ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Srivathsa Joshi Column: ಸ್ತ್ರೀ ಎಂದರೆ ಅಷ್ಟೇ ಸಾಕೆ? ಇನ್ನೂ ಇಪ್ಪತ್ತೆಂಟು ಹೆಸರು ಬೇಕೆ?

ಅಷ್ಟಾಧ್ಯಾಯೀ ಮತ್ತು ಅಮರಕೋಶ- ಇವೆರಡೂ ಸಂಸ್ಕೃತ ಭಾಷೆ ಹಾಗೂ ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆಯಲು ಬಯಸುವವರಿಗೆ ಅತ್ಯಂತ ಉಪಯುಕ್ತ ಗ್ರಂಥಗಳು. ಹಿಂದೆಲ್ಲ ಮಕ್ಕಳಿಗೆ ಅಕ್ಷರಾಭ್ಯಾಸ ಮತ್ತು ಅಧಿಕೃತ ಶಿಕ್ಷಣ ಆರಂಭವಾಗುವ ಮೊದಲೇ ಇವೆರಡನ್ನು ಕಂಠಪಾಠ ಮಾಡಿಸುವುದು ಸಾಮಾನ್ಯ ಪದ್ಧತಿಯಾಗಿತ್ತಂತೆ.

ತಿಳಿರುತೋರಣ

“ಅಷ್ಟಾಧ್ಯಾಯೀ ಜಗನ್ಮಾತಾ ಅಮರಕೋಶೋ ಜಗತ್ಪಿತಾ" ಎಂಬ ಮಾತೊಂದಿದೆ. ಪಾಣಿನಿ ಯು ರಚಿಸಿದ ‘ಅಷ್ಟಾಧ್ಯಾಯೀ’ ವ್ಯಾಕರಣಗ್ರಂಥವು ಜಗತ್ತಿಗೆಲ್ಲ ತಾಯಿಯ ಸಮವಾದರೆ ಅಮರಸಿಂಹನ ನಾಮಲಿಂಗಾನುಶಾಸನ ಅಥವಾ ‘ಅಮರಕೋಶ’ ಗ್ರಂಥವು ಜಗತ್ತಿಗೆಲ್ಲ ತಂದೆಯಿದ್ದಂತೆ.

ಅಷ್ಟಾಧ್ಯಾಯೀ ಮತ್ತು ಅಮರಕೋಶ- ಇವೆರಡೂ ಸಂಸ್ಕೃತ ಭಾಷೆ ಹಾಗೂ ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆಯಲು ಬಯಸುವವರಿಗೆ ಅತ್ಯಂತ ಉಪಯುಕ್ತ ಗ್ರಂಥಗಳು. ಹಿಂದೆಲ್ಲ ಮಕ್ಕಳಿಗೆ ಅಕ್ಷರಾಭ್ಯಾಸ ಮತ್ತು ಅಧಿಕೃತ ಶಿಕ್ಷಣ ಆರಂಭವಾಗುವ ಮೊದಲೇ ಇವೆರಡನ್ನು ಕಂಠಪಾಠ ಮಾಡಿಸುವುದು ಸಾಮಾನ್ಯ ಪದ್ಧತಿಯಾಗಿತ್ತಂತೆ.

ಈ ಎರಡು ಗ್ರಂಥಗಳು ಮನಸ್ಸಿನಲ್ಲಿ ನೆಲೆನಿಂತರೆ ಆಮೇಲೆ ಭಾಷೆಯನ್ನೂ ಶಾಸ್ತ್ರಗಳನ್ನೂ ಕಲಿಯುವಾಗ ಮಕ್ಕಳು ಸೂತ್ರಗಳನ್ನು ಸುಲಭವಾಗಿ ಬಳಸುವುದಾಗುತ್ತದೆ, ಜತೆಗೆ ಅತ್ಯಂತ ವಿಶಾಲವಾದ ಪದಸಂಪತ್ತು ಕೂಡ ದೊರಕುತ್ತದೆ ಎಂಬ ಆಶಯ.

ಮೊದಲೇ ಹೇಳಿಬಿಡುತ್ತೇನೆ, ನಾನು ಅಷ್ಟಾಧ್ಯಾಯಿಯನ್ನಾಗಲೀ ಅಮರಕೋಶವನ್ನಾಗಲೀ ಕಂಠಪಾಠ ಮಾಡಿದವನಲ್ಲ. ಕಂಠಪಾಠವಿರಲಿ ಪೂರ್ತಿಯಾಗಿ ಓದಿದವನೂ ಅಲ್ಲ. ಅರಗಿಸಿ ಕೊಳ್ಳುವುದಂತೂ ಇನ್ನೂ ದೂರದ ಮಾತು. ಆದರೂ ಇವೆರಡು ಗ್ರಂಥಗಳ ಬಗೆಗೆ ವಿಶೇಷ ವಾದೊಂದು ಅಚ್ಚರಿ, ಬೆರಗು, ಕುತೂಹಲ, ತಿಲಮಾತ್ರದಷ್ಟನ್ನಾದರೂ ತಿಳಿದು ಕೊಳ್ಳ ಬೇಕೆಂಬ ಹಂಬಲ ನನ್ನಲ್ಲಿದೆ.

ಇದನ್ನೂ ಓದಿ: Srivathsa Joshi Column: ಒಡಲ ಜಾಗಟೆಯ ಮಾಡಿ ಬಿಡದೆ ಢಣಢಣರೆಂದು ಬಡಿದು...

ವಿದ್ವಾನ್ ಎನ್.ರಂಗನಾಥ ಶರ್ಮರು ಸಂಪಾದಿಸಿದ, ಕನ್ನಡದಲ್ಲಿ ವಿವರಣೆ ಒದಗಿಸಿರುವ, ‘ಅಮರಕೋಶ’ ಪುಸ್ತಕದ ಮುದ್ರಿತ ಪ್ರತಿ ಇಟ್ಟುಕೊಂಡಿದ್ದೇನೆ. ಆಗಾಗ ಇದರ ಒಂದೆರಡು ಪುಟಗಳನ್ನು ತೆರೆದು ಓದಿ ಅರಿತುಕೊಳ್ಳುವ ಪ್ರಯತ್ನ ಮಾಡುತ್ತಿರುತ್ತೇನೆ.

ಒಟ್ಟಾರೆಯಾಗಿಯೂ ಕಥೆ-ಕಾದಂಬರಿ-ಕವನ ಪುಸ್ತಕಗಳಿಗಿಂತ ನಿಘಂಟುಗಳು, ಶಬ್ದ ವ್ಯುತ್ಪತ್ತಿ ವ್ಯಾಕರಣ ಮತ್ತಿತರ ಭಾಷಾಶಾಸವನ್ನು ಬೋಧಿಸುವ ಗ್ರಂಥಗಳೇ- ಉದಾಹರಣೆಗೆ ‘ಪಾವೆಂ’ ಅವರ ‘ಪದಾರ್ಥ ಚಿಂತಾಮಣಿ’, ಜಿ. ವೆಂಕಟಸುಬ್ಬಯ್ಯನವರ ‘ಇಗೋ ಕನ್ನಡ’ ಸಾಮಾಜಿಕ ನಿಘಂಟು ಇತ್ಯಾದಿ- ನನಗೆ ಅಚ್ಚುಮೆಚ್ಚು. “ನ ಹಿ ನ ಹಿ ರಕ್ಷತಿ ಡುಕೃಞ ಕರಣೇ... ಅರ್ಥಾತ್ ಈ ವ್ಯಾಕರಣ ನಿಯಮಗಳೆಲ್ಲ ನಿನ್ನನ್ನು ಆಪತ್ಕಾಲದಲ್ಲಿ ರಕ್ಷಿಸುವು ದಿಲ್ಲ, ಅದಕ್ಕಿಂತ ಗೋವಿಂದನ ನಾಮಸ್ಮರಣೆ ಮಾಡು" ಎಂದು ಶಂಕರಾಚಾರ್ಯರು ಉಪದೇಶಿಸಿದ್ದಾರಾದರೂ.

ಇರಲಿ, ಅಮರಕೋಶದಿಂದ ನನ್ನ ಲೇಟೆಸ್ಟ್ ಲರ್ನಿಂಗ್ ಒಂದನ್ನು ಇಂದು ನಿಮ್ಮೊಡನೆ ಹಂಚಿಕೊಳ್ಳಬೇಕು. ಆಗಲೇ ಹೇಳಿದಂತೆ ಇದು ನನ್ನ ವಿದ್ವತ್ತೇನಲ್ಲ. ಒಬ್ಬ ಸಾಮಾನ್ಯ ಕುತೂ ಹಲಿಯಾಗಿ ನಾನು ಗಮನಿಸಿದ ಒಂದು ಸ್ವಾರಸ್ಯಕರ ಅಂಶ ಅಷ್ಟೇ. ಏನೆಂದರೆ, ಸಂಸ್ಕೃತ ದಲ್ಲಿ ಗಂಡಸು ಎಂಬ ಅರ್ಥ ಸೂಚಿಸುವ ಪದಗಳು ನಾಲ್ಕೇನಾಲ್ಕು ಇರುವುವು. ಹೆಂಗಸು ಎಂಬ ಅರ್ಥ ಸೂಚಿಸುವವು ಹನ್ನೊಂದು ಇವೆ!

ರೂಪವೇ ಮೊದಲಾದ ಕಾರಣಗಳಿಂದಾದ ಇನ್ನೂ ಹದಿನೆಂಟನ್ನು ಸೇರಿಸಿದರೆ ಒಟ್ಟು ಇಪ್ಪತ್ತೊಂಬತ್ತು ಪದಗಳು! ಸ್ತ್ರೀಸಮಾನತೆ ಬೇಕೆಂದು ಸುಳ್ಸುಳ್ಳೇ ಗಂಟಲು ಹರಿಯುವ ಮಹಿಳಾವಾದಿಗಳು ಇದನ್ನು ಗಮನಿಸಬೇಕು. ತಮಾಷೆಯಲ್ಲ, ಈ ಇಪ್ಪತ್ತೊಂಬತ್ತು ಪದಗಳ ವ್ಯುತ್ಪತ್ತಿ ಅರ್ಥವ್ಯಾಪ್ತಿಗಳನ್ನು ಅಮರಕೋಶ ನೀಡುವುದಿಲ್ಲವಾದರೂ ಅವುಗಳ ಜಾಡನ್ನು ಹಿಡಿದು ಹೋದರೆ, ಎಲ್ಲಿ ಹೇಗೆ ಬಳಕೆಯಾಗಿವೆಯೆಂದು ಸೋದಾಹರಣ ಕಂಡುಕೊಂಡರೆ, ಸಂಸ್ಕೃತ ಭಾಷೆ ಮತ್ತು ನಮ್ಮ ಸನಾತನ ಸಂಸ್ಕೃತಿಯು ಹೆಣ್ಣನ್ನು ಎಷ್ಟು ಗೌರವದಿಂದ, ಪ್ರೀತಿ ಮತ್ತು ಪೂಜ್ಯ ಭಾವನೆಯಿಂದ ನೋಡಿದೆಯೆಂದು ಗೊತ್ತಾಗುತ್ತದೆ.

Screenshot_2 ಋ

“ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ" ಎಂದು ಸುಮ್ಮನೆ ಹೇಳಿರುವು ದಲ್ಲ. “ಸ್ತ್ರೀಯರಲ್ಲಿ ಗೌರವವನ್ನು ತೋರಿಸುವುದು ಭಾರತೀಯ ಸಂಸ್ಕೃತಿಯ ಒಂದು ವಿಶೇಷ ಲಕ್ಷಣ. ಸ್ತ್ರೀತ್ವವನ್ನು ದೇವತ್ವಕ್ಕೆ ಏರಿಸಿದ ದೇಶವು ಭಾರತವೊಂದೇ" ಎಂಬ ವಿದ್ವಾಂಸರ ಅಭಿಪ್ರಾಯ ಸುಳ್ಳಲ್ಲ. ಈಚಿನ ನ್ಯೂನಾತಿರೇಕಗಳಿಗೆ ಹಿಂದಿನವರನ್ನು ತೆಗಳು ವುದಂತೂ ಖಂಡಿತ ಯುಕ್ತವಲ್ಲ.

ಸರಿ, ಅಮರಕೋಶದಲ್ಲಿ ಕೊಟ್ಟಿರುವ ಪರ್ಯಾಯಪದಗಳ ವಿಚಾರಕ್ಕೆ ಬರೋಣ. ಅಮರ ಕೋಶದ ದ್ವಿತೀಯ ಕಾಂಡದಲ್ಲಿ ಆರನೆಯ ವರ್ಗ (ವಿಭಾಗ)ದ ಮೊದಲ ನಾಲ್ಕು ಶ್ಲೋಕ ಗಳನ್ನು ಗಮನಿಸೋಣ. ಮೊದಲನೆಯದು: “ಮನುಷ್ಯಾ ಮಾನುಷಾ ಮರ್ತ್ಯಾ ಮನುಜಾ ಮಾನವಾ ನರಾಃ| ಸ್ಯುಃ ಪುಮಾಂಸಃ ಪಂಚಜನಾಃ ಪುರುಷಾಃ ಪೂರುಷಾ ನರಃ||" ಇದರ ಪ್ರಕಾರ ಮನುಷ್ಯ, ಮಾನುಷ, ಮರ್ತ್ಯ, ಮನುಜ, ಮಾನವ, ನರ, ಪುಂಸ್, ಪಂಚಜನ, ಪುರುಷ, ಪೂರುಷ, ಮತ್ತು ನೃ - ಈ ಹನ್ನೊಂದು ಶಬ್ದಗಳು ಮನುಷ್ಯ ಸಾಮಾನ್ಯವಾಚಿ. ಇಂಗ್ಲಿಷ್‌ನಲ್ಲಿ ಹೇಳುವುದಾದರೆ man ಅಲ್ಲ mankind.

ಜೀವಶಾಸ್ತ್ರೀಯವಾಗಿಯಾದರೆ Homo Sapiens. ಇದರ ಪೈಕಿ ಪುಂಸ್, ಪಂಚಜನ, ಪುರುಷ ಮತ್ತು ಪೂರುಷ- ಈ ನಾಲ್ಕು ಮಾತ್ರ ಗಂಡಸು ಎಂಬ ಅರ್ಥವನ್ನು ಸೂಚಿಸುವಂಥವು. ಇವುಗಳಿಗೆ ಸ್ತ್ರೀಲಿಂಗರೂಪ ಇಲ್ಲ. ಇದರಲ್ಲೂ ಪುಂಸ್ ಮತ್ತು ಪಂಚಜನ ಹೆಚ್ಚು ಬಳಕೆ ಯಲ್ಲಿಲ್ಲ.

ಪೂರುಷ ಅಪರೂಪಕ್ಕೆ ಕೆಲವೊಮ್ಮೆ- ಶ್ಲೋಕಗಳಲ್ಲಿ ಛಂದಸ್ಸಿಗೋಸ್ಕರ, ಅನುಷ್ಟುಪ್ ಛಂದದ ಶ್ಲೋಕಗಳಲ್ಲಿ ಪ್ರತಿ ಚರಣದ ಆರನೆಯ ಅಕ್ಷರ ಗುರು ಆಗಬೇಕಾದ್ದರಿಂದ ಚರಣದ ಕೊನೆಯ ಪದ ಪುರುಷಃ ಆಗಬೇಕಾದಾಗಲೆಲ್ಲ ಪೂರುಷಃ ಎಂದು- ಬಳಕೆಯಾಗುತ್ತದೆ. ಭಗವದ್ಗೀತೆಯ ಸುಮಾರಷ್ಟು ಶ್ಲೋಕಗಳಲ್ಲಿ ‘ಪುರುಷ’ನೇ ಇದ್ದು ಒಂದೆರಡು ಕಡೆ ಮಾತ್ರ ‘ಪೂರುಷ’ ಇರುವುದನ್ನು ಮನಿಸಿದರೆ ವೇದವ್ಯಾಸರೂ ಈ ಉಪಾಯ ಅನುಸರಿಸಿದ್ದಾರೆ. ಒಟ್ಟಾರೆಯಾಗಿ ಗಂಡಸು ಎಂಬರ್ಥದಲ್ಲಿ ವ್ಯಾಪಕ ಬಳಕೆ ‘ಪುರುಷ’

ಮಾತ್ರ. ಆದರೆ ಸ್ತ್ರೀ ವಿಚಾರ ಹಾಗಲ್ಲ. ಮುಂದಿನ ಮೂರು ಶ್ಲೋಕಗಳೂ ಪಕ್ಕಾ ಲೇಡೀಸ್ ಕಂಪಾರ್ಟ್‌ಮೆಂಟ್ ಬೋಗಿಗಳಿದ್ದಂತೆ. ಹೆಣ್ಮಕ್ಳೇ ಸ್ಟ್ರಾಂಗ್ ಗುರೂ! ಎಂದು ಈಗೇನು ಹೇಳ್ತೀವಲ್ವಾ ನಮ್ಮ ಪೂರ್ವಜರು ಈ ಶ್ಲೋಕಗಳ ಮೂಲಕ ಆ ಕಾಲದಲ್ಲೇ ಹೇಳಿಟ್ಟಿದ್ದಾರೆ. “ಸ್ತ್ರೀ ಯೋಷಿದಬಲಾ ಯೋಷಾ ನಾರೀ ಸೀಮಂತಿನೀ ವಧೂಃ| ಪ್ರತೀಪದರ್ಶಿನೀ ವಾಮಾ ವನಿತಾ ಮಹಿಲಾ ತಥಾ||" ಎಂಬ ಶ್ಲೋಕವನ್ನು ಗಮನಿಸಿ.

ಇದರ ಪ್ರಕಾರ- ಸ್ತ್ರೀ, ಯೋಷಿತ್, ಅಬಲಾ, ಯೋಷಾ, ನಾರೀ, ಸೀಮಂತಿನೀ, ವಧೂ, ಪ್ರತೀಪದರ್ಶಿನೀ, ವಾಮಾ, ವನಿತಾ, ಮತ್ತು ಮಹಿಲಾ (ಮಹಿಳಾ) ಈ ಹನ್ನೊಂದು ಪದ ಗಳದೂ ಹೆಂಗಸು ಎಂದೇ ಅರ್ಥ. ಇವುಗಳನ್ನೀಗ ಒಂದೊಂದನ್ನೇ ಕೂಲಂಕಷವಾಗಿ ನೋಡೋಣ. ಆದರೆ ಇದನ್ನು ನೀವು ನನ್ನ ಪಾಂಡಿತ್ಯ ಅಂತ ದಯವಿಟ್ಟು ಅಂದುಕೊಳ್ಳ ಬೇಡಿ. ಮಧುಕರವೃತ್ತಿಯಂತೆ ನಾನು ಅಲ್ಲಿಇಲ್ಲಿ ಸಂಗ್ರಹಿಸಿದ, ನಾನೇನು ತಿಳಿದುಕೊಂಡೆ ನೋ ಅದನ್ನು ನಿಮಗೂ ದಾಟಿಸಬೇಕು ಎಂದುಕೊಂಡಿರುವ, ಸ್ವಾರಸ್ಯಕರ ಮಾಹಿತಿಯಿದು.

ಸ್ತ್ರೀ ಎಂಬ ಪದದ ವ್ಯುತ್ಪತ್ತಿ ಏನು ಗೊತ್ತೇ? “ಇದು ಸ, ತ, ಮತ್ತು ರ ವ್ಯಂಜನಗಳಿಂದಾದ ಪದ. ಸತ್ತ್ವಗುಣ, ತಮೋಗುಣ, ರಜೋಗುಣ ಮೂರೂ ಉಳ್ಳವಳು ಸ್ತ್ರೀ" ಎಂದು ಕೆಲವರು ವ್ಯಾಖ್ಯಾನಿಸುವುದಿದೆ. ಮೊನ್ನೆಯಷ್ಟೇ ವಾಟ್ಸ್ಯಾಪ್‌ನಲ್ಲಿ ಬಂದಿದ್ದ ಒಂದು ವಿಡಿಯೊ ತುಣುಕಿನಲ್ಲಿ ಖ್ಯಾತ ಹಾಸ್ಯಪಟು ವೈ.ವಿ.ಗುಂಡೂರಾವ್ ಸಹ ಬೋಧಪ್ರದ ಹರಟೆ ಯೊಂದರಲ್ಲಿ ಇದೇ ವ್ಯಾಖ್ಯಾನ ಮಾಡಿದ್ದರು.

ಆದರೆ ಸತ್ತ್ವಗುಣ ರಜೋಗುಣ ತಮೋಗುಣಗಳು ಸ್ತ್ರೀಯರಲ್ಲಿ ಮಾತ್ರವಲ್ಲ ಮನುಷ್ಯರೆಲ್ಲ ರಲ್ಲೂ ಇರುತ್ತವೆ ತಾನೆ? ಆದ್ದರಿಂದ ಅಕ್ಷರಚಮತ್ಕಾರ ತೋರಿಸಲಿಕ್ಕಷ್ಟೇ ಆ ವ್ಯಾಖ್ಯಾನ ಸರಿಹೋದೀತು. ನಿಜವಾಗಿ ಸ್ತ್ರೀ ಪದದ ವ್ಯಾಖ್ಯೆ “ಸ್ತ್ಯಾಯತಿ ಗರ್ಭಃ ಅಸ್ಯಾಮ್" ಅಂದರೆ ‘ಗರ್ಭ ಧರಿಸುವ ಸಾಮರ್ಥ್ಯವುಳ್ಳವಳು’. ಈ ಸಾಮರ್ಥ್ಯ ಗಂಡಸಿಗೆ ಇಲ್ಲವಷ್ಟೆ? “ಸ್ತ್ರೀ ಎಂದರೆ ಮಕ್ಕಳನ್ನು ಹೆರುವ ಯಂತ್ರ" ಎಂದು ಕೆಲವರು ಕೀಳು ಅಭಿರುಚಿಯ ಮಾತನ್ನಾ ಡುವುದಿದೆ.

ನಮ್ಮ ಪೂರ್ವಜರು ಆ ರೀತಿಯಲ್ಲಿ ಹೇಳಿದ್ದೇ ಅಲ್ಲ. ಹೊತ್ತು ಹೆತ್ತು ಸಾಕಿ ಸಲಹುವ ದಿವ್ಯಾತ್ಮವುಳ್ಳ ಜೀವಿಯಾದ ಸ್ತ್ರೀಯನ್ನು ಬಾಲ್ಯದಲ್ಲಿ ತಂದೆಯೂ, ತಾರುಣ್ಯದಲ್ಲಿ ಗಂಡನೂ, ವೃದ್ಧಾಪ್ಯದಲ್ಲಿ ಮಕ್ಕಳೂ ಪೂಜ್ಯ ಭಾವದಿಂದ ಆರೈಕೆ ಮಾಡಬೇಕು, ರತ್ನವನ್ನು ಹೇಗೆ ಜೋಪಾನವಾಗಿ ಇಟ್ಟುಕೊಳ್ಳುತ್ತೇವೋ ಹಾಗೆ ರಕ್ಷಿಸಬೇಕು, ನಿಕೃಷ್ಟವಾಗಿ ಕಂಡು ಬೀದಿಗೆಸೆಯಬಾರದು- ಎಂಬ ಮಹೋನ್ನತ ಆಶಯದಿಂದ ಮನುಸ್ಮೃತಿಯಲ್ಲಿ “ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ| ರಕ್ಷಂತಿ ಸ್ಥವಿರೇ ಪುತ್ರಾ ನ ಸ್ತ್ರೀ ಸ್ವಾತಂತ್ರ್ಯ ಮರ್ಹತಿ" ಎಂದಿರುವುದು.

ಈಗಿನವರು ಇದರ ಕೊನೆಯ ಸಾಲೊಂದನ್ನೇ ಹಿಡಿದುಕೊಂಡು ಬೀದಿರಂಪ ಮಾಡುತ್ತಾರೆ, ಏನನ್ನೋಣ ಇವರಿಗೆ! ‘ಯೋಷಿತ್’ ಎಂದರೆ “ಯೋಷತಿ ಪುಮಾಂಸಂ ಯುಷ್ಯತೇ ಪುಂಭಿರಿತಿ ವಾ" ಎಂದು ವ್ಯಾಖ್ಯೆ. ಸೇವೆ ಒದಗಿಸುವವಳು ಎಂಬರ್ಥ. ಹಾಗಾದರೆ ಕೆಲಸ ದವಳು, ಗುಲಾಮಳು ಎಂದೇ? ಖಂಡಿತ ಅಲ್ಲ. ಸೇವೆ ಶುಶ್ರೂಷೆ ಒದಗಿಸಿ ನಮ್ಮನ್ನು ಸಲಹುವ ದಾದಿಯನ್ನು ನಾವು ಗುಲಾಮಳೆನ್ನುತ್ತೇವೆಯೇ? ಕಾಳಿದಾಸನು ಮೇಘದೂತ ದಲ್ಲಿ “ಗಚ್ಛಂತೀನಾಂ ರಮಣವಸತಿಂ ಯೋಷಿತಾಂ ತತ್ರ ನಕ್ತಂ| ರುದ್ಧಾಲೋಕೇ ನರಪತಿಪಥೇ ಸೂಚಿಭೇದೈಸ್ತಮೋಭಿಃ...’ ಪದ್ಯದಲ್ಲಿ “ರಾತ್ರಿಯಲ್ಲಿ, ಗಾಢವಾದ ಕತ್ತಲಿನಿಂದ ಬೆಳಕು ತಡೆಯಲ್ಪಟ್ಟಿರುವ ರಾಜಮಾರ್ಗದಲ್ಲಿ, ಸೂಜಿಯೂ ತೂರಲಾರದಷ್ಟು ಕತ್ತಲೆ ಇರುವಲ್ಲಿ, ತಮ್ಮ ಪ್ರಿಯಕರರನ್ನು ಭೇಟಿಯಾಗಲು ಹೋಗುವ ಮಹಿಳೆಯರಿಗೆ ದಾರಿ ತೋರಿಸು.

ಸ್ಪರ್ಶಪಾಶಾಣದ ಮೇಲೆ ಕಾಣುವ ಚಿನ್ನದ ರೇಖೆಯಂತೆ ಮಿನುಗುವ ನಿನ್ನ ಮಿಂಚಿನ ಬೆಳಕನ್ನು ಬಳಸಿಕೊಂಡು ಅವರಿಗೆ ನೆರವಾಗು. ಆದರೆ ಜೋರಾಗಿ ಗುಡುಗು ಮಾಡಬೇಡ, ಮಳೆ ಸುರಿಸಬೇಡ; ಇಲ್ಲವಾದರೆ ಅವರು ಭಯಪಡಬಹುದು!" ಎಂದು ಯಕ್ಷನಿಂದ ಮೋಡಕ್ಕೆ ಹೇಳಿಸಿದ್ದಾನೆ. ಯೋಷಿತ್ ಎಂದರೆ ಗುಲಾಮಳು ಎಂಬ ಅರ್ಥವೆಲ್ಲಿದೆ ಇಲ್ಲಿ? ಇನ್ನು ‘ಅಬಲಾ’ ಎಂದಿರುವುದು ಬಲವಿಲ್ಲದವಳು ಅಂತಲ್ಲ, “ಅಲ್ಪಂ ಬಲಮ್ ಅಸ್ಯಾಃ" ಎಂಬರ್ಥದಲ್ಲಿ.

ಶಾರೀರಿಕವಾಗಿ ಹೆಣ್ಣಿಗೆ ಗಂಡಿಗಿಂತ ಕಡಿಮೆ ಬಲ. ಅದು ಪ್ರಕೃತಿಯದೇ ಏರ್ಪಾಡು. ಹೆಣ್ಣಿನ ಆಯ್ಕೆಯೇನಲ್ಲ. ‘ಯೋಷಾ’ ಎಂದರೆ ಆಕರ್ಷಕವಾಗಿರುವವಳು. ಮಳೆಗಾಲದ ಪ್ರಕೃತಿ ಸೌಂದರ್ಯವನ್ನು ವರಾಹಮಿಹಿರನು ‘ವಿದಗ್ಧ ಯೋಷಾ’ ಎಂದು ಬಣ್ಣಿಸುತ್ತಾನೆ. ‘ನಾರೀ ಎಂದರೆ ನರ ಮತ್ತು ನೃ ಇವೆರಡರ ಸೀಲಿಂಗರೂಪ. ನಾರಿ ಎಂಬ ಪದವನ್ನು ನಾವು ಕನ್ನಡದಲ್ಲೂ ಧಾರಾಳವಾಗಿ ಉಪಯೋಗಿಸುತ್ತೇವೆ, “ನಾರಿಯ ಸೀರೆ ಕದ್ದ ರಾಧೆಯ ಮನವ ಗೆದ್ದ ಕಳ್ಳರಕಳ್ಳ ಕೃಷ್ಣನು..." ಎಂದು ಚಿತ್ರಗೀತೆಯಲ್ಲೂ.

“ಕೀರ್ತಿಃ ಶ್ರೀರ್ವಾಕ್ಚ ನಾರೀಣಾಂ" ಎಂದು ಅದೇ ಕೃಷ್ಣನು ಭಗವದ್ಗೀತೆಯಲ್ಲಿ ವಿಭೂತಿ ಯೋಗದಲ್ಲಿ ಹೇಳಿಕೊಂಡಿದ್ದಾನೆ. ನಾರಿಯರಿಗೆ ವಾಕ್(ಮಾತು) ಜಾಸ್ತಿ ಎಂಬ ಹಿಂಟ್ ಕೊಟ್ಟಿದ್ದಾನೆಂದು ಕೆಲವರು ಹೇಳುತ್ತಾರೆ, ನಾರಿ ಮುನಿದರೆ ಮಾರಿ ಎಂದು ಅವರಿಗೆ ಗೊತ್ತಿಲ್ಲ ಪಾಪ.

ಸೀಮಂತಿನೀ ಎಂದರೆ ಸೀಮಂತ (ಬೈತಲೆ) ಉಳ್ಳವಳು. ಹೆಂಗಸರು ಬೈತಲೆ ತೆಗೆದು ಕೂದಲು ಗಳ ಜಡೆ ಹೆಣೆದುಕೊಳ್ಳುವುದು ಅಥವಾ ಮುಡಿ ಕಟ್ಟಿಕೊಳ್ಳುವುದು ಪ್ರಾಚೀನ ಕಾಲ ದಿಂದಲೂ ಬರೀ ಸೌಂದರ್ಯಕ್ಕಷ್ಟೇ ಅಲ್ಲದೆ ಧಾರ್ಮಿಕವಾಗಿಯೂ ಅಗತ್ಯದ, ಮಹತ್ತ್ವದ ವಿಷಯವಾಗಿತ್ತು. ಬೈತಲೆಯ ತುದಿಗೆ ಸಿಂದೂರ ಹಚ್ಚುವ ಸಂಪ್ರದಾಯ, ಅಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆಂಬ ನಂಬಿಕೆ, ಗರ್ಭಿಣಿಯ ಸೀಮಂತೋನ್ನಯನ ಮಾಡಿ ದುಷ್ಟ ಶಕ್ತಿಗಳನ್ನು ದೂರಗೊಳಿಸುವುದು ಎಲ್ಲವೂ ಚಂದ.

‘ವಧೂ’ ಎಂದರೆ ಮದುವಣಗಿತ್ತಿ ಎಂಬ ಸೀಮಿತ ಅರ್ಥವನ್ನಷ್ಟೇ ಕಲ್ಪಿಸಿಕೊಳ್ಳುತ್ತೇವೆ. ಆದರೆ “ವಹತಿ ಉಹ್ಯತೇ ವಾ" ಎಂದು ವ್ಯಾಖ್ಯೆ. ಒಂದು ಕುಲದಿಂದ ಇನ್ನೊಂದು ಕುಲಕ್ಕೆ ವಂಶವಾಹಿನಿಯನ್ನು ಹೊತ್ತುಕೊಂಡು ಸಾಗುತ್ತಾಳೆ ಎಂಬ ಗಾಢ, ವಿಶಾಲ ಅರ್ಥ. ‘ಪ್ರತೀ ಪದರ್ಶಿನೀ’ ಎಂದರೆ ಪ್ರತಿಕೂಲವನ್ನೂ ಸೂಕ್ಷ್ಮವಾಗಿ ಗ್ರಹಿಸಬಲ್ಲವಳು.

ಈ ವಿಷಯದಲ್ಲೂ ಗಂಡಿಗಿಂತ ಹೆಣ್ಣು ಚುರುಕಿನವಳು, ಪವರ್ ಫುಲ್ ಸೆನ್ಸರ್ಸ್ ಇರುವವಳು. ಆದ್ದರಿಂದಲೇ ಚಿತ್ರದುರ್ಗದ ಓಬವ್ವಳೂ- ಕಳ್ಳಕಿಂಡಿಯ ಹಿಂದೆ ಪಿಸುಮಾತ ಕೇಳಿದಳು, ಆಲಿಸಿದಳು, ಇಣುಕಿದಳು, ವೈರಿಪಡೆ ಕೋಟೆಯತ್ತ ಬರುವುದನ್ನು ಕಂಡಳು! ‘ವಾಮಾ’ ಎಂದರೆ ವಮನ (ವಾಂತಿ) ಮಾಡುವವಳು. ಇಲ್ಲ ಇಲ್ಲ, ಬಸುರಿಯಿದ್ದಾಗಿನ ವಾಂತಿ ಎಂದು ಇದನ್ನು ತಪ್ಪಾಗಿ ತಿಳಿದುಕೊಳ್ಳಬೇಡಿ.

ಇಲ್ಲಿ ವಾಚ್ಯಾರ್ಥ ಅಲ್ಲ, ಸ್ನೇಹ-ಪ್ರೀತಿ-ಮಮತೆಗಳನ್ನು ಕಕ್ಕುತ್ತಲೇ ಇರುವವಳು ಎಂಬ ಧ್ವನ್ಯಾರ್ಥದಲ್ಲಿ ಈ ಹೆಸರು. ‘ವನಿತಾ’ ಸಹ ಇದೇ ರೀತಿ. ವನತಿ ಎಂಬ ಕ್ರಿಯಾಪದದ ಅರ್ಥ ವಿತರಿಸು, ಒದಗಿಸು ಎಂದು. ಅದನ್ನು ಮಾಡುವವಳೇ ವನಿತಾ. ಇದನ್ನು ಕನ್ನಡದಲ್ಲೂ ವ್ಯಾಪಕವಾಗಿ ಬಳಸುತ್ತೇವೆ. ಅಷ್ಟೇಕೆ, ವನಿತಾ ಎಂಬ ಹೆಸರಿನವರೂ ಇರುತ್ತಾರೆ.

ವನಿತಾವಾಣಿ, ವನಿತಾವಿಹಾರ ಇತ್ಯಾದಿ ಈಗಲೂ ಆಕಾಶವಾಣಿಯಲ್ಲಿ ಸ್ಥಿರಶೀರ್ಷಿಕೆಗಳು. “ಪುಸ್ತಕಂ ವನಿತಾ ವಿತ್ತಂ ಪರಹಸ್ತಗತಂ ಗತಂ" ಎಂದು ಸುಭಾಷಿತ. ‘ಮಹಿಲಾ’ ಎಂದರೆ “ಮಹತಿ ಮಹ್ಯತೇ ವಾ" ಪೂಜಿಸುತ್ತಾಳೆ ಮತ್ತು ಪೂಜಿಸಲ್ಪಡುತ್ತಾಳೆ. ಸಂಸ್ಕೃತದ ಲ-ಕಾರ ಕನ್ನಡದಲ್ಲಿ ಳ-ಕಾರ ಆಗಿ ಮಹಿಳೆ ಎನ್ನುತ್ತೇವೆ. “ಮಹಿಳೆಯರ ಭಾರ ಎತ್ತುವ ಸ್ಪರ್ಧೆ" ಎಂದು ಆಭಾಸವನ್ನೂ ಉಂಟುಮಾಡುತ್ತೇವೆ. ಒಟ್ಟಿನಲ್ಲಿ ಇವು ಹನ್ನೊಂದು, ಹೆಣ್ಣಿನ ಸುಸಂಸ್ಕೃತ ಹೆಸರುಗಳು.

ಇನ್ನು, ಗುಣಸೂಚಕವಾಗಿ ಬಂದ ಅಷ್ಟಾದಶ ಹೆಸರುಗಳು ಈ ಎರಡು ಶ್ಲೋಕಗಳಲ್ಲಿವೆ: “ವಿಶೇಷಾಸ್ತ್ವಂಗನಾ ಭೀರುಃ ಕಾಮಿನೀ ವಾಮಲೋಚನಾ| ಪ್ರಮದಾ ಮಾನಿನೀ ಕಾಂತಾ ಲಲನಾ ಚ ನಿತಂಬಿನೀ||" ಮತ್ತು “ಸುಂದರೀ ರಮಣೀ ರಾಮಾ ಕೋಪನಾ ಸೈವ ಭಾಮಿನೀ| ವರಾರೋಹಾ ಮತ್ತಕಾಶಿನ್ಯುತ್ತಮಾ ವರವರ್ಣಿನೀ||" ಇವುಗಳ ಪೈಕಿಯೂ ಬಹಳಷ್ಟನ್ನು ಕನ್ನಡದಲ್ಲೂ ಬಳಸುತ್ತೇವೆ.

‘ಅಂಗನಾ’ ಎಂದರೆ ಪ್ರಶಸ್ತವಾದ ಅಂಗಗಳುಳ್ಳವಳು. “ಅಂಗನೆಯರು ತಾ ನೀರಿಗೆ ಪೋದರೆ ಸಂಗಡಿಗರೊಡನಾಡಿ ಕಾಡುವ ಮೂರುತಿ" ಮಂಗಳ ಉಡುಪಿ ಕೃಷ್ಣ. ಕಾಳಿದಾಸನ ಮೇಘದೂತದಲ್ಲೇ “ವಿದುದ್ದಾಮಸುರಿತಚಕಿತೈಸ್ತತ್ರ ಪೌರಾಂಗನಾನಾಂ" ಎಂಬ ಸಾಲು ಬರುತ್ತದೆ ಉಜ್ಜೈನಿಯಲ್ಲಿ ಸೌಧಗಳ ಉಪ್ಪರಿಗೆ ಮೇಲೆ ನಿಂತ ಚೆಲುವೆಯರ ನೋಟದ ಬಗ್ಗೆ. ‘ಭೀರು’ ಎಂದರೆ ಭಯಭೀತಳಾಗುವವಳು.

ಇದನ್ನು ಜಿರಳೆಗಳು ಚೆನ್ನಾಗಿ ಬಲ್ಲವು! ‘ಕಾಮಿನೀ’ ಎಂದರೆ ಬಯಕೆಗಳ ಉದ್ದೀಪನಕ್ಕೆ ಕಾರಣಳಾಗುವವಳು. ‘ಸತ್ಯಭಾಮೆ ಸತ್ಯಭಾಮೆ ಕೋಪವೇಕೇ ನನ್ನಲಿ’ ಹಾಡಿನಲ್ಲಿ ರಮಿಸಿಕೊಳ್ಳುತ್ತಾಳಲ್ಲ ಅವಳೇ. ‘ವಾಮಲೋಚನಾ’ ಸುಂದರ ಕಣ್ಣುಗಳುಳ್ಳವಳು. ‘ಪ್ರಮದಾ’ ಎಂದರೆ ಸಂತೋಷದಿಂದಿರುವವಳು. “ಪ್ರಮದಾ ಮದಿರಾ ಲಕ್ಷ್ಮೀರ್ವಿಜ್ಞೇಯಾ ತ್ರಿವಿಧಾ ಸುರಾ" ಎಂದು ಚಟಭಯಂಕರರನ್ನು ಎಚ್ಚರಿಸುವ ಸುಭಾಷಿತ.

‘ಮಾನಿನೀ’ ಗೌರವ ಮತ್ತು ಗರ್ವ ಉಳ್ಳವಳು. ‘ಕಾಂತಾ’ ಎಂದರೆ ಹೆಂಡತಿ ಎಂದಷ್ಟೇ ಅರ್ಥ ವಲ್ಲ, ಇಷ್ಟವಾಗುವವಳು ಎಂದು. “ಹೆಂಡತಿಯಷ್ಟೇ ಇಷ್ಟವಾಗುವವಳು" ಎನ್ನಿ ಬೇಕಿದ್ದರೆ. ‘ಲಲನೆ’ಯನ್ನೂ ಕನ್ನಡದಲ್ಲಿ, ವಿಶೇಷವಾಗಿ ಕಾವ್ಯಗಳಲ್ಲಿ ಬಳಸುತ್ತೇವೆ.

ರಾಘವಾಂಕನು ಚಂದ್ರಮತಿಯನ್ನು ಅಂಥ ಹೃದಯವಿದ್ರಾವಕ ಸನ್ನಿವೇಶದಲ್ಲೂ ಲಲನೆ ಎಂದಿದ್ದಾನೆ. ‘ನಿತಂಬಿನೀ’ ಆಕರ್ಷಕ ಕಟಿಭಾಗವುಳ್ಳವಳು. “ಏನು ಮಾರಿಯೋ ಶಿವಶಿ ವಾಯೆನು| ತಾ ನಿತಂಬಿನಿ ಗಾಢ ಗತಿಯಲಿ| ಕಾನನದೊಳೈತಂದಳಕ್ಕೆಯ ಸರದ ಬಳಿವಿಡಿದು..." ಕುಮಾರವ್ಯಾಸ ಕುಂತಿಯನ್ನು ನಿತಂಬಿನಿ ಎಂದಿದ್ದಾನೆ, ಪಾಂಡು-ಮಾದ್ರೀ ವನವಿಹಾರದ ಸನ್ನಿವೇಶದಲ್ಲಿ.

‘ಸುಂದರೀ’ ಪದ ಹುಟ್ಟಿರುವುದು “ಅತೀವ ಉನತ್ತಿ (ಕ್ಲೇದಯತಿ)" ಎಂಬ ವ್ಯಾಖ್ಯೆಯಿಂದ. ಪ್ರೀತಿಯ ಮಳೆಯಿಂದ ತೊಯ್ಯುವವಳು ಎಂದರ್ಥ. ‘ರಮಣೀ’ ಗಂಡನನ್ನು ರಮಿಸು ವವಳು.

“ಕ್ಷಣದೊಳೊದಗುವ ಬಾಷ್ಪಲುಳಿತೇ| ಕ್ಷಣನು ಬಂದನು ಮನೆಗೆ ಪರುಷದ| ಕಣಿಯ ತಂದೆನು ರಮಣಿ ಕೊಳ್ಳೆಂದಿತ್ತನರ್ಭಕನ" ನದಿಯಲ್ಲಿ ತೇಲುತ್ತಿದ್ದ ಬುಟ್ಟಿಯಲ್ಲಿ ಸಿಕ್ಕಿದ ಮಗುವನ್ನು ಸೂತನು ಮನೆಗೊಯ್ದು ಹೆಂಡತಿಗೆ ಕೊಟ್ಟಾಗಿನ ಬಣ್ಣನೆ.

‘ರಾಮಾ’ ಎಂದರೆ ಲಲಿತಕಲೆಗಳನ್ನು ಆನಂದಿಸುವವಳು. ‘ಕೋಪನಾ’ ಎಂದರೆ ಜನ್ಮತಃ ಕೋಪವೂ ಒಂದು ಗುಣವಾಗಿರುವವಳು. ಇದಕ್ಕೆ ಹೆಚ್ಚು ವಿವರಣೆ ಬೇಕಿಲ್ಲ. ‘ಭಾಮಿನೀ’ ಸಹ ಕೋಪಿಷ್ಠಳೇ. ‘ವರಾರೋಹಾ’ ಎಂಬುದು ಲಕ್ಷ್ಮೀ, ದುರ್ಗೆ, ಸರಸ್ವತೀ ಸ್ತೋತ್ರಗಳಲ್ಲಿ ಬಳಕೆಯಾಗುವ ವಿಶೇಷಣ.

‘ಮತ್ತಕಾಶಿನೀ’ ಮೋಹಕ ನೋಟವನ್ನು ಹೊಂದಿರುವವಳು. “ಚಿತ್ತದಲಿ ನೀನಿರಿಸದೇನುವ| ವಿಸ್ತರಿಸುಯೆಂದೆಂಬ ಕೃಷ್ಣನ| ಮತ್ತಕಾಶಿನಿ ನೋಡಿ ಕೈಮುಗಿದೆಂದಳೀ ನುಡಿಯ" ದ್ರೌಪದಿ ಯ ಬಣ್ಣನೆ. ‘ಉತ್ತಮಾ’ ಎಂದರೆ ಸಕಲರೀತಿಗಳಲ್ಲೂ ಒಳ್ಳೆಯವಳು. ‘ವರವರ್ಣಿ ನೀ’ ಎಂದರೆ ಅಪ್ಸರೆ ಅಥವಾ ದೇವಕನ್ಯೆಯಂತೆ ಅತ್ಯಂತ ರೂಪವತಿ. ದಂಡಕಾರಣ್ಯದಲ್ಲಿ ರಾಮನಿಂದ ತಿರಸ್ಕೃತಳಾಗಿ ಲಕ್ಷ್ಮಣನೆಡೆಗೆ ನಡೆದ ಶೂರ್ಪನಖಿ “ಅಸ್ಯ ರೂಪಸ್ಯ ತೇ ಯುಕ್ತಾ ಭಾರ್ಯಾಹಂ ವರವರ್ಣಿನೀ" (ನಿನ್ನ ರೂಪಕ್ಕೆ ತಕ್ಕಂತೆ ನಾನೊಬ್ಬಳು ವರವರ್ಣಿ ನಿ. ನಿನಗೆ ತಕ್ಕ ಹೆಂಡತಿಯಾಗಬಲ್ಲೆ) ಎಂದಿದ್ದಳಂತೆ!

ಅಷ್ಟಾಗಿ, ಈ ಗಂಡು-ಹೆಣ್ಣು ಎಂಬ ನಮ್ಮ ಕಲ್ಪನೆ ನಮ್ಮದಷ್ಟೇ. ಭಗವಂತನ ದೃಷ್ಟಿಯಲ್ಲಿ ಅವನೊಬ್ಬನೇ ಗಂಡು (ಪುರುಷ), ಭೂಮಿಯಲ್ಲಿರುವ ಸಮಸ್ತ ಜೀವಗಳೂ ಹೆಣ್ಣು (ಸ್ತ್ರೀ). ಆದ್ದರಿಂದ ಎಲ್ಲರಿಗೂ ಮಹಿಳಾದಿನದ ಶುಭಾಶಯಗಳು.

ಶ್ರೀವತ್ಸ ಜೋಶಿ

View all posts by this author