ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾರ್ಯಕರ್ತರನ್ನು ನಾಯಕರನ್ನಾಗಿಸಿದ್ದು ರಾಮಕೃಷ್ಣ ಹೆಗಡೆ

ಹೆಗಡೆ ಅವರೊಂದಿಗೆ ನನ್ನ ಪರಿಚಯ ಬಹಳ ಚಿಕ್ಕ ವಯಸ್ಸಿನ ಆರಂಭವಾಯಿತು. ನನ್ನ ತಂದೆಯ ವರು ಬಿ. ಎಂ.ನಾಡಗೌಡ ಅವರು ಅವರ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. ವೀರೇಂದ್ರ ಪಾಟೀಲರು, ಬಿ. ಎಂ.ನಾಡಗೌಡರು, ಶಂಕರೇಗೌಡರು, ರಾಮಕೃಷ್ಣ ಹೆಗಡೆ ಸೇರಿದಂತೆ ಹಲವರು ಎಸ್.ನಿಜಲಿಂಗಪ್ಪನವರ ಅನುಯಾಯಿಗಳಾಗಿದ್ದರು.

ಹೆಗಡೆ ಶತಮಾನೋತ್ಸವ

ಡಾ.ಎಂಪಿ.ನಾಡಗೌಡ

ರಾಜಕಾರಣ ಅಧಿಕಾರಕ್ಕಾಗಿ ಅಲ್ಲ, ಜನಸೇವೆಗಾಗಿ ಎಂಬುದನ್ನು ಬದುಕಿನುದ್ದಕ್ಕೂ ತೋರಿಸಿದ ರಾಮಕೃಷ್ಣ ಹೆಗಡೆ ಅವರ ನೆನಪು ಇಂದಿಗೂ ಅಜಾರಾಮರ. ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದವರ ಅನುಭವಗಳಲ್ಲಿ ಕಾಣಿಸುವ ಹೆಗಡೆ, ಕೇವಲ ಒಬ್ಬ ಮಾಜಿ ಮುಖ್ಯಮಂತ್ರಿ ಅಲ್ಲ. ಮುಂದಿನ ಪೀಳಿಗೆಯ ನಾಯಕರನ್ನು ಬೆಳೆಸಿದ ಮಾರ್ಗದರ್ಶಿ, ಕಾರ್ಯಕರ್ತರನ್ನು ಗೌರವಿಸಿದ ನಾಯಕ ಹಾಗೂ ದೂರದೃಷ್ಟಿಯ ಆಡಳಿತಗಾರ.

ಕರ್ನಾಟಕ ಕಂಡಂತಹ ಬಹಳ ಅಪರೂಪದ ರಾಜಕಾರಣಿಗಳಲ್ಲಿ ರಾಮಕೃಷ್ಣ ಹೆಗಡೆ ಅವರು ಒಬ್ಬರು. ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡಾಗ ಅದು ಕೇವಲ ಒಬ್ಬ ರಾಜಕಾರಣಿ ಮತ್ತು ಕಾರ್ಯಕರ್ತನ ನಡುವಿನ ಸಂಬಂಧವಾಗಿ ಕಾಣಿಸುವುದಿಲ್ಲ. ಅದು ಒಂದು ಕುಟುಂಬದ ಆತ್ಮೀಯತೆ, ಹಿರಿಯರ ಮಾರ್ಗ ದರ್ಶನ, ರಾಜಕೀಯದ ಪಾಠ ಮತ್ತು ಸಾರ್ವಜನಿಕ ಬದುಕಿನ ಮೌಲ್ಯಗಳನ್ನು ಕಲಿತ ದೀರ್ಘ ಪಯಣವಾಗಿ ಕಾಣುತ್ತದೆ.

ಹೆಗಡೆ ಅವರೊಂದಿಗೆ ನನ್ನ ಪರಿಚಯ ಬಹಳ ಚಿಕ್ಕ ವಯಸ್ಸಿನ ಆರಂಭವಾಯಿತು. ನನ್ನ ತಂದೆಯ ವರು ಬಿ. ಎಂ.ನಾಡಗೌಡ ಅವರು ಅವರ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. ವೀರೇಂದ್ರ ಪಾಟೀಲರು, ಬಿ. ಎಂ.ನಾಡಗೌಡರು, ಶಂಕರೇಗೌಡರು, ರಾಮಕೃಷ್ಣ ಹೆಗಡೆ ಸೇರಿದಂತೆ ಹಲವರು ಎಸ್.ನಿಜಲಿಂಗಪ್ಪನವರ ಅನುಯಾಯಿಗಳಾಗಿದ್ದರು.

ಹೀಗಾಗಿ ನಮ್ಮ ಕುಟುಂಬಕ್ಕೂ ಹೆಗಡೆ ಕುಟುಂಬಕ್ಕೂ ಆತ್ಮೀಯವಾದ ಸಂಪರ್ಕವಿತ್ತು. ನಮ್ಮ ತಂದೆಯವರನ್ನು ಹೆಗಡೆ ಅವರು ತಮ್ಮ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಅವರ ಮನೆ ಸಮಾರಂಭಗಳಿಗೆ ನಾವು ಹೋಗುತ್ತಿದ್ದೆವು. ನಮ್ಮ ಮನೆಯ ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೂ ಹೆಗಡೆ ಅವರು ಬರುತ್ತಿದ್ದರು. ಹೀಗೆ ರಾಜಕೀಯ ಸಂಬಂಧಕ್ಕಿಂತಲೂ ಮಿಗಿಲಾದ ಒಂದು ಆತ್ಮೀಯತೆ ಬಾಲ್ಯದ ನಿರ್ಮಾಣವಾಗಿತ್ತು. ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಯಲ್ಲಿದ್ದ ಸಂದರ್ಭದಲ್ಲಿ ಅನೇಕ ನಾಯಕರನ್ನು ಬಂಧಿಸಲಾಗುತ್ತಿತ್ತು.

ಇದನ್ನೂ ಓದಿ: Ramakrishna Hegde’s centenary: ರಾಮಕೃಷ್ಣ ಹೆಗಡೆ ಅತ್ಯಂತ ಪ್ರಾಮಾಣಿಕ ರಾಜಕಾರಣಿ, ಅವರಿಗೆ ಪ್ರಧಾನಿಯಾಗುವ ಸಾಮರ್ಥ್ಯವಿತ್ತು: ಸಿದ್ದರಾಮಯ್ಯ

ನನ್ನ ತಂದೆಯವರ ಹೆಸರೂ ಬಂಧನಕ್ಕೆ ಒಳಗಾಗುವವರ ಪಟ್ಟಿಯಲ್ಲಿತ್ತು. ಆ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಅವರು ಬಾಗಲಕೋಟೆಯಲ್ಲಿದ್ದ ನಮ್ಮ ಮನೆಗೆ ಬಂದಿದ್ದರು. ನನ್ನ ತಂದೆಯವರು, ನನ್ನನ್ನೂ ಬಂಧನ ಮಾಡ್ತಾರೆ. ನಾನು ಹೋಗ್ತೀನಿ, ತಯಾರಿದ್ದೀನಿ ಎಂದು ಹೇಳಿದ್ದರು. ಅದಕ್ಕೆ ಹೆಗಡೆ ಅವರು, ನೀವ್ಯಾಕೆ? ಹಿರಿಯರು ಇದ್ದೀರಿ. ನೀವಿ ಆರಾಮಾಗಿ ಇರಿ. ನಾವೆಲ್ಲ ಒಳಗೆ ಹೋಗ್ತೀವಿ ಎಂದು ಹೇಳಿದ್ದರು. ನಂತರ ಹೆಗಡೆ ಅವರನ್ನು ಬಂಧಿಸಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳುಹಿಸಲಾಯಿತು. ಆ ಸಂದರ್ಭದಲ್ಲಿ ನಾನು ಬೆಳಗಾವಿ ಮೆಡಿಕಲ್ ಕಾಲೇಜಿನಲ್ಲಿ ಹೌಸ್ ಮ್ಯಾನ್‌ಶಿಪ್ ಮಾಡುತ್ತಿದ್ದೆ. ಜೈಲಿನಲ್ಲಿದ್ದ ನಾಯಕರನ್ನು ಭೇಟಿ ಮಾಡಲು ಜನ ಬರುತ್ತಿದ್ದರು. ಆದರೆ ಜೈಲಿನಿಂದ ನೇರವಾಗಿ ಭೇಟಿಯಾಗಲು ಅವಕಾಶವಿರಲಿಲ್ಲ. ಅವರನ್ನು ಆಸ್ಪತ್ರೆಗೆ ಕರೆಸಬೇಕಾಗುತ್ತಿತ್ತು. ವೈದ್ಯನಾಗಿದ್ದ ಕಾರಣ, ಅಗತ್ಯ ವ್ಯವಸ್ಥೆ ಮಾಡಿಕೊಂಡು, ನಿಗದಿತ ದಿನಗಳಲ್ಲಿ ಅವರನ್ನು ಆಸ್ಪತ್ರೆಗೆ ಕರೆಸುವ ವ್ಯವಸ್ಥೆ ಮಾಡುತ್ತಿದ್ದೆ. ಆ ಮೂಲಕ ಹೆಗಡೆ ಅವರನ್ನು ಭೇಟಿ ಮಾಡುವ ಅವಕಾಶವೂ ಸಿಗುತ್ತಿತ್ತು. ಕಾರ್ಯಕರ್ತರ ಮೇಲೆ ಅವರಿಗೆ ಅಷ್ಟು ವಿಶ್ವಾಸವಿತ್ತು. ಕಾರ್ಯಕರ್ತರಿಗೆ ಗೌರವ ನೀಡುತ್ತಿದ್ದರು. ಕೇವಲ ಯಾರೋ ಒಬ್ಬರು ಬಂದು ಶಾಸಕ ಅಥವಾ ನಾಯಕನಾಗಬೇಕು ಎಂಬ ಮನೋಭಾವ ಅವರಿಗೆ ಇರಲಿಲ್ಲ. ಕಾರ್ಯಕರ್ತರ ಬದುಕು, ಅವರ ಪರಿಶ್ರಮ ಮತ್ತು ಅವರ ರಾಜಕೀಯ ಪಯಣಕ್ಕೆ ಅವರು ವಿಶೇಷ ಮಹತ್ವ ಕೊಡುತ್ತಿದ್ದರು.

1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು. ಅವರ ಮುಖ್ಯಮಂತ್ರಿ ಆಗುವ ಸಂದರ್ಭ ದಲ್ಲಿ ಸಾಕಷ್ಟು ರಾಜಕೀಯ ಚರ್ಚೆಗಳು ನಡೆದಿದ್ದವು. ಆದರೆ ಅಂತಿಮವಾಗಿ ಹೆಗಡೆ ಅವರೇ ಮುಖ್ಯಮಂತ್ರಿಯಾದರು. 1983ರಿಂದ 1985ರವರೆಗೆ ಅವರು ನೀಡಿದ ಕಾರ್ಯಕ್ರಮಗಳು ಬಹಳ ಅದ್ಭುತವಾಗಿದ್ದವು. ಹೆಗಡೆ ಅವರ ಆಡಳಿತದ ಪ್ರಮುಖ ಗುಣವೇ ಮುಂದೆ ಏನಾಗಬಹುದು ಎಂಬುದನ್ನು ಮುಂಚಿತವಾಗಿ ಯೋಚಿಸುವ ದೂರದೃಷ್ಟಿ.

ಹೆಗಡೆ ಸರಕಾರ ರೈತರಿಗೆ ಐದೂವರೆ ಪ್ರತಿಶತದಷ್ಟು ಸಬ್ಸಿಡಿ ನೀಡುವ ಕ್ರಮ ಕೈಗೊಂಡಿತು. ಆ ಮೂಲಕ ಹಿಂದಿನ ಬಡ್ಡಿಯನ್ನೂ ಒಳಗೊಂಡಂತೆ ಸಾಲದ ಭಾರದಿಂದ ರೈತರನ್ನು ಹೊರತರಲು ಕ್ರಮ ಕೈಗೊಳ್ಳಲಾಯಿತು ಜತೆಗೆ ಬ್ರಿಟಿಷರ ಕಾಲದಿಂದಲೂ ಇದ್ದ ಲೆವಿ ಪದ್ಧತಿ ಬಗ್ಗೆಯೂ ಅವರು ಪ್ರಶ್ನೆ ಎತ್ತಿದರು. ರೈತರು ಬೆಳೆದ ಬೆಳೆಯಲ್ಲಿ ಸರಕಾರಕ್ಕೆ ಒಂದು ಭಾಗ ಕಡ್ಡಾಯವಾಗಿ ನೀಡಬೇಕೆಂಬ ವ್ಯವಸ್ಥೆಯನ್ನು ಬದಲಿಸಿ, ರೈತ ತನ್ನ ಬೆಳೆಯನ್ನು ತಾನು ಬಯಸಿದ ಕಡೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವ ಅವಕಾಶ ಕಲ್ಪಿಸುವ ದಿಕ್ಕಿನಲ್ಲಿ ಕ್ರಮ ಕೈಗೊಂಡರು. ಇವು ಕೇವಲ ಸರಕಾರದ ಯೋಜನೆಗಳಲ್ಲ.

ರೈತನ ಸಮಸ್ಯೆಯ ಮೂಲವೇನು ಎಂಬುದನ್ನು ಅರ್ಥ ಮಾಡಿಕೊಂಡು ತೆಗೆದುಕೊಂಡ ನಿರ್ಧಾರ ಗಳು. ವಿದ್ಯಾರ್ಥಿಗಳಿಗೆ ತಿಂಗಳಿಗೆ ಹತ್ತು ಅಥವಾ ಹದಿನೈದು ರೂಪಾಯಿಯಂತಹ ಅಲ್ಪ ಮೊತ್ತದಲ್ಲಿ ಬಸ್ ಪಾಸ್ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಆ ಅವಕಾಶದಿಂದ ಕೆಲವರು ವಿದ್ಯಾಭ್ಯಾಸ ಮಾಡಿ, ಇಂದು ದೊಡ್ಡ ದೊಡ್ಡ ಉದ್ಯೋಗಗಳಲ್ಲಿ ಇದ್ದಾರೆ. ಒಂದು ಬಸ್ ಪಾಸ್ ಒಬ್ಬ ವಿದ್ಯಾರ್ಥಿಯ ಬದುಕನ್ನು ಬದಲಿಸಬಹುದು ಎಂಬುದನ್ನು ಅರ್ಥ ಮಾಡಿಕೊಂಡದ್ದು ಹೆಗಡೆ ಅವರ ದೂರದೃಷ್ಟಿ. ಮುಂದೆ ರಾಜಕೀಯ ಬೆಳವಣಿಗೆಗಳಲ್ಲಿ ಹೆಗಡೆ ಅವರಿಗೂ ಪಕ್ಷಕ್ಕೂ ಭಿನ್ನಾಭಿಪ್ರಾಯಗಳು ಬಂದವು. ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ ಸಂದರ್ಭವೂ ಬಂತು. ಆ ಸಂದರ್ಭದಲ್ಲಿ ನಾನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದೆ.

ಒಂದು ಕಡೆ ಪಕ್ಷದ ಜವಾಬ್ದಾರಿ, ಮತ್ತೊಂದು ಕಡೆ ಹೆಗಡೆ ಅವರೊಂದಿಗಿನ ದೀರ್ಘಕಾಲದ ಆತ್ಮೀಯತೆ ಎರಡರ ನಡುವೆ ಸಂಕಷ್ಟದಲ್ಲಿದ್ದೆವು. ಕೆಲವು ತಿಂಗಳು ಕಳೆದರೂ ಪರಿಸ್ಥಿತಿ ಬದಲಾಗ ಲಿಲ್ಲ. ಕೊನೆಗೆ ಏಳು ಮಂದಿ ವಿಧಾನ ಪರಿಷತ್ ಸದಸ್ಯರು ಒಂದಾಗಿ ಪಕ್ಷದಿಂದ ಹೊರಬಂದು ನಂತರ ರಾಷ್ಟ್ರೀಯ ನವ ನಿರ್ಮಾಣ ವೇದಿಕೆ ನಿರ್ಮಾಣವಾಯಿತು. ಅದು ರಾಜಕೀಯ ಪಕ್ಷವಾಗಿರಲಿಲ್ಲ, ವಿವಿಧ ಪಕ್ಷಗಳಲ್ಲಿದ್ದವರಿಗೂ ಬಂದು ಹೋಗಬಹುದಾದ ಒಂದು ವೇದಿಕೆ ಯಾಗಿತ್ತು.

ಕಾರ್ಯಕರ್ತನಿಂದ ನಾಯಕನನ್ನು ರೂಪಿಸುವ ಗುಣ ಹೆಗಡೆ ಅವರ ಅತ್ಯಂತ ದೊಡ್ಡ ಗುಣಗಳಲ್ಲಿ ಒಂದು. ತಮ್ಮ ಸುತ್ತಲಿದ್ದವರನ್ನು ಬೆಳೆಸುವ ಮನೋಭಾವ. ಯಾರನ್ನಾದರೂ ಒಮ್ಮೆ ಭೇಟಿಯಾಗಿ ಮರೆತುಬಿಡುವ ನಾಯಕನಲ್ಲ ಅವರು. ಒಬ್ಬ ವ್ಯಕ್ತಿಯಲ್ಲಿ ಸಾಮರ್ಥ್ಯ ಕಂಡರೆ ಅವರನ್ನು ಮುಂದಕ್ಕೆ ತರುವ ಪ್ರಯತ್ನ ಮಾಡುತ್ತಿದ್ದರು. ಅವರೊಂದಿಗೆ ಕೆಲಸ ಮಾಡಿದ ಅನೇಕರು ಮುಂದೆ ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಒಬ್ಬ ನಾಯಕನ ಶ್ರೇಷ್ಠತೆ ಆತ ಎಷ್ಟು ವರ್ಷ ಅಧಿಕಾರದಲ್ಲಿದ್ದ ಎಂಬುದರಿಂದ ಅಳೆಯಬೇಕಾ ಗಿಲ್ಲ. ಆತ ತನ್ನ ನಂತರ ಎಷ್ಟು ನಾಯಕರನ್ನು ಸೃಷ್ಟಿಸಿದ ಎಂಬುದರಿಂದ ಅಳೆಯಬೇಕು. ಹೆಗಡೆ ಅವರಿಗೆ ಅಧಿಕಾರವೇ ಅಂತಿಮ ಗುರಿಯಾಗಿರಲಿಲ್ಲ. ಅಧಿಕಾರವನ್ನು ಅವರು ಒಂದು ಸಾಧನವಾಗಿ ನೋಡುತ್ತಿದ್ದರು. ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಅಧಿಕಾರವನ್ನು ಗ್ರಾಮ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ, ಆಡಳಿತದಲ್ಲಿ ಉತ್ತರದಾಯಿತ್ವದ ಮಹತ್ವ, ಜನರೊಂದಿಗೆ ನೇರ ಸಂಪರ್ಕ, ರೈತರು ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳತ್ತ ಗಮನ ಇವೆಲ್ಲವೂ ಅವರ ರಾಜಕೀಯದ ವಿಭಿನ್ನ ಮುಖಗಳನ್ನು ತೋರಿಸುತ್ತವೆ.

ಅವರೊಂದಿಗೆ ಒಡನಾಟ ಹೊಂದಿದವರ ನೆನಪುಗಳಲ್ಲಿ ಹೆಗಡೆ ಅವರು ಇನ್ನೂ ಜೀವಂತ. ಅವರ ದೊಡ್ಡ ಕೊಡುಗೆ ಯಾವುದಾದರೂ ಒಂದು ಯೋಜನೆ ಅಥವಾ ಒಂದು ಹುದ್ದೆ ಮಾತ್ರವಲ್ಲ. ಅವರ ಕಾಲವನ್ನು ಸಂಪೂರ್ಣವಾಗಿ ಮರಳಿ ತರಲು ಸಾಧ್ಯವಿಲ್ಲ. ಆದರೆ ಅವರ ರಾಜಕೀಯದ ಮೌಲ್ಯ ಗಳನ್ನು, ಅವರ ದೂರದೃಷ್ಟಿಯನ್ನು, ಅವರ ಜನಪರ ಕಾಳಜಿಯನ್ನು ಮತ್ತು ಮುಖ್ಯವಾಗಿ ರಾಜಕಾರಣವನ್ನು ಜನಸೇವೆಯಾಗಿ ನೋಡುವ ಮನೋಭಾವ ಇಂದಿನ ಪೀಳಿಗೆಗೆ ಪರಿಚಯಿಸು ವುದು ಸಾಧ್ಯ. ಅದೇ ಅವರ ಶತಮಾನೋತ್ಸವದ ನೆನಪಿಗೆ ನಿಜವಾದ ಅರ್ಥ ನೀಡುವ ಕೆಲಸ.