Yagati Raghu Naadig Column: ಸರ್ವಸಂಗ ಪರಿತ್ಯಾಗಿಯೇ ವ್ಯಾಮೋಹಕ್ಕೆ ಹಾಸಿಗೆ ಹಿಡಿದಾಗ...
“ಸ್ವಾಮೀಜಿ ಕೆಲ ಕಾಲದವರೆಗೆ ಕಾವಿಯನ್ನು ಸಡಿಲಿಸಿಬಿಟ್ಟರು ಅಂದರೆ, ಸನ್ಯಾಸ ಧರ್ಮದ ಮಿಕ್ಕೆಲ್ಲ ಆಯಾಮಗಳಲ್ಲೂ ಪರಿಣತರಾಗಿದ್ದ ಸ್ವಾಮೀಜಿ, ಕಾಮವನ್ನು ಗೆಲ್ಲುವಲ್ಲಿ ವಿಫಲರಾದರು ಅಂತ ಅಲ್ಲವೇ ಗುರುಗಳೇ? ಹೀಗಾಗಿ, ಶಾರದೆಯ ಮೇಲೆ ಕಣ್ಣುಹಾಕಿದ ರಣಹದ್ದಿನಿಂದ ಶುರುವಾದ ಅಪಸವ್ಯ ವನ್ನು ಅವರು ಮುಂದುವರಿಸಿದರು ಅಂತ ಅರ್ಥ ತಾನೇ?" ಎಂದು ಆ ಶಿಷ್ಯರು ಮನದಾಳದ ಮಾತಿಗೆ ದನಿಯಾದರು.


ರಸದೌತಣ
naadigru@gmail.com
(ಭಾಗ-14)
ಅಮಾಯಕಿ ಶಾರದೆಗೆ ಒದಗಿದ ನೋವಿನ ಕಥೆಯನ್ನು ಅವಧೂತರಿಂದ ಕೇಳುತ್ತಿದ್ದ ಶಿಷ್ಯರಲ್ಲೊಬ್ಬರು ಕೊಂಚ ವ್ಯಗ್ರರಾಗಿದ್ದರು. “ಸರ್ವಸಂಗ ಪರಿತ್ಯಾಗಿಯಾಗಿ ಇರಬೇಕಾಗಿದ್ದ ಮಠದ ಸ್ವಾಮೀಜಿ ತನ್ನ ಕಾವಿಯನ್ನು ಕೊಂಚ ಸಡಿಲಿಸಿದ್ದೇ ಅಪಸವ್ಯದ ಮುಂದುವರಿಕೆಗೆ ಮುನ್ನುಡಿ ಯಾಯಿತು" ಎಂಬ ಅವಧೂತರ ಮಾತು ಇದಕ್ಕೆ ಕಾರಣ. ತೀವ್ರ ಉಸಿರಾಟದಿಂದ ಕೂಡಿದ್ದ ಆ ಶಿಷ್ಯರ ದೇಹಭಾಷೆಯು ಅವರ ವ್ಯಗ್ರತೆಯನ್ನು ಸ್ಪಷ್ಟವಾಗಿ ಅಭಿವ್ಯಕ್ತಿಸುತ್ತಿತ್ತು. “ಕೊಂಚ ಶಾಂತತೆಯನ್ನು ಕಾಯ್ದುಕೊಳ್ಳಿ, ಆ ‘ಧರ್ಮಸೂಕ್ಷ್ಮದ ಉಲ್ಲಂಘನೆ’ಯ ಕುರಿತು ವಿವರಿಸುವೆ" ಎನ್ನುತ್ತಾ ಅವಧೂತರು ತಲೆ ನೇವರಿಸಿ ಸಮಾಧಾನಿಸಿದ್ದರೂ ಆ ಶಿಷ್ಯರ ವ್ಯಗ್ರತೆ ತಹಬಂದಿಗೆ ಬಂದಿರಲಿಲ್ಲ.
ಹಾಗಂತ ಅವಧೂತರೂ ಒಂದೇ ಉಸಿರಿಗೆ ಕಥೆಯನ್ನು ಮುಂದುವರಿಸಿ ಬಿಡುವ ಧಾವಂತವನ್ನು ತೋರಲಿಲ್ಲ. ಕೆಸರಿನಂತೆ ರಾಡಿಯಾಗಿದ್ದ ಶಿಷ್ಯರ ಮನವು ಮಣ್ಣನ್ನು ಕೆಳಕ್ಕೆ ತಳ್ಳಿ ತಿಳಿಯಾಗಲಿ ಎಂದು ಅವರು ಕಾಯುತ್ತಿದ್ದರು. ಅದು ಕೆಲವೇ ಕ್ಷಣವಷ್ಟೇ. ಆ ಶಿಷ್ಯರ ಮನದಲ್ಲಿ ಭುಗಿಲೆದ್ದಿದ್ದ ಬಿರುಗಾಳಿ ಶಮನವಾಯಿತು. ಅವಧೂತರು ಕಥೆಯನ್ನು ಮುಂದುವರಿಸಿದರು...
ಇದನ್ನೂ ಓದಿ: Yagati Raghu Naadig Column: ಬೌಬೌ ಬಾಲವೆಂಬುದು ಯಾವತ್ತಿದ್ರೂ ಡೊಂಕೇ!
“ನೋಡ್ರಯ್ಯಾ, ವ್ಯಕ್ತಿಯೊಬ್ಬ ಆಯ್ದುಕೊಂಡಿರುವ ಕಸುಬು ಯಾವುದೇ ಇರಲಿ, ಆತನ ಕಾರ್ಯ ಕ್ಷೇತ್ರ ಎಂಥದ್ದೇ ಇರಲಿ, ಅದಕ್ಕೆ ತಳಹದಿಯಾಗಿ ಅದರದೇ ‘ಧರ್ಮ’ ಮತ್ತು ‘ಧರ್ಮಸೂಕ್ಷ್ಮ’ ಅಂತ ಇರುತ್ತವೆ. ಇದನ್ನು ಪ್ರತಿಯೊಬ್ಬರೂ ಮನವರಿಕೆ ಮಾಡಿಕೊಂಡಿರಬೇಕು. ತಳಹದಿಯಾಗಿರುವ ಈ ನಿಯಮಗಳಿಂದ ವಿಮುಖವಾದರೆ ಅಥವಾ ಅವುಗಳ ಅನುಸರಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ಅಪಾಯ ಕಟ್ಟಿಟ್ಟಬುತ್ತಿ. ಈಗ ಮಠದ ಸ್ವಾಮೀಜಿಯ ವಿಷಯವನ್ನೇ ತೆಗೆದುಕೊಳ್ಳಿ. ‘ಸರ್ವಸಂಗ ಪರಿತ್ಯಾಗ’ದ ಪರಿಕಲ್ಪನೆಯನ್ನು ಅಪ್ಪಿಕೊಳ್ಳಬೇಕಾದವರು ಇಂಥ ಕಾವಿಧಾರಿ ಸ್ವಾಮಿಗಳು. ಲೌಕಿಕ ಬದುಕಿನಿಂದ, ಅಂದರೆ ಪ್ರಾಪಂಚಿಕ ವಸ್ತುಗಳ ಮೇಲಿನ ಆಸಕ್ತಿಯಿಂದ ಮತ್ತು ಕೌಟುಂಬಿಕ ಸಂಬಂಧಗಳಿಂದ ದೂರವಿದ್ದು ಆಧ್ಯಾತ್ಮಿಕ ಅನ್ವೇಷಣೆಯಲ್ಲಿ ತೊಡಗುವುದು ಇಂಥವರ ಉಸಿರಾಗಬೇಕು. ಸನ್ಯಾಸಾಶ್ರಮವನ್ನು ಸ್ವೀಕರಿಸಿದವರು ತಮ್ಮ ಪೂರ್ವಾಶ್ರಮದ ಕುಟುಂಬಿಕರು ಮತ್ತು ಇತರ ಬಂಧುಗಳ ಮೇಲಿನ ವ್ಯಾಮೋಹವನ್ನು ಕಿತ್ತೊಗೆಯಬೇಕು, ತ್ಯಾಗ ಮತ್ತು ವೈರಾಗ್ಯವೇ ಅವರ ಲಾಂಛನವಾಗಬೇಕು. ಸಾಂಪ್ರದಾಯಿಕ ಶಿಕ್ಷಣ, ಶಾಸ್ತ್ರಗಳ ಅಧ್ಯಯನ, ವಿಶಿಷ್ಟ ವಿಷಯ ಗಳನ್ನು ಕಡೆದು ಜ್ಞಾನದ ನವನೀತವನ್ನು ದಕ್ಕಿಸಿಕೊಳ್ಳುವಿಕೆ ಮತ್ತು ಉಪನ್ಯಾಸದ ವೇಳೆ ಕೇಳುಗರ ಎದುರು ಅದನ್ನು ಹದವಾಗಿ ಮಂಡಿಸಬಲ್ಲ ಪ್ರಾವೀಣ್ಯ, ಸಂದರ್ಭಾನುಸಾರ ಮತ್ತು ವಿಷಯಾನು ಸಾರ ಹೊಮ್ಮಬೇಕಾದ ವಾಕ್ಪಟುತ್ವ ಈ ಎಲ್ಲ ಬಾಬತ್ತುಗಳಲ್ಲೂ ಈ ಸ್ವಾಮೀಜಿ ಪರಿಣತರೇ ಆಗಿದ್ದರು. ಆದರೆ, ಒಂದು ವಿಷಯದಲ್ಲಿ ಮಾತ್ರ ಸ್ವಾಮೀಜಿ ಎಡವಿಬಿಟ್ಟರು; ಅವರು ಹಾಗೆ ಕೆಲಕಾಲದವರೆಗೆ ಕಾವಿಯನ್ನು ಸಡಿಲಿಸಿದ್ದೇ ಸಂಸ್ಥೆಯ ಆವರಣದಲ್ಲಿ ‘ಅಪಸವ್ಯ’ದ ಮುಂದು ವರಿಕೆಗೆ ಮೂಲವಾಯಿತು..." ಎಂದು ಹೇಳಿ ಅರೆಕ್ಷಣ ನಿಲ್ಲಿಸಿದರು.
‘ಸ್ವಾಮೀಜಿ ಕೆಲ ಕಾಲದವರೆಗೆ ಕಾವಿಯನ್ನು ಸಡಿಲಿಸಿ ಬಿಟ್ಟರು’ ಎಂಬ ತಮ್ಮ ಮಾತನ್ನು ಶಿಷ್ಯರು ‘ಯಾವ ನೆಲೆಯಲ್ಲಿ’ ಗ್ರಹಿಸುತ್ತಾರೆ ಎಂಬುದನ್ನು ಅಳೆಯುವುದು ಅವಧೂತರ ಇರಾದೆಯಾಗಿತ್ತು. ಹೀಗಾಗಿ, ಎಲ್ಲ ಶಿಷ್ಯರ ಮುಖವನ್ನೂ ಒಮ್ಮೆ ಅವಲೋಕಿಸಿಕೊಂಡು ಬಂದರು. ಕೆಲ ಹೊತ್ತಿನ ಮುಂಚೆ ವ್ಯಗ್ರರಾಗಿದ್ದ ಶಿಷ್ಯರು ಏನನ್ನೋ ಹೇಳಲು ತವಕಿಸುತ್ತಿದ್ದುದನ್ನು ಕಂಡು, ಮಾತಾಡು ವಂತೆ ಸೂಚಿಸಿದರು ಅವಧೂತರು.
“ಸ್ವಾಮೀಜಿ ಕೆಲ ಕಾಲದವರೆಗೆ ಕಾವಿಯನ್ನು ಸಡಿಲಿಸಿಬಿಟ್ಟರು ಅಂದರೆ, ಸನ್ಯಾಸ ಧರ್ಮದ ಮಿಕ್ಕೆಲ್ಲ ಆಯಾಮಗಳಲ್ಲೂ ಪರಿಣತರಾಗಿದ್ದ ಸ್ವಾಮೀಜಿ, ಕಾಮವನ್ನು ಗೆಲ್ಲುವಲ್ಲಿ ವಿಫಲರಾದರು ಅಂತ ಅಲ್ಲವೇ ಗುರುಗಳೇ? ಹೀಗಾಗಿ, ಶಾರದೆಯ ಮೇಲೆ ಕಣ್ಣುಹಾಕಿದ ರಣಹದ್ದಿನಿಂದ ಶುರುವಾದ ಅಪಸವ್ಯವನ್ನು ಅವರು ಮುಂದುವರಿಸಿದರು ಅಂತ ಅರ್ಥ ತಾನೇ?" ಎಂದು ಆ ಶಿಷ್ಯರು ಮನದಾಳದ ಮಾತಿಗೆ ದನಿಯಾದರು.
ಈ ಮಾತಿಗೆ ಲಘುವಾಗಿ ನಕ್ಕ ಅವಧೂತರು, “ನಿಮ್ಮ ಮನವನ್ನು ಪೂರ್ವಗ್ರಹಪೀಡಿತ ಭಾವನೆ ಆವರಿಸಿದಂತಿದೆ. ‘ಸ್ವಾಮೀಜಿ ಕೆಲ ಕಾಲದವರೆಗೆ ಕಾವಿಯನ್ನು ಸಡಿಲಿಸಿಬಿಟ್ಟರು’ ಎಂದ ಮಾತ್ರಕ್ಕೆ ಅವರೂ ಶಾರದೆಯ ಮೇಲೆ ಕಣ್ಣು ಹಾಕಿದರು ಎಂದೇಕೆ ನೀವು ಅರ್ಥೈಸಿಕೊಳ್ಳಬೇಕು? ಸನ್ಯಾಸ ಧರ್ಮದಲ್ಲಿ ಸೂಚಿಸಲಾಗಿರುವ ನಿಯಮಗಳ ಪೈಕಿ ಒಂದನ್ನು ಅನುಸರಿಸದಿದ್ದರೂ ಕಾವಿಯನ್ನು ಸಡಿಲಿಸಿದಂತೆಯೇ ಎಂದೇಕೆ ನೀವು ಭಾವಿಸಲಿಲ್ಲ? ‘ಸಡಿಲಿಸಿಬಿಟ್ಟರು’ ಎಂಬ ಪದವನ್ನು ನಾನು ಬಳಸಿದ ಮಾತ್ರಕ್ಕೆ ‘ಸ್ವಾಮೀಜಿ ಲೈಂಗಿಕ ತೃಷೆಯನ್ನು ಈಡೇರಿಸಿಕೊಳ್ಳಲು ಹಾತೊರೆದರು’ ಎಂದೇಕೆ ನೀವು ಭಾವಿಸಬೇಕು?" ಎಂದು ಆ ಶಿಷ್ಯರಿಗೆ ಚುರುಕು ಮುಟ್ಟಿಸಿದರು.
ಈ ‘ಶಾಕ್’ನಿಂದ ಗೊಂದಲಗೊಂಡ ಆ ಶಿಷ್ಯರು, “ಹಾಗಾದರೆ ಸ್ವಾಮೀಜಿಯಿಂದ ಅಪಚಾರ ಆಗಿಲ್ಲವೇ? ಸಂಸ್ಥೆಯಲ್ಲಿ ತೂರಿಕೊಂಡಿರುವ ಕಳ್ಳಬೆಕ್ಕುಗಳಲ್ಲಿ ಅವರೂ ಒಬ್ಬರು ಎಂದು ನಾವು ಪರಿಗಣಿಸುವಂತಿಲ್ಲವೇ? ಅವರಿಂದ ತಪ್ಪಾಗಿಲ್ಲ ಎಂದಾದರೆ, ಶಿವರಾತ್ರಿಯ ಜಾಗರಣೆಯ ಸಂದರ್ಭ ದಲ್ಲಿ ನೀವು ಸೂಚಿಸಿದಂತೆ ಉನ್ನತ ವ್ಯಾಸಂಗಕ್ಕೆ ವಾರಾಣಸಿಗೆ ತೆರಳುವ ಬದಲು ಅವರು ತಪ್ಪೊಪ್ಪಿ ಕೊಳ್ಳಲು ಈ ಮನೆಯವರೆಗೆ ನಿಮ್ಮನ್ನು ಹುಡುಕಿಕೊಂಡು ಬಂದಿದ್ಧೇಕೆ, ಏಕಾಂತದಲ್ಲಿ ಮಾತಾ ಡಲು ಅವಕಾಶ ನೀಡುವಂತೆ ಕೋರಿದ್ದೇಕೆ? ಮಾತು ಮುಗಿದ ನಂತರ ಇಲ್ಲಿಂದ ತೆರಳುವಾಗ ಅವರ ಕಂಗಳು ನೀರಾಡಿದ್ದೇಕೆ? ಅದೆಲ್ಲಾ ಇರಲಿ, ಸ್ವಲ್ಪ ಹೊತ್ತಿಗೆ ಮುಂಚೆ ನೀವು ಹೇಳಿದ ‘ತಪ್ಪೆಸಗಿದ್ದು ಮರಿಪುಢಾರಿ ಮಾತ್ರವೇ ಅಲ್ಲ, ಸ್ವಾಮೀಜಿ, ಮ್ಯಾನೇಜರ್, ಅಡುಗೆಭಟ್ಟ ಮುಂತಾದವರೂ ಎಡವಿದ್ದಾರೆ’ ಎಂಬ ಮಾತಿನ ಅರ್ಥವೇನು ಗುರುಗಳೇ?" ಎಂದು ಒಂದೇ ಉಸಿರಿನಲ್ಲಿ ಪ್ರಶ್ನಿಸಿದರು.
ಒಮ್ಮೆ ನೀಳವಾಗಿ ಉಸಿರೆಳೆದುಕೊಂಡ ಅವಧೂತರು, “ಅಯ್ಯಾ ಗಮನವಿಟ್ಟು ಕೇಳಿಸಿಕೊಳ್ಳಿ. ‘ಸರ್ವಸಂಗ ಪರಿತ್ಯಾಗಿ’ ಎನಿಸಿಕೊಂಡವನು ಪೂರ್ವಾಶ್ರಮದ ಕುಟುಂಬಿಕರು ಮತ್ತು ಬಂಧುಗಳ ಮೇಲಿನ ವ್ಯಾಮೋಹವನ್ನೂ, ಪ್ರಾಪಂಚಿಕ ವಸ್ತುಗಳ ಮೇಲಿನ ಆಸಕ್ತಿಯನ್ನೂ ಕಿತ್ತೊಗೆಯಬೇಕು ಎಂದು ಕೆಲ ಕ್ಷಣಗಳ ಮುಂಚೆ ನಾನು ಹೇಳಿದೆನಲ್ಲವೇ? ಮಠದ ಸ್ವಾಮೀಜಿ ಎಡವಿದ್ದು ಈ ಬಾಬತ್ತುಗಳಲ್ಲೇ. ಅವರು ಸಾಕಷ್ಟು ವಿದ್ಯಾವಂತರೇ, ಶಾಸ್ತ್ರ ಪಾರಂಗತರೇ. ಸನ್ಯಾಸ ಸ್ವೀಕಾರಕ್ಕೆ ಸಂಬಂಧಿಸಿದ ಮಿಕ್ಕೆಲ್ಲ ಅರ್ಹತೆಗಳನ್ನೂ ಹೊಂದಿದ್ದ ಇವರಲ್ಲಿ ಕುಟುಂಬ ವ್ಯಾಮೋಹವಿನ್ನೂ ಮನೆ ಮಾಡಿತ್ತು, ವೈರಾಗ್ಯವೆಂಬುದು ಮನದಲ್ಲಿ ಪರಿಪೂರ್ಣವಾಗಿ ಕೆನೆಗಟ್ಟಿರಲಿಲ್ಲ, ಪ್ರಾಪಂಚಿಕ ವಸ್ತುಗಳ ಮೇಲಿನ ಆಸಕ್ತಿ ತಗ್ಗಿರಲಿಲ್ಲ. ಅವರ ಕಾವಿ ಸಡಿಲಗೊಂಡಿದ್ದು ಈ ವಿಷಯಗಳಲ್ಲಿ. ಸಂಸ್ಥೆಯ ಆವರಣದಲ್ಲಿ ಹೂವಾಗಿ ಅರಳಬೇಕಿದ್ದ ಶಾರದೆಯ ಮೇಲೆ ರಣಹದ್ದುಗಳ ದೃಷ್ಟಿ ಬೀಳುವಂತಾಗುವುದಕ್ಕೆ ಇದು ಉತ್ತೇಜನ ನೀಡಿತು" ಎಂದರು. ಶಿಷ್ಯರಲ್ಲಿದ್ದ ಗೊಂದಲ ಮತ್ತಷ್ಟು ಹೆಚ್ಚಾಯಿತು. ಅವರು ತವಕದಿಂದ ಅವಧೂತರೆಡೆಗೆ ಬಾಗಿ, “ಅಂದರೆ ಗುರುಗಳೇ? ಸ್ಪಷ್ಟವಾಗಲಿಲ್ಲ.." ಎಂದರು.
ಆ ಶಿಷ್ಯರ ಆಸಕ್ತಿಯಿಂದ ಉತ್ತೇಜಿತರಾದ ಅವಧೂತರು, “ನೋಡ್ರಯ್ಯಾ, ಮಠ-ಮಾನ್ಯಗಳು ಸಾರ್ವಜನಿಕರಿಂದ, ಅವರು ನೀಡುವ ದವಸ-ಧಾನ್ಯ, ಕಾಣಿಕೆ-ದೇಣಿಗೆಗಳಿಂದ ನಡೆಯಬೇಕು, ಬೆಳೆಯಬೇಕು ಅನ್ನೋದೇನೋ ನಿಜವೇ. ಆದರೆ ಹಾಗೆ ಕೊಡುಗೆ-ದೇಣಿಗೆಗಳನ್ನು ಸ್ವೀಕರಿಸು ವಾಗಲೂ ಸಂಬಂಧಪಟ್ಟವರಲ್ಲಿ ವಿವೇಚನೆ ಇರಬೇಕು. ಆದರೆ ಈ ಸ್ವಾಮೀಜಿಯೋ ರಾತ್ರೋರಾತ್ರಿ ಮಠದ ಉದ್ಧಾರವಾಗಬೇಕು ಎಂಬ ಹುಕಿಯಲ್ಲಿ, ಹಲವು ವಿರೋಧಗಳ ನಡುವೆಯೂ, ಪಟ್ಟಣದ ಆ ಹಿರಿಯ ರಾಜಕಾರಣಿಯಿಂದ ಹರಿದುಬರುವ ಹಣಕ್ಕೆ ಕೈಯೊಡ್ಡಿಬಿಟ್ಟರು. ಆತನ ಅಗಾಧ ಸಂಪಾದನೆಯ ಮೂಲ ಯಾವುದು ಎಂಬುದನ್ನು ತರ್ಕಿಸುವ ಗೋಜಿಗೇ ಅವರು ಹೋಗಲಿಲ್ಲ. ಅದಾಗಿದ್ದೇ ಆಗಿದ್ದು, ಆತನ ದಾಕ್ಷಿಣ್ಯಕ್ಕೆ ಸ್ವಾಮೀಜಿ ಸಿಲುಕಿದರು. ಇದು ಮೊದಲನೇ ಎಡವಟ್ಟು. ಇನ್ನು ಎರಡನೆಯದಾಗಿ, ಸನ್ಯಾಸ ಸ್ವೀಕಾರದ ನಂತರವೂ ‘ಬಂಧು-ವ್ಯಾಮೋಹ’ದ ಜೇಡರಬಲೆ ಯಿಂದ ಬಿಡಿಸಿಕೊಳ್ಳುವುದರ ಬದಲಿಗೆ ತಾವೇ ಅದರಲ್ಲಿ ಸಿಲುಕಿದ ನೊಣವಾಗಿಬಿಟ್ಟರು. ಮಠದ ಸ್ವಾಮೀಜಿಯಾಗಿ ತಮಗೆ ಹಂತಹಂತವಾಗಿ ದಕ್ಕತೊಡಗಿದ ಪ್ರಭಾವ ಮತ್ತು ವರ್ಚಸ್ಸನ್ನು ಮೂಲಧನವಾಗಿ ಇಟ್ಟುಕೊಂಡು, ಒಂದಷ್ಟು ಪ್ರಾಪಂಚಿಕ ವಿಷಯಗಳಲ್ಲಿ ಮೂಗು ತೂರಿಸ ತೊಡಗಿದರು. ಸಂಸ್ಥೆಗೊಬ್ಬ ಮ್ಯಾನೇಜರ್‌ರನ್ನು ನೇಮಕ ಮಾಡಿಕೊಳ್ಳುವ ವಿಷಯ ಚರ್ಚೆಗೆ ಬಂದಾಗ, ಪತ್ರಿಕೆಯಲ್ಲಿ ಜಾಹೀರಾತು ನೀಡಿ, ಅದಕ್ಕೆ ಓಗೊಟ್ಟು ಬಂದವರ ಪೈಕಿ ಅರ್ಹರನ್ನು ಆ ಹುದ್ದೆಗೆ ಆಯ್ಕೆಮಾಡಬೇಕು ಎಂಬ ಹಲವರ ಅಪೇಕ್ಷೆ ಮತ್ತು ನಿರೀಕ್ಷೆಯನ್ನು ಕಡೆಗಣಿಸಿ, ತಮ್ಮ ಪೂರ್ವಾಶ್ರಮದ ಬಂಧುವೊಬ್ಬನನ್ನು ಆ ಹುದ್ದೆಯಲ್ಲಿ ಪ್ರತಿಷ್ಠಾಪಿಸಬೇಕೆಂದು ಹಠ ಹಿಡಿದರು.
ಸ್ವಾಮೀಜಿಯ ಪ್ರಭಾವ ಮತ್ತು ವರ್ಚಸ್ಸಿನ ಬಲದಿಂದಾಗಿ ಅದಾಗಲೇ ಸಾಕಷ್ಟು ಮಂದಿ ಮಠಕ್ಕೆ ಅನುಯಾಯಿಗಳಾಗಿದ್ದರಿಂದ, ಅವರ ಈ ಹಠಕ್ಕೆ ಎದುರಾಡಲು ಸಂಸ್ಥೆಯ ಮಿಕ್ಕವರಿಗೆ ಆಗಲಿಲ್ಲ. ಹೀಗಾಗಿ, ಶಾಸ ಪಾರಂಗತರಾಗಿದ್ದರೂ ಆ ಸ್ವಾಮೀಜಿಯು ಆಧ್ಯಾತ್ಮಿಕ ವಿಷಯಗಳಲ್ಲಿ ತೊಡಗಿಸಿ ಕೊಂಡು ಭಕ್ತರಲ್ಲಿ ಅರಿವು ಮೂಡಿಸುವುದರ ಬದಲಿಗೆ, ಕಾವಿಯಲ್ಲಿದ್ದುಕೊಂಡೇ ಇಂಥ ‘ಲೌಕಿಕ’ ವ್ಯವಹಾರಗಳಲ್ಲಿ ಹೆಚ್ಚೆಚ್ಚು ವ್ಯಸ್ತರಾಗುವಂತಾಯಿತು..." ಎಂದು ವಿವರಿಸಿ ನೀಳವಾಗಿ ಉಸಿರೆಳೆದುಕೊಂಡರು.
ಅಲ್ಲಿಯವರೆಗೂ ಮೌನವಾಗಿದ್ದುಕೊಂಡೇ ಕಥೆಗೆ ಕಿವಿಯಾಗಿದ್ದ ಮತ್ತೊಬ್ಬ ಶಿಷ್ಯರು “ಆದರೆ, ಸ್ವಾಮೀಜಿಯ ಈ ಚಟುವಟಿಕೆಗಳಿಗೂ, ಅಮಾಯಕಿ ಶಾರದೆಯ ಮೇಲೆ ರಣಹದ್ದಿನ ಕಣ್ಣು ಬೀಳುವುದಕ್ಕೂ ಏನು ಸಂಬಂಧ ಗುರುಗಳೇ?" ಎಂದು ಕುತೂಹಲಭರಿತರಾಗಿ ಪ್ರಶ್ನಿಸಿದರು.
ಆಗ ಅವಧೂತರು, “ಅಲ್ಲೇ ಇರೋದು ಸೂಕ್ಷ್ಮ. ಸ್ವಾಮೀಜಿ ತಮ್ಮ ‘ಕಾವಿ’ಯನ್ನು ಕೆಲಮಟ್ಟಿಗೆ ಹೀಗೆ ಸಡಿಲ ಬಿಟ್ಟಿದ್ದಕ್ಕೇ ಅವರ ಪೂವಾಶ್ರಮದ ಬಂಧುವು ಸಂಸ್ಥೆಯ ಮ್ಯಾನೇಜರ್ ಆಗುವಂತಾಯಿತು. ಅಷ್ಟೇ ಆಗಿದ್ದರೆ ಹೋಗಲಿ ಎನ್ನಬಹುದಿತ್ತೇನೋ? ಆದರೆ ಆ ಮ್ಯಾನೇಜರ್ ಮಹಾಶಯನು ಸ್ವಾರ್ಥಕ್ಕೆ ಸಿಲುಕಿ ಕೆಲಕಾಲ ತನ್ನ ಕರ್ತವ್ಯಪ್ರಜ್ಞೆಯನ್ನು ಮರೆತ ಕಾರಣ, ಅಡುಗೆಭಟ್ಟ ‘ನಳಪಾಕ’, ಹಿರಿಯ ರಾಜಕಾರಣಿಯ ಮಗ ‘ಮರಿ ಪುಢಾರಿ’ ಮುಂತಾದವರು ಮಠದ ಆವರಣದೊಳಗೆ ತೂರಿಕೊಳ್ಳುವಂತಾಯಿತು. ಅಲ್ಲಿಂದ ಕರಿಛಾಯೆ ಆವರಿಸಿತು, ಅನಾಚಾರದ ಸರಣಿ ಶುರುವಾ ಯಿತು" ಎಂದರು. ಶಿಷ್ಯರ ಮುಖದಲ್ಲಿನ್ನೂ ಪ್ರಶ್ನಾರ್ಥಕ ಚಿಹ್ನೆ ಮಾಯವಾಗಿರಲಿಲ್ಲದ ಕಾರಣ ಅವಧೂತರು, “ಎಲ್ಲರೂ ಹೊಟ್ಟೆಗೆ ಏನಾದರೂ ಹಾಕಿಕೊಂಡು ನಂತರ ಕಥೆ ಮುಂದುವರಿಸೋಣ ಕಣ್ರಯ್ಯಾ" ಎಂದು ಗಡ್ಡವನ್ನು ನೀವಿಕೊಂಡರು...
(ಮುಂದುವರಿಯುವುದು)