ಸಂಗತ
ಹೌತಿ ಬಂಡುಕೋರರ ಎದುರಿನ ಹೋರಾಟದಲ್ಲಿ ಸೌದಿ ಅರೇಬಿಯಾ ಏಕಾಂಗಿಯಾಗಿದೆ. ಅಮೆರಿಕಾ, ಟರ್ಕಿ, ಪಾಕಿಸ್ತಾನ ಈ ಮೂರೂ ದೇಶಗಳು ಅದಕ್ಕೆ ಕೈಕೊಟ್ಟಿವೆ. ಸೌದಿ ಈ ಬಿಕ್ಕಟ್ಟನ್ನು ತಾನೇ ಆಹ್ವಾನಿಸಿಕೊಂಡಿತೇ ಅಥವಾ ಭರವಸೆ ನೀಡಿದ್ದ ಅಮೆರಿಕ ಮತ್ತು ಪಾಕಿಸ್ತಾನಗಳು ಅದಕ್ಕೆ ಬೆನ್ನಿಗೆ ಚೂರಿ ಹಾಕಿದವೇ? ಸೌದಿ ಅರೇಬಿಯಾ ಇಂತಹ ಆಳವಾದ ಬಿಕ್ಕಟ್ಟಿಗೆ ಏಕೆ ಸಿಲುಕಿತು?
ಸೌದಿ ಅರೇಬಿಯಾದ ಪ್ರಗತಿಪರ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅಕ್ಟೋಬರ್ 6ರಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಆದರೆ, ಈ ನಡುವೆ ಅವರು ರಿಯಾದ್ನಲ್ಲಿ ಕ್ಯಾಬಿನೆಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು ಮತ್ತು ಇರಾಕ್ ಪ್ರಧಾನಿ ಅಲಿ ಅಲ್-ಜೈದಿ ಅವರೊಂದಿಗೂ ಮಾತುಕತೆ ನಡೆಸಿದ್ದರು; ಆದಾಗ್ಯೂ, ಈ ಸಭೆಗಳು ಮುಚ್ಚಿದ ಬಾಗಿಲ ಒಳಗೆ ನಡೆದಿದ್ದವು.
ಹೌತಿ ಬಂಡುಕೋರರು ದಾಳಿ ನಡೆಸಬಹುದೆಂಬ ಭಯದಿಂದ ಕ್ರೌನ್ ಪ್ರಿನ್ಸ್ ತಾತ್ಕಾಲಿಕವಾಗಿ ಬಂಕರ್ ಸೇರಿದ್ದಾರೆ ಎಂದು ನಂಬಲಾಗಿದೆ. ಅವರು ಅನೇಕ ರಾಜಪ್ರಾಸಾದಗಳನ್ನು ಹೊಂದಿದ್ದು, ಅವೆಲ್ಲವೂ ಅಂತಹ ರಹಸ್ಯ ಸುರಕ್ಷಿತ ತಾಣಗಳನ್ನು ಒಳಗೊಂಡಿವೆ. ಭದ್ರತಾ ಕಾರಣಗಳಿಗಾಗಿ, ಅವರು ಈ ಬಂಕರ್ಗಳ ನಡುವೆ ನಿರಂತರವಾಗಿ ಸ್ಥಳ ಬದಲಾಯಿಸುತ್ತಾ, ಅಲ್ಲಿಂದಲೇ ದೇಶದ ಆಡಳಿತವನ್ನು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಹಲವು ಪ್ರಶ್ನೆಗಳು ಏಳುತ್ತಿವೆ.
ಇದನ್ನೂ ಓದಿ: Dr Vijay Darda Column: ಚೀನಾ ಮೇಲಿನ ಗೌರವವೇ ಅಥವಾ ರಾಜಕೀಯವೇ ?
ಮೊದಲನೆಯದು, ಕ್ರೌನ್ ಪ್ರಿನ್ಸ್ ನಿಜವಾಗಿಯೂ ಬಂಕರ್ʼನಲ್ಲಿದ್ದಾರೆಯೇ? ಎರಡನೆಯ ಮತ್ತು ಅತ್ಯಂತ ಪ್ರಮುಖ ಪ್ರಶ್ನೆಯೆಂದರೆ: ಸೌದಿ ಅರೇಬಿಯಾ ಇಂತಹ ಆಳವಾದ ಬಿಕ್ಕಟ್ಟಿಗೆ ಏಕೆ ಸಿಲುಕಿತು? ಹೌತಿಗಳೊಂದಿಗಿನ ಅದರ ಸಂಘರ್ಷ ಹಲವು ವರ್ಷಗಳಿಂದ ನಡೆಯುತ್ತಿದೆ. ಸೌದಿ ಈ ಬಿಕ್ಕಟ್ಟನ್ನು ತಾನೇ ಆಹ್ವಾನಿಸಿಕೊಂಡಿತೇ ಅಥವಾ ಭರವಸೆ ನೀಡಿದ್ದ ಅಮೆರಿಕ ಮತ್ತು ಪಾಕಿಸ್ತಾನ ಗಳು ಅದಕ್ಕೆ ಬೆನ್ನಿಗೆ ಚೂರಿ ಹಾಕಿದವೇ? ಮೊದಲಿಗೆ, ಈ ಹೌತಿಗಳು ಯಾರು ಮತ್ತು ಸೌದಿ ಅರೇಬಿಯಾದೊಂದಿಗೆ ಅವರ ವಿವಾದವೇನು ಎಂಬುದನ್ನು ಅರ್ಥಮಾಡಿಕೊಳ್ಳಿ.
ವಾಸ್ತವವಾಗಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸೌದಿ ಅರೇಬಿಯಾ ಯೆಮೆನ್ನ ಮಾನ್ಯತೆ ಪಡೆದ ಸರ್ಕಾರ ವನ್ನು ಬೆಂಬಲಿಸುತ್ತದೆ; ಆದರೆ ಹೌತಿ ಬಂಡುಕೋರರು ಯೆಮೆನ್ನ ಆಡಳಿತದ ಮೇಲೆ ನಿಯಂತ್ರಣ ಹೊಂದಿದ್ದು, ಸೌದಿ ಬೆಂಬಲಿತ ಸೇನೆಯ ವಿರುದ್ಧ ಹೋರಾಡುತ್ತಿದ್ದಾರೆ. ಹೌತಿ ಬಂಡುಕೋರರಿಗೆ ಇರಾನ್ ಹಣಕಾಸು ನೆರವು ನೀಡುತ್ತಿದೆ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ ಎಂದು ಹೇಳಲಾಗುತ್ತದೆ.
ಇತ್ತೀಚೆಗೆ, ಒಂದು ಕಡೆ ಅಮೆರಿಕ ಮತ್ತು ಇಸ್ರೇಲ್, ಇನ್ನೊಂದು ಕಡೆ ಇರಾನ್ ನಡುವೆ ಯುದ್ಧ ಭುಗಿಲೆದ್ದಾಗ, ಇರಾನ್ ಹೌತಿಗಳನ್ನು ಸಕ್ರಿಯಗೊಳಿಸಿತು ಎಂದು ಹೇಳಲಾಗಿದೆ. ಈ ಮಧ್ಯೆ, ಇರಾನ್ ಅನ್ನು ದುರ್ಬಲಗೊಳಿಸಲು ಅಮೆರಿಕ ನೀಡಿದ ಸೂಚನೆಯ ಮೇರೆಗೆ, ಸೌದಿ ಅರೇಬಿಯಾ ಹೌತಿಗಳ ಪ್ರಮುಖ ನೆಲೆಗಳ ಮೇಲೆ ಹಲವು ವೈಮಾನಿಕ ದಾಳಿಗಳನ್ನು ನಡೆಸಿತು. ಆದರೆ, ಹೌತಿಗಳು ಪ್ರತಿದಾಳಿ ನಡೆಸಿ ಸೌದಿ ಭೂಪ್ರದೇಶದ ಆಳದವರೆಗೆ ಕ್ಷಿಪಣಿಗಳನ್ನು ಉಡಾಯಿಸುತ್ತಾರೆ ಎಂಬುದನ್ನು ಊಹಿಸಲು ಸೌದಿ ವಿಫಲವಾಯಿತು.
ಹೌತಿಗಳು ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಅಭಾ ವಿಮಾನ ನಿಲ್ದಾಣ ಮತ್ತು ಅತಿದೊಡ್ಡ ತೈಲ ಕಂಪನಿಯಾದ ಅರಾಮ್ಕೋ ಮೇಲೆ ಡಜನ್ ಗಟ್ಟಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದರು. ಪರಿಸ್ಥಿತಿ ಎಷ್ಟು ಹದಗೆಟ್ಟಿತೆಂದರೆ, ಸೌದಿ ಅರೇಬಿಯಾದ ಬಳಿ ಕ್ಷಿಪಣಿ ತಡೆಹಿಡಿಯುವ ಸಾಧನಗಳೇ (ಇಂಟರ್ ಸೆಪ್ಟರ್) ಖಾಲಿಯಾಗತೊಡಗಿದವು.
ಹೌತಿಗಳ ಒಂದು ಕ್ಷಿಪಣಿ 800 ಕಿಲೋಮೀಟರ್ ದೂರದಿಂದ ಉಡಾವಣೆಯಾಗಿ ಸೌದಿ ಅರೇಬಿಯಾ ದೊಳಗೆ ಅಪ್ಪಳಿಸಿತು. ಈ ದಾಳಿಗಳಲ್ಲಿ ಡಜನ್ಗಟ್ಟಲೆ ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಮಂದಿ ಗಾಯಗೊಂಡಿದ್ದಾರೆ. ಅಮೆರಿಕ ತನಗೆ ಹೆಚ್ಚಿನ ಕ್ಷಿಪಣಿ ಪ್ರತಿರೋಧಕಗಳನ್ನು ಒದಗಿಸುತ್ತದೆ ಎಂದು ಸೌದಿ ಅರೇಬಿಯಾ ಆಶಿಸಿತ್ತು; ಆದರೆ ವಾಸ್ತವವೆಂದರೆ ಅಮೆರಿಕವೇ ಸ್ವತಃ ಇಂಟರ್ ಸೆಪ್ಟರ್ಗಳ ಕೊರತೆಯನ್ನು ಎದುರಿಸುತ್ತಿದೆ.
ಹೌತಿಗಳ ದಾಳಿಯಿಂದ ರಕ್ಷಿಸಲು ಪಾಕಿಸ್ತಾನ ಮತ್ತು ಟರ್ಕಿ ಮುಂದೆ ಬರುತ್ತವೆ ಎಂದೂ ಸೌದಿ ನಿರೀಕ್ಷಿಸಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಮೂರೂ ದೇಶಗಳು ಕೈತೊಳೆದುಕೊಂಡಿವೆ. ಕಳೆದ ತಿಂಗಳು ಒಮಾನ್ನಲ್ಲಿ ಅಮೆರಿಕದ ಅಧಿಕಾರಿಗಳು ಮತ್ತು ಹೌತಿ ನಾಯಕರ ನಡುವೆ ನೇರ ಮಾತುಕತೆ ನಡೆದಿದೆ ಎಂದು ವರದಿಗಳು ತಿಳಿಸಿವೆ.
ಆ ಸಭೆಯಲ್ಲಿ, ಕೆಂಪು ಸಮುದ್ರದಲ್ಲಿನ ಅಮೆರಿಕದ ಹಡಗುಗಳನ್ನು ಗುರಿಯಾಗಿಸುವುದಿಲ್ಲ ಎಂದು ಹೌತಿಗಳು ಅಮೆರಿಕಕ್ಕೆ ಸ್ಪಷ್ಟ ಭರವಸೆ ನೀಡಿದ್ದರು. ಈಗ, ಒಂದು ವೇಳೆ ಅಮೆರಿಕ ಸೌದಿ ಅರೇಬಿಯಾಕ್ಕೆ ಸಹಾಯ ಮಾಡಿದರೆ, ಹೌತಿಗಳು ಕೆಂಪು ಸಮುದ್ರದಲ್ಲಿ ಅಮೆರಿಕದ ನೌಕೆಗಳನ್ನು ಗುರಿಯಾಗಿಸುತ್ತಾರೆ ಎಂಬುದು ಸ್ಪಷ್ಟ.
ಸ್ವಾಭಾವಿಕವಾಗಿಯೇ ಅಮೆರಿಕ ತನ್ನ ಸ್ವಹಿತಾಸಕ್ತಿಯ ಬಗ್ಗೆ ಕಾಳಜಿ ವಹಿಸುತ್ತದೆ. ಹಾಗಿರುವಾಗ, ಸೌದಿ ಅರೇಬಿಯಾಕ್ಕಾಗಿ ಅದು ಹೌತಿಗಳೊಂದಿಗೆ ಹೊಸ ಸಂಘರ್ಷವನ್ನು ಏಕೆ ಮೈಮೇಲೆ ಎಳೆದು ಕೊಳ್ಳುತ್ತದೆ? ಇದು ನಿಸ್ಸಂದೇಹವಾಗಿ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಬಿದ್ದ ದೊಡ್ಡ ಹೊಡೆತವಾಗಿದೆ. ಮುಂದಿನ ಆಘಾತವನ್ನು ಟರ್ಕಿ ಮತ್ತು ಪಾಕಿಸ್ತಾನಗಳು ನೀಡಿದವು. ಸೌದಿ ಅರೇಬಿಯಾ ಇತ್ತೀಚೆಗೆ ಈ ಎರಡೂ ದೇಶಗಳೊಂದಿಗೆ ಮೆಕ್ಕಾ ಒಪ್ಪಂದ ಎಂಬ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಮೂವರಲ್ಲಿ ಯಾರೊಬ್ಬರ ಮೇಲೆ ದಾಳಿ ನಡೆದರೂ, ಅದನ್ನು ಮೂವರ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ ಎಂಬುದು ಆ ಒಪ್ಪಂದದ ಷರತ್ತಾಗಿತ್ತು.
ಆದರೆ, ಈ ಸಂಘರ್ಷ ಹಳೆಯದಾಗಿರುವುದರಿಂದ ತಾವು ಇದರಲ್ಲಿ ಭಾಗಿಯಾಗುವುದಿಲ್ಲ ಎಂದು ಪಾಕಿಸ್ತಾನ ಈಗ ಹೇಳುತ್ತಿದೆ. ಟರ್ಕಿ ಕೂಡ ಸಂಪೂರ್ಣ ಮೌನ ವಹಿಸಿದೆ. ಇಂತಹ ಸನ್ನಿವೇಶದಲ್ಲಿ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಪರಿಸ್ಥಿತಿ ಗಂಭೀರವಾಗಿದೆ. ವಿಮಾನ ನಿಲ್ದಾಣಗಳ ಮೇಲಿನ ಹೌತಿ ದಾಳಿಯ ನಂತರ, ಸೌದಿ ಅರೇಬಿಯಾದ ವಾಯು ರಕ್ಷಣಾ ವ್ಯವಸ್ಥೆಯ ಮೇಲೆ ಯಾರಿಗೂ ನಂಬಿಕೆ ಉಳಿದಿಲ್ಲ.
ವಿಶ್ವಾದ್ಯಂತದ ವಿಮಾನಯಾನ ಸಂಸ್ಥೆಗಳು ರಿಯಾದ್ ಮತ್ತು ಇತರ ನಗರಗಳಿಗೆ ತಮ್ಮ ವಿಮಾನ ಸೇವೆಗಳನ್ನು ಮುಂದಿನ ಸೂಚನೆ ಬರುವವರೆಗೆ ಅಮಾನತುಗೊಳಿಸಿವೆ. ಇದು ಸೌದಿ ಅರೇಬಿಯಾಕ್ಕೆ ಭಾರಿ ಆರ್ಥಿಕ ನಷ್ಟವನ್ನೂ ಉಂಟು ಮಾಡುತ್ತಿದೆ. ದಾಳಿಯ ಭಯದಿಂದ ರಾಜ ಅಥವಾ ರಾಜಕುಮಾರನೊಬ್ಬ ಬಂಕರ್ನಲ್ಲಿ ಅಡಗಿಕೊಳ್ಳಬೇಕಾಗಿ ಬಂದಿರುವುದು ಇತಿಹಾಸದ ಬಹುಶಃ ಇದು ಮೊದಲ ಬಾರಿಯಾಗಿದೆ ಎಂದು ನಂಬಲಾಗಿದೆ. ಅರಮನೆಗಳ ಒಳಗೆ ರಕ್ತಪಾತ ನಡೆದ ಹಲವು ಉದಾಹರಣೆಗಳಿವೆ, ಆದರೆ ರಾಜ ಅಥವಾ ರಾಜಕುಮಾರ ಬಂಕರ್ನಲ್ಲಿ ಆಶ್ರಯ ಪಡೆದ ಸನ್ನಿವೇಶ ಎಂದೂ ಬಂದಿರಲಿಲ್ಲ.
ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಸಾಕಷ್ಟು ವೃದ್ಧರಾಗಿದ್ದಾರೆ ಮತ್ತು ದೇಶದ ಆಡಳಿತವನ್ನು ವಾಸ್ತವವಾಗಿ ಮೊಹಮ್ಮದ್ ಬಿನ್ ಸಲ್ಮಾನ್ ಅವರೇ ಮುನ್ನಡೆಸುತ್ತಿದ್ದಾರೆ. ಅವರಿಗೆ ಏನಾದರೂ ಸಂಭವಿಸಿದರೆ, ಅದು ಭೀಕರ ಪರಿಣಾಮ ಬೀರಬಹುದು. ಬಹುಶಃ ಅದಕ್ಕಾಗಿಯೇ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಪರವಾಗಿ ನಿಂತು ಈ ಬಿಕ್ಕಟ್ಟನ್ನು ತಾವೇಕೆ ಮೈಮೇಲೆ ಎಳೆದುಕೊಂಡೆ ಎಂದು ಅವರು ಯೋಚಿಸುತ್ತಿರಬಹುದು. ಆದರೆ, ಅವರಿಗೆ ಬೇರೆ ಆಯ್ಕೆಯೂ ಇರಲಿಲ್ಲ!
ನ್ಯಾಯಾಧೀಶರ ‘ಧರಣಿ’ ಹೇಳಿಕೆ ದೇಶಾದ್ಯಂತ ಕಾಲುದಾರಿಗಳ (ಫುಟ್ಪಾತ್) ಮೇಲಿನ ಒತ್ತುವರಿ ಯನ್ನು ತೆರವುಗೊಳಿಸಲು ನಡೆಸಿದ ಎಲ್ಲಾ ಪ್ರಯತ್ನಗಳು ಇದುವರೆಗೆ ವಿಫಲವಾಗಿವೆ. ಸುಪ್ರೀಂ ಕೋರ್ಟ್ ಹಲವು ಬಾರಿ ಆದೇಶ ಹೊರಡಿಸಿದ್ದರೂ, ಆಡಳಿತ ವರ್ಗ ಸಂಪೂರ್ಣ ನಿರಾಸಕ್ತಿ ತಳೆದಿದೆ. ದೆಹಲಿ ಹೈಕೋರ್ಟ್ ಬಳಿಯ ಕಾಲುದಾರಿಗಳು ಮತ್ತು ಪಾದಚಾರಿ ದಾಟುಹಾದಿಗಳ (ಪೆಡೆಸ್ಟ್ರಿಯನ್ ಕ್ರಾಸಿಂಗ್) ಕೊರತೆಗೆ ಸಂಬಂಧಿಸಿದಂತೆ,
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಕೆ.ವಿನೋದ್ ಚಂದ್ರನ್ ಅವರಿದ್ದ ಪೀಠವು ಕಳೆದ ವಾರ ಲಘು ಹಾಸ್ಯದ ಧಾಟಿಯಲ್ಲಿ ಮಾತನಾಡುತ್ತಾ- ನವೆಂಬರ್ 25ರೊಳಗೆ ದೃಢವಾದ ಕ್ರಮ ಕೈಗೊಳ್ಳದಿದ್ದರೆ, ನ್ಯಾಯಾಧೀಶರೇ ದೆಹಲಿ ಹೈಕೋರ್ಟ್ ಹೊರಗೆ ಧರಣಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಹೇಳಿತು.
ನ್ಯಾಯಮೂರ್ತಿಗಳ ಈ ಹತಾಶೆ ಸಂಪೂರ್ಣ ಸಮರ್ಥನೀಯವಾಗಿದೆ. ಆದರೆ ಪ್ರಶ್ನೆಯೆಂದರೆ: ಇಡೀ ದೇಶದಾದ್ಯಂತ ಕಾಲುದಾರಿಗಳ ಪರಿಸ್ಥಿತಿ ಹೀನಾಯ ವಾಗಿರುವಾಗ, ಯಾರೆಂದು ಎಲ್ಲಿಯವರೆಗೆ ಪ್ರತಿಭಟನಾ ಧರಣಿ ಕುಳಿತುಕೊಳ್ಳಲು ಸಾಧ್ಯ ?