ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayak V Bhat Column: ಕನಕದಾಸರ ರಾಮ (ಧಾನ್ಯ) ಚರಿತೆ: ಸಾರ ಸಂಗ್ರಹ

ನಿಷಧರಾಜ ನಳ, ಅಯೋಧ್ಯಾಪತಿ ಶ್ರೀರಾಮ, ಕುರುಕುಲ ತಿಲಕನಾದ ನೀನು ಹಾಗೂ ಸತ್ಯಪಾಲನೆಗೆ ಖ್ಯಾತಿವೆತ್ತ ರಾಜಾ ಹರಿಶ್ಚಂದ್ರ. ಅವರುಗಳಲ್ಲಿ, ಶ್ರೀರಾಮನು ಅತ್ಯಂತ ಗುಣಶೀಲನಾಗಿದ್ದಾನೆ" ಎಂದು ಶಾಂಡಿಲ್ಯ ಮುನಿಯು ನುಡಿಯುತ್ತಾನೆ. “ಒಮ್ಮೆ ನೆಲ್ಲು (ವ್ರಿಹಿಗ) ಹಾಗೂ ರಾಗಿ (ನರೆದಲೆಗ)ಗಳ ನಡುವೆ ಮೂಡಿದ್ದ ಜಗಳವನ್ನು ನಿವಾರಿಸಿ, ಸರಿಯಾದ ನ್ಯಾಯ ವನ್ನು ಹೇಳಿ ಶ್ರೀರಾಮನು ಧರ್ಮವನ್ನು ಪಾಲಿ ಸಿದ" ಎನ್ನುವ ಕಥೆಯ ಬಗ್ಗೆ ಉಲ್ಲೇಖಿಸುತ್ತಾ ಶಾಂಡಿಲ್ಯರು ಧರ್ಮರಾಜನಲ್ಲಿ ಕುತೂಹಲ ಹುಟ್ಟಿಸುತ್ತಾರೆ

ಕನಕದಾಸರ ರಾಮ (ಧಾನ್ಯ) ಚರಿತೆ: ಸಾರ ಸಂಗ್ರಹ

ವಿದ್ಯಮಾನ

ವಿನಾಯಕ ವೆಂ.ಭಟ್ಟ, ಅಂಬ್ಲಹೊಂಡ

ಹಿಂದಿನ ವಾರದ ಪೀಠಿಕಾ ಪ್ರಕರಣವನ್ನು ಓದಿದ್ದೀರಿ, ಈಗ ನೇರವಾಗಿ ಭಕ್ತ ಕನಕದಾಸರ ಕಾವ್ಯ ಪ್ರವೇಶ ಮಾಡಿಬಿಡೋಣ. ‘ರಾಮಧಾನ್ಯದ ಕೃತಿಯನೀ ಜನ ದಾಮವೆದರಿಸುವಂದದಿ ಭೂಮಿ ಗಚ್ಚರಿಯಾಗಿ ಪೇಳುವೆನೀ ಮಹಾಕಥೆಯ, ಪ್ರೇಮದಿಂದಾದರಿಸಿ ಕೇಳ್ದ ಸನಾಮರಿಗೆ ಸತ್ಕರುಣದಲಿ ರಾಮ ಪಾಲಿಸಿಕೊಡುವ ಮನದಲಿ ಇಷ್ಟಸಂಪದವ’ ಎನ್ನುವ ಪದ್ಯದಿಂದ ರಾಮಧಾನ್ಯ ಚರಿತ್ರೆಯ ಆರಂಭವಾಗುತ್ತದೆ. ‘ಧರೆಯನೆಲ್ಲವ ಸೋತು ಜೂಜಲಿ ಕುರುಪತಿಗೆ, ಕೈದಳಿಸಿ ತಮ್ಮಂದಿರು ಸಹಿತ ಧರ್ಮಜನು ಕಾಮ್ಯಕ ವನದೊಳಿರುತಿರಲು ಪರಮ ಋಷಿ ಶಾಂಡಿಲ್ಯ ಸತ್ಕರುಣದಲಿ ನಡೆತಂದ ನಲ್ಲಿಗೆ ವರ ತಪೋಧನ ರೊಡನೆ ಕಾಣಿಸಿಕೊಂಡನುಚಿತದಲಿ’- ಜೂಜಿನಲ್ಲಿ ಎಲ್ಲವನ್ನೂ ಕಳೆದು ಕೊಂಡ ಧರ್ಮಜನು ತಮ್ಮಂದಿರೊಡಗೂಡಿ ವನವಾಸದಲ್ಲಿರುವಾಗ, ಅಲ್ಲಿಗೆ ಶಾಂಡಿಲ್ಯ ಮುನಿಯ ಆಗಮನವಾಗುತ್ತದೆ.

ಅವರಿಗೆ ವಂದಿಸಿ ಸತ್ಕರಿಸಿದ ಧರ್ಮರಾಜನಿಗೆ ಶಾಂಡಿಲ್ಯ ಮುನಿಯು ಸಮಾಧಾನ ಹೇಳುವ ರೀತಿ ಯಲ್ಲಿ, “ನೃಪಸಿರಿ- ದರಿದ್ರತೆ ನಿಲದು, ಪರಿಹಾರವಹುದು" ಎಂದು ನುಡಿಯುತ್ತಾನೆ. ಆಗ ಧರ್ಮ ಜನು “ದೇವಋಷಿಗಳು ನಿಮ್ಮ ಕರುಣೆ ನಮ್ಮ ಮೇಲಿರುವಾಗ ನಮಗೆ ಯಾವ ಕಷ್ಟವೂ ಬರದು. ನಿಮ್ಮ ದರ್ಶನದಿಂದ ನಾವು ಪಾವನರಾದೆವು ಸ್ವಾಮಿ, ನಮಗೆ ನೀವು ಈಗ ಯಾವ ಸದ್ವಿಷ ಯವನ್ನು ಅರುಹುವವರಿದ್ದೀರಿ?" ಎಂದು ಕೇಳಲಾಗಿ, “ಯುಧಿಷ್ಠಿರ, ಭೂಮಿಯಲ್ಲಿ ಅಧಿಕವಾದ ಖ್ಯಾತಿಯನ್ನು ಹೊಂದಿರುವ ನಾಲ್ಕು ಅರಸುಗಳಿದ್ದಾರೆ.

ಅವರುಗಳೆಂದರೆ, ನಿಷಧರಾಜ ನಳ, ಅಯೋಧ್ಯಾಪತಿ ಶ್ರೀರಾಮ, ಕುರುಕುಲ ತಿಲಕನಾದ ನೀನು ಹಾಗೂ ಸತ್ಯಪಾಲನೆಗೆ ಖ್ಯಾತಿವೆತ್ತ ರಾಜಾ ಹರಿಶ್ಚಂದ್ರ. ಅವರುಗಳಲ್ಲಿ, ಶ್ರೀರಾಮನು ಅತ್ಯಂತ ಗುಣಶೀಲನಾಗಿದ್ದಾನೆ" ಎಂದು ಶಾಂಡಿಲ್ಯ ಮುನಿಯು ನುಡಿಯುತ್ತಾನೆ. “ಒಮ್ಮೆ ನೆಲ್ಲು (ವ್ರಿಹಿಗ) ಹಾಗೂ ರಾಗಿ (ನರೆದಲೆಗ)ಗಳ ನಡುವೆ ಮೂಡಿದ್ದ ಜಗಳವನ್ನು ನಿವಾರಿಸಿ, ಸರಿಯಾದ ನ್ಯಾಯ ವನ್ನು ಹೇಳಿ ಶ್ರೀರಾಮನು ಧರ್ಮವನ್ನು ಪಾಲಿಸಿದ" ಎನ್ನುವ ಕಥೆಯ ಬಗ್ಗೆ ಉಲ್ಲೇಖಿಸುತ್ತಾ ಶಾಂಡಿಲ್ಯರು ಧರ್ಮರಾಜನಲ್ಲಿ ಕುತೂಹಲ ಹುಟ್ಟಿಸುತ್ತಾರೆ.

ಇದನ್ನೂ ಓದಿ: Vinayak V Bhat Column: ಸದಾ ವತ್ಸಲೆಯ ಸೇವೆಯಲ್ಲಿ ಸವೆದ ನೂರು ವರ್ಷ

ಆಗ ಧರ್ಮರಾಯನು, ರಾಮಚರಿತೆಯನ್ನು ಸಂಪೂರ್ಣವಾಗಿ ತಮಗೆ ಹೇಳಬೇಕೆಂದು ಶಾಂಡಿಲ್ಯ ಮುನಿಯನ್ನು ಬಿನ್ನವಿಸಲು, ಆ ಮುನಿಪನು ಅಲ್ಲಿದ್ದವರಿಗೆಲ್ಲ ರಾಮನ ಕಥೆಯನ್ನು ವಿಸ್ತರಿಸಿ ಹೇಳಲು ಉದ್ಯುಕ್ತನಾಗುತ್ತಾನೆ. ಧರ್ಮರಾಯನು, ರಾಮಚರಿತೆಯನ್ನು ಸಂಪೂರ್ಣವಾಗಿ ತಮಗೆ ಹೇಳಬೇಕೆಂದು ಕೇಳುತ್ತಾನೆಯೇ ಹೊರತು, ಕೇವಲ ನೆಲ್ಲು (ವ್ರಿಹಿಗ) ಹಾಗೂ ರಾಗಿ (ನರೆದಲೆಗ) ಗಳ ನಡುವೆ ಮೂಡಿದ್ದ ಜಗಳವನ್ನು ನಿವಾರಿಸಿದ ಕಥೆಯನ್ನಲ್ಲ ಎನ್ನುವುದನ್ನು ನಾವು ಇಲ್ಲಿ ಗಮನಿಸ ಬೇಕು, ಶಾಂಡಿಲ್ಯರ ಕಥಾವಾಚನ ಪ್ರಾರಂಭವಾಗುತ್ತದೆ, “ಕೇಳು ಕುಂತೀತನಯ, ಗಂಗಾ ನದಿಯ ದಡದ ಉತ್ತರ ಭಾಗದಲ್ಲಿ ವಿಶಾಲವಾಗಿಯೂ, ವೈಭವಯುತವಾಗಿಯೂ ಇರುವ ಅಯೋಧ್ಯಾಪುರ. ಆ ಪುರದ ಅರಸ ದಶರಥ.

ಅವನಿಗೆ ಕೌಸಲ್ಯೆ, ಕೈಕೆ ಹಾಗೂ ಸುಮಿತ್ರೆ ಎಂಬ ಮೂವರು ರಾಣಿಯರು. ಆ ದಶರಥ ಹಾಗೂ ಕೌಸಲ್ಯೆಯರಿಗೆ ಜನಿಸಿದ ಗುಣನಿಧಿಯೇ ಶ್ರೀರಾಮ. ಅವನು ತಾಟಕಿಯೆಂಬ ರಾಕ್ಷಸಿಯನ್ನು ಸಂಹರಿಸಿ, ಮಾರೀಚ-ಸುಬಾಹುಗಳನ್ನು ಕೊಂದು, ವಿಶ್ವಾಮಿತ್ರ ಮುನಿಯು ನಡೆಸುತ್ತಿದ್ದ ಮಖ (ಯಾಗ) ವನ್ನು ಯಾವುದೇ ವಿಘ್ನ ಬಾರದಂತೆ ರಕ್ಷಿಸಿದನು. ಆ ನಂತರದಲ್ಲಿ ರಾಮನು ಗೌತಮನ ಸತಿ ಅಹಲ್ಯೆಯ ಶಾಪವನ್ನು ನಿವಾರಿಸಿ, ತನ್ನ ತಮ್ಮ ಲಕ್ಷ್ಮಣ ಹಾಗೂ ಮುನಿ ವಿಶ್ವಾಮಿತ್ರ ನೊಡಗೂಡಿ ಮಿಥಿಲಾನಗರಕ್ಕೆ ಬಂದನು.

ಮುಂದೆ, ಅಲ್ಲಿನ ಅರಸನಾದ ಜನಕನ ಮಗಳು ಸೀತೆಯ ಸ್ವಯಂವರದಲ್ಲಿ ಶಿವಧನುಸ್ಸನ್ನು ಹೆದೆಯೇರಿಸಿ ಮುರಿದು, ಶುಭಮುಹೂರ್ತದಲ್ಲಿ ರಾಮನು ಸೀತೆಯನ್ನು ವರಿಸಿದನು. ಆ ನಂತರದಲ್ಲಿ ರಾಮನು ತನ್ನವರೊಡಗೂಡಿ ಅಯೋಧ್ಯೆಗೆ ಹೊರಟುಬಂದನು. ಆಮೇಲೆ ರಾಮನಿಗೆ ಕೂಡ, ನಿಮ್ಮಂತೆಯೇ ವನವಾಸ ಮಾಡಬೇಕಾಗಿ ಬಂತು. ಪಿತೃವಚನ ಪಾಲನೆಗೆಂದು ರಾಮನು ತನ್ನ ಮಡದಿ ಸೀತೆ ಹಾಗೂ ಲಕ್ಷ್ಮಣರೊಂದಿಗೆ ಘೋರವಾದ ಕಾನನದಲ್ಲಿ ಇರಬೇಕಾಯಿತು.

ಭರತನನ್ನು ಸಂತೈಸಿ, ಕಾಕಾಸುರನ ಪ್ರಾಣವ ಕಾಯ್ದು, ದಾನವ ತರುಣಿ (ಶೂರ್ಪನಕಿ) ನಾಸಿಕ ವರಿದು, ಮಾಯಾಮೃಗವ ಸಂಹರಿಸಿ, ಸರಸಿಜಾಕ್ಷಿ ಯನಗಲಿ, ಮಾರ್ಗಾಂತರದಿ ಕಂಡ ಜಟಾಯು
ವಿನಿಂದ ಸೀತಾಪಹರಣದ ವೃತ್ತಾಂತವನ್ನು ತಿಳಿಯುತ್ತಾನೆ.

ನಂತರ ಜಟಾಯುವು ಮೃತನಾಗುತ್ತಾನೆ. ಅವನ ಅಂತ್ಯಸಂಸ್ಕಾರವನ್ನು ನೆರವೇರಿಸಿದ ನಂತರ ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತ ಹೊರಡುತ್ತಾರೆ. ಮಾರ್ಗ ಮಧ್ಯದಲ್ಲಿ ಹನುಮನನ್ನು ಕಂಡು, ಕಿಷ್ಕಿಂದೆಯನ್ನು ತಲುಪಿ, ಅಲ್ಲಿ ವಾಲಿಯನ್ನು ಸಂಹರಿಸಿ, ಸುಗ್ರೀವನು ಕಳುಹಿಸಿದ ವಾನರ ಸೈನ್ಯವನ್ನು ಒಡಗೊಂಡು ರಾಮನು ದಕ್ಷಿಣಕ್ಕೆ ಹೊರಟನು. ಸಮುದ್ರವನ್ನು ದಾಟಲು ಸೇತು ಬಂಧವನ್ನು ನಿರ್ಮಿಸಿ, ಲಂಕೆಯನ್ನು ತಲುಪಿ, ರಾವಣ ಕುಂಭಕರ್ಣಾದಿ ದಾನವ ವೀರರನ್ನು ಕೊಂದು, ರಾಮನು ನಂತರದಲ್ಲಿ ವಿಭೀಷಣನಿಗೆ ಪಟ್ಟವನ್ನು ಕಟ್ಟಿದನು. ಆ ನಂತರ ರಾಮನು ಸೀತೆಯನ್ನು ಕೈಕೊಂಡು, ತಮ್ಮೊಡನೆ ಅಯೋಧ್ಯೆಗೆ ಬರಲು ವಿಭೀಷಣನನ್ನೂ ಅಹ್ವಾನಿಸುತ್ತಾನೆ.

ವಿಭೀಷಣನು ತನಗೆಂದು ಅರ್ಪಿಸಿದ ಕುಬೇರನ ರಥದಲ್ಲಿ ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರೊಡನೆ ಕುಳಿತಿರಲು, ಅವರೊಡನೆ ಹನುಮ, ಜಾಂಬವಂತ, ವಿಭೀಷಣಾದಿಯಾಗಿ, ದಾನವ ಹಾಗೂ ವಾನರ ಸೈನ್ಯವೂ ಅಯೋಧ್ಯೆಯೆಡೆಗೆ ಹೊರಡುತ್ತದೆ. ಮಾರ್ಗ ಮಧ್ಯದಲ್ಲಿ ಇವರೆಲ್ಲ ವಾಲ್ಮೀಕಿ, ಮುಚು ಕುಂದ ಮುಂತಾದ ಮುನಿಗಳ ಆಶ್ರಮಗಳನ್ನು ಸಂದರ್ಶಿಸಿದರು. ಅಲ್ಲಿ ಹಲವಾರು ಮುನಿವರರು ಬಂದು ರಾಮನನ್ನು ಕಂಡು ಅಕ್ಷತೆ ಹಾಕಿ ಹರಸಿದರು (ಕೌಶಿಕನು, ಜಮದಗ್ನಿ, ಜನ್ಹು, ಪರಾಶರನು, ಜಾಬಾಲಿ, ಭೃಗು, ದೂರ್ವಾಸ, ಗೌತಮನಾದಿಯಾದ ಸಮಸ್ತ ಮುನಿವರರು ಭಾಸುರದ ತೇಜದಲಿ ತಮ್ಮ ನಿವಾಸವನು ಹೊರವಂಟು ಬಂದರು, ದಾಶರಥಿಯನು ಕಂಡು ಹರಸಿದರಕ್ಷತೆಯ ತಳಿದು). ಅವರೆಲ್ಲ ರಾಮನನ್ನು ಮನಸಾರೆ ಪ್ರಾರ್ಥಿಸಿ, ಹೊಗಳಿ, ವಿವಿಧ ಬಗೆಯಲ್ಲಿ ಸತ್ಕರಿಸುತ್ತಾರೆ (ಅಲ್ಲಿ ನೆರೆದ ಮಹಾಮುನೀಶ್ವರರೆಲ್ಲ ತರಿಸಿದರಖಿಳ ವಸ್ತುವ -ಬೆಲ್ಲ, ಸಕ್ಕರೆ, ಜೇನುತುಪ್ಪ, ರಸಾಯನಂ ಗಳಲಿ ಭುಲ್ಲವಿಸಿ ರಚಿಸಿದ ಸುಭಕ್ಷಗಳೆಲ್ಲವನು ತುಂಬಿದರು ಹೆಡಗೆಗಳಲ್ಲಿ. ಜೋಡಿಸಿ, ಹೊರಿಸಿ ತಂದರು ರಾಮನೋಲಗಕೆ).

ರಾಮನೂ ಸೇರಿ ಅವನೊಡನೆ ಬಂದವರೆಲ್ಲ ಋಷಿಗಳು ನೀಡಿದ ಆ ರುಚಿರುಚಿಯಾದ ಭೋಜ್ಯ ಗಳೆಲ್ಲವನ್ನು ಮನಸಾರೆ ಸವಿಯುತ್ತಾರೆ ಮತ್ತು ಆತಿಥ್ಯಕ್ಕಾಗಿ ಮುನಿವರರನ್ನು ಆನಂದದಿಂದ ಕೊಂಡಾಡುತ್ತಾರೆ. ಆಗ ರಾಮನು ಹನುಮನನ್ನು ಕರೆದು ಆ ಭಕ್ಷ್ಯಗಳ ರುಚಿಗೆ ಕಾರಣವನ್ನು ಕುರಿತು ಪ್ರಶ್ನಿಸುತ್ತಾನೆ (ಅನಿಲಸುತ ಬಾರೆಂದು ರಘುನಂದನನು ‘ಕರುಣದೊಳಿವರ ರುಚಿಯೆಂತೆನಲು’, ಕರಗಳ ಮುಗಿದು ಬಿನ್ನೈಸಿದನು ರಘುಪತಿಗೆ ‘ಇನಕುಲಾನ್ವಯತಿಲಕ ಚಿತ್ತೈಸೆನಗೆ ಸವಿಯಹುದಿನ್ನು ಧಾನ್ಯದ ತನುವನೀಕ್ಷಿಸಬೇಕು, ದೇವರು ತರಿಸಿ ನೀವೆಂದ’). ಆಗ ಹನುಮನು ‘ನೀನು ಹೇಳಿದ ಹಾಗೆ ಭಕ್ಷ್ಯಗಳೇನೋ ಬಹಳ ರುಚಿಯಾಗಿವೆ. ಆದರೆ ಈ ಭಕ್ಷ್ಯಗಳನ್ನು ಯಾವ ಯಾವ ಧಾನ್ಯಗಳಿಂದ ತಯಾರಿಸಿದ್ದಾರೋ ಆ ಧಾನ್ಯಗಳನ್ನೆಲ್ಲ ಒಮ್ಮೆ ನೀನು ನೋಡಬೇಕು ಎನ್ನುವುದು ನನ್ನ ಮನದಿಂಗಿತವಾಗಿದೆ, ದಯವಿಟ್ಟು ತಾವು ಆ ಧಾನ್ಯಗಳನ್ನು ತರಿಸಲು ಹೇಳುವಂತೆ ರಾಮನನ್ನು ಕೇಳುತ್ತಾನೆ.

ಹಾಗೇ ಆಗಲಿ ಎಂದು ರಾಮನು ಗೌತಮ ಮುನಿಯನ್ನು ’ಎಲ್ಲ ಧಾನ್ಯಗಳನ್ನು ಅಲ್ಲಿಗೆ ತರಿಸಬೇಕು’ ಎಂದು ಕೇಳಿಕೊಳ್ಳುತ್ತಾನೆ. ಆಗ ಗೌತಮ ಮುನಿಯ ಶಿಷ್ಯರು ಅಂದಿನ ಅಡುಗೆಗೆ ಬಳಸಿದ ಎಲ್ಲ ತರಹದ ಧಾನ್ಯಗಳನ್ನೂ ಹೊತ್ತು ತಂದು ಅಲ್ಲಿದ್ದವರೆಲ್ಲರ ಮುಂದಿಡುತ್ತಾರೆ. ‘ನರೆದಲೆಗನಿದು, ನೆಲ್ಲು, ಹಾರಕ, ಬರಗು, ಜೋಳವು, ಕಂಬು, ಸಾಮೆಯು, ಉರುತರದ ನವಣೆಯಿದು ನವಧಾನ್ಯ ವೆಂದೆನಲು, ಮೆರೆವ ರಾಶಿಯ ಕಂಡು ‘ಇದರೊಳು ಪರಮಸಾರದ ಹೃದಯನಾರೆಂದರಸಿ’ ಕೇಳಿದ ನಲ್ಲಿರುತಿಹ ಮಹಾಮುನೀಶ್ವರರ. ನರೆದಲೆಗ (ರಾಗಿ), ನೆಲ್ಲು (ಭತ್ತ), ಹಾರಕ, ಬರಗು, ಕಂಬು, ಸಾಮೆ, ನವಣೆ ಹೀಗೆ ಬಗೆಬಗೆಯ ಎಲ್ಲ ಧಾನ್ಯಗಳ ಹೆಸರುಗಳನ್ನೂ ಒಂದೊಂದಾಗಿ ಹೇಳುತ್ತಿರಲು, ರಾಮನು ‘ಈ ಧಾನ್ಯಗಳಲ್ಲಿ ಉತ್ತಮವಾದದ್ದು ಯಾವುದು?’ ಎಂದು ಅಲ್ಲಿದ್ದ ಮುನಿಗಳನ್ನು ಕೇಳುತ್ತಾನೆ.

ಆಗ ಅಲ್ಲಿದ್ದ ಕೆಲವರು ಗೋಧಿಯನ್ನೂ, ಕೆಲವರು ಸಾಮೆಯನ್ನೂ, ಕೆಲವರು ಇತರ ಧಾನ್ಯ ಗಳನ್ನೂ, ಕೆಲವರು ಭತ್ತವನ್ನೂ, ಹಾಗೇ ಇನ್ನೂ ಕೆಲವರು ರಾಗಿಯನ್ನೂ ಪತಿಕರಿಸಿ (ಪುರಸ್ಕರಿಸಿ) ನುಡಿದರು. ಆದಕ್ಕೆ ರಾಮನು ‘ಹೀಗೆ ಹಲವು ಅಭಿಪ್ರಾಯಗಳೇಕೆ, ಯಾವುದಾದರೂ ಒಂದನ್ನು ಉತ್ತಮ ಎಂದು ಒಪ್ಪಿ ಹೇಳಿ’ ಎನ್ನಲು, ಋಷಿ ಗೌತಮನು ‘ಕೇಳು ದಾಶರಥಿ, ನಮ್ಮ ದೇಶಕ್ಕೆ ಅತಿಶಯವಾದ ಈ ನರೆದಲೆಗನೇ (ರಾಗಿ) ಮಿಕ್ಕೆಲ್ಲವುಗಳಿಗಿಂತ ಉತ್ತಮವಾದ ಧಾನ್ಯ.

ಏಕೆಂದರೆ..’ ಎಂದು ಕಾರಣಕೊಡುವಷ್ಟರ, ಅಲ್ಲಿದ್ದ ನೆಲ್ಲಿಗೆ (ವ್ರಿಹಿಗ) ಅವಮಾನ ಸಹಿತವಾದ ಕೆಂಡಾಮಂಡಲ ಸಿಟ್ಟು ಬರುತ್ತದೆ. ಕೂಡಲೆ ನೆಲ್ಲು ಗೌತಮನನ್ನು ಕುರಿತು, ‘ಆಹಾ! ಲೇಸನಾಡಿದಿರಿ ಗೌತಮರೇ, ದೋಷರಹಿತರಾದ ನೀವೂ ಹೀಗೆ ಅನೃತ ನುಡಿಯಬಹುದೇ. ಎಲ್ಲ ಧರ್ಮಗಳ ಸಾರ ವನ್ನೂ ಅರಿತ ನೀವು ಹೀಗೆ ಉಪೇಕ್ಷಿಸಿ ನುಡಿಯುವುದು ಸರಿಯೇ? ನೆಲ್ಲು ನಾನಿರುವಾಗ, ಗೋಧಿ ಮುಂತಾದ ಎಲ್ಲ ಧಾನ್ಯಗಳೂ ಇಲ್ಲಿರುವಾಗ ಇವರೆಲ್ಲರಲ್ಲಿ ಈ ರಾಗಿಯೇ ಶ್ರೇಷ್ಠ ಎಂದು ಹೇಳು ವುದು ಎಷ್ಟು ಸರಿ. ಇದಾವ ನ್ಯಾಯ?’ ಎಂದು ಗೌತಮನನ್ನು ಪ್ರಶ್ನಿಸುತ್ತದೆ.

ಅಷ್ಟಕ್ಕೇ ನಿಲ್ಲಿಸದೇ, ಭತ್ತವು ಸುಮ್ಮನೆ ನಿಂತಿದ್ದ ರಾಗಿಯನ್ನು ಹೀಯಾಳಿಸಿ ನುಡಿಯತೊಡಗುತ್ತದೆ. ‘ಏನೆಲವೋ ನರೆದಲೆಗ, ನೀನು ನನಗೆ ಸಮಾನನೇ ಇಲ್ಲಿ? ನಮ್ಮಿಬ್ಬರನ್ನು, ನಮ್ಮ ಹೆಚ್ಚು-ಕುಂದು ಗಳನ್ನು ಕುರಿತು ಶ್ರೀರಾಮನು ಚೆನ್ನಾಗಿ ಬಲ್ಲ. ಜಾನಕೀಪತಿಯು ತಾನಿರುವ ಈ ಸಭೆಯಲ್ಲಿ ಕುಲಹೀನನಾದ, ಮತಿಹೀನನಾದ ನೀನೂ ಇರುವೆಯಲ್ಲ.

ಅಬ್ಬಾ! ಲೋಕದಲ್ಲಿ ನೀನು ಮಹಾಭೋಜನವೆಂದೇ ವೀರರೂ, ವಿದ್ವಾಂಸರೂ ನಿನ್ನನ್ನು ನಿರಾಕರಿಸಿದರಲ್ಲವೇ? ಅದಕ್ಕೇ ನೀನು ಶೂದ್ರಾನ್ನವಾದೆ ಅಲ್ಲವೇ. ಆ ದೇವತೆಗಳೇ ಸಾಕ್ಷಿ,
ವಿವೇಕಿ ಗಳೆನಿಸಿಕೊಂಡವರು ಯಾರಾದರೂ ನಿನ್ನನ್ನು ಮೆಚ್ಚುವರೇ? ಛಿ! ಬಾಹಿರ, ಇಲ್ಲಿ ನೀನಾವ ಮಾನ್ಯನೋ.. ಸಾಕು ತೊಲಗು ಇಲ್ಲಿಂದ’ ಎನ್ನುವಲ್ಲಿಗೆ ನಿಲ್ಲಿಸದೇ, ‘ಬ್ರಾಹ್ಮಣರ ಮನೆಗಳಲ್ಲಿನ ಉಪನಯನ, ವ್ರತ ಮುಂತಾದ ಸಮಾರಂಭಗಳಲ್ಲಿ, ಮಂತ್ರಾಕ್ಷತೆಗಳಲ್ಲಿ, ಶುಭಕಾರ್ಯಗಳಲ್ಲಿ, ಹಿರಿಯರಲ್ಲಿ, ಯಜ್ಞ-ಯಾಗಾದಿಗಳು ನಡೆಯುವಲ್ಲಿ, ಅರಮನೆಯಲ್ಲಿ, ಎಲ್ಲ ಕಡೆಯೂ ನಾನು ಇರಲೇಬೇಕು. ಅಷ್ಟೇನು, ದೇವರಿಗೆ ಪ್ರಿಯವಾದ ನೈವೇದ್ಯಕ್ಕೂ ನಾನಿರಲೇಬೇಕು.

ಬ್ರಾಹ್ಮಣರು ಮಂತ್ರತಂತ್ರೋಚ್ಚಾರಣೆಯಲ್ಲಿ ತಮ್ಮ ಕೈಯಲ್ಲಿ ತಳೆದು, ಹರಸಿ ಕೊಡುವ ಮಂತ್ರಾ ಕ್ಷತೆಯು ನಾನು. ಆ ಮಂತ್ರಾಕ್ಷತೆಯನ್ನು ತಮ್ಮ ತಲೆಯ ಮೇಲೆ ತಳೆದ ಮಹನೀಯರಿಗೆ ಅವರ ದುಃಖ-ದುರಿತಗಳೆಲ್ಲವನ್ನೂ ಕಳೆದು, ಅವರಿಗೆ ಸಿರಿ ಸಂಪತ್ತನ್ನೂ, ಆಯುರಾರೋಗ್ಯವನ್ನೂ ತಂದು ಕೊಡುವವನು ನಾನೇ’ ಎಂದು ಭತ್ತ ತನ್ನನ್ನು ತಾನೇ ಹೊಗಳಿಕೊಳ್ಳಲು ಶುರುವಿಟ್ಟುಕೊಳ್ಳುತ್ತದೆ.

‘ಪರಿಮಳ ಭರಿತವಾದ ಚಂದನದ ಮರಕ್ಕೆ ಒಣಗಿದ ಕಟ್ಟಿಗೆಯು ಸಮವೇ? ಹಸುವಿನ ಹಾಲಿಗೆ ಕುರಿಯ ಹಾಲು ಸಮವೇ? ಪರಮ ಸಾಹಸಿ ವೀರ ಹನುಮನಿಗೆ ಮರದ ಮೇಲಿನ ಸಾಮಾನ್ಯ ಕಪಿಯುಸರಿಸಮವೇ? ಛಿ! ನನಗೆ ನೀನು ಸರಿಸಾಟಿಯಲ್ಲ! ಭ್ರಷ್ಟ, ತೊಲಗು ಇಲ್ಲಿಂದ. ದೇವನದಿಗೆ ಕಾಡಿನಲ್ಲಿ ಹರಿಯುವ ಹಳ್ಳದ ನೀರು ಸಾಟಿಯಾಗಬಲ್ಲದೇ!? ಗರುಡನ ಮರಿಗೆ ಹದ್ದು ಸಮನಾ ದುದೇ? ಹಂಸಕ್ಕೆ ಕೊಕ್ಕರೆಯು ಸಮವೇ? ನಿನ್ನನ್ನೂ ನನ್ನನ್ನೂ ಸಮಾನರೆಂದು ಹೋಲಿಸುವುದು ಎಂದರೆ ಕೋಗಿಲೆಯ ಮರಿಯನ್ನು ಕಾಗೆಯು ಅಪಹಾಸ್ಯ ಮಾಡುವ ತೆರವಾಯ್ತಿದು. ಎಲವೋ ರಾಗಿ, ಇಲ್ಲಿ ನೀನಾವ ಮಾನ್ಯನೋ! ತೊಲಗು ಇಲ್ಲಿಂದ’ ಹೀಗೆ ಒಂದಕ್ಕೊಂದನ್ನು ಹೋಲಿಕೆ ಮಾಡಿ ರಾಗಿಯನ್ನು ಭತ್ತ ನಿಕೃಷ್ಟಗೊಳಿಸಿ ಮಾತನಾಡುತ್ತದೆ.

ಭತ್ತವು ನುಡಿದ ಈ ಎಲ್ಲ ಅವಮಾನಕರ ಮಾತುಗಳನ್ನೂ ಕೇಳಿದ ಮೇಲೆ, ಸ್ವಾಭಾವಿಕವಾಗಿ ರಾಗಿಯ ಅಭಿಮಾನಕ್ಕೆ ಪೆಟ್ಟು ಬಿತ್ತು. ರೋಷದಿಂದ ಸಭೆಯಲ್ಲಿ ಎದ್ದು ನಿಂತು, ರಾಗಿಯು ನುಡಿಯತೊಡಗಿತು: ‘ಛಿ! ನುಡಿಗೆ ಹೇಸದ ನಿನ್ನಂಥ ಭಂಡರಿಗೆ ಯಾರಾದರೂ ಮಾರುತ್ತರವ ಕೊಡುವರೇ! ಕಡುಮೂರ್ಖ ನಿನ್ನೊಡನೆ ಮಾತೇಕೆ.. ಸತ್ಯಹೀನನು ನೀನು. ಬಡವರನ್ನು ನೀನು ಕಣ್ಣೆತ್ತಿಯೂ ನೋಡುವುದಿಲ್ಲ, ಆದರೆ ಶ್ರೀಮಂತರನ್ನು ಮಾತ್ರ ಬೆಂಬಲಿಸುವವನು ನೀನು. ಇನ್ನು ಹೆಚ್ಚಿಗೆ ಹೇಳುವುದೇನು, ಹೆತ್ತ ಬಾಣಂತಿಯರಿಗೆ, ರೋಗಿಗಳಿಗೆ ನೀನು ವರ್ಜ್ಯನಲ್ಲವೇ? ಹೆಣದ ಬಾಯಿಗೆ ಹಾಕುವ ತುತ್ತು ನೀನಲ್ಲವೇ. ಆಹಾ! ನಿನ್ನ ಜನ್ಮ ಅದೆಷ್ಟು ನಿರರ್ಥಕವೊ!’ ಎಂದು ರಾಗಿಯು ಭತ್ತವನ್ನು ಜರಿಯುತ್ತದೆ.

‘ಮಳೆಯೇ ಇಲ್ಲದೆ, ಬರಗಾಲ ಬಂದೊದಗಿದಾಗ ಅನ್ನವಿಲ್ಲದೆ ಅಳಿಯುವ ಪ್ರಾಣಿಗಳನ್ನು ನಾನು ಸಲಹುತ್ತೇನೆ. ಅಂಥ ವಿಲಯಕಾಲದಲ್ಲಿ ನೀನೆಲ್ಲಿರುವೆಯೋ? ಇಲ್ಲಿರುವ ನಿನ್ನಂಥ ಧಾನ್ಯ ಗಳೆಲ್ಲಿರುತ್ತೀರೋ. ಹೀಗಿರಲು, ಎಂದಾದರೂ ನಿಮ್ಮಂಥ ಹುಲುಧಾನ್ಯಗಳು ನನಗೆ ಸರಿಸಾಟಿ ಯಾಗಬಲ್ಲವೇ? ನಿನ್ನಲ್ಲಿ ಶ್ರೀಮಂತರು ಬಂದರೆ ಮಾತ್ರ ಸತ್ಕಾರ, ಬಡವರನ್ನು ಕಂಡರೆ ಉಪೇಕ್ಷೆ ಮೂಡುತ್ತದೆ. ಆದರೆ ನಾನು ಹಾಗೆಲ್ಲ ಪಕ್ಷಪಾತ ಮಾಡುವವನಲ್ಲ.

ನಾನು ಬಡವ-ಬಲ್ಲಿದ ಎಂಬ ಭೇದವೆಣಿಸದೆ ಎಲ್ಲರನ್ನೂ ರಕ್ಷಿಸುವೆ. ನಿನ್ನಂತೆ ನಾನು ನಿರ್ದಯ ನಲ್ಲ, ಕೇಳೆಲವೋ ಕುಟಿಲಾತ್ಮ, ಸಭೆಯೊಳಗಿನವರೆಲ್ಲ ಏಕೆ ನುಡಿಯದೆ ಹೀಗೆ ಮೌನದೀಕ್ಷಿತರಾದಿರಿ. ಈ ಮೌನವನ್ನು ಮುರಿದು ನುಡಿಯುವುದು ಸಾಧ್ಯವೋ ಅಸಾಧ್ಯವೋ ನಿಮಗೆ? ಸುಮ್ಮನೆ ಹೀಗೆ ಈ ನಪುಂಸಕನ ಜತೆಗೆ ನನಗೆ ಇದಾವ ವಾದ! ಈ ಬಗ್ಗೆ ನೀವು ಯಾವ ಮಾತನ್ನು ಹೇಳಬಯಸುತ್ತೀರಿ, ನುಡಿಯಿರಿ’ ಎಂದು ಭತ್ತವನ್ನು ನಪುಂಸಕ ಮುಂತಾದ ಕಡುನುಡಿಗಳಿಂದ ರಾಗಿಯು ಜರಿಯುತ್ತದೆ.

(ಮುಂದುವರಿಯುವುದು)