ಮನಿ ಮೈಂಡೆಡ್
ಈ ಯುದ್ಧ ಯಾವಾಗ ಮುಗಿಯುತ್ತೆ? ಎಂಬುದು ಪ್ರತಿಯೊಬ್ಬ ಭಾರತೀಯ ಕೇಳುತ್ತಿರುವ ಬಿಲಿಯನ್ ಡಾಲರ್ ಪ್ರಶ್ನೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ದೇಶಗಳ ನಡುವಣ ಯುದ್ಧ ಕೇವಲ ಮೂರು ದೇಶಗಳಿಗೆ ಸೀಮಿತವಾಗಿಲ್ಲ. ಇಡೀ ಜಗತ್ತಿನ ಮೇಲೆ ಇದರ ಪರಿಣಾಮವಾಗುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಅದು ತಿಂಗಳಾನುಗಟ್ಟಲೆ ಮುಂದುವರಿದರೆ ಏನಾಗಲಿದೆ ಎಂಬ ಪ್ರಶ್ನೆ ಇದೀಗ ಸುಳಿಯು ತ್ತಿದೆ. ಇದಕ್ಕೆ ಕಾರಣ ಇಲ್ಲದಿಲ್ಲ. ಯುದ್ಧ ಶುರುವಾದಾಗ ಟ್ರಂಪ್ ಮತ್ತು ನೇತನ್ಯಾಹು, “ಇದು ಅಲ್ಪಕಾಲದ್ದಾಗಿದ್ದು, ಬೇಗ ಮುಗಿಯಲಿದೆ" ಎಂದಿದ್ದರು. ಸಮರದ ಮೊದಲ ದಿನವೇ, ಇರಾನ್‌ನ ಸರ್ವಾಧಿಕಾರಿ ಅಯತೊ ಖಮೇನಿ ಹತ್ಯೆಗೀಡಾಗಿದ್ದರಿಂದ ‘ಒಂದೆರಡು ವಾರಗಳಲ್ಲಿ ಎಲ್ಲವೂ ಮುಗಿಯಬಹುದು’ ಎಂದು ಬಹುತೇಕ ಜನ ಭಾವಿಸಿದ್ದರು. ಆದರೆ ಆಗಿದ್ದೇ ಬೇರೆ. ಯುದ್ಧ ಆರಂಭವಾಗಿ ತಿಂಗಳಾಗುತ್ತಿದೆ! ಇನ್ನೂ ಇರಾನ್ ಶರಣಾಗತಿ ಯಾಗಿಲ್ಲ!
“ಸೋಲನ್ನು ಒಪ್ಪಿಕೊಳ್ಳದಿದ್ದರೆ ಇರಾನ್ ನರಕವಾಗಲಿದೆ, ಅದು ಡೀಲ್ ಮಾಡಿಕೊಳ್ಳಲು ಬೇಡುತ್ತಿದೆ" ಎಂದು ಟ್ರಂಪ್ ಅಬ್ಬರಿಸುತ್ತಿದ್ದಾರೆ. ಮಾತುಕತೆ ಫಲಪ್ರದವಾಗುತ್ತಿದೆ ಎಂದೂ ಸಮಾಧಾನಕರ ಮಾತುಗಳನ್ನು ಆಡಿಕೊಳ್ಳುತ್ತಿದ್ದಾರೆ. ಆದರೆ ಇರಾನ್ ತದ್ವಿರುದ್ಧವಾಗಿ, ‘ಯುದ್ಧ ಮುಗಿದಿಲ್ಲ’ ಎನ್ನುತ್ತಿದೆ!
ಇದನ್ನೂ ಓದಿ: Keshava Prasad B Column: ಅಮೆರಿಕದಲ್ಲಿ ಅಂಬಾನಿ ರಿಫೈನರಿ ಬಗ್ಗೆ ಟ್ರಂಪ್ ಹೇಳಿದ್ದೇನು ?
ಒಟ್ಟಾರೆ ಅಯೋಮಯ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ ಹಿಂದೆಂದಿಗಿಂತಲೂ ಚೆನ್ನಾಗಿ ಇರಾನ್ ಯುದ್ಧವನ್ನು, ವಿಪತ್ತುಗಳನ್ನು ರಾಜ ತಾಂತ್ರಿಕವಾಗಿ, ಆರ್ಥಿಕವಾಗಿ ನಿರ್ವಹಿಸುತ್ತಿದ್ದರೂ, ನಮ್ಮದಲ್ಲದ ತಪ್ಪಿಗೆ ಅನಾನುಕೂಲತೆ ಉಂಟಾಗಿರುವುದು ದುರದೃಷ್ಟಕರ.
“ಭಾರತಕ್ಕೆ ಇಂಧನ ಪೂರೈಕೆಗೆ ಸಮಸ್ಯೆ ಆಗಿಲ್ಲ, ದೇಶದಲ್ಲಿ ಸುಮಾರು 60 ದಿನಗಳಿಗೆ ಸಾಕಾಗುವಷ್ಟು ತೈಲ ಸಂಗ್ರಹ ಇದೆ. ಇಂಧನ ಕೊರತೆ ಕುಸಿತ ವರದಿಗಳು ಕಪೋಲಕಲ್ಪಿತ. ಎಲ್ಲ ಪೆಟ್ರೋಲ್ ಬಂಕ್‌ಗಳೂ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ರಿಫೈನರಿಗಳು 100 ಪರ್ಸೆಂಟ್ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತಿವೆ" ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ತಿಳಿಸಿದೆ.
“ಒಂದು ಲಕ್ಷಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳು ದೇಶದಲ್ಲಿವೆ. ಸರಕಾರ ಪೈ ನ್ಯಾಚುರಲ್ ಗ್ಯಾಸ್ʼಗೆ (ಪಿಎನ್‌ಜಿ) ಒತ್ತಾಯಿಸುತ್ತಿರುವುದಕ್ಕೆ ಎಲ್‌ಪಿಜಿ ಕೊರತೆ ಕಾರಣವಲ್ಲ, ಬದಲಿಗೆ ಇದು ಸರಕಾರದ ದೀರ್ಘಕಾಲೀನ ಯೋಜನೆಯಾಗಿದೆ" ಎಂದೂ ಸಚಿವಾಲಯ ಸ್ಪಷ್ಟ ಪಡಿಸಿದೆ.
ಇಲ್ಲಿ ಇಂಧನ ಪೂರೈಕೆಯ ಸಮಸ್ಯೆಯನ್ನು ಭಾರತ ನಿರ್ವ ಹಿಸುತ್ತಿದೆಯಾದರೂ, ದರ ಹೆಚ್ಚಳದ ಸವಾಲನ್ನು ಹೇಗೆ ಎದುರಿಸಲಿದೆ ಎಂಬುದೇ ಪ್ರಶ್ನೆ. ಯುದ್ಧದ ಆರ್ಥಿಕ ನಷ್ಟದ ಹೊಡೆತದ ಬಿಸಿ ಅಷ್ಟಿಷ್ಟು ಕಾವೇರಿಸುತ್ತಿದೆ. ಭಾರತದ ಅತಿ ದೊಡ್ಡ ಖಾಸಗಿ ತೈಲ ಕಂಪನಿ ಯಾದ ನಯಾರಾ ಎನರ್ಜಿಯು ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 5 ರುಪಾಯಿ ಹಾಗೂ ಡೀಸೆಲ್ʼನಲ್ಲಿ 3 ರುಪಾಯಿ ಏರಿಸಿದೆ.
ಕಂಪನಿಯು ಸಾವಿರಾರು ಪೆಟ್ರೋಲ್ ಬಂಕ್‌ಗಳನ್ನು ಹೊಂದಿದೆ. ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಜಿ.ಡಿ.ಬಕ್ಷಿ ಅವರ ಪ್ರಕಾರ, ಈ ಯುದ್ಧದಿಂದ ದೀರ್ಘಾವಧಿಗೆ ನಷ್ಟ ಕ್ಕೀಡಾಗಲಿರುವ ದೇಶಗಳು ಯಾವುದು ಎಂದರೆ ಭಾರತ, ಜಪಾನ್, ದಕ್ಷಿಣ ಕೊರಿಯಾ ಮತ್ತು ಯುರೋಪ್. ಯಾರಿಗೆ ಹೆಚ್ಚು ಲಾಭವಾಗಲಿದೆ? ರಷ್ಯಾ ಮತ್ತು ಚೀನಾ. ಕಾರಣ ತಮ್ಮದೇ ಮಿಲಿಟರಿ ಸಲಹೆಗಾರರ ಮಾತುಗಳನ್ನೂ ಕೇಳದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
ಟ್ರಂಪ್ ಸದಾ ತಮ್ಮನ್ನು ಭಾರತದ ಮಿತ್ರ ಎಂದೇನೊ ಕರೆಯುತ್ತಾರೆ. ಆದರೆ ಕಳೆದ 3-4 ವರ್ಷಗಳಿಂದ ಟ್ರಂಪ್‌ರಿಂದ ಭಾರತಕ್ಕೆ ಆಗಿರುವ ಲಾಭವೇನೂ ಇಲ್ಲ. ಆದರೆ ಇರಾನ್ ಯುದ್ಧವನ್ನು ಕೊಟ್ಟ ಮಾತಿನಂತೆ ಬೇಗನೆ ಮುಗಿಸುವಲ್ಲಿ ಟ್ರಂಪ್ ವಿಫಲರಾಗಿದ್ದಾರೆ. ಹೀಗಾಗಿ ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ.
ಪ್ರಧಾನಿ ಮೋದಿಯವರು ನೀಡಿದ ಹೇಳಿಕೆಯಲ್ಲಿ, “ಮಧ್ಯಪ್ರಾಚ್ಯದ ಪರಿಸ್ಥಿತಿ ಚಿಂತಾ ಜನಕವಾಗಿದೆ. ಯುದ್ಧವನ್ನು ಸಮಾಪ್ತಿಗೊಳಿಸಲು ಭಾರತ ಬಯಸುತ್ತಿದೆ. ಎಲ್ಲ ಬಣಗಳೂ ಶಾಂತಿ-ಸಮಾಧಾನದಿಂದ ಬಿಕ್ಕಟ್ಟು ಬಗೆಹರಿಸಬೇಕು. ಯುದ್ಧದ ಪರಿಣಾಮ ದೀರ್ಘಾವಽಗೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಭಾರತದಲ್ಲಿ ಎಲ್ಲ ಪಕ್ಷಗಳೂ, ಜನರೂ ಒಂದಾಗಿ ಎದುರಿಸಬೇಕಾಗಿದೆ. ಹೇಗೆ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶ ಒಂದಾ ಗಿತ್ತೋ, ಅದೇ ರೀತಿ ಸಂಘಟಿತರಾಗಬೇಕಿದೆ.
ಸಿದ್ಧತೆಗಳನ್ನು ನಡೆಸಬೇಕಾಗಿದೆ. ಇಂಥ ಸೂಕ್ಷ್ಮ ಸಂದರ್ಭಗಳಲ್ಲಿ ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರಲು ವಿದ್ರೋಹಿ ಶಕ್ತಿಗಳು ಯತ್ನಿಸಬಹುದು. ಅದನ್ನೂ ಹತ್ತಿಕ್ಕ ಲಾಗುವುದು. ಮುಂಗಾರಿನ ಅವಧಿಯಲ್ಲಿ ಬಿತ್ತನೆಗೆ ಅವಶ್ಯವಿರುವ ರಸಗೊಬ್ಬರಕ್ಕೆ ಸಮಸ್ಯೆ ಯಾಗದಂತೆ ನೋಡಿಕೊಳ್ಳಲಾಗುವುದು. ಎಲ್‌ಪಿಜಿ ಸಮಸ್ಯೆಯಾಗದಂತೆ ನೋಡಿಕೊಳ್ಳ ಲಾಗುತ್ತಿದೆ" ಎಂದು ಭರವಸೆ ನೀಡಿದ್ದಾರೆ.
ಆದರೆ ರೇಟಿಂಗ್ ಏಜೆನ್ಸಿ ಕ್ರಿಸಿಲ್‌ನ ಇತ್ತೀಚಿನ ವರದಿಯ ಪ್ರಕಾರ, ಮಧ್ಯಪ್ರಾಚ್ಯ ಬಿಕ್ಕಟ್ಟಿ ನಿಂದಾಗಿ ಭಾರತದಲ್ಲಿ ಯೂರಿಯಾದ ವಾರ್ಷಿಕ ಉತ್ಪಾದನೆಯಲ್ಲಿ 10-15 ಪರ್ಸೆಂಟ್ ಇಳಿಕೆಯಾಗುವ ನಿರೀಕ್ಷೆ ಇದೆ. ಹೀಗಿದ್ದರೂ, ಸರಕಾರ ಯೂರಿಯಾ ಉತ್ಪಾದಕರಿಗೆ 70 ಪರ್ಸೆಂಟ್ ಗ್ಯಾಸ್ ಪೂರೈಸಲು ಆದೇಶಿಸಿರುವುದರಿಂದ ಉತ್ಪಾದನೆ ಸರಾಗವಾಗಿ ಮುಂದು ವರಿಯುವ ಸಾಧ್ಯತೆಯೂ ಇದೆ.
ಇರಾನ್ ಯುದ್ಧ ಆರಂಭವಾಗುವುದಕ್ಕಿಂತ ಮೊದಲು ಭಾರತದ ಆಲೋಚನೆ ಏನಿತ್ತು? ಅಮೆರಿಕದ ನಿರ್ಬಂಧಗಳ ಪರಿಣಾಮ ಇರಾನಿನ ಕಚ್ಚಾ ತೈಲವನ್ನು ಖರೀದಿಸಲು ಸಾಧ್ಯ ವಾಗುತ್ತಿರಲಿಲ್ಲ. ಅಲ್ಲಿ ಹೂಡಿಕೆ ಮಾಡಲೂ ಆಗುತ್ತಿರಲಿಲ್ಲ. ಆದ್ದರಿಂದ ಇಸ್ರೇಲ್ ಮತ್ತು ಇತರ ಗಲ್ಫ್ ರಾಷ್ಟ್ರಗಳ ಜತೆಗೆ ಭಾರತದ ವ್ಯವಹಾರ ಗಣನೀಯವಾಗಿ ವೃದ್ಧಿಸಿತ್ತು. ಆದರೆ ಇರಾನ್ ಯುದ್ಧ ಆರಂಭವಾದ ಬಳಿಕ ಹೊಸ ಸವಾಲುಗಳು ಎದುರಾಗಿವೆ.
ಏನಿದು?ಇರಾನ್ ಯುದ್ಧದ ಆರ್ಥಿಕ ಪರಿಣಾಮಗಳು ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಆಗುತ್ತಿವೆ. ಭಾರತಕ್ಕೆ ಶೇಕಡಾ 50ರಷ್ಟು ಕಚ್ಚಾ ತೈಲ ಮತ್ತು ಶೇಕಡಾ 60ರಷ್ಟು ಅನಿಲ ಹಾರ್ಮುಜ್ ಜಲಸಂಧಿಯ ಮೂಲಕ ಬರುತ್ತಿವೆ. ಆದರೆ ಒಂದು ಕಡೆ ಗಲ್ಫ್ ರಾಷ್ಟ್ರ ಗಳಲ್ಲಿ ತೈಲ ಮತ್ತು ಅನಿಲೋತ್ಪಾದನೆ ಕುಂಠಿತವಾಗಿದೆ.
ಹಾರ್ಮುಜ್ ಜಲಸಂಧಿಯ ಸ್ಥಿತಿಗತಿ ಏರುಪೇರಾಗಿದೆ. ಜಗತ್ತಿನ 30 ಪರ್ಸೆಂಟ್ ತೈಲೋ ತ್ಪಾದನೆ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿದೆ. ಇಂಧನ ಮಾರುಕಟ್ಟೆ ತತ್ತರಿಸಲು ಇನ್ನೇನು ಕಾರಣ ಬೇಕು. ಭಾರತ ನೇರವಾಗಿ ಯುದ್ಧದಲ್ಲಿ ಭಾಗವಹಿಸದಿದ್ದರೂ, ಇದರ ನಕಾರಾತ್ಮಕ ಪರಿಣಾಮಗಳು ತಟ್ಟಲಿವೆ. ಈ ಆಘಾತಗಳು ನಮ್ಮ ಆರ್ಥಿಕತೆಯನ್ನೂ ಬಾಧಿಸಲಿವೆ.
ನೋಡಿ, ಭಾರತವು ಬ್ರೆಂಟ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಕೆಲ ವರದಿ ಗಳ ಪ್ರಕಾರ, ಪ್ರತಿ ಬ್ಯಾರೆಲ್ ಕಚ್ಚಾ ತೈಲದ ದರದಲ್ಲಿ 1 ಡಾಲರ್ ಹೆಚ್ಚಳವಾದರೂ, ವಾರ್ಷಿಕ 2 ಶತಕೋಟಿ ಡಾಲರ್, ಅಂದರೆ 16600 ಕೋಟಿ ರುಪಾಯಿ ಹೆಚ್ಚುವರಿ ಖರ್ಚಾಗು ತ್ತದೆ.
ಒಂದು ಸರಳ ಲೆಕ್ಕಾಚಾರ ಮಾಡೋಣ. ಇರಾನ್ ಯುದ್ಧ ಆರಂಭವಾಗುವುದಕ್ಕೆ ಮೊದಲು ಕಚ್ಚಾ ತೈಲದ ದರ ಪ್ರತಿ ಬ್ಯಾರಲ್‌ಗೆ 67 ಡಾಲರ್ ಇತ್ತು. ಈಗ 107 ಡಾಲರ್‌ಗೆ ಏರಿಕೆ ಯಾಗಿದೆ. ಅಂದರೆ 40 ಡಾಲರ್ ಹೆಚ್ಚಳವಾಗಿದೆ. ಯುದ್ಧ ಮುಂದುವರಿದು ಇನ್ನೊಂದು ವರ್ಷ 107 ಡಾಲರ್ ಮಟ್ಟದಲ್ಲಿ ತೈಲ ದರ ಮುಂದುವರಿಯಿತು ಎಂದು ಇಟ್ಟುಕೊಳ್ಳಿ.
ಆಗ ವಾರ್ಷಿಕ ಹೆಚ್ಚುವರಿ ವೆಚ್ಚ 6 ಲಕ್ಷದ 64 ಸಾವಿರ ಕೋಟಿ ರುಪಾಯಿ ಆಗುತ್ತದೆ! ಹೀಗೆ ಆಗದಿರಲಿ ಎಂದೇ ಭಾವಿಸೋಣ. ಆದರೆ ಡಾಲರ್ ಎದುರು ರುಪಾಯಿ ಮೌಲ್ಯ 94 ರುಪಾಯಿಗೆ ಇಳಿದಿರುವುದು ಕೂಡ ತೈಲ ಆಮದು ವೆಚ್ಚವನ್ನು ಹಿಗ್ಗಿಸಲಿದೆ ಎಂಬುದು ಕಟು ವಾಸ್ತವ.
ಭಾರತವು ರಷ್ಯಾ, ಅಮೆರಿಕ ಮತ್ತು ಆಫ್ರಿಕಾದ ರಾಷ್ಟ್ರಗಳಿಂದ ಕಚ್ಚಾ ತೈಲವನ್ನು ತರಿಸಿ ಕೊಳ್ಳಬಹುದು. ಆದರೆ ಗಲ್ಫ್ ಆಯಿಲ್ ಮತ್ತು ಗ್ಯಾಸ್ ಅನ್ನು ಸಂಪೂರ್ಣವಾಗಿ ಬದಲಿಸಲು ಸದ್ಯಕ್ಕಂತೂ ಸಾಧ್ಯವಿಲ್ಲ. ಹಾಗಾದರೆ ಸರಕಾರ ಪೆಟ್ರೋಲ್ ದರಗಳನ್ನು ಹೇಗೆ ನಿಯಂತ್ರಿಸ ಬಹುದು? ಎರಡು ತಿಂಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ದಾಸ್ತಾನಿದೆ ಎಂದು ಸರಕಾರವೇ ತಿಳಿಸಿದೆ. ಅದು ತಾತ್ಕಾಲಿಕವಾಗಿ ನೆಮ್ಮದಿಯ ಸಂಗತಿ.
ರಷ್ಯಾ ತೈಲದ ಸಪೋರ್ಟ್ ಇದ್ದೇ ಇದೆ. ಮಾತ್ರವಲ್ಲದೆ ಅಬಕಾರಿ ಸುಂಕ ಕಡಿತ ಮಾಡಬ ಹುದು. ನೇರ ಅಥವಾ ಪರೋಕ್ಷ ಸಬ್ಸಿಡಿ ನೆರವನ್ನು ತೈಲ ಮಾರುಕಟ್ಟೆ ಕಂಪನಿಗಳಿಗೆ ಕೊಡಬಹುದು. ಇದೆಲ್ಲವೂ ತಾತ್ಕಾಲಿಕ ಉಪಕ್ರಮಗಳಾದರೂ, ಕಂಪನಿಗಳ ಬ್ಯಾಲೆನ್ಸ್ ಶೀಟ್ ಮೇಲೆ ಪ್ರಭಾವ ಬೀರುತ್ತದೆ. ವಿತ್ತೀಯ ಕೊರತೆ, ಹಣದುಬ್ಬರವನ್ನು ಹೆಚ್ಚಿಸುತ್ತವೆ.
ಬೆಳವಣಿಗೆಗೆ ಹಿನ್ನಡೆಯಾಗುತ್ತದೆ. ಮಧ್ಯಪ್ರಾಚ್ಯ ಸಂಘರ್ಷ ತಿಂಗಳುಗಟ್ಟಲೆ ಮುಂದು ವರಿದರೆ ಭಾರತದ ಜಿಡಿಪಿ ಬೆಳವಣಿಗೆಯ ದರ 4 ಪರ್ಸೆಂಟ್‌ಗೆ ಇಳಿಕೆಯಾಗಬಹುದು ಎಂದು ಮೂಡೀಸ್ ಅನಾಲಿಟಿಕ್ಸ್ ಎಚ್ಚರಿಸಿದೆ.
ಏಷ್ಯಾದಲ್ಲಿ ಅಭಿವೃದ್ಧಿ ಹೊಂದಿರುವ ಇಕಾನಮಿಗಳಿಗೆ ಹೋಲಿಸಿದರೆ, ಭಾರತದಲ್ಲಿ ಇರುವ ತೈಲ ದಾಸ್ತಾನು ಕಡಿಮೆಯಾಗಿರುವುದರಿಂದ ಯುದ್ಧ ದೀರ್ಘಾವಧಿಗೆ ಮುಂದು ವರಿದರೆ ಆರ್ಥಿಕ ಪ್ರಗತಿ ಮಂದಗತಿಗೆ ತಿರುಗಬಹುದು ಎಂದು ಮೂಡೀಸ್ ಎಚ್ಚರಿಸಿದೆ.
ದೇಶ ಈಗ ಸ್ಟ್ರಾಟಜಿಕ್ ರಿಸರ್ವ್ʼಗಳಲ್ಲಿರುವ ತೈಲವನ್ನು ನೆಚ್ಚಿಕೊಂಡಿದೆ. ಸರಕಾರ ಇಂಧನ ಸಬ್ಸಿಡಿ ಮತ್ತು ದರ ನಿಯಣಂತ್ರಣ ಕ್ರಮಗಳನ್ನು ಕೈಗೊಳ್ಳಬಹುದು. ಅದು ತಾತ್ಕಾಲಿಕ ರಿಲೀಫ್ ಕೊಡಬಹುದು. ಆದರೆ ದೂರಗಾಮಿಯಾಗಿ ಆರ್ಥಿಕ ಬೆಳವಣಿಗೆಗೆ ಚ್ಯುತಿ ಉಂಟು ಮಾಡಬಹುದು ಎಂದು ವರದಿ ವಿವರಿಸಿದೆ.
ಕೊನೆಯದಾಗಿ ಇಷ್ಟೆಲ್ಲ ಆತಂಕದ ನಡುವೆಯೂ ಮೂಡೀಸ್ ಪ್ರಕಾರ, 2026ರಲ್ಲೂ ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಸ್ಥಾನವನ್ನು ಭಾರತ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವ ನಿರೀಕ್ಷೆ ಇದೆ. 2026ರಲ್ಲಿ 7.5 ಹಾಗೂ 2027ರಲ್ಲಿ 6.5 ಪರ್ಸೆಂಟ್ ಜಿಡಿಪಿ ಬೆಳವಣಿಗೆಯ ದರವನ್ನು ಮೂಡೀಸ್ ಅಂದಾಜಿಸಿದೆ!
ಹೀಗಾಗಿ ಯುದ್ಧ ಬೇಗ ಮುಗಿಯಲಿ ಎಂಬುದೇ ಭಾರತೀಯರ ಪ್ರಾರ್ಥನೆ. ಹೀಗಿದ್ದರೂ, ಭಾರತಕ್ಕೆ ಕೆಲವು ವಿಷಯಗಳಲ್ಲಿ ಅನುಕೂಲಕರ ಮತ್ತು ಲಾಭದಾಯಕ ಅವಕಾಶಗಳೂ ಇವೆ. ಭಾರತ ಈಗ ತನ್ನ ಜನರ ಹಿತಾಸಕ್ತಿಗೆ ಅಗತ್ಯವಿರುವ ವಿದೇಶಾಂಗ ನೀತಿಗಳನ್ನು ದಿಟ್ಟತನದಿಂದ ಅನುಸರಿಸುತ್ತಿದೆ. ಇದು ಸ್ವಾಗತಾರ್ಹ.
ರಷ್ಯಾ, ಅಮೆರಿಕ, ಆಫ್ರಿಕಾ ಸೇರಿದಂತೆ 40ಕ್ಕೂ ಹೆಚ್ಚು ಮೂಲಗಳಿಂದ ತೈಲವನ್ನು ಖರೀದಿಸುತ್ತಿದೆ. ಸೌರ ವಿದ್ಯುತ್, ಪವನ, ಗ್ರೀನ್ ಹೈಡ್ರೋಜನ್ ಕಡೆಗೆ ಮತ್ತಷ್ಟು ಆದ್ಯತೆ ನೀಡಲು ಇದು ಸಕಾಲ. ಭಾರತ ಸದ್ಯಕ್ಕೆ ಮೂರು ಕಡೆಗಳಲ್ಲಿ ಸ್ಟ್ರಾಟಜಿಕ್ ಆಯಿಲ್ ರಿಸವ್ಗಳನ್ನು ಹೊಂದಿದೆ. ಅದನ್ನು ಹೆಚ್ಚಿಸಲು ಸರಕಾರ ಮುಂದಾಗಬಹುದು. ರಾಜ ತಾಂತ್ರಿಕವಾಗಿ ಭಾರತ ಅತ್ಯುತ್ತಮ ಸ್ಥಿತಿಯಲ್ಲಿದೆ.
ಭಾರತವು ಮಧ್ಯಸ್ಥಿಕೆಯನ್ನೂ ವಹಿಸುವ ಮಟ್ಟಕ್ಕೆ ಪ್ರಭಾವಶಾಲಿಯಾಗಿ ಹೊರಹೊಮ್ಮಿದೆ. ಭಾರತವು ಅಲ್ಪಾವಧಿ, ಮಧ್ಯಮ ಮತ್ತು ದೀರ್ಘಾವಧಿಯ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ ಮಾತ್ರ ಸಮಸ್ಯೆಗೆ ಪರಿಹಾರ ಸಿಗಬಲ್ಲದು.
ಅಲ್ಪಾವಧಿಯ ಪರಿಹಾರಗಳನ್ನು ಭಾರತ ಪರಿಣಾಮಕಾರಿಯಾಗಿ ನಿರ್ವಹಿಸಿದೆ. ಭಾರತದ ರಾಜತಾಂತ್ರಿಕತೆಯ ನೈಪುಣ್ಯದಿಂದ ತಾತ್ಕಾಲಿಕವಾಗಿ ಒಂದಷ್ಟು ರಿಲೀಫ್ ಸಿಕ್ಕಿದೆ. ಭಾರತ, ಚೀನಾ, ರಷ್ಯಾ, ಇರಾಕ್ ಮತ್ತು ಪಾಕಿಸ್ತಾನಕ್ಕೆ ಹಾರ್ಮುಜ್ ಜಲಸಂಧಿಯ ಮೂಲಕ ತೈಲ-ಅನಿಲವನ್ನು ಹಡಗುಗಳ ಮೂಲಕ ಸಾಗಣೆಗೆ ಅವಕಾಶ ಮಾಡಿಕೊಡುವುದಾಗಿ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರ್ಗಾಚಿ ತಿಳಿಸಿದ್ದಾರೆ. ನೋಡೋಣ..