಾತ ವಕೀಲ ಕಪಿಲ್ ಸಿಬಲ್ ಅವರ ‘ದಿಲ್ ಸೇ’ ಪಾಡ್‌ಕಾಸ್ಟ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮಾತು ಕೇಳಿದರೆ, ಇವರು ಆರೆಸ್ಸೆಸ್ ವಿರೋಧಿಯೋ ಅಥವಾ ಸಂಘದ ಪ್ರಚಾರಕರೋ ಎಂಬ ಅನುಮಾನ ಮೂಡುವುದು ಸಹಜ! ರಾಷ್ಟ್ರೀಯ ಸ್ವಯಂಸೇವಕ ಸಂಘದ ಅತ್ಯುನ್ನತ ನಿರ್ಣಯ ಕೈಗೊಳ್ಳುವ ಸಂಸ್ಥೆಯಾದ ಅಖಿಲ ಭಾರತೀಯ ಪ್ರತಿನಿಧಿ ಸಭೆಯ (ABPS) 2025-26ರ ವರದಿಯನ್ನು ಸಂಘದ ನಿಷ್ಠಾವಂತ ಸ್ವಯಂಸೇವಕರನ್ನೂ ಮೀರಿಸುವಂತೆ ಅಂಕಿ-ಅಂಶಗಳ ಸಮೇತ ಪಟಪಟನೆ ವಿವರಿಸುತ್ತಾರೆ!

ಪ್ರಕಾಶಪಥ

ಪ್ರಕಾಶ್‌ ಶೇಷರಾಘವಾಚಾರ್

ಖ್ಯಾತ ವಕೀಲ ಕಪಿಲ್ ಸಿಬಲ್ ಅವರ ‘ದಿಲ್ ಸೇ’ ಪಾಡ್‌ಕಾಸ್ಟ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮಾತು ಕೇಳಿದರೆ, ಇವರು ಆರೆಸ್ಸೆಸ್ ವಿರೋಧಿಯೋ ಅಥವಾ ಸಂಘದ ಪ್ರಚಾರಕರೋ ಎಂಬ ಅನುಮಾನ ಮೂಡುವುದು ಸಹಜ! ರಾಷ್ಟ್ರೀಯ ಸ್ವಯಂಸೇವಕ ಸಂಘದ ಅತ್ಯುನ್ನತ ನಿರ್ಣಯ ಕೈಗೊಳ್ಳುವ ಸಂಸ್ಥೆಯಾದ ಅಖಿಲ ಭಾರತೀಯ ಪ್ರತಿನಿಧಿ ಸಭೆಯ (ABPS) 2025-26ರ ವರದಿಯನ್ನು ಸಂಘದ ನಿಷ್ಠಾವಂತ ಸ್ವಯಂಸೇವಕರನ್ನೂ ಮೀರಿಸುವಂತೆ ಅಂಕಿ-ಅಂಶಗಳ ಸಮೇತ ಪಟಪಟನೆ ವಿವರಿಸುತ್ತಾರೆ!

ಅವರೇ ಉಲ್ಲೇಖಿಸಿದ ಅಂಕಿ-ಅಂಶಗಳ ಪ್ರಕಾರ: 88,949 ದೈನಂದಿನ ಶಾಖೆಗಳು, 32,606 ಸಾಪ್ತಾಹಿಕ ಮಿಲನಗಳು, 13,211 ಮಾಸಿಕ ಮಿಲನಗಳು, 62,555 ಸ್ಥಳಗಳಲ್ಲಿ ವಿಜಯದಶಮಿ ಉತ್ಸವ, 32,45,141 ಗಣವೇಷಧಾರಿ ಸ್ವಯಂಸೇವಕರ ಭಾಗವಹಿಸುವಿಕೆ, 27,80,185 ಯುವ ಸ್ವಯಂಸೇವಕರು, 5,36,000 ಮೂವತ್ತು ವರ್ಷ ಮೇಲ್ಪಟ್ಟ ಸ್ವಯಂಸೇವಕರು!

ಇಷ್ಟೊಂದು ಅಂಕಿ-ಅಂಶಗಳನ್ನು ಒಂದೇ ಉಸಿರಿನಲ್ಲಿ ವಿವರಿಸುವ ಪ್ರಿಯಾಂಕ್ ಖರ್ಗೆಯವರ ಸಂಘದ ಕುರಿತಾದ ಅಧ್ಯಯನ ಮತ್ತು ನೆನಪಿನ ಶಕ್ತಿಯನ್ನು ಮೆಚ್ಚಲೇಬೇಕು! ಪಾಪ! ಸಂಘವನ್ನು ಟೀಕಿಸುವ ಉದ್ದೇಶದಿಂದ ಸಂದರ್ಶನ ನಡೆಸುತ್ತಿದ್ದ ಕಪಿಲ್ ಸಿಬಲ್ ಅವರಿಗೆ, ಪ್ರಿಯಾಂಕ್ ಖರ್ಗೆಯವರ ಬಾಯಿಂದಲೇ ಆರೆಸ್ಸೆಸ್ ಸಂಘಟನೆಯ ವ್ಯಾಪ್ತಿ ಮತ್ತು ಶಕ್ತಿಯ ವಿವರಣೆ ಕೇಳಿ ಆಘಾತವಾಗಿದ್ದರೆ ಆಶ್ಚರ್ಯವೇನಿಲ್ಲ!

ಬಹುಶಃ ಕಾಂಗ್ರೆಸ್ ಹೈಕಮಾಂಡ್‌ನ ಅಣತಿಯ ಮೇರೆಗೆ ಪ್ರಿಯಾಂಕ್ ಖರ್ಗೆಯವರು ಆರೆಸ್ಸೆಸ್ ವಿರುದ್ಧ ಹೊಸ ವಿವಾದ ಸೃಷ್ಟಿಸಲು ಹರಸಾಹಸ ಮಾಡುತ್ತಿರುವಂತಿದೆ! ಆರೆಸ್ಸೆಸ್ ನೋಂದಣಿ ಯಾಗದ ಸಂಸ್ಥೆ ಎಂಬ ನೆಪ ಮುಂದಿಟ್ಟುಕೊಂಡು, ಸಂಘವನ್ನು 1960ರ ಸಂಘಗಳ ನೋಂದಣಿ ಕಾಯ್ದೆಯಡಿ ನೋಂದಾಯಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: Prakash Shesharaghavachar Column: ವಂದೇ ಮಾತರಂ ವಿವಾದದ ಹಲವು ಕವಲುಗಳು

ಇಷ್ಟಕ್ಕೇ ನಿಲ್ಲದ ಖರ್ಗೆಯವರು, ಜೂನ್ 13ರಂದು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು, ಸಂಘದ ನೋಂದಣಿಗೆ ಒತ್ತಾಯಿಸಿದ್ದರು. ಇಂತಹ ನಿರ್ದೇಶನ ನೀಡುವ ಅಧಿಕಾರ ಇವರಿಗಿದೆಯೇ ಎಂಬ ಪ್ರಶ್ನೆಯ ನಡುವೆಯೂ ಪತ್ರ ಬರೆದರು. ಆದರೆ ಪತ್ರ ಬರೆದು 130 ದಿನಗಳು ಕಳೆದರೂ ಸಂಘದ ಯಾವುದೇ ಪದಾಧಿಕಾರಿಯಿಂದಲೂ ಉತ್ತರ ಬಂದಿಲ್ಲ! ಬರುವುದೂ ಇಲ್ಲ.

ಇದರಿಂದಾಗುತ್ತಿರುವ, ಮುಜುಗರವನ್ನು ಮರೆಮಾಚಲು, ‘ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗ ಲಿಲ್ಲ’ ಎಂಬಂತೆ, ನೂರು ವರ್ಷಗಳ ಇತಿಹಾಸವಿರುವ ಸಂಘಟನೆಗೆ ಹಳೆಯ ದಾಖಲೆಗಳನ್ನು ಹುಡುಕಿ ಉತ್ತರಿಸಲು ಸಮಯ ನೀಡಬೇಕು ಎಂದು ಹಾಸ್ಯಾಸ್ಪದ ಸಮರ್ಥನೆ ಮಾಡಿಕೊಳ್ಳು ತ್ತಿದ್ದಾರೆ. ಸಂಘವನ್ನು ಇಕ್ಕಟ್ಟಿಗೆ ಸಿಲುಕಿಸಲು ಹೊರಟವರು, ತಾವೇ ಇಕ್ಕಟ್ಟಿಗೆ ಸಿಲುಕಿಕೊಂಡು ತಮಗಾಗುತ್ತಿರುವ ಮುಜುಗರದಿಂದ ಪಾರಾಗಲು ಪರದಾಡುತ್ತಿದ್ದಾರೆ.

ಕಳೆದ ಬಾರಿ ಖರ್ಗೆಯವರು ತಮ್ಮದೇ ವಿಧಾನಸಭಾ ಕ್ಷೇತ್ರವಾದ ಚಿತ್ತಾಪುರದಲ್ಲಿ ಸಂಘದ ಪಥಸಂಚಲನಕ್ಕೆ ನಾನಾ ರೀತಿಯ ಅಡ್ಡಿ-ಆತಂಕಗಳನ್ನು ಸೃಷ್ಟಿಸಿ, ಕಾರ್ಯಕ್ರಮಕ್ಕೆ ಅನುಮತಿ ದೊರೆಯದಂತೆ ಮಾಡಲು ಪ್ರಯತ್ನಿಸಿದ್ದರು. ಪರಿಣಾಮವಾಗಿ, ಸಾಮಾನ್ಯವಾಗಿ ಹೆಚ್ಚು ಸುದ್ದಿ ಯಾಗದೆ ನಡೆಯುತ್ತಿದ್ದ ಪಥಸಂಚಲನ ರಾಜ್ಯಾದ್ಯಂತ ಚರ್ಚೆಯ ಕೇಂದ್ರ ಬಿಂದುವಾಯಿತು.

RSS 1

ಅಂತಿಮವಾಗಿ ನ್ಯಾಯಾಲಯದ ಆದೇಶದ ಮೇರೆಗೆ ಜಿಡಳಿತ ಪಥಸಂಚಲನಕ್ಕೆ ಅನುಮತಿ ನೀಡಬೇಕಾಯಿತು. ಒಮ್ಮೆ ತಪ್ಪು ಮಾಡಿದ ತಪ್ಪನ್ನೇ ಮತ್ತೆ ಅನುಭವಿ ರಾಜಕಾರಣಿ ಮಾಡುವ ಗೋಜಿಗೆ ಹೋಗುವುದಿಲ್ಲ. ಆದರೆ ಪ್ರಿಯಾಂಕ ಖರ್ಗೆ ಅದಕ್ಕೆ ಅಪವಾದವಾಗಿದ್ದಾರೆ. ಬಸವೇಶ್ವರ ನಗರದ ವಿಜಯದಶಮಿ ಪಥಸಂಚಲನ ಕಾರ್ಯಕ್ರಮದ ಬಗ್ಗೆ ಲಿಖಿತವಾಗಿ ಪೊಲೀಸರಿಗೆ ಮಾಹಿತಿ ನೀಡಿದ ಪತ್ರವನ್ನು ಸಚಿವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ‘ಗೃಹ ಇಲಾಖೆಗೆ ಕೇವಲ ಮಾಹಿತಿ ನೀಡುವುದು, ಸಹಕರಿಸಿ ಎಂದು ಹೇಳುವುದು ಅಥವಾ ಅಗತ್ಯ ವ್ಯವಸ್ಥೆಗಳನ್ನು ಮಾಡಿ’ ಎಂದು ಸೂಚಿಸುವುದು ಅಧಿಕೃತ ಅನುಮತಿ ಪಡೆದಂತಾಗುವುದಿಲ್ಲ. ಇತರ ಎಲ್ಲ ಸಂಘಟನೆ ಗಳಿಗೂ ಅನ್ವಯಿಸುವ ನಿಗದಿತ ನಿಯಮಾವಳಿ ಮತ್ತು ಕಾರ್ಯವಿಧಾನದಂತೆ ನೀವೂ ಅರ್ಜಿ ಸಲ್ಲಿಸಿ, ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಅನುಮತಿ ಪಡೆಯುವವರೆಗೆ ಕಾಯಬೇಕು’ ಎಂದಿದ್ದಾರೆ.

‘ಈಗ ಲಕ್ಷಾಂತರ ಸ್ವಯಂಸೇವಕರು ಒಂದೇ ದಿನ, ಒಂದೇ ಸಮಯದಲ್ಲಿ ಕರ್ನಾಟಕದ ವಿವಿಧ ರಸ್ತೆಗಳಲ್ಲಿ ಪಥಸಂಚಲನ ನಡೆಸಲು ಉದ್ದೇಶಿಸಿದರೆ, ಪೊಲೀಸ್ ಇಲಾಖೆ ಎಷ್ಟೆಲ್ಲ ಪೂರ್ವಸಿದ್ಧತೆ ಗಳನ್ನು ಮಾಡಿ ಕೊಳ್ಳಬೇಕಾಗುತ್ತದೆ ಎಂಬುದನ್ನು ಒಮ್ಮೆ ಯೋಚಿಸಿ! ಪೊಲೀಸ್ ಸಿಬ್ಬಂದಿಯ ನಿಯೋಜನೆ, ಸಾರಿಗೆ ವ್ಯವಸ್ಥೆ, ಆಹಾರ, ಸಂಚಾರ ನಿರ್ವಹಣೆ, ಭದ್ರತಾ ವ್ಯವಸ್ಥೆ ಹಾಗೂ ಇನ್ನಿತರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇವೆಲ್ಲಕ್ಕೂ ಸೂಕ್ತ ಯೋಜನೆ, ಸಾಕಷ್ಟು ಮಾನವ ಸಂಪನ್ಮೂಲ ಹಾಗೂ ಸಾರ್ವಜನಿಕ ಹಣದ ಬಳಕೆ ಅಗತ್ಯವಾಗುತ್ತದೆ. ಆದ್ದರಿಂದ ದಯವಿಟ್ಟು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ವಿವರಗಳನ್ನು ಒದಗಿಸಿ, ಸಂಬಂಧಪಟ್ಟ ಸಕ್ಷಮ ಅಧಿಕಾರಿಗಳಿಂದ ಅಧಿಕೃತ ಅನುಮತಿ ದೊರೆಯುವವರೆಗೆ ಕಾಯಿರಿ.

ನಿಯಮಗಳು ಎಲ್ಲರಿಗೂ ಒಂದೇ. ಅವುಗಳನ್ನು ಪಾಲಿಸುವ ಜವಾಬ್ದಾರಿಯೂ ಎಲ್ಲರಿಗೂ ಸಮಾನ!’ ಎಂದು ಕಾನೂನಿನ ಬೋಧನೆ ಮಾಡುತ್ತಾರೆ. ವಿಜಯದಶಮಿ ಅಂಗವಾಗಿ ರಾಜ್ಯಾದ್ಯಂತ ಆರ್‌ಎಸ್‌ಎಸ್ ಪಥಸಂಚಲನಗಳು ಆರಂಭವಾಗುವ ಮುನ್ನವೇ ಖರ್ಗೆಯವರ ಈ ಬರಹ ಪಥಸಂಚಲನವನ್ನು ಮತ್ತೊಮ್ಮೆ ರಾಜ್ಯಮಟ್ಟದ ಚರ್ಚೆಯ ಮುನ್ನೆಲೆಗೆ ತಂದಿತು.

ಕಳೆದ ಅನೇಕ ದಶಕಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಬಹುತೇಕ ಮಾಧ್ಯಮಗಳು ಅಷ್ಟಾಗಿ ಪ್ರಾಮುಖ್ಯತೆ ನೀಡುತ್ತಿರಲಿಲ್ಲ. ಆದರೆ ಈ ಬಾರಿ ಖರ್ಗೆಯವರ ಹೇಳಿಕೆಯೇ ಪಥಸಂಚ ಲನಕ್ಕೆ ಅನಿರೀಕ್ಷಿತ ಪ್ರಚಾರ ತಂದುಕೊಟ್ಟಿತು! ಪಥಸಂಚಲನ ನಡೆಯುವುದೇ? ಸರ್ಕಾರ ಅನುಮತಿ ನೀಡುವುದೇ? ಅಥವಾ ನಿರಾಕರಿಸುವುದೇ? ಎಂಬ ಕುತೂಹಲ ಕೇವಲ ಮಾಧ್ಯಮಗಳಿಗಷ್ಟೇ ಸೀಮಿತವಾಗದೆ ಜನಸಾಮಾನ್ಯರಲ್ಲೂ ಮೂಡುವಂತಾಯಿತು.

ಖರ್ಗೆಯವರು ಆರ್‌ಎಸ್‌ಎಸ್ ಪಥಸಂಚಲನಕ್ಕೆ ವ್ಯಾಪಕ ಪ್ರಚಾರ ಸಿಗುವಂತೆ ಮಾಡಿದರು. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ನಡೆದ ಸಂಘದ ಪಥಸಂಚಲನಗಳಿಗೆ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಹಿಂದೆಂದೂ ಕಾಣದಷ್ಟು ವ್ಯಾಪಕ ಪ್ರಚಾರ ದೊರೆಯಿತು. ರಾಜ್ಯದ ಮನೆಮನೆ ಯಲ್ಲೂ ಆರ್‌ಎಸ್‌ಎಸ್ ಪಥಸಂಚಲನವೇ ಚರ್ಚೆಯ ವಿಷಯವಾಯಿತು. ಅಷ್ಟೇ ಅಲ್ಲ, ಸಂಘದ ಚಟುವಟಿಕೆಗಳಿಂದ ದೂರ ಉಳಿದಿದ್ದ ನೂರಾರು ಸ್ವಯಂಸೇವಕರಲ್ಲಿ ಹೊಸ ಉತ್ಸಾಹ ಮೂಡಿತು.

ಎಡೆ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರು ಪಥಸಂಚಲನದಲ್ಲಿ ಭಾಗವಹಿಸಿದರು. ಸಂಘದ ಸ್ವಯಂಸೇವಕರು ವಾರಗಟ್ಟಲೆ ಶ್ರಮಿಸಿ ಸಾಧಿಸಬೇಕಾಗಿದ್ದ ಪ್ರಚಾರ ಮತ್ತು ಜನಜಾಗೃತಿಯನ್ನು ಖರ್ಗೆಯವರ ಒಂದೇ ಒಂದು ಎಕ್ಸ್ ಪೋ ಅನಾಯಾಸವಾಗಿ ಸಾಧಿಸಿಕೊಟ್ಟಿತು! ಸಂಘದ ಪ್ರಚಾರಕ್ಕೆ ಸ್ವಯಂಸೇವಕರಿಗಿಂತ ಖರ್ಗೆಯವರೇ ಹೆಚ್ಚು ಶ್ರಮಿಸಿದಂತಾಯಿತು! ಎಂತಹ ರಾಜಕೀಯ ವಿಪರ್ಯಾಸ! ಖರ್ಗೆಯವರ ವಿರೋಧವೇ ಸಂಘದ ಪಥಸಂಚಲನಕ್ಕೆ ರಾಷ್ಟ್ರಮಟ್ಟದ ಪ್ರಚಾರ ತಂದುಕೊಟ್ಟಿತು!

ಪ್ರತಿವರ್ಷ ನಡೆಯುತ್ತಿದ್ದ ಸಂಘದ ಪಥಸಂಚಲನಕ್ಕೆ ಈ ಬಾರಿ ಖರ್ಗೆಯವರ ವಿರೋಧವೇ ರಾಷ್ಟ್ರಮಟ್ಟದ ಪ್ರಚಾರ ತಂದುಕೊಟ್ಟಿತು. ಪಥಸಂಚಲನವನ್ನು ಕಣ್ತುಂಬಿಕೊಳ್ಳಲು ಸಾವಿರಾರು ನಾಗರಿಕರು ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತು ಸಂಭ್ರಮಿಸಿದರು. ಸಂಘದ ಪಥಸಂಚಲನಕ್ಕೆ ತಡೆಯೊಡ್ಡುವ ಪ್ರಯತ್ನವೇ ಅದಕ್ಕೆ ಅಭೂತಪೂರ್ವ ಪ್ರಚಾರ, ಜನಾಕರ್ಷಣೆ ಹಾಗೂ ಹೊಸ ಹುರುಪು ತಂದುಕೊಟ್ಟಿತು. ಸಂಘದ ಬಗ್ಗೆ ಜನಸಾಮಾನ್ಯರಲ್ಲಿ ಕುತೂಹಲ ಹೆಚ್ಚಾಗಿದ್ದು, ನೂರಾರು ಯುವಕರು ಸಂಘದ ಶಾಖೆಗಳತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಸಂಘದ ಮೂಲಗಳು ಹೇಳುತ್ತಿವೆ.

ವಿರೋಧಿಸುವ ಭರದಲ್ಲಿ ಖರ್ಗೆಯವರು ಸಂಘಕ್ಕೆ ಉಚಿತ ಪ್ರಚಾರಕರಾಗಿ ಬದಲಾಗಿದ್ದಾರೆ. ಸಾಮಾನ್ಯವಾಗಿ ಅನುಭವಿ ರಾಜಕಾರಣಿಗಳು ಒಮ್ಮೆ ಮಾಡಿದ ತಪ್ಪಿನಿಂದ ಪಾಠ ಕಲಿಯುತ್ತಾರೆ, ತಂತ್ರ ಬದಲಿಸುತ್ತಾರೆ, ರಾಜಕೀಯವಾಗಿ ಮತ್ತಷ್ಟು ಪಕ್ವರಾಗುತ್ತಾರೆ. ಇದಕ್ಕೆ ಸೋನಿಯಾ ಗಾಂಧಿಯವರ ರಾಜಕೀಯ ಪಯಣವೇ ಒಂದು ಉದಾಹರಣೆ.

1999ರಲ್ಲಿ ವಾಜಪೇಯಿ ಸರ್ಕಾರ ಕೇವಲ ಒಂದು ಮತದಿಂದ ಪತನಗೊಂಡಾಗ, ಸರ್ಕಾರ ರಚಿಸುವ ಉತ್ಸಾಹದಲ್ಲಿ ಸೋನಿಯಾ ಗಾಂಧಿಯವರು ರಾಷ್ಟ್ರಪತಿ ಭವನಕ್ಕೆ ತೆರಳಿ ತಮಗೆ 272 ಸಂಸದರ ಬೆಂಬಲವಿದೆ ಎಂದು ಹಕ್ಕು ಮಂಡಿಸಿದರು. ಆದರೆ ಅಗತ್ಯ ಬಹುಮತವನ್ನು ಒಗ್ಗೂಡಿಸಲು ಸಾಧ್ಯವಾಗದೆ ಅವರ ಪ್ರಯತ್ನ ವಿಫಲವಾಯಿತು. ಆದರೆ 2004ರ ವೇಳೆಗೆ ರಾಜಕೀಯ ಪರಿಸ್ಥಿತಿಯೇ ಬದಲಾಗಿತ್ತು.

ಸಮ್ಮಿಶ್ರ ಸರ್ಕಾರ ರಚಿಸುವಷ್ಟು ರಾಜಕೀಯ ಅನುಭವ ಮತ್ತು ಚಾಣಾಕ್ಷತೆ ಸೋನಿಯಾ ಗಾಂಧಿಯವರಿಗೆ ಬಂದಿತ್ತು. ಪ್ರಧಾನಿಯಾಗುವ ಅವಕಾಶವಿದ್ದರೂ ಮಕ್ಕಳ ಮಾತಿಗೆ ಕಟ್ಟುಬಿದ್ದು ಆ ಸ್ಥಾನವನ್ನು ನಿರಾಕರಿಸಿ, ತಮ್ಮ ವಿಶ್ವಾಸಾರ್ಹರಾದ ಡಾ. ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಪಟ್ಟಕ್ಕೇರಿಸಿದರು. 1999ರಲ್ಲಿ ಬಹುಮತವಿಲ್ಲದೆ ಸರ್ಕಾರ ರಚಿಸಲು ಮುಂದಾದ ಸೋನಿಯಾ ಗಾಂಧಿಯವರು, 2004ರಲ್ಲಿ ಬಹುಮತದ ಬೆಂಬಲವಿದ್ದರೂ ಪ್ರಧಾನಿ ಪಟ್ಟದಿಂದ ದೂರ ಉಳಿದು ಅಧಿಕಾರದ ರಾಜಕೀಯ ಸಮೀಕರಣವನ್ನು ತಮ್ಮ ಅನುಕೂಲಕ್ಕೆ ರೂಪಿಸಿಕೊಂಡರು.

ಕಳೆದ ವರ್ಷ ಸಂಘದ ಪಥ ಸಂಚಲನವನ್ನು ವಿರೋಧಿಸಿ ಮುಖಭಂಗವಾದ ತರುವಾ ಯವೂ ಈ ಬಾರಿಯೂ ಅಡ್ಡಗಾಲು ಹಾಕುವ ವಿಫಲ ಯತ್ನ ಮಾಡಿ ರಾಜಕೀಯವಾಗಿ ಹಿನ್ನಡೆ ಅನುಭವಿಸಿ ದ್ದಾರೆ. ಆದರೆ ಖರ್ಗೆಯವರು ಕುರುಡು ದ್ವೇಷದಿಂದ ಸಂಘವನ್ನು ವಿರೋಧಿಸುವ ಭರದಲ್ಲಿ ಪದೇಪದೆ ಅದೇ ತಪ್ಪನ್ನು ಮಾಡುತ್ತಿದ್ದಾರೆ, 1947ರ ನಂತರ ಆರೆಸ್ಸೆಸ್ ಮೇಲೆ ಮೂರು ಬಾರಿ ನಿಷೇಧ ಹೇರಲಾಗಿತ್ತು.

ನೆಹರು, ಪಟೇಲ್, ಇಂದಿರಾ ಗಾಂಧಿ ಮತ್ತು ಪಿ.ವಿ. ನರಸಿಂಹ ರಾವ್‌ರಂತಹ ಅತಿರಥ ಮಹಾರಥರು ಸಂಘವನ್ನು ಮಣಿಸಲು ಸಾಧ್ಯವಾಗಲಿಲ್ಲ. ಇದಲ್ಲದೆ ಅನೇಕ ರಾಜ್ಯ ಸರ್ಕಾರಗಳು ಸಂಘದ ಚಟುವಟಿಕೆಯನ್ನು ನಿಯಂತ್ರಿಸಲು ಹಲವಾರು ಪ್ರಯತ್ನ ಮಾಡಿ ಸೋತು ಸುಣ್ಣವಾಗಿವೆ. ಸಂಘವನ್ನು ನೋಂದಣಿ ಮಾಡಿಸಿಕೊಳ್ಳಿ ಎಂದು ಪತ್ರ ಬರೆಯುವ ಮುನ್ನ ಕಾನೂನು ತಜ್ಞರ ಸಲಹೆ ಪಡೆಯಬೇಕಿತ್ತು.

ಪತ್ರ ಬರೆದು, ಇಂದು ಉತ್ತರ ಬರುತ್ತದೆ, ನಾಳೆ ಬರುವುದು ಎಂದು ಕಾಯುವ ದಯನೀಯ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಸಂಘವನ್ನು ಮಣಿಸಲು ಯತ್ನಿಸಿ ವಿಫಲರಾದ ಕಾಂಗ್ರೆಸ್ ನಾಯಕರ ಬಹುದೊಡ್ಡ ಪಟ್ಟಿಯೇ ಇರುವುದು. ಕನಿಷ್ಠ ಅವರ ಸಲಹೆ ಪಡೆದು ಸಂಘವನ್ನು ಕೆಣಕಬೇಕಾಗಿತ್ತು. ಕೇಂದ್ರದ ನಾಯಕತ್ವ ಕೊಟ್ಟ ಕುಮ್ಮಕ್ಕಿಗೆ ಬಲಿಯಾಗಿ ಈಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಪ್ರಿಯಾಂಕ ಖರ್ಗೆಯವರು ತಮ್ಮ ಗೃಹ ಖಾತೆಯನ್ನು ಮರೆತಿದ್ದಾರೆ. ಆರೆಸ್ಸೆಸ್ ಹಿಂದೆ ಬಿದ್ದು ಅದಕ್ಕೆ ದೇಶವ್ಯಾಪಿ ಪ್ರಚಾರ ದೊರಕಿಸಿ ಕೊಟ್ಟು ಸಂಘದ ಬ್ರ್ಯಾಂಡ್ ಅಂಬಾಸಿಡರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.