ಸಮರ ವ್ಯಾಖ್ಯಾನ
ಪ್ರಕಾಶ ಹೆಗಡೆ
ಅಮೆರಿಕಾದ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ಮತ್ತು ತೀವ್ರಗಾಮಿ ಸಂಘಟನೆ ಗಳಂದಾದ ಕು ಕ್ಲಕ್ಸ್ ಕ್ಲಾನ್ (Ku Klux Klan) 20ನೇ ಶತಮಾನದ ಆರಂಭದಲ್ಲಿ ಅಮೆರಿಕನ್ನ ರಲ್ಲಿ ಆತಂಕ ಹುಟ್ಟಿಸಿತ್ತು. ಈ ರಹಸ್ಯ ಸಂಘಟನೆಯ ನಿಗೂಢತೆಯೇ ಜನರಲ್ಲಿನ ಆತಂಕಕ್ಕೆ ಕಾರಣವಾಗಿತ್ತು.
ಕ್ರಮೇಣವಾಗಿ ಲಕ್ಷಾಂತರ ಸದಸ್ಯರನ್ನು ಪ್ರಭಾವಿಸುವ ಮಟ್ಟಕ್ಕೆ ಬೆಳೆದ ಈ ಸಂಘಟನೆ, ಶ್ವೇತವರ್ಣೀಯರ ಮೇಲುಗೈ ಮತ್ತು ಜಾತ್ಯತೀತ ದ್ವೇಷವನ್ನು ಉತ್ತೇಜಿಸುವ ಹಿಂಸಾತ್ಮಕ ಗುಂಪಾಗಿ ರೂಪಾಂತರಗೊಂಡಿತು. ದ್ವೇಷದ ಕ್ರೂರತೆಯ ಪರಮಾವಧಿ ಎಷ್ಟಿತ್ತೆಂದರೆ, ಈ ಸಂಘದ ಸದಸ್ಯರು ಆಫೋ-ಅಮೆರಿಕನ್ನರು, ಯಹೂದಿಗಳು, ಕ್ಯಾಥೋಲಿಕರು, ಮತ್ತು ವಲಸಿಗರನ್ನು ಹತ್ಯೆಗೈಯುವ ಶಪಥ ಮಾಡುತ್ತಿದ್ದರು. ಇಂದು ಈ ಸಂಘಟನೆಯ ಪ್ರಭಾವ ಬಹಳ ಕಡಿಮೆಯಾಗಿದ್ದರೂ, ಕೆಲವು ಸಣ್ಣ ಗುಂಪುಗಳು ಅಲ್ಲಲ್ಲಿ ಅಸ್ತಿತ್ವದಲ್ಲಿವೆ.
ಇಲ್ಲಿ *KKK ಬಗೆಗಿನ ಉಲ್ಲೇಖವೇಕೆಂದರೆ, ಅತ್ಯಂತ ಕಳವಳಕಾರಿ ಬೆಳವಣಿಗೆಯೆಂಬಂತೆ, ಇದೇ ರೀತಿಯ ಗುಂಪು ಅಮೆರಿಕ ಕೇಂದ್ರವನ್ನಾಗಿರಿಸಿ ಜಗತ್ತಿನಾದ್ಯಂತ ಇರಾನ್ ಯುದ್ಧ ವನ್ನು ಬೈಬಲ್‌ನ ರೆವಲೇಷನ್ (Biblical Revelation) ತತ್ವದ ಆಧಾರದಲ್ಲಿ ಪವಿತ್ರ ಯುದ್ಧ ವೆಂದು (Holy War) ಬಣ್ಣಿಸಿ ಜಗತ್ತಿನ ಅಂತ್ಯದ ಭವಿಷ್ಯನುಡಿಯನ್ನು ಪ್ರತಿಪಾದಿಸುತ್ತಿವೆ.
ಪವಿತ್ರ ಯುದ್ಧದ ಪ್ರಸ್ತಾಪ ಈಗ ಡಾರ್ಕ್-ವೆಬ್‌ನಂತಹ ವೇದಿಕೆಗಳಲ್ಲೂ ಮತ್ತು ಇವ್ಯಾಂಜೆ ಲಿಕಲ್ ಗುಂಪುಗಳಲ್ಲಿ ಬಹು ಚರ್ಚಿತ ವಿಷಯವಾಗಿದೆ. ಕೆಲವರು ಅಯ್ಯೋ ಇದು ಸಂಚು ಸಿದ್ಧಾಂತ! (Conspiracy Theory) ಅಂತ ಕೈಚೆಲ್ಲಿದರೆ, ಇನ್ನಿತರರು ಇದೊಂದು ದೈವಿಕ ಮಿಷನ್ ಅಂತ ಭಕ್ತಿಯಿಂದ ಸ್ವೀಕರಿಸುತ್ತಾರೆ.
ಇದನ್ನೂ ಓದಿ: Prakash Hegde Column: ಜೆನ್-ಝಿ: ಡಿಜಿಟಲ್ ತಲೆಮಾರಿನ ಅನನ್ಯ ಯುವಶಕ್ತಿ
ವಿವೇಕಚಿತ್ತದಿಂದ ಪಕ್ಷಪಾತವಿಲ್ಲದೇ ವಿಶ್ಲೇಷಿಸಿದರೆ ಇದು ಸ್ವಲ್ಪ ಇತಿಹಾಸ, ಸ್ವಲ್ಪ ರಾಜಕೀಯ, ಸ್ವಲ್ಪ ಧರ್ಮ, ಮತ್ತು ತುಂಬಾ ಡ್ರಾಮಾ ಮಿಕ್ಸ ಆಗಿರುವ ಒಂದು ನಿಗೂಢ ಕಲ್ಪನೆ. ಕೆಲ ಕಲ್ಪನೆಗಳು ಸಿನಿಮಾ ಕಥೆಗೂ ಮೀರಿದಂತಿರುತ್ತವೆ. ಕೆಲ ನಿಷ್ಠಾವಂತ ಧಾರ್ಮಿಕ ವಿಶ್ವಾಸಿಗಳ ಮನಸ್ಸಿನಲ್ಲಿ ಹೇಗೆ ಅದ್ಭುತವಾಗಿ ರೂಪಾಂತರ ಹೊಂದಿ ಜೀವಿತವಾಗುತ್ತದೆ ಅನ್ನೋದೇ ಅತ್ಯಂತ ಕೌತುಕದ ಸಿದ್ಧಾಂತ.
ಪವಿತ್ರ ಯುದ್ಧ ಎಂಬುದು ಇತಿಹಾಸದಲ್ಲಿ ಧಾರ್ಮಿಕ ಭಾವನೆಗಳೊಂದಿಗೆ ಗುರುತಿಸಿ ಕೊಂಡ ಯುದ್ಧಗಳಿಗೆ ಸಂಬಂಧಿಸಿದೆ. ಆದರೆ, ಈ ಕಲ್ಪನೆ ಯಾವುದೇ ಒಂದು ಧರ್ಮಕ್ಕೆ ಮಾತ್ರ ಸೀಮಿತವಲ್ಲ ಮತ್ತು ಎಲ್ಲ ಧರ್ಮಗಳಲ್ಲಿಯೂ ಇದರ ಅರ್ಥ ಒಂದೇ ರೀತಿಯಲ್ಲಿಲ್ಲ. ಇಸ್ಲಾಂ ಧರ್ಮದಲ್ಲಿ ಜಿಹಾದ್ ಎಂಬ ಪದವನ್ನು ಬಹಳಷ್ಟು ಬಾರಿ ಪವಿತ್ರ ಯುದ್ಧವೆಂದು ಅರ್ಥೈಸಲಾಗುತ್ತದೆ.
ಕ್ರೈಸ್ತ ಧರ್ಮದ ಇತಿಹಾಸದಲ್ಲಿ ಕ್ರೂಸೇಡ್ಸ್ ಇದಕ್ಕೊಂದು ಉದಾಹರಣೆ. ಹಿಂದೂ ಧರ್ಮ ದಲ್ಲಿ ಧರ್ಮ ಯುದ್ಧವೆಂದು ಪ್ರತಿಪಾದಿಸುವಂತಹ ಕಲ್ಪನೆಯೇ ಈ ಪವಿತ್ರ ಯುದ್ಧ. ಈ ವಿಚಾರವನ್ನು ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ಹಾಗೂ ಸವಿಸ್ತಾರವಾಗಿ ವಿಶ್ಲೇಷಿಸಲಾಗಿದೆ.
ಇತ್ತೀಚಿನ ಇರಾನ್ ಯುದ್ಧದ ಹಿನ್ನೆಲೆಗಳಲ್ಲಿ ಕೆಲವು ಕ್ರೈಸ್ತ ಇವಾಂಜೆಲಿಕಲ್ ಗುಂಪುಗಳು ಈ ಸಂಘರ್ಷವನ್ನು ಪವಿತ್ರ ಯುದ್ಧವೆಂದು ಪ್ರತಿಪಾದಿಸುವ ಪ್ರಯತ್ನ ಮಾಡುತ್ತಿರುವುದು ಗಮನಾರ್ಹ. ಆದರೆ ಇದು ಎಲ್ಲ ಕ್ರೈಸ್ತರ ನಿಲುವಲ್ಲ. ಇದು ಒಂದು ನಿರ್ದಿಷ್ಟ ಧಾರ್ಮಿಕ-ರಾಜಕೀಯ ವ್ಯಾಖ್ಯಾನ ಮಾತ್ರ. ಈ ಗುಂಪುಗಳ ಒಂದು ಭಾಗ ಆರ್ಮಗೆಡ್ಡಾನ್ ಅಥವಾ ಅಂತ್ಯಕಾಲ ಎಂಬ ತತ್ವವನ್ನು ನಂಬುತ್ತದೆ.
ಬೈಬಲ್ʼನ ಬುಕ್ ಆಫ್ ರೆವಲೇಷನ್‌ನಲ್ಲಿ ಉಲ್ಲೇಖಿಸಿರುವಂತೆ, ವಿಶ್ವದಲ್ಲಿ ಒಂದು ದೊಡ್ಡ ಧರ್ಮ ಯುದ್ಧ ಸಂಭವಿಸುತ್ತದೆ. ಮಧ್ಯಪ್ರಾಚ್ಯದಲ್ಲಿ ವಿಶೇಷವಾಗಿ ಇಸ್ರೇಲ್ ಸುತ್ತಮುತ್ತ ನಡೆಯುವ ಯುದ್ಧಗಳು, ಈ ಅಂತ್ಯಕಾಲದ ಆರಂಭಿಕ ಸೂಚನೆಗಳೆಂದು ಪರಿಗಣಿಸಲಾಗು ತ್ತದೆ.
ಇಸ್ರೇಲ್ ಸುತ್ತಮುತ್ತ ನಡೆಯುವ ಯುದ್ಧಗಳ ಸಂಬಂಧವೇಕೆಂದರೆ ಏಸು ಕ್ರಿಸ್ತನು ಬೆತ್ಲೆ ಹೇಮ್‌ನಲ್ಲಿ ಜನಿಸಿದ್ದನು. ಇಂದಿನ ರಾಜಕೀಯ ಭೂಪಟದಲ್ಲಿ ಅದು ಇಸ್ರೇಲ್ ಸಮೀಪದ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿದೆ. ಅವನನ್ನು ಶಿಲುಬೆಗೆ ಏರಿಸಿದ್ದು ಇಂದಿನ ಇಸ್ರೇಲ್ʼನ ಪ್ರಮುಖ ನಗರವಾದ ಜೆರೂಸಲೆಮ್‌ನಲ್ಲಿ. ಈ ಎರಡು ಸ್ಥಳಗಳು ಕ್ರೈಸ್ತ ಧರ್ಮದಲ್ಲಿ ಅತ್ಯಂತ ಪವಿತ್ರ ಸ್ಥಳಗಳಾಗಿದ್ದು, ಇಂದಿನ ಮಧ್ಯಪ್ರಾಚ್ಯದ ರಾಜಕೀಯ ಪರಿಸ್ಥಿತಿಯೊಂದಿಗೆ ಅವುಗಳ ಭೌಗೋಳಿಕ ಸ್ಥಾನ ಕೂಡ ಜೋಡಿಸಿಕೊಂಡಿರುವುದು ಗಮನಾರ್ಹವಾಗಿದೆ.
ಇದರ ಪರಿಣಾಮವಾಗಿ, ಕೆಲವು ಗುಂಪುಗಳು ಇಸ್ರೇಲ್‌ಗೆ ಬಲವಾದ ಬೆಂಬಲ ನೀಡುತ್ತವೆ. ಯಹೂದಿಗಳು ಇಸ್ರೇಲ್‌ನಲ್ಲಿ ನೆಲೆಸಿರುವುದು ದೇವರ ಯೋಜನೆಯ ಭಾಗ ಎಂದು ನಂಬ ಲಾಗುತ್ತದೆ, ಮತ್ತು ಇದರಿಂದ ಆರ್ಮಗೆಡ್ಡಾನ್ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಇಸ್ರೇಲಿಗರಿಂದಲೇ ಈ ಧರ್ಮಯುದ್ಧದ ಆರಂಭವೆಂದು ಇವರ ನಂಬುಗೆ.
ಈ ಹಿನ್ನೆಲೆಯಲ್ಲಿ, ಅಮೇರಿಕದ ಅಧ್ಯಕ್ಷರನ್ನು ಕೆಲವು ಬೆಂಬಲಿಗರು ದೇವರಿಂದ ಆಯ್ಕೆ ಯಾದ ನಾಯಕ ಅಥವಾ ಕ್ರೂಸೇಡರ್ ಎಂದು ವರ್ಣಿಸುತ್ತಾರೆ. ಅವರ ರಾಜಕೀಯ ಹೋರಾಟವನ್ನೇ ಧಾರ್ಮಿಕ ಮಿಷನ್ ಎಂದು ಕೆಲವರು ನಂಬಿದ್ದಾರೆ. ಅದೇ ರೀತಿಯಲ್ಲಿ, ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹುರವರನ್ನು ಕೂಡ ಕೆಲವು ವಲಯಗಳಲ್ಲಿ ದೇವರ ಯೋಜನೆಯ ಭಾಗ ಎಂದು ಚಿತ್ರಿಸಲಾಗುತ್ತದೆ.
ಅಮೆರಿಕದ ಕೆಲ ಇವಾಂಜೆಲಿಕಲ್ ಕ್ರೈಸ್ತರ ಅಂತ್ಯಕಾಲ ವ್ಯಾಖ್ಯಾನಗಳಲ್ಲಿ ಇಸ್ರೇಲ್ ಪ್ರಮುಖ ಸ್ಥಾನವನ್ನು ಹೊಂದಿದೆ. ಅವರ ನಂಬಿಕೆಯ ಪ್ರಕಾರ, ಯಹೂದಿಗಳು ಇಸ್ರೇಲ್ ನಲ್ಲಿ ಒಟ್ಟುಗೂಡಿ, ಜೆರುಸಲೇಂ ಕೇಂದ್ರಬಿಂದುವಾಗಿರುವಂತಹ ರಾಜಕೀಯ-ಧಾರ್ಮಿಕ ಘಟನೆಗಳು ಅಂತಿಮ ಯುದ್ಧದೆಡೆಗೆ ಸಾಗುವ ಸೂಚನೆಗಳೆಂದು ಕಾಣಲಾಗುತ್ತದೆ.
ಇಂತಹ ಘಟನೆಗಳ ನಂತರ ಏಸು ಕ್ರಿಸ್ತನ ದ್ವಿತೀಯ ಆಗಮನ (Second Coming) ಸಂಭವಿಸುತ್ತದೆ ಎಂಬ ಭಾವನೆ ಇದೆ. ಇಸ್ರೇಲ್‌ನ್ನು ಬಲಪಡಿಸುವುದು, ಜೆರುಸಲೇಂನ ನಿಯಂತ್ರಣ ಮತ್ತು ಮಧ್ಯಪ್ರಾಚ್ಯದ ರಾಜಕೀಯ ಇವೆಲ್ಲವನ್ನು ಧಾರ್ಮಿಕ ಭವಿಷ್ಯವಾಣಿ ಗಳೊಂದಿಗೆ ಜೋಡಿಸಲಾಗುತ್ತಿದೆ.
ಕೆಲವು ಪ್ರೊಟೆಸ್ಟೆಂಟ್ ಉಪಸಂಪ್ರದಾಯಗಳು (ವಿಶೇಷವಾಗಿ ಇವಾಂಜೆಲಿಕಲ್ ಗುಂಪುಗಳು) ಈ ಏಸುವಿನ ಮತ್ತೆ ಬರಲಿದ್ದಾರೆ ಎನ್ನುವುದನ್ನು ಆರ್ಮಗೆಡ್ಡಾನ್ ಅಥವಾ ಅಪೋಕಲಿಪ್ಸ್ ಘಟನೆಗಳೊಂದಿಗೆ ಹೆಚ್ಚು ಜೋಡಿಸಿ ನೋಡುತ್ತವೆ. ಈ ಆಗಮನದ ಉದ್ದೇಶ ನ್ಯಾಯ ಸ್ಥಾಪನೆ, ಅಂತಿಮ ತೀರ್ಪು ಮತ್ತು ದೇವರ ರಾಜ್ಯವನ್ನು ಸ್ಥಾಪಿಸುವುದಂತೆ. ವೈಟ್ ಹೌಸ್ ನಲ್ಲಿ ಇರಾನ್ ಯುದ್ಧದ ಮೊದಲ ದಿನಗಳಲ್ಲಿ, ಹಲವಾರು ಕ್ರೈಸ್ತ ಪಾದ್ರಿಗಳು ಟ್ರಂಪ್ ರವರಿಗೆ ಆಶೀರ್ವದಿಸಿದ ಚಿತ್ರವನ್ನು ಮಾಧ್ಯಮಗಳಲ್ಲಿ ವಿವಿಧ ಅರ್ಥಗಳಲ್ಲಿ ಬಿತ್ತರಿಸ ಲಾಗಿತ್ತು.
ಬೆಂಬಲಿಗರ ದೃಷ್ಟಿಯಲ್ಲಿ ಇದು ನಾಯಕನಿಗಾಗಿ ಪ್ರಾರ್ಥನೆ ಮಾಡಿ, ದೇಶದ ಕಲ್ಯಾಣ ಮತ್ತು ಮಾರ್ಗದರ್ಶನಕ್ಕಾಗಿ ದೇವರ ಕೃಪೆ ಬೇಡುವ ಧಾರ್ಮಿಕ ಆಚರಣೆ. ವಿಶೇಷವಾಗಿ ಕೆಲವು ಇವಾಂಜೆಲಿಕಲ್ ವಲಯಗಳು ಇದನ್ನು ತಮ್ಮ ಮೌಲ್ಯಗಳನ್ನು ಪ್ರತಿನಿಧಿಸುವ ನಾಯಕರಿಗೆ ನೀಡುವ ನೈತಿಕ ಬೆಂಬಲ. ಪೌಲಾ ವ್ಹೈಟ್ ಕೈನ್ ಅವರು ಅಮೇರಿಕದ ಶ್ವೇತ ಭವನದ ಆಧ್ಯಾತ್ಮಿಕ ವಿಭಾಗದ ಹಿರಿಯ ಸಲಹಾಧಿಕಾರಿ.
ಡೊನಾಲ್ಡ್ ಟ್ರಂಪ್‌ರವರ ಎರಡು ಬಾರಿಯ ಗೆಲುವಿನಲ್ಲೂ ಅವರ ಪ್ರಮುಖ ಪಾತ್ರ ವಿದೆಯೆಂದು ರಿಪಬ್ಲಿಕನ್ ಪಕ್ಷದವರು ನಂಬುತ್ತಾರೆ. ಅವರ ಹೇಳಿಕೆಗಳು ಮತ್ತು ಉಪದೇಶ ಗಳಲ್ಲಿ ಒಂದು ಪ್ರಮುಖ ಧಾರ್ಮಿಕ ಧೋರಣೆ ಕಾಣಿಸುತ್ತದೆ. ಅವರು ಟ್ರಂಪ್ ರವರನ್ನು ದೇವರ ಯೋಜನೆಯ ಭಾಗವಾಗಿ ಚಿತ್ರಿಸುವುದು, ಅವರ ಗೆಲುವು ಅಥವಾ ಕ್ರಮಗಳನ್ನು ದೈವಿಕ ಉದ್ದೇಶದೊಂದಿಗೆ ಜೋಡಿಸುವುದು ಗಮನಾರ್ಹ.
ಉದಾಹರಣೆಗೆ, ಅವರು ಟ್ರಂಪ್‌ಗೆ ನೀವು ದೇವರ ವಿಜಯದ ಭಾಗ ಎಂದು ಹೇಳಿ, ಅವರ ಕಾರ್ಯಗಳು ದೇವರ ಇಚ್ಛೆಯೊಂದಿಗೆ ಸಂಬಂಧ ಹೊಂದಿವೆ ಎಂದು ಸೂಚಿಸಿದ್ದಾರೆ. ಕೆಲ ವರದಿಗಳ ಪ್ರಕಾರ, ಟ್ರಂಪ್ ಸುತ್ತಲಿನ ಕೆಲವು ಧಾರ್ಮಿಕ ವಲಯಗಳು ಇರಾನ್ ಯುದ್ಧ ವನ್ನು ದೇವರ ಯೋಜನೆ ಮತ್ತು ಆರ್ಮಗೆಡ್ಡಾನ್‌ಗೆ ಸಂಬಂಧಿಸಿ ನೋಡಿರುವುದಾಗಿ ಆರೋಪಗಳಿವೆ.
ಟ್ರಂಪ್‌ರವರು ಹೊಗಳು ಭಟ್ಟರ ಮುಖಸ್ತುತಿಯಿಂದ ಹಿಗ್ಗಿ ಪ್ರಭಾವಿತರಾಗಿ ತಾವೇನು ಮಾಡುತ್ತಿರುವೆನೆಂಬ ಕಲ್ಪನೆಯಿಲ್ಲದೆ ನಿರ್ಣಾಯಕ ಕ್ರಮಗಳನ್ನು ಜಾರಿಗೊಳಿಸುತ್ತಿರ ಬಹುದೇನೋ ಎಂದನಿಸುವುದು ನಿಜ. ಇರಾನ್ ಯುದ್ದವೂ ಇಂತಹ ನಿರ್ಧಾರ ವಿರಬಹುದೆಂದು ಅನೇಕರ ಅಂಬೋಣ. ಈ ಹಿನ್ನೆಲೆಯ ಕೆಲವು ಪ್ರಮುಖ ಅಮೆರಿಕನ್ ರಾಜಕೀಯ ವ್ಯಕ್ತಿಗಳಾದ ಪೀಟ್ ಹೆಗ್‌ಸೆತ್ (ರಕ್ಷಣಾ ಕಾರ್ಯದರ್ಶಿ), ಮೈಕ್ ಜಾನ್ಸನ್ (ಹೌಸ್ ಸ್ಪೀಕರ್), ಮೈಕ್ ಹಕ್‌ಲ್‌ಬೀ (ಇಸ್ರೇಲ್‌ಗೆ ಸಂಬಂಧಿಸಿದ ರಾಜಕೀಯ ನಿಲುವು ಗಳಿಂದ ಪ್ರಸಿದ್ದ), ಪೊಂಪಿಯೋ (ಮಾಜಿ ವಿದೇಶಾಂಗ ಕಾರ್ಯದರ್ಶಿ), ಲಿಂಡ್ಸೇ ಗ್ರಹಮ್ (ಸೆನೆಟರ್) ಹಾಗೂ ಟೆಡ್ ಕ್ರುಜ(ಸೆನೆಟರ್)ರವರ ಹೇಳಿಕೆಗಳು ಇವರೆಲ್ಲರೂ ರೆವೆಲೆಷನ್ ತತ್ವದ ಕಡೆಗೆ ವಾಲುವುದನ್ನು ತಿಳಿಸುತ್ತದೆ.
ಇವರೆಲ್ಲರೂ ಒಂದೇ ರೀತಿಯ ಧಾರ್ಮಿಕ ನಿಲುವು ಹೊಂದಿzರೆ ಎಂದು ಅವರ ಹೇಳಿಕೆ ಗಳಿಂದ ಅರ್ಥೈಸಲಾಗುತ್ತದೆ. ಈ ಯುದ್ಧವನ್ನು ದೇವರ ಇಚ್ಛೆ, ಬೈಬಲ್ ದೈವಿಕ ಕಾರ್ಯ ಎನ್ನುವ ಧಾರ್ಮಿಕ ಪರಿಭಾಷೆಯಾಗಿ ಬಳಸಿದ್ದಾರೆ. ಇವರೆಲ್ಲರೂ ಇಸ್ರೇಲ್ ಮತ್ತು ಮಧ್ಯಪ್ರಾಚ್ಯ ವಿಷಯದಲ್ಲಿ ಕಠಿಣ ಬೆಂಬಲ ನೀಡಿರುವುದು ಸಾಮಾನ್ಯ ಲಕ್ಷಣವಾಗಿದೆ.
ಒಟ್ಟಾರೆ, ಅಮೆರಿಕದ ಕೆಲ ಇವಾಂಜೆಲಿಕಲ್ ವಲಯಗಳು ಮಧ್ಯಪ್ರಾಚ್ಯದ ಘಟನೆಗಳನ್ನು ಆರ್ಮಗೆಡ್ಡಾನ್ ದೃಷ್ಟಿಯಿಂದ ನೋಡುತ್ತಿವೆ ಎಂದನಿಸುತ್ತದೆ. ಆದರೆ ಪ್ರಮುಖ ರಾಜಕೀಯ ನಾಯಕರು ನೇರವಾಗಿ ಈ ತತ್ವವನ್ನು ಆಧರಿಸಿ ಯುದ್ಧವನ್ನು ಪ್ರಚಾರ ಮಾಡುತ್ತಿದ್ದಾರೆ ಎನ್ನುವುದು ಕಾಕತಾಳೀಯವೇ ಇರಬಹುದು.
ಮೊದಲೇ ಹೇಳಿದಂತೆ, ಈ ಪವಿತ್ರ ಯುದ್ಧದ ಘೋರ ಕಲ್ಪನೆ ಹಲವರಲ್ಲಿ ಮಾತ್ರ. ಕ್ಯಾಥೊ ಲಿಕ್ ಕ್ರಿಶ್ಚಿಯನ್ನರ ಪರಮೋಚ್ಚ ಗುರುಗಳಾದ ಪೋಪ್ ಲಿಯೋರವರು ತಮ್ಮ ಒಡಲಾಳದ ತುಮುಲವನ್ನು ತೋಡಿಕೊಂಡಿದ್ದಾರೆ. ಅವರ ಹೇಳಿಕೆಯಂತೆ, ಜಗತ್ತು ಕೆಲವೇ ಅತಿಕ್ರಮಿ ಆಡಳಿತಗಾರರಿಂದ ಕಂಗೆಡುತ್ತಿದೆ.
ಇಂತಹವರು ಯುದ್ಧ, ಹತ್ಯೆ ಮತ್ತು ನಾಶಕ್ಕೆ ಕೋಟ್ಯಂತರ ಡಾಲರ್‌ಗಳನ್ನು ಖರ್ಚು ಮಾಡುತ್ತಿದ್ದು, ಮಾನವಕುಲದ ಚಿಕಿತ್ಸೆಗೆ, ಶಿಕ್ಷಣಕ್ಕೆ ಮತ್ತು ಪುನರ್‌ನಿರ್ಮಾಣಕ್ಕೆ ಅಗತ್ಯ ವಿರುವ ಸಂಪನ್ಮೂಲಗಳೆಡೆಗೆ ನಿರ್ಲಕ್ಷ್ಯ ಭಾವ ಹೋದಿದ್ಧಾರೆ. ಪೋಪ್ ಅವರ ಈ ಹೇಳಿಕೆ ಡೊನಾಲ್ಡ್ ಟ್ರಂಪ್‌ರವರನ್ನು ಕೆರಳಿಸಿತ್ತು.
ಪೋಪ್ ಅವರ ನಿಲುವು ಅಮೆರಿಕದ ಭದ್ರತೆಗೆ ವಿರುದ್ಧವಾಗಿದೆ. ಅವರು ತಮ್ಮ ಇಚ್ಛೆಯಂತೆ ಮಾತನಾಡಲು ಸ್ವತಂತ್ರರು, ಆದರೆ ಇರಾನ್ ಯಾವಾಗಲೂ ಅಣ್ವಸ್ತ್ರವನ್ನು ಹೊಂದ ಬಾರದು ಎಂಬುದನ್ನು ಅವರು ಅರಿತುಕೊಳ್ಳುವುದು ಅತ್ಯಂತ ಮುಖ್ಯ ಎಂದಿದ್ದಾರೆ.
ವಿಮರ್ಶಕರ ಪ್ರಕಾರ, ಈ ರೀತಿಯ ಪ್ರತಿಕ್ರಿಯೆಗಳು ಧಾರ್ಮಿಕ ನಾಯಕನ ಶಾಂತಿ ಸಂದೇಶಕ್ಕೆ ಗೌರವ ನೀಡುವುದಕ್ಕಿಂತ, ರಾಜಕೀಯ ಪ್ರತಿರೋಧವನ್ನು ತೋರಿಸುವ ಆಕ್ರಮಣಕಾರಿ ಪ್ರತಿಕ್ರಿಯೆಯಂತಿದೆ. ಅವರ ಈ ಕಠಿಣ ಮತ್ತು ಪ್ರತೀಕಾರಾತ್ಮದ ನಿಲುವಿಗೆ ಲಕ್ಷಾಂತರ ನಿಷ್ಠಾವಂತ ಇವಾಂಜಲಿಸ್ಟರ ಕುರುಡು ಬೆಂಬಲದ ರಾಕ್ಷಸ ಬಲವೇ ಕಾರಣ ವಿರಬಹುದು.
ನೆನಪಿರಲಿ, ಪವಿತ್ರ ಯುದ್ಧ ಎಂಬ ಕಲ್ಪನೆ ಇತಿಹಾಸದಲ್ಲಿ ವಿವಿಧ ರೂಪಗಳಲ್ಲಿ ಕಾಣಿಸಿ ಕೊಂಡರೂ, ಬಹುತೇಕ ಧರ್ಮಗಳು ಹಿಂಸೆಯನ್ನು ಪ್ರೋತ್ಸಾಹಿಸುವುದಿಲ್ಲ. ಅವುಗಳು ಶಾಂತಿ, ನೈತಿಕತೆ ಮತ್ತು ಮಾನವೀಯತೆಯನ್ನು ಉತ್ತೇಜಿಸುತ್ತವೆ. ಭಗವದ್ಗೀತೆಯಂತೆ ಧರ್ಮವನ್ನು (ನ್ಯಾಯವನ್ನು) ಕಾಪಾಡಲು ಅನಿವಾರ್ಯವಾಗಿರುವಾಗ ಯುದ್ಧವು ಕರ್ತವ್ಯವಾಗುತ್ತದೆ. ಯುದ್ಧದಲ್ಲಿಯೂ ನೈತಿಕತೆ, ನಿಯಮಗಳು ಮತ್ತು ಕರ್ತವ್ಯನಿಷ್ಠೆ ಮುಖ್ಯವಾಗಿದ್ದು, ಫಲದ ಆಸೆ ಇಲ್ಲದೆ ಕರ್ತವ್ಯವನ್ನು ನಿರ್ವಹಿಸುವುದೇ ಸತ್ಯ ಧರ್ಮ ಯುದ್ಧದ ಸಾರವಾಗಿದೆ.
ಆದ್ದರಿಂದ, ತೀವ್ರವಾದಿ ಧಾರ್ಮಿಕ ಸಂಘಟನೆಯ ಪವಿತ್ರ ಯುದ್ಧದ ಪರಿಕಲ್ಪನೆ ಧರ್ಮದ ಮೂಲ ಸಂದೇಶಕ್ಕಿಂತ ಅಧಿಕವಾಗಿ, ಮಾನವ ಸಮಾಜದ ರಾಜಕೀಯ ಮತ್ತು ಭಾವನಾ ತ್ಮಕ ವಾಸ್ತವಿಕತೆಗಳ ಪ್ರತಿಬಿಂಬವೆನ್ನಬಹುದು.