ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shishir Hegde Column: ಜ್ಞಾನದಿಂದ ವಿಜ್ಞಾನದೆಡೆಗೆ ಹೊರಳುತ್ತಿದೆಯೇ ಸೈನ್ಸ್‌ ?

ವಿಜ್ಞಾನ ನಿಂತ ನೀರಾಗುವಂತಿಲ್ಲ. ಕಳೆದ, ಅದರಲ್ಲೂ ಹತ್ತು ವರ್ಷದಿಂದೀಚೆ ಆಧುನಿಕ ವಿಜ್ಞಾನ ಬಹಳಷ್ಟು ಬದಲಾಗಿದೆ. ಕೆಲವು ವಿಷಗಳನ್ನು ಇಂದಿನ ವಿಜ್ಞಾನ ಯೋಚಿಸುವ ರೀತಿಯೇ ಬದಲಾಗಿದೆ. ವಿಸ್ತಾರಗೊಂಡಿದೆ. ಮೊದಲು ಹೇಗಿತ್ತು? ಕಳೆದ ಒಂದು ಶತಮಾನದಲ್ಲಿ ಬೆಳೆದು ಬಂದ ವಿಜ್ಞಾನ - ವೆಸ್ಟೆರ್ನ್ ಸೈನ್ಸ್ - ಯಾವುದು ಕಾಣಿಸುತ್ತದೆಯೋ ಅಥವಾ ಲೆಕ್ಕ ಮಾಡಲು ಸಾಧ್ಯವೋ ಅದನ್ನಷ್ಟೇ ನಂಬುತ್ತಿತ್ತು, ಒಪ್ಪುತ್ತಿತ್ತು. ‌

ಶಿಶಿರಕಾಲ

ದ ಸೈಂಟಿಸ್ಟ್, ಪಾಪ್ಯುಲರ್ ಸೈನ್ಸ್, ಸ್ಮಿತ್ಸೋನಿಯನ್, ನ್ಯಾಷನಲ್ ಜಿಯೋಗ್ರಾಫಿಕ್ ಮತ್ತು ಡಿಸ್ಕವರ್ ಮ್ಯಾಗಜಿನ್. ಇವು ಇಂದಿನ ವಿಜ್ಞಾನ ಜಗತ್ತಿನ ಪ್ರತಿಷ್ಠಿತ ಪತ್ರಿಕೆಗಳು. ಪಂಚರತ್ನ‌ ಗಳು. ವಿಜ್ಞಾನಿಗಳು, ವಿಜ್ಞಾನಿಯಾಗ ಬಯಸುವವರು, ವಿಜ್ಞಾನ ಕುತೂಹಲಿಗಳು ಈ ಪತ್ರಿಕೆ ಗಳ ಮೇಲೆ ಕಣ್ಣಿಟ್ಟಿರುತ್ತಾರೆ.

ಇವುಗಳಿಂದ ಹೊಸ ಆವಿಷ್ಕಾರ, ಇತರೆ ವಿಜ್ಞಾನಕ್ಕೆ ಸಂಬಂಧಿಸಿದ ಸುದ್ದಿಗಳು ತಿಳಿಯುತ್ತವೆ. ಅಷ್ಟೇ ಅಲ್ಲದೆ, ಆಧುನಿಕ ವಿಜ್ಞಾನ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದರ ದೊಡ್ಡ ಹೊಡೆತದ ಅಂದಾಜು ಸಾಧ್ಯವಾಗುತ್ತದೆ. ಹೇಗೆ ಫ್ಯಾಷನ್, ಕ್ರೀಡೆ, ರಾಜಕೀಯ ಮೊದಲಾದ ವಿಷಯಗಳ ಪತ್ರಿಕೆಗಳು ಅವುಗಳ ದಿಶೆಯನ್ನು ಹೇಳುತ್ತವೆಯೋ ಹಾಗೆಯೇ ವಿಜ್ಞಾನಕ್ಕೆ ಈ ಪತ್ರಿಕೆಗಳು.

ವಿಜ್ಞಾನ ನಿಂತ ನೀರಾಗುವಂತಿಲ್ಲ. ಕಳೆದ, ಅದರಲ್ಲೂ ಹತ್ತು ವರ್ಷದಿಂದೀಚೆ ಆಧುನಿಕ ವಿಜ್ಞಾನ ಬಹಳಷ್ಟು ಬದಲಾಗಿದೆ. ಕೆಲವು ವಿಷಗಳನ್ನು ಇಂದಿನ ವಿಜ್ಞಾನ ಯೋಚಿಸುವ ರೀತಿಯೇ ಬದಲಾಗಿದೆ. ವಿಸ್ತಾರಗೊಂಡಿದೆ. ಮೊದಲು ಹೇಗಿತ್ತು? ಕಳೆದ ಒಂದು ಶತಮಾನ ದಲ್ಲಿ ಬೆಳೆದು ಬಂದ ವಿಜ್ಞಾನ - ವೆಸ್ಟೆರ್ನ್ ಸೈನ್ಸ್ - ಯಾವುದು ಕಾಣಿಸುತ್ತದೆಯೋ ಅಥವಾ ಲೆಕ್ಕ ಮಾಡಲು ಸಾಧ್ಯವೋ ಅದನ್ನಷ್ಟೇ ನಂಬುತ್ತಿತ್ತು, ಒಪ್ಪುತ್ತಿತ್ತು. ‌

ಆಧುನಿಕ ವಿಜ್ಞಾನ ಇಷ್ಟು ಕಾಲ ಕೆಲವು ಉತ್ತರಿಸಲಾಗದ ಪ್ರಶ್ನೆಗಳನ್ನು ‘Big Questions’ ಎಂದು ಪಕ್ಕಕ್ಕಿಟ್ಟುಬಿಟ್ಟಿತ್ತು. ಆದರೆ ಅವೆಲ್ಲ ಇತ್ತೀಚೆ ಬದಲಾಗಿದೆ, ವಿಜ್ಞಾನದ ಕೆಲವು ವಿಷಯಗಳಲ್ಲಿ ದಿಕ್ಕನ್ನೇ ಬದಲಿಸಿಬಿಟ್ಟಿದೆ.

ಇದನ್ನೂ ಓದಿ: Shishir Hegde Column: ವರ್ಷ ಆರು, ವಾರ ಮುನ್ನೂರು: ಇದು ಶಿಶಿರಕಾಲದ ಸ್ವಗತ

ಆಧುನಿಕ ವಿಜ್ಞಾನ ಬಗೆಹರಿಯದೆ ಬದಿಗಿಟ್ಟಿದ್ದ ಅಂತಹ ದೊಡ್ಡ ಪ್ರಶ್ನೆಗಳಲ್ಲಿ consciousness - ಪ್ರಜ್ಞೆ, ಚೇತನ ಕೂಡ ಒಂದು. ನೀವು ಈ ಲೇಖನವನ್ನು ಈಗ ಓದು ತ್ತಿದ್ದೀರಿ. ಇಲ್ಲಿನ ಶಬ್ದಗಳನ್ನು , ಅದು ಮೂಡಿದ ಹಿನ್ನೆಲೆಯಿಂದ ಪ್ರತ್ಯೇಕಿಸಿ, ನೆನಪು ಗಳಿಂದ ಇಂತಿಂಥ ಅಕ್ಷರ, ಅದೋ ಜೋಡಿಸಿ ಇಂತಿಂತಹ ಶಬ್ದಕ್ಕೆ ಇಂತಿಂತಹ ಅರ್ಥ ಎಂದು ತಲೆಯಲ್ಲಿ ಇವೆಲ್ಲ ಪ್ರೋಸೆಸ್ - ವಿಷಯ ಸಂಸ್ಕರಣೆ ನಡೆಯುತ್ತಿದೆ.

ಇದರ ನಡುವೆ ಒಂದು ಕ್ಷಣ ಗಮನ ಇನ್ನೆಲ್ಲಿಗೋ ಹೋಗಿ ಬಂದಿರುತ್ತದೆ. ಇನ್ಯಾವುದೋ ಆಲೋಚನೆ ಫಕ್ಕನೆ ಸರಿದು ಹೋಗುತ್ತದೆ. ಓಹ್ ಈ ಲೇಖನದ ವಿಷಯ ಇದು’ ಎಂದು ನಿಮಗೆ ತಿಳಿದದ್ದೇನೋ ಊಹೆ, ನೆನಪಾಗುತ್ತದೆ. ಅದೇ ಸಮಯದಲ್ಲಿ ಕೈಯಲ್ಲಿ ಕಾಫಿ ತಟ್ಟೆಯಿದ್ದರೆ ಅದರ ಬಿಸಿ, -ನಿನ ಗಾಳಿ, ಅಲ್ಲಿಯೂ ಯಾರದೋ ಧ್ವನಿ.

ಹೀಗೆ. ಈ ಎಲ್ಲಾ ಗ್ರಹಿಕೆಯ ಪ್ರಕ್ರಿಯೆ - ನೋಡುವುದು, ಅರ್ಥೈಸುವುದು, ವಿಚಾರ ಪಲ್ಲಟ ಗಳು, ಮತ್ತೆ ಗಮನ ಈ ಲೇಖನದ ವಿಚಾರಕ್ಕೆ ಮರಳುವುದು. ಈ ಎಲ್ಲದರ ಸಂಯೋಗ ಒಂದು ಅನುಭವವಾಗುವ - ನಿರಂತರ ಜೀವ ಪ್ರಜ್ಞೆ. ಇಲ್ಲಿ ಪ್ರಜ್ಞೆ ಎಂದರೆ ವಿಚಾರ ಅಲ್ಲ, ಸಮಸ್ಯೆ, ಲೆಕ್ಕ ಬಗೆಹರಿಸುವ ಬುದ್ಧಿವಂತಿಕೆ ಅಲ್ಲ - ಅದನ್ನು ಕಂಪ್ಯೂಟರ್ ಕೂಡ ಮಾಡು ತ್ತದೆ.

ಏಕಾಗ್ರತೆಯೂ ಅಲ್ಲ, ನೆನಪು ಕೂಡ ಅಲ್ಲ . ಅವೆಲ್ಲವೂ ಪ್ರಜ್ಞೆಯ ಮೂಲಕ ನಮ್ಮ ಅನುಭವಕ್ಕೆ ಬರುವವು. ಹಾಗಾದರೆ ಪ್ರಜ್ಞಾಹೀನ ‘ಸ್ಥಿತಿ’ ಎಂದರೆ? ಅದನ್ನು ಇಲ್ಲಿ ನಿಮ್ಮ ಯೋಚನೆಗೆ ಬಿಡುತ್ತೇನೆ. ಇಷ್ಟು ಕಾಲದ ವಿಜ್ಞಾನಕ್ಕೆ, fMRI ಮೊದಲಾದ ತಂತ್ರಜ್ಞಾನಗಳ ಸಹಾಯದಿಂದ ಯಾವ ಕ್ರಿಯೆ ಮಿದುಳಿನ ಯಾವ ಭಾಗದಲ್ಲಾಗುತ್ತದೆ ಎಂಬುದಷ್ಟೇ ತಿಳಿದಿತ್ತು.

Brain R

ಇದು ಹೇಗೆಂದರೆ - ವ್ಯಕ್ತಿಯನ್ನು ಕಗ್ಗತ್ತಲೆಯಲ್ಲಿ ಕೂರಿಸುವುದು, ನಂತರ ಕಣ್ಣಿಗೆ ಬೆಳಕು ಬಿಡುವುದು. ಆಗ ಮೆದುಳಿನ ಯಾವ ಭಾಗದಲ್ಲಿ ರಾಸಾಯನಿಕ ಮತ್ತು ವಿದ್ಯುತ್ ಪ್ರಕ್ರಿಯೆ ಗಳು ನಡೆಯುತ್ತವೆ ಎನ್ನುವುದನ್ನು ಸ್ಕ್ಯಾನಿಂಗ್ ಮೂಲಕ ಗ್ರಹಿಸುವುದು. ದೃಷ್ಟಿ ಈ ಭಾಗ ದಲ್ಲಿ, ಶ್ರಾವಣ ಇಲ್ಲಿ, ಹೆದರಿಕೆ ಅಲ್ಲಿ - ಹೀಗೆ. ಬೆಂಗಳೂರಿನ ಬಾನೆತ್ತರದಲ್ಲಿ ಡ್ರೋನ್ ಹಾರಿಸಿ ಯಾವ ಬಿಲ್ಡಿಂಗ್ ಲೈಟ್ ಹಾಕಿದೆ, ಯಾವುದು ಹಾಕಿಲ್ಲ ಎಂದು ನೋಡಿದಂತೆ.

ಇವು ತಂತ್ರಜ್ಞಾನ ಬಳಸಿ ಗ್ರಹಿಸಬಹುದಾದ ಕ್ರಿಯೆಗಳು. ಆದರೆ ಇವೆಲ್ಲವೂ ಭೌತಿಕ ಕ್ರಿಯೆ ಗಳು. ಅವು ನಮ್ಮ ಜೀವ ಅನುಭವವಾಗುವುದು ಹೇಗೆ? ಪ್ರಜ್ಞೆ ಮೆದುಳಿನ ಸಮಗ್ರ ಗ್ರಹಿಕೆ ಯೇ? ಹಾಗಾದರೆ ಆ ನಿಯಮಗಳು ಇರುವುದು ಎಲ್ಲಿ? ಅದು ಸಂಭವಿಸುವುದು ಎಲ್ಲಿ? ಇಷ್ಟು ಕಾಲ ವಿಜ್ಞಾನ ತನಗಿದ್ದ ತಾಂತ್ರಿಕ ಕೊರತೆಗಳಿಂದಾಗಿ ಪ್ರಜ್ಞೆ ಎನ್ನುವುದು ನಮ್ಮ ಭ್ರಮೆ ಎಂದು ಸುಮ್ಮನಾಗಿತ್ತು.

ಈಗ, ಅದರಲ್ಲೂ ಕಳೆದ ದಶಕದಲ್ಲಿ ಮೆದುಳಿನ ಸ್ಕ್ಯಾನಿಂಗ್ - fMRI, PET, MEG, TMS ಎಂಬಿತ್ಯಾದಿ ಏನೇನೋ ತಂತ್ರಜ್ಞಾನಗಳು ಅಸಾಮಾನ್ಯ ಪ್ರಗತಿ ಹೊಂದಿವೆ. ಇದರಿಂದಾಗಿ ಏನಾಯ್ತು? ಇಷ್ಟು ಕಾಲ ಮೆದುಳಿನ ಬಿಡಿಭಾಗಗಳ ಅಭ್ಯಾಸವಷ್ಟೇ ಸಾಧ್ಯವಾಗಿತ್ತು. ಈ ಮೆದುಳಿನ ಬಿಡಿಭಾಗಗಳು ಭಾಗಗಳು ಹೇಗೆ ಒಂದು ವ್ಯವಸ್ಥೆಯಾಗಿ ಕೆಲಸ ಮಾಡುತ್ತವೆ ಎನ್ನುವುದನ್ನು ತಿಳಿಯುವುದು ಸಾಧ್ಯವಾಗಿದೆ.

ಇದನ್ನು ವಿಜ್ಞಾನಿಗಳು ಕರೆಯುವುದು default network. ಕನ್ನಡದಲ್ಲಿ ಮೆದುಳಿನ ನಿಯೋಜಿತ ಜಾಲ ಅನ್ನಬಹುದು. ಮೆದುಳಿನ ಬಿಡಿಭಾಗಗಳನ್ನು ಜೋಡಿಸುವ ವ್ಯವಸ್ಥೆ. ಜೋಡಿಸುವ ತಂತಿ - ವೈರ್‌ಗಳ ಮಾರ್ಗವನ್ನು ಪರೋಕ್ಷವಾಗಿ ಗ್ರಹಿಸುವುದು ಸಾಧ್ಯವಾಗಿದೆ. ಈ ಸಂಪರ್ಕ ವ್ಯವಸ್ಥೆಯಿಂದಲೇ ಸ್ವಪ್ರಜ್ಞೆ ಅಥವಾ ಆತ್ಮಪ್ರಜ್ಞೆ ಎನ್ನುವುದು ಸಾಧ್ಯ ವಾಗಿದೆ,

ಪ್ರಜ್ಞೆ ಒಂದು ಭ್ರಮೆ ಅಲ್ಲ ಎನ್ನುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಆದರೆ ಈ ಎಲ್ಲಾ ಕಥೆಯ ಹೆಣೆ - ಟ್ವಿಸ್ಟ್ ಇರುವುದೇ ಇಲ್ಲಿ. ಈ ಸಂಪರ್ಕ ವ್ಯವಸ್ಥೆ ಇದೆಯಲ್ಲ, ಅದು ವಿದ್ಯುತ್ ಇಲಾಖೆಯವರು ಎಳೆದಿಟ್ಟು ತಂತಿಯಂತಲ್ಲ. ಈ ಸಂಪರ್ಕಗಳು ಬದಲಾಗುತ್ತವೆ ! Neuroplasticity ಬಗ್ಗೆ ಕೇಳಿರಬಹುದು.

ನಮಗಾದ ಅನುಭವಗಳಿಂದಾಗಿ, ಯೋಚನಾ ರೀತಿಯಿಂದಾಗಿ ಮೆದುಳಿಗೆ ಬದಲಾಗುವ, ಹೊಂದಿಕೊಳ್ಳುವ ಮತ್ತು ಬಿಡಿಭಾಗಗಳ ನಡುವಿನ ಸಂಪರ್ಕವನ್ನು ಬದಲಾಯಿಸಿ ಕೊಳ್ಳುವ ಸ್ವಸಾಮರ್ಥ್ಯ ಇದೆ. ಪ್ರತಿ ಬಾರಿ ಏನೋ ಒಂದು ಹೊಸತನ್ನು ಕಲಿತಾಗ, ಅಭ್ಯಾಸ ಮಾಡಿಕೊಂಡಾಗ, ಅಥವಾ ಒಂದೇ ರೀತಿ ಪುನಃ ಪುನಹ ಯೋಚಿಸುವುದರಿಂದ ಮೆದುಳಿನ ಕೋಶಗಳ ನಡುವಿನ ಸಂಪರ್ಕ ಬದಲಾಗುತ್ತದೆ.

ಪುನಃ ಪುನಃ ಬಳಸಿದ ಮೆದುಳಿನ ಸಂಪರ್ಕಗಳು ಗಟ್ಟಿಗೊಳ್ಳುತ್ತ ಹೋಗುತ್ತವೆ. ಮತ್ತು ಬಳಸದ ಸಂಪರ್ಕಗಳು ಕ್ರಮೇಣ ಅಳಿಸಿ ಹೋಗುತ್ತವೆ. ಮನುಷ್ಯನ ಸ್ವಭಾವ, ಗುಣ, ಅಭ್ಯಾಸ, ಚಟ, ದುಶ್ಚಟ ಎಲ್ಲವಕ್ಕೂ ಇದು ತಾಳೆಯಾಗುತ್ತವೆ ನೋಡಿ. ಜತೆಯಲ್ಲಿ ಯಾರು ಬೇಕಾದರೂ ಪ್ರಯತ್ನಿಸಿದರೆ ಬದಲಾಗಬಹುದು, ನಮ್ಮ ಮೆದುಳು ಪ್ರತಿಕ್ರಿಯಿಸುವ, ಗ್ರಹಿಸುವ ರೀತಿಯನ್ನೇ ಬದಲಿಸಿಕೊಳ್ಳಬಹುದು ಎನ್ನುವುದು ವೈಜ್ಞಾನಿಕವಾಗಿ ಸಿದ್ಧವಾದ ಹಾಗೆ ಆಯಿತು. ಮಾನಸಿಕ ಬದಲಾಗುವುದು ಕೆಲವರಿಗಷ್ಟೇ ಸಿದ್ಧಿಸುವ ಕಲೆಯಲ್ಲ, ಬದಲಿಗೆ ಎಲ್ಲರ ಸಾಧ್ಯತೆ ಎನ್ನುವುದು ಕೂಡ ವೈಜ್ಞಾನಿಕವಾಗಿ, ಭೌತಿಕವಾಗಿ, ಸಿದ್ಧವಾದಂತಾಗಿದೆ. ವಿಜ್ಞಾನ ಇಷ್ಟಕ್ಕೇ ಸುಮ್ಮನಾಗುವ ಜಾಯಮಾನದ್ದಲ್ಲವಲ್ಲ !

ಗುಂಡು ಹಾಕಿದವರ, ಪ್ರಜ್ಞೆ ತಪ್ಪಿದವರ, ಅನಸ್ತೇಷಿಯಾ ಕೊಟ್ಟವರ ಇತ್ಯಾದಿ ಬೇರೆ ಬೇರೆ ಮೆದುಳಿನ ಸ್ಥಿತಿಗಳನ್ನು ಅಭ್ಯಾಸ ಮಾಡಲಾಯಿತು. ಇವೆಲ್ಲವೂ ಮೆದುಳನ್ನು ಬಂದ್ ಮಾಡುತ್ತಿರಲಿಲ್ಲ. ಬದಲಿಗೆ ಮೆದುಳಿನ ಭಾಗಗಳು ಹಾಗೆಯೇ ಪ್ರತಿಕ್ರಿಯಿಸುತ್ತಿದ್ದವು, ಆದರೆ ಈ ಅಂರ್ತ ಸಂಪರ್ಕ ಏರುಪೇರಾಗುವುದು ಕಾಣಿಸಿತು. ಅದುವೆ ನಶೆಯ ಅನುಭವ. ಹಾಗೆ ಎಡವಟ್ಟಾಗುವ ಸಂಪರ್ಕಗಳು ನಶೆ ಇಳಿದಂತೆ ಪುನಃ ಸ್ಥಾಪನೆಯಾಗಿ ಸಹಜಕ್ಕೆ ಮರಳಿ ದವು.

ಈಗ ವಿeನ ಇನ್ನೊಂದರ ಪ್ರಯೋಗದಲ್ಲಿ ತೊಡಗಿದೆ. ಸೈಕಾಡೆಲಿಕ್ಸ್ - Psychedelics. ಕೆಲವು ಅಣಬೆಗಳಲ್ಲಿ, ಗಿಡಮೂಲಿಕೆಗಳಲ್ಲಿನ ಪ್ರಕೃತಿ ಸಹಜ ರಾಸಾಯನಿಕಗಳಿಗೆ ಈ ಮೆದುಳಿನ ಸಂಪರ್ಕ ವ್ಯವಸ್ಥೆಯನ್ನೇ ಬದಲಿಸುವ ಶಕ್ತಿಯಿದೆ ಎನ್ನುವುದು ಇತ್ತೀಚಿನ ಗ್ರಹಿಕೆ . ಇದರರ್ಥ ನಮ್ಮ ಪ್ರಜ್ಞೆಯನ್ನೇ ಬದಲಿಸುವ ಶಕ್ತಿ ಅವಕ್ಕಿವೆ.

ಬದಲಿಸುವುದು ಎಂದರೆ ಹೀಗೆ ವಿಚಾರ ಮಾಡುವವರು ಹಾಗೆ ವಿಚಾರ ಮಾಡುವುದು ಎನ್ನುವುದಕ್ಕೆ ಇದು ಸೀಮಿತವಲ್ಲ. ಕೆಲವೊಂದು ಸೈಕಾಡೆಲಿಕ್ ರಾಸಾಯನಿಕಗಳಿಗೆ ನಮ್ಮ ಪ್ರeಯ ವಿಸ್ತಾರವನ್ನು ಹೆಚ್ಚಿಸುವ, ಹೊಸ ನಮೂನೆಯ ಅಂತರ ಸಂಪರ್ಕ ಕೃತಕವಾಗಿ ಕಲ್ಪಿಸುವ & rewire ಮಾಡುವ ಶಕ್ತಿಯಿದೆ ಎನ್ನುವುದು ಇತ್ತೀಚಿನ ಆವಿಷ್ಕಾರ. ಆದರೆ ಇದೆಲ್ಲ ಕೇವಲ ಆವಿಷ್ಕರಿಸಿ ಬಿಟ್ಟರೆ ವಿಜ್ಞಾನ ವ್ಯರ್ಥವಾಗುತ್ತದೆಯಲ್ಲ !

ಈಗ ಇಂತಹ ಕೆಲವು ವಸ್ತುಗಳನ್ನು, ರಾಸಾಯನಿಕವನ್ನು ಹೇಗೆ ಬಳಸಿಕೊಳ್ಳಬಹುದು ಎಂಬಿತ್ಯಾದಿ ಪ್ರಯೋಗಗಳು ಅಮೆರಿಕಾದ ಜಾನ್ ಹಾಪ್ಕಿ, ಲಂಡನ್‌ನ ಇಂಪೀರಿಯಲ್ ಕಾಲೇಜ್ ಮೊದಲಾದ ಪ್ರತಿಷ್ಠಿತಿ ಪ್ರಯೋಗಶಾಲೆಗಳಲ್ಲಿ ಭರದಿಂದ ಸಾಗಿವೆ.

ಇದೆಲ್ಲ ಬೆಳವಣಿಗೆಗಳು ಪರಿಹರಿಸುವ ಉತ್ತರಗಳಿಗಿಂತ ಇನ್ನಷ್ಟು ಪ್ರಶ್ನೆಗಳನ್ನು ಮುಂದೆ ತಂದಿವೆ. ಪ್ರಾಣಿಗಳಲ್ಲೂ ಪ್ರಜ್ಞೆ ಇದೆ ಎಂದಾದರೆ ಅದು ಏಕೆ ಮತ್ತು ಹೇಗೆ ನಮಗಿಂತ ವಿಭಿನ್ನ? ಸಸ್ಯಗಳಿಗೂ ಪ್ರಜ್ಞೆ ಇದೆ. ಪ್ರಜ್ಞೆ ಮೆದುಳಿನಲ್ಲಿಯೇ ಇರುವುದೆಂದಾದರೆ ಸಸ್ಯ ಗಳಲ್ಲಿ ಅದು ಎಲ್ಲಿದೆ? ಇವೆಲ್ಲ ವಿತಂಡವಾದಗಳಲ್ಲ.

ಆಧುನಿಕ ವಿಜ್ಞಾನ ಈ ಪ್ರಶ್ನೆಗಳ ಮೂಲಕ ನಿಧಾನವಾಗಿ ತನ್ನ ಪರಿಧಿಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳುತ್ತಿದೆ. ವಿಜ್ಞಾನ ಆಧುನಿಕವಾಗಬೇಕಾದ ಅನಿವಾರ್ಯತೆಯಲ್ಲಿ ತನ್ನ ಕೆಲವು ಪೂರ್ವಾಗ್ರಹಗಳನ್ನು ಬಿಡಲೇಬೇಕಾದ ರಸ್ತೆ ತಿರುವಿನಲ್ಲಿ ನಿಂತಿದೆ.

ಪ್ರಜ್ಞೆ, ಮೆದುಳು ಈ ವಿಚಾರಗಳಲ್ಲಿ ಪಾಶ್ಚಾತ್ಯ ವಿಜ್ಞಾನ, ವಿಜ್ಞಾನಿಗಳು ಇಷ್ಟು ಕಾಲ ಕೆಲವೊಂದನ್ನು ಊಹಿಸಿ ಇದು ಹೀಗೆಯೇ ಎಂದು ಪ್ರತಿಪಾದಿಸಿಕೊಂಡು ನಿರ್ಲಕ್ಷಿಸಿದ್ದರು. ಜೀವ ಚೇತನ, ಪ್ರಜ್ಞೆ ಎನ್ನುವುದನ್ನು ಮೊದಲು ಭ್ರಮೆ ಎಂದರು. ಆನಂತರ ಅದು ಭ್ರಮೆ ಯಾಗಲು ಸಾಧ್ಯವಿಲ್ಲ ಎಂದಾಕ್ಷಣ, ಮೆದುಳು ಉತ್ಪಾದಿಸುವ ಫಲಿತಾಂಶ ಎಂದರು. ಹೇಗೆ ಬೆಂಕಿಯಿಂದ ಶಾಖ ಬರುತ್ತದೆಯೋ ಹಾಗೆ ಎಂದೆಲ್ಲ ಸಮಜಾಯಿಷಿ ಕೊಟ್ಟರು.

ಮೆದುಳಿನ ಸಂಪರ್ಕ ನಕ್ಷೆ ತಿಳಿದುಕೊಂಡುಬಿಟ್ಟರೆ ಪ್ರಜ್ಞೆಯ ರಹಸ್ಯವೂ ತಿಳಿದು ಬಿಡು ತ್ತದೆ ಎನ್ನುವುದು ವಾದ, ಪ್ರಯತ್ನವಾಗಿತ್ತು. ಇಲ್ಲಿ ಮಾಡಿದ್ದೆಲ್ಲ ತಪ್ಪು ಎನ್ನುತ್ತಿಲ್ಲ. ಅವರ ಮುಂದಿದ್ದ ಸಾಧ್ಯತೆಗಳಲ್ಲಿ ಇದೆಲ್ಲ ಹೀಗೆಯೇ ಗ್ರಹಿಸಬೇಕಾದ ಅನಿವಾರ್ಯತೆ ವಿಜ್ಞಾನಕ್ಕೆ ಇತ್ತು.

ಈಗ ಈ ನ್ಯೂರೋ ಪ್ಲಾಸ್ಟಿಸಿಟಿ - ಬದಲಾಗುವ ಸಂಪರ್ಕ ವ್ಯವಸ್ಥೆ, ಮೆದುಳಿನ ಚಿತ್ರಣ ತಂತ್ರಜ್ಞಾನ, ಅನಸ್ತೇಷಿಯಾ, ಸೈಕಾಡೆಲಿಕ್ಸ್ ಮೊದಲಾದ ಸಂಶೋಧನೆಗಳಿಂದ ಹಿಂದೆ ನಂಬಿ ನಿಂತಿದ್ದ ಸಿದ್ಧಾಂತಗಳೆಲ್ಲ ತಲೆಕೆಳಗಾಗಿವೆ. ಹಿಂದಿನ ನಂಬಿಕೆಯ ಪ್ರಕಾರ ಎಲ್ಲರೂ ಹುಟ್ಟುವಾಗಲೇ ಪೂರ್ವನಿಯೋಜಿತ ಮೆದುಳಿನ ಅಂರ್ತ ಸಂಪರ್ಕ ಹೊಂದಿ ಹುಟ್ಟುತ್ತಾರೆ ಎಂಬ ದೃಷ್ಟಿಕೋನವೇ ಈಗ ಬದಲಾಗಿದೆ.

ಸಾಮಾನ್ಯವಾಗಿ ವಿಜ್ಞಾನ ಜಗತ್ತಿನಲ್ಲಿ ಈ ರೀತಿ ದೃಷ್ಟಿಕೋನವೇ ಬದಲಾಗುವುದು ವಿರಳಾತಿ ವಿರಳ. ಯಾವುದೇ ಆವಿಷ್ಕಾರವನ್ನೇ ತೆಗೆದುಕೊಳ್ಳಿ, ಯಾವುದೇ ವಿಜ್ಞಾನದ ಗ್ರಹಿಕೆಯನ್ನೇ ತೆಗೆದುಕೊಳ್ಳಿ. ಅವೆಲ್ಲವೂ ಕಾಲ ಕಳೆದಂತೆ ಇನ್ನಷ್ಟು ಬೆಳೆಯುತ್ತ, ಅಭಿವೃದ್ಧಿ ಹೊಂದುತ್ತ ಸಾಗಿವೆ. ಆದರೆ ಮೆದುಳು ಮತ್ತು ಪ್ರಜ್ಞೆಯ ವಿಷಯದಲ್ಲಿ ಮಾತ್ರ ಹಾಗಾಗಿಲ್ಲ.

ಇಲ್ಲಿ ಪೂರ್ಣ ದೃಷ್ಟಿಕೋನವೇ ಬದಲಾಗಿದೆ. ಹಿಂದಿನ ಮೆದುಳು ಮತ್ತು ಪ್ರಜ್ಞೆಯ ವಾದ‌ ವನ್ನು ಮಾಡಿದ ವಿeನಿಗಳು ಈಗ ಮಾತಿಲ್ಲದೆ ಮೌನವಾಗಿದ್ದಾರೆ. ಹೊಸ ತಲೆಮಾರಿನ ವಿಜ್ಞಾನಿಗಳು ಹಿಂದಿನವರಂತೆ ಅಜ್ಜ ನೆಟ್ಟ ಆಲದಮರಕ್ಕೆ ಜೋತು ಬೀಳುತ್ತಿಲ್ಲ.

ವಿಜ್ಞಾನ ತನ್ನದೇ ಕೆಲವು ಮೂಢನಂಬಿಕೆಗಳಿಂದ ಹೊರಬರುತ್ತಿರುವುದು ತಡವಾದರೂ ಒಳ್ಳೆಯದು. ನಮ್ಮ ಸನಾತನ ವಿಚಾರಗಳಲ್ಲಿ, ಸಾಂಪ್ರದಾಯಿಕ ಹಿಂದೂ ತತ್ತ್ವಶಾಸ್ತ್ರದಲ್ಲಿ, ವೇದ - ಗ್ರಂಥಗಳಲ್ಲಿ ‘ಜ್ಞಾನ’ ಮತ್ತು ’ವಿಜ್ಞಾನ’ ಈ ಎರಡು ಶಬ್ದವನ್ನು ಬಹಳ ಜಾಗರೂಕ ತೆಯಿಂದ ಪ್ರತ್ಯೇಕಿಸಿ ಬಳಸುವುದನ್ನು ಕಾಣಬಹುದು.

ಅಲ್ಲಿ ಜ್ಞಾನವೇ ಬೆಳೆದು, ವಿಶೇಷವಾಗಿ ವಿಜ್ಞಾನವಾಗುವುದಲ್ಲ. ವಿಜ್ಞಾನ ಎನ್ನುವುದು ವಿಶೇಷ ಜ್ಞಾನ ಹೌದು - ಆದರೆ ನಮ್ಮ ಇಂದಿನ ಕಲ್ಪನೆಯ ಮಾಡರ್ನ್ ಸೈ ಅಲ್ಲ. ಅಲ್ಲಿ ‘ವಿಜ್ಞಾನ’ ಶಬ್ದದ ಅರ್ಥವೇ ಬೇರೆ - ನಾವು ವಿಜ್ಞಾನ ಶಬ್ದವನ್ನು ಇಂದು ಪರಿಭಾವಿಸುವ ರೀತಿಯೇ ಬೇರೆ. ಅಲ್ಲಿ ‘ಜ್ಞಾನ’ ಎಂದರೆ ಒಂದು ವಿಷಯದ ಬಗ್ಗೆ ತಿಳಿದುಕೊಳ್ಳುವುದು.

ಉದಾಹರಣೆಗೆ, ಬೆಂಕಿಯ ಬಗ್ಗೆ ಓದಿ, ಅದರ ಗುಣಗಳನ್ನು ಅರ್ಥಮಾಡಿಕೊಂಡು, ಇತರರಿಗೆ ಹೇಳಬಹುದು-ಅದು ಜ್ಞಾನ. ಆದರೆ ಅದರ ತಾಪವನ್ನು ನೇರವಾಗಿ ಅನುಭವಿಸುವುದು ಅಲ್ಲಿ ಹೇಳಿದ ವಿಜ್ಞಾನ’. ಉಪನಿಷತ್ತುಗಳು ಇದನ್ನು ಬಹಳ ಮಜವಾಗಿ, ಮತ್ತು ಅಷ್ಟೇ ನೇರವಾಗಿ ಹೇಳುತ್ತವೆ. ಅತಿ ಆಳವಾದ ಸತ್ಯವನ್ನು ಕೇವಲ ಚಿಂತನೆಯ ಮೂಲಕ ಅರಿತು ಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ ಆತ್ಮ (ಆತ್ಮನ್) ಎಂಬುದು ನಾವು ಅಧ್ಯಯನ ಮಾಡುವ ವಸ್ತುವಲ್ಲ-ಅದು ಅಧ್ಯಯನ ಮಾಡುವವನೇ.

ಇಲ್ಲಿ ಆತ್ಮ ಎನ್ನುವ ವಿವರಣೆ ಪಶ್ಚಿಮದ ಸೋಲ್ (soul) ಅಲ್ಲ. ಆತ್ಮನ್ ಎಂದರೆ ಪ್ರಜ್ಞೆ- ವಿಜ್ಞಾನ ಈಗ ಹೇಳುತ್ತಿರುವ consciousness. ಆದ್ದರಿಂದ ನಾವು ಅದರಿಂದ ಹೊರಗೆ ನಿಂತು ಅದನ್ನು ಪರೀಕ್ಷಿಸಲು ಸಾಧ್ಯವಿಲ್ಲ ! ಭಗವದ್ಗೀತೆಯಲ್ಲಿ ಕೃಷ್ಣ ಈ ವ್ಯತ್ಯಾಸವನ್ನು ಸ್ಪಷ್ಟವಾಗಿ ಹೇಳುತ್ತಾನೆ. ಅರ್ಜುನನಿಗೆ ಅನುಭವಸಹಿತ ಜ್ಞಾನವನ್ನು (ಜ್ಞಾನಂ ಸ ವಿಜ್ಞಾನಂ) ನೀಡುವುದಾಗಿ ಹೇಳುತ್ತಾನೆ.

ಅರ್ಥ ಸ್ಪಷ್ಟ: ಬೌದ್ಧಿಕ ಅರಿವು ಪೂರ್ಣವಾಗುವುದಿಲ್ಲ, ಅದು ನೇರ ಅನುಭವವಾಗಿ ರೂಪಾಂತರಗೊಂಡಾಗ ಮಾತ್ರ ಅದು ಸಂಪೂರ್ಣವಾಗುತ್ತದೆ. ತಲೆ, ಮಿದುಳು ಹೇಗೆ ಕೆಲಸಮಾಡುತ್ತದೆ ಎನ್ನುವುದು ಜ್ಞಾನ’. ಮನಸ್ಸಿನ ಆಚೆ ನಿಂತು ಅದರ ಮಂಗಾಟಗಳನ್ನು ಗ್ರಹಿಸುವುದು ವಿಜ್ಞಾನ’ !

ನಮ್ಮ ಪುರಾಣ ಗ್ರಂಥಗಳಲ್ಲಿ ಎಲ್ಲಿ ವಿಜ್ಞಾನ’ ಶಬ್ದ ಬಳಕೆಯಿದೆಯೋ ಅಲ್ಲ ಮನಸ್ಸು, ಧ್ಯಾನ, ಪ್ರಜ್ಞೆ ಇತ್ಯಾದಿಗಳಿಗೆ ಸಂಬಂಧಿಸಿದ್ದು ಎಂದು ತಿಳಿಯಬಹುದು. ಉದಾಹರಣೆಗೆ - ಕಾಶ್ಮೀರಿ ಶೈವ ಪರಂಪರೆಯ 112 ಧ್ಯಾನ ರೀತಿಯ ಹೆಸರು - ವಿಜ್ಞಾನ ಭೈರವ ತಂತ್ರ’. ಪ್ರಜ್ಞೆ - (consciousness) ಅನ್ನು ಗ್ರಹಿಸುವ ಭೈರವ ಹೇಳಿದ ತಂತ್ರಗಳು. ಇವೆಲ್ಲ ಹೇಳಿದ್ದು, ಇದೆಲ್ಲ ಭಾರತದಲ್ಲಿ ಯಾವತ್ತೋ ಇತ್ತು, ಇಂದಿನ ಆಧುನಿಕ ವಿಜ್ಞಾನ’ ಹೇಳುವ ಇದೆಲ್ಲ ನಮಗೆ ಯಾವತ್ತೋ ಗೊತ್ತಿತ್ತು ಎಂದು ಹೇಳಲಿಕ್ಕಲ್ಲ.

ಅದೆಲ್ಲದರಿಂದ ಕವಡೆ ಕಾಸಿನ ಲಾಭ ನಮಗೆ ಇಲ್ಲ. ಆಧುನಿಕ ವಿಜ್ಞಾನವನ್ನು ಸಣ್ಣದಾಗಿ ಕಾಣುವುದು ಇಲ್ಲಿಯ ಉದ್ದೇಶವೇ ಅಲ್ಲ. ಮನುಷ್ಯನ ಯಾವ ಕಾಲದ, ಯಾವ ಜಾಗದ ಆವಿಷ್ಕಾರಗಳೂ ಸಣ್ಣ ಸಾಮಾನ್ಯದವಲ್ಲ. ಮೆದುಳೇ ಸೂಕ್ಷ್ಮ, ಇನ್ನು ಅದರ ನರಗಳು, ಅವುಗಳು ಮಿಡಿಯುವ ಎಲೆಕ್ಟ್ರಿಕ್ ಸಂಹವನಗಳು ಇವನ್ನೆಲ್ಲ ಅಭ್ಯಾಸ ಮಾಡುವುದು ಸಣ್ಣ ವಿಷಯವೇನ್ರಿ? ಅಲ್ಲವೇ ಅಲ್ಲ. ಇಲ್ಲಿ ಗ್ರಹಿಸಬೇಕಾದದ್ದು ಇಷ್ಟೆ - ಈ ವಿಷಯದಲ್ಲಿ ಆಧುನಿಕ ವಿಜ್ಞಾನ ತನ್ನ ನಿಲುವನ್ನು ಬದಲಿಸಿಕೊಂಡಿದೆ, ಇನ್ನಷ್ಟು ತೆರೆದುಕೊಳ್ಳುತ್ತಿದೆ.

ಪಾಶ್ಚಾತ್ಯ ವಿಜ್ಞಾನಿಗಳು ಹಿಮಾಲಯ, ಟಿಬೆಟ್ ಅಲ್ಲಿಂದೆಲ್ಲ ಸನ್ಯಾಸಿಗಳನ್ನು, ಬುದ್ಧ ಬಿಕ್ಕುಗಳ ಮೆದುಳನ್ನು ಈ ಹೊಸ ತಂತ್ರಜ್ಞಾನದ ಅಡಿಯಲ್ಲಿ ಅಭ್ಯಾಸ ಮಾಡಲು ವಿಮಾನ ಟಿಕೆಟ್ ಕರೆಸಿಕೊಳ್ಳುತ್ತಿದ್ದಾರೆ.

ಇತ್ತೀಚೆ ಸನ್ಯಾಸಿ ಮಿಂಗ್ಯುರ್ ರೆಂಪೋಚೆ (Mingyur Rinpoche), ಶ್ರೀ. ಓಂ ಸ್ವಾಮಿ ಮೊದಲಾದ ಈ ತಲೆಮಾರಿನ ಸಾಧಕರು ಧ್ಯಾನದ ಮೂಲಕ ಮೆದುಳಿನ ಚಟುವಟಿಕೆ ಯನ್ನು ಮತ್ತು ಸಂಪರ್ಕಗಳನ್ನು ಬಯಸಿದಂತೆ ಬದಲಿಸಬಲ್ಲರು ಎನ್ನುವುದು ಈಗ ಪ್ರಾಯೋಗಿಕವಾಗಿ ದೃಢವಾಗಿದೆ.

ನಾವೆಲ್ಲರೂ ಆಧುನಿಕ ವಿಜ್ಞಾನವನ್ನು ಪಠ್ಯವಾಗಿ ಕಲಿತು ಬೆಳೆದವರು. ಹಾಗಾಗಿ ಆ ಸೈನ ಜೊತೆಯಲ್ಲಿ ಕೆಲವು ನಂಬಿಕೆಗಳು ಸಹಜವಾಗಿ ಬಂದಿವೆ. ಈಗ ಆ ನಂಬಿಕೆಗಳನ್ನು ವಿಜ್ಞಾನ ಬದಲಿಸಿಕೊಂಡಿದೆ. ನಾವು ನಮ್ಮ ವಿಜ್ಞಾನವನ್ನು ಸರಿಮಾಡಿಕೊಳ್ಳದಿದ್ದಲ್ಲಿ ನಾವು ವಿಜ್ಞಾನದ ಹಿಂದಿನ ಮೂಢನಂಬಿಕೆಯಲ್ಲಿಯೇ ಉಳಿದು ಹೋಗುತ್ತೇವೆ.

ಶಿಶಿರ್‌ ಹೆಗಡೆ

View all posts by this author