ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rangaswamy Mookanahalli Column: ಕಣ್ಣಿಗೆ ಕಾಣುತ್ತಿಲ್ಲ ಎಂದ ಮಾತ್ರಕ್ಕೆ ಅದಿಲ್ಲ ಎಂದಲ್ಲ !

ಸಮಯ ಮತ್ತು ವೇಗ ಇವೆರಡೂ ನಮ್ಮ ಇರುವಿಕೆಯನ್ನು ಸಾರುವ ಅಂಶಗಳು. ಸಮಯದ ಮೇಲೆ, ವೇಗದ ಮೇಲೆ ನಿಯಂತ್ರಣ ಪಡೆದವರು ಅಜರಾಮರರಾಗಬಹುದು. ಅದೇ ಸಮಯದಲ್ಲಿ ನಮ್ಮ ಇರುವಿಕೆಯ ಕುರುಹೂ ಇರದಂತೆ ಬದುಕಬಹುದು. ಇವತ್ತಿನ ವಿಜ್ಞಾನ ಈ ಅಂಶವನ್ನು ಅಂದರೆ ವೇಗ ಮತ್ತು ಸಮಯದ ಅಂಶವನ್ನು ಬಹುತೇಕ ಒಪ್ಪಿಕೊಂಡಿದೆ. ಈ ವಿಜ್ಞಾನದ ಪರಿಮಿತಿ ಬಗ್ಗೆ ನನಗೆ ಕೆಲವೊಮ್ಮೆ ಅಚ್ಚರಿಯಾಗುತ್ತದೆ.

ವಿಶ್ವರಂಗ

ಎರಡು ಪ್ಲಸ್ ಎರಡು = ನಾಲ್ಕು ಎನ್ನುವುದನ್ನು ಇವತ್ತಿನ ಕಲಿಕೆ ಹೇಳಿಕೊಟ್ಟಿದೆ. ನಾವು ಅದನ್ನು ಕಲಿತಿದ್ದೇವೆ. ಎಷ್ಟರ ಮಟ್ಟಿಗೆ ಕಲಿತಿದ್ದೇವೆ ಎಂದರೆ ಅದನ್ನು ಬಿಟ್ಟು ಬೇರೆ ಉತ್ತರ ಹೇಳಿದವರನ್ನು ಪೆದ್ದ ಎನ್ನುವಷ್ಟು ! ಸನಾತನ ಧರ್ಮದಲ್ಲಿ ಹೇಳಿಕೊಟ್ಟಿದ್ದು ನಾವು ಮರೆತು ಬಿಟ್ಟಿದ್ದೇವೆ. ಸನಾತನ ಧರ್ಮದಲ್ಲಿ ನಾವು ಯಾವ ದೇವರನ್ನಾದರೂ ಪೂಜಿಸಬಹುದು. ಬೇರೆ ಬೇರೆ ನಂಬಿಕೆಗಳನ್ನು ಇಟ್ಟುಕೊಳ್ಳಬಹುದು. ಇದನ್ನೇ ಮಾಡಬೇಕು ಎನ್ನುವ ಹೇರಿಕೆ ಅಲ್ಲಿಲ್ಲ. ಏಕೆಂದರೆ ಸನಾತನದ ಮೂಲತತ್ವವೇ ಅದು. ಎಲ್ಲರೂ ಅವರಿಗೆ ಅನ್ನಿಸಿದ್ದು ಮಾಡಲು ಸ್ವತಂತ್ರರು ಎನ್ನುವುದು.

ಸಮಯ ಮತ್ತು ವೇಗ ಇವೆರಡೂ ನಮ್ಮ ಇರುವಿಕೆಯನ್ನು ಸಾರುವ ಅಂಶಗಳು. ಸಮಯದ ಮೇಲೆ, ವೇಗದ ಮೇಲೆ ನಿಯಂತ್ರಣ ಪಡೆದವರು ಅಜರಾಮರರಾಗಬಹುದು. ಅದೇ ಸಮಯದಲ್ಲಿ ನಮ್ಮ ಇರುವಿಕೆಯ ಕುರುಹೂ ಇರದಂತೆ ಬದುಕಬಹುದು. ಇವತ್ತಿನ ವಿಜ್ಞಾನ ಈ ಅಂಶವನ್ನು ಅಂದರೆ ವೇಗ ಮತ್ತು ಸಮಯದ ಅಂಶವನ್ನು ಬಹುತೇಕ ಒಪ್ಪಿಕೊಂಡಿದೆ. ಈ ವಿಜ್ಞಾನದ ಪರಿಮಿತಿ ಬಗ್ಗೆ ನನಗೆ ಕೆಲವೊಮ್ಮೆ ಅಚ್ಚರಿಯಾಗುತ್ತದೆ.

ಇಷ್ಟೊಂದು ಪರಿಮಿತಿ ಮತ್ತು ನ್ಯೂನತೆಗಳನ್ನು ಬಚ್ಚಿಟ್ಟುಕೊಂಡು ಕೂಡ ಈ ಭೂಮಿಯ ಮೇಲಿನ ಬಹುತೇಕರನ್ನು ತನ್ನ ತೆಕ್ಕೆಗೆ ಕೆಡವಿಕೊಂಡಿದೆ. ಒಂದಷ್ಟು ಜನ ವಿಜ್ಞಾನಿಗಳು ಅದ್ಯಾವುದೋ ಸಂಶೋಧನೆ ಮಾಡಿ ಹೇಳಿದ್ದನ್ನು ಬಹುಕೋಟಿ ಜನರು ಕಣ್ಣು ಮುಚ್ಚಿ ನಂಬುತ್ತಾರೆ. ಅದೇ ಸನಾತನದಲ್ಲಿ ಹೀಗೆ ಹೇಳಿದೆ ಎಂದ ತಕ್ಷಣ ಸಾವಿರ ಪ್ರಶ್ನೆಗಳು ಸಿದ್ಧವಾಗಿರುತ್ತವೆ. ಸಾವಿರಾರು ವರ್ಷದ ಜೀವನ ಸಾರವನ್ನು ನಾವು ಪ್ರಶ್ನಿಸುತ್ತೇವೆ.

ಇಲಿಯ ಮೇಲೆ ಹಂದಿಯ ಮೇಲೆ ಮಾಡಿದ ಒಂದಷ್ಟು ಕ್ಲಿನಿಕಲ್ ರಿಸರ್ಚ್ ಫಲಿತಾಂಶಗಳನ್ನು ವಿಜ್ಞಾನ, ವಿಜ್ಞಾನಿಗಳು ಹೇಳಿದರು ಎನ್ನುವ ಕಾರಣಕ್ಕೆ ಒಪ್ಪಿಕೊಂಡು ಬಿಡುತ್ತೇವೆ. ನಮ್ಮ ಪ್ರಶ್ನಿಸುವ ಗುಣ ವಿಜ್ಞಾನ ಎನ್ನುವ ಹಣೆಪಟ್ಟಿಯ ಮುಂದೆ ಮಾಡಿಯೂರಿ ಬಿಡುತ್ತದೆ. ಏಕೆಂದರೆ ನಮ್ಮನ್ನು ಈ ಹೊಸ ಶಿಕ್ಷಣ ಪದ್ಧತಿ ಬೆಳೆಸಿರುವುದು ಹಾಗೆ!

ಇದನ್ನೂ ಓದಿ: Rangaswamy Mookanahalli Column: ದ್ವಂದ್ವ ನೀತಿ ಬಿಡದೆ ಸಮಾಜದ ಉದ್ಧಾರ ಸಾಧ್ಯವಿಲ್ಲ !

ನಾನೂ ಕೂಡ ಬಹಳಷ್ಟು ವರ್ಷ ವಿದೇಶದಲ್ಲಿ ಇದ್ದವನು. ಭಾರತಕ್ಕೆ ರಜಾ ದಿನಗಳಲ್ಲಿ ಬಂದಾಗ ಇಲ್ಲಿನ ವ್ಯವಸ್ಥೆಯ ಬಗ್ಗೆ ಮಾತನಾಡಿದ್ದೇ ಮಾತನಾಡಿದ್ದು. ಇಲ್ಲಿ ಸಮಸ್ಯೆಯನ್ನು ಜನ ಮನೋ ವೈದ್ಯರ ಬಳಿ ಹೇಳಿಕೊಳ್ಳುವುದಿಲ್ಲ ಬದಲಿಗೆ ಜ್ಯೋತಿಷ್ಯ ಹೇಳುವವನ ಬಳಿ ಹೋಗುತ್ತಾರೆ, ಹೋಮ ಹವನ ಮಾಡಿಸು ತ್ತಾರೆ ಎಂದು ಗೇಲಿ ಮಾಡಿ ನಗುತ್ತಿದ್ದೆ. ಇವರಿಗೆ ಬೇಕಾಗಿರುವುದು ಒಬ್ಬ ಒಳ್ಳೆಯ ಕೌನ್ಸೆಲರ್ ಅಥವಾ ಮನೋವೈದ್ಯ ಎನ್ನುವುದು ನನ್ನ ಬಲವಾದ ನಂಬಿಕೆಯಾಗಿತ್ತು.

ಭಾರತ ಅತ್ಯಂತ ಜಟಿಲವಾದ ಸಾಮಾಜಿಕ ವ್ಯವಸ್ಥೆ ಹೊಂದಿರುವ ದೇಶ. ಇಲ್ಲಿ ಕಚ್ಚು ಎಂದರೆ ಕಪ್ಪೆಗೆ ಸಿಟ್ಟು, ಬೇಡ ಎಂದರೆ ಹಾವಿಗೆ ಸಿಟ್ಟು. ಇಲ್ಲಿ ಎಲ್ಲರಿಗೂ ಎಲ್ಲವನ್ನೂ ಹೇಳುವ ಸ್ವಾತಂತ್ರ್ಯ ವಿದೆ. ತಾವು ನಂಬಿದ ಸಿದ್ಧಾಂತವನ್ನ ಪಾಲಿಸುವ ಹಕ್ಕು ಅವರಿಗಿದೆ. ಭಾರತ ಛಿದ್ರವಾಗದೆ ಇಂದಿಗೂ ಭದ್ರವಾಗಿ ಉಳಿಯಲು ಈ ಸ್ವಾತಂತ್ರ್ಯ ಕಾರಣ. ಕೆಲವರಿಗೆ ಹೋಮಿಯೋಪತಿ ಇಷ್ಟ, ಕೆಲವರಿಗೆ ಆಯುರ್ವೇದ, ಇನ್ನು ಕೆಲವರು ನ್ಯಾಚುರೋಪತಿಗೆ ಜೈ ಎನ್ನುತ್ತಾರೆ.

ಬಹುತೇಕ ಜನ ಇಂಗ್ಲಿಷ್ ಮೆಡಿಸಿನ್‌ಗೆ ಮೊರೆ ಹೋಗಿದ್ದಾರೆ. ಯಾವುದು ಸರಿ? ಯಾವುದು ತಪ್ಪು? ಇಂಗ್ಲಿಷ್ ಮೆಡಿಸಿನ್‌ನಲ್ಲಿ ಹಲವಾರು ರೇಂಜ್ ಫಿಕ್ಸ್ ಮಾಡುತ್ತಾರೆ. ಉದಾಹರಣೆಗೆ ಬಿಪಿ, ಶುಗರ್ ಇಷ್ಟರ ನಡುವೆ ಇರಬೇಕು. ಹೀಗೆ ಎಲ್ಲದಕ್ಕೂ ಒಂದು ಮಾನದಂಡವಿರುತ್ತದೆ. ಎಲ್ಲವನ್ನೂ ತಿನ್ನು ಜೊತೆಗೆ ನಾವು ಹೇಳುವ ಮಾತ್ರೆ ಮಾತ್ರ ತಪ್ಪದೆ ತಿನ್ನು ಎನ್ನುವುದು ಅವರ ಸಿದ್ಧಾಂತ. ಆಯುರ್ವೇದ ನೀನು ತಿನ್ನುವ ಆಹಾರದ ಔಷಧವಿದೆ ಎನ್ನುತ್ತದೆ. ಪಥ್ಯ ಪಾಲಿಸು ಎನ್ನುವುದು ಇದರ ಸಿದ್ಧಾಂತ. ಭಾರತೀಯರು ಅದರಲ್ಲೂ ಹಿಂದೂಗಳು ಯಾವತ್ತೂ ಒಂದೇ ರೀತಿಯಲ್ಲಿ ಬದುಕುವ ರೀತಿ ನೀತಿಗೆ ಕಟ್ಟುಬಿದ್ದವರಲ್ಲ. ಒಂದೇ ಮನೆಯಲ್ಲಿ ಅಮ್ಮ ರಾಯರ ಭಕ್ತೆ, ಅಪ್ಪ ಅಯ್ಯಪ್ಪನ ಪರಮ ಆರಾಧಕ, ಮಗ ದೇವರೇ ಇಲ್ಲ ಎನ್ನುವ ನಿರೀಶ್ವರವಾದಿ, ಮಗಳು ಹೌದು- ಇಲ್ಲಗಳ ನಡುವಿನ ಅತಂತ್ರಿ ಹೀಗೆ ಒಂದು ಮನೆಯಲ್ಲಿ ಇಷ್ಟೊಂದು ವೈವಿಧ್ಯ ಇನ್ನೆಲ್ಲಿ ಸಿಗಲು ಸಾಧ್ಯ? ಇಂಗ್ಲಿಷ್ ಔಷಧದ ಬಗ್ಗೆ ಮತ್ತೆ ಬರೋಣ.

71 11 Namste

ಇಲ್ಲಿನ ಮಾನದಂಡಗಳನ್ನ ನಿರ್ಧರಿಸುವವರು ಯಾರು? ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕುಳಿತವರು (ಡಬ್ಲ್ಯುಎಚ್‌ಒ) ಬಿಪಿ ಮತ್ತು ಶುಗರ್‌ನಿಂದ ಹಿಡಿದು ಎಲ್ಲವುಗಳು ಇಷ್ಟಿರಬೇಕು ಎನ್ನುವುದನ್ನ ನಿರ್ಧರಿಸುವವರು ದೊಡ್ಡ ದೊಡ್ಡ ಔಷಧ ಕಾರ್ಖಾನೆಗಳನ್ನ ಹೊಂದಿದ್ದವರು ಎನ್ನುವುದು ಇವತ್ತಿಗೆ ಎಲ್ಲರಿಗೂ ತಿಳಿದ ವಿಷಯ. ಅಲ್ಲದೆ ಕೋವಿಡ್ ವಿಷಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಅಯೋಗ್ಯತನ ಜಗತ್ತಿಗೆ ತಿಳಿದಿದೆ.

ವಸ್ತುಸ್ಥಿತಿ ಹೀಗಿದ್ದೂ ಅವರು ಹೇಳಿದ್ದನ್ನ ಪಾಲಿಸಬೇಕು ಎನ್ನವುದರಲ್ಲಿ ನನಗಂತೂ ಯಾವುದೇ ಅರ್ಥ ಕಾಣುತ್ತಿಲ್ಲ. ಇಲ್ಲಿ ಇನ್ನೊಂದು ಅಂಶವನ್ನು ನಿಮಗೆ ಹೇಳಬೇಕು. ತೀರಾ ಇತ್ತೀಚಿಗೆ ಅಮೆರಿಕಾದ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಶುಗರ್ ೨೦೦ರ ತನಕ ಇದ್ದರೂ ಅದರಿಂದ ಏನೂ ತೊಂದರೆಯಿಲ್ಲ ಎಂದಿದ್ದಾರೆ. ಅಂದರೆ ಮೂರು ತಿಂಗಳಿಗೊಮ್ಮೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ಅಳೆಯುವ ಮಾನದಂಡದ ಪ್ರಕಾರ 8ರ ವರೆಗೂ ಸೇಫ್ ಎಂದರ್ಥ. ಆದರೆ ಭಾರತೀಯ ವೈದ್ಯಕೀಯ ವಿಜ್ಞಾನ ಮಂಡಳಿಗಳು ಇದನ್ನು ಸುತರಾಂ ಒಪ್ಪುತ್ತಿಲ್ಲ. ಅವರ ಪ್ರಕಾರ ಶುಗರ್ 150ರ ಒಳಗೆ ಇರಬೇಕು.

ಅಂದರೆ ಮೂರು ತಿಂಗಳ ಅವರೇಜ್ 7 ಅನ್ನು ಮೀರಬಾರದು. ಅದು 2007ರ ಒಂದು ದಿನ. ಬಾರ್ಸಿಲೋನಾ ನಗರದಲ್ಲಿದ್ದ ನನ್ನ ಆಫೀಸಿನಲ್ಲಿ ಕುಳಿತು ಅದೇನೋ ಲೆಕ್ಕಾಚಾರ ಮಾಡುತ್ತಿದ್ದೆ. ಆ ವರ್ಷದ ನನ್ನ ರಕ್ತ ಪರೀಕ್ಷೆ ಫಲಿತಾಂಶದ ಲಕೋಟೆ ನನ್ನ ಟೇಬಲ್ ಮೇಲೆ ಸಹೋದ್ಯೋಗಿ ಯೊಬ್ಬರು ತಂದಿಟ್ಟರು. ತೆಗೆದು ನೋಡಿದೆ. ಎಲ್ಲವೂ ಸಾಮಾನ್ಯವಾಗಿತ್ತು. ಆದರೆ ಪ್ಲೇಟ್‌ಲೆಟ್ ಎನ್ನುವುದು ಹದಿನೈದು ಲಕ್ಷವಾಗಿತ್ತು. ಅದನ್ನು ಅವರು ಕಪ್ಪು ಅಕ್ಷರದಲ್ಲಿ ದಪ್ಪವಾಗಿ ಮುದ್ರಿಸಿದ್ದರು.

ತಕ್ಷಣ ಹೋಗಿ ತಜ್ಞ ವೈದ್ಯರನ್ನು ಕಾಣುವಂತೆ ಶಿಫಾರಸ್ಸು ಕೂಡ ಮಾಡಿದ್ದರು. ಜೀವನದಲ್ಲಿ ಪ್ರಥಮ ಬಾರಿಗೆ ಪ್ಲೇಟ್ ಲೆಟ್ ಎನ್ನುವ ಪದವನ್ನು ಅಂದು ಕೇಳಿದ್ದು! ಅದೇನು ಎಂದು ಗೂಗಲ್ ಮಾಡಿದೆ. ನಾನು ಬದುಕಿರುವುದು ಪರಮಾಶ್ಚರ್ಯ ಎನ್ನಿಸಿ ಬಿಟ್ಟಿತು! ವೈದ್ಯಕೀಯ ವಿಜ್ಞಾನದ ಪ್ರಕಾರ ಅಷ್ಟು ದೊಡ್ಡ ಮಟ್ಟದ ಪ್ಲೇಟ್‌ಲೆಟ್ ಇರುವಂತಿಲ್ಲ. ಅದು ನಾಲ್ಕು ಲಕ್ಷ ಇಪ್ಪತ್ತು ಸಾವಿರ ದಾಟುವಂತಿಲ್ಲ!

ನನ್ನ ರಿಪೋರ್ಟ್‌ನಲ್ಲಿ ಅದು 15 ಲಕ್ಷಕ್ಕೂ ಮೀರಿದ ಸಂಖ್ಯೆ ತೋರಿಸುತ್ತಿತ್ತು! ಆ ನಂತರದ ಕಥೆ ಬರೆಯುತ್ತಾ ಹೋದರೆ ಅದೇ ಒಂದು ಪುಸ್ತಕವಾದೀತು. ಏಕೆಂದರೆ ಪ್ಲೇಟ್‌ಲೆಟ್ಸ್ ಕಡಿಮೆ ಇರುವ ಕೇಸುಗಳು ಲಕ್ಷ ಸಂಖ್ಯೆಯಲ್ಲಿ ಸಿಗುತ್ತವೆ. ಹೈ ಪ್ಲೇಟ್‌ಲೆಟ್ಸ್ ಕೇಸುಗಳು ಕೋಟಿಗೂ ಒಂದು ಸಿಕ್ಕುವು ದಿಲ್ಲ. ಹೀಗಾಗಿ ಇದರ ಬಗ್ಗೆ ಮೆಡಿಕಲ್ ಹಿಸ್ಟ್ರಿ ಇಲ್ಲವೇ ಇಲ್ಲ! ‌

ಅರ್ಥಾತ್ ಇದನ್ನು ಹೇಗೆ ಟ್ರೀಟ್ ಮಾಡಬೇಕು ಎನ್ನುವುದಕ್ಕೆ ವೈದ್ಯರಿಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಯೂರೋಪಿನಲ್ಲಿ ಪ್ರತಿ ಕಾಯಿಲೆಗೂ ಒಂದೊಂದು ಸೆಲ ಹೆಲ್ಪ ಗ್ರೂಪ್ ಗಳನ್ನು ಸೃಷ್ಟಿ ಮಾಡಿಕೊಳ್ಳುವುದು ತೀರಾ ಸಾಮಾನ್ಯ. ನನ್ನಂತೆ ಇನ್ನೂ ಇಪ್ಪತ್ತು ಜನ ಸಿಕ್ಕರು. ಜರ್ಮನಿಯಲ್ಲಿ ಇಬ್ಬರು, ಸ್ಪೇನ್‌ನಿಂದ ನಾನು, ಫ್ರಾನ್ಸ್‌ʼನಿಂದ ನಾಲ್ಕು ಜನ, ಒಬ್ಬ ಸ್ವಿಸ್‌ನವನು, ಹೀಗೆ ಒಟ್ಟಾರೆ 21/22 ಜನರ ಗುಂಪು ಅದಾಗಿತ್ತು. ಅಲ್ಲಿ ಪ್ರತಿಯೊಬ್ಬರ ಅನುಭವವೂ ಭಿನ್ನವಾಗಿತ್ತು.

ಕೇವಲ 6/7 ಲಕ್ಷ ಪ್ಲೇಟ್‌ಲೆಟ್ ಹೊಂದಿದ ವ್ಯಕ್ತಿ ಮೈ ಕೈ ನೋವಿನಿಂದ ಬಳಲಿ ಬೆಂಡಾಗಿ ಹೋಗಿದ್ದ. 28ರ ಆತ 82ರವನಂತೆ ಕಾಣಲು ಶುರುವಾಗಿದ್ದ. ಪ್ರತಿಯೊಬ್ಬರ ಗೋಳು ಕೇಳುತ್ತಾ ಹೋದಂತೆ ನನಗೆ ನೋವೇ ಇಲ್ಲವಲ್ಲ ಎನ್ನಿಸಿದ್ದು ಸುಳ್ಳಲ್ಲ. ಎರಡು ವಾರದಲ್ಲಿ ಆ ಗುಂಪಿನಿಂದ ಹೊರಬಂದೆ. ನಾವು, ನಮ್ಮ ನೋವು ಇವುಗಳ ಇರುವಿಕೆಯನ್ನು ದೂರ ಮಾಡಿಕೊಳ್ಳಬಹುದು ಎನ್ನುವುದು ಅರಿವಾಯ್ತು.

ನಮ್ಮ ಮೆದುಳಿಗೆ ಇರುವ ಶಕ್ತಿಯ ಅರಿವು ನಮಗಿಲ್ಲ. ಅದನ್ನು ಪ್ರಚೋದಿಸುವದರ ಮೂಲಕ, ನಂಬಿಕೆ ಗಟ್ಟಿಗೊಳಿಸಿಕೊಳ್ಳುವುದರ ಮೂಲಕ ಬೇಕಾದದ್ದು ಸಾಧಿಸಬಹುದು ಎನ್ನುವುದು ಕೂಡ ಅರಿವಾಯ್ತು. ವೈದ್ಯಕೀಯ ವಿಜ್ಞಾನ, ಇವತ್ತಿನ ಆಧುನಿಕ ಶಿಕ್ಷಣ ಕಲಿಸುವುದು ಬದುಕನ್ನು ಕೇವಲ ಒಂದು ನೋಟದಲ್ಲಿ ನೋಡಲು ಮಾತ್ರ ಎನ್ನುವುದು ಕೂಡ ಅರ್ಥವಾಗಿದ್ದು ಆಗಲೇ! ನಮ್ಮ ಸನಾತನ ಯಾವುದಕ್ಕೂ ನಿರ್ದಿಷ್ಟ ಮಾನದಂಡ ಹೇರುವುದಿಲ್ಲ. ನಿನ್ನ ದೃಷ್ಟಿಗೆ ತಕ್ಕಂತೆ ಸೃಷ್ಟಿ ಎನ್ನುವ ತತ್ವವನ್ನು ಹೇಳುತ್ತದೆ.

ಕಣ್ಣಿಗೆ ಕಂಡದ್ದು ಮಾತ್ರ ಸತ್ಯ ಎನ್ನುವ ಇವತ್ತಿನ ವಿಜ್ಞಾನದ ಮಿತಿಯನ್ನು ನೆನೆಸಿಕೊಂಡು ನಗು ಬರುತ್ತದೆ. ನಮ್ಮ ಕಣ್ಣಿಗೆ ಕಾಣದಿದ್ದ ಮಾತ್ರಕ್ಕೆ ಅದಿಲ್ಲ ಎನ್ನುವುದು ಎಂತಹ ಮೂರ್ಖತನ ಅಲ್ಲವೇ? ನಮಗೆ ಗೊತ್ತಿಲ್ಲ ಎನ್ನುವುದು ಸಮಂಜಸ ಉತ್ತರವಾದೀತು. ಅದು ಬಿಟ್ಟು ಎರಡು ಪ್ಲಸ್ ಎರಡು ನಾಲ್ಕು ಬಿಟ್ಟು ಬೇರೇನೂ ಅಲ್ಲ ಎನ್ನುವುದು ವಿಜ್ಞಾನದ ಪರಿಮಿತಿ. ಇನ್ ಫ್ಯಾಕ್ಟ್ ವಿಜ್ಞಾನದ ಬಹುದೊಡ್ಡ ಅಜ್ಞಾನವದು. ‌

ಸರಿಸುಮಾರು ಎರಡು ದಶಕದಿಂದ ಮಾತ್ರೆ ಇಲ್ಲದೆ ಹೈ ಪ್ಲೇಟ್‌ಲೆಟ್ಸ್‌ʼನೊಂದಿಗೆ ಆರಾಮಾಗಿ ಜೀವನ ಸಾಗಿಸುತ್ತಿದ್ದೇನೆ. ಗಿಳಿಶಾಸ್ತ್ರ ಕೇಳುವವರ ನೋಡಿ ನಾನು ನಕ್ಕಿದ್ದೇನೆ, ಮನಸ್ಸಿನಲ್ಲಿ ದೇಶವನ್ನ ಹಳಿದುಕೊಂಡಿದ್ದೇನೆ. ಮಾಸಿದ ಕೂದಲು, ಗಲೀಜು ನನ್ನ ದೇಶ ಎಂದು ಸಾವಿರ ಬಾರಿ ಎಂದು ಕೊಂಡಿದ್ದೇನೆ.

ಮೂಢನಂಬಿಕೆಗಳ ಆಗರ ಈ ದೇಶ ಎಂದು ಬಯ್ದುಕೊಂಡಿದ್ದೇನೆ. ಆದರೆ ಸನಾತನಕ್ಕೆ ಸಾವಿಲ್ಲ. ಸನಾತನದ ತತ್ವವೇ ಬೇರೆ. ಅದನ್ನು ಪಾಲಿಸಿದರೆ ಜಗತ್ತಿನಲ್ಲಿ ಅಶಾಂತಿ ಎನ್ನುವ ಪದಕ್ಕೆ ಅರ್ಥವೇ ಇರುವುದಿಲ್ಲ. ಗಿಳಿಶಾಸ್ತ್ರ ಕೇಳಿದ ವ್ಯಕ್ತಿಗೆ ಮನಶ್ಶಾಂತಿ ನೀಡುವುದಾದರೆ ಅದರಲ್ಲಿ ತಪ್ಪೇನು? ಗಿಳಿಶಾಸ್ತ್ರ ಹೇಳಿದವನಿಗೂ ಅದು ಅನ್ನದ ದಾರಿಯಾಯ್ತು ಎನ್ನುವ ಸನಾತನ ಚಿಂತನೆ ನಮ್ಮದಾಗಿಸಿಕೊಂಡರೆ ಸಾಕು. ಎಲ್ಲರೂ ನಮ್ಮವರು ಎನ್ನುವ ಭಾವನೆ ಉದ್ಭವವಾಗುತ್ತದೆ.

ನಾನು ಮೊದಲ ಸಾಲುಗಳಲ್ಲಿ ಹೇಳಿದಂತೆ ಬದುಕು ಎಂದರೆ ಎರಡು ಪ್ಲಸ್ ಎರಡು ನಾಲ್ಕು ಆಗುವುದು ನಿಮ್ಮ ಗಣಿತದಲ್ಲಿ, ವಿಜ್ಞಾನದಲ್ಲಿ. ಜೀವನದಲ್ಲಿ ಅದಕ್ಕೆ ಅಪರಿಮಿತ ಅರ್ಥಗಳನ್ನ ಕಟ್ಟಿಕೊಳ್ಳಬಹುದು. ಈ ಲೇಖನದ ಉದ್ದೇಶ ಯಾರನ್ನೂ ತಪ್ಪು ಸರಿ ಎನ್ನುವುದಲ್ಲ. ಏಕೆಂದರೆ ಸನಾತನ ಜೀವನ ಪದ್ಧತಿ ಅಂತಹುದು. ಎಲ್ಲರೂ ಏಕೆ ಒಂದೇ ರೀತಿಯಲ್ಲಿ ಯೋಚಿಸಬೇಕು? ಎಲ್ಲರೂ ಒಂದೇ ದೇವರನ್ನು ಏಕೆ ನಂಬಬೇಕು? ಯಾರಿಗೆ ಯಾವ ಆಚರಣೆ, ವಿಚಾರದಲ್ಲಿ ಸುಖ ಸಿಗುತ್ತದೆ ಅದನ್ನು ಮಾಡುತ್ತಾರೆ. ನಿಜವಾದ ಸನಾತನಿ ಯಾರನ್ನೂ ದೂಷಿಸುವುದಿಲ್ಲ, ಹಂಗಿಸುವು ದಿಲ್ಲ. ಏಕೆಂದರೆ ಆತನಿಗೆ ಬದುಕು ಎಂದರೆ ಬೈನರಿಯಲ್ಲ ಎನ್ನುವ ಅರಿವು ಎಲ್ಲರಿಗಿಂತ ಚೆನ್ನಾಗಿ ಗೊತ್ತಿದೆ.

ರಂಗಸ್ವಾಮಿ ಎಂ

View all posts by this author