ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ramanand Sharma Column: ಸ್ಮಾರ್ಟ್ʼಫೋನ್ ಬಳಕೆಯ ನಿಯಂತ್ರಣ ಕಾರ್ಯಸಾಧ್ಯವೇ ?

ಒಂದು ಆವಿಷ್ಕಾರ/ಉತ್ಪನ್ನವು ಹೊಸದಾಗಿ ಅನಾವರಣಗೊಂಡು ಬಳಕೆದಾರರ ಮೆಚ್ಚುಗೆ ಯನ್ನು ಪಡೆಯುವಲ್ಲಿ ಯಶಸ್ವಿಯಾದರೆ, ಅದು ಕಾಲಕ್ರಮೇಣ ಬಳಕೆದಾರನ ಸಂಗಾತಿ ಯಾಗುತ್ತದೆ. ಅದರಲ್ಲೂ ಅದು ಬಳಕೆದಾರರ ದಿನನಿತ್ಯದ ಬದುಕಿಗೆ ಆಸರೆಯಾಗಿ ಜತೆಗೆ ಮನರಂಜನೆಯನ್ನೂ ನೀಡುತ್ತಿದ್ದರೆ, ತ್ವರಿತವಾಗಿ ಅದರ ಬಳಕೆಯು ಹವ್ಯಾಸವಾಗಿ, ಕೊನೆ ಗೊಮ್ಮೆ ಅರೆಕ್ಷಣವೂ ಬಿಟ್ಟಿರಲಾರದ ಸಂಗಾತಿಯಾಗಿ ಮಾರ್ಪಡುತ್ತದೆ.

ಯಕ್ಷ ಪ್ರಶ್ನೆ

ರಮಾನಂದ ಶರ್ಮಾ

ಹದಿನಾರು ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಸ್ಮಾರ್ಟ್ʼಫೋನ್/ಸಾಮಾಜಿಕ ಜಾಲತಾಣದ ಬಳಕೆಯನ್ನು ನಿಷೇಧಿಸಲು/ನಿಯಂತ್ರಿಸಲು ಚಿಂತನೆ ನಡೆಸಿರುವ ರಾಜ್ಯ ಸರಕಾರವು ಇದಕ್ಕೆ ಪೂರಕವಾಗಿ ‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಎಂಬ ಅಭಿಯಾನವನ್ನು ರೂಪಿಸು ತ್ತಿದೆಯಂತೆ. ಆಂಧ್ರ ಮತ್ತು ಗೋವಾ ರಾಜ್ಯಗಳು ಕೂಡ ಈ ನಿಟ್ಟಿನಲ್ಲಿ ಆಲೋಚಿಸುತ್ತಿವೆ ಯಂತೆ. ಈ ವಿಚಾರಧಾರೆಯು ಇನ್ನಿತರ ರಾಜ್ಯಗಳಿಗೂ ಸಮೂಹ ಸನ್ನಿಯಂತೆ ಹಬ್ಬಿದರೆ ಅಚ್ಚರಿಯೇ ನಿಲ್ಲ.

ಆಸ್ಟ್ರೇಲಿಯಾ, ಸ್ಪೇನ್, ಮಲೇಷ್ಯಾ, ಫ್ರಾನ್ಸ್ ಮತ್ತು ನಾರ್ವೆ ದೇಶಗಳಲ್ಲಿ ಇತ್ತೀಚೆಗೆ ಇಂಥ ನಿಯಂತ್ರಣ ಜಾರಿಗೆ ಬಂದಿದೆ; ಆದರೆ ಅವು ನಿಷೇಧ/ನಿಯಂತ್ರಣವನ್ನು ಯಾವ ರೀತಿಯಲ್ಲಿ ಜಾರಿಗೊಳಿಸಿವೆ ಎಂಬುದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯಿಲ್ಲ.

ಅಮೆರಿಕ, ಡೆನ್ಮಾರ್ಕ್ ಮತ್ತು ಗ್ರೀಸ್ ದೇಶಗಳಲ್ಲೂ ಇಂಥ ಚಿಂತನೆ ನಡೆದಿದೆಯಂತೆ. ಚೀನಾದಲ್ಲಿ ಮಕ್ಕಳಿಗೆ ಮೊಬೈಲ್ ನೀಡಲು ಪೋಷಕರ ಅನುಮತಿ ಕಡ್ಡಾಯವಾದರೆ, ಇಂಗ್ಲೆಂಡ್‌ನಲ್ಲಿ ಸ್ವಯಂಪ್ರೇರಿತ ನಿಷೇಧವನ್ನು ಹೇರಲಾಗಿದೆಯಂತೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ನಿಷೇಧ ಮತ್ತು ನಿಯಂತ್ರಣಗಳ ಅನುಷ್ಠಾನದ ಪರಿ ಹಾಗೂ ಅದರ ಫಲಶ್ರುತಿಗಳನ್ನು ಕುತೂಹಲದಿಂದ ನಿರೀಕ್ಷಿಸಲಾಗುತ್ತಿದ್ದು, ಒಂದೊಮ್ಮೆ ಅವು ಪರಿಣಾಮಕಾರಿಯಾಗಿ ಕಂಡುಬಂದರೆ ಇದೊಂದು ಜಾಗತಿಕ ಅಭಿಯಾನ ವಾಗಬಹುದು.

ಒಂದು ಆವಿಷ್ಕಾರ/ಉತ್ಪನ್ನವು ಹೊಸದಾಗಿ ಅನಾವರಣಗೊಂಡು ಬಳಕೆದಾರರ ಮೆಚ್ಚುಗೆ ಯನ್ನು ಪಡೆಯುವಲ್ಲಿ ಯಶಸ್ವಿಯಾದರೆ, ಅದು ಕಾಲಕ್ರಮೇಣ ಬಳಕೆದಾರನ ಸಂಗಾತಿ ಯಾಗುತ್ತದೆ. ಅದರಲ್ಲೂ ಅದು ಬಳಕೆದಾರರ ದಿನನಿತ್ಯದ ಬದುಕಿಗೆ ಆಸರೆಯಾಗಿ ಜತೆಗೆ ಮನರಂಜನೆಯನ್ನೂ ನೀಡುತ್ತಿದ್ದರೆ, ತ್ವರಿತವಾಗಿ ಅದರ ಬಳಕೆಯು ಹವ್ಯಾಸವಾಗಿ, ಕೊನೆಗೊಮ್ಮೆ ಅರೆಕ್ಷಣವೂ ಬಿಟ್ಟಿರಲಾರದ ಸಂಗಾತಿಯಾಗಿ ಮಾರ್ಪಡುತ್ತದೆ.

ಇದನ್ನೂ ಓದಿ: Ramanand Sharma Column: ಬದಲಾವಣೆಯ ಪರ್ವದಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆ

ಟ್ರಾನ್ಸಿಸ್ಟರ್, ಪಾಕೆಟ್ ರೇಡಿಯೋ, ಗ್ರಾಮಾಫೋನ್, ‘ಟು-ಇನ್-ಒನ್’ ಟೇಪ್ ರೆಕಾರ್ಡರ್, ವಿಸಿಆರ್ ಮುಂತಾದ ಸಾಧನಗಳು ಕಳೆದ 5 ದಶಕಗಳಲ್ಲಿ ಮಾಡಿದ ಹಾವಳಿಯು ಇನ್ನೂ ನೆನಪಿನಾಳದಲ್ಲಿದೆ. ಈ ಸಾಲಿಗೆ ಇತ್ತೀಚಿನ ಸೇರ್ಪಡೆ ಮೊಬೈಲ್ ಫೊನ್, ಇನ್ನೂ ಸ್ಪಷ್ಟವಾಗಿ ಹೇಳುವುದಿದ್ದರೆ ಸ್ಮಾರ್ಟ್ʼಫೋನ್.

ಇವು ಸಾಮಾಜಿಕ ಜಾಲತಾಣಗಳ ವಾಹಕಗಳು. ರೈತ ಮಕ್ಕಳು ನೇಗಿಲತುದಿಗೆ ಟ್ರಾನ್ಸಿಸ್ಟರ್ ಅನ್ನು ನೇತು ಹಾಕಿಕೊಂಡು ಹೊಲವನ್ನು ಉಳುತ್ತಿರಲಿಲ್ಲವೇ? ವಿದ್ಯಾರ್ಥಿಗಳು ತರಗತಿಯ ಕೊನೆಯ ಬೆಂಚಿನಲ್ಲಿ ಕುಳಿತು ಕ್ರಿಕೆಟ್ ಕಾಮೆಂಟರಿಯನ್ನು ಕೇಳುತ್ತಿರಲಿಲ್ಲವೇ? ಆಕಾಶ ವಾಣಿಯವರು ‘ಶುಭರಾತ್ರಿ’ ಹೇಳಿ ಮನೆಗೆ ತೆರಳುವ ತಡರಾತ್ರಿಯವರೆಗೆ ರೇಡಿಯೋಗೇ ಅಂಟಿಕೊಂಡಿರುತ್ತಿದ್ದ ಮಹಾನುಭಾವರನ್ನು ನೀವು ನೋಡಿಲ್ಲವೇ? ಅಷ್ಟೇಕೆ, ಟಿವಿ ಧಾರಾವಾಹಿಗಳು ಮಹಿಳೆಯರ ಬದುಕಿನ ವೈಖರಿಯನ್ನೇ ಬದಲಿಸಿದ, ‘ಮೂವಿ-ಮ್ಯೂಸಿಕ್-ಕ್ರೀಡಾ’ ಚಾನೆಲ್‌ಗಳು ವಿದ್ಯಾರ್ಥಿಗಳ ಮತ್ತು ಯುವಜನರ ಬದುಕಿನ ಅಮೂಲ್ಯ ಸಮಯ ವನ್ನೇ ಕೊಳ್ಳೆ ಹೊಡೆದ ನಿದರ್ಶನಗಳನ್ನು ಬಿಡಿಸಿ ಹೇಳಬೇಕಾಗಿಲ್ಲ.

ಆದರೆ, ಈ ಸ್ಮಾರ್ಟ್ʼಫೋನ್‌ಗಳು ಅಥವಾ ಸಾಮಾಜಿಕ ಜಾಲತಾಣಗಳ ವೀಕ್ಷಣೆಯು ಸೃಷ್ಟಿಸಿರುವಷ್ಟು ಸಮಸ್ಯೆಯನ್ನು, ಉಂಟುಮಾಡಿರುವ ಕೌಟುಂಬಿಕ ಕ್ಷೋಭೆ, ರಾದ್ಧಾಂತ ಮತ್ತು ಸಾಮಾಜಿಕ ವ್ಯಾಕುಲತೆಯನ್ನು ಮೇಲೆ ವಿವರಿಸಲಾಗಿರುವ ಮಿಕ್ಕಾವ ಸಾಧನ-ಸಂದರ್ಭಗಳೂ ಸೃಷ್ಟಿಸಿರಲಿಲ್ಲ ಎಂಬುದಂತೂ ನಿಜ.

Screenshot_3 ಋ

ಯಾವುದೇ ಆವಿಷ್ಕಾರ ಅಥವಾ ಸಾಧನವನ್ನು ಅವಶ್ಯಕತೆಗೆ ಅನುಗುಣವಾಗಿ ಒಂದು ಮಿತಿಯಲ್ಲಿ ಹಾಗೂ ಸದುದ್ದೇಶಕ್ಕೆ ಬಳಸಿದರೆ ಸಮಸ್ಯೆಯೇನೂ ಇರುವುದಿಲ್ಲ. ಇಂಥ ಆವಿಷ್ಕಾರ ಅಥವಾ ಸಾಧನಗಳನ್ನು ಅನಾವರಣಗೊಳಿಸುವಾಗ ಅದರ ಹಿಂದೆ ಒಂದು ಘನ ಉದ್ದೇಶ ಇರುತ್ತದೆ. ಆದರೆ, ಸದುದ್ದೇಶಗಳು ಮೂಲೆಗುಂಪಾಗಿ ದುರುದ್ದೇಶಗಳು ಮುನ್ನೆಲೆಗೆ ಬಂದು ಆಟವಾಡಲು ಶುರುಹಚ್ಚಿಕೊಂಡಾಗ, ಅವಾಂತರಗಳು ಸಂಭವಿಸುತ್ತವೆ. ಈಗ ನಡೆದಿರುವುದೂ ಅದೇ!

ಬೇಸಿಕ್ ಮೊಬೈಲ್ ಫೋನುಗಳು ದಾಂಗುಡಿಯಿಟ್ಟಾಗ ‘ತ್ವರಿತ ಸಂಪರ್ಕ’ ಎಂಬುದು ಅದರ ಮೂಲ ಉದ್ದೇಶವಾಗಿತ್ತು. ಕಾಲಕ್ರಮೇಣ ಅದರ ಮೂಲಕ ಸಂದೇಶವನ್ನು ಕಳಿಸುವುದು, ಫೋಟೋಗಳನ್ನು ಕ್ಲಿಕ್ಕಿಸುವುದು ಮತ್ತು ಇನ್ನೊಬ್ಬರಿಗೆ ರವಾನಿಸುವುದು ಶುರುವಾದವು.

ಸ್ಮಾರ್ಟ್ʼಫೋನ್‌ಗಳ ಆಗಮನವಾಗುತ್ತಿದ್ದಂತೆ ಬಳಕೆಯ ವ್ಯಾಪ್ತಿಯೂ ವಿಸ್ತರಿಸಿಕೊಂಡು ಧಾರಾವಾಹಿಗಳು, ಸುದ್ದಿಗಳನ್ನು ವೀಕ್ಷಿಸುವ ಪರಿಪಾಠ ಈ ಫೋನುಗಳೆಡೆಗೆ ತಿರುಗಿ ಕೊಂಡಿತು. ಸಾಲದೆಂಬಂತೆ, ಚಲನಚಿತ್ರ, ಚಿತ್ರಗೀತೆ, ಭಾಷಣಗಳ ವೀಕ್ಷಣೆ, ಸಂಗೀತವನ್ನು ಆಲಿಸುವಿಕೆ, ವಿಭಿನ್ನ ಅಂತರ್ಜಾಲ ವೇದಿಕೆಗಳಲ್ಲಿ ಮಾಹಿತಿಗಳನ್ನು ತಡಕಾಡುವಿಕೆ ಮುಂತಾದ ಅಭ್ಯಾಸಗಳು ಶುರುವಾದವು. ಒಟ್ಟಿನಲ್ಲಿ, ಅಂಗೈಯಲ್ಲೇ ಜಗತ್ತನ್ನು ತುಂಬಿಸಿ ಬಿಡುವ ಆಧುನಿಕ ಸರ್ವಜ್ಞ ಎಂಬ ಅಭಿದಾನವನ್ನು ಪಡೆದುಕೊಂಡು ಬಿಟ್ಟಿತು ಸ್ಮಾರ್ಟ್‌ʼ ಫೋನು. ಹೀಗೆ ನಿತ್ಯಬದುಕಿಗೆ ಬೆರಳ ತುದಿಯಲ್ಲಿನ ಕೈಪಿಡಿಯಾಗಿರುವ ಸ್ಮಾರ್ಟ್ʼ ಫೋನು ಗಳು ವಿದ್ಯಾರ್ಥಿಗಳ ಕಿಸೆಯನ್ನೇ ಸೇರಿರುವುದರಲ್ಲಿ ಅಚ್ಚರಿಯೇನಿಲ್ಲ!

ಅದರಲ್ಲೂ ನಿರ್ದಿಷ್ಟವಾಗಿ ಕೋವಿಡ್ ಮಹಾಮಾರಿ ಅಪ್ಪಳಿಸಿದ ಸಂದರ್ಭದಲ್ಲಿ ಸಾಮಾ ಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ‘ತರಗತಿಯ ನಿಯತ ಪಾಠ’ವು ದುಸ್ತರವಾದಾಗ ಮತ್ತು ಅದಕ್ಕೆ ಪರಿಹಾರೋಪಾಯ ಎಂಬಂತೆ ‘ಆನ್‌ಲೈನ್ ಪಾಠ’ದ ವ್ಯವಸ್ಥೆ ಮುನ್ನೆಲೆಗೆ ಬಂದಾಗ, ಬಡವ-ಬಲ್ಲಿದ ಎನ್ನದೆ ಪ್ರತಿಯೊಬ್ಬ ವಿದ್ಯಾರ್ಥಿ ಯ ಕೈಯಲ್ಲೂ ಸ್ಮಾರ್ಟ್ʼಫೋನ್ ವಿಜೃಂಭಿಸುವಂತಾಯಿತು.

ಆದರೆ, ಒಂದು ಘನ ಉದ್ದೇಶಕ್ಕಾಗಿ ಜಾರಿಗೆ ತಂದ ವ್ಯವಸ್ಥೆಯೊಂದು, ವಿದ್ಯಾರ್ಥಿಗಳು ತಮ್ಮ ‘ಪ್ರಧಾನ ಚಟುವಟಿಕೆ’ಗಳನ್ನೇ ಕೈಬಿಟ್ಟು, ಮೊಬೈಲ್‌ನಲ್ಲೇ ಮುಳುಗಿ ಬಿಡುವಂಥ ಪರಿಸ್ಥಿತಿ ಯನ್ನು ಹುಟ್ಟುಹಾಕಿದ್ದು ವಿಪರ್ಯಾಸ! ಹೀಗೆ ಸ್ಮಾರ್ಟ್'ಫೋನ್‌ಗಳ ದಾಸರಾಗಿರುವ ಮಕ್ಕಳ ಪಾಲಕರು/ಪೋಷಕರು ಈಗ ನಿದ್ರೆಗೆಡುವಂತಾಗಿದೆ.

ಕಾರಣ, ತಮ್ಮ ಮಕ್ಕಳ ವಿದ್ಯಾಭ್ಯಾಸ ಹಾಗೂ ಭವಿಷ್ಯದ ಬಗ್ಗೆ ಅವರು ಚಿಂತಾಕ್ರಾಂತ ರಾಗುವಂತಾಗಿದೆ. ಕೆಲವೇ ವರ್ಷಗಳ ಹಿಂದೆ, “ನಮ್ಮ ಮಕ್ಕಳು ಬರೀ ಕ್ರಿಕೆಟ್ ಆಡುತ್ತಾರೆ, ಟಿವಿ ನೋಡುತ್ತಾರೆ, ಹೊರಗಡೆ ಸುತ್ತಾಡುತ್ತಾರೆಯೇ ಹೊರತು ಪಠ್ಯಪುಸ್ತಕದ ಓದಿನ ಕಡೆಗೆ ಅವರಿಗೆ ಗಮನವಿಲ್ಲ, ಶ್ರದ್ಧೆಯೂ ಇಲ್ಲ" ಎನ್ನುತ್ತಿದ್ದ ಪೋಷಕರು ಈಗ, “ನಮ್ಮ ಮಕ್ಕಳು ಮೊಬೈಲ್ ಫೊನಿನ ಗುಂಗಿನಿಂದ ಹೊರಗೇ ಬರುತ್ತಿಲ್ಲ" ಎಂದು ಅವರಿವರ ಬಳಿ ಅಳಲನ್ನು ತೋಡಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ.

ಇದು ಒಬ್ಬಿಬ್ಬರ ಅಳಲು ಅಲ್ಲ, ಬದಲಿಗೆ ಮನೆಮನೆಯ ಕಥೆ! ಶಾಲಾ ಮಕ್ಕಳ ‘ಸ್ಮಾರ್ಟ್ʼ ಫೋನ್ ಅಡಿಕ್ಷನ್’‌ ಅದೆಷ್ಟು ತೀವ್ರವಾಗಿದೆಯೆಂದರೆ, ಹೆತ್ತವರು ಮೊಬೈಲ್ ಫೋನನ್ನು ಕೊಡಿಸಿಲ್ಲ ಎಂಬ ಕಾರಣಕ್ಕೆ ಜೀವಕ್ಕೇ ಆಪಾಯ ಉಂಟು ಮಾಡಿಕೊಳ್ಳುವವರೆಗೂ ತಲುಪಿದ ಮಕ್ಕಳಿದ್ದಾರೆ.

ಇದು ನಿಜಕ್ಕೂ ದುರಂತವೇ ಸರಿ. ಮಕ್ಕಳ ಹೆಚ್ಚುವರಿ ಶಿಕ್ಷಣ/ಟ್ಯೂಷನ್ ಸೇರಿದಂತೆ ವಿವಿಧ ಬಾಬತ್ತುಗಳಿಗೆ ಮತ್ತು ಕಾರ್ಯಕ್ಷೇತ್ರದ ವಿಭಿನ್ನ ಅವಶ್ಯಕತೆಗಳಿಗೆ ತಂತ್ರಜ್ಞಾನದ ಅವಲಂಬನೆಯೇ ಮುಖ್ಯವಾಗಿರುವ ಇಂದಿನ ದೈನಂದಿನ ಬದುಕಿನಲ್ಲಿ ಸ್ಮಾರ್ಟ್ʼಫೋನಿನ ಅನಿವಾರ್ಯತೆ ಪ್ರಶ್ನಾತೀತ. ಆದರೆ, ಮಕ್ಕಳು ಸ್ಮಾರ್ಟ್ʼಫೋನಿನಲ್ಲೇ ಮುಳುಗಿ ಹೋಗಿ, ಮಿತಿಮೀರಿ ಸ್ಕ್ರೀನ್‌ಟೈಮ್ ಅನ್ನು ಬಳಕೆ ಮಾಡುವುದು ಅವರ ಕಲಿಕಾ ಆಸಕ್ತಿಗೆ ಮತ್ತು ಏಕಾಗ್ರತೆಗೆ ಧಕ್ಕೆಯುಂಟುಮಾಡುತ್ತದೆ.

ತನ್ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ಮಾರಕವಾಗುತ್ತದೆ. ಹೀಗಾಗಿ, ಮಕ್ಕಳ ಶೈಕ್ಷಣಿಕ ಬದುಕು, ಭವಿಷ್ಯ, ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರವು ಕೊಂಚ ವಿಳಂಬವಾದರೂ ಶ್ಲಾಘನೀಯ ಕ್ರಮವನ್ನು ಕೈಗೊಳ್ಳುತ್ತಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಬಹುತೇಕ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆಗೆ ನಿರ್ಬಂಧವಿದ್ದರೂ, ಅದೊಂದು ರೀತಿಯಲ್ಲಿ ಕಪ್ಪೆಯನ್ನು ಹಿಡಿದು ಕೊಳಗಕ್ಕೆ ತುಂಬಿದಂತಾಗಿದ್ದು ಪರಿಣಾಮಕಾರಿ ಯಾಗಿಲ್ಲ ಎನ್ನುತ್ತಾರೆ ಹಲವರು.

ಸ್ಮಾಟ್ ಫೋನುಗಳನ್ನು ‘ಶೈಕ್ಷಣಿಕ ಉದ್ದೇಶಕ್ಕಾಗಿ’ ತೆರೆದು ನೋಡುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದ್ದರೆ, ಸಾಮಾಜಿಕ ಜಾಲತಾಣಗಳನ್ನು ಜಾಲಾಡಲು ಬಳಸುವವರ ಸಂಖ್ಯೆಯೇ ಹೆಚ್ಚಿರುವಂತಿದೆ. ವರದಿಯೊಂದರ ಪ್ರಕಾರ ಭಾರತದಲ್ಲಿ 16 ವರ್ಷದೊಳಗಿನ ವಿದ್ಯಾರ್ಥಿಗಳು ದಿನಾಲೂ ಸರಾಸರಿ 4 ಗಂಟೆಗಿಂತ ಹೆಚ್ಚು ಕಾಲ ಸ್ಮಾರ್ಟ್ʼಫೋನ್ ವೀಕ್ಷಣೆ ಯಲ್ಲಿ ಮುಳುಗಿರುತ್ತಾರಂತೆ; ಈ ವೀಕ್ಷಣೆಯಲ್ಲಿ ವಿಡಿಯೋ, ರೀಲ್ಸ್, ಗೇಮಿಂಗ್, ಸಿನಿಮಾ ಗಳು ಮತ್ತು ಕ್ರೀಡಾ ವಿಡಿಯೋಗಳು ಇರುತ್ತವೆಯಂತೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಯನದ ಪ್ರಕಾರ, 10ರ ವಯೋ ಮಾನದ ಮಕ್ಕಳಲ್ಲಿ ಶೇ.37.08ರಷ್ಟು ಮಂದಿ ಫೇಸ್ ಬುಕ್ ಖಾತೆಯನ್ನೂ, ಶೇ.24.30ರಷ್ಟು ಮಕ್ಕಳು ಇನ್‌ಸ್ಟಾಗ್ರಾಂ ಖಾತೆಯನ್ನೂ ಹೊಂದಿದ್ದಾರಂತೆ! ಗಾಬರಿಗೊಳಿಸುವ ಈ ಅಂಕಿ-ಅಂಶಗಳೇ ಸರಕಾರವು ಮಕ್ಕಳ ಮೊಬೈಲ್ ಬಳಕೆಗೆ ಅಂಕುಶ ಹಾಕುವ ನಿಟ್ಟಿನಲ್ಲಿ ಪ್ರೇರೇಪಿಸಿರಬೇಕು ಎನ್ನಲಾಗುತ್ತದೆ.

16 ವರ್ಷದೊಳಗಿನ ಮಕ್ಕಳು ಸ್ಮಾರ್ಟ್ʼಫೋನ್ ಬಳಸುವುದನ್ನು ಸರಕಾರವು ನಿಷೇಧಿಸು ತ್ತದೆಯೋ ಅಥವಾ ನಿಯಂತ್ರಿಸುತ್ತದೆಯೋ ಎಂಬ ವಿಚಾರದಲ್ಲಿ ಗೊಂದಲವಿದೆ. ಮಕ್ಕಳ ಓದಿಗೆ ಇರುವ ಅಡ್ಡಿಯನ್ನು ತಪ್ಪಿಸಲು, ಅವರ ಗಮನವು ‘ಬೇರೆಡೆಗೆ’ ತಿರುಗದಂತೆ ಮಾಡಲು ಇಂಥ ಯಾವುದಾದರೊಂದು ಕ್ರಮದ ಅಗತ್ಯವಿದೆ ಎಂಬುದೇನೋ ಖರೆ.

‘ಸೈಬರ್ ಬುಲ್ಲಿಯಿಂಗ್’ ಅನ್ನು ಪರಿಶೀಲಿಸಲು, ಅಪರಿಚಿತ ವ್ಯಕ್ತಿಗಳ ಸಂಪರ್ಕವನ್ನು ತಡೆಯಲು, ಸೈಬರ್ ಅಪರಾಧಗಳನ್ನು ತಪ್ಪಿಸಲು, ವ್ಯಸನಗಳಿಂದ ದೂರವಿರಿಸಲು, ಮಕ್ಕಳ ವಯೋಸಹಜ ಶಿಸ್ತನ್ನು ಕಾಪಾಡಲು, ತಡರಾತ್ರಿಯವರೆಗಿನ ಸ್ಮಾರ್ಟ್ʼಫೋನ್ ವೀಕ್ಷಣೆ ಯಿಂದ ಮಕ್ಕಳಲ್ಲಿ ಉಂಟಾಗುತ್ತಿರುವ ನಿದ್ರಾಹೀನತೆಯನ್ನು ತಪ್ಪಿಸಲು ಇಂಥ ನಿಯಂತ್ರಣ ಅಥವಾ ನಿಷೇಧದ ಅಗತ್ಯವಿದೆ ಎನ್ನಲಾಗುತ್ತದೆ.

ಅಷ್ಟೇಕೆ, ಮಕ್ಕಳು ಸಾಮಾಜಿಕ ವ್ಯವಸ್ಥೆಯಲ್ಲಿ ಜನರೊಂದಿಗಿನ ನೇರಭೇಟಿ ಮತ್ತು ಸಂಭಾ ಷಣೆಗೆ ಒಡ್ಡಿಕೊಳ್ಳುವ ಪರಿಪಾಠವೇ ಕುಸಿಯುತ್ತಿದ್ದು, ಇದನ್ನು ತಪ್ಪಿಸಲು ಮಕ್ಕಳ ಸ್ಮಾರ್ಟ್ʼ ಫೋನ್ ಬಳಕೆಯನ್ನು ನಿಷೇಧಿಸುವುದು/ನಿಯಂತ್ರಿಸುವುದು ಅವಶ್ಯ ಎನ್ನುತ್ತಾರೆ ಬಲ್ಲವರು.

ಆದರೆ, ‘ಹೀಗೆ ನಿಷೇಧಿಸಿದರೆ ತುರ್ತು ಸಂದರ್ಭದಲ್ಲಿ ಮಕ್ಕಳ ಜತೆಗಿನ ಸಂವಹನ ದುಸ್ತರ ವಾಗುತ್ತದೆ ಮತ್ತು ಅವರ ಆನ್‌ಲೈನ್ ಅಧ್ಯಯನಕ್ಕೆ ಅಡಚಣೆಯಾಗುತ್ತದೆ’ ಎಂಬ ಕಾರಣ ವನ್ನೂ ನೀಡುವವರಿದ್ದಾರೆ. ಜತೆಗೆ, ಸ್ಮಾರ್ಟ್‌ʼಫೋನ್‌ನಲ್ಲಿ ಗೂಗಲ್ ಮೂಲಕ ಹರಿದು ಬರುವ ‘ಜ್ಞಾನಗಂಗೆ’ಯನ್ನು ನಿಲ್ಲಿಸುವುದು ಸರಿಯಲ್ಲ ಎಂಬ ಅಭಿಪ್ರಾಯವೂ ಇದೆ.

ನಮ್ಮ ದೇಶದಲ್ಲಿ ಹೆಂಡ-ಸಾರಾಯಿ, ಗುಟ್ಕಾ, ಬೀಡಿ-ಸಿಗರೇಟು ಮುಂತಾದವುಗಳ ಸೇವನೆ, ಪ್ಲಾಸ್ಟಿಕ್, ವರದಕ್ಷಿಣಿ, ಲಂಚ ಮುಂತಾದ ಅಪಸವ್ಯಗಳಿಗೆ ಹೇರಲಾದ ನಿರ್ಬಂಧ/ನಿಷೇಧ ಮತ್ತು ತರುವಾಯದಲ್ಲಿ ಅದಕ್ಕೆ ಒದಗಿರುವ ಸ್ಥಿತಿಯನ್ನು ನೋಡಿದವರು, ‘ಸ್ಮಾರ್ಟ್ʼ ಫೋನ್ ನಿಷೇಧ/ನಿಯಂತ್ರಣ’ವೂ ಅದೇ ಹಾದಿಯನ್ನು ಹಿಡಿಯಬಹುದು ಎಂದು ಸಂದೇಹಿಸುತ್ತಾರೆ. ಅದಕ್ಕೂ ಮಿಗಿಲಾಗಿ, ಮೂಲಭೂತ ಹಕ್ಕುಗಳ ರಕ್ಷಕರು, ‘ಇಂಥ ನಿಷೇಧದಿಂದ ನಮ್ಮ ಹಕ್ಕಿಗೆ ಚ್ಯುತಿಯಾಗುತ್ತದೆ’ ಎಂದು ಹೇಳಿ ಕೋರ್ಟ್ ಮೆಟ್ಟಿಲು ಹತ್ತುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು.

ಇದರ ಬದಲಿಗೆ ‘ನಿಯಂತ್ರಿತ ಬಳಕೆ’ಯನ್ನು ಕೆಲವರು ಪ್ರತಿಪಾದಿಸುತ್ತಾರೆ. ‘ಮಕ್ಕಳಿಗೆಂದೇ ವಿನ್ಯಾಸಗೊಳಿಸಿದ ಸ್ಮಾರ್ಟ್ʼಫೋನ್‌ಗಳು ಬರಲಿ, ಮಕ್ಕಳಿಗೆ ಅಪಾಯಕಾರಿ ಆಗಬಹುದಾದ ಕಂಟೆಂಟ್ ಅವುಗಳಲ್ಲಿದ್ದರೆ ಅವನ್ನು ತೆಗೆಯಲಿ, ತರಗತಿಯು ನಡೆಯುವ ಸಮಯದಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಿ’ ಹೀಗೆ ಬಗೆಬಗೆಯ ಅಭಿಪ್ರಾಯಗಳು ಹೊರ ಹೊಮ್ಮುತ್ತಿವೆ ಸಮಾಜದ ವಿವಿಧ ಜನರಿಂದ.

ಹಾಗೆಯೇ, ಕೇವಲ ಒಂದು ಆದೇಶದ ಮೂಲಕವೇ ಮಕ್ಕಳ ಸ್ಮಾರ್ಟ್ʼಫೋನ್ ಬಳಕೆಯ ಮೇಲೆ ನಿಷೇಧ/ನಿಯಂತ್ರಣವನ್ನು ಹೇರಲಾಗದು; ಅದಕ್ಕೂ ಮುಂಚೆ ಸರಕಾರವು ಶಿಕ್ಷಕರು, ಶಿಕ್ಷಣ ತಜ್ಞರು, ಪೋಷಕರು, ಮನೋವಿಜ್ಞಾನಿಗಳು, ವೈದ್ಯರು, ಬುದ್ಧಿಜೀವಿಗಳು, ಪತ್ರಕರ್ತ ರನ್ನು ಒಳಗೊಂಡ ತಂಡದೊಡನೆ ವಿಸ್ತೃತ ಚಿಂತನೆಯನ್ನು ಮಾಡಬೇಕಾಗುತ್ತದೆ ಹಾಗೂ ಸ್ಮಾರ್ಟ್‌ʼಫೋನ್ ತಯಾರಕ ಕಂಪನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳ ಬೇಕಾಗುತ್ತದೆ.

ಈ ಕಂಪನಿಗಳು ಯಾವುದಾದರೊಂದು ಕಾನೂನಿನ ಅಡಿಯಲ್ಲಿ ಇಂಥ ಕ್ರಮವನ್ನು ವಿರೋಧಿಸಬಹುದು. ದೂರಸಂಪರ್ಕ ಇಲಾಖೆಯು ಕೇಂದ್ರ ಸರಕಾರದ ಸುಪರ್ದಿಯಲ್ಲಿ ಇರುವುದರಿಂದ, ರಾಜ್ಯ ಸರಕಾರವು ಮಕ್ಕಳ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿ ಸುವ/ನಿಯಂತ್ರಿಸುವ ಕಾನೂನನ್ನು ಮಾಡಬಹುದೇ? ಎಂಬ ಜಿಜ್ಞಾಸೆಯೂ ಇಲ್ಲಿ ತಲೆದೋರುತ್ತದೆ.

ಈ ಮಹತ್ವದ ಹೆಜ್ಜೆಯ ಸಾಧ್ಯಾಸಾಧ್ಯತೆಗಳೇನೇ ಇರಲಿ, ಅನುಭವ ಮತ್ತು ಪ್ರಚಲಿತ ಚಿಂತನೆಯ ಆಧಾರದ ಮೇಲೆ ಹೇಳುವುದಾದರೆ, ಇಂಥ ನಿಷೇಧ/ನಿಯಂತ್ರಣಗಳು ಕೇವಲ ಕಾನೂನಿನಿಂದ ಮತ್ತು ಸರಕಾರಿ ಆದೇಶಗಳಿಂದ ಕೈಗೂಡುವುದು ಕೊಂಚ ಕಷ್ಟವೇ. ಹೀಗಾಗಿ, ಇಂಥ ಕ್ರಮದ ಜತೆಜತೆಗೆ, ತಮ್ಮ ಮಕ್ಕಳ ಮೊಬೈಲ್ ಬಳಕೆಯ ವಿಷಯದಲ್ಲಿ ಪೋಷಕರು ಕೂಡ ಒಂದಿಷ್ಟು ಕಟ್ಟುಪಾಡುಗಳನ್ನು ವಿಧಿಸುವುದು, ಸಮಸ್ಯೆಯನ್ನು ಅವರಿಗೆ ಮನವರಿಕೆ ಮಾಡಿಕೊಡುವುದು ಪೂರಕ ಕ್ರಮವಾಗಬಲ್ಲದು ಎನ್ನಲಾಗುತ್ತಿದೆ.

(ಲೇಖಕರು ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)