ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gururaj Gantihole Column: ಬರವನ್ನು ಎದುರಿಸುವ ಬಲವಾದ ಇಚ್ಛಾಶಕ್ತಿ ಇದೆಯೇ?

ರಾಜ್ಯದಲ್ಲಿ ಮಳೆ ಕೊರತೆಯ ತೀವ್ರತೆ ಎಷ್ಟಿದೆ ಎಂಬುದನ್ನು ಈ ಬಾರಿಯ ಅಂಕಿ-ಅಂಶಗಳು ಕಣ್ಣಿಗೆ ಕಟ್ಟುವಂತೆ ತೋರಿಸುತ್ತಿವೆ. ಜೂನ್ ತಿಂಗಳಲ್ಲಿ ರಾಜ್ಯವು ವಾಡಿಕೆಯ 199 ಮಿ.ಮೀ ಮಳೆಯ ಬದಲಾಗಿ ಕೇವಲ 116 ಮಿ.ಮೀ ಮಳೆಯನ್ನು ಪಡೆದಿದ್ದು, 42% ರಷ್ಟು ಬೃಹತ್ ಮಳೆ ಕೊರತೆ ದಾಖಲಾಗಿತ್ತು. ಜುಲೈ 11ರ ಅಂಕಿ-ಅಂಶಗಳ ಪ್ರಕಾರ, ವಾಡಿಕೆಯ 292 ಮಿ.ಮೀ ಮಳೆಯ ಬದಲಾಗಿ 203 ಮಿ.ಮೀ ಮಾತ್ರ ಸುರಿದಿದ್ದು, ರಾಜ್ಯದಲ್ಲಿ ಒಟ್ಟಾರೆ 30% ಮಳೆ ಕೊರತೆ ಉಂಟಾಗಿದೆ.

ಗಂಟಾಘೋಷ

ಈ ವರ್ಷದ ಮುಂಗಾರು ಹಂಗಾಮಿನ ಮೇಲೆ ‘ಎಲ್-ನಿನೋ’ ಪ್ರಭಾವದ ಕರಿನೆರಳು ದಟ್ಟವಾಗಿ ಆವರಿಸಿದ್ದು, ಮಳೆಯ ತೀವ್ರ ಕೊರತೆಯಿಂದಾಗಿ ಕರ್ನಾಟಕದ ರೈತಾಪಿ ವರ್ಗ ಅಕ್ಷರಶಃ ಕಂಗಾಲಾಗಿದೆ. ಮುಗಿಲತ್ತ ಮುಖ ಮಾಡಿ ಮಳೆಗಾಗಿ ಕಾಯುತ್ತಿದ್ದ ರೈತರಿಗೆ ಪ್ರಕೃತಿ ಕೈಕೊಟ್ಟರೆ, ಇನ್ನೊಂದೆಡೆ ಆಡಳಿತ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದ ನಿರ್ಲಕ್ಷ ಮತ್ತು ಪೂರ್ವ ಸಿದ್ಧತೆಯ ಕೊರತೆ ರೈತರ ಗಾಯದ ಮೇಲೆ ಬರೆ ಎಳೆದಿದೆ. ರಾಜ್ಯದಾದ್ಯಂತ ಕೃಷಿ ವಲಯವು ತೀವ್ರ ಬಿಕ್ಕಟ್ಟಿಗೆ ಸಿಲುಕಿದ್ದರೂ, ಪ್ರಾಕೃತಿಕ ವಿಕೋಪಕ್ಕಿಂತ ಮಾನವ ನಿರ್ಮಿತ ಆಡಳಿತಾತ್ಮಕ ವೈ-ಲ್ಯವೇ ಇಂದು ಅನ್ನದಾತನನ್ನು ಹೆಚ್ಚು ಕಾಡುತ್ತಿದೆ.

ರಾಜ್ಯದಲ್ಲಿ ಮಳೆ ಕೊರತೆಯ ತೀವ್ರತೆ ಎಷ್ಟಿದೆ ಎಂಬುದನ್ನು ಈ ಬಾರಿಯ ಅಂಕಿ-ಅಂಶಗಳು ಕಣ್ಣಿಗೆ ಕಟ್ಟುವಂತೆ ತೋರಿಸುತ್ತಿವೆ. ಜೂನ್ ತಿಂಗಳಲ್ಲಿ ರಾಜ್ಯವು ವಾಡಿಕೆಯ 199 ಮಿ.ಮೀ ಮಳೆಯ ಬದಲಾಗಿ ಕೇವಲ 116 ಮಿ.ಮೀ ಮಳೆಯನ್ನು ಪಡೆದಿದ್ದು, 42% ರಷ್ಟು ಬೃಹತ್ ಮಳೆ ಕೊರತೆ ದಾಖಲಾಗಿತ್ತು. ಜುಲೈ 11ರ ಅಂಕಿ-ಅಂಶಗಳ ಪ್ರಕಾರ, ವಾಡಿಕೆಯ 292 ಮಿ.ಮೀ ಮಳೆಯ ಬದಲಾಗಿ 203 ಮಿ.ಮೀ ಮಾತ್ರ ಸುರಿದಿದ್ದು, ರಾಜ್ಯದಲ್ಲಿ ಒಟ್ಟಾರೆ 30% ಮಳೆ ಕೊರತೆ ಉಂಟಾಗಿದೆ.

ರಾಜ್ಯದ 31 ಜಿ‌ಲ್ಲೆಗಳ ಪೈಕಿ 18 ಜಿಲ್ಲೆಗಳು ಹಾಗೂ 240 ತಾಲೂಕುಗಳ ಪೈಕಿ 141 ತಾಲೂಕುಗಳು ಭಾರಿ ಮಳೆ ಕೊರತೆಗೆ ತುತ್ತಾಗಿವೆ. ಕಾವೇರಿ ಮತ್ತು ತುಂಗಭದ್ರಾ ನದಿಗಳ ಪ್ರಮುಖ ಜಲಾನಯನ ಪ್ರದೇಶವಾದ ಮಲೆನಾಡು ಭಾಗದಲ್ಲಿ 34% ಮತ್ತು ಕರಾವಳಿ ಭಾಗದಲ್ಲಿ 30% ಮಳೆ ಕೊರತೆ ದಾಖಲಾಗಿದೆ. ಪ್ರಮುಖವಾಗಿ ಹಾಸನದಲ್ಲಿ 55%, ಶಿವಮೊಗ್ಗದಲ್ಲಿ 54%, ಮೈಸೂರಿನಲ್ಲಿ 51% ಹಾಗೂ ಕೊಡಗಿನಲ್ಲಿ 48% ರಷ್ಟು ಮಳೆ ಕೊರತೆಯಾಗಿದೆ.

ಇದನ್ನೂ ಓದಿ: Gururaj Gantihole Column: ಕರ್ನಾಟಕದಲ್ಲಿ ಒಂದರಿಂದ ಹಲವು ಬೆಂಗಳೂರು ಆಗಲಿಲ್ಲವೇಕೆ ?

ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಈ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ ಮೊದಲೇ ನೀಡಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡು ಸೇರಿದಂತೆ ರಾಜ್ಯದಾದ್ಯಂತ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಜನಸಾಮಾನ್ಯರ ಮೇಲಿನ ಪ್ರಭಾವ

ಮಳೆಯ ಅಭಾವದಿಂದಾಗಿ ಮುಂಗಾರು (ಖಾರಿಫ್) ಬಿತ್ತನೆ ಸಂಪೂರ್ಣವಾಗಿ ಕುಸಿದಿದೆ. ಈ ಬಾರಿ 84.1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದ್ದರೂ, ಜುಲೈ ಮೊದಲ ವಾರದ‌ ವರೆಗೆ ಕೇವಲ 28.3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ ಎಂದು ವರದಿಯಾಗಿದೆ. ಬಿತ್ತನೆ ಮಾಡಿದ ಅಲ್ಪಸ್ವಲ್ಪ ಬೆಳೆಗಳೂ ಸಹ (ಜೋಳ, ಮೆಕ್ಕೆಜೋಳ, ಸೋಯಾಬೀನ್, ಹತ್ತಿ) ತೇವಾಂಶವಿಲ್ಲದೆ ಒಣಗುತ್ತಿವೆ.

ಇನ್ನೊಂದೆಡೆ, ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ಕೇವಲ 34% (ಅಂದರೆ 895.65 ಟಿಎಂಸಿ ಸಾಮರ್ಥ್ಯದಲ್ಲಿ ಕೇವಲ 303 ಟಿಎಂಸಿ) ನೀರು ಮಾತ್ರ ಸಂಗ್ರಹವಾಗಿದೆ. ಮಳೆ ಕೊರತೆಯಿಂದಾಗಿ ಕೇವಲ ರೈತರಿಗಷ್ಟೇ ಅಲ್ಲ, ಜನಸಾಮಾನ್ಯರಿಗೂ ಕುಡಿಯುವ ನೀರಿನ ಅಭಾವ ಹಾಗೂ ಮುಂಬ ರುವ ದಿನಗಳಲ್ಲಿ ತರಕಾರಿ ಮತ್ತು ದಿನಸಿ ಪದಾರ್ಥಗಳ ಬೆಲೆ ಏರಿಕೆಯ ಬಿಸಿ ತಟ್ಟುವುದು ನಿಶ್ಚಿತ. ಜಾನುವಾರುಗಳಿಗೆ ಮೇವಿನ ಕೊರತೆಯೂ ತೀವ್ರವಾಗಲಿದ್ದು, ಗ್ರಾಮೀಣ ಆರ್ಥಿಕತೆ ಸಂಪೂರ್ಣ ವಾಗಿ ಹದಗೆಡುವ ಹಂತದಲ್ಲಿದೆ.

ಪೂರ್ವಸಿದ್ಧತೆಯ ಕೊರತೆ

ಹವಾಮಾನ ಇಲಾಖೆಯು ಮೊದಲೇ ಎಲ್-ನಿನೋ ಪ್ರಭಾವ ಮತ್ತು ಭಾರಿ ಮಳೆ ಕೊರತೆಯ ಮುನ್ಸೂಚನೆ‌ಗಳನ್ನು ನೀಡಿದ್ದರೂ, ರಾಜ್ಯ ಸರಕಾರವು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಬಿತ್ತನೆ ಹಂಗಾಮು ಆರಂಭವಾಗುವ ಮುನ್ನವೇ ಪರ್ಯಾಯ ಬೆಳೆ ಯೋಜನೆಗಳನ್ನು ರೂಪಿಸುವುದು, ಜಿಲ್ಲಾ ಮಟ್ಟದಲ್ಲಿ ತುರ್ತು ಬಿಕ್ಕಟ್ಟು ನಿರ್ವಹಣಾ ಕಾರ್ಯಪಡೆ ಗಳನ್ನು ರಚಿಸುವುದು ಅಥವಾ ಆತಂಕದಲ್ಲಿದ್ದ ರೈತರಿಗೆ ಧೈರ್ಯ ತುಂಬುವ ಯಾವುದೇ ವ್ಯವಸ್ಥಿತ ಕೆಲಸವನ್ನು ಆಡಳಿತ ಯಂತ್ರ ಮಾಡಲಿಲ್ಲ. ಕೃಷಿ ಬಿಕ್ಕಟ್ಟನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ರಾಜ್ಯ ಮಟ್ಟದ ಪರಿಹಾರ ಕಾರ್ಯಗಳಿಗೆ ಮುಂದಾ ಗುವ ಬದಲು, ಕೇವಲ ಕೇಂದ್ರದಿಂದ ಅಧ್ಯಯನ ತಂಡವನ್ನು ಕಳುಹಿಸುವಂತೆ ಕೋರಿ ಪ್ರಧಾನಿ ಗಳಿಗೆ ಪತ್ರ ಬರೆಯುವುದಕ್ಕಷ್ಟೇ ರಾಜ್ಯ ಸರಕಾರ ತನ್ನ ಹೊಣೆಗಾರಿಕೆಯನ್ನು ಸೀಮಿತ ಗೊಳಿಸಿ ಕೊಂಡಿದೆ.

Screenshot_1 ok

ವಿಚಿತ್ರವಾದ ವಿಷಯವೆಂದರೆ, ಸರಕಾರದ ಇಡೀ ಸಿದ್ಧತೆಯು ಕೇವಲ ಪತ್ರಿಕಾ ಪ್ರಕಟಣೆಗಳು ಮತ್ತು ಸುದ್ದಿ ಮಾಧ್ಯಮಗಳ ಒಣ ಸಲಹೆಗಳಿಗಷ್ಟೇ ಸೀಮಿತವಾಗಿ ಉಳಿದುಕೊಂಡಿತು. ಮಳೆ ಕೊರತೆಯಿದೆ, ರೈತರು ಪರ್ಯಾಯ ಬೆಳೆ ಬೆಳೆಯಿರಿ ಎಂದು ಮಾಧ್ಯಮಗಳಲ್ಲಿ ಕೇವಲ ಪ್ರಚಾರ ಮಾಡಿದ ಸರಕಾರ, ತಳಮಟ್ಟ ದಲ್ಲಿ ಅದಕ್ಕೆ ಬೇಕಾದ ಯಾವುದೇ ಪ್ರಾಯೋಗಿಕ ವ್ಯವಸ್ಥೆಯನ್ನು ಮಾಡಲೇ ಇಲ್ಲ.

ಹೀಗೆ ಮುಂಗಾರು ಹಂಗಾಮಿನ ಆರಂಭದ ತಳಮಟ್ಟದ ತರಬೇತಿ ಮತ್ತು ಪೂರ್ವಸಿದ್ಧತೆಯ ಕೊರತೆ ಯಿದ್ದ ಕಾರಣ ರೈತರು ಅನಿವಾರ್ಯವಾಗಿ ತಮ್ಮ ಹಳೆಯ ಸಾಂಪ್ರದಾಯಿಕ ಬೆಳೆಗಳನ್ನೇ ನಂಬಿ ಬಿತ್ತನೆ ಮಾಡಿ ಇಂದು ಸಂಪೂರ್ಣ ಬೆಳೆ ನಷ್ಟದ ಭೀತಿಯಿಂದ ಕೈಸುಟ್ಟುಕೊಂಡಿದ್ದಾರೆ. ಸರಕಾರದ ಈ ರೀತಿಯ ನಿರಾಸಕ್ತಿ ಮತ್ತು ದೂರದೃಷ್ಟಿಯ ಕೊರತೆಯು ಇಡೀ ಗ್ರಾಮೀಣ ಕೃಷಿ ವ್ಯವಸ್ಥೆಯನ್ನೇ ಕರಾಳ ಕೂಪಕ್ಕೆ ತಳ್ಳಿದೆ. ಕೇವಲ ಮಾಧ್ಯಮಗಳ ಹೆಡ್‌ಲೈನ್ಸ್‌ಗಳಲ್ಲಿ ಸಲಹೆ ನೀಡುವುದರಿಂದ ರೈತರ ಜಮೀನಿನಲ್ಲಿ ಬೆಳೆ ಬೆಳೆಯಲು ಸಾಧ್ಯವಿಲ್ಲ; ಸರಕಾರವು ಕಾಗದದ ಮೇಲಿನ ಯೋಜನೆಗಳನ್ನು ಬಿಟ್ಟು ತಳಮಟ್ಟದಲ್ಲಿ ಸಕ್ರಿಯವಾಗಿ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳದ ಹೊರತು ಬರದ ಬೇಗೆಯಲ್ಲಿ ತತ್ತರಿಸುತ್ತಿರುವ ಅನ್ನದಾತನಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ.

ಇಚ್ಛಾಶಕ್ತಿಯಿದೆಯೆ ಬರ ನಿರ್ವಹಣೆಗೆ?

ಸರಕಾರ ರಚಿಸುವಾಗ ಮತ್ತು ಅಧಿಕಾರದ ಗದ್ದುಗೆ ಹಿಡಿಯುವಾಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೋರಿದ ಅದೇ ಅಗಾಧವಾದ ‘ಇಚ್ಛಾಶಕ್ತಿ’ ಹಾಗೂ ಹೋರಾಟದ ಮನೋ ಭಾವವನ್ನು ಈಗ ಬರಗಾಲ ನಿರ್ವಹಣೆಯಲ್ಲೂ ತೋರುತ್ತಾರೆಯೇ? ಎಂಬುದು ರಾಜ್ಯದ ರೈತರ ಬಹುದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ ಈ ಹಿಂದೆ 2023-24ರ ಬರಗಾಲದ ಸಂದರ್ಭದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದ ನೆನಪು ಇನ್ನೂ ಹಸಿಯಾಗಿಯೇ ಇದೆ.

ಆ ಸಮಯದಲ್ಲಿ ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ನಷ್ಟದ ವರದಿ ಸಲ್ಲಿಸಲು ಸಿದ್ದರಾಮಯ್ಯ ನವರ ಸರಕಾರ ಮೂರು ತಿಂಗಳು ಅನಗತ್ಯ ವಿಳಂಬ ಮಾಡಿತ್ತು ಮತ್ತು ಆಡಳಿತ ಯಂತ್ರವು ಆಂತರಿಕ ರಾಜಕೀಯದ ಮುಳುಗಿತ್ತು ಎಂದು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿದ್ದವು. ತಳಮಟ್ಟದಲ್ಲಿ ರೈತರಿಗೆ ತಕ್ಷಣದ ಪರಿಹಾರ ಒದಗಿಸುವ ಕೆಲಸ ಮಾಡದೆ, ತನ್ನ ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸರಕಾರ ಕೇವಲ ಕೇಂದ್ರದ ಮೇಲೆ ಗೂಬೆ ಕೂರಿಸುವ ರಾಜಕೀಯಕ್ಕಷ್ಟೇ ಸೀಮಿತವಾಗಿತ್ತು ಎಂಬುದು ಈಗಾಗಲೇ ಸಾಬೀತಾಗಿದೆ. ಈ ಸರಕಾರವು ಅದೇ ಮಾದರಿ ಅನುಸರಿಸಿದರೆ ರಾಜ್ಯದ ರೈತರ ಗತಿ ಕೇಳದಂತಾಗುತ್ತದೆ.

ಕೇಂದ್ರದ ಎನ್‌ಡಿಆರ್‌ಎಫ್ ಅನುದಾನಕ್ಕಾಗಿ ಕಾಯುತ್ತಾ ಕಾಲಹರಣ ಮಾಡುವ ಬದಲು, ರಾಜ್ಯ ಸರಕಾರವು ತನ್ನ ಸುಪರ್ದಿಯಲ್ಲಿರುವ ‘ರಾಜ್ಯ ವಿಪತ್ತು ಪರಿಹಾರ ನಿಧಿ’ಯಿಂದ (ಎಸ್‌ಡಿಆರ್‌ಎಫ್) ತಕ್ಷಣವೇ ರೈತರ ಖಾತೆಗಳಿಗೆ ಮಧ್ಯಂತರ ಬೆಳೆ ನಷ್ಟ ಪರಿಹಾರವನ್ನು ಜಮಾ ಮಾಡಬೇಕು. ಎಸ್‌ಡಿಆರ್‌ಎಫ್ ಎನ್ನುವುದು ಬರಗಾಲದಂತಹ ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ಸಂತ್ರಸ್ತ ರಿಗೆ ‘ತಕ್ಷಣದ ಪರಿಹಾರ’ ಒದಗಿಸಲೆಂದೇ ಕಾಯ್ದಿರಿಸಲಾದ ಪ್ರಾಥಮಿಕ ಮೀಸಲು ನಿಧಿಯಾಗಿದೆ. ‌

ವಿಪತ್ತು ನಿರ್ವಹಣಾ ನಿಯಮಗಳ ಪ್ರಕಾರ, ತಳಮಟ್ಟದಲ್ಲಿ ಸಂತ್ರಸ್ತರಿಗೆ ಪರಿಹಾರ ಹಣವನ್ನು ವಿತರಿಸುವ ಪ್ರಾಥಮಿಕ ಹೊಣೆಗಾರಿಕೆ ಸಂಪೂರ್ಣವಾಗಿ ರಾಜ್ಯ ಸರಕಾರದ್ದೇ ಆಗಿರುತ್ತದೆ. ಒಂದು ವೇಳೆ ರಾಜ್ಯ ಸರಕಾರವು ಪ್ರಸ್ತುತ ಎಸ್‌ಡಿಆರ್‌ಎಫ್ ಖಾತೆಯಲ್ಲಿ ರೈತರಿಗೆ ವಿತರಿಸಲು ಸಾಕಷ್ಟು ಹಣವಿಲ್ಲ ಎಂದು ಸಬೂಬು ಹೇಳುವುದಾದರೆ, ಮುಂಗಾರು ವೈಫಲ್ಯದ ಮುನ್ಸೂಚನೆ ಮೊದಲೇ ಇದ್ದಾಗ ರಾಜ್ಯ ಸರಕಾರ ತನ್ನ ಪಾಲಿನ ಮೀಸಲು ನಿಧಿಯಲ್ಲಿ ಮುಂಚಿತವಾಗಿಯೇ ಸಾಕಷ್ಟು ಹಣವನ್ನು ಏಕೆ ಕಾಯ್ದಿರಿಸಲಿಲ್ಲ? ಎಂಬ ಗಂಭೀರ ಪ್ರಶ್ನೆ ಏಳುತ್ತದೆ. ಮುಂಬರುವ ಸಂಭಾವ್ಯ ವಿಪತ್ತುಗಳನ್ನು ಎದುರಿಸಲು ರಾಜ್ಯದ ಬೊಕ್ಕಸದಲ್ಲಿ ಸಾಕಷ್ಟು ತುರ್ತು ಹಣವನ್ನು ಮೀಸಲಿಡ ದಿರುವುದು ಸರಕಾರದ ಆರ್ಥಿಕ ಬೇಜವಾಬ್ದಾರಿತನ ಮತ್ತು ಆಡಳಿತಾತ್ಮಕ ಅಸಮರ್ಥತೆಯನ್ನು ನಗ್ನವಾಗಿ ಎತ್ತಿ ತೋರಿಸುತ್ತದೆ.

ಪ್ರಸ್ತುತ ಇರುವ ತೇವಾಂಶ ಕೊರತೆಗೆ ತಕ್ಕಂತೆ ಕಡಿಮೆ ನೀರಿನಲ್ಲಿ ಕೈಗೆ ಬರುವ ರಾಗಿ, ನವಣೆ, ಸಾಮೆ ಹಾಗೂ ಹುರುಳಿಯಂತಹ ಅತ್ಯಂತ ಅಲ್ಪಾವಧಿಯ ಪರ್ಯಾಯ ಬೆಳೆಗಳ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯು ಯಾವುದೇ ಸಬೂಬು ನೀಡದೆ ನೇರವಾಗಿ ರೈತರ ಜಮೀನುಗಳಿಗೇ ತಲುಪಿಸ ಬೇಕು. ಕೇವಲ ಗೋಶಾಲೆಗಳನ್ನು ತೆರೆಯುವುದಷ್ಟೇ ಅಲ್ಲದೆ, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತಮ್ಮ ಜಾನುವಾರುಗಳನ್ನು ಕಟುಕರಿಗೆ ಅಥವಾ ದಳಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುವು ದನ್ನು ತಡೆಯಲು ಉಚಿತವಾಗಿ ಮೇವಿನ ಮಿನಿ-ಕಿಟ್‌ಗಳನ್ನು ಪ್ರತಿ ಹಳ್ಳಿಯ ಹಂತದಲ್ಲೂ ವಿತರಿಸಬೇಕು.

ಜಲಾಶಯಗಳಲ್ಲಿ ನೀರು ತಳ ಮುಟ್ಟಿರುವುದರಿಂದ ಲಭ್ಯವಿರುವ ಅಲ್ಪಸ್ವಲ್ಪ ಅಂತರ್ಜಲವನ್ನೇ ಸಮರ್ಥವಾಗಿ ಬಳಸಿಕೊಳ್ಳಲು ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪರಿಕರಗಳನ್ನು ತಕ್ಷಣವೇ ಭಾರಿ ಸಬ್ಸಿಡಿಯೊಂದಿಗೆ ಒದಗಿಸಬೇಕು ಹಾಗೂ ರೈತರ ಪಂಪ್‌ಸೆಟ್‌ಗಳಿಗೆ ಕನಿಷ್ಠ 7 ಗಂಟೆಗಳ ಕಾಲ ನಿರಂತರ ತ್ರಿಫೇಸ್ ವಿದ್ಯುತ್ ಸಂಪರ್ಕ ಅಥವಾ ಡೀಸೆಲ್ ಸಬ್ಸಿಡಿಯನ್ನು ಘೋಷಿಸಬೇಕು.

ಗ್ರಾಮೀಣ ಭಾಗದ ಆರ್ಥಿಕ ಕುಸಿತ ಮತ್ತು ಜನರು ಉದ್ಯೋಗ ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗುವುದನ್ನು ತಡೆಯಲು ‘ವಿಕಸಿತ್ ಭಾರತ್- ಗ್ಯಾರಂಟಿ ಫಾರ್ ರೋಜ್ಗಾರ್ ಆಂಡ್ ಆಜೀವಿಕಾ ಮಿಷನ್ (ಗ್ರಾಮೀಣ್)’ ಅಥವಾ ವಿಬಿ-ಜಿ ರಾಮ್ ಜಿ (ಹಿಂದಿನ ನರೇಗಾ) ಯೋಜನೆಯಡಿ ನೀಡಲಾ ಗುವ ಉದ್ಯೋಗದ ದಿನಗಳನ್ನು ಈ 141 ಬರಪೀಡಿತ ತಾಲೂಕುಗಳಲ್ಲಿ ಕಡ್ಡಾಯವಾಗಿ ಪ್ರಸ್ತುತ ನಿಗದಿತ 125 ದಿನಗಳಿಂದ 150 ದಿನಗಳಿಗೆ ತಕ್ಷಣವೇ ಹೆಚ್ಚಿಸಬೇಕು. ಮತ್ತು ಕೂಲಿ ಹಣವನ್ನು ಬಾಕಿ ಉಳಿಸಿಕೊಳ್ಳದೆ ವಾರಕ್ಕೊಮ್ಮೆ ನೇರವಾಗಿ ಖಾತೆಗೆ ಜಮಾ ಮಾಡಬೇಕು.

ಮಾರುಕಟ್ಟೆಯಲ್ಲಿ ರೈತರು ಬೆಳೆದ ಅಲ್ಪಸ್ವಲ್ಪ ಮುಂಗಾರು ಬೆಳೆಗಳಿಗೆ ವ್ಯಾಪಾರಿಗಳು ತಮಗಿಷ್ಟ ಬಂದ ಹಾಗೆ ಕಡಿಮೆ ಬೆಲೆ ನಿಗದಿಪಡಿಸಿ ಸುಲಿಗೆ ಮಾಡುವುದನ್ನು ತಡೆಯಲು ಕಟ್ಟುನಿಟ್ಟಾದ ಮಾರುಕಟ್ಟೆ ಮಧ್ಯಸ್ಥಿಕೆ ಮತ್ತು ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಮುಂಚಿತವಾಗಿಯೇ ತಾಲೂಕು ಕೇಂದ್ರಗಳಲ್ಲಿ ಆರಂಭಿಸಬೇಕು. ಪ್ರತಿಯೊಂದು ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುವ ‘ಬರ ಪರಿಹಾರ ನಿಯಂತ್ರಣ ಕೊಠಡಿ’ಗಳನ್ನು ತೆರೆದು, ಕುಡಿಯುವ ನೀರು, ಮೇವು ಮತ್ತು ಬೆಳೆ ನಷ್ಟಕ್ಕೆ ಸಂಬಂಧಿಸಿದ ರೈತರ ದೂರುಗಳಿಗೆ ಸ್ಥಳದ ಪರಿಹಾರ ಒದಗಿಸುವ ಕಟ್ಟುನಿಟ್ಟಾದ ವ್ಯವಸ್ಥೆಯನ್ನು ಸರಕಾರ ಜಾರಿಗೆ ತರಬೇಕು.

ರಾಜ್ಯ ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಲು ಅಥವಾ ವಾಣಿಜ್ಯ ಬ್ಯಾಂಕ್‌ಗಳ ಸಾಲ ಮರುಪಾವತಿಯನ್ನು ಕನಿಷ್ಠ ಒಂದು ವರ್ಷ ಮುಂದೂಡಲು ಸರಕಾರ ದಿಟ್ಟ ಹೆಜ್ಜೆ ಇಡಬೇಕು. ಕನಿಷ್ಠ ಪಕ್ಷ ಈ ಮೊರಟೋರಿಯಂ ಅವಧಿಯ ಬಡ್ಡಿಯನ್ನು ಸರಕಾರವೇ ಸ್ವತಃ ಭರಿಸಿ ಬ್ಯಾಂಕುಗಳಿಗೆ ಪಾವತಿಸಬೇಕು ಮತ್ತು ಸಾಲವನ್ನು ಯಾವುದೇ ದಂಡವಿಲ್ಲದೆ ಮುಂದಿನ ವರ್ಷಕ್ಕೆ ನವೀಕರಿಸಬೇಕು (Rollover). ಈ ಇಡೀ ಪ್ರಕ್ರಿಯೆಯನ್ನು ಎಷ್ಟು ವ್ಯವಸ್ಥಿತವಾಗಿ ಮಾಡಬೇಕೆಂದರೆ, ಮಳೆ ಕೊರತೆಯಿಂದ ತತ್ತರಿಸಿರುವ ರೈತರ ಸಿಬಿಲ್ ಸ್ಕೋರ್ ಮೇಲೆ ಯಾವುದೇ ರೀತಿಯ ನಕಾರಾತ್ಮಕ ಪರಿಣಾಮ ಬೀರಬಾರದು ಮತ್ತು ಭವಿಷ್ಯದಲ್ಲಿ ಅವರು ಮತ್ತೊಮ್ಮೆ ಸಾಲ ಪಡೆಯಲು ಯಾವುದೇ ತೊಂದರೆಯಾಗ ದಂತೆ ಸರಕಾರವು ಬ್ಯಾಂಕಿಂಗ್ ವಲಯದೊಂದಿಗೆ ಕಟ್ಟುನಿಟ್ಟಾದ ಒಪ್ಪಂದ ಮಾಡಿಕೊಳ್ಳಬೇಕು.

ಬರಗಾಲವು ಒಂದು ಪ್ರಾಕೃತಿಕ ಸವಾಲಾಗಿರಬಹುದು, ಆದರೆ ಅದನ್ನು ಎದುರಿಸಲು ಬಲವಾದ ರಾಜಕೀಯ ಇಚ್ಛಾಶಕ್ತಿ ಬೇಕು. ರೈತರು ಕೇವಲ ವೋಟ್ ಬ್ಯಾಂಕ್ ಅಲ್ಲ, ಅವರು ನಮ್ಮ ರಾಜ್ಯದ ಬೆನ್ನೆಲುಬು. ನೆಪ ಹೇಳುವ ರಾಜಕೀಯವನ್ನು ಬದಿಗಿಟ್ಟು, ತಕ್ಷಣವೇ ಪ್ರಾಮಾಣಿಕವಾಗಿ ಕಾರ್ಯ ಪ್ರವೃತ್ತರಾಗದಿದ್ದರೆ ಮುಂದಿನ ದಿನಗಳಲ್ಲಿ ರೈತರ ಆಕ್ರೋಶದ ಬೇಗೆಗೆ ಸರಕಾರ ತಕ್ಕ ಬೆಲೆ ತೆರಬೇಕಾಗುತ್ತದೆ.

ಗುರುರಾಜ್ ಗಂಟಿಹೊಳೆ

View all posts by this author