ಶಿಕ್ಷಣಲೋಕ
ಸುರೇಂದ್ರ ಪೈ, ಭಟ್ಕಳ
ಪ್ರಸ್ತುತ ದೇಶಾದ್ಯಂತ ಕೇಂದ್ರದ ಶಿಕ್ಷಣ ವ್ಯವಸ್ಥೆ ಬಹಳಷ್ಟು ಸದ್ದು ಮಾಡುತಿರುವುದು ಎಲ್ಲರಿಗೂ ತಿಳಿದ ಸಂಗತಿ. ಒಂದೆಡೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ 22 ಲಕ್ಷ ವಿದ್ಯಾರ್ಥಿಗಳು ಮರು ಪರೀಕ್ಷೆ ಎದುರಿಸಬೇಕಾದ ಪರಿಸ್ಥಿತಿ. ಇನ್ನೊಂದೆಡೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 12ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶ ಕುಸಿತ ಹಾಗೂ ಉತ್ತರ ಪತ್ರಿಕೆ ಮೌಲ್ಯಮಾಪನ ವ್ಯವಸ್ಥೆಯ ದೋಷ. ಮತ್ತೊಂದೆಡೆ ಸಿಬಿಎಸ್‌ಇ ಮಾಧ್ಯಮಿಕ ಶಾಲೆಯ 9ನೇ ತರಗತಿಗೆ ಪ್ರಸಕ್ತ ಸಾಲಿನಿಂದಲೇ ತ್ರಿಭಾಷಾ ಸೂತ್ರ ಅಳವಡಿಸಿಕೊಳ್ಳುವ ಆದೇಶ.
ಇವೆಲ್ಲದರ ನಡುವೆ ತರಾತುರಿಯಲ್ಲಿ ಯಾವುದೇ ಪೂರ್ವತಯಾರಿಯಿಲ್ಲದೇ ಸಿಬಿಎಸ್‌ಇ 9ನೇ ತರಗತಿ ಪಠ್ಯಕ್ರಮ ಬದಲಾವಣೆಯ ಗದ್ದಲ. ಇಷ್ಟೆ ಪ್ರಮುಖ ಸಮಸ್ಯೆಗಳೊಂದಿಗೆ ಹಲವು ದಶಕಗಳಿಂದಲೂ ಒಂದೇ ಒಂದು ಕಪ್ಪ ಚುಕ್ಕಿ ಇಲ್ಲದೇ ವ್ಯವಸ್ಥಿತವಾಗಿ ಗುಣಮಟ್ಟ ದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದ್ದ ಸಿಬಿಎಸ್‌ಇ ಆಡಳಿತ ವ್ಯವಸ್ಥೆ ಪಾಳು ಬೀಳಲು ಒಂದು ಕಾರಣ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್.
ಜವಾಬ್ದಾರಿ ಸ್ಥಾನದಲ್ಲಿರುವ ಶಿಕ್ಷಣ ಸಚಿವರ ನಿರ್ಲಕ್ಷ ವು ಹೇಗೆ ಪ್ರಾಥಮಿಕ ಶಿಕ್ಷಣದಿಂದ ವೈದ್ಯಕೀಯ ಶಿಕ್ಷಣದ ತನಕ ಸಂಪೂರ್ಣ ವ್ಯವಸ್ಥೆಯನ್ನು ಹಾಳು ಮಾಡುತ್ತದೆ ಎಂಬುದಕ್ಕೆ ಈ ಸನ್ನಿವೇಶವೇ ಸಾಕ್ಷಿ. ಸಿಬಿಎಸ್‌ಇ ತನ್ನ ವ್ಯವಸ್ಥಿತ ಕ್ರಿಯಾಯೋಜನೆ ಹಾಗೂ ಅದರ ಅನುಷ್ಠಾನಕ್ಕೆ ಹೆಸರುವಾಸಿಯಾದ ಶಿಕ್ಷಣ ಇಲಾಖೆ. ಆದರೆ ಇತ್ತೀಚಿನ ಬೆಳವಣಿಗೆ ನೋಡು ತ್ತಿದ್ದರೆ ಸಿಬಿಎಸ್‌ಇ ಎಂಬ ಬೃಹತ್ ಆನೆಯನ್ನೆ ಖೆಡ್ಡಾಕ್ಕೆ ಬೀಳಿಸುವ ಕೆಲಸವನ್ನು ಧರ್ಮೇಂದ್ರ ಪ್ರಧಾನ್ ಹಾಗೂ ಕೇಂದ್ರ ಸರಕಾರ ಮಾಡಲು ಹೊರಟಂತಿದೆ.
‘ಡಿಜಿಟಲ್ ಎಜುಕೇಶನ್’ ಹಾಗೂ ‘ಎನ್‌ಇಪಿ 2020’ ಅನುಷ್ಠಾನವನ್ನು ನಿಗದಿತ ಅವಧಿ ಯೊಳಗೆ ಯಶಸ್ವಿಯಾಗಿಸಬೇಕೆಂಬ ಒತ್ತಡದ ಕಾರಣ ಯಾವುದೇ ಪೂರ್ವಾಪರ ಯೋಜನೆ, ತರಬೇತಿ ಇಲ್ಲದೇ ಒಂದರ ಹಿಂದೆ ಒಂದರಂತೆ ಹೊಸ ಹೊಸ ಯೋಜನೆ ಜಾರಿ ಮಾಡುವ ತರಾತುರಿಯಲ್ಲಿ ಕೇಂದ್ರ ಶಿಕ್ಷಣ ಇಲಾಖೆ ಹೆಜ್ಜೆ ಹಾಕುತ್ತಿದೆ.
ಇದನ್ನೂ ಓದಿ: Surendra Pai Column: ನೀಟ್ ಅಕ್ರಮ: ಕೇಂದ್ರ ಸರಕಾರದ ಮೌನವೇಕೆ ?
2020-21ರ ಕೋವಿಡ್ ಕಾಲಘಟ್ಟವನ್ನೊಮ್ಮೆ ಮೆಲುಕು ಹಾಕೋಣ. ಅಂದಿನ ಕೇಂದ್ರ ಶಿಕ್ಷಣ ಸಚಿವರಾಗಿದ್ದ ಡಾ.ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರ ಕಾರ್ಯವೈಖರಿ ಇಂದಿಗೂ ದೇಶಕ್ಕೆ ಮಾದರಿ. ಕೋವಿಡ್ ಕಾರಣ ಶಿಕ್ಷಣ ವ್ಯವಸ್ಥೆಯಲ್ಲಿ ಮೊದಲ ಬಾರಿಗೆ ಏಕಾಏಕಿ ಯಾಗಿ ಬೋರ್ಡ್ ಪರೀಕ್ಷೆ ರದ್ದುಪಡಿಸಬೇಕಾದ ಅನಿವಾರ್ಯತೆ ಎದುರಾದಾಗ ಮುಂದೇ ನು? ಹೇಗೆ ಸಿಬಿಎಸ್‌ಇ 10 ಮತ್ತು 12ನೇ ತರಗತಿ ಫಲಿತಾಂಶ ಘೋಷಣೆ ಮಾಡುತ್ತಾರೆ ಎಂಬ ಕುತೂಹಲ ಗರಿಗೆದರಿತ್ತು.
ಅಂತಹ ಸಮಯದಲ್ಲೂ ಅತಿ ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಫಲಿತಾಂಶ ನೀತಿಯನ್ನು ಶಾಲೆಗಳಿಗೆ ನೀಡಿ, ಯಾವ ವಿದ್ಯಾರ್ಥಿಗಳಿಗೂ ಅನ್ಯಾಯವಾಗದಂತೆ ಪ್ಲಸ್ ಎರಡು ಅಥವಾ ಮೈನಸ್ ಎರಡು ಅಂಕಗಳಷ್ಟೇ ವ್ಯತ್ಯಾಸವಾಗುವ ಹಾಗೆ ಮಕ್ಕಳ ಶೈಕ್ಷಣಿಕ ಹಾಗೂ ಮಾನಸಿಕ ಸಾಧನೆಗೆ ಧಕ್ಕೆ ಆಗದಂತೆ ಫಲಿತಾಂಶ ನೀಡಿ ಸೈ ಎನಿಸಿಕೊಂಡಿದ್ದರು.
ಅಂದು ಸಿಬಿಎಸ್‌ಇ ಹೊರತುಪಡಿಸಿ ಇತರ ರಾಜ್ಯ ಶಿಕ್ಷಣ ಇಲಾಖೆಗಳು ಬಹುತೇಕ ನೂರಕ್ಕೆ ನೂರು ಫಲಿತಾಂಶ ನೀಡಿದವು. ನೂರಾರು ವಿದ್ಯಾರ್ಥಿಗಳು ಶೇಕಡ ನೂರು ಅಂಕ ಪಡೆಯುವ ನಿಯಮ ಮಾಡಿದ್ದವು. ಆದರೆ ಸಿಬಿಎಸ್‌ಇನಲ್ಲಿ ಮಾತ್ರ ಅಂತಹ ಅವ್ಯವಸ್ಥೆ ಕಂಡು ಬಂದಿರಲಿಲ್ಲ.
ಪರೀಕ್ಷೆಗೆ ಅವರು ನೀಡುತ್ತಿದ್ದ ಕಾಳಜಿ, ಅಧಿಕಾರಿಗಳೊಂದಿಗೆ ಇದ್ದ ನಿರಂತರ ಸಂಪರ್ಕ, ಅಭಿವೃದ್ಧಿಯ ನಡೆ ಇಂದಿಗೂ ದಾರಿದೀಪವಾಗಿದೆ. ಆದರೆ ಧರ್ಮೇಂದ್ರ ಪ್ರಧಾನ್ ಮಾತ್ರ 2017 ರಿಂದ ಸತತವಾಗಿ ನೀಟ್ ಪರೀಕ್ಷೆಯ ಅಕ್ರಮಗಳು ನಡೆಯುತ್ತಿದ್ದರೂ ವ್ಯವಸ್ಥೆ ಯನ್ನು ಭದ್ರಗೊಳಿಸಿ ಮಕ್ಕಳಿಗೆ ನ್ಯಾಯ ನೀಡುವತ್ತ ಗಮನ ಹರಿಸಿಲ್ಲ.
ತಾವು ಚುನಾವಣೆಗೆ ನೀಡುವಷ್ಟು ಗಮನ, ತೋರಿದ ಕಾಳಜಿ ತಮ್ಮ ಇಲಾಖೆಯ ಅಭಿವೃದ್ಧಿ ಯ ಕಡೆ ನೀಡದಿರುವುದು ಇಷ್ಟೆ ಅನಾಹುತಕ್ಕೆ ಕಾರಣ. ಇಂದು ಜನರಿಗೆ ಕೇಂದ್ರ ಸರಕಾರ ನಡೆಸುವ ಪ್ರವೇಶ ಪರೀಕ್ಷೆಯ ಮೇಲಿನ ವಿಶ್ವಾಸ ಹೊರಟು ಹೋಗಿದೆ. ಪರೀಕ್ಷೆ ಚಿಕ್ಕದಾ ಗಿರಲಿ, ದೊಡ್ಡದಾಗಿರಲಿ ಪರೀಕ್ಷೆಯ ಗಾಂಭೀರ್ಯತೆಗೆ ಧಕ್ಕೆ ಬರಕೂಡದು. ಅಕ್ರಮದ ಕುರಿತ ತನಿಖೆ ನಡೆದರೂ ಅಪರಾಧಿಗಳ ವಿವರ ಬಹಿರಂಗಪಡಿಸಿಲ್ಲ.
ಡಾ.ರಾಧಾಕೃಷ್ಣನ್ ಆಯೋಗ್ ವರದಿಯನ್ನು ಅನುಷ್ಠಾನ ಮಾಡಿಲ್ಲ. ಗಡ್ಡಕ್ಕೆ ಬೆಂಕಿ ಬಿದ್ದಮೇಲೆ ಬಾವಿ ತೋಡಿದಂತೆ, ಪ್ರಶ್ನೆ ಪತ್ರಿಕೆ ಸೋರಿಕೆ ಆಗಿ ಪರೀಕ್ಷೆ ನಡೆದು ತಿಂಗಳ ಬಳಿಕ ಇನ್ನೇನು ತಮ್ಮ ಇಲಾಖೆಯ ಮರ್ಯಾದೆ ಹೋಗುತ್ತದೆ, ಯುವಕರು ಬೀದಿಗಿಳಿದು ಹೋರಾಡುತ್ತಾರೆ ಎನ್ನುವಾಗ ಮರುಪರೀಕ್ಷೆ ಆದೇಶ ನೀಡಿದರು.
ಮುಂದಿನ ಬಾರಿ ಕಂಪ್ಯೂಟರ್ ಟೆಸ್ಟ್ ಮಾಡುತ್ತೇವೆ ಎಂದು ಘೋಷಣೆ ಮಾಡಿದರು. ಆದರೆ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯ ಬಗ್ಗೆ ಧೈರ್ಯ ತುಂಬುವ ಮಾತು ಆಡಲಿಲ್ಲ. ಕನಿಷ್ಠ ಪಕ್ಷ ಆಗಿರುವ ತಪ್ಪನ್ನು ಒಪ್ಪಿ, ಕ್ಷಮೆ ಕೇಳಲಿಲ್ಲ.
ಇಷ್ಟೇ ಅಲ್ಲದೇ ಯಾವುದೇ ಪೂರ್ವತಯಾರಿ ಇಲ್ಲದೇ 2025-26ನೇ ಸಾಲಿನ ಸಿಬಿಎಸ್‌ಇ ಬೋರ್ಡ್ ಪರೀಕ್ಷೆ ಪ್ರಾರಂಭವಾಗುವ ಒಂದು ವಾರದ ಮೊದಲು ಏಕಾಏಕಿಯಾಗಿ ಈ ಬಾರಿ 12ನೇ ತರಗತಿಯ ಮೌಲ್ಯಮಾಪನಕ್ಕಾಗಿ ಆನ್ -ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿರುವುದಾಗಿ ಘೋಷಣೆ ಮಾಡಿದರು. ಈ ಬಾರಿ 12ನೇ ತರಗತಿ ಪರೀಕ್ಷೆಗೆ ೧೫ ಲಕ್ಷ ಮಕ್ಕಳು ಹಾಜರಾಗಿದ್ದರು.
ಪರೀಕ್ಷಾ ಪ್ರಾಧಿಕಾರವೇ ಅಧಿಕೃತ ಮಾಹಿತಿ ನೀಡಿದ್ದಂತೆ 98.6 ಲಕ್ಷ ಉತ್ತರ ಪತ್ರಿಕೆಯನ್ನು ಆನ್-ಸ್ಕ್ರೀನ್ ಮಾರ್ಕಿಂಗ್ ಮೂಲಕ ಮೌಲ್ಯಮಾಪನ ಮಾಡಲಾಗಿದೆ. ಆದರೆ ಅದನ್ನು ಗಣಕೀಕೃತ ವ್ಯವಸ್ಥೆಯ ಮೂಲಕ ಮೌಲ್ಯಮಾಪನ ಮಾಡುವ ಶಿಕ್ಷಕರಿಗೆ ಶಾಲಾ ಹಂತ ದಲ್ಲಿ ಒಂದೇ ಬಾರಿ ಶಾಲಾ ಆನ್ʼಲೈನ್ ಪೋರ್ಟಲ್ ಮೂಲಕ ತರಬೇತಿ/ಡೆಮೊ ನೀಡಲಾ ಗಿದೆ. ಒಂದೊಮ್ಮೆ ಶಿಕ್ಷಕರಿಗೆ ಏನಾದರೂ ಸಮಸ್ಯೆ ಏದುರಾದರೆ ಅವಕ್ಕೂ ಆನ್ʼಲೈನ್ ಕೈಪಿಡಿ ಮಾರ್ಗದರ್ಶಕ.
ಬಹುಆಯ್ಕೆಯ ಪ್ರಶ್ನೆಗಳಾದರೆ ಅಥವಾ ಒಂದು ಅಂಕದ ಉತ್ತರವಾದರೆ ಈ ವ್ಯವಸ್ಥೆಯ ಮೂಲಕ ಮೌಲ್ಯಮಾಪನ ಮಾಡುವುದು ಸೂಕ್ತ. ಆದರೆ ದೀರ್ಘ ಪ್ರಶ್ನೆಗಳಿಗೆ ವಿದ್ಯಾರ್ಥಿಯ ಉತ್ತರವನ್ನು ಎರಡು ಪುಟಗಳಲ್ಲಿ ಬರೆದಾಗ ಉತ್ತರ ಪತ್ರಿಕೆ ಕೈಯಲ್ಲಿದ್ದರೆ ಅದನ್ನು ಚೆಕ್ ಮಾಡುವುದಕ್ಕೂ ಆನ್ʼಲೈನ್ ಟೂಲ್ ಬಳಸಿ ಒಂದೊಂದೆ ಪುಟ ನೋಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.
ಹೀಗೆ ಹಲವಾರು ದೋಷಗಳಿದ್ದರೂ ಸಹ ಯಾವುದನ್ನು ವಿಶ್ಲೇಷಿಸದೇ ಅತ್ತ ಸೂಕ್ತ ತರಬೇತಿಯೂ ನೀಡದೇ ಏಕಾಏಕಿಯಾಗಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಟ್ರಯಲ್ ಎರರ್ ಪ್ರಯೋಗ ನಡೆಸಿದ್ದು ಅಕ್ಷಮ್ಯ. ಇದರ ಪರಿಣಾಮ ಕಳೆದ ಶೈಕ್ಷಣಿಕ ಸಾಲಿಗಿಂತ ಈ ಬಾರಿ ಶೇ 3.19 ಕಡಿಮೆ ಫಲಿತಾಂಶ, 85.2 ಪ್ರತಿಶತ ದಾಖಲಾಯಿತು.
ಇದರೊಂದಿಗೆ ಮರು ಮೌಲ್ಯಮಾಪನ ಪೋರ್ಟಲ್ ಸಮಸ್ಯೆ ಮಕ್ಕಳ ನೆಮ್ಮದಿಯನ್ನು ಕಿತ್ತು ಕೊಂಡಿತು. ಪರಿಣಾಮ ಸಿಬಿಎಸ್‌ಇ ಇತಿಹಾಸದ ಮೊದಲ ಬಾರಿಗೆ ಬರೋಬ್ಬರಿ ಐದು ಸಲಕೊನೆಯ ದಿನಾಂಕವನ್ನು ವಿಸ್ತರಿಸಲಾಯಿತು. ಇಷ್ಟಕ್ಕೆ ಕಾರಣರಾದ ಪ್ರಧಾನ್ ರಾಜೀನಾಮೆ ನೀಡಿ ಕ್ಷಮೆ ಕೇಳುವ ಬದಲು ಸ್ಥಾನ ಉಳಿಸಿಕೊಳ್ಳಲು ತಾಂತ್ರಿಕ ಸಮಸ್ಯೆ ಯನ್ನು ಬಗೆಹರಿಸಲು ದೇಶದ ಪ್ರತಿಷ್ಠಿತ ಐಐಟಿ ಮೊರೆ ಹೋಗಿ ಸಮರ್ಥನೆ ನೀಡಿದರು.
ಶಿಕ್ಷಣ ವ್ಯವಸ್ಥೆಯು ಸಹ ಕಾಲಕ್ಕೆ ತಕ್ಕಂತೆ ಬದಲಾಗಬೇಕು ನಿಜ. ಹಾಗಂತ ಹಿಂದೆ ಮುಂದೆ ಯೋಚಿಸದೇ ಕ್ರಮ ಕೈಗೊಳ್ಳುವುದು ಮೂರ್ಖತನ. ತರಾತುರಿಯಲ್ಲಿ ಒಂದೇ ಸಮನೆ 12ನೇ ತರಗತಿಗೆ ಅದನ್ನು ಅನ್ವಯಿಸುವ ಬದಲಾಗಿ ಪ್ರಸಕ್ತ ವರ್ಷ ಶಾಲಾ ಹಂತದಲ್ಲಿ ಪ್ರತಿ ಯೊಂದು ರಾಜ್ಯದ ಆಯ್ದ ಶಾಲೆಯ 11ನೇ ತರಗತಿ ಪರೀಕ್ಷೆಗೆ ಅಳವಡಿಸಬಹುದಿತ್ತು. ಆಗ ಇದರ ಸಾಧಕ ಬಾಧಕ ತಿಳಿಯುತ್ತಿತ್ತು.
ಎನ್‌ಇಪಿ 2020 ಮೂಲಕ ಶಿಕ್ಷಣ ಕ್ರಾಂತಿ ಮಾಡಲು ಹೊರಟ ಕೇಂದ್ರ ಶಿಕ್ಷಣ ಇಲಾಖೆ ಅವಸರ ಅವಸರದಲ್ಲಿ ಸಿಬಿಎಸ್‌ಇ ಪಠ್ಯಕ್ರಮವನ್ನು 2024-25ರಿಂದ ತರಗತಿವಾರು ಬದಲಾವಣೆ ಮಾಡುತ್ತಾ ಸಾಗಿತು. ಇಲ್ಲಿ ಸ್ವಾರಸ್ಯಕರ ಸಂಗತಿಯೆಂದರೆ ಸಿಬಿಎಸ್‌ಇ ಮೊದಲಿನಿಂದಲೂ ಸಿಇಆರ್‌ಟಿ ಪಠ್ಯಕ್ರಮವನ್ನು ಕಡ್ಡಾಯವಾಗಿ ಅನುಸರಿಸುತ್ತಿದೆ. ಆದರೆ 2024-25ರಲ್ಲಿ ತರಗತಿ 3 ಮತ್ತು 6, 2025-26ರಲ್ಲಿ 4,5,7 ಮತ್ತು 8ನೇ ತರಗತಿ ಪಠ್ಯಕ್ರಮ ಬದಲಾಗಿ ಒಂದು ವರ್ಷ ವಾದರೂ ಶಾಲೆಗಳಿಗೆ ಪಠ್ಯಪುಸ್ತಕ ದೊರಕಲಿಲ್ಲ.
ಶಾಲೆಗಳು ಆ ವರ್ಷ ಹಳೆಯ ಪಠ್ಯಕ್ರಮವನ್ನೇ ಪಾಠ ಮಾಡಿದವು. ಇದರ ಬಗ್ಗೆ ಆಕ್ಷೇಪ, ಮನವಿ ಮಾಡಿಕೊಂಡರೂ ಯಾವುದೇ ಸ್ಪಂದನೆ ದೊರಕಲಿಲ್ಲ. 3ರಿಂದ 8ನೇ ತರಗತಿಯ ಮಕ್ಕಳು ಬೋರ್ಡ್ ಪರೀಕ್ಷೆ ಬರೆಯದ ಕಾರಣ ಶಾಲೆ ಹಾಗೂ ಪಾಲಕರು ಇದರ ಬಗ್ಗೆ ಹೆಚ್ಚು ಹೋರಾಟ ಮಾಡಲಿಲ್ಲ.
ಇಲ್ಲಿ ಎನ್‌ಸಿಇಆರ್‌ಟಿ ಹಾಗೂ ಸಿಬಿಎಸ್‌ಇ ನಡುವಿನ ಸಮನ್ವಯ ಕೊರತೆ ಎದ್ದು ಕಂಡರೂ ಸಚಿವರು ಅದನ್ನು ಸರಿಪಡಿಸಿಲ್ಲ. ಇದರ ನಡುವೆಯೇ ಕಳೆದ ವರ್ಷ ಬಿಡುಗಡೆ ಯಾದ 8ನೇ ತರಗತಿಯ ಸಮಾಜ ವಿಜ್ಞಾನ ಭಾಗ-2 ಪಠ್ಯಕ್ರಮದಲ್ಲಿ ನ್ಯಾಯಾಂಗ ವ್ಯವಸ್ಥೆಯ ಕುರಿತ ಆಕ್ಷೇಪಾರ್ಹ ಪಠ್ಯವಿದ್ದ ಕಾರಣ 22500 ಮುದ್ರಿತ ಪ್ರತಿಯನ್ನು ಹಿಂಪಡೆ ಯಲಾಯಿತು.
ಇನ್ನೂ ತನಕ ಭಾಗ-2 ಪಠ್ಯಪುಸ್ತಕ ಬಿಡುಗಡೆಯಾಗಿಲ್ಲ. ಜೊತೆಗೆ ಈ ವರ್ಷದಿಂದ 9ನೇ ತರಗತಿಯ ಪಠ್ಯಕ್ರಮ ಬದಲಾವಣೆ ಮಾಡಲಾಗಿದ್ದು ಇಂಗ್ಲೀಷ್, ವಿಜ್ಞಾನ, ಗಣಿತ ಪುಸ್ತಕ ಮಾತ್ರ ಬಿಡುಗಡೆಯಾಗಿದೆ. ಅದರಲ್ಲೂ ಗಣಿತ ಪಠ್ಯಪುಸ್ತಕ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.
ಏಪ್ರಿಲ್ 1ರಂದು ಶೈಕ್ಷಣಿಕ ವರ್ಷದ 9ನೇ ತರಗತಿ ಪ್ರಾರಂಭವಾದರೂ ಸಮಾಜ ವಿಜ್ಞಾನ ಪುಸ್ತಕದ ಸುಳಿವಿಲ್ಲ. ಸಮಾಜ ವಿಜ್ಞಾನ ತರಗತಿಯಲ್ಲಿ ಶಿಕ್ಷಕರು ಏನು ಕಲಿಸಬೇಕು? ಅಷ್ಟೇ ಅಲ್ಲದೆ ಮುಂದಿನ ವರ್ಷ 10ನೇ ತರಗತಿಗೂ ಪಠ್ಯಪುಸ್ತಕ ಬದಲಾವಣೆ ಇದೆ ಎಂದಿದ್ದಾರೆ. ಅವರಿಗೂ ಹೀಗೆ ಆದರೆ ಬೋರ್ಡ್ ಪರೀಕ್ಷೆ ಎದುರಿ ಸುವ ಮಕ್ಕಳ ಮಾನಸಿಕ ಒತ್ತಡಕ್ಕೆ ಯಾರು ಜವಾಬ್ದಾರರು? ಇದರ ಜೊತೆ ಮೊದಲೇ ಹೇಳಿದಂತೆ ಪ್ರಸಕ್ತ ವರ್ಷದಿಂದಲೇ ಏಕಾಏಕಿ ತ್ರಿಭಾಷಾ ಸೂತ್ರ ನೀತಿಯನ್ನು 9ನೇ ತರಗತಿಗೆ ಕಡ್ಡಾಯ ಮಾಡಲಾಗಿದೆ.
ಆದರೆ ಶೈಕ್ಷಣಿಕ ವರ್ಷದ ಪ್ರಾರಂಭದ ಏಪ್ರಿಲ್ ಮೊದಲ ವಾರ 9 ಹಾಗೂ 10ನೇ ತರಗತಿಗೆ ತ್ರಿಭಾಷಾ ಸೂತ್ರ ಅನ್ವಯ ಆಗುತ್ತದೆ ಎಂದು ಆದೇಶ ಹೊರಡಿಸಿ, ಈಗ ಜುಲೈ 1ರ ಒಳಗೆ 9ನೇ ತರಗತಿಗೂ ಕಡ್ಡಾಯ ಮಾಡಲಾಗಿದೆ ಎಂದರೆ ಶಿಕ್ಷಕರು ಹಾಗೂ ಇತರ ಸಂಪನ್ಮೂಲ ವೇನು ಮರದಿಂದ ಉದುರುತ್ತದಾ? ಹೀಗೆ ಎಲ್ಲವೂ ಗೊಂದಲ ಹಾಗೂ ತರಾತುರಿಯ ನಿರ್ಧಾರದಿಂದಲೇ ಇಂದು ಕೇಂದ್ರ ಶಿಕ್ಷಣ ಇಲಾಖೆ ತನ್ನ ಛಾಪನ್ನು ಕಳೆದುಕೊಳ್ಳುವ ಹಂತದಲ್ಲಿದೆ.
ಯಾವ ಪಾಲಕರು ತಮ್ಮ ಮಕ್ಕಳ ಭವಿಷ್ಯದ ಒಳಿತಿಗಾಗಿ ಉಳಿದೆ ಶಿಕ್ಷಣ ಇಲಾಖೆಗಳನ್ನು ಬಿಟ್ಟು ರಾಷ್ಟ್ರೀಯ ಮಟ್ಟದ ಶಿಕ್ಷಣ ಮಂಡಳಿಯಾದ ಸಿಬಿಎಸ್‌ಇ ಶಾಲೆಗಳಿಗೆ ದಾಖಲಾತಿ ಮಾಡಲು ದುಂಬಾಲು ಬೀಳುತ್ತಿದ್ದರೋ, ಇಂದು ಅದೇ ಪಾಲಕರು ಪ್ರಸಕ್ತ ಶಿಕ್ಷಣ ವ್ಯವಸ್ಥೆ ಯ ಸಾಲು ಸಾಲು ವೈಫಲ್ಯ, ಗೊಂದಲಗಳನ್ನು ನೋಡಿ ಮತ್ತೆ ರಾಜ್ಯ ಪಠ್ಯಕ್ರಮ ಶಾಲೆ ಗಳತ್ತ ಆಸಕ್ತಿ ತಳೆಯುತ್ತಿದ್ದಾರೆ.
ದೇಶದ ಶಿಕ್ಷಣ ವ್ಯವಸ್ಥೆ ಪ್ರಧಾನ್ ಕೈಯಲ್ಲಿ ಸುರಕ್ಷಿತವೇ ಎಂಬ ಪ್ರಶ್ನೆ ಮೂಡಿದೆ. ಅಧಿಕಾರ, ಸಂಪನ್ಮೂಲ ಎಲ್ಲವೂ ಇದ್ದು ವೈಫಲ್ಯಕ್ಕೆ ಕಾರಣ ವೇನು ಎಂಬುದಕ್ಕೆ ಪ್ರಧಾನ್ ಉತ್ತರಿಸಬೇಕಿದೆ. ಚುನಾವಣೆ ಮಾತ್ರ ಶಾಂತಿಯುತವಾಗಿ, ನ್ಯಾಯಯುತವಾಗಿ ನಡೆದರೆ ಸಾಲದು. ದೇಶದ ಪ್ರಗತಿಗೆ ಬಹುಮುಖ್ಯ ಕೊಡುಗೆ ನೀಡುವ ಶಿಕ್ಷಣ ವ್ಯವಸ್ಥೆ ಸಹ ಸರಿಯಾಗಿ ನಡೆಯಬೇಕಲ್ಲವೆ?