Karnataka Weather: ರಾಜ್ಯದಲ್ಲಿ ಕಡಿಮೆಯಾಯ್ತು ಮಳೆ ಆರ್ಭಟ; ಎಲ್ಲೆಡೆ ಒಣಹವೆ
ಕರ್ನಾಟಕ ಹವಾಮಾನ ವರದಿ: ಅಕ್ಟೋಬರ್ 31ರಂದು ಕರಾವಳಿಯ ಕೆಲವೆಡೆಯಲ್ಲಿ ಸಾಧಾರಣ ಮಳೆಯಾಗಲಿದ್ದು, ಉಳಿದೆಡೆ ಒಣಹವೆ ಮುಂದುವರಿಯಲಿದೆ. ಇನ್ನು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಕನಿಷ್ಠ ಮತ್ತು ಗರಿಷ್ಠ ತಾಪಮಾನ ಕ್ರಮವಾಗಿ 19°C ಮತ್ತು 27°C ಕಂಡುಬರಲಿದೆ. ಬೆಳಗ್ಗೆ ಮತ್ತು ರಾತ್ರಿ ಚಳಿಯ ವಾತಾವರಣ ಕಂಡುಬರುವ ಸಾಧ್ಯತೆ ಇದೆ ಎಂದು ಎಂದು ಹವಾಮಾನ ಇಲಾಖೆ ತಿಳಿಸಿದೆ.
 
                                ಸಾಂದರ್ಭಿಕ ಚಿತ್ರ -
 Ramesh B
                            
                                Oct 31, 2025 6:00 AM
                                
                                Ramesh B
                            
                                Oct 31, 2025 6:00 AM
                            ಬೆಂಗಳೂರು, ಅ. 31: ರಾಜ್ಯದಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದೆ. ಅಕ್ಟೋಬರ್ 31ರಂದು ಕರಾವಳಿಯ ಕೆಲವೆಡೆಯಲ್ಲಿ ಸಾಧಾರಣ ಮಳೆಯಾಗಲಿದ್ದು, ಉಳಿದೆಡೆ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ (Karnataka Weather). ಇನ್ನು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಕನಿಷ್ಠ ಮತ್ತು ಗರಿಷ್ಠ ತಾಪಮಾನ ಕ್ರಮವಾಗಿ 19°C ಮತ್ತು 27°C ಕಂಡುಬರಲಿದೆ. ಬೆಳಗ್ಗೆ ಮತ್ತು ರಾತ್ರಿ ಚಳಿಯ ವಾತಾವರಣ ಕಂಡುಬರುವ ಸಾಧ್ಯತೆ ಇದೆ. ಮೀನುಗಾರರಿಗೆ ಯಾವುದೇ ಎಚ್ಚರಿಕೆ ನೀಡಲಾಗಿಲ್ಲ.
ಕರಾವಳಿಯ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 1 ಅಥವಾ 2 ಸ್ಥಳಗಳಲ್ಲಿ ಹಗುರ ಮಳೆಯಾಗಲಿದೆ. ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ. ಇನ್ನು ದಕ್ಷಿಣ ಒಳನಾಡಿನ ಯಾವ ಜಿಲ್ಲೆಯಲ್ಲೂ ಮಳೆ ಸುರಿಯುವ ಸಾಧ್ಯತೆ ಇಲ್ಲ. ಒಣಹವೆ ಕಂಡುಬರಲಿದೆ.
ನವೆಂಬರ್ 1ರಂದು ಕರಾವಳಿ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಇರಲಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಇದೇ ರೀತಿಯ ಪರಿಸ್ಥಿತಿ ಇರಲಿದೆ.
ಈ ಸುದ್ದಿಯನ್ನೂ ಓದಿ: Dharmastala Case: ಧರ್ಮಸ್ಥಳ ಪ್ರಕರಣಕ್ಕೆ ಭಾರಿ ಟ್ವಿಸ್ಟ್, ಕೇಸ್ ರದ್ದತಿ ಕೋರಿ ʼಬುರುಡೆ ಗ್ಯಾಂಗ್ʼ ಹೈಕೋರ್ಟ್‌ಗೆ
ಇನ್ನು ನವೆಂಬರ್ 2ರಿಂದ 4ರವರೆಗೆ ಕರಾವಳಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆ ಇದೆ. ಹಾಗೆಯೇ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಸುರಿಯುವ ಸಾಧ್ಯತೆ ಕಡಿಮೆ ಇದ್ದು, ತಾಪಮಾನ ಹೆಚ್ಚಿರಲಿದೆ.
ಮುಂದಿನ 5 ದಿನಗಳ ಹವಾಮಾನ ವರದಿ:
#ಕರ್ನಾಟಕ ರಾಜ್ಯದ ಮುಂದಿನ 5 ದಿನಗಳ #ಮಳೆ #ಮುನ್ಸೂಚನೆ ನಕ್ಷೆಗಳು, ಜಿಲ್ಲಾವಾರು ಎಚ್ಚರಿಕೆಗಳೊಂದಿಗೆ. ಮೂಲ: ಐಎಂಡಿ ಬೆಂಗಳೂರು.#KSNDMC #ಎಚ್ಚರಿಕೆವಹಿಸಿ
— Karnataka State Natural Disaster Monitoring Centre (@KarnatakaSNDMC) October 30, 2025
Next 5 days #Rainfall #Forecast maps for the #Karnataka state with district-wise warnings. Source: IMD Bengaluru@KarnatakaVarthe #KarnatakaRains pic.twitter.com/MGZRl0qtgj
ಹೊನ್ನಾವರದಲ್ಲಿ ಗರಿಷ್ಠ ತಾಪಮಾನ
ಅಕ್ಟೋಬರ್ 30ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಗರಿಷ್ಠ ತಾಪಮಾನ 31.4 °C ದಾಖಲಾಗಿದೆ. ಇನ್ನು ಅತಿ ಕನಿಷ್ಠ ತಾಪಮಾನ ಬೆಳಗಾವಿ ಜಿಲ್ಲೆಯ ವಿಮಾನ ನಿಲ್ದಾಣದಲ್ಲಿ 17.8 °C ಕಂಡುಬಂದಿದೆ ಎಂದು ಪ್ರಕಟಣೆ ತಿಳಿಸಿದೆ. ಇನ್ನು ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಈಶಾನ್ಯ ಮಾನ್ಸೂನ್ ಸಾಮಾನ್ಯವಾಗಿತ್ತು ಮತ್ತು ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿಯ ಕೆಲವೆಡೆ ಮತ್ತು ಒಳನಾಡಿನ ಅಲ್ಲಲ್ಲಿ ಮಳೆಯಾಗಿದೆ. ಅತೀ ಹೆಚ್ಚಿನ ಮಳೆ ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ 9 ಸೆಂಟಿ ಮೀಟರ್ ಮತ್ತು ಬೀದರ್ ಜಿಲ್ಲೆಯ ಔರಾದ್‌ನಲ್ಲಿ 7 ಸೆಂಟಿ ಮೀಟರ್ ಸುರಿದಿದೆ.
ವಿವಿಧ ಕಡೆಗಳಲ್ಲಿ ಸುರಿದ ಮಳೆಯ ಪ್ರಮಾಣ (ಸೆಂಟಿ ಮೀಟರ್‌ಗಳಲ್ಲಿ)
ಹಮನಾಬಾದ್ (ಬೀದರ್)-6, ಬೀದರ್ -4, ಚಿಂಚೋಳಿ (ಕಲಬುರಗಿ)-4, ಕಮಲಾಪುರ (ಕಲಬುರಗಿ)-3, ತರೀಕೆರೆ (ಚಿಕ್ಕಮಗಳೂರು) -3, ಮೂಡುಬಿದಿರೆ (ದಕ್ಷಿಣ ಕನ್ನಡ)-2, ಪೊನ್ನಂಪೇಟೆ (ಕೊಡಗು)-2, ಗೇರುಸೊಪ್ಪು (ಉತ್ತರ ಕನ್ನಡ)-1, ಗುರುಮಿತ್ಕಲ್ (ಯಾದಗಿರಿ)-1, ಮಂಗಳೂರು (ದಕ್ಷಿಣ ಕನ್ನಡ)-1, ಸೈದಾಪುರ (ಯಾದಗಿರಿ)-1, ಸೇಡಂ (ಕಲಬುರಗಿ)-1, ಉಪ್ಪಿನಂಗಡಿ (ದಕ್ಷಿಣ ಕನ್ನಡ)-1, ವಿರಾಜಪೇಟೆ (ಕೊಡಗು)-1. ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲಿನ ವಾಯುಭಾರ ಕುಸಿತವು ಬಹುತೇಕ ಸ್ಥಿರವಾಗಿತ್ತು.
 
            