Yagati Raghu Naadig Column: ಪ್ರಾಮಾಣಿಕ ಪ್ರಾರ್ಥನೆಗೆ ಪರವಶನಾಗನೇ ಪರಮಾತ್ಮ ?
ಶಿಷ್ಯರು ಕಟ್ಟಿಕೊಂಡಿದ್ದ ಮೌನಕೋಟೆಯನ್ನು ಮುರಿಯುವವರಂತೆ ಅವಧೂತರು, “ಏನ್ರಯ್ಯಾ, ಕಥೆ ಮುಂದುವರಿಸಿ ಅಂತ ಇಷ್ಟೂ ಹೊತ್ತು ಪೀಡಿಸುತ್ತಿದ್ದವರು ಈಗ ಸುಮ್ಮನಾಗಿ ಬಿಟ್ಟಿರಿಲ್ಲಾ? ಯಾರಾದ ರೊಬ್ಬರು ಕಥೆ ಹೇಳುವಾಗ, ಕೇಳುವವರು ‘ಹೂಂ... ಹೂಂ’ ಅಂತ ‘ಹೂಂ’ ಗುಟ್ಟುತ್ತಿರಬೇಕು, ಇಲ್ಲವೇ ‘ಆಮೇಲೆ... ಆಮೇಲೆ..?’ ಅಂತ ಕೇಳುತ್ತಿರಬೇಕು ಎಂಬುದನ್ನು ಮರೆತೇ ಬಿಟ್ಟಿರಾ?" ಎಂದು ತಮಾಷೆ ಮಾಡಿದರು.


ರಸದೌತಣ
(ಭಾಗ-8)
naadigru@gmail.com
ಹಸಿ ಕಡಲೇಕಾಯಿ ಮತ್ತು ಬೆಲ್ಲವನ್ನು ಮೆಲ್ಲುತ್ತಾ, ಆ ಬೆಳದಿಂಗಳ ರಾತ್ರಿಯಲ್ಲಿ ಮತ್ತೊಂದು ಜಾಗರಣೆ ಮಾಡುತ್ತಾ, ಹತಭಾಗ್ಯೆ ಶಾರದೆಯ ಕಥೆಯ ಮುಂದುವರಿದ ಭಾಗವನ್ನು ಅವಧೂತರ ಬಾಯಿಂದ ಕೇಳಬೇಕು ಎಂದು ಶಿಷ್ಯರು ಉತ್ಸುಕರಾಗಿದ್ದೇನೋ ಖರೆ. ಆದರೆ ಅವಧೂತರ ಆಪ್ತ ಸಹಾಯಕರು ನೀಡಿದ ‘ಬ್ರೇಕಿಂಗ್ ನ್ಯೂಸ್’ ಶಿಷ್ಯರನ್ನು ಮತ್ತಷ್ಟು ಕುತೂಹಲಕ್ಕೆ ದೂಡಿತು. ಅದರಲ್ಲೂ ನಿರ್ದಿಷ್ಟವಾಗಿ, “ಶಾರದೆಗೆ ಒದಗಿದ ಸಂಕಷ್ಟಕ್ಕೆ ಕಾರಣರಾಗಿರಬಹುದಾದವರ ಪಟ್ಟಿಯಲ್ಲಿ ಈಗಾಗಲೇ ನಾಲ್ವರು ಮಹಾಪುರುಷರನ್ನು ಕಂಡಾಯಿತು. ಇವರ ಪೈಕಿ, ಕಥಾನಾಯಕಿ ಶಾರದೆಗೆ ಖಳನಾಯಕನಾಗಿ ಒದಗಿದ್ದು ಯಾರು? ಎಂಬುದನ್ನು ಮೊದಲು ನಮಗೆ ಹೇಳಿ ಬಿಡಿ. ನಂತರ ನೀವು ಕಥೆಯ ಒಂದೊಂದು ಹಂತವನ್ನೂ ಸವಿಸ್ತಾರವಾಗಿ ಹೇಳಿಕೊಂಡು ಹೋಗಿ" ಎಂದು ತವಕಿಸಿ ಪ್ರಾರ್ಥಿಸಿದ್ದ ಹೊಸಶಿಷ್ಯರಂತೂ ಮತ್ತಷ್ಟು ಕದಲಿಕೆಗೆ ಒಳಗಾದರು. ಅದರ ಗುಂಗಿನಲ್ಲೇ ಅವರು, “ಗುರುಗಳೇ... ಮಠದ ಸ್ವಾಮೀಜಿ, ಸಂಸ್ಥೆಯ ಮ್ಯಾನೇಜರ್, ರಾಜಕಾರಣಿ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಎಂಬ ತೊರೆಗಳು ಸೇರಿಕೊಂಡು ಈಗಾಗಲೇ ಮಹಾನದಿಯೇ ಆಗಿ ಬಿಟ್ಟಿರುವ ಕಥೆಗೆ, ಈಗ ‘ನಳಪಾಕ’ ಎಂಬ ಹೊಸದೊಂದು ಉಪನದಿ ಸೇರುವಂತಾಯಿತಲ್ಲಾ? ಆತ ಸಂಸ್ಥೆಯ ವಿದ್ಯಾರ್ಥಿ ನಿಲಯದ ಅಡುಗೆಯವನು ಎಂದು ನೀವು ಹೇಳಿ ನಿಗೂಢವಾಗಿ ನಕ್ಕುಬಿಟ್ಟಿರಿ. ಹೀಗೆಯೇ ದಿನಕ್ಕೊಂದು ‘ಉಪನದಿ’ ಸೇರುತ್ತಾ ಹೋದರೆ, ‘ಉಪಕಥೆ’ಗಳ ಭಾರದಲ್ಲಿ ಶಾರದೆಯ ಮುಖ್ಯಕಥನ ಸೊರಗುವುದಿಲ್ಲವೇ? ಅವಳ ಬದುಕಿಗೆ ಖಳನಾಯಕನಾಗಿದ್ದು ಯಾರೆಂಬುದನ್ನು ಮೊದಲು ಹೇಳಿ ಬಿಡಿ ಗುರುಗಳೇ... ಸಂಸ್ಥೆಯ ಆವರಣದಲ್ಲಿ ತೂರಿಕೊಂಡಿರುವ ಆ ‘ಕಳ್ಳಬೆಕ್ಕು’ ಯಾವುದೆಂದು ಮೊದಲು ಗೊತ್ತಾಗಿಬಿಡಲಿ..." ಎಂದು ಅಲವತ್ತುಕೊಂಡರು, ತಮಗಿದ್ದ ಸ್ವಾತಂತ್ರ್ಯವನ್ನು ಕೊಂಚ ಹೆಚ್ಚಾಗಿಯೇ ಬಳಸಿಕೊಂಡು..!
ಇದನ್ನೂ ಓದಿ: Yagati Raghu Naadig Column: ಕಳ್ಳಬೆಕ್ಕಿನ ಕಥನದಲ್ಲಿದೆಯೇ ಕಾವಿಯ ಕರಾಮತ್ತು ?!
ಆಗ ಮನದುಂಬಿ ನಕ್ಕ ಅವಧೂತರು, “ಅಯ್ಯಾ, ನಿಮ್ಮ ತವಕ ನನಗರ್ಥವಾಗುತ್ತೆ. ನಾನು ನನ್ನನ್ನೇನೂ ‘ಪತ್ತೇದಾರ ಪುರುಷೋತ್ತಮ’ ಅಂತಲೋ, ‘ಷರ್ಲಾಕ್ ಹೋಮ್ಸ್’ ಅಂತಲೋ ಭಾವಿಸಿಕೊಂಡಿಲ್ಲ. ಶಾರದೆಯ ಕಥನದಲ್ಲಿ ಉದ್ದೇಶಪೂರ್ವಕವಾಗಿ ಸಸ್ಪೆನ್ಸ್ ಅಂಶವನ್ನು ತೂರಿಸಬೇಕೆಂಬ ಇರಾದೆಯೂ ನನಗಿಲ್ಲ. ಆದರೆ, ಶಿವರಾತ್ರಿಯ ಜಾಗರಣೆಯ ತರುವಾಯದಲ್ಲಿ ಲೋಕಾಭಿರಾಮದ ಮಾತುಕತೆಯೊಂದಿಗೆ ಬಿಚ್ಚಿಕೊಂಡ ಈ ಕಥಾಸುರುಳಿಯಲ್ಲಿ ಶಾರದೆಯೇ ಕೇಂದ್ರಬಿಂದು ಎಂದು ನಾನು ಹೇಳುತ್ತಿದ್ದಂತೆ, ಅಲ್ಲಿಯವರೆಗೂ ‘ಧರ್ಮಸೂಕ್ಷ್ಮ’ದ ನೆಲೆಯಲ್ಲೇ ಈ ಕಥೆಯನ್ನು ಗ್ರಹಿಸುತ್ತಿದ್ದ ನೀವು ಅಚಾನಕ್ಕಾಗಿ ‘ಪತ್ತೇದಾರಿ’ ಶೈಲಿಯಲ್ಲಿ ಅದನ್ನು ಮನಸ್ಸಿಗೆ ಇಳಿಸಿ ಕೊಳ್ಳುವಂತಾಯಿತಷ್ಟೇ. ಜತೆಗೆ, ನಾವು ಜಾಗರಣೆ ಮುಗಿಸಿ ಹೊರಡಲು ಸನ್ನದ್ಧರಾದಾಗ ಶಾರದೆಯು ಕಾರಿನ ಬಳಿ ಬಂದು ಕೃತಜ್ಞತಾಪೂರ್ವಕವಾಗಿ ನಮಗೆ ನಮಸ್ಕರಿಸಿದ್ದು, ಮಾರ್ಗ ಮಧ್ಯದಲ್ಲಿ ಮ್ಯಾನೇಜರ್ ಫೋನ್ ಮಾಡಿ ಅಲವತ್ತುಕೊಂಡಿದ್ದು, ನಂತರದಲ್ಲಿ ಮಠದ ಸ್ವಾಮೀಜಿ ನಮ್ಮನ್ನು ಹುಡುಕಿಕೊಂಡು ಮನೆಗೇ ಬಂದಿದ್ದು, ಸಾಲದೆಂಬಂತೆ ಅಂದು ರಾತ್ರಿ ಒಬ್ಬ ರಾಜಕಾರಣಿ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ನಮ್ಮ ಭೇಟಿಗೆ ಆಗಮಿಸಿ ಅವಕೃಪೆಗೆ ಪಾತ್ರರಾಗಿದ್ದು, ತರುವಾಯ ದಲ್ಲಿ ವಿದ್ಯಾರ್ಥಿ ನಿಲಯದ ಅಡುಗೆಯವನ ಫೋನ್ ಬಂದಿದ್ದು- ಹೀಗೆ ಸಮಾಜದ ವಿವಿಧ ಸ್ತರಗಳಿಗೆ ಸೇರಿದ ಪಾತ್ರಗಳು ‘ಕಥೆಯ ಕಿಟಕಿ’ಯಲ್ಲಿ ಒಂದೊಂದಾಗಿ ಇಣುಕತೊಡಗಿದ್ದನ್ನು ಕಂಡು ನಿಮ್ಮ ಕೌತುಕ ಹೆಚ್ಚಾಯಿತೇನೋ?! ಆದರೆ, ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಿ. ಆ ಸಂಸ್ಥೆಯ ಆವರಣದಲ್ಲಿ ಮಡುಗಟ್ಟಿದ್ದ ‘ನಕಾರಾತ್ಮಕ ಛಾಯೆ’ಯನ್ನು ತೊಡೆದು ಹಾಕುವ ಸಂಕಲ್ಪದ ಭಾಗವಾಗಿ ನಾನು ಮ್ಯಾನೇಜರ್‌ಗೆ ‘ನಿಮ್ಮಲ್ಲೊಂದು ಕಳ್ಳಬೆಕ್ಕು ಸೇರಿಕೊಂಡಿದೆ; ಅದನ್ನು ಅಲ್ಲಿಂದ ತೊಲಗಿಸಿದರೆ ಒಳ್ಳೆಯದಾಗುತ್ತದೆ’ ಎಂದು ಹೇಳಿದ್ದೆ. ಆದರೆ, ‘ಕಳ್ಳಬೆಕ್ಕು’ ಎಂಬುದನ್ನು ವಾಚ್ಯರ್ಥದಲ್ಲಿ ಗ್ರಹಿಸಿದ ಆ ಮ್ಯಾನೇಜರ್, ತಮ್ಮ ಕಸರತ್ತಿನಲ್ಲಿ ವಿಫಲರಾದರು. ಆಗ ನಾನು ಅಖಾಡಕ್ಕೆ ಇಳಿಯಬೇಕಾಗಿ ಬಂತು. ಈ ಕೆಲಸವನ್ನು ನಾನು ಮೊದಲೇ ಮಾಡಬಹುದಿತ್ತು. ಆದರೆ, ‘ಈ ಸೃಷ್ಟಿಯಲ್ಲಿ ಯಾವ ಜೀವವೂ ಶ್ರೇಷ್ಠವಲ್ಲ, ನಿಕೃಷ್ಟವಲ್ಲ, ಎಲ್ಲವೂ ಸಮಾನ’ ಎಂಬುದನ್ನು ಕೆಲವರಿಗೆ ಮನವರಿಕೆ ಮಾಡಿಕೊಡಬೇಕಿತ್ತು. ‘ವಿದ್ಯೆಯ ಹಸಿವು’ ಇದ್ದ ಕಾರಣ ಸಂಸ್ಥೆಯ ವಿದ್ಯಾರ್ಥಿ ನಿಲಯದಲ್ಲಿ ಆಸರೆ ಪಡೆದಿದ್ದ ಅಮಾಯಕಿ ಶಾರದೆಯನ್ನು, ಆಕೆಯ ಅಸಹಾಯಕತೆ, ಸಾಮಾಜಿಕ ಮತ್ತು ಆರ್ಥಿಕ ದುಸ್ಥಿತಿಯ ಹಿನ್ನೆಲೆಯಲ್ಲಿ ‘ಸುಲಭದ ತುತ್ತು’ ಎಂದೇ ಭಾವಿಸಿ, ಆಕೆಯಿಂದ ತಮ್ಮ ‘ಕಾಮದ ಹಸಿವು’ ನೀಗಿಸಿಕೊಳ್ಳಲು ತವಕಿಸಿದ ಮಹಾನುಭಾವರಿಗೆ ಅವರ ತಪ್ಪಿನ ಅರಿವು ಮೂಡಿಸ ಬೇಕಿತ್ತು. ಆತ್ಮಸಾಕ್ಷಿಗೆ ಮೋಸ ಮಾಡಿಕೊಂಡು, ಅವರ ಕಾಮವಾಂಛೆಯನ್ನು ಈಡೇರಿಸಲು ಸಿದ್ಧಳಿರದ ಶಾರದೆ ಮೌನವಾಗಿಯೇ ಪ್ರಲಾಪಿಸತೊಡಗಿದಳು. ಗುರು ಮತ್ತು ದೇವರಲ್ಲಿ ಅಸೀಮ ನಂಬಿಕೆಯಿಟ್ಟಿರುವ, ನೀತಿ-ನಿಜಾಯತಿಯ ಬೇಲಿ ಹಾರದೆ ತನ್ನ ಅಸ್ಮಿತೆ ಮತ್ತು ಅಸ್ತಿತ್ವವನ್ನು ಕಾಪಿಟ್ಟು ಕೊಳ್ಳಲು ಹೆಣಗುವ ಜೀವವೊಂದು ಹೀಗೆ ಪ್ರಲಾಪಿಸಿದಾಗ, ಅದುವೇ ಗುರು ಮತ್ತು ದೇವರನ್ನು ತಲುಪುವ ಪ್ರಾರ್ಥನೆಯಾಗುತ್ತದೆ. ಹೃದಯಾಂತರಾಳದ ಇಂಥ ಪ್ರಾರ್ಥನೆಗೆ ಯಾವುದೇ ಧಾರ್ಮಿಕ ವಿಧಿ-ವಿಧಾನಗಳ, ಪೂಜೆ-ಪುನಸ್ಕಾರಗಳ ಹಂಗಿಲ್ಲ. ವ್ರತಾಚರಣೆಗಳ ನಿಯಮವಿಲ್ಲ. ಮಡಿಯುಟ್ಟು, ದಿನಪೂರ್ತಿ ಉಪವಾಸವಿದ್ದು, ಬಗೆಬಗೆಯ ಪೂಜಾದ್ರವ್ಯಗಳನ್ನು ಒಟ್ಟು ಮಾಡಿ, ಬೇರೆಯವರ ಗಮನ ಸೆಳೆಯಲು ‘ಶಬ್ದಾಡಂಬರ’ದ ಮಂತ್ರಗಳನ್ನು ಹೇಳಿಕೊಂಡೇ ಅದನ್ನು ಗುರು-ದೇವರಿಗೆ ತಲುಪಿಸಬೇಕು ಎಂದೇನಿಲ್ಲ. ಅದೊಂದು ತೆರನಾದ ಅಗೋಚರ ಸಂವಹನಾ ವ್ಯವಸ್ಥೆ. ಬೇಕಿದ್ದರೆ ನೀವು ಅದನ್ನು ‘ವೈರ್‌ಲೆಸ್ ಮೆಸೇಜ್’, ‘ಟೆಲಿಪತಿ’, ‘ಆತ್ಮನಿವೇದನೆ’, ‘ಪರಮೋಚ್ಚ ಶಕ್ತಿ ಯೊಂದಿಗಿನ ಮೌನ ಸಂಭಾಷಣೆ’ ಹೀಗೆ ಯಾವ ಹೆಸರಿನಿಂದ ಬೇಕಿದ್ದರೂ ಕರೆಯಬಹುದು. ಅಂಥ ಆರ್ತಜೀವದ ಪ್ರಾರ್ಥನೆಯು ನಿಜಕ್ಕೂ ಪ್ರಾಮಾಣಿಕವಾಗಿದ್ದರೆ, ನೈತಿಕತೆಯ ಭಂಡಾರವನ್ನೇ ತುಂಬಿಕೊಂಡಿದ್ದರೆ, ಯಾವ ಗುರು ಅಥವಾ ದೇವರನ್ನು ಉದ್ದೇಶಿಸಿ ಅದು ಸಲ್ಲಿಕೆಯಾಗಿರುತ್ತದೋ ಅಂಥ ‘ಉದ್ದೇಶಿತ ದಿವ್ಯಶಕ್ತಿಗಳು’ ಆ ಪ್ರಾರ್ಥನೆಗೆ ಓಗೊಡುತ್ತವೆ. ಇದರ ಪರಿಣಾಮವಾಗಿ, ಸಂತ್ರಸ್ತರ ಸಂಕಟ-ಸಂಕಷ್ಟಗಳಿಗೆ ಕಾರಣರಾದವರೆಲ್ಲಾ ಆ ಪ್ರಕರಣದಲ್ಲಿ ‘ಸಾಕ್ಷ್ಯ ಹೇಳುವುದಕ್ಕೆ’ ಬರಬೇಕಾಗುತ್ತದೆ ಎಂಬುದನ್ನು ನಿಮಗೆ ಪ್ರತ್ಯಕ್ಷವಾಗಿ ಮನವರಿಕೆ ಮಾಡಿ ಕೊಡುವುದಿತ್ತು. ಹತಭಾಗ್ಯೆ ಶಾರದೆಯ ಕಥನವನ್ನು ನಿಮ್ಮೊಂದಿಗೆ ನಾನು ಹೇಳಿಕೊಳ್ಳಲು ಶುರುವಿಟ್ಟುಕೊಂಡ ತರುವಾಯ, ಹೀಗೆ ಒಂದಾದ ಮೇಲೆ ಒಂದರಂತೆ ಬಂದವಲ್ಲಾ ಮ್ಯಾನೇಜರ್, ಸ್ವಾಮೀಜಿ, ರಾಜಕಾರಣಿ, ಸರ್ಕಲ್ ಇನ್ಸ್‌ಪೆಕ್ಟರ್ ಮುಂತಾದ ಪಾತ್ರಗಳು? ಇವರನ್ನೆಲ್ಲ ಕರೆಸಿದ್ದು ಆ ದೈವವೇ ನಿರ್ಮಿಸಿದ ಅಗೋಚರ ನ್ಯಾಯಾಲಯವೇ..." ಎಂದು ಸುದೀರ್ಘ ವಿವರಣೆ ನೀಡಿ, ಅರ್ಧ ಹಿಡಿಯಷ್ಟು ಹಸಿ ಕಡಲೇಕಾಯಿಗೆ ಒಂದಷ್ಟು ಬೆಲ್ಲದ ತುಣುಕುಗಳನ್ನು ಬೆರೆಸಿ ಆಸ್ವಾದಿಸಿದರು...
ಶಿಷ್ಯರೆಲ್ಲರೂ ಬಿಟ್ಟ ಕಣ್ಣು ಬಿಟ್ಟಂತೆಯೇ ನೋಡುತ್ತಿದ್ದರು. ಕಾರಣ, ‘ಪತ್ತೇದಾರಿ’ ಶೈಲಿಯಲ್ಲಿ ಸಾಗುತ್ತಿದ್ದ ಶಾರದೆಯ ಕಥನಕ್ಕೆ ಈಗ ‘ಧರ್ಮಸೂಕ್ಷ್ಮ’ದ ತಿರುವು ಸಿಕ್ಕಿತ್ತು. ಜತೆಗೆ, ಅಧಿಕಾರದ ಅಮಲಿನಲ್ಲೋ, ಜೇಬಿನಲ್ಲಿ ಹಣದ ಕಂತೆ ಕುಣಿಯುತ್ತಿರುವ ಅಹಮ್ಮಿನಲ್ಲೋ, ಯೌವನದ ಮದದಲ್ಲೋ, ದೈಹಿಕವಾಗಿ ನಾನೇ ಬಲಶಾಲಿ ಎಂಬ ಹುಸಿಗತ್ತಿನಲ್ಲೋ ನಾವು ಮತ್ತೊಬ್ಬರಿಗೆ ನೀಡುವ ನೋವು, ಸಂಕಷ್ಟ, ದುಃಖ ಇತ್ಯಾದಿಗಳು ಸಾಕಷ್ಟು ಬಡ್ಡಿ-ಚಕ್ರಬಡ್ಡಿ ಸೇರಿಸಿಕೊಂಡು ನಮ್ಮೆಡೆಗೇ ಮರಳುತ್ತವೆ. ನಮ್ಮ ‘ನವರಂಗಿ ನಾಟಕ’ವನ್ನು ಯಾರೂ ನೋಡುತ್ತಿಲ್ಲ ಎಂಬ ಭ್ರಮೆ ಯಲ್ಲೇ ಮೆರೆಯುವ ನಾವು, ‘ಮೇಲೆ ಕೂತಿರುವವ’ ಅದಕ್ಕೆ ಸಾಕ್ಷಿಯಾಗಿದ್ದಾನೆ ಎಂಬುದನ್ನೇ ಮರೆಯುತ್ತೇವೆ. ಮತ್ತೊಬ್ಬರಿಂದ ವಿನಾ ಕಾರಣ ನೋವಿಗೆ, ದುಃಖಕ್ಕೆ, ಸಂಕಷ್ಟಕ್ಕೆ, ಸಂಕಟಕ್ಕೆ, ಕಣ್ಣೀರಿಗೆ ಒಳಗಾದವರು ಪರಿಹಾರ ಕ್ಕೆಂದು ಈ ಬ್ರಹ್ಮಾಂಡದ ದಿವ್ಯಶಕ್ತಿಯಲ್ಲಿ ಆರ್ತರಾಗಿ ಮೊರೆಯಿಟ್ಟರೆ, ಮಾನವನಿರ್ಮಿತ ನ್ಯಾಯ ನೀಡಿಕೆಯ ವ್ಯವಸ್ಥೆಯಲ್ಲೂ ಕೆಲವೊಮ್ಮೆ ಸಿಗದ ಪರಿಹಾರವು ‘ದೈವನಿರ್ಮಿತ’ ಅಗೋಚರ ವ್ಯವಸ್ಥೆಯಲ್ಲಿ ಸಿಗುತ್ತದೆ. ಗುರುಗಳು, ಅವಧೂತರು ಎನಿಸಿಕೊಂಡವರು ಈ ನಿಟ್ಟಿನಲ್ಲಿ ಮಾರ್ಗದರ್ಶಕರಾಗುತ್ತಾರೆ ಎಂಬ ವಿಶಿಷ್ಟ ಅರಿವು ಆ ಶಿಷ್ಯರಲ್ಲಿ ಒಡಮೂಡತೊಡಗಿತು. ಇಂಥ ಅನನ್ಯ ಅನುಭೂತಿಯನ್ನು ತಮಗೆ ಪ್ರತ್ಯಕ್ಷವಾಗಿ ಕಟ್ಟಿಕೊಟ್ಟ ಅವಧೂತರಿಗೆ ಶಿಷ್ಯರೆಲ್ಲರೂ ಮನದಲ್ಲೇ ನಮಿಸಿದರು...
ಶಿಷ್ಯರು ಕಟ್ಟಿಕೊಂಡಿದ್ದ ಮೌನಕೋಟೆಯನ್ನು ಮುರಿಯುವವರಂತೆ ಅವಧೂತರು, “ಏನ್ರಯ್ಯಾ, ಕಥೆ ಮುಂದುವರಿಸಿ ಅಂತ ಇಷ್ಟೂ ಹೊತ್ತು ಪೀಡಿಸುತ್ತಿದ್ದವರು ಈಗ ಸುಮ್ಮನಾಗಿ ಬಿಟ್ಟಿರಿಲ್ಲಾ? ಯಾರಾದರೊಬ್ಬರು ಕಥೆ ಹೇಳುವಾಗ, ಕೇಳುವವರು ‘ಹೂಂ... ಹೂಂ’ ಅಂತ ‘ಹೂಂ’ ಗುಟ್ಟುತ್ತಿರಬೇಕು, ಇಲ್ಲವೇ ‘ಆಮೇಲೆ... ಆಮೇಲೆ..?’ ಅಂತ ಕೇಳುತ್ತಿರಬೇಕು ಎಂಬುದನ್ನು ಮರೆತೇ ಬಿಟ್ಟಿರಾ?" ಎಂದು ತಮಾಷೆ ಮಾಡಿದರು. ಅದೇ ಅವಧೂತರ ವೈಶಿಷ್ಟ್ಯ. ಪಾರಮಾರ್ಥಿಕತೆ, ಲೌಕಿಕತೆ, ವ್ಯಾವಹಾರಿಕ ಜೀವನ, ಪ್ರಾಯೋಗಿಕ ಸಿದ್ಧಾಂತ, ವಾಕ್ ಸ್ವಾತಂತ್ರ್ಯ, ಎಲ್ಲವನ್ನೂ ಪ್ರಶ್ನಿಸಿಯೇ ಒಪ್ಪಿಕೊಳ್ಳುವಿಕೆ- ಹೀಗೆ ಜೀವಿಯೊಂದರ ಬದುಕನ್ನು ಆವರಿಸುವ ವಿವಿಧ ಆಯಾಮ ಗಳು, ವಿಚಾರಗಳು ಅಥವಾ ಸ್ಥಿತಿಗಳ ಪೈಕಿ ಮಹತ್ತರ ವಾಗಿರುವಂಥದ್ದನ್ನು ಹೆಕ್ಕಿ ತೆಗೆದು ‘ರಸಪಾಕ’ ಮಾಡಿ ಶಿಷ್ಯರಿಗೆ ಉಣಬಡಿಸುವುದು ಅವರ ಕೌಶಲವಾಗಿತ್ತು. ಅದು ದಶಕಗಳವರೆಗೆ ಅವರು ಕೈಗೊಂಡ ಸಾಧನೆ, ತಪಸ್ಸು, ಅದರಿಂದ ದಕ್ಕಿದ ‘ಅನುಭವ’ ಮತ್ತು ‘ಅನುಭಾವ’ಗಳ ಫಲಶ್ರುತಿ ಯಾಗಿತ್ತು ಎನ್ನಲಡ್ಡಿಯಿಲ್ಲ.
ಅವಧೂತರೇ ಮಾತಿಗೆ ಉತ್ತೇಜಿಸಿದ್ದರಿಂದ ಹೊಸ ಶಿಷ್ಯರೊಬ್ಬರು, “ಗುರುಗಳೇ, ಶಾರದೆಗೆ ಒದಗಿದ ಸಂಕಷ್ಟಕ್ಕೆ ನೀವು ಉಲ್ಲೇಖಿಸಿದ ನಾಲ್ಕೂ ಮಹನೀಯರು ಕಾರಣರೇ? ಅಂದರೆ ಕುಕೃತ್ಯದಲ್ಲಿ ಅವರೆಲ್ಲರೂ ಪಾಲುದಾರರು ಎಂಬುದು ನಿಮ್ಮ ಮಾತಿನ ಅರ್ಥವೇ? ಶಾರದೆಯ ಕಥನದ ಗಾಳಿಪಟಕ್ಕೆ ಬಾಲಂಗೋಚಿಯಂತೆ ಹೊಸದಾಗಿ ಸೇರಿ ಕೊಂಡ ವಿದ್ಯಾರ್ಥಿ ನಿಲಯದ ಅಡುಗೆಯವ ‘ನಳಪಾಕ’ನ ಪಾತ್ರವೂ ಈ ಕುಕೃತ್ಯದಲ್ಲಿ ಇದೆಯೇ? ಅವನು ನಿಮಗೆ ಕರೆಮಾಡಿದ್ದೇಕೆ? ‘ಅವನಿಗೆ ನಾಳೆ ಸಂಜೆ ಫೋನು ಮಾಡುವಂತೆ ತಿಳಿಸಿ ಸ್ವಾಮೀ’ ಅಂತ ನೀವು ನಿಮ್ಮ ಆಪ್ತ ಸಹಾಯಕರಿಗೆ ಸೂಚಿಸಿದ್ದೇಕೆ?" ಎಂದು ಪ್ರಶ್ನೆಯ ಸುರಿಮಳೆಯನ್ನೇ ಸುರಿಸಿದರು.
ಈ ಮಾತಿಗೆ ಅವಧೂತರು, “ಶಾರದೆಯ ಸಂಕಟ ತೀವ್ರ ವಾಗುವುದಕ್ಕೆ ಆ ‘ನಳಪಾಕ’ನೇ ಮುಖ್ಯ ಕಾರಣ. ಅದರ ಬಿಸಿ ತಾಕಿದ್ದರಿಂದಲೇ ಹಾಗೆ ರಾತ್ರಿಯಲ್ಲಿ ಆತ ಕರೆಮಾಡಿದ. ಅವನ ಕುರಿತು ನಾಳೆ ತಿಳಿಯುವಿರಂತೆ" ಎಂದರು.
ಆಗ ಮಗುವಿನಂತೆ ರಚ್ಚೆಹಿಡಿದ ಆ ಶಿಷ್ಯರು, “ಕಥೆ ಕೇಳುತ್ತಾ ಬೆಳದಿಂಗಳ ರಾತ್ರಿಯಲ್ಲಿ ಜಾಗರಣೆ ಮಾಡೋಣ ಅಂದಿದ್ರಿ... ಕೆಲ ಹೊತ್ತಿನ ಮುಂಚೆ ‘ಹರಿಕಥಾ ವಿದ್ವಾನ್’ ಆಗಿದ್ದವರು, ಈಗ ಮತ್ತೆ ‘ಷರ್ಲಾಕ್ ಹೋಮ್ಸ್’ ಆಗಿಬಿಟ್ಟಿರಲ್ಲಾ ಗುರುಗಳೇ" ಎಂದು ಹುಸಿಮುನಿಸು ತೋರಿದಾಗ ಅವಧೂತರು, “ಅಯ್ಯಾ, ಈಗಾಗಲೇ ರಾತ್ರಿ 12 ಗಂಟೆಯಾಯಿತು. ನೀವೆಲ್ಲಾ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸಾಧನೆ ಮಾಡಬೇಕಲ್ಲವೇ? ಲೌಕಿಕದ ಕಥೆಯ ಗುಂಗಿನಲ್ಲಿ ಪರಮಾರ್ಥ ವನ್ನು ಮರೆತರೆ ಹೇಗೆ ದೊರೆ...?" ಎನ್ನುತ್ತಾ ಅಕ್ಷರಶಃ ಮಗುವನ್ನು ಸಮಾಧಾನಿಸುವಂತೆ ತಲೆ ನೇವರಿಸಿದರು. ಆ ಶಿಷ್ಯರ ಕಂಗಳು ನೀರಾಡಿದವು...
(ಮುಂದುವರಿಯುವುದು)