ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಕಲಾವಿದ ಶಿಳ್ಳೆಯನ್ನು ಪ್ರತಿಭಟಿಸುತ್ತಾನೆ ಅಂದ್ರೆ ಪ್ರೇಕ್ಷಕರನ್ನು ಅವಮಾನಿಸುತ್ತಾನೆ ಎಂದಲ್ಲ !

ಕಲಾವಿದರು ಕಲೆಯನ್ನು ತಿದ್ದುತ್ತಾ ಹೊಳಪುಗೊಳಿಸಿದರೆ, ಕಲೆಯು ತನ್ನ ಪೊರೆ ಕಳಚುತ್ತಾ ಅಂತರಂಗವನ್ನು ಬಿಟ್ಟುಕೊಡುತ್ತಾ ಪ್ರೇಕ್ಷಕನನ್ನು ತಿದ್ದುತ್ತದೆ. ಅವರಂದು ಸಭ್ಯ, ಶ್ರೀಮಂತ ಸಂಸ್ಕಾರವನ್ನು ಉದ್ದೀಪಿಸುತ್ತದೆ. ಒಂದು ಕಲೆಯನ್ನು ಆರಾಧನಾ ಭಾವದಿಂದ ನೋಡಲು ಸಾಧ್ಯವಾಗುವುದು ಇಂಥ ಸಾಕ್ಷಾತ್ಕಾರವಾದಾಗಲೇ.

ನೂರೆಂಟು ವಿಶ್ವ

ಇತ್ತೀಚೆಗೆ ಯಕ್ಷಗಾನ ಕಲಾವಿದರೊಬ್ಬರು ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ, ಪಾತ್ರ(ವೇಷ) ಧಾರಿ ಯಾಗಿಯೇ ವೇದಿಕೆಯಿಂದ ತರಾಟೆಗೆ ತೆಗೆದುಕೊಂಡ ಘಟನೆ ಸಾಮಾಜಿಕ ಜಾಲತಾಣ ಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬಹುತೇಕರು ಆ ಯಕ್ಷಗಾನ ಕಲಾವಿದರ ನಡೆಯನ್ನು ಹಿಗ್ಗಾಮುಗ್ಗಾ ಟೀಕಿಸಿ ಟ್ರೋಲ್ ಮಾಡಿದ್ದಾರೆ. ಹೀಗೆ ಮಾಡಿದವರಲ್ಲಿ ಹೆಚ್ಚಿನವರು ಯಕ್ಷಗಾನ ಪ್ರೇಮಿಗಳು, ಅಭಿಮಾನಿಗಳು ಅಥವಾ ಪ್ರೇಕ್ಷಕರು.

ಶಿಳ್ಳೆ ಹಾಕಿದ ಪ್ರೇಕ್ಷಕರನ್ನು ತರಾಟೆಗೆ ತೆಗೆದುಕೊಂಡ ಆ ಯಕ್ಷಗಾನ ಕಲಾವಿದನ ಸಮರ್ಥನೆ ಮತ್ತು ಬೆಂಬಲಕ್ಕೆ ಒಬ್ಬನೇ ಒಬ್ಬ ಯಕ್ಷಗಾನ ಕಲಾವಿದ, ಭಾಗವತ, ಹಿಮ್ಮೇಳದವ ಅಥವಾ ತಾಳಮದ್ದಳೆ ಅರ್ಥಧಾರಿ ಬಾರದೇ ಹೋಗಿದ್ದು ದುರ್ದೈವವೇ. ಪ್ರೇಕ್ಷಕನನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ ಅವರು ಕೋಳಿ ಅಂಕ ಮತ್ತು ಕಂಬಳವನ್ನು ಕೀಳುದೃಷ್ಟಿ ಯಿಂದ ನೋಡಿದ್ದು ಮತ್ತು ವೇಷಧಾರಿಯಾಗಿ ಆ ಮಾತನ್ನು ಆಡಿದ್ದು ಸರಿಯಲ್ಲ ಎಂಬುದನ್ನು ಬಿಟ್ಟರೆ, ಅವರು ಹೇಳಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ.

ಹೇಳುವ ಧಾಟಿ, ಸನ್ನಿವೇಶ ಮತ್ತು ಸಂದರ್ಭ ಸಮಂಜಸವಾಗಿರಲಿಲ್ಲ ಎಂಬುದನ್ನು ಬಿಟ್ಟರೆ, ಕಲೆ ಉತ್ತಮ ಪ್ರೇಕ್ಷಕರನ್ನೂ ಹುಟ್ಟು ಹಾಕಬೇಕೆಂದು ಬಯಸುವ ಅವರ ಕಾಳಜಿ, ಕಳಕಳಿಯನ್ನು ಮೆಚ್ಚಲೇಬೇಕು.

ಕಲಾವಿದನನ್ನು ಪ್ರೇಕ್ಷಕರು ಬೆಳೆಸುತ್ತಾರೆ, ಪೊರೆಯುತ್ತಾರೆ, ತಮ್ಮ ಆರಾಧ್ಯದೈವವೆಂದು ತಲೆ ಮೇಲೆ ಹೊತ್ತು ಮೆರೆಸುತ್ತಾರೆ. ಪ್ರೇಕ್ಷಕನಿಲ್ಲದೇ ಯಾವ ಕಲೆಯೂ ಇಲ್ಲ. ಹಣ ತೆತ್ತು ಟಿಕೆಟ್ ಖರೀದಿಸಿ ಬರುವ ಪ್ರೇಕ್ಷಕನಿಲ್ಲದೇ ಯಾವ ಕಲೆಯೂ ಇಲ್ಲ.

ಹಾಗೆಂದು ಹಣ ತೆತ್ತು ಬಂದಿದ್ದಾನೆಂಬ ಒಂದೇ ಕಾರಣಕ್ಕೆ ಪ್ರೇಕ್ಷಕ ಮನಸ್ಸಿಗೆ ಬಂದಿದ್ದನ್ನು ಮಾಡುವುದನ್ನು ಯಾರೂ ಒಪ್ಪಿಕೊಳ್ಳಲಾರರು. ಯಾವುದೇ ಕಲೆಯಾಗಿರಲಿ, ಅದು ಪ್ರೇಕ್ಷಕ ನಿಂದ ಸಭ್ಯತೆ, ಸಂಭಾವಿತತನ, ಕಲಾ ಮರ್ಯಾದೆ, ಶಿಸ್ತು, ಘನತೆ, ರಸಗ್ರಹಣವನ್ನು ಅಪೇಕ್ಷಿಸುತ್ತದೆ.

ಇದನ್ನೂ ಓದಿ: Vishweshwar Bhat Column: ಭಾರತದ ಚರಿತ್ರೆಯ ಮಹಾ ತಿರುವಿನ ತಾಣದಲ್ಲಿ ನಿಂತಾಗ..!

ಒಂದು ಕಲೆ ಎಷ್ಟು ಸಭ್ಯ, ಘನತೆಯಿಂದ ಕೂಡಿದೆ ಎಂಬುದಕ್ಕೆ ಪ್ರೇಕ್ಷಕ ವರ್ಗದ ಶಿಸ್ತು ಮತ್ತು ಸನ್ನಡತೆಯೂ ಕಾರಣ. ಹೊಡೆದಾಟ, ಹಿಂಸೆಯೇ ಪ್ರದರ್ಶನ ಪರಾಕಾಷ್ಠೆ ಯಾಗಿರುವ ‘ಡಬ್ಲ್ಯೂಡಬ್ಲ್ಯೂಎಫ್’ ನೋಡುವ ವೀಕ್ಷಕರು ‘ಸುಬಗ ಸುಬ್ಬರಾಯ’‌ ನಾಗಿರಬೇಕೆಂದು ಯಾರೂ ಅಪೇಕ್ಷಿಸುವುದಿಲ್ಲ.

ಅದನ್ನು ನೋಡುವ ಪ್ರೇಕ್ಷಕರು ಎರಡು ಪೆಗ್ ಏರಿಸಿ ಬಂದರೆ ಅದು ಅಸಭ್ಯ ನಡೆಯಲ್ಲ. ಅಲ್ಲಿ ಪರಸ್ಪರ ಹೊಡೆದಾಡಿಕೊಂಡರೂ ಅದು ಸಹ್ಯವೇ. ಪ್ರೇಕ್ಷಕರು ಪರಸ್ಪರ ಹೊಡೆದಾಡಿ ಕೊಳ್ಳದೇ ‘ಡಬ್ಲ್ಯೂಡಬ್ಲ್ಯೂಎಫ್’ ಪ್ರದರ್ಶನ ಮುಗಿದರೆ ಅದು ತೀರಾ ನೀರಸ ಎಂದೇ ಭಾವಿಸಲಾಗುತ್ತದೆ. ಆ ಕ್ರೀಡೆ ಮತ್ತು ಪ್ರೇಕ್ಷಕರು ಇರುವುದು ಮತ್ತು ಇರಬೇಕಾದದ್ದು ಹಾಗೆಯೇ. ‌

ಆದರೆ ಯಕ್ಷಗಾನ ಕಲೆ ಮತ್ತು ಪ್ರೇಕ್ಷಕನ ಸಂಬಂಧ ಕೇವಲ ‘ಕೊಡು-ಕೊಳ್ಳು’ವಿಕೆಯಲ್ಲ, ಅದೊಂದು ಸುಸಂಸ್ಕೃತ ಸಮಾಜದ ಪ್ರತಿಬಿಂಬ. ಕಲಾವಿದರನ್ನು ಬೆಳೆಸುವವರು ಪ್ರೇಕ್ಷಕರು ಎಂಬುದು ಎಷ್ಟು ಸತ್ಯವೋ, ಪ್ರೇಕ್ಷಕರ ಅಭಿರುಚಿಯನ್ನು ಸಂಸ್ಕಾರಯುತವಾಗಿ ಬೆಳೆಸುವುದು ಕಲೆಯ ಜವಾಬ್ದಾರಿ ಎಂಬುದು ಅಷ್ಟೇ ಸತ್ಯ.

ಯಾವುದೇ ಒಂದು ಪ್ರದರ್ಶಕ ಕಲೆಗೆ (Performing Arts) ಜೀವ ತುಂಬುವವರು ಪ್ರೇಕ್ಷಕರು. ಪ್ರೇಕ್ಷಕರಿಲ್ಲದ ಕಲೆ ಕೇವಲ ಕನ್ನಡಿಯ ಮುಂದೆ ಅಭಿನಯಿಸಿದಂತೆ. ಪ್ರೇಕ್ಷಕರ ಚಪ್ಪಾಳೆ, ಹರ್ಷೋದ್ಗಾರ ಮತ್ತು ಶಿಳ್ಳೆಗಳು ಕಲಾವಿದನಿಗೆ ಆ ಕ್ಷಣದ ‘ಟಾನಿಕ್’ ಇದ್ದಂತೆ. ಆದರೆ, ಕಲೆಯ ಪರಮೋಚ್ಚ ಗುರಿ ಕೇವಲ ಚಪ್ಪಾಳೆ, ಶಿಳ್ಳೆ ಗಿಟ್ಟಿಸುವುದಲ್ಲ, ಬದಲಾಗಿ ಪ್ರೇಕ್ಷಕನ ಅಂತರಂಗವನ್ನು ಪ್ರವೇಶಿಸಿ ಅವನ ಆಲೋಚನಾ ಕ್ರಮವನ್ನು ಉನ್ನತೀಕರಿಸುವುದು.

ಕಲಾವಿದರು ಕಲೆಯನ್ನು ತಿದ್ದುತ್ತಾ ಹೊಳಪುಗೊಳಿಸಿದರೆ, ಕಲೆಯು ತನ್ನ ಪೊರೆ ಕಳಚುತ್ತಾ ಅಂತರಂಗವನ್ನು ಬಿಟ್ಟುಕೊಡುತ್ತಾ ಪ್ರೇಕ್ಷಕನನ್ನು ತಿದ್ದುತ್ತದೆ. ಅವರಂದು ಸಭ್ಯ, ಶ್ರೀಮಂತ ಸಂಸ್ಕಾರವನ್ನು ಉದ್ದೀಪಿಸುತ್ತದೆ. ಒಂದು ಕಲೆಯನ್ನು ಆರಾಧನಾ ಭಾವದಿಂದ ನೋಡಲು ಸಾಧ್ಯವಾಗುವುದು ಇಂಥ ಸಾಕ್ಷಾತ್ಕಾರವಾದಾಗಲೇ.

yaksha

ಸಾಮಾನ್ಯವಾಗಿ ಕ್ರೀಡಾಂಗಣದಲ್ಲಿ ಅಥವಾ ಸಿನಿಮಾ ಮಂದಿರದಲ್ಲಿ ಶಿಳ್ಳೆ ಹೊಡೆಯು ವುದು ಅತ್ಯಂತ ಸಹಜವಾದ ಮತ್ತು ಒಪ್ಪಿತವಾದ ಮೆಚ್ಚುಗೆಯ ಕ್ರಮ. ಅಲ್ಲಿನ ವಾತಾ ವರಣವೇ ಹಾಗಿರುತ್ತದೆ. ಆದರೆ, ಶಾಸ್ತ್ರೀಯ ಸಂಗೀತ ಕಚೇರಿ, ಯಕ್ಷಗಾನ, ತಾಳಮದ್ದಳೆ, ಭರತನಾಟ್ಯ ಅಥವಾ ಗಂಭೀರ ನಾಟಕಗಳ ವೇದಿಕೆಯಲ್ಲಿ ಶಿಳ್ಳೆ ಹೊಡೆದಾಗ ಕಲಾವಿದರು ಏಕೆ ಅಸಮಾಧಾನಗೊಳ್ಳುತ್ತಾರೆ ಎಂಬ ಪ್ರಶ್ನೆ ಮೂಡುವುದು ಸಹಜ.

ಈ ಕಲಾವಿದನಿಗೆ ಶಿಳ್ಳೆ ಎನ್ನುವುದು ಮೆಚ್ಚುಗೆಯಾಗಿ ಕೇಳಿಸುವುದಕ್ಕಿಂತ ಹೆಚ್ಚಾಗಿ ಗದ್ದಲ ವಾಗಿ, ಕರ್ಕಶವಾಗಿ ಕೇಳಿಸುತ್ತದೆ. ಒಂದು ಗಂಭೀರವಾದ ರಾಗವನ್ನು ಆಲಾಪನೆ ಮಾಡು ವಾಗ ಅಥವಾ ಮೌನದಲ್ಲಿಯೇ ಭಾವನೆಗಳನ್ನು ವ್ಯಕ್ತಪಡಿಸುವಾಗ ಕೇಳಿ ಬರುವ ಶಿಳ್ಳೆಯ ಕರ್ಕಶ ಧ್ವನಿ ಆ ಕಲಾತ್ಮಕ ಪರಿಸರವನ್ನು ಗಬ್ಬೆಬ್ಬಿಸುತ್ತದೆ. ಪ್ರೇಕ್ಷಕರು ತಮ್ಮ ಸಂತಸ ವ್ಯಕ್ತಪಡಿಸಲು ಶಿಳ್ಳೆ ಹೊಡೆದರೂ, ಅದು ಕಲೆಯ ಆಳವಾದ ಅನುಭವಕ್ಕೆ ಅಡ್ಡಿಯಾದಾಗ ಪ್ರತಿಭಟನೆ ಅನಿವಾರ್ಯವಾಗುತ್ತದೆ.

ಪ್ರೇಕ್ಷಕರು ಕಲಾವಿದನಿಗೆ ಆರ್ಥಿಕ ಮತ್ತು ನೈತಿಕ ಬೆಂಬಲ ನೀಡುವ ಬೆನ್ನೆಲುಬು, ಖರೆ. ಪ್ರೇಕ್ಷಕರ ಪ್ರೋತ್ಸಾಹವಿಲ್ಲದೇ ಯಾವ ಕಲಾವಿದನೂ ಬೆಳೆಯಲಾರ. ಆದರೆ, ‘ಬೆಳೆಸುವುದು’ ಎಂದರೆ ಕೇವಲ ಟಿಕೆಟ್ ಕೊಳ್ಳುವುದಲ್ಲ. ಒಬ್ಬ ಜಾಣ ಪ್ರೇಕ್ಷಕ ಕಲಾವಿದನ ಸಣ್ಣ ತಪ್ಪು ಗಳನ್ನು ಕ್ಷಮಿಸಿ, ಅವನ ಪ್ರತಿಭೆಯನ್ನು ಗುರುತಿಸಿ, ಅವನಿಗೆ ಸರಿಯಾದ ವೇದಿಕೆ ಕಲ್ಪಿಸಿ ಕೊಡುವ ಮೂಲಕ ಅವನನ್ನು ಉನ್ನತ ಸ್ಥಾನಕ್ಕೆ ಏರಿಸುತ್ತಾನೆ.

ಕಲಾವಿದನಲ್ಲಿನ ಅಹಂಕಾರವನ್ನು ಹೋಗಲಾಡಿಸಿ, ಅವನಲ್ಲಿ ಕಲೆಯನ್ನು ಇನ್ನಷ್ಟು ಪರಿಷ್ಕರಿಸುವಂತೆ ಪ್ರೇಕ್ಷಕರು ಪ್ರೇರೇಪಿಸುತ್ತಾರೆ. ‘ಕಲೆಗಾಗಿ ಕಲೆಯಲ್ಲ, ಬದುಕಿಗಾಗಿ ಕಲೆ’ ಎಂಬ ಮಾತಿದೆ. ಕಲೆಯು ಪ್ರೇಕ್ಷಕರನ್ನು ಕೇವಲ ರಂಜಿಸಿ ಕಳುಹಿಸಬಾರದು. ಪ್ರದರ್ಶನ ಮುಗಿಸಿ ಮನೆಗೆ ಹೋಗುವಾಗ ಪ್ರೇಕ್ಷಕ ತಾನು ಬಂದಿದ್ದಕ್ಕಿಂತ ಸ್ವಲ್ಪ ಹೆಚ್ಚು ಸಂಸ್ಕಾರ ವಂತನಾಗಿ, ಶಾಂತನಾಗಿ ಅಥವಾ ಚಿಂತನಶೀಲನಾಗಿ ಮರಳಬೇಕು. ಆರಂಭದಲ್ಲಿ ಒಬ್ಬ ಪ್ರೇಕ್ಷಕ ಕೇವಲ ಕುಣಿತ ಅಥವಾ ವೇಗದ ಸಂಗೀತಕ್ಕೆ ಶಿಳ್ಳೆ ಹೊಡೆಯಬಹುದು. ಆದರೆ ನಿರಂತರವಾಗಿ ಒಳ್ಳೆಯ ಕಲೆಯನ್ನು ನೋಡುತ್ತಾ ಹೋದಂತೆ, ಅವನಿಗೆ ಮೌನದ ಮಹತ್ವ, ಲಯದ ಸೂಕ್ಷ್ಮತೆ, ಸಾಹಿತ್ಯದ ಆಳ, ಸಂಸ್ಕೃತಿಯ ಮಹತ್ವ ಅರ್ಥವಾಗತೊಡಗುತ್ತದೆ.

ಈ ರೀತಿಯ ‘ಅಭಿರುಚಿಯ ಬೆಳವಣಿಗೆ’ಯನ್ನು ಕಲೆ ಮಾಡಬೇಕು. ಸಂಕೀರ್ಣವಾದ ರಾಗಗಳು ಅಥವಾ ಜೀವನದ ಸತ್ಯವನ್ನು ಸಾರುವ ನಾಟಕಗಳು ಪ್ರೇಕ್ಷಕನ ಮಿದುಳಿಗೆ ಮತ್ತು ಹೃದಯಕ್ಕೆ ಕೆಲಸ ನೀಡುತ್ತವೆ. ಇವು ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತವೆ. ಪ್ರೇಕ್ಷಕ ರನ್ನು ಬೆಳೆಸುವುದು ಎಂದರೆ ಅವರನ್ನು ಕೇವಲ ‘ಗ್ರಾಹಕ’ರನ್ನಾಗಿ ಮಾಡುವುದಲ್ಲ, ಬದಲಾಗಿ ‘ಸದಭಿರುಚಿ’ಯವರನ್ನಾಗಿ, ‘ಸಹೃದಯ’ರನ್ನಾಗಿ ಮಾಡುವುದು.

ಕಲೆಗೆ ಪೂರಕವಾಗಿ ಪ್ರೇಕ್ಷಕರ ಮೆಚ್ಚುಗೆ ಇರಬೇಕು ಎಂಬುದು ಸುಸಂಸ್ಕೃತ ಸಮಾಜದ ಲಕ್ಷಣ. ಮೆಚ್ಚುಗೆಯನ್ನು ವ್ಯಕ್ತಪಡಿಸಲು ಶಿಳ್ಳೆಯೊಂದೇ ಮಾರ್ಗವಲ್ಲ. ಅದು ಅತ್ಯಂತ bಛಿ, ಕಚ್ಚಾ ಮತ್ತು ಕಳಪೆ ಅಭಿವ್ಯಕ್ತಿ ಎಂಬುದು ಸರ್ವವಿಧಿತ. ಶಾಸ್ತ್ರೀಯ ಸಂಗೀತದಲ್ಲಿ ‘ಶಹಬ್ಬಾಸ್’, ‘ಆಹಾ’, ‘ಭೇಷ್’ ಎನ್ನುವ ಪದಗಳು ರಾಗದ ನಡೆಗೆ ಪೂರಕವಾಗಿರುತ್ತವೆ. ಅದೆಂಥ ಮೆಚ್ಚುಗೆಯೇ ಆಗಿರಬಹುದು, ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಯಾರೂ ಶಿಳ್ಳೆ ಹೊಡೆಯುವುದಿಲ್ಲ.

ಭಾರತೀಯ ಸಂಪ್ರದಾಯದಲ್ಲಿ ಕಲೆ ಎನ್ನುವುದು ಒಂದು ಆರಾಧನೆ, ಉಪಾಸನೆ. ದೇವಸ್ಥಾನದಲ್ಲಿ ಅಥವಾ ಪೂಜೆಯ ಸಮಯದಲ್ಲಿ ಶಿಳ್ಳೆ ಹೊಡೆಯುವುದು ಎಷ್ಟು ಅಸಂಬದ್ಧವೋ, ಕಲಾ ಪ್ರದರ್ಶನದ ಸಮಯದಲ್ಲೂ ಹಾಗೆಯೇ.

ಕಲೆ ಮತ್ತು ಕಲಾವಿದನಿಗೆ ಗೌರವ ನೀಡುವುದು ಪ್ರೇಕ್ಷಕನ ಕರ್ತವ್ಯ. ಶಿಳ್ಳೆ ಹೊಡೆಯುವುದು ಮೆಚ್ಚುಗೆಯ ಸಂಕೇತವಾಗಿದ್ದರೂ, ಅದು ಯಾವ ವೇದಿಕೆಯಲ್ಲಿ ನಡೆಯುತ್ತಿದೆ ಎಂಬ ವಿವೇಚನೆ ಪ್ರೇಕ್ಷಕನಿಗೆ ಇರಬೇಕು. ನಾನು ಇಲ್ಲಿ ಒಂದೆರಡು ಪ್ರಸಂಗಗಳನ್ನು ಹೇಳಬೇಕು. ಕೆಲ ವರ್ಷಗಳ ಹಿಂದೆ, ‘ಸವಾಯಿ ಗಂಧರ್ವ ಸಂಗೀತ ಮಹೋತ್ಸವ’ ದಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಮೇರು ಶಿಖರ ಪಂಡಿತ ಭೀಮಸೇನ ಜೋಶಿಯವರ ಸಂಗೀತ ಕಛೇರಿ ಏರ್ಪಟ್ಟಿತ್ತು. ದೇಶ-ವಿದೇಶಗಳಿಂದ ಪ್ರೇಕ್ಷಕರು ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದರು.

ಭೀಮಸೇನ ಜೋಶಿಯವರು ಕಛೇರಿ ಆರಂಭವಾದರೆ ಸೂಜಿ ಬಿದ್ದರೂ ಕೇಳಿಸುವಂಥ ಮೌನ. ಅವರು ಹಾಡುವಾಗ ಕಣ್ಣು ಮುಚ್ಚಿಕೊಂಡರೆಂದರೆ ಅದು ನೇರ ದೈವದೊಂದಿಗೆ ಸಂಪರ್ಕ ಎಂದು ಪ್ರೇಕ್ಷಕರು ಭಾವಿಸುತ್ತಿದ್ದರು. ಅಂದು ಪಂಡಿತ ಜೋಶಿಯವರು ರಾಗದ ಉತ್ತುಂಗ ಸ್ಥಿತಿಯಲ್ಲಿರುವಾಗ, ಅದ್ಯಾವನೋ ಪ್ರೇಕ್ಷಕ ಶಿಳ್ಳೆ ಹೊಡೆದುಬಿಟ್ಟ. ಅದು ನಿಜಕ್ಕೂ ಪ್ರೇಕ್ಷಕನಿಗೆ ತನ್ನ ಮೆಚ್ಚುಗೆ, ಅಮಿತಾನಂದವನ್ನು ಅದುಮಿಟ್ಟುಕೊಳ್ಳಲಾಗದ ಸ್ಥಿತಿ.

ಜೋಶಿಯವರು ಥಟ್ಟನೆ ಹಾಡುವುದನ್ನು ನಿಲ್ಲಿಸಿಬಿಟ್ಟರು. ಅವರ ಮುಖ ಕೋಪದಿಂದ ಕೆಂಪಿಟ್ಟಿತ್ತು. ಪ್ರೇಕ್ಷಕರತ್ತ ದುರುಗುಟ್ಟಿ ನೋಡಿ, ‘ಗೊತ್ತಿರಲಿ, ಇಲ್ಲಿ ಸಂಗೀತ ಕಛೇರಿ ನಡೆಯುತ್ತಿದೆ, ತಮಾಷೆಯಲ್ಲ’ (ಸಮಝಾವೋ, ಯಹಾ ಸಂಗೀತ ಹೋ ರಹಾ ಹೈ, ತಮಾಷಾ ನಹೀ) ಎಂದು ಖಾರವಾಗಿ ಗುಡುಗಿದರು.

ಶಾಸೀಯ ಸಂಗೀತದಲ್ಲಿ ‘ವಾಹ್’, ‘ವಾಹ್.. ವಾಹ್...’ ಅಥವಾ ‘ಸುಭಾನ್ ಅ’ ಎನ್ನುವುದು ಸಂಪ್ರದಾಯವೇ ಹೊರತು ಶಿಳ್ಳೆಯಲ್ಲ. ಮುಂದಿನ ಮೂರ್ನಾಲ್ಕು ನಿಮಿಷ ಇಡೀ ಸಭಾಂಗಣದಲ್ಲಿ ಗಾಢ ಮೌನ. ಅವರಿಗೆ ಸಾವರಿಸಿಕೊಳ್ಳಲು ತುಸು ಸಮಯ ಬೇಕಾಯಿತು. ಶಿಳ್ಳೆ ಹೊಡೆದ ಪ್ರೇಕ್ಷಕ ವೇದಿಕೆಗೆ ಬಂದು ಕ್ಷಮೆಯಾಚಿಸಿದ ನಂತರವೇ ಅವರ ಕಛೇರಿ ಮುಂದುವರಿಯಿತು.

ಕೆಲ ವರ್ಷಗಳ ಹಿಂದೆ, ಬೆಂಗಳೂರಿನ ಗಾಯನ ಸಮಾಜದಲ್ಲಿ ಪಿಟೀಲು ಮಾಂತ್ರಿಕ ಡಾ.ಟಿ.ಎನ್.ಕೃಷ್ಣನ್ ಸಂಗೀತ ಕಛೇರಿ ಏರ್ಪಾಟಾಗಿತ್ತು. ಕರ್ನಾಟಕ ಸಂಗೀತದ ಖ್ಯಾತ ಪಿಟೀಲು ವಾದಕರಾದ ಡಾ.ಕೃಷ್ಣನ್ ಅವರು, ಲಾಲ್ಗುಡಿ ಜಯರಾಮನ್ ಮತ್ತು ಎಂ.ಎಸ್. ಗೋಪಾಲಕೃಷ್ಣನ್ ಅವರೊಂದಿಗೆ ‘ಪಿಟೀಲು ತ್ರಿಮೂರ್ತಿಗಳು’ ಎಂದು ಪರಿಗಣಿತರಾದ ವರು. ಸಂಗೀತ ಕಲಾನಿಧಿ ಪುರಸ್ಕೃತರೂ ಆಗಿದ್ದ ಅವರು, 1992ರ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದವರು. ತಮ್ಮ ಕಲೆಯ ಪಾವಿತ್ರ್ಯದ ವಿಷಯದಲ್ಲಿ ಎಂದೂ ರಾಜಿ ಮಾಡಿ ಕೊಂಡವರಲ್ಲ.

ಗಾಯನ ಸಮಾಜದಲ್ಲಿ ಕಚೇರಿ ನಡೆಯುತ್ತಿದ್ದಾಗ, ಡಾ.ಕೃಷ್ಣನ್ ಅವರು ಅತ್ಯಂತ ಗಂಭೀರ ವಾದ ರಾಗವೊಂದನ್ನು ನುಡಿಸುತ್ತಿದ್ದರು. ಆ ಸಮಯದಲ್ಲಿ ಕಛೇರಿಯ ಸೌಂದರ್ಯಕ್ಕೆ ಮಾರುಹೋದ ಯುವಕನೊಬ್ಬ ಜೋರಾಗಿ ಶಿಳ್ಳೆ ಹೊಡೆದುಬಿಟ್ಟ.

ಆ ಕ್ಷಣವೇ ಡಾ.ಕೃಷ್ಣನ್ ನುಡಿಸುವುದನ್ನು ನಿಲ್ಲಿಸಿಬಿಟ್ಟರು. ಅವರ ಮುಖದಲ್ಲಿ ಅದೆಂಥ ಕೋಪವಿತ್ತೆಂದರೆ, ಒಂದು ಕ್ಷಣ ಪಿಟೀಲನ್ನು ಪಕ್ಕಕ್ಕೆ ಎಸೆದುಬಿಟ್ಟರು. ‘ಇದು ಸರ್ಕಸ್ ಪ್ರದರ್ಶನ ಎಂದು ಭಾವಿಸಿದ್ದೀರಾ? ಇದು ಸಂಗೀತಗೋಷ್ಠಿ. ಕಲೆಯ ಆರಾಧನಾಗೋಷ್ಠಿ. ಕಲೆಗೆ ಮರ್ಯಾದೆ, ಗೌರವ ಕೊಡುವುದನ್ನು ಕಲಿಯಿರಿ.

ಶಿಳ್ಳೆ ಹೊಡೆಯುವುದು ಕಛಡಾ ಸಂಸ್ಕಾರ. ಇದನ್ನು ನಾನು ಸಹಿಸುವುದಿಲ್ಲ. ನನಗೆ ಅಂಥ ಪ್ರಶಂಸೆ ಬೇಕಿಲ್ಲ’ ಎಂದು ಗಂಭೀರವಾಗಿ, ಖಡಾಖಡಿ ಹೇಳಿ ಬಿಟ್ಟರು. ನಂತರ ತುಸು ಸಾವರಿಸಿಕೊಂಡು, ‘ನೀವು ಪ್ರೀತಿಯಿಂದ ಮೂರು ಸಲ ಚಪ್ಪಾಳೆ ತಟ್ಟಿ, ‘ಭೇಷ್’ ಎನ್ನಿ ಅಥವಾ ಕೈ ಮುಗಿಯಿರಿ, ಆದರೆ ಶಿಸ್ತು ಕೆಡಿಸಬೇಡಿ’ ಎಂದು ಕಿವಿಮಾತು ಹೇಳಿದರು. ಅವರು ಅಂದು ಸಂಗೀತ ನಿಲ್ಲಿಸಿ ಎದ್ದು ಹೋಗಲು ಸಿದ್ಧರಾಗಿದ್ದರು.

ನಂತರ ಸಭಾಂಗಣದ ಹಿರಿಯರು ಕ್ಷಮೆ ಕೇಳಿದ ಮೇಲೆ ಕಛೇರಿ ಮುಂದುವರಿಯಿತು. ಡಾ.ಕೃಷ್ಣನ್ ಅವರ ಆ ನಡೆಯು ಕೇವಲ ಪ್ರತಿಭಟನೆಯಾಗಿರಲಿಲ್ಲ, ಅದು ಒಂದು ಉನ್ನತ ಸಂಸ್ಕೃತಿಯ ರಕ್ಷಣೆಯಾಗಿತ್ತು. ‘ಕಲಾವಿದ ಪ್ರೇಕ್ಷಕರಿಗಾಗಿ ನುಡಿಸುತ್ತಾನೆ, ಆದರೆ ಪ್ರೇಕ್ಷಕನ ಇಚ್ಛೆಯಂತೆ ನುಡಿಸುವುದಿಲ್ಲ’ ಎಂಬ ಸತ್ಯವನ್ನು ಈ ಪ್ರಸಂಗ ಸಾರಿತು.

ಕಲೆ ನಮಗೆ ಸಂಸ್ಕಾರವನ್ನು ಕಲಿಸಿಕೊಡಬೇಕು, ಆ ಸಂಸ್ಕಾರವು ನಮ್ಮ ಮೆಚ್ಚುಗೆಯನ್ನು ಹೇಗೆ ಅಭಿವ್ಯಕ್ತಗೊಳಿಸಬೇಕು ಎಂಬುದರಲ್ಲಿ ಪ್ರತಿಫಲಿಸಬೇಕು ಎಂಬುದು ಅವರ ಆಶಯ ವಾಗಿತ್ತು. ಕಲೆಯನ್ನು ಅಪಮಾನಿಸುವ ಜಾಗದಲ್ಲಿ ಕುಳಿತುಕೊಳ್ಳುವುದು ಕಲೆಗೆ ಮಾಡುವ ದ್ರೋಹ ಎಂಬುದು ಅವರ ನಂಬಿಕೆಯಾಗಿತ್ತು.

ಒಬ್ಬ ಕಲಾವಿದನಿಗೆ ತನ್ನ ಕಲೆಗಿಂತ ದೊಡ್ಡದು ಯಾವುದೂ ಇಲ್ಲ. ಪ್ರೇಕ್ಷಕರು ಕಲೆಯನ್ನು ಗೌರವಿಸದಿದ್ದರೆ ಆ ಪ್ರದರ್ಶನಕ್ಕೆ ಬೆಲೆ ಇಲ್ಲ ಎಂಬುದನ್ನು ಅವರು ಆ ಕ್ಷಣದಲ್ಲಿ ಸಾಬೀತು ಪಡಿಸಿದ್ದರು. ಈ ಘಟನೆಯ ನಂತರ ಶಾಸೀಯ ಸಂಗೀತ ಕಛೇರಿಗಳಲ್ಲಿ ‘ಶಿಳ್ಳೆ’ ಎನ್ನುವುದು ಅಸಭ್ಯತೆಯ ಪರಾಕಾಷ್ಠೆ ಎಂಬ ಅಲಿಖಿತ ನಿಯಮವೊಂದು ಗಟ್ಟಿಯಾಯಿತು.

ಇಂದು ಯಾರಾದರೂ ತಿರಸಟ್ಟುಗಳು ಶಿಳ್ಳೆ ಹೊಡೆದರೆ ಕ್ಯಾಕರಿಸಿ ನೋಡುತ್ತಾರೆ. ಪ್ರೇಕ್ಷಕರೇ ಅಂಥವರನ್ನು ವಿಚಾರಿಸಿಕೊಳ್ಳುತ್ತಾರೆ. ಪ್ರೇಕ್ಷಕರನ್ನು ರಂಜಿಸುವುದಷ್ಟೇ ಕಲಾವಿದನ ಕೆಲಸ ವಲ್ಲ, ಆತನಲ್ಲಿ ಕಲಾ ಸ್ವೋಪಜ್ಞತೆ ಬೆಳೆಸುವುದೂ ಕಲಾವಿದನ ಕೆಲಸ ಎಂದು ಡಾ.ಕೃಷ್ಣನ್ ಹೇಳುತ್ತಿದ್ದರು.

ಹೀಗಾಗಿ ಅವರ ಸಂಗೀತ ಕಛೇರಿಗೆ ಹೋಗುವಾಗ ಜನ ಅತ್ಯಂತ ಸಭ್ಯತೆಯಿಂದ ವರ್ತಿಸುತ್ತಿದ್ದರು. ‘ಕೊಳಲು ವಾದನದ ದಂತಕಥೆ’ ಪಂಡಿತ ಹರಿಪ್ರಸಾದ ಚೌರಾಸಿಯಾ ಅವರು ಪ್ರೇಕ್ಷಕರನ್ನು ಪ್ರೀತಿಸುವ ಕಲಾವಿದ. ಆದರೆ ಅತಿರೇಕದ ವರ್ತನೆಯನ್ನು ಅವರು ಸುತರಾಂ ಮೆಚ್ಚುತ್ತಿರಲಿಲ್ಲ. ಒಮ್ಮೆ ವಿದೇಶದಲ್ಲಿ ಸಂಗೀತಗೋಷ್ಠಿಯಲ್ಲಿ ಪಂಡಿತ ಚೌರಾಸಿಯಾ ಅವರು ‘ಬಾನ್ಸುರಿ’ ನುಡಿಸುವಾಗ ಅಲ್ಲಿನ ಕೆಲವು ಜನ ಹುಚ್ಚೆದ್ದು ಕೂಗಿ, ಕುಣಿದು ಮತ್ತು ಶಿಳ್ಳೆ ಹೊಡೆಯಲು ಆರಂಭಿಸಿದರು. ಆಗ ಅವರು ನಗುಮುಖದಿಂದಲೇ ಕೊಳಲನ್ನು ಕೆಳಗಿಟ್ಟು, ‘ಈ ಕೊಳಲಿನಿಂದ ಹೊರಬರುವ ನಾದವು ನೆಮ್ಮದಿ, ಸಂತೃಪ್ತಿ, ಶಾಂತಿಯನ್ನು ನೀಡಬೇಕು. ನಿಮ್ಮ ಕಿರುಚಾಟ ಆ ಶಾಂತಿಯನ್ನು ಕಸಿದುಕೊಳ್ಳುತ್ತಿದೆ.

ನಿಮಗೆ ಸಂಗೀತ ಬೇಕೋ ಅಥವಾ ಶಬ್ದ ಬೇಕೋ ನೀವೇ ತೀರ್ಮಾನಿಸಿ’ ಎಂದರು. ಅವರ ಆ ಸೌಮ್ಯ ಪ್ರತಿಭಟನೆ ಶಿಳ್ಳೆ ಹೊಡೆಯುತ್ತಿದ್ದವರಿಗೆ ದೊಡ್ಡ ಪಾಠವಾಯಿತು. ಒಬ್ಬ ಕಲಾವಿದ ಶಿಳ್ಳೆಯನ್ನು ಪ್ರತಿಭಟಿಸುತ್ತಾನೆ ಎಂದರೆ ಅವನು ಪ್ರೇಕ್ಷಕರನ್ನು ಅವಮಾನಿಸುತ್ತಾನೆ, ದ್ವೇಷಿಸುತ್ತಾನೆ ಎಂದಲ್ಲ; ಬದಲಾಗಿ ಪ್ರೇಕ್ಷಕರು ಆ ಕಲೆಯನ್ನು ಉನ್ನತ ಮಟ್ಟದಲ್ಲಿ ಆಸ್ವಾದಿಸಲಿ ಎಂಬ ಆಶಯವನ್ನು ಹೊಂದಿರುತ್ತಾನೆ.

ಶಿಳ್ಳೆ ಕ್ಷಣಿಕ ಮೆಚ್ಚುಗೆಯಾದರೆ, ಮೌನ ಮತ್ತು ತನ್ಮಯತೆ ಆ ಕಲೆಗೆ, ಕಲಾವಿದನಿಗೆ ನೀಡುವ ನಿಜವಾದ ಗೌರವ. ಭಾರತೀಯ ಶಾಸೀಯ ಕಲೆಗಳಲ್ಲಿ ವೇದಿಕೆಯನ್ನು ‘ರಂಗದೈವ’ ಎಂದು ಪೂಜಿಸಲಾಗುತ್ತದೆ. ಶಿಳ್ಳೆ ಹೊಡೆಯುವುದು ಆ ದೈವತ್ವಕ್ಕೆ ಮಾಡುವ ಅಪಚಾರ. ಶಿಳ್ಳೆ ಹೊಡೆಯುವವನು ಕಲೆಯನ್ನು ದೂರ ನಿಂತು ಹೊರಗಿನಿಂದ ನೋಡುತ್ತಿರುತ್ತಾನೆ. ಆದರೆ ಮೌನವಾಗಿ ಲೀನವಾಗುವವನು, ಆಸ್ವಾದಿಸುವವನು ಕಲೆಯ ‘ಭಾಗ’ವೇ ಆಗಿರುತ್ತಾನೆ.

ಕಲಾವಿದನ ಆಶಯವೇನೆಂದರೆ, ಪ್ರೇಕ್ಷಕನು ತನ್ನೊಂದಿಗೆ ಆ ಕಲಾಪ್ರಪಂಚದಲ್ಲಿ ಒಂದಾಗ ಬೇಕು ಎಂಬುದೇ ಹೊರತು ಶಿಳ್ಳೆಯ ಶಬ್ದ ಆ ತನ್ಮಯತೆಯನ್ನು ಕೆಡಿಸಿ, ಪ್ರೇಕ್ಷಕನನ್ನು ಮತ್ತೆ ಲೌಕಿಕ ಜಗತ್ತಿಗೆ ಎಳೆದು ತರುವುದಲ್ಲ. ಕಲಾವಿದ ತನ್ನ ಕಲೆಗೆ ಒಬ್ಬ ‘ಕಾವಲುಗಾರ’ ನಂತೆ ಇರುತ್ತಾನೆ.

ಕಲೆ ಬಜಾರಿನ ವಸ್ತುವಾಗಬಾರದು ಎಂಬುದು ಅವನ ಹಂಬಲ. ಕಲಾವಿದ ಶಿಳ್ಳೆಯನ್ನು ಪ್ರತಿಭಟಿಸಿದಾಗ, ಅವನು ಪ್ರೇಕ್ಷಕನಿಗೆ ಕಲೆಯ ಮರ್ಯಾದೆಯನ್ನು ಕಲಿಸುತ್ತಾನೆ. ಇದರಿಂದ ಪ್ರೇಕ್ಷಕನು ಕಲೆಯನ್ನು ಇನ್ನಷ್ಟು ಗಂಭೀರವಾಗಿ ಮತ್ತು ಗೌರವಯುತವಾಗಿ ನೋಡುವು ದನ್ನು ಕಲಿಯುತ್ತಾನೆ. ಅಂದರೆ, ಕಲಾವಿದ ಪ್ರೇಕ್ಷಕನ ಅಭಿರುಚಿಯನ್ನು ಸಂಸ್ಕಾರಗೊಳಿಸು ತ್ತಿದ್ದಾನೆ ಎಂದರ್ಥ.

ಒಂದು ಕ್ರೀಡೆ ಕಲೆಯಾಗಿ ಎತ್ತರಕ್ಕೇರುವುದನ್ನು ವಿಂಬಲ್ಡನ್ ಟೆನಿಸ್ ಪಂದ್ಯ ವೀಕ್ಷಿಸುವಾಗ ಗಮನಿಸಬಹುದು. ಆ ಆಟವನ್ನು ನೋಡಲು ಬರುವ ಪ್ರೇಕ್ಷಕ ಮುಖಕ್ಕೆ ಬಣ್ಣ ಬಳಿದು ಕೊಂಡು, ಮನಸ್ಸಿಗೆ ಬಂದ ಡ್ರೆಸ್ ಧರಿಸಿ ಬರುವುದಿಲ್ಲ. ಥ್ರೀ-ಪೀಸ್ ಸೂಟು ಧರಿಸಿ ಠಾಕು-ಠೀಕಾಗಿ ಬರುತ್ತಾನೆ. ತನ್ನ ಇಷ್ಟದ ಆಟಗಾರನ ಮೋಹಕ ಹೊಡೆತಕ್ಕೆ ಮೂರು ಸಲ ಚಪ್ಪಾಳೆ ತಟ್ಟುತ್ತಾನೆ. ಎಷ್ಟೇ ಸಂತಸವಾದರೂ ಕುಣಿದು ಕುಪ್ಪಳಿಸುವುದಿಲ್ಲ. ಅದು ಆ ಕ್ರೀಡೆ ಪ್ರೇಕ್ಷಕನಿಗೆ ನೀಡಿದ ಸಂಸ್ಕಾರ. ಪ್ರತಿ ಕಲೆಯೂ ಅಂಥ ಸಭ್ಯ ಮತ್ತು ಮರ್ಯಾದೆಯ ನಡೆಯನ್ನು ಪ್ರೇಕ್ಷರಿಂದ ಬಯಸುತ್ತದೆ.

ಯಕ್ಷಗಾನದಂಥ ಶ್ರೀಮಂತ ಹಾಗೂ ಪರಿಪೂರ್ಣ ಕಲೆಯಲ್ಲಿ ಪ್ರೇಕ್ಷಕನೂ ಒಬ್ಬ ಪಾತ್ರಧಾರಿ ಎಂಬುದನ್ನು ಮರೆಯಬಾರದು. ಯಕ್ಷಗಾನದಲ್ಲಿ ಶಿಳ್ಳೆ ಸಂಸ್ಕೃತಿ ಬಂದಿದ್ದರೆ, ಅದಕ್ಕೆ ಕಾರಣ ಕೆಲವು ಯಕ್ಷಗಾನ ಕಲಾವಿದರೇ. ಯಕ್ಷಗಾನದ ಅಭಿರುಚಿಯನ್ನು ತಕ್ಕ ಮಟ್ಟಿಗೆ ಹಾಳು ಮಾಡಿದ ಶ್ರೇಯಸ್ಸಿನ ಪಾಲನ್ನು ಅಂಥ ಕೆಲವು ಕಲಾವಿದರಿಗೇ ಕೊಡಬೇಕು. ದುಡ್ಡು ಕೊಟ್ಟ ಬಂದ ಪ್ರೇಕ್ಷಕರನ್ನು ರಂಜಿಸಬೇಕು ಎಂಬ ಕಾರಣಕ್ಕೆ ಸಿನಿಮಾ ಡೈಲಾಗ್, ಡಬಲ್ ಮೀನಿಂಗ್ ಡೈಲಾಗ್, ವೈಯಕ್ತಿಕ ನಿಂದನೆ, ಮೂದಲಿಕೆ, ವೈಯಕ್ತಿಕ ಹಳಹಳಿಕೆ ಯನ್ನೆಲ್ಲ ರಂಗಸ್ಥಳಕ್ಕೆ ಎಳೆದುತಂದು ಗಬ್ಬೆಬ್ಬಿಸಿದ್ದರ ಪರಿಣಾಮವೇ ‘ಶಿಳ್ಳೆಖ್ಯಾತ’ರು ಹುಟ್ಟಿಕೊಳ್ಳಲು ಕಾರಣ.

ಮೊನ್ನೆ ನಡೆದ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಶಿಳ್ಳೆ ಹೊಡೆದ ಪ್ರೇಕ್ಷಕನನ್ನು ತರಾಟೆಗೆ ತೆಗೆದುಕೊಂಡ ಕಲಾವಿದರ ಆಶಯವನ್ನು ಕಲೆಯ ಹಿತದೃಷ್ಟಿಯಿಂದ ನಾವೆಲ್ಲರೂ ಬೆಂಬಲಿಸಬೇಕಿದೆ. ಅದು ನಿಜಕ್ಕೂ ದಿಟ್ಟ ನಿರ್ಧಾರವೇ. ಪ್ರೇಕ್ಷಕರು ಶಿಳ್ಳೆ ಹೊಡೆದಾಗ ಸಿಟ್ಟಾಗುವ ಬದಲು, ಅವರು ಆ ರೀತಿಯಾಗಿ ಪ್ರತಿಕ್ರಿಯಿಸಲು ನಾನೇನು ಕಾರಣ ಎಂಬುದನ್ನೂ ಆ ಕಲಾವಿದ ಗಂಭೀರವಾಗಿ ಯೋಚಿಸಬೇಕು.

ಪ್ರೇಕ್ಷಕರನ್ನು ಪ್ರೀತಿಯಿಂದಲೇ ಸುಸಂಸ್ಕೃತ ಕೇಳುಗ-ನೋಡುಗರನ್ನಾಗಿ ಪರಿವರ್ತಿಸುವ ಜವಾಬ್ದಾರಿ ಕೂಡ ಕಲಾವಿದರ ಮೇಲಿದೆ. ವೇದಿಕೆಯ ಮೇಲೆ ನಡೆಯುತ್ತಿರುವುದು ಕೇವಲ ಪ್ರದರ್ಶನವಲ್ಲ, ಅದು ಒಬ್ಬ ಕಲಾವಿದನ ವರ್ಷಗಳ ತಪಸ್ಸು. ಆ ತಪಸ್ಸಿಗೆ ಭಂಗ ತರದಂತೆ ನಮ್ಮ ಮೆಚ್ಚುಗೆ ಇರಬೇಕು ಎಂದು ಪ್ರೇಕ್ಷಕನೂ ಅರಿತುಕೊಳ್ಳಬೇಕು. ಪ್ರೇಕ್ಷಕರು ಕಲಾವಿದ ನನ್ನು ಆರ್ಥಿಕವಾಗಿ ಮತ್ತು ಪ್ರೋತ್ಸಾಹದ ಮೂಲಕ ಬೆಳೆಸಿದರೆ, ಕಲಾವಿದನು ತನ್ನ ಕಲೆಯ ಮೂಲಕ ಪ್ರೇಕ್ಷಕರನ್ನು ವೈಚಾರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬೆಳೆಸಬೇಕು.

ಕಲೆ ಮತ್ತು ಪ್ರೇಕ್ಷಕರ ನಡುವಿನ ಈ ಪರಸ್ಪರ ಗೌರವವೇ ಕಲಾ ಸಂಸ್ಕೃತಿಯನ್ನು ಜೀವಂತ ವಾಗಿರಿಸುತ್ತದೆ ಎಂಬುದನ್ನು ಎಲ್ಲರೂ ಅರಿಯಬೇಕಿದೆ.

ವಿಶ್ವೇಶ್ವರ ಭಟ್‌

View all posts by this author