ಅಮೃತಕಾಲ
ಲೀನಾ ಜೋಶಿ
ಭಾರತದಲ್ಲಿ ಧರ್ಮಾಂತರ ಎಂಬುದು ಕೇವಲ ಧಾರ್ಮಿಕ ವಿಚಾರವಲ್ಲ. ಸಾಮಾಜಿಕ ಗುರುತು, ಜಾತಿ ವ್ಯವಸ್ಥೆ, ರಾಜಕೀಯ, ಇತಿಹಾಸ, ಸಂವಿಧಾನ ಮತ್ತು ಸಮುದಾಯಗಳ ನಡುವಿನ ಸಂಬಂಧ ಗಳೊಂದಿಗೆ ಬೆಸೆದುಕೊಂಡಿರುವ ಸೂಕ್ಷ್ಮ ವಿಷಯ. ಇತ್ತೀಚೆಗೆ ಸುಪ್ರೀಂ ಕೋರ್ಟ್ ವಕೀಲೆ ನಾಜಿಯಾ ಇಲಾಹಿ ಖಾನ್ ಇಸ್ಲಾಂ ಧರ್ಮದಿಂದ ಸನಾತನ ಧರ್ಮಕ್ಕೆ ಮರಳಿರುವುದು ಮತ್ತು ಉತ್ತರ ಪ್ರದೇಶದ ಲೋನಿ ಕ್ಷೇತ್ರದ ಬಿಜೆಪಿ ಶಾಸಕ ನಂದಕಿಶೋರ್ ಗುರ್ಜರ್ ನಾಜಿಯಾರನ್ನು ತಮ್ಮ ಜಾತಿಯಲ್ಲಿ ಸ್ವೀಕರಿಸಿರುವುದು ಇದೇ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ಒಬ್ಬ ವ್ಯಕ್ತಿ ಇಸ್ಲಾಂ ಅಥವಾ ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ಮರಳಲು ನಿರ್ಧರಿಸಿದರೆ, ಹಿಂದೂ ಸಮಾಜದಲ್ಲಿ ಅವರಿಗೆ ಯಾವ ಜಾತಿ? ಯಾವ ಗೋತ್ರ? ಯಾವ ಸಂಪ್ರದಾಯ? ಯಾವ ಸಾಮಾಜಿಕ ಸ್ಥಾನಮಾನ? ಇದು ಕೇವಲ ನಾಜಿಯಾರಿಗೆ ಮಾತ್ರ ಸಂಬಂಧಿಸಿದ್ದಲ್ಲ, ಧರ್ಮಾಂತರ ಗೊಂಡ ಕುಟುಂಬಗಳ ಮುಂದಿನ ಪೀಳಿಗೆಗಳಿಗೂ ಅನ್ವಯವಾಗುತ್ತದೆ.
ಹಿಂದೂ ಧರ್ಮದ ಬಹುದೊಡ್ಡ ವಿಶೇಷತೆ ಅದರ ವೈವಿಧ್ಯ. ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಶೈವ, ವೈಷ್ಣವ, ಶಾಕ್ತ, ಲಿಂಗಾಯತ ಸೇರಿದಂತೆ ವಿಭಿನ್ನ ತಾತ್ವಿಕ ಮತ್ತು ಧಾರ್ಮಿಕ ಪರಂಪರೆಗಳಿವೆ. ದೇಶದ ಪ್ರತಿಯೊಂದು ಭಾಗದಲ್ಲಿಯೂ ವಿಭಿನ್ನ ದೇವಾಲಯಗಳು, ದೇವತಾ ಆರಾಧನೆಗಳು, ಆಚರಣೆಗಳು ಮತ್ತು ಸಂಪ್ರದಾಯಗಳಿವೆ. ಇದರ ಜೊತೆಗೆ ಜಾತಿ, ಉಪಜಾತಿ, ಗೋತ್ರ ಮತ್ತು ಪ್ರಾದೇಶಿಕ ಸಮುದಾಯಗಳ ಸಾಮಾಜಿಕ ವ್ಯವಸ್ಥೆಯೂ ಇದೆ. ಈ ವೈವಿಧ್ಯ ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯಾದರೂ, ಇದೇ ವೈವಿಧ್ಯ ಹಿಂದೂ ಸಮಾಜಕ್ಕೆ ಮರಳಲು ಬಯಸುವವರ ಮುಂದೆ ಸಂಕೀರ್ಣ ಪ್ರಶ್ನೆಗಳನ್ನು ಸೃಷ್ಟಿಸುತ್ತದೆ.
ಇದನ್ನೂ ಓದಿ: Leena Joshi Column: ಗಡಾಫಿ ಹೇಳಿದಂತೆ ಫ್ರಾನ್ಸ್ ಕಪ್ಪಾಗುತ್ತಿದೆಯೇ?
ನೂರಾರು ವರ್ಷಗಳ ಹಿಂದೆ ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರಗೊಂಡ ಕುಟುಂಬದ ಈಗಿನ ಪೀಳಿಗೆ ಇಂದು ಹಿಂದೂ ಧರ್ಮಕ್ಕೆ ಮರಳಲು ಬಯಸಿದರೆ, ಅವರ ಮೂಲ ಜಾತಿಯನ್ನು ಹೇಗೆ ಗುರುತಿಸುವುದು? ಅವರ ಗೋತ್ರವನ್ನು ಹೇಗೆ ನಿರ್ಧರಿಸುವುದು? ಅವರ ವಿವಾಹ ಸಂಬಂಧ ಗಳನ್ನು ಯಾವ ಸಮುದಾಯದೊಂದಿಗೆ ಬೆಳೆಸುವುದು? ಇಲ್ಲಿ ಹಿಂದೂ ಧರ್ಮದ ಧಾರ್ಮಿಕ ಸ್ವೀಕಾರ ಮತ್ತು ಜಾತಿ ಆಧಾರಿತ ಸಾಮಾಜಿಕ ಗುರುತನ್ನು ಪ್ರತ್ಯೇಕವಾಗಿ ಅರ್ಥಮಾಡಿಕೊಳ್ಳಬೇಕು.
ಧರ್ಮಕ್ಕೆ ಮರಳಲು ಅವಕಾಶ ನೀಡುವುದು ಒಂದು ವಿಚಾರ; ನಿರ್ದಿಷ್ಟ ಜಾತಿಯನ್ನು ಗುರುತಿಸು ವುದು ಪ್ರತ್ಯೇಕ ವಿಚಾರ. ಗೊಂದಲವಿರುವುದು ಇದರ! 350 ವರ್ಷಗಳ ಹಿಂದೆಯೇ ಶಿವಾಜಿ ಮಹಾರಾಜರ ಕಾಲದಲ್ಲಿ ಇದೇ ಪ್ರಶ್ನೆ ಎದುರಾಗಿತ್ತು. ನೇತಾಜಿ ಪಾಲ್ಕರ್, ಶಿವಾಜಿಯ ಪ್ರಮುಖ ಸೇನಾನಿಗಳಲ್ಲಿ ಒಬ್ಬರು. ಮೊಘಲರೊಂದಿಗಿನ ಸಂಘರ್ಷದ ಸಂದರ್ಭದಲ್ಲಿ ನೇತಾಜಿಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಯಿತು, ನೇತಾಜಿಯ ಮನಸ್ಸಲ್ಲಿ ಇದ್ದದ್ದು ಒಂದೇ, ಮತ್ತೆ ಮೂಲ ಧರ್ಮಕ್ಕೆ ಮರಳಬೇಕೆಂದು. ಅಂದಿನ ಸಮಾಜದ ಮುಂದೆ ಒಂದು ದೊಡ್ಡ ಪ್ರಶ್ನೆ ಎದುರಾಯಿತು.
ಒಮ್ಮೆ ಇಸ್ಲಾಂ ಧರ್ಮ ಸ್ವೀಕರಿಸಿದ ವ್ಯಕ್ತಿಯನ್ನು ಮತ್ತೆ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಬಹುದೇ? ಅವರನ್ನು ಹಿಂದಿನ ಜಾತಿಯಲ್ಲಿಯೇ ಸ್ವೀಕರಿಸಬಹುದೇ? ಸಂಪ್ರದಾಯದ ಪ್ರಕಾರ ಇದು ಸಾಧ್ಯವೇ? ನೇತಾಜಿ ಪಾಲ್ಕರ್ ಅವರ ಮರುಪ್ರವೇಶಕ್ಕೆ ಸಮಾಜದ ಧಾರ್ಮಿಕ ಮುಖಂಡರು ವಿರೋಧ ವ್ಯಕ್ತಪಡಿಸಿ ದರು. ಶಿವಾಜಿ ಮಹಾರಾಜರಂತಹ ಪ್ರಭಾವಿ ನಾಯಕರೇ, ಧರ್ಮಕ್ಕೆ ಮರಳಿದ ತನ್ನ ಸೇನಾನಿಯನ್ನು ಸಮಾಜದಲ್ಲಿ ಪುನಃ ಸ್ವೀಕರಿಸುವ ವಿಚಾರದಲ್ಲಿ ಪ್ರಬಲ ವಿರೋಧ ಎದುರಿಸಿದರು. ಕೊನೆಗೆ ಸ್ವಂತ ಮಗಳನ್ನೇ ನೇತಾಜಿಯ ಮಗನಿಗೆ ಕೊಟ್ಟು ಮದುವೆ ಮಾಡಿ ಹಿಂದೂ ಧರ್ಮಕ್ಕೆ ವಾಪಸ್ಸು ಕರೆದುಕೊಂಡರು. ಶಿವಾಜಿಯೇ ಇಷ್ಟೊಂದು ಸವಾಲು ಎದುರಿಸಬೇಕಾಗಿದ್ದರೆ, ಸಾಮಾನ್ಯ ವ್ಯಕ್ತಿ ಹಿಂದೂ ಧರ್ಮಕ್ಕೆ ಮರಳಲು ಆ ಕಾಲದಲ್ಲಿ ಯಾಕೆ ಸಾಧ್ಯವಾಗಲಿಲ್ಲ ಎಂಬುದು ಸ್ಪಷ್ಟ ವಾಗುತ್ತದೆ.
ಬಜಾಜಿ ರಾವ್ ನಿಂಬಾಳ್ಕರ್, ಫಾಲ್ಟಣ್ನ ನಿಂಬಾಳ್ಕರ್ ಮನೆತನಕ್ಕೆ ಸೇರಿದ ಪ್ರಭಾವಿ ಮರಾಠ ನಾಯಕರು. ಆದಿಲ್ಶಾಹಿ ಆಳ್ವಿಕೆಯಲ್ಲಿ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿ ದ್ದರು. ತಮ್ಮ ಮೂಲ ಧರ್ಮಕ್ಕೆ ಮರಳಲು ಬಯಸಿದಾಗ ಅಂದಿನ ಮರಾಠ ಸಮಾಜದ ಸಂಪ್ರದಾಯಬದ್ಧ ವಲಯಗಳಲ್ಲಿ ವಿರೋಧ ವ್ಯಕ್ತವಾಯಿತು ಎಂದು ಫಾಲ್ಟಣ್ ಸಂಸ್ಥಾನದ ಇತಿಹಾಸ ಮತ್ತು ಮರಾಠ ಇತಿಹಾಸದಲ್ಲಿ ದಾಖಲಾಗಿದೆ.
ಬಜಾಜಿ ನಿಂಬಾಳ್ಕರ್ ಅವರನ್ನು ಮತ್ತೆ ಹಿಂದೂ ಧರ್ಮಕ್ಕೆ ಸ್ವೀಕರಿಸುವಂತೆ ಶಿವಾಜಿಯ ತಾಯಿ ಜೀಜಾಬಾಯಿ ಪ್ರಯತ್ನ ಶ್ಲಾಘನೀಯ. ಅವರನ್ನು ಮರಳಿ ಹಿಂದೂ ಧರ್ಮ ಮತ್ತು ಅವರ ಮೂಲ ಸಮುದಾಯಕ್ಕೆ ಸೇರಿಸುವ ಧಾರ್ಮಿಕ ಪ್ರಕ್ರಿಯೆ ನಡೆಯಿತು. ಹಿಂದೂ ಸಮಾಜದಲ್ಲಿ ಅವರ ಮರು ಪ್ರವೇಶದ ಬಗ್ಗೆ ಯಾವುದೇ ಅನುಮಾನ ಉಳಿಯಬಾರದು ಎಂಬ ಉದ್ದೇಶದಿಂದ, ಶಿವಾಜಿಯ ಪುತ್ರಿ ಸಖುಬಾಯಿಯನ್ನು ಬಜಾಜಿ ನಿಂಬಾಳ್ಕರ್ರ ಪುತ್ರ ಮಹಾದಜಿ ನಿಂಬಾಳ್ಕರ್ ಜೊತೆ ವಿವಾಹ ಮಾಡುವಲ್ಲಿ ಜೀಜಾಬಾಯಿಯ ಪಾತ್ರ ಅತಿ ಪ್ರಮಖವಾದದ್ದು. ಈ ಎರಡು ಘಟನೆಗಳನ್ನು ಒಟ್ಟಿಗೆ ನೋಡಿದಾಗ ಶಿವಾಜಿ ಮಹಾರಾಜರ ಆಡಳಿತ ಮತ್ತು ಜೀಜಾಬಾಯಿಯ ಸಾಮಾಜಿಕ ದೂರ ದೃಷ್ಟಿಯ ಪ್ರಮುಖ ಮುಖ ನಮ್ಮ ಮುಂದೆ ಬರುತ್ತದೆ.
ಧರ್ಮಕ್ಕೆ ಮರಳಿದ ವ್ಯಕ್ತಿಯನ್ನು ಸ್ವೀಕರಿಸುವುದು ಮಾತ್ರವಲ್ಲ, ಸಮಾಜದಲ್ಲಿ ಅವರ ಗೌರವವನ್ನು ಪುನಃ ಸ್ಥಾಪಿಸುವುದೂ ಅಗತ್ಯ ಎಂಬ ಸಂದೇಶವನ್ನು ಈ ಘಟನೆಗಳು ನೀಡುತ್ತವೆ. ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ ಸ್ವಾಮಿ ದಯಾನಂದ ಸರಸ್ವತಿ, ಆರ್ಯ ಸಮಾಜವನ್ನು ಸ್ಥಾಪಿಸಿದರು. ಆರ್ಯ ಸಮಾಜವು ಧಾರ್ಮಿಕ ಸುಧಾರಣೆ, ವೈದಿಕ ಪರಂಪರೆಯ ಪುನರುಜ್ಜೀವನ, ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಗೆ ಒತ್ತು ನೀಡಿತು. ಅದರ ಮೂಲಕ ಹಿಂದೂ ಧರ್ಮಕ್ಕೆ ಮರಳುವವರಿಗಾಗಿ ಶುದ್ಧಿ ಚಳವಳಿಯೂ ಜನಪ್ರಿಯವಾಯಿತು.
ಸ್ವಾಮಿ ಶ್ರದ್ಧಾನಂದರು ಇಪ್ಪತ್ತನೇ ಶತಮಾನದ ಆರಂಭದಲ್ಲಿ ಶುದ್ಧಿ ಚಳವಳಿಗೆ ಸಂಘಟಿತ ಸ್ವರೂಪ ನೀಡಿದರು. 1920ರ ದಶಕದಲ್ಲಿ ಮಥುರಾ ಮತ್ತು ಫಾರೂಖಾಬಾದ್ ಪ್ರದೇಶಗಳ ಮಲ್ಕಾನಾ ರಾಜಪೂತರ ಮರುಮತಾಂತರ ಚಳವಳಿ ಇತಿಹಾಸದ ಪ್ರಮುಖ ಅಧ್ಯಾಯವಾಗಿದೆ. ಈ ಚಳವಳಿಯಲ್ಲಿಯೂ ಒಂದು ವೈರುಧ್ಯವಿತ್ತು. ಹಿಂದೂ ಸಮಾಜಕ್ಕೆ ಮರಳಲು ಜನರನ್ನು ಆಹ್ವಾನಿಸುವ ಪ್ರಯತ್ನಗಳಿದ್ದರೂ, ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಕಾರಣದಿಂದ ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಸ್ವಾಗತ ದೊರೆಯುತ್ತಿರಲಿಲ್ಲ.
ಇದು ಹಿಂದೂ ಸಮಾಜದ ಸುಧಾರಣಾ ಚಳವಳಿಗಳು ಎದುರಿಸಿದ ಆಂತರಿಕ ಸವಾಲುಗಳಲ್ಲಿ ಒಂದಾಗಿತ್ತು. ಹೀಗಾಗಿ ಸಮಸ್ಯೆ ಕೇವಲ ಮತಾಂತರಕ್ಕೆ ಸಂಬಂಧಿಸಿದ್ದಲ್ಲ. ಹಿಂದೂ ಸಮಾಜ ದೊಳಗಿನ ಅಸಮಾನತೆ ಮತ್ತು ಸಾಮಾಜಿಕ ಹೊರಗಿಡುವಿಕೆಯೂ ಅದರಲ್ಲಿ ಒಂದು ಭಾಗವಾಗಿತ್ತು. ಭಾರತೀಯ ಸಮಾಜದ ವಾಸ್ತವವನ್ನು ಗಮನಿಸಿದರೆ ಧರ್ಮ ಬದಲಾಯಿಸಿದ ಮಾತ್ರಕ್ಕೆ ಹಿಂದಿನ ಸಾಮಾಜಿಕ ಗುರುತುಗಳು ಸಂಪೂರ್ಣವಾಗಿ ಅಳಿಸಿಹೋಗುವುದಿಲ್ಲ.
ಉತ್ತರ ಭಾರತದಲ್ಲಿ ರಜಪೂತ್ ಹಿನ್ನೆಲೆಯ ಕೆಲವು ಮುಸ್ಲಿಂ ಕುಟುಂಬಗಳು ತಮ್ಮದೇ ಆದ ವಿವಾಹ ಸಂಬಂಧಗಳನ್ನು ಮುಂದುವರಿಸಿಕೊಂಡು ಬಂದಿವೆ. ಪಂಜಾಬಿನಲ್ಲಿ ಮತಾಂತರಗೊಂಡ ಮೇಲ್ವರ್ಗದ ಕ್ರೈಸ್ತ ಕುಟುಂಬಗಳಲ್ಲಿಯೂ ಹಿಂದಿನ ಸಾಮಾಜಿಕ ಹಿನ್ನೆಲೆಯ ಪ್ರಭಾವ ಕಂಡು ಬರುತ್ತದೆ. ಕೇರಳದ ಸಿರಿಯನ್ ಕ್ರೈಸ್ತ ಸಮುದಾಯದಲ್ಲಿಯೂ ಪ್ರತ್ಯೇಕ ವಿವಾಹ ಸಂಪ್ರದಾಯ ಗಳಿವೆ. ಇದು ಭಾರತದಲ್ಲಿ ಧರ್ಮ ಮತ್ತು ಸಾಮಾಜಿಕ ಗುರುತುಗಳು ಹೇಗೆ ಪರಸ್ಪರ ಬೆಸೆದುಕೊಂಡಿವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ.
ಎಲ್ಲ ಮುಸ್ಲಿಮರು ಮತ್ತು ಎಲ್ಲ ಕ್ರೈಸ್ತರು ಒಂದೇ ರೀತಿಯ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿಲ್ಲ. ಅವರಲ್ಲೂ ಜಾತಿ, ಒಳ ಜಾತಿ, ಪಂಗಡಗಳಿವೆ. ಸಮಾನತೆ ಇರುವುದು ದೇವರಲ್ಲಿ ಮಾತ್ರ, ಏಕದೇವೋ ಪಾಸನೆ ಇರುವುದರಿಂದ ವ್ಯತ್ಯಾಸ ಹೊರಗಡೆ ಗೊತ್ತಾಗುವುದಿಲ್ಲ ಅಷ್ಟೇ!
ವಿವಾಹದ ಸಂದರ್ಭದಲ್ಲಿ ತಮ್ಮದೇ ಬಿರಾದರಿಯಲ್ಲಿ ಸಂಬಂಧ ಹುಡುಕುವ ಪದ್ಧತಿಯಿದೆ. ಧಾರ್ಮಿಕ ಗುರುತಿನ ದೃಷ್ಟಿಯಿಂದ ಎಲ್ಲರೂ ಒಂದೇ ದೇವರನ್ನು ಆರಾಧಿಸುವುದರಿಂದ ಅವರಿಗೆ ಒಂದು ಸಾಮಾನ್ಯ ಧಾರ್ಮಿಕ ಬಂಧವನ್ನು ಒದಗಿಸುತ್ತದೆ. ಇದರರ್ಥ ಅವರ ಸಾಮಾಜಿಕ ವ್ಯವಸ್ಥೆಯನ್ನು ಆದರ್ಶವೆಂದು ಪರಿಗಣಿಸುವುದಲ್ಲ.
ಹಲವು ಸಾಮಾಜಿಕ ಮತ್ತು ಸಮುದಾಯದ ಭಿನ್ನತೆಗಳ ನಡುವೆಯೂ ಒಂದು ಸಾಮಾನ್ಯ ಧಾರ್ಮಿಕ ಗುರುತು ಜನರನ್ನು ಒಗ್ಗೂಡಿಸುವಲ್ಲಿ ಹೇಗೆ ನೆರವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು. ಧಾರ್ಮಿಕ ಸಮಾನತೆಯ ತತ್ವ ಮತ್ತು ವಾಸ್ತವಿಕ ಸಾಮಾಜಿಕ ಆಚರಣೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸಬೇಕು. ಅದೇ ಮಾನದಂಡವನ್ನು ಹಿಂದೂ ಸಮಾಜಕ್ಕೂ ಅನ್ವಯಿಸಬೇಕು.
ಕೇವಲ ಧರ್ಮಕ್ಕೆ ಮರಳಿದ ವ್ಯಕ್ತಿಗೆ ಸಮಾನ ಗೌರವ ದೊರೆಯದಿದ್ದರೆ, ನಮ್ಮ ಸಾಮಾಜಿಕ ಸುಧಾರಣೆಯ ಮಾತುಗಳು ಎಷ್ಟು ಅರ್ಥಪೂರ್ಣ? ಹಿಂದೂ ಧರ್ಮಕ್ಕೆ ಮರಳಲು ಬಯಸುವ ವ್ಯಕ್ತಿಗಳಿಗೆ ಗೌರವಯುತ ಮರುಪ್ರವೇಶದ ವ್ಯವಸ್ಥೆ ಹೇಗಿರಬೇಕು? ಭಾರತದ ಸಂವಿಧಾನದ 25ನೇ ವಿಧಿಯು ಪ್ರತಿಯೊಬ್ಬ ವ್ಯಕ್ತಿಗೂ ಆತ್ಮಸಾಕ್ಷಿಯ ಸ್ವಾತಂತ್ರ್ಯ ಹಾಗೂ ತನ್ನ ಇಚ್ಛೆಯಂತೆ ಧರ್ಮವನ್ನು ಆಚರಿಸುವ ಮತ್ತು ಪ್ರತಿಪಾದಿಸುವ ಹಕ್ಕನ್ನು ನೀಡುತ್ತದೆ.
ಹೀಗಾಗಿ ಒಬ್ಬ ವ್ಯಕ್ತಿ ಸ್ವಯಂಪ್ರೇರಣೆಯಿಂದ ತನ್ನ ಧರ್ಮವನ್ನು ಬದಲಾಯಿಸುವುದಾಗಲಿ, ಹಿಂದಿನ ಧರ್ಮಕ್ಕೆ ಮರಳುವುದಾಗಲಿ ವೈಯಕ್ತಿಕ ಧಾರ್ಮಿಕ ಸ್ವಾತಂತ್ರ್ಯದ ಭಾಗವಾಗಿದೆ. ಆದರೆ ಧರ್ಮಕ್ಕೆ ಮರಳಿದ ತಕ್ಷಣವೇ ಎಲ್ಲ ಕಾನೂನುಬದ್ಧ ಜಾತಿ ಹಕ್ಕುಗಳು ಸ್ವಯಂಚಾಲಿತವಾಗಿ ದೊರೆಯುತ್ತವೆ ಎಂದು ಭಾವಿಸುವುದು ತಪ್ಪು. ಹಿಂದೂ ಸಮಾಜಕ್ಕೆ ಈಗ ಬೇಕಿರುವುದು ಒಂದು ಸ್ಪಷ್ಟ ಸಾಮಾಜಿಕ ನೀತಿ. ವ್ಯವಸ್ಥೆಯ ಕಾರಣದಿಂದ ಯಾರನ್ನೂ ಕೀಳಾಗಿ ಕಾಣುವ ಮನೋಭಾವ ವನ್ನು ಸಮಾಜ ತೊಡೆದು ಹಾಕಬೇಕು. ನೇತಾಜಿ ಪಾಲ್ಕರ್ ಮತ್ತು ಬಜಾಜಿ ನಿಂಬಾಳ್ಕರ್ ಜೀವನದ ಘರ್ ವಾಪ್ಸಿ ಘಟನೆಗಳು ಸುಮಾರು ಮೂರೂವರೆ ಶತಮಾನಗಳ ಹಿಂದಿನವು. ಆ ಕಾಲದಲ್ಲಿ ಧರ್ಮಕ್ಕೆ ಮರಳುವ ವ್ಯಕ್ತಿಯ ಸಾಮಾಜಿಕ ಸ್ವೀಕಾರಕ್ಕಾಗಿ ರಾಜಮನೆತನವೇ ಮಧ್ಯಪ್ರವೇಶಿಸ ಬೇಕಾಗಿತ್ತು.
ಇಂದು ನಾವು ಸಂವಿಧಾನಬದ್ಧ ಪ್ರಜಾಪ್ರಭುತ್ವದಲ್ಲಿ ಬದುಕುತ್ತಿದ್ದೇವೆ. ಧಾರ್ಮಿಕ ಸ್ವಾತಂತ್ರ್ಯ, ವೈಯಕ್ತಿಕ ಘನತೆ ಮತ್ತು ಸಮಾನತೆಯ ತತ್ವಗಳನ್ನು ನಮ್ಮ ಸಂವಿಧಾನವೇ ಪ್ರತಿಪಾದಿಸಿದೆ. ಹಾಗಿದ್ದರೂ ಒಬ್ಬ ವ್ಯಕ್ತಿ ತನ್ನ ಪೂರ್ವಜರ ಧರ್ಮಕ್ಕೆ ಮರಳಲು ಬಯಸಿದಾಗ ಜಾತಿ ಯಾವುದು, ಗೋತ್ರ ಯಾವುದು, ಸಮಾಜ ಸ್ವೀಕರಿಸುತ್ತದೆಯೇ ಎಂಬ ಪ್ರಶ್ನೆಗಳು ಇಂದಿಗೂ ಎದುರಾಗುತ್ತಿದೆ.
ಹಿಂದೂ ಧರ್ಮಕ್ಕೆ ಬರುವ ಪ್ರತಿಯೊಬ್ಬರಿಗೂ ಜಾತಿ ನೋಡದೆ ಸಮಾನ ಗೌರವ ನೀಡಲು ಸಿದ್ಧರಿದ್ದೇವೆ ಯೇ? ಹಿಂದೂ ಧರ್ಮದ ಶಕ್ತಿ ಅದರ ವೈವಿಧ್ಯದಲ್ಲಿದೆ ಎಂದು ನಾವು ಹೆಮ್ಮೆಯಿಂದ ಹೇಳುತ್ತೇವೆ. ಆದರೆ ಆ ವೈವಿಧ್ಯವೇ ಒಬ್ಬ ವ್ಯಕ್ತಿಯನ್ನು ಸ್ವೀಕರಿಸಲು ಅಡ್ಡಿಯಾಗಿದೆ. ಧರ್ಮಕ್ಕೆ ಮರಳುವ ದಾರಿಯನ್ನು ತೆರೆಯುವುದು ಒಂದು ಧಾರ್ಮಿಕ ನಿರ್ಧಾರ. ಮರಳಿ ಬಂದವರನ್ನು ಗೌರವದಿಂದ ಸ್ವೀಕರಿಸುವುದು ಒಂದು ಸಾಮಾಜಿಕ ಜವಾಬ್ದಾರಿ. ಧರ್ಮದ ಬಾಗಿಲು ತೆರೆದಿದ್ದರೆ ಸಮಾಜದ ಬಾಗಿಲೂ ತೆರೆದಿರಬೇಕು. ಹಿಂದೂ ಸಮಾಜದ ಶಕ್ತಿ ಕೇವಲ ಅದರ ಪ್ರಾಚೀನ ಪರಂಪರೆ ಮತ್ತು ಧಾರ್ಮಿಕ ಆಚರಣೆಗಳಲ್ಲಿಲ್ಲ, ತನ್ನೊಳಗಿನ ದೋಷಗಳನ್ನು ಗುರುತಿಸಿ, ಕಾಲಕ್ಕೆ ತಕ್ಕಂತೆ ಸುಧಾರಿಸಿಕೊಳ್ಳುವ ಸಾಮರ್ಥ್ಯದಲ್ಲಿಯೂ ಇದೆ.