ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Lokesh Kaayarga Column: ಕಟ್ಟುವುದು ಸರಕಾರದ ಕೆಲಸ, ಮುರಿಯುವುದಲ್ಲ !

ಆಧುನಿಕ ಬೆಂಗಳೂರು ನಗರ ಅಕ್ರಮ ಕಟ್ಟಡಗಳ ಬೃಹತ್ ಸಮುಚ್ಚಯ. ಇಲ್ಲಿ ಸುಮಾರು ಶೇ.80ರಷ್ಟು ಮನೆ, ಕಟ್ಟಡಗಳು ಒಂದಲ್ಲ, ಒಂದು ರೀತಿಯಲ್ಲಿ ನಿಯಮ ಉಲ್ಲಂಘಿಸಿವೆ. ದುರಂತವೆಂದರೆ, ಅಕ್ರಮ ಬಡಾವಣೆಗಳು ತಲೆ ಎತ್ತುವಾಗ ಅಥವಾ ಅಕ್ರಮ ಕಟ್ಟಡದ ಪಾಯ ಹಾಕುವಾಗ ಮೌನವಾಗಿರುವ ಆಡಳಿತ ವ್ಯವಸ್ಥೆ, ಬಡ, ಮಧ್ಯಮ ವರ್ಗದ ಜನರು ತಮ್ಮ ಜೀವಮಾನದ ಉಳಿತಾಯವನ್ನು ವ್ಯಯಿಸಿ ಮನೆ ಕಟ್ಟಿದ ನಂತರ ‘ಅನಧಿಕೃತ’ ಎಂಬ ಹಣೆಪಟ್ಟಿ ಹಚ್ಚಿ ಜೆಸಿಬಿ ಹಿಡಿದು ಬರುತ್ತದೆ.

ಲೋಕಮತ

ಬೆಂಗಳೂರಿನಂತಹ ಮಹಾನಗರಿಗೆ ಉದ್ಯೋಗ ಅರಸಿ ಬಂದು ದಶಕಗಳ ಕಾಲ ಈ ನಗರದ ಭಾಗವಾಗಿದ್ದವರು, ಮತ್ತೊಮ್ಮೆ ಹುಟ್ಟೂರಿನ ನೆಲೆ ಕಂಡುಕೊಳ್ಳುವುದು ಕಷ್ಟದ ಕೆಲಸ. ಕುಟುಂಬ ಪೋಷಣೆಯ ಜತೆ ಮಕ್ಕಳ ವಿದ್ಯಾಭ್ಯಾಸಕ್ಕೂ ಈ ಮಹಾನಗದಲ್ಲಿಯೇ ಓಂಕಾರ ಹಾಕಿದವರಿಗೆ ಇಲ್ಲಿಂದ ಕಳಚಿಕೊಂಡು ಹೊರಟು ಬಿಡುವುದು ಕಷ್ಟದ ಕೆಲಸ.

ಅಲ್ಲೂ ಇರಲಾಗದ, ಇಲ್ಲೂ ಇರಲಾಗದ ಮಧ್ಯಮ ವರ್ಗದ ಬಹುತೇಕರದ್ದು ತ್ರಿಶಂಕು ಬದುಕು. ಈ ನಡುವೆ ಬೆಂಗಳೂರಿನಲ್ಲಿ ಸೂರು ಕಟ್ಟಿಕೊಳ್ಳಬೇಕೆಂಬ ಆಸೆಯಿಂದ ತಮ್ಮ ಜೀವಮಾನ ವಿಡೀ ದುಡಿದ ಇಲ್ಲವೇ ಸಂಬಳದ ಮುಕ್ಕಾಲು ಭಾಗವನ್ನು ಇಎಂಐಗಳಿಗೆ ಸುರಿಯುವ ಜನರದ್ದು ಇನ್ನೊಂದು ಕಥೆ, ವ್ಯಥೆ. ಎಲ್ಲ ದಾಖಲೆಗಳನ್ನು ನೋಡಿ, ವಕೀಲರ ಅಭಿಪ್ರಾಯ ಪಡೆದು ಖರೀದಿಸಿದ ಸೈಟು ಅಥವಾ ಅಪಾರ್ಟ್‌ಮೆಂಟ್ ಇದ್ದಕ್ಕಿದ್ದಂತೆ ಅನಧಿಕೃತ ಎನಿಸಿಕೊಳ್ಳುತ್ತದೆ. ನೀವು ಕಟ್ಟಿದ ಮನೆ ಅಥವಾ ಅಪಾರ್ಟ್‌ಮೆಂಟ್ ಕೆಡವಲು ನೋಟಿಸ್ ನೀಡಲಾಗುತ್ತದೆ. ಅಲ್ಲಿಗೆ ನಿಮ್ಮ ಮುಂದಿನ ಬದುಕು ಪೂರ್ತಿ ನರಕ, ಕಗ್ಗತ್ತಲೆ.

ನಾನಿಲ್ಲಿ ಹೇಳ ಹೊರಟಿರುವುದು ಬೆಂಗಳೂರಿನ ಸಾಮಾನ್ಯ ಮಧ್ಯಮರ್ಗದ ಬಗ್ಗೆ. ಐಟಿ ಉದ್ಯೋಗದಲ್ಲಿದ್ದು ತಿಂಗಳಿಗೆ ಮೂರ್ನಾಲ್ಕು ಲಕ್ಷಕ್ಕಿಂತ ಹೆಚ್ಚು ವೇತನ ಪಡೆಯುವ ವರ್ಗಕ್ಕೂ ಇದು ದೊಡ್ಡ ಹೊಡೆತವಾದರೂ ಇವರು ಇಂತಹ ಏರಿಳಿತಗಳನ್ನು ಸಹಿಸಿಕೊಳ್ಳಬಹುದು. ಆದರೆ ಐದಂಕಿಯೊಳಗಿನ ವೇತನದಾರರಿಗೆ ಇಂತಹ ನೋಟಿಸ್ ಸಿಕ್ಕಿದರೆ ಅವರ ಬಾಳು ನರಕವಾಗುವುದು ಖಚಿತ.

ಪ್ರತಿ ಬಾರಿ ಬಿಡಿಎ, ಮುಡಾದಂತಹ ಸಂಸ್ಥೆಗಳು, ನಗರಪಾಲಿಕೆಗಳು ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಾಗ ಅಲ್ಲಿ ಒಂದಷ್ಟು ಹೃದಯ ವಿದ್ರಾವಕ ಸನ್ನಿವೇಶಗಳು ಕಾಣುತ್ತವೆ. ಯಾರೋ ಎದೆ ಬಡಿದುಕೊಂಡು ಅಳುತ್ತಿರುತ್ತಾರೆ. ಇನ್ಯಾರದೋ ಕಾಲಿಗೆ ಬಿದ್ದು ಅಂಗಲಾಚುತ್ತಾರೆ. ಯಾರ್ಯಾರಿಗೋ ಶಾಪ ಹಾಕುತ್ತಾರೆ. ಇವರಲ್ಲಿ ಎಲ್ಲರೂ ಅಮಾಯಕರೆಂದಲ್ಲ. ಆದರೆ ತಮ್ಮದಲ್ಲದ ತಪ್ಪಿಗೆ ಈ ಸುಳಿಯಲ್ಲಿ ಸಿಲುಕಿ ಒದ್ದಾಡಿದವರೇ ಹೆಚ್ಚು ಎನ್ನುವುದು ಸ್ಪಷ್ಟ.

ಇದನ್ನೂ ಓದಿ: Lokesh Kaayarga Column: ನಮ್ಮ ಮೆಟ್ರೋ, ನಿಮ್ಮದೂ ಆಗುವುದು ಯಾವಾಗ ?

ಸದ್ಯದ ಪರಿಸ್ಥಿತಿಯಲ್ಲಿ ನಗರ ಬಿಡಿ, ತಾಲ್ಲೂಕು ಕೇಂದ್ರದಲ್ಲೂ ಒಂದು ಸೈಟ್ ಖರೀದಿಸು ವುದು ಕಷ್ಟದ ಕೆಲಸ. ಬೆಂಗಳೂರಿನಲ್ಲಿ ಬಿಡಿಎ ಸೈಟ್‌ಗಳ ಹಂಚಿಕೆ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿಯೇ ಕೊನೆಯಾಗಿತ್ತು. ಅನಂತರ ಈ ನಗರ ಬೆಳೆದಿದ್ದು ಖಾಸಗಿ ಡೆವಲಪರ್‌ಗಳ ಮೂಲಕವೇ. ಈ ಡೆವಲಪರ್‌ಗಳ ಪೈಕಿ ಪತ್ರಿಕೆಯಲ್ಲಿ ದೊಡ್ಡ ಮಟ್ಟದ ಜಾಹೀರಾತು ಕೊಟ್ಟವರ ಸೈಟ್‌ಗಳು ಮಧ್ಯಮ ವರ್ಗಕ್ಕೆ ಎಟುಕಲಾರದ ಸ್ಥಿತಿಯಲ್ಲಿದ್ದವು. ಆಗ ಸಣ್ಣ ಪುಟ್ಟ ಡೆವಲಪರ್‌ಗಳು ನಿರ್ಮಿಸಿದ ಖಾಸಗಿ ಲೇಔಟ್‌ಗಳು ಮಧ್ಯಮ ವರ್ಗಕ್ಕೆ ಆಕರ್ಷಣೀಯ ಎನಿಸಿದವು.

ಬೆಂಗಳೂರಿನಿಂದ 30-40 ಕಿ.ಮೀ. ದೂರವಾದರೂ ಪರವಾಗಿಲ್ಲ. ಮುಂದೊಂದು ದಿನ ಈ ನಗರ ಅಲ್ಲಿವರೆಗೂ ಬೆಳೆಯಲಿದೆ ಎಂದು ನಂಬಿ ಜನ ಸೈಟ್ ಖರೀದಿಸಿದರು. ಕೆಲವರು ಅಪಾರ್ಟ್‌ಮೆಂಟ್ ಖರೀದಿಸಿದರು. ಐಟಿ, ಬಿಟಿಯವರು, ಸರಕಾರಿ ಉದ್ಯೋಗಿಗಳು, ಖಾಸಗಿ ಕಂಪನಿಗಳ ಉದ್ಯೋಗಸ್ಥರು ಮುಗಿ ಬಿದ್ದು ನಿವೇಶನ ಖರೀದಿಸಿದರು. ಅಂದು ಈ ಸೈಟ್‌ಗಳು ವಸತಿ ಸಮುಚ್ಚಯಗಳ ದಾಖಲೆಗಳೆಲ್ಲವೂ ಸಕ್ರಮವಾಗಿಯೇ ಇದ್ದವು. ಬಡಾವಣೆಗೆ ಅಲ್ಲಿನ ಸ್ಥಳೀಯ ಪ್ರಾಧಿಕಾರದಿಂದ ಪಡೆದ ಅನುಮತಿ ಪತ್ರ ಇಲ್ಲವೇ ನಿರಾಕ್ಷೇಪಣಾ ಪತ್ರಗಳಿದ್ದವು.

ಸಕ್ಷಮ ಪ್ರಾಧಿಕಾರದಿಂದ ಏನೆಲ್ಲ ದಾಖಲೆಗಳು ಬೇಕಿತ್ತೋ ಅವೆಲ್ಲವೂ ಇದ್ದವು. ಇದನ್ನು ನಂಬಿ ರಾಷ್ಟ್ರೀಕೃತ ಬ್ಯಾಂಕುಗಳು ನಿವೇಶನ ಖರೀದಿಗೆ ಸಾಲ ನೀಡಿದ್ದವು. ಈ ದಾಖಲೆಗಳ ಆಧಾರದಲ್ಲಿಯೇ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಧಿಕಾರಿಗಳು ಕ್ರಯಪತ್ರ ನೋಂದಣಿ ಮಾಡಿದ್ದರು. ಈಗ ಇದ್ದಕ್ಕಿದ್ದಂತೆ ಇಲ್ಲಿನ ನಿವಾಸಿಗಳು ನೋಟಿಸ್ ಪಡೆಯುತ್ತಿದ್ದಾರೆ. ನೀವಿರುವುದೇ ಅಕ್ರಮ, ಜಾಗ ತೆರವು ಮಾಡಿ, ದಂಡ ಕಟ್ಟಿ, ಸಕ್ರಮ ಮಾಡಿಕೊಳ್ಳಿ ಎಂದು ಅಧಿಕಾರಿಗಳು ದಬಾಯಿಸುತ್ತಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎರಡು ತಿಂಗಳ ಹಿಂದೆ ನೀಡಿದ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿರುವ ಒಟ್ಟು ಕಟ್ಟಡಗಳಲ್ಲಿ ಶೇ.70ರಷ್ಟು ಕಟ್ಟಡಗಳು ತಾಂತ್ರಿಕ ವಾಗಿ ಅನಧಿಕೃತ ಅಥವಾ ನಿಯಮಗಳನ್ನು ಉಲ್ಲಂಘಿಸಿ ಕಟ್ಟಲಾಗಿವೆ. ಬಿಬಿಎಂಪಿ ನಡೆಸಿದ ಸರ್ವೆಯಲ್ಲಿ 2024ರ ಅಂತ್ಯದ ವೇಳೆಗೆ ಬೆಂಗಳೂರಿನಲ್ಲಿ ಸುಮಾರು 2.47 ಲಕ್ಷಕ್ಕೂ ಹೆಚ್ಚು ಅನಧಿಕೃತ ಕಟ್ಟಡಗಳನ್ನು ಗುರುತಿಸಲಾಗಿತ್ತು.

JCB R

ಇನ್ನು ಬೆಂಗಳೂರಿನಲ್ಲಿ ಇಂತಹ ಸುಮಾರು 6.5 ಲಕ್ಷ ಬಿ-ಖಾತಾ ಆಸ್ತಿಗಳಿವೆ ಎನ್ನುವುದು ಸರಕಾರದ ಅಂದಾಜು. ಈ ಲೆಕ್ಕ ಸದ್ಯದ ಗ್ರೇಟರ್ ಬೆಂಗಳೂರು ವ್ಯಾಪ್ತಿಯದ್ದು. ಬೆಂಗಳೂರು ಹೊರವಲಯದಲ್ಲಿ ಗ್ರಾಮಠಾಣಾ ವ್ಯಾಪ್ತಿಯಲ್ಲಿರುವ ನಿವೇಶನಗಳನ್ನು ಸೇರಿಸಿದರೆ ಇವುಗಳ ಸಂಖ್ಯೆ 10 ಲಕ್ಷ ದಾಟಬಹುದು.

ನೆನಪಿರಲಿ, ಈ ಅನಧಿಕೃತ ಕಟ್ಟಡಗಳಲ್ಲಿ ಇದನ್ನು ಕಟ್ಟಿದ ಬಿಲ್ಡರ್ ವಾಸ ಮಾಡುವುದಿಲ್ಲ. ಲೇ ಔಟ್ ರಚಿಸಿ ಮಾರಾಟವಾದ ಬಳಿಕ ಡೆವಲಪರ್‌ಗಳೂ ಅಡ್ರೆಸ್ ಬದಲಿಸುತ್ತಾರೆ. ಬಿಲ್ಡರ್ ತೋರಿಸಿದ ದಾಖಲೆ ನಂಬಿ, ಲಕ್ಷಾಂತರ, ಕೋಟ್ಯಂತರ ರು. ಕೊಟ್ಟು ಪ್ಲ್ಯಾಟ್/ ಮನೆ ಖರೀದಿಸಿದವರು, ಅಧಿಕೃತ ಎಂದು ನಂಬಿ ನಿವೇಶನ ಖರೀದಿಸಿದವರು ಸರಕಾರದ ದೃಷ್ಟಿ ಯಲ್ಲಿ ಈಗ ಅಪರಾಧಿಗಳು !

ಹಾಗಿದ್ದರೆ ಇಷ್ಟೊಂದು ದೊಡ್ಡ ಪ್ರಮಾಣದ ಅಕ್ರಮ ನಡೆದರೂ ಸರಕಾರ, ಅಧಿಕಾರಿಗಳು ಏನು ಮಾಡುತ್ತಿದ್ದರು? ಇವರು ಕಣ್ಣು ಮುಚ್ಚಿ ನೀಡಿದ ಅನುಮತಿ ಪತ್ರ, ನಿರಾಕ್ಷೇಪಣಾ ಪತ್ರ, ಹಕ್ಕುಪತ್ರಳನ್ನು ಪಡೆದೇ ಇಲ್ಲಿ ಜನ ವಾಸ್ತವ್ಯ ಹೂಡಿದ್ದಾರೆ. ನಿವೇಶನ ಖರೀದಿಸಿ ಮನೆ ಕಟ್ಟಿಕೊಂಡಿದ್ದಾರೆ. ಈ ಅಧಿಕಾರಿಗಳಿಗೆ, ಈ ಅಕ್ರಮಗಳನ್ನು ಮುಚ್ಚಿಟ್ಟು ಮಾರಾಟ ಮಾಡಿದ ಡೆವಲಪರ್‌ಗಳಿಗೆ, ಬಿಲ್ಡರ್‌ಗಳಿಗೆ, ಇದೇ ದುಡ್ಡಲ್ಲಿ ಚುನಾವಣೆಗೆ ನಿಂತು ಶಾಸಕ ರಾದವರಿಗೆ, ಮಂತ್ರಿಗಳಾದವರಿಗೆ ಏನು ಶಿಕ್ಷೆ ? ನೋಂದಣಿ ಶುಲ್ಕ ವಸೂಲಿ ಮಾಡಿದ, ದುಡ್ಡು ಪಡೆದು ನಕ್ಷೆ ಕೊಟ್ಟ, ಖಾತಾ ಮಾಡಿ ಕೊಟ್ಟ, ನೋಂದಣಿ ಮಾಡಿಸಿಕೊಂಡ ಸರಕಾರ ಈ ವಿಚಾರದಲ್ಲಿ ಯಾಕೆ ಮುಖ್ಯ ಆರೋಪಿಯಾಗುವುದಿಲ್ಲ ? ಇದು ಬೆಂಗಳೂರು ಮಾತ್ರವಲ್ಲ, ಒತ್ತುವರಿ ತೆರವು ಅಭಿಯಾನ ನಡೆಯುತ್ತಿರುವ ರಾಜ್ಯದ ಎಲ್ಲ ಪ್ರಮುಖ ನಗರಗಳ ಸಂತ್ರಸ್ತರ ಪ್ರಶ್ನೆ.

ಅಧಿಕಾರಿಗಳ ಪ್ರಕಾರ ಒತ್ತುವರಿ/ ತೆರವು/ ನೆಲಸಮಕ್ಕೆ ನೋಟಿಸ್ ಪಡೆದ ಅಪಾರ್ಟ್‌ ಮೆಂಟ್, ಮನೆಗಳಲ್ಲಿ ನಕ್ಷೆ ಉಲ್ಲಂಘನೆಯಾಗಿದೆ. ಅನುಮತಿ ಪಡೆದ ನಕ್ಷೆಗಿಂತ ಹೆಚ್ಚಿನ ಅಂತಸ್ತುಗಳನ್ನು ಕಟ್ಟಲಾಗಿದೆ. ಕೆಲವು ಅನಧಿಕೃತ ಲೇಔಟ್‌ಗಳಲ್ಲಿ ನಿರ್ಮಿಸಲಾದ ಕಟ್ಟಡ ಗಳು. ಇನ್ನು ಕೆಲವಕ್ಕೆ ಕಟ್ಟಡದ ಸುತ್ತ ಬಿಡಬೇಕಾದ ಸೆಟ್ ವಿಡ್ತ್‌ ಜಾಗವನ್ನು ಬಿಟ್ಟಿಲ್ಲ. ಇನ್ನೊಂದಷ್ಟು ನೀರಿನ ಕಾಲುವೆಗಳ ಮೇಲೆ ಅಥವಾ ಬಫರ್ ಝೋನ್‌ನಲ್ಲಿ ನಿರ್ಮಾಣ ವಾಗಿವೆ. ನಿವೇಶನಗಳ ವಿಚಾರಕ್ಕೆ ಬಂದರೆ ಅಧಿಕೃತ ಲೇಔಟ್ ಆದರೂ ಕೆಲವು ಸೈಟ್‌ಗಳ ರಿಲೀಸ್ ಆರ್ಡರ್ ಸಿಕ್ಕಿಲ್ಲ. ಇನ್ನೂ ಏನೇನೋ ತಾಂತ್ರಿಕ ಕಾರಣಗಳು. ಇವುಗಳಲ್ಲಿ ಕೆಲವು ನಿಜಕ್ಕೂ ಗಂಭೀರ ಉಲ್ಲಂಘನೆಗಳು. ಆದರೆ 30-40 ಚದಡಿಯಲ್ಲಿ ನಿರ್ಮಾಣ ಗೊಂಡ ಮನೆ ಮೂರಡಿ ಸೆಟ್ ವಿಡ್ತ್‌ ಬಿಟ್ಟಿಲ್ಲ ಎನ್ನುವ ಕಾರಣಕ್ಕೆ ಅಕ್ರಮ ಎಂದಾಗುವು ದಾದರೆ ಬೆಂಗಳೂರಿನ ಶೇ. 99ರಷ್ಟು ಮನೆಗಳು ಅಕ್ರಮ ಎನಿಸಿಕೊಳ್ಳುತ್ತವೆ!

ಬೆಂಗಳೂರು ಇಂದು ಜಾಗತಿಕ ಮಟ್ಟದ ನಗರವಾಗಿ ಬೆಳೆದಿದೆ. ಆದರೆ ಬೆಂಗಳೂರನ್ನು ಸಿಂಗಾಪುರವನ್ನಾಗಿ ಮಾಡುತ್ತೇವೆ ಎಂಬ ಮಾತು ಬರೀ ಬೊಗಳೆ. ಆಧುನಿಕ ಬೆಂಗಳೂರು ನಗರ ಅಕ್ರಮ ಕಟ್ಟಡಗಳ ಸಮುಚ್ಚಯ. ಇಲ್ಲಿರುವ ಒಟ್ಟು ಕಟ್ಟಡಗಳಲ್ಲಿ ಸುಮಾರು ಶೇ.80ರಷ್ಟು ಕಟ್ಟಡಗಳು ಒಂದಲ್ಲ, ಒಂದು ರೀತಿಯಲ್ಲಿ ನಿಯಮ ಉಲ್ಲಂಘಿಸಿವೆ. ದುರಂತ ವೆಂದರೆ, ಅಕ್ರಮ ಬಡಾವಣೆಗಳು ತಲೆ ಎತ್ತುವಾಗ ಅಥವಾ ಅಕ್ರಮ ಕಟ್ಟಡದ ಪಾಯ ಹಾಕುವಾಗ ಮೌನವಾಗಿರುವ ಆಡಳಿತ ವ್ಯವಸ್ಥೆ, ಬಡ, ಮಧ್ಯಮ ವರ್ಗದ ಜನರು ತಮ್ಮ ಜೀವಮಾನದ ಉಳಿತಾಯವನ್ನು ವ್ಯಯಿಸಿ ಮನೆ ಕಟ್ಟಿದ ನಂತರ ‘ಅನಧಿಕೃತ’ ಎಂಬ ಹಣೆ ಪಟ್ಟಿ ಹಚ್ಚಿ ಜೆಸಿಬಿ ಹಿಡಿದು ಬರುತ್ತದೆ.

ಸಮೀಕ್ಷೆಯೊಂದರ ಪ್ರಕಾರ ರಾಜ್ಯದ ನಗರ ವ್ಯಾಪ್ತಿಗಳಲ್ಲಿ ನಿರ್ಮಾಣವಾಗುವ ಪ್ರತಿ 10 ಕಟ್ಟಡಗಳಲ್ಲಿ 8 ಕಟ್ಟಡಗಳು ಮಂಜೂರಾದ ನಕ್ಷೆಗಿಂತ ಹೆಚ್ಚಿನ ಅಂತಸ್ತುಗಳನ್ನು ಹೊಂದಿರುತ್ತವೆ. ಅಥವಾ ಸೆಟ್-ಬ್ಯಾಕ್ ನಿಯಗಳನ್ನು ಉಲ್ಲಂಘಿಸಿರುತ್ತವೆ. ಕಟ್ಟಡ ನಕ್ಷೆಗೆ ಅನುಮತಿ ನೀಡಿದ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ನಕ್ಷೆ ಮಂಜೂರಾದ ಬಳಿಕ ಸ್ಥಳಕ್ಕೆ ಭೇಟಿ ಕೊಟ್ಟು ನಿಯಮಾನುಸಾರ ಕಟ್ಟಡ ಕಟ್ಟಲಾಗುತ್ತಿದೆಯೇ ಎಂದು ಪರಿಶೀಲಿಸಬೇಕು. ಆದರೆ ಇದು ನಿಯಮಗಳು ಮಾತ್ರ. ಇದುವರೆಗೂ ಯಾವ ಕಟ್ಟಡವೂ ನಿಯಮ ಉಲ್ಲಂಘನೆಗಾಗಿ ನಿರ್ಮಾಣ ಹಂತದಲ್ಲಿ ನೆಲಸಮವಾದ ಉದಾಹರಣೆಗಳಿಲ್ಲ.

ಒಂದು ಬಡಾವಣೆ ನಿರ್ಮಾಣವಾಗಲು ಕನಿಷ್ಠ 1ರಿಂದ 2 ವರ್ಷ ಬೇಕು. ಒಂದು ಬಹು ಮಹಡಿ ಕಟ್ಟಡಕ್ಕೆ ಕನಿಷ್ಠ 2ರಿಂದ 3 ವರ್ಷ ಬೇಕು. ಈ ಅವಧಿಯಲ್ಲಿ ವಾರ್ಡ್ ಮಟ್ಟದ ಇಂಜಿನಿಯರ್‌ಗಳು, ರೆವೆನ್ಯೂ ಇನ್ಸ್‌ಪೆಕ್ಟರ್‌ಗಳು ಒಮ್ಮೆಯೂ ಆ ಸ್ಥಳಕ್ಕೆ ಭೇಟಿ ನೀಡುವು ದಿಲ್ಲ. ನೀಡಿದರೂ ‘ಮಾಮೂಲಿ’ ಪಡೆದು, ದಂಡ ವಿಧಿಸಿ ಸುಮ್ಮನಾಗುತ್ತಾರೆ. ಕಟ್ಟಡ ಕುಸಿದಾಗ ಅಥವಾ ಕೋರ್ಟ್ ತರಾಟೆಗೆ ತೆಗೆದುಕೊಂಡಾಗ ಮಾತ್ರ ಅಧಿಕಾರಿಗಳು ಕಾರ್ಯಾ ಚರಣೆಗೆ ಇಳಿಯುತ್ತಾರೆ.

ಬಿ-ಖಾತಾ ಆಸ್ತಿಗಳಿಂದ ಸರಕಾರವು ಆಸ್ತಿ ತೆರಿಗೆಯನ್ನು ವಸೂಲಿ ಮಾಡುತ್ತದೆ, ಆದರೆ ಅವುಗಳಿಗೆ ಬೇಕಾದ ಮೂಲಸೌಕರ್ಯ ನೀಡಲು ಹಿಂದೇಟು ಹಾಕುತ್ತದೆ. ಪ್ರತಿ ಚುನಾವಣೆ ಯ ಸಂದರ್ಭದಲ್ಲಿಯೂ ‘ಅಕ್ರಮ-ಸಕ್ರಮ’ ಮಾಡುತ್ತೇವೆ ಎಂಬ ಭರವಸೆ ನೀಡಲಾಗುತ್ತದೆ. ಸರಕಾರದ ಸಕ್ರಮ ಆಮಿಷದ ಧೈರ್ಯದಲ್ಲಿಯೇ ಹೆಚ್ಚಿನವರು ನಿವೇಶನ, ಮನೆ ಖರೀದಿ ಮಾಡಿದ್ದಾರೆ. ನಗರಗಳಲ್ಲಿ ಮನೆ ಕಟ್ಟುವುದು, ನಿವೇಶನ ಖರೀದಿ ಮಾಡುವುದೆಂದರೆ ಅದೊಂದು ಜೂಜು. ಸ್ವಂತ ಸೂರಿನ ಕನಸು ಹೊತ್ತರೆ ಈ ಜೂಜಾಟ ಅನಿವಾರ್ಯ.

ಒಂದು ವಾರ್ಡ್‌ನಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾದರೆ, ಅದಕ್ಕೆ ಸಂಬಂಧಪಟ್ಟ ವಾರ್ಡ್ ಇಂಜಿನಿಯರ್ ಮತ್ತು ಕಂದಾಯ ಅಧಿಕಾರಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಿ, ಅವರ ಸಂಬಳ ಮತ್ತು ಪಿಂಚಣಿಯನ್ನು ತಡೆಹಿಡಿಯುವುದು ಮಾತ್ರವಲ್ಲ ಜೈಲಿಗಟ್ಟುವ ಕೆಲಸ ಆಗಬೇಕು. ಅಕ್ರಮ ಬಡಾವಣೆಗಳಿಗೆ ನಿರಾಕ್ಷೇಪಣಾ ಪತ್ರ, ಖಾತಾ, ಹಕ್ಕು ಪತ್ರ ನೀಡಿದವರನ್ನು, ನೋಂದಣಿ ಮಾಡಿದ ಅಧಿಕಾರಿಗಳನ್ನೂ ಜೈಲಿಗೆ ತಳ್ಳಬೇಕು. ಮಾತ್ರವಲ್ಲ ಖೊಟ್ಟಿ ದಾಖಲೆಗಳನ್ನು ಕೊಟ್ಟು ಜನರನ್ನು ಯಾಮಾರಿಸಿದ ಡೆವಲಪರ್‌ಗಳು, ಬಿಲ್ಡರ್‌ ಗಳನ್ನೂ ಕಂಬಿ ಹಿಂದೆ ಕಳುಹಿಸಬೇಕು. ಆಗ ಯಾವ ಅಕ್ರಮ, ಸಕ್ರಮವೂ ಅಗತ್ಯವಿಲ್ಲ. ಆದರೆ ಇಂತಹ ಕ್ರಮಕ್ಕೆ ಮುಂದಾದರೆ ಇಂದು ವಿಧಾನ ಸೌಧದಲ್ಲಿ ಕುಳಿತ ಅನೇಕರು ಜೈಲು ಪಾಲಾಗಬಹುದು.

ಬೆಂಗಳೂರಿನಲ್ಲಿ ‘ಅಕ್ರಮ’ ಎಂಬುದು ಕೇವಲ ಕಟ್ಟಡ ಮಾಲೀಕರ ತಪ್ಪಲ್ಲ; ಅದು ಆಡಳಿತ ವ್ಯವಸ್ಥೆಯ ವ್ಯವಸ್ಥಿತ ವೈಫಲ್ಯ. ಸರಕಾರವು ‘ಅಕ್ರಮ-ಸಕ್ರಮ’ ಎಂಬ ರಾಜಕೀಯ ತಂತ್ರದ ಹಿಂದೆ ಬೀಳದೆ, ಒಂದಿಂಚೂ ಅಕ್ರಮವೂ ನಡೆಯದಂತೆ ತಡೆಯುವ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಅಳವಡಿಸಿಕೊಂಡಿದ್ದರೆ ಈ ದಂಧೆಗೆ ಅವಕಾಶವೇ ಇರಲಿಲ್ಲ.

ಇಲ್ಲಿ ‘ಅಕ್ರಮ’ ಎನ್ನುವುದು ಅಚಾತುರ್ಯವಲ್ಲ, ಅದು ವ್ಯವಸ್ಥಿತವಾಗಿ ನಡೆಯುತ್ತಿರುವ ಬಹುಕೋಟಿ ರುಪಾಯಿಗಳ ಅಕ್ರಮದ ಗಣಿ. ನಗರದ ಯೋಜಿತ ಬೆಳವಣಿಗೆಯನ್ನು ಬುಡಮೇಲು ಮಾಡಿದ ಈ ದಂಧೆಯಲ್ಲಿ ಅಧಿಕಾರಿಗಳು ಮತ್ತು ಸರಕಾರ ಸಮಾನ ಪಾಲುದಾರರು. ಕೋಗಿಲು ಬಡಾವಣೆಯಲ್ಲಿ ಇತ್ತೀಚೆಗೆ ನಡೆದ ನಾಟಕೀಯ ಬೆಳವಣಿಗೆಗಳು ಇದಕ್ಕೆ ತಾಜಾ ಸಾಕ್ಷಿ. ಇದು ಕೇವಲ ಒಂದು ಪ್ರದೇಶದ ಸಮಸ್ಯೆಯಲ್ಲ. ಭ್ರಷ್ಟ ವ್ಯವಸ್ಥೆ ಹೇಗೆ ಕಾರ್ಯಾಚರಿಸುತ್ತದೆ ಎನ್ನುವುದಕ್ಕೆ ದೃಷ್ಟಾಂತ.

ಬೆಂಗಳೂರಿನಲ್ಲಿ ಮತ್ತು ರಾಜ್ಯದ ಉಳಿದ ನಗರ, ಪಟ್ಟಣಗಳಲ್ಲಿ ಜೆಸಿಬಿಗಳು ಜನಸಾಮಾನ್ಯ ರ ಮನೆಯ ಮುಂದೆ ಗರ್ಜಿಸುವುದನ್ನು ನಿಲ್ಲಿಸಿ, ಅಕ್ರಮದ ಮೂಲವಾದ ಭ್ರಷ್ಟ ಅಧಿಕಾರಿ ಗಳು ಮತ್ತು ಸ್ವಾರ್ಥಿ ನಾಯಕರ ಮನೆಯನ್ನು ಕೆಡವಬೇಕಿದೆ. ಅಕ್ರಮ ಸಕ್ರಮ, ಒತ್ತುವರಿ ತೆರವು ನೆಪದಲ್ಲಿ ನೆಲಸಮಗೊಂಡ ಸಾವಿರಾರು ಕಟ್ಟಡಗಳು, ಕೈ ತಪ್ಪಿದ ನಿವೇಶನಗಳು, ಇಲ್ಲಿ ಹರಿದ ನಿವಾಸಿಗಳ ಕಣ್ಣೀರು, ವ್ಯರ್ಥವಾದ ಸಾವಿರಾರು ಕೋಟಿ ರುಪಾಯಿ ಬೆವರಿನ ಹಣ, ತರೆಗೆಲೆಯಾದ ಪ್ರಾಮಾಣಿಕ ಜನರ ಬದುಕು..ಇವೆಲ್ಲವೂ ಸರಕಾರದ ನಿರ್ದಯತೆಗೆ ಸಾಕ್ಷಿಯಾಗುತ್ತವೆ. ಜನಪರ ಸರಕಾರವೊಂದು ಸಮಾಜವನ್ನು ಕಟ್ಟುವ ಕೆಲಸಕ್ಕೆ ಆದ್ಯತೆ ನೀಡಬೇಕೇ ಹೊರತು ಮುರಿಯುವ ಕೆಲಸ ಮಾಡಬಾರದು.

ಲೋಕೇಶ್​ ಕಾಯರ್ಗ

View all posts by this author