ಅಶ್ವತ್ಥಕಟ್ಟೆ
ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವೇ ಚುನಾವಣೆಗಳು. ಈ ಚುನಾವಣೆಗಳಿಗೆ ಅಡಿಪಾಯ ಮತಪಟ್ಟಿ. ಈ ಮತಪಟ್ಟಿಯಲ್ಲಿರುವ ಅನರ್ಹರನ್ನು ತೆಗೆದು ಮತಪಟ್ಟಿಯನ್ನು ‘ಶುದ್ಧೀಕರಿಸಲು’ ಎಸ್‌ಐಆರ್ ಪ್ರಕ್ರಿಯೆಯನ್ನು ಕೇಂದ್ರ ಚುನಾವಣಾ ಆಯೋಗ ನಡೆಸುವುದು ಸಾಮಾನ್ಯ ಪ್ರಕ್ರಿಯೆ. ಭಾರತದ ಇತಿಹಾಸ ದಲ್ಲಿ ಈವರೆಗೆ 12 ಬಾರಿ ಎಸ್‌ಐಆರ್ ಪ್ರಕ್ರಿಯೆ ನಡೆದಿದ್ದರೂ, ಈ ಬಾರಿಯಷ್ಟು ಗದ್ದಲ, ಗೊಂದಲ, ಗೋಜಲು ಈ ಹಿಂದೆ ನಡೆದಿರುವ ಉದಾಹರಣೆಯಿಲ್ಲ.
ಸದ್ಯ ಇಡೀ ದೇಶಾದ್ಯಂತ ಎಸ್‌ಐಆರ್ ಸದ್ದು. ಕೇಂದ್ರ ಚುನಾವಣಾ ಆಯೋಗ ಎಸ್‌ಐಆರ್ ನಡೆಸು ತ್ತಿದ್ದರೂ, ಕಿತ್ತಾಟವಾಗುತ್ತಿರುವುದು ಮಾತ್ರ ಕೇಂದ್ರ ಸರಕಾರ ಹಾಗೂ ಪ್ರತಿಪಕ್ಷಗಳ ನಡುವೆ. ಈ ಗದ್ದಲಕ್ಕೆ ತುಪ್ಪ ಸುರಿಯುವಂತೆ ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್‌ಕುಮಾರ್ ಹಾಗೂ ಇತರ ಆಯುಕ್ತರ ನಡುವಿನ ಭಿನ್ನರಾಗದ ವರದಿಗಳು ಕೆಲಸ ಮಾಡಿದೆ. ಆದರೆ ಈ ಎಸ್‌ಐಆರ್ ಪ್ರಕ್ರಿಯೆಯನ್ನು ನಿರಂತರವಾಗಿ ಕಾಂಗ್ರೆಸ್ ಟೀಕಿಸುತ್ತಾ ಬಂದಿದ್ದರೂ, ಆಯೋಗದಿಂದ ‘ಸ್ಪಷ್ಟೀಕರಣ’ ನೀಡಿದ್ದಕ್ಕಿಂತ ಹೆಚ್ಚಾಗಿ ಬಿಜೆಪಿ ನಾಯಕರು ಸಮರ್ಥಿಸಿಕೊಂಡಿರುವುದು ಈ ವಿವಾದ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗುವುದಿಲ್ಲ.
ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗದ ಪರವಾಗಿ ಬಿಜೆಪಿ ನಾಯಕರಾಗಲಿ, ಕೇಂದ್ರ ಸಚಿವರು ಮಾತನಾಡುತ್ತಿರುವುದು ಇದೀಗ ಆಡಳಿತ-ಪ್ರತಿಪಕ್ಷ ನಾಯಕರ ನಡುವಿನ ವಾಕ್ಸಮರ ತಾರಕಕ್ಕೆ ಏರಿದೆ ಎನ್ನುವುದು ಸ್ಪಷ್ಟ. ಚುನಾವಣಾ ಆಯೋಗ ಎಸ್‌ಐಆರ್ ಘೋಷಣೆ ಮಾಡು ತ್ತಿದ್ದಂತೆ ಈ ಪ್ರಕ್ರಿಯೆಗೆ ರಾಜಕೀಯ ಲೇಪನ ನೀಡುವ ವ್ಯವಸ್ಥಿತ ತಂತ್ರವನ್ನು ಇಂಡಿ ಒಕ್ಕೂಟ ಮಾಡಿಕೊಂಡೇ ಬಂದಿದೆ. ಈ ಹಿಂದೆ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಕೆಲ ತಿಂಗಳ ಹಿಂದೆ ಚುನಾವಣೆಯ ಸಮಯದಲ್ಲಿ ಎಸ್‌ಐಆರ್ ಅನ್ನು ಪ್ರತಿಪಕ್ಷಗಳು ಬಹುದೊಡ್ಡ ‘ಅಸ್ತ್ರ’ ಎನ್ನುವ ರೀತಿ ಬಳಸಿಕೊಂಡವು.
ಇದನ್ನೂ ಓದಿ: Ranjith H Ashwath Column: ಸರಕಾರ ಮೇಲಿರುವ ಹೊರೆ ತಗ್ಗಿಸೋರ್ಯಾರು ?
ಅದರಲ್ಲಿಯೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿಗೆ ಎಸ್‌ಐಆರ್ ಅವಧಿಯಲ್ಲಿ ಡಿಲಿಟ್ ಆದ ಮತಗಳೇ ಕಾರಣ ಎನ್ನುವ ರೀತಿಯಲ್ಲಿ ಪ್ರತಿಪಕ್ಷ ನಾಯಕರು ಬೊಬ್ಬೆ ಹೊಡೆದರು. ಅಂಕಿ-ಅಂಶಗಳನ್ನು ಗಮನಿಸಿದರೆ, ಎಸ್‌ಐಆರ್‌ನಲ್ಲಿ ಪಶ್ಚಿಮ ಬಂಗಾಳದಲ್ಲಿ ಸುಮಾರು 83.86 ಲಕ್ಷ, ತಮಿಳುನಾಡಿನಲ್ಲಿ 74 ಲಕ್ಷ, ಕೇರಳದಲ್ಲಿ ಒಂಬತ್ತು ಲಕ್ಷ ಮತದಾರರನ್ನು ಮತಪಟ್ಟಿಯಿಂದ ಕೈಬಿಡಲಾಗಿತ್ತು.
ಬಿಜೆಪಿ ವಿರೋಧಿ ಮತಗಳನ್ನು ಬೇಕೆಂದೇ ಪಶ್ಚಿಮ ಬಂಗಾಳದಲ್ಲಿ ಹುಡುಕಿ-ಹುಡುಕಿ ಡಿಲಿಟ್ ಮಾಡಲಾಗಿದೆ ಎನ್ನುವ ಆರೋಪ ಮಾಡಿದ ಕಾಂಗ್ರೆಸಿಗರು, ಕೇರಳದಲ್ಲಿ ಗೆದ್ದಿದ್ದಕ್ಕೆ, ತಮಿಳುನಾಡಿನಲ್ಲಿ ಇಂದಿನ ಟಿವಿಕೆ ಪಕ್ಷದ ಗೆಲುವಿಗೆ ಎಸ್‌ಐಆರ್ ಕೆಲಸ ಮಾಡಿದೆ ಎನ್ನುವುದನ್ನು ಒಪ್ಪಲ್ಲ. ಹಾಗೆ ನೋಡಿದರೆ, ಎಸ್‌ಐಆರ್‌ನಿಂದ ವಿಧಾನಸಭಾ ಚುನಾವಣೆಯ ಶೇಕಡವಾರು ಮತದಾನ ಪ್ರಮಾಣ ಏರಿಕೆಯಾಗಿದೆ ಎನ್ನಲಾಗುತ್ತಿದೆ.
ಇದಕ್ಕೆ ಪೂಕರವಾಗಿ ಎಸ್ ಐಆರ್ ಪ್ರಕ್ರಿಯೆ ಮುಗಿದ ಬಳಿಕ ನಡೆದಿರುವ ರಾಜ್ಯಗಳ ಚುನಾವಣೆ ಯಲ್ಲಿ ಮತದಾನ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಉದಾಹರಣೆಗೆ ಪಶ್ಚಿಮ ಬಂಗಾಳದಲ್ಲಿ 81ರಿಂದ 84ರಷ್ಟು ಸರಾಸರಿ ಮತದಾನ ವಾಗಿರುವ ದಾಖಲೆ ಈ ಹಿಂದಿನ ಚುನಾವಣೆಗಳಲ್ಲಿದ್ದರೆ, ಈ ಬಾರಿ ಇದರ ಪ್ರಮಾಣ ಶೇ.93.7ಕ್ಕೆ ಏರಿಕೆಯಾಗಿತ್ತು.
ಇದೇ ರೀತಿ ತಮಿಳುನಾಡಿನಲ್ಲಿ ಕಳೆದ ಮೂರು ವಿಧಾನಸಭಾ ಚುನಾವಣೆಯಲ್ಲಿ 73ರಿಂದ 78ರ ಆಸುಪಾಸಿನಲ್ಲಿ ಆಗುತ್ತಿದ್ದ ಶೇಕಡವಾರು ಪ್ರಮಾಣ ಈ ಬಾರಿ ಶೇ.85.15ಕ್ಕೆ ಏರಿಕೆಯಾ ಯಿತು. ಅಂದರೆ, ಇಷ್ಟು ದಿನ ಶೇಕಡವಾರು ಮತಪ್ರಮಾಣ ಕಡಿಮೆಯಾಗಲು, ಮತದಾರರಷ್ಟೇ ಕಾರಣ ವಲ್ಲದೇ, ಸ್ವಚ್ಛ ಮತಪಟ್ಟಿ ಸಿದ್ಧಪಡಿಸದೇ ಇರುವುದೂ ಪ್ರಮುಖ ಕಾರಣವಾಗಿತ್ತು ಎಂದರೆ ತಪ್ಪಾಗುವುದಿಲ್ಲ.
ಇದೀಗ, ಕರ್ನಾಟಕದ ಉದಾಹರಣೆಯನ್ನೇ ಗಮನಿಸಿದರೆ, ಪ್ರತಿಬಾರಿಯ ಚುನಾವಣೆಯಲ್ಲಿ ಬೆಂಗಳೂರು ನಗರ ಭಾಗದ ವಿಧಾನಸಭಾ, ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುವ ಮತದಾನ ಪ್ರಮಾಣದ ತೀರಾ ಕಡಿಮೆಯಾಗಿರುತ್ತಿತ್ತು. 2004ರಿಂದ ಗಮನಿಸಿದರೆ, 65ರಿಂದ 73.84ರಷ್ಟು ಮತದಾನವಾಗಿತ್ತು.
ಅದರಲ್ಲಿಯೂ ಬೆಂಗಳೂರು ವ್ಯಾಪ್ತಿಯಲ್ಲಿ ಶೇ.50ರಿಂದ 55ರ ಆಸುಪಾಸಿಗೆ ಬಂದು ನಿಲ್ಲುತ್ತಿಲ್ಲ. ಆದರೀಗ ಚುನಾವಣಾ ಆಯೋಗ ಬಿಡುಗಡೆಗೊಳಿಸಿರುವ ಕರಡು ಪಟ್ಟಿಯಲ್ಲಿ ಕರ್ನಾಟಕದಲ್ಲಿ 1,07,96,339 ಜನರ ಹೆಸರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ. ಇದರಲ್ಲಿ 65,45,679 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದರೆ, 16,39,864 ಮಂದಿ ಮೃತಪಟ್ಟಿದ್ದಾರೆ.
ನಕಲಿ ಅಥವಾ ಡಬಲ್ ಎಂಟ್ರಿಯಾಗಿರುವ 7.09 ಲಕ್ಷ ಹೆಸರುಗಳು ಸೇರಿದಂತೆ ಎಸ್‌ಐಆರ್ ಪ್ರಕ್ರಿಯೆಯ ಮನೆ-ಮನೆ ಸಮೀಕ್ಷೆ ವೇಳೆ ಸಿಗದ 15 ಲಕ್ಷ ಜನರನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿದೆ. ಮೃತಪಟ್ಟವರನ್ನು ಹೊರತುಪಡಿಸಿ ಇನ್ನುಳಿದ ಎಲ್ಲರಿಗೂ ನೋಟಿಸ್‌ಗಳನ್ನು ನೀಡಿ, ಅದಕ್ಕೆ ಸೂಕ್ತ ದಾಖಲೆಗಳನ್ನು ನೀಡಿ ಪುನಃ ಸ್ಥಾಪಿಸುವ ಕಾರ್ಯವನ್ನು ಆಯೋಗ ಮಾಡುತ್ತದೆ. ಈ ಎಲ್ಲ ಪ್ರಕ್ರಿಯೆ ಬಳಿಕ ಚುನಾವಣಾ ಆಯೋಗ ಶುಕ್ರವಾರ ಬಿಡುಗಡೆ ಮಾಡಿರುವ ಅಂಕಿ-ಅಂಶದ ಪ್ರಕಾರ ಒಟ್ಟು 4,51,61,393 ಮತದಾರರು ರಾಜ್ಯದಲ್ಲಿದ್ದು, ಇದರಲ್ಲಿ 2,24,03,422 ಪುರುಷ, 2,27,55,113 ಮಹಿಳಾ ಹಾಗೂ 2858 ತೃತೀಯ ಲಿಂಗಿಗಳಿದ್ದಾರೆ.
ಈ ಕರಡು ಪಟ್ಟಿಯಲ್ಲಿಯೂ ಕೆಲವೊಂದಷ್ಟು ಬದಲಾವಣೆ, ನೋಟಿಸ್‌ಗೆ ಉತ್ತರಿಸಲು ಸಮಯಾ ವಕಾಶ ನೀಡಲಾಗಿತ್ತು, 27ಕ್ಕೆ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ. ಹಿಂದಿನ ಚುನಾವಣೆಗೆ ಹೋಲಿಸಿದರೆ, ಕರ್ನಾಟಕದಲ್ಲಿ ಸುಮಾರು ಒಂದು ಕೋಟಿ ಹೆಸರುಗಳನ್ನು ಮತಪಟ್ಟಿಯಿಂದ ಕೈಬಿಟ್ಟಿರುವುದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ, ಅದರಲ್ಲಿಯೂ ಬೆಂಗಳೂರಿನ ವ್ಯಾಪ್ತಿಯಲ್ಲಿ ಶೇಕಡವಾರು ಮತದಾರ ಶೇ.80 ದಾಟಿದರೂ ಅಚ್ಚರಿಯಿಲ್ಲ!
ಆದರೀಗ ರಾಜ್ಯ ಕಾಂಗ್ರೆಸ್ ಆಕ್ಷೇಪ ಎತ್ತುತ್ತಿರುವುದು ಸುಮಾರು ಒಂದು ಕೋಟಿ ಜನರ ಹೆಸರು ಗಳನ್ನು ಮತಪಟ್ಟಿಯಿಂದ ಕೈಬಿಟ್ಟಿರುವ ವಿಷಯದಲ್ಲಿ. ಅದರಲ್ಲಿಯೂ ಫಾರ್ಮ್ 7 ಮೂಲಕ ಬಿಜೆಪಿಯವರು ಕಾಂಗ್ರೆಸ್ ಮತದಾರರನ್ನು ಡಿಲೀಟ್ ಮಾಡಿಸುವ ಹುನ್ನಾರ ನಡೆಸಿದ್ದಾರೆ ಎನ್ನುವ ‘ನರೇಟಿವ್’ ಫಿಕ್ಸ್ ಮಾಡಲು ಪ್ರಯತ್ನಿಸುತ್ತಿದೆ. ಅದರ ಭಾಗವಾಗಿಯೇ ಕಳೆದ ವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ 50 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಕೈಬಿಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು. ಮುಂದುವರಿದು ಸ್ವತಃ ಡಿ.ಕೆ.ಶಿವಕುಮಾರ್ ಅವರು ಸಂಪುಟ ಸಭೆಯನ್ನೂ ಮುಂದೂಡಿ, ಚುನಾವಣಾ ಆಯೋಗದ ಮುಂದೆ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಮಟ್ಟದಲ್ಲಿ ‘ಸದ್ದು’ ಮಾಡಿದರು. ಆದರೆ ಈ ಎಲ್ಲ ‘ಉಗ್ರ’ ಹೋರಾಟದ ಬಳಿಕ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ-ಅಂಶದಲ್ಲಿ ಫಾರ್ಮ್ 7ಗೆ 1,10,654 ಅರ್ಜಿ ಸಲ್ಲಿಕೆಯಾಗಿದೆ. ಅಂದರೆ 1.10 ಲಕ್ಷ ಮತದಾರರ ಇರುವಿಕೆಯ ಬಗ್ಗೆ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.
ಆಕ್ಷೇಪಣೆ ಸಲ್ಲಿಕೆಯಾದ ಮಾತ್ರಕ್ಕೆ ಈ ಎಲ್ಲರನ್ನೂ ಪಟ್ಟಿಯಿಂದ ಏಕಾಏಕಿ ಕೈಬಿಡಬೇಕು ಎಂದಿಲ್ಲ. ಫಾರ್ಮ್ 7ರಲ್ಲಿ ಯಾವುದೇ ವ್ಯಕ್ತಿಯ ಬಗ್ಗೆ ಅಕ್ಷೇಪಣೆಯನ್ನು ಸಲ್ಲಿಸಿದರೆ, ಅದರ ಆಧಾರದಲ್ಲಿ ಆ ನಿರ್ದಿಷ್ಟ ವ್ಯಕ್ತಿಗೆ ನೋಟಿಸ್ ಹೋಗಲಿದೆ. ನೋಟಿಸ್ ಸ್ವೀಕರಿಸಿದ ವ್ಯಕ್ತಿ ಅರ್ಹ ದಾಖಲೆಗಳೊಂದಿಗೆ ವಿಚಾರಣೆ ಎದುರಿಸಿದರೆ ಆತನ ಅಥವಾ ಆಕೆಯ ಹೆಸರನ್ನು ಪಟ್ಟಿಯಿಂದ ಕೈಬಿಡುವುದಿಲ್ಲ.
ಇದರೊಂದಿಗೆ ಸುಳ್ಳು ಆರೋಪ ಹೋರಿಸಿದ ವ್ಯಕ್ತಿಯ ವಿರುದ್ಧವೂ ಪ್ರಕರಣ ದಾಖಲಿಸಲು ಅವಕಾಶವಿದೆ. ಆದರೆ ಈ ವಿಷಯದಲ್ಲಿ ಕಾಂಗ್ರೆಸ್ ನಾಯಕರು ‘ಕಾನೂನಾತ್ಮಕ’ ಪ್ರಕ್ರಿಯೆಗಳ ಬಗ್ಗೆ ಗಮನಹರಿಸಿದ್ದಕ್ಕಿಂತ ರಾಜಕೀಯ ಪ್ರೇರಿತ ದಾಳಿ ನಡೆಸಲು ದಾಖಲೆಗಳನ್ನು ಬಳಸಿಕೊಂಡರು. ಈ ಮೂಲಕ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಚುನಾವಣಾ ಆಯೋಗದ ವಿರುದ್ಧ ನಡೆಸುತ್ತಿರುವ ‘ವಾಗ್ದಾಳಿ’ಗೆ ಪೂರಕವಾಗಿ ಕೆಲಸ ಮಾಡುತ್ತಿದ್ದೇವೆ ಎನ್ನುವ ಸಂದೇಶವನ್ನು ದೆಹಲಿಗೆ ರವಾನಿಸುವು ದಷ್ಟೇ ರಾಜ್ಯ ನಾಯಕರ ಉದ್ದೇಶವಾಗಿತ್ತು.
ಎಸ್‌ಐಆರ್ ಪ್ರಕ್ರಿಯೆಯನ್ನು ವಿರೋಽಸುತ್ತಿರುವವರು ಮತಪಟ್ಟಿಯಿಂದ ಯಾವುದೇ ಅರ್ಹ ಮತದಾರನ ಹೆಸರನ್ನು ಕೈಬಿಟ್ಟರೆ ಪುನಃ ಸ್ಥಾಪನೆಗೆ ಅವಕಾಶವೇ ಇಲ್ಲ. ಆ ವ್ಯಕ್ತಿ ಈ ದೇಶದ ಪ್ರಜೆಯಾಗಿಯೇ ಇರುವುದಿಲ್ಲ ಎನ್ನುವ ರೀತಿಯಲ್ಲಿ ‘ನರೇಟಿವ್’ ಫಿಕ್ಸ್ ಮಾಡುತ್ತಿದೆ. ಆದರೆ ವಾಸ್ತವಾಂಶವೇನೆಂದರೆ, ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡು ಅಂತಿಮ ಮತಪಟ್ಟಿಯನ್ನು ಬಹಿರಂಗಗೊಳಿಸಿದ ಬಳಿಕವೂ ಪುನಃ ಅರ್ಹರು ಮತಪಟ್ಟಿಗೆ ತಮ್ಮ ಹೆಸರನ್ನು ಸೇರಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಅದರರ್ಥ ಒಂದು ವೇಳೆ ಅರ್ಹ ಅಭ್ಯರ್ಥಿ ಮತದಾನದ ಹಕ್ಕನ್ನು ಎಸ್‌ಐಆರ್‌ನಿಂದ ಕಳೆದುಕೊಂಡರೆ, ಆತ ಮರುದಿನವೇ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ ಆತನ ಹೆಸರು ಮತಪಟ್ಟಿಯಲ್ಲಿ ಪುನರ್‌ಸ್ಥಾಪನೆಯಾಗಲಿದೆ.
ಪ್ರತಿ ಚುನಾವಣೆ ಅಧಿಸೂಚನೆ ಹೊರಡಿಸುವ ಹಿಂದಿನ ದಿನದವರೆಗೆ ಅಥವಾ ಮಾದರಿ ನೀತಿ ಸಂಹಿತೆ ಯಾಗುವ ತನಕ ಮತಪಟ್ಟಿಗೆ ಹೆಸರನ್ನು ಸೇರಿಸಲು ಅವಕಾಶವಿದೆ ಎನ್ನುವ ಸತ್ಯವನ್ನು ಏಕೆ ಹೇಳುತ್ತಿಲ್ಲ ಎನ್ನುವ ಪ್ರಶ್ನೆಗೆ ಬಹುರಾಜಕಾರಣಿಗಳ ಬಳಿಕ ಉತ್ತರವಿಲ್ಲ. ಎಸ್‌ಐಆರ್ ವಿಷಯದಲ್ಲಿ ಇತರೆ ರಾಜ್ಯಗಳಿಗೆ ಹೋಲಿಸದರೆ ಕರ್ನಾಟಕ ಸರಕಾರ ಆರಂಭದಲ್ಲಿ ಚುನಾವಣಾ ಆಯೋಗಕ್ಕೆ ಅಗತ್ಯ ‘ಸಹಕಾರ’ವನ್ನೇ ನೀಡುತ್ತಾ ಬಂದಿತ್ತು. ಆದರೆ ಕೇಂದ್ರ ಚುನಾವಣಾ ಆಯೋಗದಲ್ಲಿನ ಭಿನ್ನಾಭಿಪ್ರಾಯದ ಬಗ್ಗೆ ಹಾಗೂ ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್‌ಕುಮಾರ್ ತೀರ್ಮಾನಗಳ ವಿರುದ್ಧ ಇನ್ನಿಬ್ಬರು ಆಯುಕ್ತರ ಭಿನ್ನ ನಿಲುವಿನ ಬಗ್ಗೆ ‘ವರದಿ’ ಬಹಿರಂಗವಾಗುತ್ತಿದ್ದಂತೆ, ಕಾಂಗ್ರೆಸ್ ವರಿಷ್ಠರು ಈ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ ಹಾಗೂ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಲು ಶುರುಮಾಡಿದರು.
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿ ಜ್ಞಾನೇಶ್‌ಕುಮಾರ್ ನೇಮಕದಲ್ಲಿ ಬಿಜೆಪಿ, ಮೋದಿ ಪಾತ್ರದಷ್ಟೇ, ಪ್ರತಿಪಕ್ಷ ನಾಯಕರ ಪಾತ್ರವೂ ಅಷ್ಟೇ ಇರುತ್ತದೆ ಎನ್ನುವುದನ್ನು ಮರೆತಿರುವ ಕಾಂಗ್ರೆಸಿಗರು, ಮೋದಿ ವಿರುದ್ಧ ಟೀಕಿಸಲು ಸಿಕ್ಕಿರುವ ಅಸ್ತ್ರ ಎನ್ನುವ ರೀತಿಯಲ್ಲಿ ಈ ವಿಷಯವನ್ನು ಎತ್ತಿಕೊಂಡಿದೆ. ಕಾಂಗ್ರೆಸಿನ ದಿಲ್ಲಿ ನಾಯಕರು ಈ ವಿಷಯವನ್ನು ಎತ್ತುಕೊಳ್ಳುತ್ತಿದ್ದಂತೆ ರಾಜ್ಯ ನಾಯಕರು ಅವರನ್ನು ಹಿಂಬಾಲಿಸಬೇಕಿರುವುದರಿಂದ, ಜ್ಞಾನೇಶ್‌ಕುಮಾರ್ ರಾಜೀನಾಮೆಗೆ ಸೀಮಿತಗೊಳಿಸುವ ಬದಲು ಎಸ್‌ಐಆರ್ ವಿರುದ್ಧ ಹೋರಾಟದತ್ತ ತಿರುಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಸೇರಿದಂತೆ ಯಾರೆಷ್ಟೇ ವಿರೋಧಿಸಿದರೂ, ಎಸ್‌ಐಆರ್ ಪ್ರಕ್ರಿಯೆ ಯನ್ನು ಕೇಂದ್ರ ಚುನಾವಣಾ ಆಯೋಗ ಪೂರ್ಣಗೊಳಿಸುತ್ತದೆ ಎನ್ನುವುದಂತೂ ಸ್ಪಷ್ಟ. ಈಗಾಗಲೇ ಇದೇ ಎಸ್‌ಐಆರ್‌ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮುಂದಿರುವ ಬಹುತೇಕ ಅರ್ಜಿಗಳನ್ನು ವಜಾಗೊಳಿಸಿ, ಎಸ್ ಐಆರ್ ಪ್ರಕ್ರಿಯೆ ಮುಂದುವರೆಸಲು ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿರುವುದು ಸ್ಪಷ್ಟ.
ಇಂಡಿ ಒಕ್ಕೂಟದ ವಿರೋಧ ಒಂದೆಡೆಯಾದರೆ, ಇದಕ್ಕೆ ಇತ್ತೀಚಿಗೆ ಜಿರಳೆ ಪಾರ್ಟಿಯೂ ತನ್ನ ಬೆಂಬಲವನ್ನು ಸೂಚಿಸಿ ದೇಶಾದ್ಯಂತ ಪ್ರತಿಭಟನೆ ಮಾಡುವ, ನೀಟ್ ಮಾದರಿಯಲ್ಲಿಯೇ ಜಂತರ್‌ಮಂತರ್‌ನಲ್ಲಿ ಪ್ರತಿಭಟಿಸಿ ಕೇಂದ್ರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಕ್ಕೆ ಮುಂದಾಗಿದೆ. ಆದರೆ ನೀಟ್ ವಿಷಯದಲ್ಲಿ ಸೂಕ್ತ ಸಮಯದಲ್ಲಿ ವಿಷಯ ಎತ್ತಿಕೊಂಡ ಜಿರಳೆಗಳ ವಿರುದ್ಧ ಹಲವು ಆರೋಪಗಳಿದ್ದರೂ, ‘ಎತ್ತಿಕೊಂಡಿದ್ದ’ ವಿಷಯ ದೇಶದ ಯುವಕರಿಗೆ ಸಂಬಂಧಿಸಿದ್ದರಿಂದ ಕೇಂದ್ರ ಸರಕಾರ ಮಂಡಿಯೂರಬೇಕಾಗಿತ್ತು.
ಇದರೊಂದಿಗೆ ನೀಟ್ ವಿಷಯವನ್ನು ನಿಭಾಯಿಸುವಲ್ಲಿ ಆರಂಭದಿಂದಲೂ ಕೇಂದ್ರ ಸರಕಾರ ಹಾಗೂ ಬಿಜೆಪಿ ಪಕ್ಷವಾಗಿ ನಿರ್ಲಕ್ಷ್ಯ ತೋರಿದ್ದರಿಂದ ಜಿರಳೆಗಳಿಗೆ ಕೊಂಚ ಮೇಲುಗೈ ಆಗಿತ್ತು. ಆದರೆ ಎಸ್‌ಐಆರ್ ವಿಷಯ ಹಾಗೂ ಜ್ಞಾನೇಶ್‌ಕುಮಾರ್ ರಾಜೀನಾಮೆ ವಿಷಯದಲ್ಲಿ ಜಿರಳೆಗಳು ನಡೆದುಕೊಂಡಿದ್ದು, ಜಿರಳೆಗಳೊಂದಿಗೆ ಕಾಣಿಸಿಕೊಂಡ ಕೆಲ ವ್ಯಕ್ತಿಗಳಿಂದ ಸರಕಾರ ಅಥವಾ ಆಯೋಗದ ವಿರುದ್ಧ ಜನಾಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾಗಲಿಲ್ಲ ಎನ್ನುವುದು ಸ್ಪಷ್ಟ.
ಇನ್ನು ಕೊನೆಯದಾಗಿ, ಇಡೀ ಎಸ್‌ಐಆರ್ ಪ್ರಕ್ರಿಯೆಯನ್ನು ವಿರೋಧಿಸಿಕೊಂಡು ಬಂದಿರುವ ಕಾಂಗ್ರೆಸ್ ನಾಯಕರು, ಇತಿಹಾಸವನ್ನು ಮರೆತಿರುವಂತಿದೆ. ದೇಶಕ್ಕೆ ವಿಶೇಷ ತೀವ್ರ ಪರಿಷ್ಕರಣೆ ಹೊಸದೇನಲ್ಲ ಎನ್ನುವ ‘ಜಾಣ’ ಮರೆವು ಕಾಂಗ್ರೆಸಿನ ಬಹುತೇಕ ನಾಯಕರಿಗೆ ಆವರಿಸಿದೆ. ಈ ಹಿಂದೆ ಒಟ್ಟು 12 ಬಾರಿ ಎಸ್‌ಐಆರ್ ಪ್ರಕ್ರಿಯೆ ನಡೆದಿದ್ದು, ಅದರಲ್ಲಿ ಎರಡು ಬಾರಿ ಮಾತ್ರ ಬಿಜೆಪಿ ಅಧಿಕಾರದಲ್ಲಿತ್ತು.
2002-03ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಹಾಗೂ ಪ್ರಸ್ತುತ ನರೇಂದ್ರ ಮೋದಿ ನೇತೃತ್ವದ ಸರಕಾರದ ಅವಧಿಯಲ್ಲಿ. ಇನ್ನುಳಿದಂತೆ ಕಾಂಗ್ರೆಸ್‌ನ ಆಡಳಿತದಲ್ಲಿದ್ದ ಜವಾಹರಲಾಲ್ ನೆಹರು ಪ್ರಧಾನಿಯಾಗಿದ್ದಾಗ ಮೂರು, ಇಂದಿರಾ ಗಾಂಧಿ, ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದ ಎರಡು ಬಾರಿ, ರಾಜೀವ್ ಗಾಂಧಿ, ಲಾಲ್‌ಬಹದ್ದೂರ್ ಶಾಸ್ತ್ರಿ, ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದಾಗ ತಲಾ ಒಂದು ಬಾರಿ ನಡೆದಿತ್ತು.
ದೇಶದ ಮತದಾರರ ಪಟ್ಟಿಯಲ್ಲಿ ಮೃತಪಟ್ಟ, ಅನರ್ಹ, ನಕಲಿ ಮತದಾರರು, ಅಕ್ರಮ ವಲಸಿಗರ ಹೆಸರುಗಳನ್ನು ತೆಗೆದು ಶುದ್ಧೀಕರಿಸಲು ಅನಿವಾರ್ಯವಾಗಿರುವ ಎಸ್‌ಐಆರ್ ಪ್ರಕ್ರಿಯೆಯ ವಿಷಯದಲ್ಲಿ ರಾಜಕೀಯ ಮೀರಿದ ‘ಪ್ರಬುದ್ಧತೆ’ ಪ್ರತಿಪಕ್ಷಗಳು ಈವರೆಗೆ ತೋರಿಸುವ ಪ್ರಯತ್ನ ಮಾಡಿಯೇ ಇಲ್ಲ.
ಒಂದು ವೇಳೆ ಪ್ರತಿಪಕ್ಷಗಳು ಆರೋಪಿಸುತ್ತಿರುವಂತೆ ‘ಅರ್ಹ’ರನ್ನು ಮತಪಟ್ಟಿಯಿಂದ ಕೈಬಿಟ್ಟರೆ ಅದಕ್ಕೆ ಬೇಕಿರುವ ಕಾನೂನು ಹೋರಾಟ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ತಪ್ಪನ್ನೇ ತೋರಿಸದೇ, ಇಡೀ ಪ್ರಕ್ರಿಯೆಯನ್ನೇ ರದ್ದುಪಡಿಸಬೇಕು ಎನ್ನುವುದು, ಎಸ್‌ಐಆರ್ ನೆಪದಲ್ಲಿ ದೇಶದ್ರೋಹಿ ಹೇಳಿಕೆ ನೀಡುವುದು ಅಥವಾ ಈವರೆಗೆ ನಡೆದಿರುವ ಚುನಾವಣೆಗಳನ್ನೇ ರದ್ದುಪಡಿಸಬೇಕು ಎನ್ನುವುದು ‘ಬಾಲಿಶ’ವಲ್ಲದೇ ಮತ್ತೇನಿಲ್ಲ!