ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sadhanashree Column: ಆರೋಗ್ಯವನ್ನು ಗರಿಷ್ಠಗೊಳಿಸುವ ಕಾಲವಿದು

ಹೇಮಂತ ಋತುವು ಆರೋಗ್ಯದ ದೃಷ್ಟಿಯಿಂದ ಮಹತ್ತರವಾದದ್ದು. ಇದು ದೇಹಬಲವು ಗರಿಷ್ಠವಾಗಿರುವ ಕಾಲ ಎನ್ನುತ್ತದೆ ಆಯುರ್ವೇದ. ಪ್ರಕೃತಿಯ ಶೀತಲತೆಯ ಪರಿಣಾಮ ವಾಗಿ ಆಂತರಿಕ ಜಠರಾಗ್ನಿಯು (ಜೀರ್ಣಶಕ್ತಿ) ಅತ್ಯಂತ ಬಲಿಷ್ಠವಾಗುತ್ತದೆ. ಆದ್ದರಿಂದ ದೇಹಕ್ಕೆ ಹೆಚ್ಚಿನ ಆಹಾರ ಬೇಕಾಗುತ್ತದೆ. ಈ ಕಾಲದಲ್ಲಿ ಸೂಕ್ತ ಆಹಾರವನ್ನು ಕೊಟ್ಟರೆ ದೇಹದ ರಸ ಧಾತುವು ಸಮೃದ್ಧವಾಗಿ ರೂಪಗೊಂಡು ಆರೋಗ್ಯವು ಉತ್ತಮವಾಗುತ್ತದೆ.

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಭಾರತೀಯ ಜೀವನಪದ್ಧತಿಯು ಪ್ರಕೃತಿಯ ಚಕ್ರಗಳ ಜತೆ ಹೆಜ್ಜೆಯಿಡುತ್ತ ಬಂದಿದೆ. ಋತು ಗತ ಬದಲಾವಣೆಗಳಿಗೆ ತಕ್ಕಂತೆ ಆಹಾರ ಮತ್ತು ಜೀವನಶೈಲಿಯನ್ನು ಹೊಂದಿಸಿಕೊಳ್ಳುವ ಕಲೆಯೇ ಆಯುರ್ವೇದದಲ್ಲಿ ‘ಋತುಚರ್ಯೆ’ ಎಂದು ಪ್ರಸಿದ್ಧ. ಸ್ವಾಸ್ಥ್ಯದ ಅನುಭವದಿಂದ ದೂರವಾಗುತ್ತಿರುವ ನಮಗೆ ಇಂದು ಈ ಋತುಚರ್ಯೆಯು ಮತ್ತೆ ಬಹಳ ಅಗತ್ಯವಾಗಿದೆ. ಹೇಮಂತದ ವೈಶಿಷ್ಟ್ಯ,

ದೇಹದ ಮೇಲಿನ ಅದರ ಪರಿಣಾಮ, ಈ ಋತುವಿನಲ್ಲಿ ಅನುಸರಿಸಬೇಕಾದ ಆಯುರ್ವೇ ದೀಯ ಜೀವನಶೈಲಿ ವಿಧಾನಗಳನ್ನು ಇಂದು ತಿಳಿಯೋಣ.

ಆಯುರ್ವೇದವು ಋತುಗಳನ್ನು ೬ ಭಾಗಗಳಾಗಿ ವಿಂಗಡಿಸುತ್ತದೆ: ಶಿಶಿರ, ವಸಂತ, ಗ್ರೀಷ್ಮ, ವರ್ಷ, ಶರದ್ ಮತ್ತು ಹೇಮಂತ. ಈ ೬ ಋತುಗಳನ್ನು ಮತ್ತೆ ೨ ವಿಭಾಗಗಳಾಗಿ ವಿಂಗಡಿಸ ಲಾಗುತ್ತದೆ:

೧. ಉತ್ತರಾಯಣ: ಆದಾನ ಕಾಲ (ಶಕ್ತಿಯ ಕುಗ್ಗುವ ಕಾಲ). ಶಿಶಿರ, ಸಂತ ಮತ್ತು ಗ್ರೀಷ್ಮ ಋತುಗಳು ಈ ಅವಧಿಗೆ ಸೇರಿವೆ. ಈ ಸಮಯದಲ್ಲಿ ಸೂರ್ಯನ ಉಗ್ರತೆಯಿಂದ, ಗಾಳಿಯ ಒಣತನದಿಂದ ದೇಹದ ನೈಸರ್ಗಿಕ ತೇವಾಂಶವು ಶೋಷಿತವಾಗುತ್ತದೆ. ಹೀಗೆ ದೇಹಬಲ ನಿಧಾನವಾಗಿ ಕುಗ್ಗುತ್ತಾ ಹೋಗುತ್ತದೆ.

೨. ದಕ್ಷಿಣಾಯಣ: ವಿಸರ್ಗ ಕಾಲ (ಶಕ್ತಿ ಹೆಚ್ಚಾಗುವ ಕಾಲ). ವರ್ಷ, ಶರದ್ ಮತ್ತು ಹೇಮಂತ ಋತುಗಳು ದಕ್ಷಿಣಾಯಣದಡಿ ಬರುತ್ತವೆ. ಈ ಸಂದರ್ಭದಲ್ಲಿ ಸೂರ್ಯನ ಪ್ರಭಾವವು ಕಡಿಮೆಯಾಗಿ ಚಂದ್ರನ ಶೀತಲ ಮತ್ತು ಸೌಮ್ಯ ಗುಣಗಳು ಹೆಚ್ಚಾಗುತ್ತವೆ; ದೇಹಕ್ಕೆ ಶಕ್ತಿ, ಪೋಷಣೆ ಮತ್ತು ಸ್ಥೈರ್ಯ ಮತ್ತೆ ದೊರೆಯುತ್ತವೆ.

ಇದನ್ನೂ ಓದಿ: Dr Sadhanashree Column: ಅಮೃತ ಸಮಾನವೀ ಆಚಾರ ರಸಾಯನ...

ಹೇಮಂತ ಋತುವು ಆರೋಗ್ಯದ ದೃಷ್ಟಿಯಿಂದ ಮಹತ್ತರವಾದದ್ದು. ಇದು ದೇಹಬಲವು ಗರಿಷ್ಠವಾಗಿರುವ ಕಾಲ ಎನ್ನುತ್ತದೆ ಆಯುರ್ವೇದ. ಪ್ರಕೃತಿಯ ಶೀತಲತೆಯ ಪರಿಣಾಮ ವಾಗಿ ಆಂತರಿಕ ಜಠರಾಗ್ನಿಯು (ಜೀರ್ಣಶಕ್ತಿ) ಅತ್ಯಂತ ಬಲಿಷ್ಠವಾಗುತ್ತದೆ. ಆದ್ದರಿಂದ ದೇಹಕ್ಕೆ ಹೆಚ್ಚಿನ ಆಹಾರ ಬೇಕಾಗುತ್ತದೆ. ಈ ಕಾಲದಲ್ಲಿ ಸೂಕ್ತ ಆಹಾರವನ್ನು ಕೊಟ್ಟರೆ ದೇಹದ ರಸಧಾತುವು ಸಮೃದ್ಧವಾಗಿ ರೂಪಗೊಂಡು ಆರೋಗ್ಯವು ಉತ್ತಮವಾಗುತ್ತದೆ. ಈ ಋತುವಿನಲ್ಲಿ ದೇಹಬಲ, ಜೀರ್ಣಶಕ್ತಿ ಮತ್ತು ಮನೋಸ್ಥೈರ್ಯ ಗರಿಷ್ಠವಾಗಿರುತ್ತವೆ.

ಪ್ರಕೃತಿಯು ನಿಧಾನವಾಗಿ ಶೀತವಾಗುವ ಈ ಋತುವಿನ ಆಗಮನವನ್ನು ಕೆಲವು ಲಕ್ಷಣಗಳ ಮೂಲಕ ಗುರುತಿಸಬಹುದು: ಸೂರ್ಯನು ಮಂಜುಪರದೆಯ ಮುಸುಕಿನಲ್ಲಿ ಮರೆ ಯಾಗಿರುತ್ತಾನೆ; ನೀರಿನ ಮೇಲ್ಮೈ ಮಂಜುಕಟ್ಟಿನಿಂದ ಕಂಗೊಳಿಸುತ್ತದೆ; ಶಾರೀರಿಕವಾಗಿ ಚರ್ಮದಲ್ಲಿ ಒಣತನ ಹೆಚ್ಚಾಗುತ್ತದೆ; ತುಟಿಗಳು ಬಿರುಕು ಬಿಡುತ್ತವೆ, ಹಸಿವೆ ಹೆಚ್ಚಾಗಿ ಜೀರ್ಣಶಕ್ತಿ ಉತ್ತಮವಾಗುತ್ತದೆ, ದೇಹಬಲವು ಹೆಚ್ಚಾಗುತ್ತದೆ.

ಜೀರ್ಣಾಗ್ನಿಯು ಅತ್ಯಂತ ಬಲವಾಗಿರುವ ಈ ಕಾಲದಲ್ಲಿ ಅಗತ್ಯಮಟ್ಟದ ಆಹಾರ ನೀಡ ದಿದ್ದರೆ/ಅತಿಯಾಗಿ ಉಪವಾಸ ಮಾಡಿದರೆ/ಲಘು ಆಹಾರಗಳನ್ನೇ ತಿಂದರೆ, ನಮ್ಮನ್ನು ಪೋಷಿಸುವ ರಸಧಾತುವು ದುರ್ಬಲಗೊಳ್ಳುತ್ತದೆ, ವಾತದೋಷವು ಹೆಚ್ಚಾಗುತ್ತದೆ.

ದೇಹದಲ್ಲಿ ವಿವಿಧ ಕೊರತೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಹೇಮಂತದಲ್ಲಿ ಉಪವಾಸ/ ಅಗತ್ಯಕ್ಕಿಂತ ಕಡಿಮೆ ತಿನ್ನುವುದು ಆರೋಗ್ಯಕರವಲ್ಲ. ಆದ್ದರಿಂದಲೇ ಧನುರ್ಮಾಸದಲ್ಲಿ ದೇವಸ್ಥಾನಗಳಲ್ಲಿ ಮುಂಜಾನೆಯಲ್ಲಿಯೇ ತುಪ್ಪದಿಂದ ಮಾಡಿದ, ಶರೀರವನ್ನು ಪೋಷಿಸುವ, ಬಿಸಿಬಿಸಿಯಾದ ಪ್ರಸಾದದ ವಿನಿಯೋಗವನ್ನು ಕಾಣಬಹುದು. ಕಾರಣ ಈ ಸಮಯದಲ್ಲಿ ದೇಹಕ್ಕೆ ಹೆಚ್ಚಿನ ಜಿಡ್ಡಿನಂಶದ ಅವಶ್ಯಕತೆಯಿದೆ. ಸ್ನಿಗ್ಧವಾದ, ಜೀರ್ಣಕ್ಕೆ ಜಡವಾದ, ಉಷ್ಣ ಆಹಾರ ಈ ಕಾಲಕ್ಕೆ ಬೇಕು.

ಹೇಮಂತ ಋತುಚರ್ಯೆ ಮತ್ತು ಆಹಾರಕ್ರಮ

೧.ದೇಹಕ್ಕೆ ತೈಲಾಭ್ಯಾಂಗ: ಚಳಿಗಾಲದಲ್ಲಿ ನಿತ್ಯವೂ ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡು ವುದು ಶರೀರ ರಕ್ಷಕ ಮತ್ತು ಪೋಷಕ. ಆದ್ದರಿಂದಲೇ ಶೀತಕಾಲದ ಶುರುವಿನಲ್ಲಿ ಬರುವ ದೀಪಾವಳಿಯಲ್ಲಿ ಎಣ್ಣೆ ಸ್ನಾನಕ್ಕೆ ಮಹತ್ವ. ನಮ್ಮ ಹಬ್ಬಗಳ ಆಚರಣೆಗಳು ಆ ಋತುವಿನ ಜೀವನಶೈಲಿಯ ಮಾರ್ಗದರ್ಶಕ.

ಹೇಮಂತದಲ್ಲಿ ಅಭ್ಯಂಗಕ್ಕೆ ಎಳ್ಳೆಣ್ಣೆ ಅತ್ಯುತ್ತಮ. ತಲೆ, ಕಿವಿ, ಪಾದ, ಮೂಗಿಗೆ ದಿನನಿತ್ಯದ ಅಭ್ಯಂಗದ ಅವಶ್ಯಕತೆಯಿದೆ. ಈ ಆಚರಣೆಯು ಶೀತದ ಪರಿಣಾಮದಿಂದ ವಾತದೋಷವು ಹೆಚ್ಚಾಗದಂತೆ ತಡೆಗಟ್ಟಿ ದೇಹದ ಪೋಷಣೆಯನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ. ಅಭ್ಯಂಗದ ನಂತರ ಬಿಸಿನೀರಿನ ಸ್ನಾನವು ಶಕ್ತಿದಾಯಕ.

೨. ವ್ಯಾಯಾಮ: ಈ ಋತುವಿನಲ್ಲಿ ದೇಹದ ಸಾಮರ್ಥ್ಯವು ಹೆಚ್ಚಾಗಿರುವುದರಿಂದ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಅರ್ಧಶಕ್ತಿ ಮಟ್ಟದವರೆಗೆ ಮಾಡುವ ವ್ಯಾಯಮ ಒಳ್ಳೆಯದು. ಇದರಿಂದ ಕಫ ಸಂಗ್ರಹ ತಡೆಯುತ್ತದೆ, ದೇಹ ಬಲಗೊಳ್ಳುತ್ತದೆ. ಶರೀರದ ತೂಕ ಇಳಿಸಲು, ದೇಹದ ಸ್ಟಾಮಿನವನ್ನು ಹೆಚ್ಚುಮಾಡಿಕೊಳ್ಳಲು, ಬಾಡಿಬಿಲ್ಡ್ ಮಾಡಲು ಸೂಕ್ತಕಾಲ. ಆದರೆ ವ್ಯಾಯಾಮ ಮಾಡುವವರು ತಪ್ಪದೆಯೇ ಒಳ್ಳೆಯ ಜಿಡ್ಡಿನಂಶದಿಂದ ಕೂಡಿದ ಆಹಾರವನ್ನು ಸೇವಿಸತಕ್ಕದ್ದು. ಒಣ ಆಹಾರ ಸ್ವಾಸ್ಥ್ಯವನ್ನು ಹಾಳುಮಾಡುವುದರಲ್ಲಿ ಸಂಶಯವಿಲ್ಲ. ‌

೩. ಸೂರ್ಯಸ್ನಾನ: ಮಂಜುಪರದೆಯ ಮಧ್ಯೆ ಬೆಳಗುವ ಬೆಳಗಿನ ಸೂರ್ಯರಶ್ಮಿಯು ದೇಹದ ತಾಪಮಾನ ಮತ್ತು ಚಯಾಪಚಯಕ್ಕೆ ಸಹಕಾರಿ.

೪. ಸ್ನಾನ ಮತ್ತು ಉಡುಪು: ವ್ಯಾಯಾಮದ ನಂತರ ಬಿಸಿನೀರಿನ ಸ್ನಾನವು ಬಲಕರ. ಆದರೆ ತಲೆಗೆ ಬಿಸಿನೀರು ಬೇಡ. ಸ್ನಾನವಾದ ನಂತರ ಬೆಚ್ಚಗಿನ ಬಟ್ಟೆ ಧರಿಸಿ, ತಲೆ ಮತ್ತು ಎದೆ ಭಾಗಗಳನ್ನು ರಕ್ಷಿಸಿಕೊಳ್ಳಬೇಕು. ತೀವ್ರ ಚಳಿಗಾಲದಲ್ಲಿ ಬಾಷ್ಪ ಸ್ವೇದವನ್ನೂ ಮಾಡ ಬಹುದು. ದಪ್ಪನೆಯ, ಬೆಚ್ಚಗಿನ ಹಾಸಿಗೆ ಮೇಲೆ, ಕಂಬಳಿಯನ್ನು ಹೊದ್ದು ಉಷ್ಣ ವಾತಾ ವರಣದಲ್ಲಿ ನಿದ್ರೆ ಮಾಡುವುದು ಸುಖಕರ. ಮನೆಯಲ್ಲಿ ಬೆಂಕಿಯ ಮೂಲಕ/ಹೀಟರ್ ಗಳನ್ನು ಬಳಸಿ ಉಷ್ಣತೆಯನ್ನು ಕಾಪಾಡತಕ್ಕದ್ದು. ರಾತ್ರಿ ಪಾದಾಭ್ಯಾಂಗ ಮಾಡಿ ಕಾಲು ಗಳಿಗೆ ಬೆಚ್ಚಗಿನ ಕಾಲುಚೀಲ ಧರಿಸಿ ಮಲಗಬೇಕು.

೫. ನಿದ್ರೆ ಮತ್ತು ಸಂಭೋಗ: ಯಾವುದೇ ಋತುವಿರಲಿ (ಗ್ರೀಷ್ಮ ಋತುವನ್ನು ಹೊರತು ಪಡಿಸಿ) ಆಯುರ್ವೇದದ ಪ್ರಕಾರ ಹಗಲುನಿದ್ರೆ ವರ್ಜಿತ. ಕಾಲಿಕ ರಾತ್ರಿ ನಿದ್ದೆ ಸದಾ ಸ್ವಾಸ್ಥ್ಯ ಕರ. ರಾತ್ರಿ ಬೇಗ ಮಲಗಿ, ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು. ಇನ್ನು ದಂಪತಿಗಳು ತಮ್ಮ ದೈಹಿಕ ಬಲಾನುಸಾರವಾಗಿ ನಿತ್ಯವೂ ಸಂಭೋಗದಲ್ಲಿ ತೊಡಗ ಬಹುದು.

೬. ಚಳಿಗಾಲದಲ್ಲಿ ನಮ್ಮ ಜಾಠರಾಗ್ನಿಯು ತೀವ್ರವಾಗಿ ಪ್ರಜ್ವಲಿಸುತ್ತದೆ. ಯಾವ ರೀತಿಯ ಆಹುತಿಯನ್ನೂ ಸ್ವೀಕರಿಸಿ ಅದನ್ನು ಭಸ್ಮ ಮಾಡುವ ಶಕ್ತಿ ಹೊಂದಿರುತ್ತದೆ. ಹಾಗಾಗಿ ಈ ಋತುವಿನಲ್ಲಿ ಜೀರ್ಣಕ್ಕೆ ಜಡವಾದ, ಪೋಷಕ, ಸ್ನಿಗ್ಧ ಆಹಾರಗಳು ಸೂಕ್ತ.

೭. ಚಳಿಗಾಲದಲ್ಲಿ ರಾತ್ರಿಗಳು ದೀರ್ಘವಾಗಿರುವುದರಿಂದ ಬೆಳಗ್ಗೆ ಎದ್ದ ಕೂಡಲೇ ತೀವ್ರ ಹಸಿವಾಗಬಹುದು. ಆದ್ದರಿಂದ ಬೆಳಗಿನ ನಿತ್ಯ ಕರ್ಮಗಳನ್ನು ಮುಗಿಸಿ ಬೇಗ ಉಪಾಹಾರ ವನ್ನು ಸ್ವೀಕರಿಸಬೇಕು.

ಉಪಾಹಾರದಲ್ಲಿ ಬಿಸಿ ಹಾಲಿನ ಜತೆಗೆ ಶುಷ್ಕ ಫಲಗಳನ್ನು- ವಿಶೇಷವಾಗಿ ಬಾದಾಮಿ, ಕಲ್ಲು ಸಕ್ಕರೆಗಳನ್ನು ಸೇರಿಸಿ ಸೇವಿಸಬಹುದು. ಆಹಾರಗಳಲ್ಲಿ ವಿಶೇಷವಾಗಿ ಉದ್ದಿನಬೇಳೆ ಮತ್ತು ಕಬ್ಬಿನ ವಿವಿಧ ಉತ್ಪನ್ನಗಳನ್ನು ಬಳಸಬಹುದು. ಉದಾಹರಣೆಗೆ, ಈ ಕಾಲದಲ್ಲಿ ಹೆಚ್ಚಾಗಿ ಇಡ್ಲಿ, ದೋಸೆ, ವಡೆ, ಮೋದಕ, ಹೋಳಿಗೆ, ಹಲ್ವಾ, ಸಿಹಿ ಪೊಂಗಲ್‌ಗಳನ್ನು ಸೇವಿಸಬೇಕು.

ಆದರೆ, ನೆನಪಿಡಿ- ಹಿಟ್ಟುಗಳನ್ನು ತಯಾರಿಸಿ ಫ್ರಿಜ್‌ನಲ್ಲಿ ಶೇಖರಿಸಿ ದಿನಗಳಗಟ್ಟಲೆ ಅದನ್ನು ಬಿಟ್ಟು ಬಳಸುವುದು ಒಳ್ಳೆಯದಲ್ಲ. ಈ ಕಾಲದಲ್ಲಿ ವಿಶೇಷವಾಗಿ ಹಬೆಯಲ್ಲಿ ಬೇಯಿಸಿದ ಖಾದ್ಯಗಳು ಉತ್ತಮ. ಕಾರಣ, ಹಬೆಯಲ್ಲಿ ಬೆಂದ ಪದಾರ್ಥಗಳು ಜೀರ್ಣಕ್ಕೆ ಜಡ. ಹಾಗಾಗಿ, ಇದು ಚಳಿಗಾಲದಲ್ಲಿ ಒಳ್ಳೆಯ ಆಹಾರವಾಗುತ್ತದೆ. ಹೇಮಂತ ಋತುವಿನಲ್ಲಿ ಮಧುರ, ಅಮ್ಲ ಮತ್ತು ಲವಣ ಪ್ರಧಾನ ಆಹಾರ ಸೇವನೆಯನ್ನು ಸೂಚಿಸಲಾಗಿದೆ. ಹೇಮಂತ-ಶಿಶಿರ ಋತುಗಳು ವಾತಾವರಣದ ಪ್ರಭಾವದಿಂದ ದೇಹವನ್ನು ಅತಿಯಾಗಿ ಒಣಗಿಸುತ್ತದೆ.

ಆದ್ದರಿಂದ ಒಳ್ಳೆಯ ಜಿಡ್ಡುಗಳನ್ನು, ದೇಹವನ್ನು ಸ್ನಿಗ್ಧವಾಗಿಸುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ಆಹಾರದಲ್ಲಿ ಸ್ವಲ್ಪ ಹೆಚ್ಚಿನ ಮಟ್ಟದಲ್ಲಿಯೇ ಎಣ್ಣೆ , ತುಪ್ಪ, ಬೆಣ್ಣೆ, ಹಾಲು ಗಳನ್ನು ಸೇರಿಸಬೇಕು.

೮. ಹಾಲು ಮತ್ತು ತುಪ್ಪದಲ್ಲಿ ತಯಾರಿಸಿದ ವಿವಿಧ ರೀತಿಯ ಪಾಯಸಗಳು ಈ ಕಾಲಕ್ಕೆ ಉತ್ತಮ ಆಹಾರ. ಮೊಸರನ್ನೂ ಸೇವಿಸಬಹುದು. ಆದರೆ ರಾತ್ರಿಯ ಸೇವನೆ ಸದಾ ನಿಷಿದ್ಧ. ಹಾಲಿನ ಉತ್ಪನ್ನಗಳಾದ ಕೆನೆ, ಕೋವಾ, ಮೊಸರು, ಬೆಣ್ಣೆ, ಮಜ್ಜಿಗೆ ಇವೆಲ್ಲವೂ ಚಳಿಗಾಲ ದಲ್ಲಿ ನಿತ್ಯವೂ ಸೇವಿಸಬಹುದಾದ ಆಹಾರಗಳು. ಈ ಕಾಲದಲ್ಲಿ ಮಾಂಸ ಮತ್ತು ಮಾಂಸ ರಸವನ್ನು ತುಪ್ಪದೊಂದಿಗೆ ಸೇವಿಸುವುದು ಸಹಾಯಕಾರಿ. ಮೀನು, ಕೋಳಿ ಮಾಂಸ, ಆಡಿನ ಮಾಂಸ ಮತ್ತು ಪ್ರಾಣಿಯ ಕೊಬ್ಬಿನ ಪದಾರ್ಥಗಳಿಂದ ತಯಾರಿಸಿದ ಖಾದ್ಯಗಳನ್ನು ಸೇವಿಸಬಹುದು.

೯. ಹೊಸ ಧಾನ್ಯಗಳು ಚಳಿಗಾಲಕ್ಕೆ ಉತ್ತಮ ಆಹಾರ. ಹೊಸ ಧಾನ್ಯಗಳು, ಅಕ್ಕಿ, ಗೋಧಿ, ಉದ್ದಿನಬೇಳೆ ಮತ್ತು ವಿಶೇಷವಾಗಿ ಗೋಧಿ ಹಿಟ್ಟು ಅಥವಾ ಅಕ್ಕಿ ಹಿಟ್ಟಿನಿಂದ ತಯಾರಿಸಿದ ಖಾದ್ಯಗಳು ಪೋಷಕ. ಕಾಳು ಬೇಳೆಗಳನ್ನು ಯಥೇಚ್ಛವಾಗಿ ಬಳಸುವ ಕಾಲವೆಂದರೆ ಚಳಿಗಾಲ. ಆದರೆ, ಇವುಗಳನ್ನು ಚೆನ್ನಾಗಿ ನೆನೆಸಿ, ಎಣ್ಣೆ ತುಪ್ಪಗಳೊಂದಿಗೆ ಬೇಯಿಸಿ. ಒಗ್ಗರಣೆ ನೀಡಿದ ಮೇಲೆ ಸೇವಿಸಬೇಕು. ಹಸಿಯ ರೂಪದಲ್ಲಿ ಸೇವಿಸಬಾರದು.

೧೦.ಮದ್ಯ ಮತ್ತು ದ್ರಾಕ್ಷಾರಸಗಳಿಂದ ತಯಾರಿಸಿದ ಪಾನೀಯಗಳನ್ನು ಸರಿಯಾದ ಕ್ರಮ ದಲ್ಲಿ, ಪ್ರಮಾಣವನ್ನರಿತು ಸ್ವೀಕರಿಸಲು ಆಯುರ್ವೇದವು ಸೂಚಿಸುತ್ತದೆ. ಚಳಿಗಾಲ ದಲ್ಲಿ ಊಟದ ಜತೆಯಲ್ಲಿ ಇರಬಹುದು ಅಥವಾ ಬಾಯಾರಿದಾಗ ಇರಬಹುದು, ಸಂಸ್ಕರಿ ಸಿದ ಬಿಸಿನೀರು ಸದಾ ಉತ್ತಮ.

೧೧. ಚಳಿಗಾಲದಲ್ಲಿ ವರ್ಜಿಸಬೇಕಾದ ಆಹಾರ ಮತ್ತು ಅಭ್ಯಾಸಗಳು: ವಾತವನ್ನು ಹೆಚ್ಚಿ ಸುವ ಸಲಾಡ್, ಹಸಿ ತರಕಾರಿ, ಮೊಳಕೆಕಾಳುಗಳು, ಉಪವಾಸ/ತುಂಬಾ ಲಘು ವಾದ ಆಹಾರ, ಸಿರಿಧಾನ್ಯಗಳು, ಹೆಚ್ಚು ಬೇಳೆ- ಮೊಳಕೆಗಳು, ಎಣ್ಣೆಯಿಲ್ಲದ/ಜಿಡ್ಡಿನಂಶವಿಲ್ಲದ ಒಣ ಆಹಾರ, ಚಳಿ ಗಾಳಿಯ ನೇರ ಸ್ಪರ್ಶ, ತಣ್ಣನೆಯ ನೀರಿನಿಂದ ಸ್ನಾನ.

ಈ ಎಲ್ಲವು ದೇಹದ ವಾತ-ಕಫ ಸಮತೋಲನವನ್ನು ಹಾಳುಮಾಡಬಹುದು. ಶೀತ ಗಾಳಿ ಮತ್ತು ಶೀತ ಆಹಾರಗಳನ್ನು ಹೆಚ್ಚಾಗಿ ಸೇವಿಸುವ ವ್ಯಕ್ತಿಯಲ್ಲಿ/ಜಿಡ್ಡಿನ ಆಹಾರವನ್ನು ಸೇವಿಸಿ ವ್ಯಾಯಾಮ ಮಾಡದ ವ್ಯಕ್ತಿಯಲ್ಲಿ ವಾತ-ಕಫ ಸಂಗ್ರಹವಾಗಬಹುದು.

ಇದು ಮುಂಬರುವ ವಸಂತಕಾಲದಲ್ಲಿ ಆಸ್ತಮಾ/ಅಲ್ಲರ್ಜಿ/ಶ್ವಾಸ/ಜ್ವರಗಳು ಉಲ್ಬಣ ಗೊಳ್ಳುವ ಕಾರಣಗಳಲ್ಲಿ ಸೇರಿವೆ. ಹೇಮಂತದಲ್ಲಿ ಹಸುವಿನ ಹಾಲು, ಕಬ್ಬಿನ ರಸ, ಪ್ರಾಣಿಯ ಕೊಬ್ಬು, ಎಣ್ಣೆ, ಹೊಸ ಅಕ್ಕಿ ಮತ್ತು ಬಿಸಿನೀರನ್ನು ಸೇವಿಸುವವನು ತನ್ನ ಆಯುಷ್ಯವನ್ನು ಸದಾ ಸಂರಕ್ಷಿಸಿಕೊಳ್ಳಬಹುದು ಎಂದು ಆಚಾರ್ಯರು ಸ್ಪಷ್ಟ ಪಡಿಸಿದ್ದಾರೆ.

ಈ ಋತುವಿನಲ್ಲಿ ಪ್ರಕೃತಿಯ ಗುಣಕ್ಕೆ ತಕ್ಕ ಆಹಾರ-ಆಚಾರಗಳನ್ನು ಅನುಸರಿಸಿದರೆ ದೇಹ ಬಲಿಷ್ಠವಾಗುತ್ತದೆ, ಆಯುಷ್ಯ ವೃದ್ಧಿಯಾಗುತ್ತದೆ. ಹೇಮಂತ ಋತು ದೇಹಕ್ಕೆ ಶಕ್ತಿ, ಪೋಷಣೆ ಮತ್ತು ಸ್ಥೈರ್ಯವನ್ನು ಪುನಃ ತುಂಬುವ ಪ್ರಕೃತಿಯ ಅನನ್ಯ ಅವಕಾಶ. ಈ ಋತುವಿನಲ್ಲಿ ಅಗ್ನಿ ಬಲವಾಗಿರುವುದರಿಂದ ಪೋಷಕ, ಸ್ನಿಗ್ಧ ಆಹಾರ ಮತ್ತು ನಿಯಮಿತ ವ್ಯಾಯಾಮ ಗಳು ದೇಹ-ಮನಸ್ಸಿನ ಸಮತೋಲನಕ್ಕೆ ಮಹತ್ವದ್ದಾಗಿದೆ.

ತೈಲಾಭ್ಯಾಂಗ, ಬಿಸಿ ನೀರಿನ ಬಳಕೆ ಮತ್ತು ಶೀತದಿಂದ ರಕ್ಷಣೆ, ವಾತ-ಕಫಗಳ ಅಸ್ತವ್ಯಸ್ಥತೆ ಯನ್ನು ತಡೆಯುತ್ತವೆ. ಸರಳವಾದ ಈ ಆಯುರ್ವೇದದ ನಿಯಮಗಳನ್ನು ಪಾಲಿಸಿದರೆ ಹೇಮಂತ ಋತುವು ಆರೋಗ್ಯದ ಅಭಿವೃದ್ಧಿಯ ಭದ್ರಬುನಾದಿಯಾಗಬಹುದು.

ಡಾ. ಸಾಧನಾಶ್ರೀ ಪಿ,

View all posts by this author