ವಿದೇಶವಾಸಿ
dhyapaa@gmail.com
ಯುವರಾಜ್ ಸಿಂಗ್ ಹೆಸರು ಕೇಳದ ಭಾರತೀಯರು ಕಡಿಮೆ. ಅದರಲ್ಲೂ ಕ್ರಿಕೆಟ್ ಪ್ರಿಯರಂತೂ ಆ ಹೆಸರನ್ನು ಕೇಳದೇ ಇರಲು ಅಥವಾ ಮರೆಯಲು ಸಾಧ್ಯವೇ ಇಲ್ಲ. ಭಾರತದಲ್ಲಿ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿರುವ ಯುವರಾಜ್, ತಮ್ಮ ಆಟದ ಜತೆಗೆ ನಡೆ-ನುಡಿ, ಆತ್ಮಬಲ, ಮನಃಸ್ಥೈರ್ಯ ಇತ್ಯಾದಿಗಳಿಗೂ ಹೆಸರಾದವರು. 30ರ ಪ್ರಾಯದ ಮಾರಕ ಕ್ಯಾನ್ಸರ್ ರೋಗವನ್ನು ಎದುರಿಸಿ ಜಯಿಸಿ ದವರು.
ಭಾರತವು 2011ರ ವಿಶ್ವಕಪ್ ಗೆದ್ದಾಗ ಸರಣಿ ಪುರುಷ ಪ್ರಶಸ್ತಿಗೆ ಭಾಜನರಾದವರು. ಇವೆಲ್ಲಕ್ಕಿಂತ ಹೆಚ್ಚಾಗಿ ಯುವರಾಜ್ ನೆನಪಿನಲ್ಲಿರುವುದು ಒಂದೇ ಓವರಿನ ೬ ಎಸೆತದಲ್ಲಿ ೬ ಸಿಕ್ಸರ್ ಬಾರಿಸಿದ್ದ ಕ್ಕಾಗಿ ಎಂದರೂ ತಪ್ಪಾಗಲಿಕ್ಕಿಲ್ಲ. ನನ್ನ ದೃಷ್ಟಿಯಲ್ಲಿ ಯುವರಾಜ್ ಒಬ್ಬ ಮಹಾನ್ ಕ್ರೀಡಾಪಟು ಅಷ್ಟೇ ಅಲ್ಲ, ಮಹಾನ್ ಹೋರಾಟಗಾರ ಕೂಡ. ಅದರಲ್ಲೂ ಸಾವಿನೊಂದಿಗೆ ಹೋರಾಡಿ ಜಯಸಿ ದವರು.
ಇಂದು ಭಾರತ ತಂಡದಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು ಎಂದು ಗುರುತಿಸಿಕೊಳ್ಳುವ ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮ ಇಬ್ಬರಿಗೂ ಗುರುವಿನ ಸ್ಥಾನದಲ್ಲಿ ನಿಂತಿರುವವರು ಯುವರಾಜ್. ಅಧ್ಯಯನಕ್ಕೆ ಯೋಗ್ಯರಾದ ಈ ವ್ಯಕ್ತಿಯ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.
ಸದ್ಯ ವಿಷಯ ಬೇರೆ ಇದೆ. ಕಪಿಲ್ ಶರ್ಮಾ ನಡೆಸಿಕೊಡುವ ಹಾಸ್ಯ ಕಾರ್ಯಕ್ರಮದಲ್ಲಿ ನನಗೆ ಅತ್ಯಂತ ಪ್ರಿಯವೂ, ನಾನು ಆಗಾಗ ನೋಡುವ ಸಂಚಿಕೆಯೂ ಎಂದರೆ, ಯುವರಾಜ್ ಸಿಂಗ್ ಮತ್ತು ಅವರ ಹೆಂಡತಿ ಹೇಜಲ್ ಕೀಚ್ ಭಾಗವಹಿಸಿದ್ದು. ಆ ಸಂಚಿಕೆಯ ಒಂದು ಭಾಗದಲ್ಲಿ ಕಪಿಲ್ ಶರ್ಮ ಹೇಜಲ್‌ಗೆ ಒಂದು ಪ್ರಶ್ನೆ ಕೇಳುತ್ತಾರೆ, “ನೀವು ಯುವರಾಜ್ ಸಿಂಗ್ ಅವರನ್ನು ಮೊದಲಿನಿಂದಲೂ ಇಷ್ಟಪಡುತ್ತಿದ್ದಿರಾ? ಅವರು ಒಂದೇ ಓವರ್‌ನಲ್ಲಿ ೬ ಸಿಕ್ಸರ್ ಬಾರಿಸಿದಾಗ ನಿಮಗೆ ಹೇಗೆನಿಸಿತ್ತು? ಅದೂ ನಿಮ್ಮ ದೇಶದವರ ವಿರುದ್ಧವೇ ಬಾರಿಸಿದಾಗ ನಿಮ್ಮ ಮನಃಸ್ಥಿತಿ ಹೇಗಿತ್ತು?" ಇತ್ಯಾದಿ.
ಇದನ್ನೂ ಓದಿ:Kiran Upadhyay Column: ನಾವು ನೆಟ್ಟ ಗಿಡದ ಫಲ ಕೆಲವೊಮ್ಮೆ ನಮಗೆ ಸಿಗದು
ಅದಕ್ಕೆ ಹೇಜಲ್ ಕೊಟ್ಟ ಉತ್ತರ ಇಂದಿನ ಲೇಖನಕ್ಕೆ ಮೂಲಧಾತು. ಹೇಜಲ್ ಹೇಳಿದ್ದರು, “ನನಗೆ ಯುವರಾಜ್ ಬಗ್ಗೆ ಹೆಚ್ಚೇನೂ ಗೊತ್ತಿರಲಿಲ್ಲ. ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ಇತ್ಯಾದಿ ಹೆಸರು ಕೇಳಿದ್ದೆ. ಹಾಗೆಯೇ ಯುವರಾಜ್ ಕೂಡ ಕ್ರಿಕೆಟ್ ಆಡುತ್ತಾರೆ ಎಂದು ತಿಳಿದೆ. ಅಲ್ಲಿಯವರೆಗೆ ನಾನು ಕ್ರಿಕೆಟ್ ಆಟವನ್ನೇ ನೋಡಿರಲಿಲ್ಲ.
ಅವರು ಇಂಗ್ಲೆಂಡ್ ವಿರುದ್ಧವೇ ೬ ಸಿಕ್ಸರ್ ಹೊಡೆದಿದ್ದು ನನಗೆ ಗೊತ್ತಿಲ್ಲ. ಮನೆಯವರೆಲ್ಲ ಅಂದಿನ ಪಂದ್ಯ ನೋಡುತ್ತಿದ್ದರು. ಮನೆಯವರು ಹೇಳಿದಾಗ ನನಗೆ ಅಷ್ಟು ರೋಮಾಂಚನವೂ ಆಗಲಿಲ್ಲ. ೬ ಸಿಕ್ಸರ್ ಹೊಡೆದರೆ ಏನು ವ್ಯತ್ಯಾಸವಾಗುತ್ತದೆ ಎಂದು ನನ್ನ ಪಾಡಿಗೆ ನಾನಿದ್ದೆ. ಅದು ನನ್ನ ಮೇಲೆ ಯಾವ ಪರಿಣಾಮವನ್ನೂ ಬೀರಿರಲಿಲ್ಲ".
ಇದಕ್ಕೆ ಮುಂಚೆ ಮತ್ತು ನಂತರ ಇನ್ನೂ ಅನೇಕ ಪ್ರಶ್ನೋತ್ತರಗಳು ನಡೆದಿದ್ದರೂ ಅದು ಇಲ್ಲಿ ಅಪ್ರಸ್ತುತ. ಇದನ್ನು ಯಾಕೆ ಹೇಳಬೇಕಾಯಿತು ಎಂದರೆ, ಯುವರಾಜ್ ಸಿಂಗ್ ಆಗಲೇ ಸಾಕಷ್ಟು ಜನಪ್ರಿಯತೆ ಗಳಿಸಿದ ಕ್ರೀಡಾಪಟುವಾಗಿದ್ದರು. ಹೇಜಲ್ ಕೂಡ ಅಭಿನೇತ್ರಿಯಾಗಿ, ರೂಪದರ್ಶಿಯಾಗಿ ಹೆಸರು ಮಾಡಿದ್ದರು.
ಯುವರಾಜ್ ಮತ್ತು ಹೇಜಲ್ ಅವರವರ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದರು. ಆದರೆ ವೃತ್ತಿ ಬೇರೆ ಯಾದದ್ದರಿಂದ, ಆಸಕ್ತಿ ಬೇರೆಯಾದದ್ದರಿಂದ ಹೇಜಲ್‌ಗೆ ಯುವರಾಜ್ ಬಗ್ಗೆ ಅಷ್ಟು ತಿಳಿದಿರಲಿಲ್ಲ ಅನ್ನಿ. ಅವರಿಬ್ಬರೂ ಪರಸ್ಪರರ ಗುಣಗಳನ್ನು ಅರಿತುಕೊಂಡು, ಒಪ್ಪಿಕೊಂಡು ಪ್ರೀತಿಸಿ ಮದುವೆ ಯಾದರೇ ವಿನಾ, ಯುವರಾಜ್ ಒಬ್ಬ ಒಳ್ಳೆಯ ಕ್ರಿಕೆಟಿಗ ಎಂಬ ಕಾರಣಕ್ಕೆ ಹೇಜಲ, ಅಥವಾ ಹೇಜಲ್ ಒಬ್ಬ ಅತ್ಯುತ್ತಮ ನಟಿ ಎಂಬ ಕಾರಣಕ್ಕೆ ಯುವರಾಜ್ ಆಗಲಿ ಮದುವೆಯಾಗಲಿಲ್ಲ.
ಈ ಘಟನೆಯನ್ನು ಇಲ್ಲಿ ಏಕೆ ಹೇಳುತ್ತಿದ್ದೇನೆ ಎಂದರೆ, ಯಾವುದೇ ವ್ಯಕಿ ಎಷ್ಟೇ ಜನಪ್ರಿಯನಾದರೂ ಆತ ಪ್ರಪಂಚದಲ್ಲಿರುವ ಪ್ರತಿಯೊಬ್ಬನಿಗೂ ಗೊತ್ತಿರಬೇಕೆಂದೇನೂ ಇಲ್ಲ. ಇಂದಿಗೂ ಪ್ರಪಂಚದ ಮೂಲೆಯಲ್ಲಿ ಟ್ರಂಪ್ ಹೆಸರು ಕೇಳಿರದವರು ಇರಬಹುದು. ಅದೇನೂ ಅಪರಾಧವಲ್ಲ. ಭಾರತ ದಲ್ಲಿಯೇ ಯಾವುದೋ ಮೂಲೆಯಲ್ಲಿರುವವರಿಗೆ ಪ್ರಧಾನಿ ಯಾರೆಂದು ಕೇಳಿದರೆ ಗೊತ್ತಿಲ್ಲದೇ ಇರಬಹುದು.
ಅಮೆರಿಕದಲ್ಲಿ ಇಲ್ಲದಿರಬಹುದು, ಆದರೆ ಭಾರತ, ಪಾಕಿಸ್ತಾನ, ಬಾಂಗ್ಲಾದಂಥ ದೇಶಗಳಲ್ಲಿ ಯಾವುದೋ ಗುಡ್ಡದ ಮೇಲೆ ತಮ್ಮದೇ ಲೋಕ ಕಟ್ಟಿಕೊಂಡು ಬದುಕುತ್ತಿರುವ ಎಷ್ಟೋ ಜನರಿಗೆ ದೇಶದ ಮುಖ್ಯಸ್ಥರ ಹೆಸರು ಗೊತ್ತಿಲ್ಲದೆಯೂ ಇರಬಹುದು. ಹಾಗಾದರೆ ಜನಪ್ರಿಯತೆ, ಪ್ರಚಾರ, ಇವೆಲ್ಲ ಏನು? ಎಷ್ಟು ಕಾಲದವರೆಗೆ? ಇತ್ಯಾದಿ ಪ್ರಶ್ನೆ ಏಳುವುದು ಸಹಜ.
ಮನುಷ್ಯ ತನ್ನ ಸಮಾಧಾನಕ್ಕಾಗಿ ಅಥವಾ ತನ್ನೊಳಗಿರುವ ಅಹಂಕಾರವನ್ನು ತೃಪ್ತಿಪಡಿಸುವು ದಕ್ಕಾಗಿ ಸಮಾಜ ತನ್ನನ್ನು ಗುರುತಿಸಬೇಕು ಎಂದು ಬಯಸುತ್ತಾನೆ. ಈ ನಿಟ್ಟಿನಲ್ಲಿ, ಇರುವುದಕ್ಕಿಂತ ಹೆಚ್ಚು ಧನ ಸಂಪಾದಿಸಬೇಕು, ಕೀರ್ತಿ ಪಡೆಯಬೇಕು, ಸಾಧನೆ ಮಾಡಬೇಕು ಇತ್ಯಾದಿಗಳ ಹಿಂದೆ ಓಡುತ್ತಿರುತ್ತಾನೆ.
ನಾಲ್ಕು ಜನ ಅವನನ್ನು ಗುರುತಿಸಿದರು ಅಂದುಕೊಳ್ಳಿ, ಆ ಸಂದರ್ಭದಲ್ಲಿ, ‘ಇಡೀ ಪ್ರಪಂಚವೇ ತನ್ನನ್ನು ಗುರುತಿಸುತ್ತದೆ, ತಾನು ಪ್ರಪಂಚಕ್ಕೆ ಮಾರ್ಗದರ್ಶನ ನೀಡಬಲ್ಲ ವ್ಯಕ್ತಿ’ ಎಂಬ ತಪ್ಪು ಕಲ್ಪನೆ ಅವನ ತಲೆಯಲ್ಲಿ ಸುಳಿಯುತ್ತದೆ. ಬಾವಿಯಲ್ಲಿರುವ ಕಪ್ಪೆ ಹೇಗೆ ‘ಬಾವಿಯೇ ಬ್ರಹ್ಮಾಂಡ. ನಾನೇ ಅದಕ್ಕೆ ರಾಜ’ ಎಂದು ಎಣಿಸಿಕೊಳ್ಳುತ್ತದೆಯೋ ಹಾಗೆಯೇ ಮನುಷ್ಯನೂ. ಮನುಷ್ಯನಿಗೆ ಆ ವೇಳೆ ಹೊರ ಜಗತ್ತು ಹೇಗಿದೆ ಎನ್ನುವುದರ ಅರಿವಿರುವುದಿಲ್ಲ, ತನ್ನ ಸುತ್ತ ಒಂದು ಪಂಜರವನ್ನೋ ಗೋಡೆಯನ್ನೋ ನಿರ್ಮಿಸಿಕೊಂಡಿರುತ್ತಾನೆ.
ಈ ಪ್ರಪಂಚದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಅವನಿಗಿಂತ ಮುಂದೆ ಮತ್ತು ಅವನಿಗಿಂತ ಹಿಂದೆ ಯಾರಾದರೊಬ್ಬರು ಇರುತ್ತಾರೆ ಎನ್ನುವುದನ್ನು ಆ ಕಾಲಕ್ಕೆ ಅವನು ಮರೆಯುತ್ತಾನೆ. ಒಬ್ಬ ಮನುಷ್ಯ ಸರತಿಯ ಸಾಲಿನ ಕೊನೆಯಲ್ಲಿದ್ದಾನೆ ಅಂದುಕೊಳ್ಳಿ. ಆಗ ಎಲ್ಲರೂ ಅವನ ಮುಂದೆಯೇ ನಿಂತಿದ್ದರಿಂದ ತಾನೇ ಕೊನೆಯವನಾಗಿ ಕಾಣುತ್ತಾನೆ. ಅದೇ ಆತ ಸಾಲಿನಲ್ಲಿ ಮೊದಲಿಗನಾಗಿದ್ದರೆ, ತಾನೇ ಎಲ್ಲರಿಗಿಂತ ಮುಂದು ಎಂದೇ ಅವನಿಗೆ ಕಾಣುತ್ತದೆ.
ಅದೇ ಸಾಲಿನಲ್ಲಿ ಅವನಿಗಿಂತ ವಯಸ್ಸಿನಲ್ಲೂ, ಹಣದಲ್ಲೂ, ಕೀರ್ತಿಯಲ್ಲೂ, ಸಾಧನೆಯಲ್ಲೂ ಸಾಕಷ್ಟು ಎತ್ತರದಲ್ಲಿದ್ದವರೂ ಇರಬಹುದು. ಆದರೆ ಅದು ಆತನ ಗಮನಕ್ಕೆ ಬಂದಿರುವುದಿಲ್ಲ. ಭೌತಿಕವಾಗಿ, ಆ ಸಂದರ್ಭಕ್ಕೆ ಅದು ನಿಜವೂ ಹೌದು. ಅಷ್ಟಕ್ಕೂ ಯಾವುದೇ ಟಿಕೆಟ್ ಪಡೆಯುವು ದಕ್ಕೋ, ತೀರ್ಥ-ಪ್ರಸಾದಕ್ಕೋ, ಇನ್ಯಾವುದೇ ಕಾರಣಕ್ಕೋ ಸಾಲಿನಲ್ಲಿ ನಿಂತರೆ, ಮೊದಲಿಗರಾಗಿದ್ದ ವರಿಗೂ, ಕೊನೆಯಲ್ಲಿರುವವರಿಗೂ ಅದು ಸಿಗುತ್ತದೆ.
ಸಮಯದಲ್ಲಿ ವ್ಯತ್ಯಾಸ ಆಗಬಹುದು ಅಷ್ಟೇ. ಆದರೆ ಸಿಗುತ್ತದೆ ಎಂದು ಗೊತ್ತಿದ್ದೂ ಅದನ್ನು ಮೊದಲೇ ದಕ್ಕಿಸಿಕೊಳ್ಳಬೇಕು ಎಂಬುದು ಮನುಷ್ಯ ತನ್ನ ಅಹಂಕಾರವನ್ನು ಸಂತೈಸಲು ಮಾಡುವ ಸಣ್ಣ ಪ್ರಯತ್ನ. ನಿಜಜೀವನದಲ್ಲಿ ಮನುಷ್ಯ ನೇರವಾದ ಸಾಲಿನಲ್ಲಿ ನಿಲ್ಲುವುದೇ ಇಲ್ಲ. ಆತ ಏನಿದ್ದರೂ ವರ್ತುಲಾಕಾರದಲ್ಲಿ ಸುತ್ತುತ್ತಿರುತ್ತಾನೆ.
ಆದರೆ ಇದರ ಪರಿವೆಯಿಲ್ಲದೆ ತಾನೇ ಮೊದಲಿಗನಾಗಿರಬೇಕು ಎಂದು ಓಡಾಡುತ್ತಿರುತ್ತಾನೆ. ಅಷ್ಟೇ ಅಲ್ಲ, ತನ್ನ ಅಕ್ಕ-ಪಕ್ಕದವರೊಂದಿಗೆ ತನ್ನನ್ನು ಹೋಲಿಸಿಕೊಳ್ಳುತ್ತಿರುತ್ತಾನೆ. ತಾನು ಇಂಥವನು, ಅಂಥವನು, ಸಂತೆಯಲ್ಲಿ ಮೆಂತೆ ಕದ್ದವನು ಎಂಬ ಪದಗಳು ಹೋಲಿಕೆ ಅಷ್ಟೇ.
ಈ ಜಗತ್ತಿನಲ್ಲಿ ನಾವು ಯಾವ ಸ್ಥಾನದಲ್ಲಿದ್ದೇವೆ ಎಂದು ಊಹಿಸಲೂ ಸಾಧ್ಯವಿಲ್ಲ. ಈ ಜಗತ್ತು ನಾವು ಯೋಚಿಸುವ ಪರಿಧಿಯ ಹೊರಗೂ ಸಾಕಷ್ಟು ವಿಸ್ತಾರವಾಗಿದೆ ಎಂಬುದನ್ನು ಎಷ್ಟು ಜನ ತಿಳಿದು ಕೊಂಡಿದ್ದಾರೆ? ಈ ಜಗತ್ತಿನ ವ್ಯಾಪ್ತಿ ಮತ್ತು ಸಮಯದಲ್ಲಿ ನಮ್ಮ ಗುರುತು ಒಂದು ಬಿಂದುವಿ ಗಿಂತಲೂ ಕಡಿಮೆ ಎಂದರೆ ತಪ್ಪಲ್ಲ. ಈ ಪ್ರಪಂಚದಲ್ಲಿ ಒಬ್ಬ ವ್ಯಕ್ತಿ ಎಷ್ಟು ಎಂದರೆ, ಸಪ್ತ ಸಮುದ್ರದ ಒಟ್ಟೂ ಜಲರಾಶಿಯಲ್ಲಿ ಒಂದು ಬಿಂದುವಿಗಿಂತಲೂ ಕಡಿಮೆ.
ಸಮಯದ ಚಕ್ರದಲ್ಲಿ ಒಬ್ಬ ಮನುಷ್ಯನ ಜೀವನವೆಂಬುದು ಚಂಡಮಾರುತದ ನಡುವೆ ಬಂದು ಹೋಗುವ ಒಂದು ಸಣ್ಣ ಮಿಂಚಿನಂತೆ. ತಾನು, ತನ್ನದು ಎಂಬುದೆಲ್ಲ ಒಂದು ಸಾಮಾಜಿಕ ಮುಖವಾಡ ಅಷ್ಟೇ. ಬಹಳಷ್ಟು ಜನ ಶ್ರಮಪಡುವುದು, ಹಣದ ಹಿಂದೆ ಓಡುವುದು, ಪ್ರಚಾರದ ಹಿಂದೆ ಬೀಳುವುದು, ಜನ ತಮ್ಮನ್ನು ಗುರುತಿಸಬೇಕು ಅಂದುಕೊಳ್ಳುವುದು, ಸುತ್ತ-ಮುತ್ತಲಿನವ ರನ್ನು ತಮ್ಮ ಪ್ರಭಾವಕ್ಕೆ ಒಳಪಡಿಸುವುದಕ್ಕೆ ಯತ್ನಿಸುವುದು ಇವನ್ನೆಲ್ಲ ನೋಡಿದಾಗ ಅಯ್ಯೋ ಎನ್ನಿಸುತ್ತದೆ.
ಅಷ್ಟೆಲ್ಲ ಪ್ರಯತ್ನಪಟ್ಟರೂ ಅವರು ಗುರುತಿಸಿಕೊಳ್ಳುವುದು ಜಗತ್ತಿನ ಕೆಲವು ಜನರಿಗೆ ಮಾತ್ರ. ಉಳಿದ ಅದೆಷ್ಟೋ ಕೋಟಿ ಜನ ಇವರ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ. ಅಸಲಿಗೆ, ಉಳಿದವರಿಗೆ ಇವರ ಕುರಿತು ಕಿಂಚಿತ್ತೂ ಗೊತ್ತಿರುವುದಿಲ್ಲ. ಈ ಲೋಕದಲ್ಲಿ ಕೆಲವರಿಗೆ ಮಾತ್ರ ನಾವು ಬೇಕಾದವರಾಗಿರುತ್ತವೆ. ಉಳಿದ ಅದೆಷ್ಟೋ ಕೋಟಿ ಜನರಿಗೆ ನಮ್ಮ ಇರುವಿಕೆ ತಿಳಿದಿರುವುದಿಲ್ಲ.
ನಮ್ಮ ಮರಣಾನಂತರ ಎಷ್ಟು ಜನ, ಎಷ್ಟು ಸಮಯ ನಮ್ಮ ಬಗ್ಗೆ ಕಣ್ಣೀರಿಡುತ್ತಾರೆ ಎಂದು ತಿಳಿದಾಗ ಆಘಾತವಾಗುತ್ತದೆ. ಲೋಕದ ಕೆಲವೇ ಜನಕ್ಕೆ ನಾವು ಬೇಕಾದವರು ಎಂದು ತಿಳಿದಾಗ ಭ್ರಮನಿರಸನವಾಗುತ್ತದೆ. ಯಾವುದೇ ವ್ಯಕ್ತಿಯ ಇರುವಿಕೆ ಇಲ್ಲದೆಯೂ ಈ ಲೋಕದಲ್ಲಿ ಜನಜೀವನ ಮುಂದುವರಿಯುತ್ತದೆ.
ಒಬ್ಬರೋ ಇಬ್ಬರೋ ಬಿಡಿ, ನೂರಾರು ವ್ಯಕ್ತಿಗಳು ಇಲ್ಲದಿದ್ದರೂ ಭೂಮಿ ತಿರುಗುತ್ತದೆ, ಗಾಳಿ ಬೀಸುತ್ತದೆ, ಸೂರ್ಯ ಉದಯಿಸುತ್ತಾನೆ, ಮುಳುಗುತ್ತಾನೆ. ಕಾಲಕ್ಕೆ ತಕ್ಕಂತೆ ಮಳೆ ಸುರಿಯುತ್ತದೆ, ಜಗತ್ತು ಎಂದಿನಂತೆ ಮುಂದುವರಿಯುತ್ತದೆ. ನಮಗೆ ತೀರಾ ಹತ್ತಿರವಿದ್ದವರು, ಬೇಕಾದವರು ಮಾತ್ರ ನಾಲ್ಕು ದಿನ ಕಣ್ಣೀರು ಹಾಕುತ್ತಾರೆ, ಬೇಜಾರು ಪಟ್ಟುಕೊಳ್ಳುತ್ತಾರೆ. ನಂತರ ಅವರೂ ತಮ್ಮ-ತಮ್ಮ ಕೆಲಸದಲ್ಲಿ, ನಿತ್ಯದ ಜಂಜಾಟದಲ್ಲಿ ತೊಡಗಿಕೊಳ್ಳುತ್ತಾರೆ.
ಪರಿಚಯ ಇಲ್ಲದವರು ಯಾರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮನ್ನು ಬಲ್ಲವರಿಗೂ ಕೆಲಕಾಲದ ನಂತರ ನಮ್ಮ ಇಲ್ಲದಿರುವಿಕೆ ಕಾಡುವುದಿಲ್ಲ. ಆದರೆ ಬದುಕಿರುವಷ್ಟು ದಿನ ನಾನು-ನನ್ನದು ಎಂಬ ಅಹಂಕಾರವನ್ನು ಎದೆಯ ಪೂರ್ತಿ ತುಂಬಿಕೊಂಡು, ತಲೆಯ ಮೇಲೆ ಹೊತ್ತು ಕೊಂಡ ಮನುಷ್ಯ ಮಾತ್ರ ತಾನು ಶಾಶ್ವತ ಎಂಬಂತೆ ಬದುಕುತ್ತಾನೆ.
ಈ ಅಹಂಕಾರವು ಒಂದು ಮಾಯೆಯಲ್ಲದೆ ಮತ್ತಿನ್ನೇನು? ಅಲ್ಲ, ಅಷ್ಟಕ್ಕೂ ಒಬ್ಬ ವ್ಯಕ್ತಿ ಸದಾ ಒಂದೇ ರೀತಿ ಇರುವುದೂ ಇಲ್ಲ. ಹಾಗೇನಾದರೂ ತಿಳಿದರೆ ಅದು ಮೂರ್ಖತನವಾದೀತು. ವ್ಯಕ್ತಿ ಆಗಿದ್ದಾಗ ಬದಲಾಗುತ್ತಿರುತ್ತಾನೆ. ಇಂದು ಶ್ರೀಮಂತನಾಗಿದ್ದ ವ್ಯಕ್ತಿಯೊಬ್ಬ ನಾಳೆ ಬಡವನಾಗ ಬಹುದು. ಇಂದು ಬಡತನದಲ್ಲಿದ್ದವ ನಾಳೆ ಶ್ರೀಮಂತನಾಗಬಹುದು. ಇಂದು ಮೂಲೆಯಲ್ಲಿದ್ದವ ಒಂದೇ ಒಂದು ರೀಲ್ ಮುಖಾಂತರ ಪ್ರಚಾರ ಪಡೆಯಬಹುದು.
ಇವೆಲ್ಲವೂ ಕಾಲಕ್ಕೆ ತಕ್ಕಂತೆ ಘಟಿಸುವಂಥದ್ದು. ಪ್ರಚಾರಕ್ಕೆ ಬೇಕಾಗಿ ಎಷ್ಟೋ ಜನರು ಪ್ರಯತ್ನ ಪಡುತ್ತಿರುತ್ತಾರೆ. ಆದರೆ ಅವರಿಗೆಲ್ಲ ಶ್ರೇಯಸ್ಸು ಲಭಿಸುವುದಿಲ್ಲ. ಅದೇ ಕೆಲವರಿಗೆ ಯಾವ ಯತ್ನವೂ ಇಲ್ಲದೆಯೇ ರಾತ್ರೋರಾತ್ರಿ ಪ್ರಚಾರ ಗಿಟ್ಟುತ್ತದೆ. ಆದರೆ ಒಂದು ವಿಷಯ ತಿಳಿದಿರಲಿ, ಇವೆರಡೂ ಶಾಶ್ವತವಲ್ಲ.
ಒಂದು ಉದಾಹರಣೆ ಹೇಳುವುದಾದರೆ, ನಾವು ಒಂದು ಮಗುವನ್ನು ನೋಡುತ್ತೇವೆ. ಅದು ನಮಗೆ ಹತ್ತಿರವಾಗಿರುತ್ತದೆ. ನಡುವೆ ೧೦-೧೫ ವರ್ಷ ಯಾವುದೋ ಕಾರಣದಿಂದ ನಾವು ಅದನ್ನು ಕಂಡಿರುವುದಿಲ್ಲ ಅಂದುಕೊಳ್ಳಿ, ಬೆಳೆದು ದೊಡ್ಡದಾದ ಮಗು ತನ್ನ ಪರಿಚಯ ಹೇಳಿಕೊಳ್ಳು ವವರೆಗೂ ಕೆಲವೊಮ್ಮೆ ನಾವು ಅದನ್ನು ಗುರುತಿಸಲಾಗುವುದಿಲ್ಲ.
ಒಮ್ಮೆ ಅದು ಪರಿಚಯ ಹೇಳಿಕೊಂಡರೂ ನಾವು ಅದರ ಬಾಲ್ಯದ ನೆನಪುಗಳನ್ನು ಕಲೆ ಹಾಕಿ ಅದನ್ನು ಗುರುತಿಸುತ್ತೇವೆ. ಕೆಲ ವರ್ಷಗಳ ಕಾಲ ಆ ಮಗುವಿನಲ್ಲಾಗುವ ಬದಲಾವಣೆಯನ್ನು ಗಮನಿಸದೇ ಇರುವುದರಿಂದ ಅದು ನಮಗೆ ಭಿನ್ನವಾಗಿಯೇ ಕಾಣುತ್ತದೆ. ಕೆಲ ವರ್ಷಗಳ ನಂತರ ಕಂಡ, ಅಂದು ಮಗುವಾಗಿ, ಇಂದು ಬೆಳೆದು ವ್ಯಕ್ತಿಯಾದ ಆ ಮಗುವಿನ ನಡೆ-ನುಡಿ, ಆಚಾರ-ವಿಚಾರ, ಸ್ವಭಾವ ನಾವು ಕಾಣದ ಕೆಲವು ವರ್ಷಗಳಲ್ಲಿ ಬದಲಾಗಿರುವುದರಿಂದ ನಮಗೆ ಅದನ್ನು ಗುರುತಿಸಲು ಕಷ್ಟವಾಗುತ್ತದೆ.
ಹಾಗಾದರೆ ನಾವು ಕೆಲವು ವರ್ಷಗಳ ಹಿಂದೆ ಕಂಡ ಆ ಮಗು ಎಲ್ಲಿ ಹೋಯಿತು? ಅಂದು ನಾವು ಇಷ್ಟಪಟ್ಟ ಮಗು, ಬೆಳೆದು ದೊಡ್ಡದಾದ ಮೇಲೆ ನಾವು ಇಷ್ಟ ಪಡದೇ ಇರಲಿಕ್ಕೂ ಸಾಕು. ಅಥವಾ ನಮಗೆ ಅಂದು ಇಷ್ಟವಿಲ್ಲದ ಆ ಮಗು, ದೊಡ್ಡದಾದ ನಂತರ ಇಷ್ಟವಾಗಲೂಬಹುದು.
ಇದೆಲ್ಲದಕ್ಕೂ ಕಾರಣ, ಆ ಮಗುವಿನ ಬಗ್ಗೆ ನಮ್ಮ ನೆನಪು ಮತ್ತು ನಾವದನ್ನು ನೋಡುವ ದೃಷ್ಟಿ ಕೋನ. ಈ ನೆನಪು ಕೂಡ ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಕೆಲಸ ಮಾಡುತ್ತದೆ. ಒಬ್ಬನನ್ನು ಇನ್ನೊಬ್ಬ ಗುರುತಿಸುವುದಕ್ಕೆ ನೆನಪು ಬೇಕು. ನೆನಪು ಎಂಬುದು ನಮ್ಮ ವಿಚಾರ ಮತ್ತು ಅನುಭವದ ಸಂಯೋಜನೆ ಅಷ್ಟೇ. ನೆನಪನ್ನು ಕಳೆದುಕೊಂಡರೆ ನಮಗೆ ನಮ್ಮ ಇರುವಿಕೆಯೂ ತಿಳಿಯುವುದಿಲ್ಲ. ಆಗ ಅಹಂಕಾರವೂ ತಾನಾಗಿಯೇ ಮಾಯವಾಗುತ್ತದೆ.
ಏಕೆಂದರೆ ಅಹಂಕಾರ ಕೂಡ ಸಮಾಜದಿಂದ, ಇತರರಿಂದ ನಾವು ಪಡೆದ ಗುರುತೇ ವಿನಾ ಮತ್ತೇನಲ್ಲ. ಆದ್ದರಿಂದ ಹುಸಿ ಅಹಂಕಾರದ, ಪ್ರಚಾರದ ಗೀಳಿಗೆ ಬೀಳುವುದಕ್ಕಿಂತ ಇರುವಲ್ಲಿಯೇ ಆನಂದ ಕಾಣುವುದು ಒಳಿತಲ್ಲವೇ?