ತಾಳ-ಮೇಳ
ಗ.ನಾ.ಭಟ್ಟ
ತಾಳಮದ್ದಳೆ ಕುರಿತಾದ ಚರ್ಚೆಯೆಂಬ ಸಮುದ್ರ ಮಥನ ಆರಂಭವಾಗಿ ಬರೋಬ್ಬರಿ ಒಂದು ತಿಂಗಳಾಯಿತು. ಈ ಚರ್ಚೆಯಲ್ಲಿ ಪಾಲ್ಗೊಳ್ಳಲು ತಾಳಮದ್ದಳೆಯ ಕಲಾವಿದರು ಹಾಗೂ ಅಭಿಮಾನಿಗಳು ಈ ಎರಡೂ ವರ್ಗಕ್ಕೂ ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರು ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಈ ಚರ್ಚಾ ವಿಷಯದ ಕುರಿತಾದ ಪರ ಮತ್ತು ವಿರೋಧದ ಅಭಿಪ್ರಾಯಗಳು ಪತ್ರಿಕೆಯಲ್ಲಿ ಸಾಕಷ್ಟು ಪ್ರಕಟವಾಗಿವೆ.
ಇಂಥ 10-15 ಲೇಖನಗಳಲ್ಲಿ ವ್ಯಕ್ತವಾಗಿರುವ ಕೆಲವು ಅನಿಸಿಕೆಗಳಲ್ಲಿ ತಾಳಮದ್ದಳೆಯ ಬಹುಮುಖ ಆಯಾಮಗಳು, ಮುಖ್ಯವಾಗಿ ಅದೊಂದು ರಂಗಭೂಮಿ, ಅದೊಂದು ಕಲಾಕೃತಿ ಎಂಬ ನೆಲೆಯಲ್ಲಿ ಚರ್ಚೆಗೆ ಗ್ರಾಸವೊದಗಿಸುವ ಹೊಳಹು ಅಷ್ಟಾಗಿ ಕಂಡುಬರಲಿಲ್ಲ. ಬೆರಳೆಣಿಕೆಯ ಲೇಖನಗಳಷ್ಟೇ ತಾಳಮದ್ದಳೆಯ ಅಪಸವ್ಯಗಳನ್ನು ಹೊರಗೆಡಹಿದವು ಎನ್ನಬೇಕು.
ಹೀಗಾಗಿ, ಈ ಚರ್ಚಾವಿಷಯದ ಕುರಿತಂತೆ ಇನ್ನಷ್ಟು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವೆ. ಅದಿರಲಿ, ನಡೆದದ್ದಾದರೂ ಏನು? 25-12-2025ರಂದು ವಿಶ್ವೇಶ್ವರ ಭಟ್ಟರು ತಮ್ಮ ಅಂಕಣಬರಹ ದಲ್ಲಿ ತಾಳಮದ್ದಳೆ ಕಲಾವಿದರನ್ನು ಅವಹೇಳನ ಮಾಡಿದರು, ತೇಜೋವಧೆ ಮಾಡಿದರು, ಅವಮಾನ ಮಾಡಿದರು.
ಜತೆಗೆ ತಮ್ಮ ‘ಭಟ್ಟರ್ ಸ್ಕಾಚ್’ ಎಂಬ ತಿಳಿಹಾಸ್ಯದ, ರಂಜನಾತ್ಮಕ ಪ್ರಶ್ನೋತ್ತರ ರೂಪದ ಅಂಕಣ ದಲ್ಲಿ ಕೆಲವು ಅರ್ಥಧಾರಿಗಳ ಹೆಸರು ಹಾಕಿ ಅವರ ಮಾನ ತೆಗೆದರು ಎಂದು ಕೆಲವು ಅರ್ಥಧಾರಿ ಗಳು ಒಗ್ಗಟ್ಟಾಗಿ ವಿಶ್ವೇಶ್ವರ ಭಟ್ಟರ ಮೇಲೆ ಮುಗಿಬಿದ್ದದ್ದು. ಅದು ಎಲ್ಲಿಯವರೆಗೆ ಹೋಯಿತೆಂದರೆ ಈಗ ಮೂರ‍್ನಾಲ್ಕು ದಿನಗಳ ಹಿಂದೆ ಉಡುಪಿಯ ಕಲಾರಂಗದಲ್ಲಿ ಹದಿನಾಲ್ಕು ಅರ್ಥಧಾರಿಗಳು ಒಟ್ಟು ಸೇರಿ ಪತ್ರಿಕಾಗೋಷ್ಠಿಯನ್ನು ನಡೆಸಿ ವಿಶ್ವೇಶ್ವರ ಭಟ್ಟರು ಕ್ಷಮೆ ಯಾಚಿಸಬೇಕೆಂದು ಕೇಳಿದ್ದು ಮತ್ತು ಅವರೆಲ್ಲರೂ ಒಂದೇ ಅಭಿಪ್ರಾಯವನ್ನು ಬೇರೆ ಬೇರೆ ರೀತಿಯಲ್ಲಿ ಹೇಳಿದ್ದು.
ಇದನ್ನೂ ಓದಿ: G N Bhat Column: ತಾಳಮದ್ದಲೆ ಕಲಾಪ್ರಕಾರದ ಇನ್ನೊಂದು ದುರವಸ್ಥೆ
ವಾಸ್ತವವಾಗಿ ಅದು ಪತ್ರಿಕಾಗೋಷ್ಠಿಯಂತಿರಲಿಲ್ಲ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರೂ ಬಂದಂತಿರಲಿಲ್ಲ. ಅಲ್ಲದೆ ಮರುದಿನ ವಿಶ್ವವಾಣಿಯ ಹೊರತು ಇತರ ಪತ್ರಿಕೆಗಳಲ್ಲೂ ಬಂದಂತಿರ ಲಿಲ್ಲ. ಬಂದಿದ್ದರೆ ನನಗೆ ಗೊತ್ತಿಲ್ಲ (ಎಂಥಾ ಚೋದ್ಯ! ಭಟ್ಟರ ವಿರುದ್ಧ ಸಮರ ಸಾರಿದ ಅವರದೇ ಪತ್ರಿಕೆಯಲ್ಲಿ ಅದು ಬಂದದ್ದು ನಿಜಕ್ಕೂ ಅಚ್ಚರಿಯೆನಿಸುತ್ತದೆ ಮತ್ತು ವಿಡಂಬನೆಯೆನಿಸುತ್ತದೆ).
ಈಗ ವಿಷಯಕ್ಕೆ ಬರೋಣ. ಕಳೆದ ತಿಂಗಳು 25ರಂದು ಭಟ್ಟರು “ಇದು ತಾಳಮದ್ದಳೆಯ ‘ಐಟಮ್ ಸಾಂಗ್ ಡಾನ್ಸರ್’ಗಳಂತೆ ಇರುವ ಅರ್ಥಧಾರಿಗಳನ್ನು ತಿರಸ್ಕರಿಸುವ ಕಾಲ" ಎಂಬ ಶೀರ್ಷಿಕೆ ಯಡಿಯಲ್ಲಿ ದೊಡ್ಡ ಲೇಖನವನ್ನೇ ಬರೆದಿದ್ದರು. ತಮಾಷೆಯೆಂದರೆ- ಅನೇಕ ಅರ್ಥಧಾರಿಗಳು ಆ ಲೇಖನದ ಮುಖ್ಯ ಆಶಯವನ್ನು ಗ್ರಹಿಸದೆ “ಭಟ್ಟರು ಕಲಾವಿದರಲ್ಲದವರ ಹೆಸರನ್ನೂ ಬರೆದಿದ್ದಾರೆ, ಆದ್ದರಿಂದ ಅವರಿಗೆ ತಾಳಮದ್ದಳೆ ಬಗ್ಗೆ ಏನೂ ಗೊತ್ತಿಲ್ಲ" ಎಂದು ಹೇಳಿದ್ದು.
ಎರಡನೆಯದು- ‘ತಮ್ಮನ್ನು ಐಟಮ್ ಸಾಂಗ್ ಡಾನ್ಸರ್‌ಗಳಿಗೆ ಹೋಲಿಸಿದ್ದಾರೆ’ ಎಂದು ಆತುರದ ನಿರ್ಣಯಕ್ಕೆ ಬಂದು ‘ಕುಂಬಳಕಾಯಿ ಕದ್ದವನು ಯಾರೋ ಎಂದರೆ ತಮ್ಮ ಹೆಗಲನ್ನು ಮುಟ್ಟಿ ಕೊಂಡರು’ ಎಂಬ ಗಾದೆಯಂತೆ ವರ್ತಿಸಿದ್ದು. ಸ್ಟಾರ್ ಕಲಾವಿದರಲ್ಲಿ ಅನೇಕರು ಅದು ತಮಗೇ ಹೇಳಿದ್ದು ಅಂತ ಅಂದುಕೊಂಡು ಅಥವಾ ತಪ್ಪಾಗಿ ಭಾವಿಸಿಕೊಂಡು ತಮ್ಮ ಬಣ್ಣವನ್ನು ತಾವೇ ಬಯಲು ಮಾಡಿಕೊಂಡು ಸಿಕ್ಕಿಬಿದ್ದಿದ್ದು.
ವಾಸ್ತವವಾಗಿ ಭಟ್ಟರು ತಾಳಮದ್ದಳೆ ಕಲಾಪ್ರಕಾರವನ್ನು ಹಳಿದಿರಲಿಲ್ಲ. ಅದೇ ಲೇಖನದಲ್ಲಿ ಅವರು ಅದನ್ನು ಮೆಚ್ಚಿ, ಗೌರವಿಸಿ ಅದರ ಹೆಗ್ಗಳಿಕೆಯನ್ನು, ಮಹತ್ವವನ್ನು ನಾಲ್ಕು ಮಾತುಗಳಲ್ಲಿ ಬರೆದಿದ್ದರು. ‘ತಾಳಮದ್ದಳೆಯವರು ಮಾತಿನ ಬಣ್ಣಕ್ಕೆ ಹೆಚ್ಚು ಬೆಲೆ ತಂದಿದ್ದಾರೆ’, ‘ಅದು ಕಿವಿಗೆ, ಮಿದುಳಿಗೆ ಹಬ್ಬ’, ‘ಸಾಹಿತ್ಯಾಭಿಮಾನಿಗಳಿಗೆ, ವಿದ್ವಾಂಸರಿಗೆ ಹೆಚ್ಚು ಪ್ರಿಯವಾದದ್ದು’, ‘ಅಸಲಿ ಸೊಬಗಿರುವುದೇ ಅದರ ಸಂವಾದದಲ್ಲಿ’, ‘ಅದು ಶಿಕ್ಷಣ ಮಾಧ್ಯಮವಾಗಿ ಕೆಲಸ ಮಾಡುತ್ತಿದೆ’, ತಾಳಮದ್ದಳೆ ‘ಮಾತಿನ ಮಂಟಪ’, ‘ಅಲ್ಲಿಯ ರಾಜತಾಂತ್ರಿಕ ಪಟ್ಟುಗಳು, ತರ್ಕಗಳು ಇಂಟರ್ ನ್ಯಾಷನಲ್ ಡಿಪ್ಲೊಮಸಿಗಿಂತಲೂ ಶ್ರೇಷ್ಠವಾದುದು’- ಎಂದೆಲ್ಲಾ ಬರೆದು ಅದರ ವೈಶಿಷ್ಟ್ಯವನ್ನೂ, ಹಿರಿಮೆಯನ್ನೂ ಸಾರಿದ್ದರು.
ಇವೆಲ್ಲ ಗುಣಾತ್ಮಕ ಅಂಶಗಳನ್ನೂ ಬಿಟ್ಟು ಕೇವಲ ‘ಐಟಮ್ ಸಾಂಗ್ ಡಾನ್ಸರ್’ ಎಂಬ ಪದಗುಚ್ಛ ವನ್ನೇ ಇಟ್ಟುಕೊಂಡು ಅದನ್ನು ತಮಗೇ ಹೇಳಿದ್ದಾರೆ ಎಂದು ಆರೋಪಿಸಿಕೊಂಡು ಭಟ್ಟರ ವಿರುದ್ಧ ಪ್ರತಿಭಟನೆ ಸಾರಿದ್ದು ದಿಟಕ್ಕೂ ಅವರ ಬೌದ್ಧಿಕ ದಾರಿದ್ರ್ಯವನ್ನೂ ಅತ್ಯಾತುರತೆಯನ್ನೂ, ತಾಳ್ಮೆಗೆಟ್ಟ ನಡವಳಿಕೆಯನ್ನೂ ತೋರಿಸುತ್ತದೆ.
ಮತ್ತೊಂದು ಅತ್ಯಂತ ಬೇಸರದ ಸಂಗತಿಯೆಂದರೆ- ಅರ್ಥಧಾರಿಗಳು ‘ತಾಳಮದ್ದಳೆಯೆಂದರೆ ತಾವು, ತಾವು ಎಂದರೆ ತಾಳಮದ್ದಳೆ’ ಎಂಬ ಅಜ್ಞಾನಮೂಲದ ಅಹಂಕಾರಕ್ಕೆ ಒಳಗಾಗಿದ್ದು. “ಐಟಮ್ ಸಾಂಗ್ ಡಾನ್ಸರ್ ಅಂತೆ ಇರುವ ಕಲಾವಿದರನ್ನು ತಿರಸ್ಕರಿಸುವ ಕಾಲ ಸನ್ನಿಹಿತವಾಗಿದೆ" ಎಂದರೆ ಅದು ತಮಗೇ ಹೇಳಿದ್ದು ಅಂತ ಇವರು ಭಾವಿಸಿದ್ದೇಕೆ? ಭಟ್ಟರು ಯಾರ ಹೆಸರನ್ನೂ ಹೇಳಿರಲಿಲ್ಲ!
ಮತ್ತೆ ‘ಕುಂಬಳಕಾಯಿ-ಹೆಗಲು’ ಉದಾಹರಣೆಯನ್ನೇ ಕೊಡಬೇಕಾಗುತ್ತದೆ. ಇಂಥ ಪ್ರವತ್ತಿಗೆ ಕಾರಣ ಇಲ್ಲದೆ ಇಲ್ಲ. ಅದು ಅರ್ಥಧಾರಿಗಳಲ್ಲಿ ಮನೆಮಾಡಿಕೊಂಡಿರುವ ಎಲ್ಲೆಯಿಲ್ಲದ ‘ಅಹಂಕಾರ’ವೇ ಆಗಿದೆ. ‘ದುರಹಂಕಾರ’ ಎಂದರೂ ತಪ್ಪಾಗಲಾರದು. ಮತ್ತೊಬ್ಬರ ಅಭಿಪ್ರಾಯಕ್ಕೆ, ಅನಿಸಿಕೆಗೆ, ಚಿಂತನೆಗೆ, ವೈಚಾರಿಕತೆಗೆ ದಮ್ಮಡಿ ಕಿಮ್ಮತ್ತನ್ನೂ ಕೊಡದ, ತಾವು ಹೇಳಿದ್ದೇ ಅಂತಿಮ ವಾಕ್ಯ, ತಮ್ಮದೇ ವೇದವಾಕ್ಯ, ಅದನ್ನು ಪ್ರಶ್ನಿಸಕೂಡದು, ಪ್ರಶ್ನಿಸಿದರೆ ನಿಮ್ಮ ಮೇಲೆ ಹಲ್ಲೆ ಮಾಡುತ್ತೇವೆ, ತಾವು ಪ್ರಶ್ನಾತೀತರು, ವಿಮರ್ಶೆಗೆ ಹೊರತಾದವರು ಎಂಬ ಮಿಥ್ಯಾಕಲ್ಪನೆಯೇ ಆಗಿದೆ.
ಇಂಥ ಭ್ರಮಾತ್ಮಕ ನಿಲುವನ್ನು ತೊಡೆದು ಯಾವಾಗ ಕಲಾವಿದರು/ಅರ್ಥಧಾರಿಗಳು ರಂಗಚಿಂತನೆಗೆ ತೊಡಗುತ್ತಾರೋ, ತಮಗಿಂತ ಕಲೆ ದೊಡ್ಡದು ಎಂದು ಭಾವಿಸುತ್ತಾರೋ ಆಗಲೇ, ಅಂದೇ ತಾಳ ಮದ್ದಳೆಯೆಂಬ ಕಲಾಪ್ರಕಾರ ಉದ್ಧಾರವಾಗತೊಡಗುತ್ತದೆ. ಅಲ್ಲಿಯವರೆಗೆ ಇಂಥ ಅಪಸವ್ಯ ಗಳೇ, ಅಪದ್ಧಗಳೇ ಜರುಗುತ್ತಿರುತ್ತವೆ.
ಕಲೆಯೂ ಅಧಃಪಾತಕ್ಕೆ ತಳ್ಳಲ್ಪಡುತ್ತಿರುತ್ತದೆ. ಮನುಷ್ಯನಿಗೆ ಅಹಂಕಾರ ಎಂದೂ ಒಳ್ಳೆಯದಲ್ಲ. ‘ಅಹಂಕಾರ ಸರ್ವತ್ರ ವರ್ಜ್ಯ’ ಎಂದು ಹೇಳುವ ಅನೇಕ ಮಾತುಗಳು ವೇದೋಪನಿಷತ್ತುಗಳಲ್ಲೂ, ಕಾವ್ಯೇತಿಹಾಸಗಳಲ್ಲೂ ದಂಡಿಯಾಗಿ ಸಿಗುತ್ತವೆ. ಇಂಥವುಗಳ ಬಗ್ಗೆ ಗಂಟೆಗಟ್ಟಲೆ ಕೊರೆಯುವ ಅರ್ಥಧಾರಿಗಳಿಗೆ ಇದನ್ನು ಬಿಡಬೇಕು ಅಂತ ಗೊತ್ತಾಗುವುದಿಲ್ಲವೆ? ತಮ್ಮ ಅರ್ಥಗಾರಿಕೆಯಲ್ಲಿ ಮಾತು ಮಾತಿಗೆ ವೇದ, ಉಪನಿಷತ್ತು, ಮಹಾಕಾವ್ಯಗಳ ಶ್ಲೋಕ, ಗಾದೆಮಾತು, ಅನುಭವದ ಮಾತು, ದೈನಂದಿನ ವಿಚಾರ, ರಾಜಕೀಯ ವಿಚಾರ ಮುಂತಾದುವನ್ನು ತಂದು ತುರುಕುವ ಇವರಿಗೆ ಇದನ್ನು ತ್ಯಜಿಸಬೇಕು ಅಂತ ಗೊತ್ತಾಗುವುದಿಲ್ಲವೇ? ಮನುಷ್ಯನ ಎಲ್ಲಾ ಅವನತಿಗೂ ಅಹಂಕಾರವೇ ಕಾರಣ ಅನ್ನುವುದಕ್ಕೆ ಒಂದು ಉದಾಹರಣೆ ನೀಡಬಯಸುತ್ತೇನೆ: ಯಯಾತಿ ಮಹಾರಾಜ ಯಾರಿಗೆ ತಾನೇ ಗೊತ್ತಿಲ್ಲ? ಎಲ್ಲರಿಗೂ ಗೊತ್ತಿದೆ. ಅವನೊಬ್ಬ ಕಾಮುಕ, ಲಂಪಟ, ತನ್ನ ತೀರದ ಕಾಮತೃಪ್ತಿಗಾಗಿ ಮಗನ ಯೌವನವನ್ನೇ ಪಡೆದ ಹೀನಮನುಷ್ಯ ಎಂಬುದು ಜಗಜ್ಜಾಹೀರಾದ ವಿಚಾರ.
ಅದು ಹೌದು. ಆದರೆ ಅದು ಅವನ ಪೂರ್ವಜೀವನ ವೃತ್ತಾಂತ. ಆದರೆ ಅವನ ಉತ್ತರ ಜೀವನ ವೃತ್ತಾಂತ ಬಹಳ ಮಂದಿಗೆ ಗೊತ್ತಿಲ್ಲ. ಮಗನ ಯೌವನ ಪಡೆದ ಅವನು ಹೆಣ್ಣುಗಳನ್ನು ಹುಡುಕುತ್ತಾ ಮತ್ತೆ ನಗರದಿಂದ ಹೊರಗೆ ಹೋಗಿಬಿಡುತ್ತಾನೆ.
ಕ್ರಮೇಣ ಅವನು ಪಡೆದಿದ್ದ ಅವನ ಮಗನ ಯೌವನ ಶರೀರಕ್ಕೂ ಮುಪ್ಪು ಬರತೊಡಗುತ್ತದೆ. ಆಗಲೇ ಅವನಿಗೆ ಜ್ಞಾನೋದಯವಾಗುತ್ತದೆ. ಆಗ ಅವನಿಂದ ಬಂದ ಮಾತೇ ‘ಯಯಾತಿ ಗೀತೆ’ ಅಂತ ಪ್ರಸಿದ್ಧವಾಯಿತು. ನಂತರ ಅವನು ಕಾಮವನ್ನು ತಿರಸ್ಕರಿಸಿ, ವೈರಾಗ್ಯಸಂಪನ್ನನಾಗಿ ಅನೇಕ ಯಜ್ಞ-ಯಾಗಗಳನ್ನು ಮಾಡಿ ಪುಣ್ಯಲೋಕವನ್ನು ಪಡೆಯುತ್ತಾನೆ.
ಆ ಪುಣ್ಯಲೋಕದಲ್ಲಿ ದೇವೇಂದ್ರನಿಗೂ ಅವನಿಗೂ ಒಂದು ಸಂಭಾಷಣೆ ಜರುಗುತ್ತದೆ. ಸಂಭಾ ಷಣೆಯ ಮಧ್ಯೆ ಇಂದ್ರ ಅವನಿಗೊಂದು ಪ್ರಶ್ನೆ ಹಾಕುತ್ತಾನೆ. “ನೀನು ಸ್ವ ಇಚ್ಛೆಯಿಂದ ಮಗ ಪುರುವಿಗೆ ರಾಜ್ಯಾಭಿಷೇಕ ಮಾಡಿ ಮತ್ತೆ ಊರಿಗೆ ಬಂದರೂ ರಾಜ್ಯ ಬಯಸಲಿಲ್ಲ. ಮಕ್ಕಳಿಂದ ದೂರವಿರುತ್ತಾ ವಾನಪ್ರಸ್ಥನಂತೆ ಬದುಕಿ ನಾನಾ ಯಾಗಗಳನ್ನು ಮಾಡಿ, ಇಲ್ಲಿಗೆ ಬಂದೆ.
ನಿನ್ನ ತಪಸ್ಸು, ತ್ಯಾಗ, ಅದ್ಭುತ, ಅನನ್ಯ, ನಿರುಪಮ. ನಿನಗೇನನ್ನಿಸುತ್ತದೆ? ನಿನ್ನಂಥವರು ಬೇರೆ ಯಾರಾದರೂ ಒಬ್ಬರು ಹೀಗೆ ಆಗಿಹೋಗಿದ್ದುಂಟೇ?" ಎಂದು ಕೇಳುತ್ತಾನೆ. ಅವನ ಪ್ರಶ್ನೆಗೆ ಯಯಾತಿ ಹಿಂದೆ ಮುಂದೆ ವಿಚಾರಿಸದೆ ಒಂದು ಕ್ಷಣದಲ್ಲಿ ಆತ್ಮಸಂಯಮವನ್ನು ಕಳೆದುಕೊಂಡು “ನನ್ನಂಥವರು ಬೇರೆ ಉಂಟೇ?" ಅನ್ನುತ್ತ ಗಹಗಹಿಸಿ ನಕ್ಕ. ಮರುಕ್ಷಣದಲ್ಲಿ ತಾನು ಗಳಿಸಿದ ಪುಣ್ಯ ಸಂಪಾದನೆಯನ್ನು ಕಳೆದುಕೊಂಡು ಭೂಮಿಗೆ ಬಿದ್ದ. ಇದು ಅಹಂಕಾರದ ಫಲ!
ಅಹಂಕಾರದಿಂದ ಮಣ್ಣು ಮುಕ್ಕಿದವರು ಬಹಳ ಮಂದಿ ಇದ್ದಾರೆ. ಬಲಿಚಕ್ರವರ್ತಿ, ಅರ್ಜುನ, ವಿಶ್ವಾಮಿತ್ರ- ಹೀಗೆ ಬಹಳ ಮಂದಿಯನ್ನು ಉದಾಹರಿಸಬಹುದು. ತಾಳಮದ್ದಳೆಯಲ್ಲಿ ಈ ಎಲ್ಲಾ ಪಾತ್ರಗಳನ್ನು ವಹಿಸುವ ಅರ್ಥಧಾರಿಗಳಿಗೆ ಅದು (ಅಹಂಕಾರ) ಒಳ್ಳೆಯದಲ್ಲ ಎಂಬುದು ತಿಳಿಯುವುದಿಲ್ಲವೆ? ಇನ್ನು ‘ಭಟ್ಟರ್ ಸ್ಕಾಚ್’ ವಿಚಾರ. ಈ ಮೊದಲೇ ನಾನು ಹೇಳಿದಂತೆ ಇದೊಂದು ಕುಹಕ, ವ್ಯಂಗ್ಯ, ಗೇಲಿ, ಹಾಸ್ಯ, ಅಪಹಾಸ್ಯ, ಪರಿಹಾಸ್ಯ, ಕುಚೋದ್ಯ, ಲೇವಡಿ, ತಮಾಷೆ, ವಿನೋದ- ಹೀಗೆ ಅನೇಕ ಆಯಾಮಗಳುಳ್ಳ ಒಂದು ವಿಶಿಷ್ಟ ಅಂಕಣ.
ಅದನ್ನು ಓದಿ ಸಂತೋಷಪಡಬೇಕೆ ಹೊರತು ಅದನ್ನು ತಮ್ಮ ತೇಜೋವಧೆಗೆ ಬಳಸಿದರು ಅಂತ ಭಾವಿಸಬಾರದು. ಉದಾಹರಣೆಗೆ- ಸಾಮಾಜಿಕ ಜಾಲತಾಣದಲ್ಲಿ ನರೇಂದ್ರಮೋದಿಯವರು ಮಮತಾ ಬ್ಯಾನರ್ಜಿ ಜತೆಗೆ ಕಡಿಮೆ ಬಟ್ಟೆಯಲ್ಲಿ ಡಾನ್ಸ್ ಮಾಡುವುದನ್ನೂ, ರಾಹುಲ್ ಗಾಂಧಿ ಜತೆ ಊಟ ಮಾಡುವುದನ್ನೂ, ಸಿದ್ದರಾಮಯ್ಯ ಆರ್ʼಎಸ್‌ಎಸ್‌ನ ಚಡ್ಡಿ ಹಾಕಿ, ಲಾಟಿ ಹಿಡಿದು, ಮಾರ್ಚ್ ಮಾಡುವುದನ್ನೂ ತೋರಿಸುತ್ತಾರೆ.
ರಾಜಕಾರಣಿಗಳ ಮಾತಿನ ಶೈಲಿಯನ್ನು ಅನುಕರಿಸಿ ನಗಿಸುತ್ತಾರೆ. ಇದಕ್ಕೆಲ್ಲಾ ಎಂದಾದರೂ ರಾಜಕಾರಣಿಗಳು ಕೇಸ್ ಹಾಕಿದ್ದನ್ನು ನೋಡಿದ್ದೀರಾ? ಪತ್ರಿಕಾಗೋಷ್ಠಿ ಕರೆದಿದ್ದನ್ನು ನೋಡಿದ್ದೀರಾ? ಖಂಡಿತ ಇಲ್ಲ. ಹಿಂದೊಮ್ಮೆ ಭಟ್ಟರು ವೀರಪ್ಪ ಮೊಯ್ಲಿಯವರನ್ನು ಸಾಹಿತಿಯೇ ಅಲ್ಲ ಅಂತ ಅವರ ಹೆಸರನ್ನು ಹಾಕಿಯೇ ಪ್ರಕಟಿಸಿದ್ದರು. ಅವರೇನೂ ಅದಕ್ಕೆ ಸ್ವಲ್ಪವೂ ತಲೆ ಕೆಡಿಸಿಕೊಂಡಿರ ಲಿಲ್ಲ. ಇಂಥದ್ದು ಎಷ್ಟೋ!
ಇದು ಆರಂಭವಾದದ್ದು ‘ಭಟ್ಟರ್ ಸ್ಕಾಚ್’ನಲ್ಲಿ ಡಾ.ಎಂ.ಪ್ರಭಾಕರ ಜೋಶಿಯವರ ಹೆಸರನ್ನು ಹಾಕುವುದರ ಮೂಲಕ. ‘ಬುದ್ಧಿವಂತಿಕೆ ಇದ್ದೂ ಭೂಷಣ ಎನಿಸಿಕೊಳ್ಳದಿದ್ದರೆ, ಪ್ರಭಾಕರ ಜೋಶಿ ಅಂತಾರೆ’ ಎಂದು ಭಟ್ಟರು ಅವರ ಕಾಲೆಳೆದಿದ್ದೇ ಇದರ ಆರಂಭ ಬಿಂದುವಾಗಿದೆ. ಇದನ್ನು ಜೋಶಿ ಯವರು ಉದಾಸೀನ ಮಾಡಿದ್ದರೆ ಆಗಿಹೋಗುತ್ತಿತ್ತು!
ಆದರವರು ಹಾಗೆ ಮಾಡಲಿಲ್ಲ. ತಮ್ಮ ಮರ್ಯಾದೆಯೇ ಬೀದಿಪಾಲಾಯಿತು ಎಂದು ಅವರು ಭಾವಿಸಿಬಿಟ್ಟರು. ತಮ್ಮ ಅಸ್ತಿತ್ವ ಕಳಚಿಬಿತ್ತು ಎಂದು ತಿಳಿದರು. ಕಂಡಕಂಡವರ ಬಳಿ ಇದನ್ನು ಹೇಳಿಕೊಂಡರು. ವಾಟ್ಸಾಪ್ ಮಾಡಿದರು. ಮೆಸೇಜ್ ಮಾಡಿದರು. ತಮ್ಮ ಪರವಾಗಿ ಮಾತನಾಡಿ ಎಂದು ಸಾಕ್ಷಾತ್ ಕೇಳದಿದ್ದರೂ ಪರೋಕ್ಷವಾಗಿ ಕೇಳಿದರು. ಈಗ ಅದು ಬಿಡಿಸಲಾಗದ ಕಗ್ಗಂಟಾಗಿದೆ.
ನನ್ನ ದೃಷ್ಟಿಯಲ್ಲಿ ಜೋಶಿಯವರು ಅವರ ವಿದ್ಯೆ, ಬುದ್ಧಿ, ಸಂಸ್ಕಾರ, ಬರಹ, ಚಿಂತನೆ, ಕೃತಿರಚನೆ, ವಿಮರ್ಶೆ, ಅರ್ಥಗಾರಿಕೆ ಸಂದ ಗೌರವ, ಪ್ರಶಸ್ತಿಗಳು- ಇವೆಲ್ಲದರ ನೆಲೆಯಲ್ಲಿ ಮೌನ ವಹಿಸಬೇಕಿತ್ತು. ಹಾಗೆ ಮಾಡಿದ್ದಲ್ಲಿ ಖಂಡಿತಕ್ಕೂ ಅವರು ದೊಡ್ಡವರಾಗುತ್ತಿದ್ದರು.
ಎರಡನೆಯದು- ಭಟ್ಟರು ‘ಭಟ್ಟರ್ ಸ್ಕಾಚ್’ನಲ್ಲಿ ಮೂರ‍್ನಾಲ್ಕು ಅರ್ಥಧಾರಿಗಳ ಹೆಸರು ಹಾಕಿದ್ದರೇ ವಿನಾ, ಉಳಿದ ಯಾವ ಕಲಾವಿದರ ಹೆಸರನ್ನೂ ಹಾಕಿರಲಿಲ್ಲ. ಹೀಗಿದ್ದ ಮೇಲೆ ಹೆಸರಿಸಲ್ಪಡದ ಹತ್ತೆಂಟು ಕಲಾವಿದರು ಒಟ್ಟುಗೂಡಿ “ಭಟ್ಟರು ಇಡೀ ತಾಳಮದ್ದಳೆ ಕ್ಷೇತ್ರಕ್ಕೇ ಅವಮಾನ ಮಾಡಿದ್ದಾರೆ, ಕಲಾವಿದರ ತೇಜೋವಧೆ ಮಾಡಿದ್ದಾರೆ" ಎಂದು ಹುಯಿಲೆಬ್ಬಿಸಿದ್ದು ಯಾಕೆ? ಸಾಮಾಜಿಕ ಜಾಲತಾಣದಲ್ಲಿ ಭಟ್ಟರನ್ನು ಮನಬಂದಂತೆ ನಿಂದಿಸಿದ್ದು ಯಾಕೆ? ಜೋಶಿ, ಉಜಿರೆ, ಕೆರೆಕೈ ಮತ್ತು ವಿಶ್ವೇಶ್ವರ ಭಟ್ಟರ ನಡುವೆ ನಡೆದ ಯಾವುದೋ ವೈಯಕ್ತಿಕ ಘಟನೆಗೆ, ತಮಗೆ ಸಂಬಂಧವಿಲ್ಲದುದಕ್ಕೆ ಇತರ ಕಲಾವಿದರು ಪಾಲ್ಗೊಂಡು ಅವರನ್ನು ಸಮರ್ಥಿಸಿದ್ದು ಯಾಕೆ? ಅದಕ್ಕೆ ಕಾರಣ ಇಷ್ಟೇ! ಅವಕಾಶವಾದಿತ್ವ!
ಸಮಯಸಾಧಕತನ! ತಮಾಷೆಯೆಂದರೆ ಈ ತಾರಾಮೌಲ್ಯವುಳ್ಳ ಅರ್ಥಧಾರಿಗಳು ತಾಳಮದ್ದಳೆ ಯಿಲ್ಲದೆ ಒಂದರೆಕ್ಷಣವೂ ಬದುಕಲಾರರು. ತಿಂಗಳಿಗೆ ಹದಿನೈದು ತಾಳಮದ್ದಳೆಯಾದರೂ ಇವರಿಗೆ ಸಿಗಬೇಕು. ಇಲ್ಲದಿದ್ದರೆ ಇವರು ನೀರಿನಿಂದ ಹೊರಗೆ ಬಂದ ಮೀನಿನಂತಾಗಿಬಿಡುತ್ತಾರೆ. ಇವರು ಒಳಗೊಳಗೇ ಕಚ್ಚಾಡಿಕೊಂಡರೂ, ಪರಸ್ಪರ ಗೌರವವಿಲ್ಲದಿದ್ದರೂ ಅವರಿಗೆ ಇವರು ಬೇಕು, ಇವರಿಗೆ ಅವರು ಬೇಕು.
ಇದು ತಾಳಮದ್ದಳೆಯ ಇಂದಿನ ಸ್ಥಿತಿ. ಇವರಿಗೆ ಹೆಸರು, ಕೀರ್ತಿ, ಅದರಿಂದ ಬರುವ ಹಣ, ಪ್ರೇಕ್ಷಕರ ಆರಾಧನೆ, ಜಗಳ, ಕಚ್ಚಾಟ ಎಲ್ಲವೂ ಬೇಕು. ಆದರೆ ರಂಗಚಿಂತನೆ ಸರ್ವಥಾ ಬೇಡ. ಸುಮಾರು 25-30 ವರ್ಷಗಳಿಂದ ಇದೇ ಫೀಲ್ಡಲ್ಲಿ ಇದ್ದ ಒಬ್ಬನೇ ಒಬ್ಬ ಕಲಾವಿದ/ಅರ್ಥಧಾರಿ ರಂಗಚಿಂತನೆಗೆ ತೊಡಗಿದ್ದು, ಅದರ ಉತ್ಕರ್ಷಕ್ಕಾಗಿ ಪ್ರಯತ್ನಿಸಿದ್ದು ನನಗಂತೂ ಕಂಡುಬಂದಿಲ್ಲ.
ಹೀಗೆ ಹೇಳುವುದಕ್ಕೂ ಬಲವಾದ ಕಾರಣವಿದೆ. ಸುಮಾರು 15-20 ವರ್ಷಗಳ ಹಿಂದೆ ಉಡುಪಿಯ ರಾಜಾಂಗಣದಲ್ಲಿ ಬೆಳಗಿನ ವೇಳೆ ತಾಳಮದ್ದಳೆ ಕುರಿತಾದ ವಿಚಾರ ಸಂಕಿರಣ ಮತ್ತು ಸಂಜೆಯ ವೇಳೆ ತಾಳಮದ್ದಳೆ ಸಪ್ತಾಹ ಸಂಪನ್ನಗೊಂಡಿತ್ತು. ನಾನು ‘ಯಕ್ಷರಂಗ ಪತ್ರಿಕೆ’ಯ ಸಂಪಾದಕರ ಕೋರಿಕೆಯ ಮೇರೆಗೆ ಆ ಪತ್ರಿಕೆಯ ಪ್ರತಿನಿಧಿಯಾಗಿ ಆ ತಾಳಮದ್ದಳೆ ಮತ್ತು ವಿಚಾರ ಸಂಕಿರಣದ ಸಮೀಕ್ಷಕನಾಗಿ ಹೋಗಿದ್ದೆ. ಆಶ್ಚರ್ಯವೆಂದರೆ ಬೆಳಗಿನ ವಿಚಾರ ಸಂಕಿರಣಕ್ಕೂ ಸಂಜೆಯ ತಾಳಮದ್ದಳೆ ಪ್ರದರ್ಶನಕ್ಕೂ ಪರಸ್ಪರ ಸಂಬಂಧವೇ ಇರಲಿಲ್ಲ. ಅದರ ಬಗ್ಗೆ ನಾನು ಬರೆದೆ, ಅದು ಪ್ರಕಟವೂ ಆಯಿತು; ಒಂದಿಷ್ಟು ನಿಷ್ಠುರದ ಮಾತುಗಳೂ ಬಂದವು. ನಾನದಕ್ಕೆ ಧೃತಿಗೆಡಲಿಲ್ಲ. ಅದೀಗ ‘ಯಕ್ಷಮೀಮಾಂಸೆ’ ಎಂಬ ಹೆಸರಲ್ಲಿ ಪುಸ್ತಕವೂ ಆಗಿದೆ.
ಅದೇ ಸಂದರ್ಭದಲ್ಲಿ ಡಾ.ಎಂ.ಪ್ರಭಾಕರ ಜೋಶಿ ಮತ್ತು ಡಾ.ಪಾದೇಕಲ್ಲು ವಿಷ್ಣು ಭಟ್ಟ ಅವರ ಸಂಪಾದಕತ್ವದಲ್ಲಿ ‘ವಾಚಿಕ’ ಎಂಬ ಹೆಸರಿನ ಪುಸ್ತಕ ಬಂದಿದೆ. ಅದು ತಾಳಮದ್ದಳೆ ಕುರಿತಾದ ಒಂದು ಅತ್ಯುತ್ತಮ ವಿಮರ್ಶಾತ್ಮಕ ಪುಸ್ತಕ. ಅನೇಕ ರಂಗತಜ್ಞರು, ಸಾಹಿತಿಗಳು, ಕಲಾವಿದರು, ಲೇಖಕರು ಅದರ ಬಗ್ಗೆ ಬರೆದಿದ್ದಾರೆ. ಇಂದಿನ ಕಲಾವಿದರು ಅದನ್ನು ಓದಿದ್ದರೆ ತಾಳಮದ್ದಳೆ ಇಷ್ಟೊಂದು ಹದಗೆಡುತ್ತಿರಲಿಲ್ಲ.
‘ತಾಳಮದ್ದಳೆ: ವಿಮರ್ಶೆಯ ತೊಡಕು’ ಅಂತ ಹೇಳುವವರು ಇದನ್ನು ಒಮ್ಮೆ ಗಮನಿಸಬೇಕು ಮತ್ತು ಕಲಾವಿದರೂ ಇದನ್ನು ಓದಬೇಕು. ಕೊನೆಯದಾಗಿ ತುಂಬಾ ವಿಷಾದದಿಂದ ಹೇಳಬೇಕಾದ ಒಂದು ಸಂಗತಿಯಿದೆ. ತಾಳಮದ್ದಳೆ ಒಂದು ಕಲಾಕೃತಿ, ಅದೊಂದು ಕಲಾರೂಪ, ಅದೊಂದು ರಂಗಭೂಮಿ ಅಂತ ತಿಳಿಯದೇ ಇದ್ದವರೇ ಬಹುಮಂದಿ ಇದ್ದಾರೆ.
ಯಕ್ಷಗಾನ ರಂಗಭೂಮಿಗಾಗಿ ದುಡಿದ, ಬದ್ಧತೆಯಿಂದ ನಡೆದುಕೊಂಡ ಕೆರೆಮನೆ ಶಂಭು ಹೆಗಡೆ, ಹೊಸ್ತೋಟ ಮಂಜುನಾಥ ಭಾಗವತ, ಡಾ.ಶಿವರಾಮ ಕಾರಂತ, ಬನ್ನಂಜೆ ಸಂಜೀವ ಸುವರ್ಣ, ಶತಾವಧಾನಿ ಆರ್. ಗಣೇಶ್ ಮೊದಲಾದವರು ಇಲ್ಲಿ ಸ್ಮರಣೀಯರು. ತಾಳಮದ್ದಳೆಯನ್ನು ಒಂದು ರಂಗಭೂಮಿಯೆಂದು ಪರಿಗಣಿಸಿ, ಈ ಕ್ಷೇತ್ರದಲ್ಲಿ ಅದರ ಬಗ್ಗೆ ದುಡಿಯುತ್ತಿರುವ, ಒಬ್ಬನೇ ಒಬ್ಬ ವ್ಯಕ್ತಿಯನ್ನು ದಯಮಾಡಿ ತೋರಿಸಿ. ವಂದನೆಗಳು.
(ಲೇಖಕರು ಹಿರಿಯ ಸಾಹಿತಿ ಮತ್ತು ತಾಳಮದ್ದಳೆ ಕಲೆಯ ಅಭಿಮಾನಿ)