ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ನಿಜವಾದ ಗೆಳೆಯ ಯಾರು ? ಟೀಕಾಕಾರರು ಯಾರು ?

ಜಯೇಂದ್ರರ ಸುತ್ತ ಕವಿದ ವಿವಾದಗಳ ಮಧ್ಯೆಯೂ ಅವರಲ್ಲಿರುವ ಶ್ರೇಷ್ಠತೆಯನ್ನು ಅವರು ಪರಿಚಯಿ ಸಿದ್ದರು. ಒಂದು ವಿವಾದ, ಸಣ್ಣ ಓರೆಕೋರೆಗಳು ವ್ಯಕ್ತಿಯ ಇಡೀ ವ್ಯಕ್ತಿತ್ವವನ್ನು ನುಂಗದೇ, ಅಸಾಮಾನ್ಯ ರಾದವರು ಹೇಗೆ ಈ ಎಲ್ಲ ಅಪಸವ್ಯಗಳಿಂದ ಎತ್ತರದಲ್ಲಿರುತ್ತಾರೆ ಎಂಬುದನ್ನು ಗುರುಮೂರ್ತಿ ಬಹಳ ಪರಿಣಾಮಕಾರಿಯಾಗಿ ವಿವರಿಸಿದ್ದರು.

ನಿಜವಾದ ಗೆಳೆಯ ಯಾರು ? ಟೀಕಾಕಾರರು ಯಾರು ?

ಇದೇ ಅಂತರಂಗ ಸುದ್ದಿ

vbhat@me.com

ಇದು ಸುಮಾರು ಒಂದೂವರೆ ವರ್ಷದ ಹಿಂದಿನ ಮಾತು. ತಮಿಳುನಾಡಿನ ರಾಜಕೀಯ ನಾಯಕ ಕರುಣಾನಿಧಿ ಅವರು ತೀರಿಕೊಂಡಾಗ ಖ್ಯಾತ ಅಂಕಣಕಾರ ಎಸ್.ಗುರುಮೂರ್ತಿ ಅವರ ಬಗ್ಗೆ (ಕರುಣಾನಿಧಿ ಬಗ್ಗೆ ) ಬರೆದ ಲೇಖನವೊಂದನ್ನು ಓದುತ್ತಿದ್ದೆ. ಗುರುಮೂರ್ತಿ ಅವರ ಲೇಖನದಲ್ಲಿ ಒಂದು ವಿಶೇಷ ಹೊಳಹು ಇರುತ್ತದೆ. ಅದರಲ್ಲೂ ಗಣ್ಯ ವ್ಯಕ್ತಿಗಳು ನಿಧನರಾದಾಗ ಅವರ ಕುರಿತು ಗುರುಮೂರ್ತಿ ಬರೆದರೆ ಸಾಮಾನ್ಯವಾಗಿ ನಾನು ಆ ಲೇಖನವನ್ನು ತಪ್ಪಿಸಿಕೊಳ್ಳುವುದಿಲ್ಲ.

ಯಾರೊಂದಿಗೆ ಒಡನಾಟವಿದೆಯೋ, ಅಂಥವರ ಬಗ್ಗೆ ಮಾತ್ರ ಗುರುಮೂರ್ತಿ ಬರೆಯುತ್ತಾರೆ. ಈ ಕಾರಣದಿಂದ ಅವರ ಲೇಖನದಲ್ಲಿ ಯಾರಿಗೂ ಕಾಣದ ಒಂದಷ್ಟು ಹೊಸ ಸಂಗತಿಗಳು ಗೊತ್ತಾಗು ತ್ತವೆ. ಕಂಚಿ ಕಾಮಕೋಟಿ ಪೀಠದ ಜಯೇಂದ್ರ ಸರಸ್ವತಿ ಶಂಕರಾಚಾರ್ಯರು ನಿಧನರಾದಾಗ, ‘ಔಟ್‌ಲುಕ್’ ಮ್ಯಾಗಜಿನ್‌ನಲ್ಲಿ ಗುರುಮೂರ್ತಿಯವರು ಬರೆದ ಲೇಖನವು, ನಾನು ಓದಿದ ಎಲ್ಲಾ ‘ನಿಧನರಾದಾಗ ಬರೆಯುವ ಲೇಖನ’ಕ್ಕಿಂತ (ಮೃತವೃತ್ತಾಂತ) ಅತ್ಯುತ್ತಮವಾಗಿತ್ತು.

ಜಯೇಂದ್ರರ ಸುತ್ತ ಕವಿದ ವಿವಾದಗಳ ಮಧ್ಯೆಯೂ ಅವರಲ್ಲಿರುವ ಶ್ರೇಷ್ಠತೆಯನ್ನು ಅವರು ಪರಿಚಯಿಸಿದ್ದರು. ಒಂದು ವಿವಾದ, ಸಣ್ಣ ಓರೆಕೋರೆಗಳು ವ್ಯಕ್ತಿಯ ಇಡೀ ವ್ಯಕ್ತಿತ್ವವನ್ನು ನುಂಗದೇ, ಅಸಾಮಾನ್ಯರಾದವರು ಹೇಗೆ ಈ ಎಲ್ಲ ಅಪಸವ್ಯಗಳಿಂದ ಎತ್ತರದಲ್ಲಿರುತ್ತಾರೆ ಎಂಬುದನ್ನು ಗುರುಮೂರ್ತಿ ಬಹಳ ಪರಿಣಾಮಕಾರಿಯಾಗಿ ವಿವರಿಸಿದ್ದರು. ಅವರ ಜತೆಗಿನ ಸಾಮೀಪ್ಯದಿಂದಾಗಿ ಆ ಲೇಖನಕ್ಕೆ ವಿಶೇಷ ಮೆರುಗು ಮತ್ತು ಮೌಲಿಕತೆ ಬಂದಿತ್ತು.

ಕರುಣಾನಿಧಿ ಅವರ ಬಗ್ಗೆ ಬರೆದ ಲೇಖನವೂ ಅಪರೂಪದ ಮೃತವೃತ್ತಾಂತ. ಪ್ರಾಯಶಃ ಯಾರೂ ಅಷ್ಟೊಂದು ಆಪ್ತವಾಗಿ ಬರೆದಿದ್ದನ್ನು ನಾನಂತೂ ಓದಿಲ್ಲ. ಕರುಣಾನಿಧಿ ಅವರು ವೈಯಕ್ತಿಕವಾಗಿ ಹಲವಾರು ಸರಣಿ ಹಿನ್ನಡೆಗಳನ್ನು ಕಂಡವರು. ಆದರೆ ಈ ಹಿನ್ನಡೆಗಳ ಮಧ್ಯೆ ಅವರೆಂದೂ ತಮ್ಮ ಪಕ್ಷವು ಬಡವಾಗಲು ಬಿಡಲಿಲ್ಲ.

ಅವರಿಗೆ ಹಿನ್ನಡೆಯಾದಾಗಲೆಲ್ಲ ಪಕ್ಷವನ್ನು ಬಲಪಡಿಸುತ್ತಿದ್ದರು. ಅವರು ರಾಷ್ಟ್ರ ರಾಜಕಾರಣದಲ್ಲಿ ಮೆರೆಯಬಹುದಿತ್ತು. ಆದರೆ ಉದ್ದೇಶಪೂರ್ವಕವಾಗಿ ಅವರು ತಮಿಳುನಾಡನ್ನು ಬಿಟ್ಟು ಕದಲಲೇ ಇಲ್ಲ. ಅವರಿಗೆ ತಮ್ಮ ಸಾಮರ್ಥ್ಯಕ್ಕಿಂತ ಬಲಹೀನತೆಗಳು ಚೆನ್ನಾಗಿ ಗೊತ್ತಿದ್ದವು.

ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಭುತ್ವ ಸಾಽಸದೇ ರಾಷ್ಟ್ರ ರಾಜಕಾರಣದಲ್ಲಿ ಯಶಸ್ವಿ ಯಾಗುವುದು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಹೀಗಾಗಿ ಅವರು ತಮಿಳುನಾಡಿಗೆ ಸೀಮಿತರಾದರು. ಹಾಗೆ ನೋಡಿದರೆ ಅದು ಅವರ ಅತ್ಯುತ್ತಮ ನಿರ್ಧಾರಗಳಲ್ಲಿ ಒಂದಾಗಿತ್ತು. ಕರುಣಾನಿಧಿ ಅವರಿಗೂ, ಜಯಲಲಿತಾ ಅವರಿಗೂ ಒಂದು ಪ್ರಮುಖ ವ್ಯತ್ಯಾಸ ಇತ್ತು.

ಅದೇನೆಂದರೆ, ಅವರಿಬ್ಬರೂ ತಮ್ಮ ವಿರೋಧಿಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿ. ಜಯಾಗೆ ಯಾರಾದರೂ ಸೇರಿ ಬರೊಲ್ಲ ಅಂದರೆ ಯಾವತ್ತೂ ಸೇರಿ ಬರುತ್ತಿರಲಿಲ್ಲ. ವಿರೋಧಿಗಳ ಜತೆ ಸ್ವಲ್ಪವೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ವಿರೋಧಿಗಳನ್ನು ಹೆಚ್ಚು ಹೆಚ್ಚು ವಿರೋಧಿಸುವುದರಲ್ಲಿ ಖುಷಿ ಕಾಣುತ್ತಿದ್ದರು. ಆದರೆ ಕರುಣಾನಿಧಿ ಹಾಗಿರಲಿಲ್ಲ. ವಿರೋಧಿಗಳನ್ನು ಮನ್ನಿಸುವ ದೊಡ್ಡ ಗುಣ ಅವರಲ್ಲಿತ್ತು.

ಒಮ್ಮೆ ಸ್ವತಃ ಕರುಣಾನಿಧಿ ಅವರೇ ಬರೆದಿದ್ದರಂತೆ- “ನನ್ನ ಕಟು ಟೀಕಾಕಾರರಾದ ಚೋ.ರಾಮ ಸ್ವಾಮಿ ಇದ್ದಾನಲ್ಲ ಆತ ನನ್ನ ಉತ್ತಮ ಸ್ನೇಹಿತ. ಒಂದು ವೇಳೆ ಚೋ ನನ್ನನ್ನು ಇಷ್ಟು ಕಟುವಾಗಿ, ಕೆಟ್ಟದಾಗಿ ಟೀಕಿಸದಿದ್ದರೆ, ನಾನು ಇನ್ನೂ ದುಷ್ಟನಾಗುತ್ತಿದ್ದೆ. ಈ ಕಾರಣದಿಂದ ಅವನ ಬಗ್ಗೆ ನನಗೆ ಗೌರವ". ನಮ್ಮ ರಾಜ್ಯದ ಎಷ್ಟು ಮಂದಿ ರಾಜಕಾರಣಿಗಳು ಈ ಸಾಲುಗಳನ್ನು ಓದಿದ್ದಾರೋ ಗೊತ್ತಿಲ್ಲ. ಈಗಾದರೂ ಓದಲಿ ಎಂದು ಇಲ್ಲಿ ಇದನ್ನು ಬರೆಯಬೇಕಾಯಿತು.

ಎರಡು ರೀತಿಯ ಜನ

ಇದು ಯೋಗಿ ದುರ್ಲಭ ಜೀ ಹೇಳಿದ್ದು: ಜೀವನದಲ್ಲಿ ಎರಡು ರೀತಿಯ ಜನರನ್ನು ನಂಬಲೇಬಾರ ದಂತೆ. ಮೊದಲನೆಯದು, ಯಾರಿಗೆ ಮತ ಹಾಕಬೇಕು ಎಂದು ಹೇಳುವ ಧಾರ್ಮಿಕ ಮುಖಂಡ ಮತ್ತು ಎರಡನೆಯದು, ಯಾವ ರೀತಿ ಪ್ರಾರ್ಥನೆ ಮಾಡಬೇಕು ಎಂದು ಹೇಳುವ ರಾಜಕಾರಣಿ. ಇವರಿಬ್ಬರೂ ಸಮಾಜಕ್ಕೆ ಬಹಳ ಅಪಾಯಕಾರಿ. ನಮಗೆ ಧಾರ್ಮಿಕ ಮುಖಂಡರೂ ಬೇಕು ಮತ್ತು ರಾಜಕೀಯ ನಾಯಕರೂ ಬೇಕು. ಆದರೆ ಯಾವುದೇ ಕಾರಣಕ್ಕೂ ಇಬ್ಬರನ್ನೂ ಒಟ್ಟಿಗೇ ಇರಲು ಬಿಡಬಾರದಂತೆ. ಬಿಟ್ಟರೆ ಸಮಾಜಕ್ಕೆ ಏನೋ ಅಪಾಯ ಕಾದಿದೆ ಎಂದರ್ಥ.

ಒಂದು ಸಾಲಿನ ಕಥೆ!

ಕಥೆ ಎಂದರೆ ದೀರ್ಘವಾಗಿರಲೇಬೇಕು ಎಂದಿಲ್ಲ. ಇನ್ನೂರು-ಮುನ್ನೂರು ಪುಟಗಳಿರಲೇಬೇಕು ಎಂದಿಲ್ಲ. ಒಂದು ಸಾಲಿನಲ್ಲಿಯೂ ಸುಂದರವಾದ ಕಥೆ ಹೇಳಬಹುದು. ಆ ಒಂದು ಸಾಲು ಜೀವನ ಪರ್ಯಂತ ನೆನಪಿರುವಂತಿರಬಹುದು. ಕೆಲವು ವರ್ಷಗಳ ಹಿಂದೆ ನಾನೊಂದು ಕಥೆ ಓದಿದ್ದೆ. ಆ ಕಥೆಯಲ್ಲಿ ಎರಡು ವಾಕ್ಯಗಳಿದ್ದವು. ಆದರೆ ಒಂದೇ ಸಾಲಿತ್ತು- ಜಸ್ಟ್ ಮ್ಯಾರೀಡ್! ಅಪಘಾತದಲ್ಲಿ ಸಂಪೂರ್ಣ ನುಜ್ಜುಗುಜ್ಜಾದ ಕಾರಿನ ವಿಂಡ್‌ಸ್ಕ್ರೀನ್ ಮೇಲೆ ಹಾಗೆ ಬರೆದಿತ್ತು!

ಈ ಒಂದು ಸಾಲು ಈಗಲೂ ನನ್ನಲ್ಲಿ ಒಂದು ದೀರ್ಘ ನಿಟ್ಟುಸಿರು ಮತ್ತು ಅತೀವ ವೇದನೆಯನ್ನು ಮೂಡಿಸುತ್ತದೆ. ನೂರಾರು ಪುಟಗಳಲ್ಲಿ ಹೇಳಬಹುದಾಗಿದ್ದನ್ನು ಈ ಒಂದು ಸಾಲಿನ ಕಥೆ ಹೇಳುತ್ತದೆ. ಸೋಜಿಗವೆಂದರೆ ಈ ಒಂದು ಸಾಲನ್ನು ಪದೇಪದೆ ಓದಿದಾಗ ಬೇರೆ ಬೇರೆ ಕಥೆಗಳು ಬಂದು ಹೋಗುತ್ತವೆ. ಅಲ್ಲದೆ ಈ ಕಥೆಯನ್ನು ಹೇಗೆ ಬೇಕಾದರೂ ಬೆಳೆಸಬಹುದು. ಆ ಸಾಲೇ ಬೇರೆ ಬೇರೆ ಕಥೆ ಹೇಳುತ್ತಾ ಹೋಗುತ್ತದೆ. ಹಾಗೆ ಮತ್ತೊಂದು ಕಥೆ- ನಾನು ನನ್ನ ಅಂತರಂಗದ ಗೆಳತಿ ಯನ್ನು ಭೇಟಿ ಮಾಡಿದೆ. ಆದರೆ ಅವಳು ಭೇಟಿ ಮಾಡಲಿಲ್ಲ ಎಂಬ ಸಾಲು.

ಇಲ್ಲಿ ಸಹ ಮುಂದೇನಾಯಿತು, ಯಾಕೆ ಹೀಗಾಯ್ತು, ಅವಳಿಗೇನಾಯ್ತು ಎಂಬ ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ. ಈ ಸಾಲುಗಳು ಎಂದೆಂದೂ ಮರೆಯುವುದಿಲ್ಲ. ಪ್ರತಿ ಸಲ ಈ ಸಾಲುಗಳನ್ನು ನೆನಪಿಸಿಕೊಂಡಾಗ ಏನೋ ವಿಚಿತ್ರ ಭಾವ. ಅಂಥ ಕೆಲವು ಒಂದು ಸಾಲಿನ ಕಥೆಗಳು ಇಲ್ಲಿವೆ.

? ತಾಯಿ ನನಗೆ ಹೇಗೆ ಶೇವ್ ಮಾಡಿಕೊಳ್ಳಬೇಕು ಎಂಬುದನ್ನು ಹೇಳಿಕೊಟ್ಟಳು.

? ಸಿರಿ, ಪ್ಲೀಸ್ ಕಾಂಟಾಕ್ಟ್‌ನಿಂದ ನನ್ನ ತಾಯಿ ಹೆಸರನ್ನು ಡಿಲೀಟ್ ಮಾಡು.

? ತಂದೆ ಹೊರಟು ಹೋದರು, ಆದರೆ ರಾಷ್ಟ್ರಧ್ವಜ ಮನೆಗೆ ಬಂದಿತು.

? ಹಾರಿದೆ.. ನಂತರ ನನ್ನ ಮನಸ್ಸನ್ನು ಬದಲಿಸಿದೆ.

? ಅವಳು ಸತ್ತಳು ಎಂಬ ಸುದ್ದಿ ಕೇಳಿ ತಡೆದುಕೊಳ್ಳಲಾರದೇ ವಿಷ ಕುಡಿದೆ. ಆದರೆ ಸತ್ತಿಲ್ಲ ಎಂದು ಗೊತ್ತಾಯಿತು.

? ಇಂದು ಮತ್ತೊಮ್ಮೆ ತಾಯಿಗೆ ನನ್ನ ಪರಿಚಯ ಮಾಡಿಕೊಂಡೆ.

? ಶವದಪೆಟ್ಟಿಗೆ ಚಿಕ್ಕದಾಗಿದ್ದಷ್ಟು ಹೊರಲು ಭಾರವಾಗಿರುತ್ತದೆ.

? ಒಬ್ಬನೇ ಮಗ, ಮಡಚಿದ ರಾಷ್ಟ್ರಧ್ವಜ.

? ಲೇಡೀಸ್ ಆಂಡ್ ಜಂಟಲ್‌ಮೆನ್ ಈಗ ಮಾತಾಡ್ತಾ ಇರೋ ನಾನು ನಿಮ್ಮ ಪೈಲಟ್ ಅಲ್ಲ.

? ನನ್ನ ಪ್ರತಿಬಿಂಬದಲ್ಲಿ ನಾನು ಕಣ್ಮುಚ್ಚುತ್ತಿರುವುದನ್ನು ನೋಡಿದೆ.

? ನಾನು ಸತ್ತ ನಂತರ ನನ್ನ ನಾಯಿಗೆ ಏನಾಗಬಹುದು?

ಬಿಟ್ಟೆನೆಂದರೂ ಬಿಡದೀ ಮಾಯೆ!

ಕೆಲವೊಂದು ಸಂಗತಿಗಳು ಹಾಗೇ, ಬಡವನಿಂದ ಶ್ರೀಮಂತರವರೆಗೂ ಎಲ್ಲರನ್ನೂ ಕಾಡುತ್ತವೆ, ಆಕರ್ಷಿಸುತ್ತವೆ. ಅಂಥವು ಇಲ್ಲಿವೆ. ಪಾನಿಪೂರಿ ತಿಂದ ಮೇಲೆ ಸುಮ್ಮನೆ ಹೋಗುವ ಜಾಯಮಾನ ಯಾರದ್ದೂ ಇಲ್ಲ. ಸುಕ್ಕಾ ಪೂರಿ ಕೊಡದಿದ್ದರೆ ಜಗಳವೇ ಆಗಿಬಿಡುತ್ತದೆ. ಬೇಕರಿಗೆ, ಸ್ವೀಟ್ ಅಂಗಡಿಗೆ ಹೋದಾಗ ಯಾವುದಾದರೂ ಖಾದ್ಯಗಳನ್ನು ಖರೀದಿಸುವಾಗ, ಶ್ರೀಮಂತರಾಗಲೀ, ಬಡವರಾಗಲೀ ಕೇಳುವುದು ಒಂದೇ ಪ್ರಶ್ನೆ- “ಸ್ಯಾಂಪಲ್ ಕೊಡ್ತಿಯೇನಪ್ಪಾ? ಚೆನ್ನಾಗಿದ್ರೆ ತಗೋತೀನಿ".

ಕುಳಿತು ತಿನ್ನುವ ಹೋಟೆಲ್‌ಗೆ ಹೋದಾಗ, ಊಟವಾದ ಮೇಲೆ ಬಿಲ್ ತಂದು ಕೊಡುವ ಕಪ್‌ನಲ್ಲಿ ಸೊಂಪು ಇರಲೇಬೇಕು. ಬಿಲ್ಲನ್ನಷ್ಟೇ ಇಟ್ಟರೆ, ಗ್ರಾಹಕರು ವೇಟರ್‌ನನ್ನು ಗುರಾಯಿಸುವ ಬಗೆ ನೋಡಬೇಕು. ಕಣ್ಣಲ್ಲೇ ಕೊಲ್ಲುತ್ತಿರುತ್ತಾರೆ! ಯಾವುದೇ ದೊಡ್ಡ ಅರತಕ್ಷತೆ ಕಾರ್ಯಕ್ರಮಕ್ಕೆ ಹೋಗಿ, ಅಲ್ಲಿ ಮೊಸರನ್ನ ಇದ್ದೇ ಇರುತ್ತದೆ. ಮೊಸರನ್ನ ಹಾಕಿಸಿಕೊಂಡವರಿಗೆ ಮುಂದಿನದ್ದು ಹಾಕುವತನಕ ಪುರುಸೊತ್ತು ಇರುವುದಿಲ್ಲ, “ಸ್ವಲ್ಪ ಉಪ್ಪಿನಕಾಯಿ ಹಾಕ್ಬಿಡಿ!" ಅಂತಾರೆ. ಉಪ್ಪಿನಕಾಯಿ ಇಲ್ಲ ಎಂದ ಭಟ್ಟನ ಕತೆ ಹೇಳತೀರದು.

ನಿಧನ ಸುದ್ದಿ

ಮುಲ್ಲಾ ನಸ್ರುದ್ದೀನ್‌ನ ಹೆಂಡತಿ ಬೆಳಗ್ಗೆ ಕಾಫಿ ಹೀರುತ್ತಾ ಪತ್ರಿಕೆ ಓದುತ್ತಿದ್ದಳು. ಒಳಪುಟ ತಿರುವಿ ದಾಗ ಅವಳ ಪೋಟೊ ಕಣ್ಣಿಗೆ ಬಿತ್ತು. ಕುತೂಹಲದಿಂದ ಕೆಳಗಿನ ಸುದ್ದಿ ಕಡೆ ಕಣ್ಣಾಡಿಸಿದರೆ ಅವಳ ನಿಧನದ ಸುದ್ದಿ! ತಕ್ಷಣ ಮುಲ್ಲಾನಿಗೆ ಫೊನ್ ಮಾಡಿ, “ವಿಷಯ ಗೊತ್ತಾ? ಇಂದಿನ ಪೇಪರ್ ಓದಿದಿಯಾ? ನಾನು ಸತ್ತು ಹೋಗಿದ್ದೀನಂತೆ!" ಎಂದಳು. ಅದಕ್ಕೆ ಮುಲ್ಲಾ ಹೇಳಿದ- “ಹೌದಾ? ಅದ್ಸರಿ ನೀನು ಎಲ್ಲಿಂದ ಫೋನ್ ಮಾಡ್ತಾ ಇದೀಯಾ ಮೊದಲು ಹೇಳು. ಆನಂತರ ನೀನು ಸತ್ತಿದ್ದೀಯಾ ಇಲ್ಲವಾ ಅಂತ ಹೇಳ್ತೇನೆ".

ಅವನ ತಪ್ಪೇನಿದೆ?

ಅಪ್ಪನಿಗೆ ತನ್ನ ಮಗನ ಎರಡು ವರ್ತನೆ ಬಗ್ಗೆ ಅಪರಿಮಿತ ಅಸಮಾಧಾನವಿತ್ತು. ಹಂದಿ ಮಾಂಸ ಕಂಡರೆ ಸಾಕು ಮಗ ತಕ್ಷಣ ಬಾಯಿಬಿಡುತ್ತಿದ್ದ ಹಾಗೂ ಅಂದದ ಹುಡುಗಿಯರನ್ನು ಕಂಡರೆ ಚುಂಬಿಸುತ್ತಿದ್ದ. ಮಗನಿಗೆ ಅಪ್ಪ ಹೇಳುವಷ್ಟು ಬುದ್ಧಿ ಹೇಳಿದ. ಮನಃಶಾಸ್ತ್ರಜ್ಞರಲ್ಲಿಗೆ ಕರೆದು ಕೊಂಡು ಹೋದ. ಆದರೆ ಪ್ರಯೋಜನವಾಗಲಿಲ್ಲ. ಮಗನ ಬುದ್ಧಿ ನೆಟ್ಟಗಾಗಲಿಲ್ಲ. ಬೇರೆ ದಾರಿ ಕಾಣದೇ ಧರ್ಮಗುರುವನ್ನು ಭೇಟಿ ಮಾಡಿ ಅವರ ಮುಂದೆ ಅಪ್ಪ ತನ್ನ ಮಗನ ವರ್ತನೆಯ ಬಗ್ಗೆ ಕಳವಳ ತೋಡಿಕೊಂಡ.

ಸ್ವಾಮೀಜಿ ಮಗನನ್ನ ಕರೆದು ಗಟ್ಟಿ ದನಿಯಲ್ಲಿ, “ಏನಯ್ಯಾ? ಇದು ನಿಜವೇನಯ್ಯಾ? ಹಂದಿ ಮಾಂಸ ಕಂಡರೆ ಬಾಯಿ ಬಿಡುತ್ತೀಯಂತೆ, ಸುಂದರ ತರುಣಿಯರನ್ನು ಕಂಡ ತಕ್ಷಣ ತಬ್ಬಿ ಮುದ್ದಾಡುತ್ತೀಯಂತೆ, ನಿನಗೇನಾಗಿದೆ?" ಎಂದು ಕೇಳಿದರು.

ಅದಕ್ಕೆ ಮಗ ಹೇಳಿದ- “ನಾನೇನು ಮಾಡಲಿ ಸ್ವಾಮೀಜಿ. ನಾನು ಸ್ವಲ್ಪ ಕ್ರೇಜಿ, ಅದಕ್ಕೆ ಹೀಗೆಲ್ಲ ಮಾಡುತ್ತೀನಿ". ಅದನ್ನು ಕೇಳುತ್ತಲೇ ಸ್ವಾಮೀಜಿ ತಂದೆಯನ್ನು ಕರೆದು ಹೇಳಿದರು- “ನಿಮ್ಮ ಮಗ ಕರೆಕ್ಟ್ ಆಗಿದ್ದಾನೆ. ಅವನದೇನೂ ತಪ್ಪಿಲ್ಲ. ಹುಡುಗಿಯರನ್ನು ಕಚ್ಚಿ, ಮಾಂಸವನ್ನು ಚುಂಬಿಸಿದ್ದರೆ ಯೋಚನೆ ಮಾಡಬೇಕಿತ್ತು".

ಯಾರು ಬುದ್ಧಿವಂತರು?

ತುಂಬಾ ಹಿಂದಿನ ರೀಡರ್ಸ್ ಡೈಜೆಸ್ಟ್ ಮಾಸಿಕದಲ್ಲಿ ಓದಿದ ಒಂದು ಪ್ರಸಂಗವಿದು. ಮುಸ್ಸೋಲಿನಿ ಅಧಿಕಾರಕೆ ಬಂದ ಕೆಲ ದಿನಗಳಲ್ಲಿ ಅಮೆರಿಕದ ಶ್ರೀಮಂತ ಆರ್ಟ್ ಸಂಗ್ರಹಕಾರ ಇಟಲಿಗೆ ಬಂದು, ಹದಿನಾರನೇ ಶತಮಾನದ ಪ್ರಸಿದ್ಧ ಕಲಾವಿದ ಟಿಟಿಯನ್ ನ ಬೃಹತ್ ವರ್ಣಚಿತ್ರವನ್ನು ಭಾರಿ ಬೆಲೆಗೆ ಖರೀದಿಸಿದ. ಅದನ್ನು ಅಮೆರಿಕಕ್ಕೆ ತೆಗೆದುಕೊಂಡು ಹೋಗುವುದು ಅವನ ಉದ್ದೇಶವಾಗಿತ್ತು. ಆದರೆ ಅದನ್ನು ಇಟಲಿಯಿಂದ ಹೊರಗೆ ತೆಗೆದುಕೊಂಡು ಹೋಗಲು ಮುಸ್ಸೋಲಿನಿ ಸರಕಾರ ಅನುಮತಿ ನೀಡಲಿಕ್ಕಿಲ್ಲ ಎಂದು ಅವನಿಗೆ ಕೆಲವರು ಹೇಳಿದರು. ಆಗ ಆ ಅಮೆರಿಕನ್ ಕಲಾ ಸಂಗ್ರಹ ಕಾರನಿಗೆ ಅತೀವ ಬೇಸರವಾಯಿತು.

ಇದನ್ನು ತನ್ನ ದೇಶಕ್ಕೆ ತೆಗೆದುಕೊಂಡು ಹೋಗುವುದು ಹೇಗೆ ಎಂದು ಆತ ಒಬ್ಬ ಸಲಹೆಗಾರನನ್ನು ಕೇಳಿದ. ಅದಕ್ಕೆ ಆತ ಒಂದು ಸಲಹೆ ನೀಡಿದ- “ಒಂದು ಕೆಲಸ ಮಾಡಿ, ಟಿಟಿಯನ್‌ನ ವರ್ಣಚಿತ್ರದ ಮೇಲೆ ಮುಸ್ಸೋಲಿನಿ ವರ್ಣಚಿತ್ರವನ್ನು ಬಿಡಿಸುವಂತೆ ಸ್ಥಳೀಯ ಕಲಾವಿದನಿಗೆ ಹೇಳಿ. ಆತ ಅದನ್ನು ಬಿಡಿಸಿ ಕೊಡುತ್ತಾನೆ. ಮುಸ್ಸೋಲಿನಿ ಆಡಳಿತದ ಅಧಿಕಾರಿಗಳು ತಮ್ಮ ನಾಯಕನ ಚಿತ್ರವನ್ನು ಅಮೆರಿಕಕ್ಕೆ ತೆಗೆದುಕೊಂಡು ಹೋಗುವವನು ಮುಸ್ಸೋಲಿನಿ ಅಭಿಮಾನಿಯಿರ ಬೇಕೆಂದು, ತಕ್ಷಣ ಸಂತೋಷದಿಂದ ಅನುಮತಿ ನೀಡುತ್ತಾರೆ. ಅಮೆರಿಕಕ್ಕೆ ಹೋದ ನಂತರ, ಮೇಲಿನ ಪೇಂಟಿಂಗ್‌ನ್ನು ಕೆರೆಸಿ ತೆಗೆದುಹಾಕಿ".

ಅಮೆರಿಕದ ಕಲಾ ಸಂಗ್ರಹಕಾರನಿಗೆ ಇದು ಅದ್ಭುತ ಐಡಿಯಾ ಎಂದೆನಿಸಿತು. ಆತ ತಕ್ಷಣ ಸ್ಥಳೀಯ ಕಲಾಕಾರನನ್ನು ಕರೆಯಿಸಿ, ಟಿಟಿಯನ್ ಪೇಂಟಿಂಗ್ ಮೇಲೆ ಮುಸ್ಸೋಲಿನಿ ಪೇಂಟಿಂಗ್ ಬಿಡಿಸಿ ಕೊಡುವಂತೆ ಹೇಳಿದ. ಆತ ಬಿಡಿಸಿಕೊಟ್ಟ. ಮುಂದೆ ಆತ ಅಂದುಕೊಂಡಂತೆ ಆಯಿತು.

ಯಾವ ತೊಂದರೆಯೂ ಇಲ್ಲದೇ ಪೇಂಟಿಂಗ್ ಅನ್ನು ಸುಲಭವಾಗಿ ಅಮೆರಿಕಕ್ಕೆ ತೆಗೆದುಕೊಂಡು ಬಂದ. ಬಂದವನೇ ಆ ಪೇಂಟಿಂಗ್ ಮೇಲೆ ಬಿಡಿಸಿದ ಮುಸ್ಸೋಲಿನಿ ಚಿತ್ರವನ್ನು ಕೆರೆಸಿ ಹಾಕುವಂತೆ ನುರಿತ ಪೇಂಟರ್‌ಗೆ ಹೇಳಿದ. ಆತ ಹರಿತವಾದ ಚಾಕುವಿನಿಂದ ಬಹಳ ನಾಜೂಕಿನಿಂದ ಮೇಲಿನ ಪದರ ಕೆರೆಸಿ ಹಾಕಿದ. ಟಿಟಿಯನ್‌ನ ಅದ್ಭುತ ಪೇಂಟಿಂಗ್ ಎದ್ದು ಕಂಡಿತು. ಅಷ್ಟಕ್ಕೇ ಸುಮ್ಮನಾಗದ ಪೇಂಟರ್, “ಸರ್, ಈ ಟಿಟಿಯನ್ ಪೇಂಟಿಂಗ್ ಕೆಳಗೆ ಬೇರೆ ಇನ್ನೊಂದು ಪೇಂಟಿಂಗ್ ಇರುವಂತಿದೆ" ಎಂದು ಹೇಳಿದ. ಕಲಾ ಸಂಗ್ರಹಕಾರನಿಗೆ ದಿಗಿಲಾಯಿತು.

ಆ ಪೇಂಟರ್, ಟಿಟಿಯನ್‌ನ ಪೇಂಟಿಂಗ್ ಅನ್ನು ಕೆರೆಸುತ್ತಿದ್ದಂತೆ ಮತ್ತೊಂದು ಚಿತ್ರ ಎದ್ದು ಬಂದಿತು. ನೋಡಿದರೆ ಮುಸ್ಸೋಲಿನಿ ಪೇಂಟಿಂಗ್!

ಖುಲಾಸೆ ಅಂದ್ರೆ ಏನರ್ಥ?

ಬೆಳಗ್ಗೆ ಪತ್ರಿಕೆ ಓದುವಾಗ, ಮಂತ್ರಿ ಖುಷಿಯಿಂದ ಬೀಗುತ್ತಿದ್ದ. ತನ್ನ ಹತ್ತಿರದ ಸಂಬಂಧಿಕರಿಗೆ ಲಾಭ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ತೀರ್ಪು ನೀಡಿತ್ತು. ಅದರಂತೆ, ಮಂತ್ರಿ ಯನ್ನು ಸ್ವಜನಪಕ್ಷಪಾತ ಆಪಾದನೆಯಿಂದ ಖುಲಾಸೆಗೊಳಿಸಲಾಗಿತ್ತು. ಮುಖಪುಟದಲ್ಲಿ ಪ್ರಕಟ ವಾದ ಈ ಸುದ್ದಿ ನೋಡಿ ಮಂತ್ರಿಗೆ ಅತೀವ ಆನಂದವಾಗಿತ್ತು. ಸದಾ ಗಂಭೀರವದನನಾಗಿ ಪತ್ರಿಕೆ ಓದುವ ಅಪ್ಪ, ಇಂದು ನಗುತ್ತಾ ಖುಷಿಯಲ್ಲಿರುವುದನ್ನು ಕಂಡು ಮಗನಿಗೆ ತುಸು ಆಶ್ಚರ್ಯ ವಾಯಿತು.

“ಅಪ್ಪ, ನೀನು ಖುಷಿಪಡುವಂಥ ವಿಷಯ ಪತ್ರಿಕೆಯಲ್ಲಿ ಪ್ರಕಟವಾಗಿದೆಯಾ? ಅದು ಯಾವ ಸುದ್ದಿ?" ಎಂದು ಮಗ ಕೇಳಿದ. “ನಾನು ಎಲ್ಲಾ ಆರೋಪಗಳಿಂದ ಖುಲಾಸೆ ಆಗಿದ್ದೇನೆ ಗೊತ್ತಾ? ಇದಕ್ಕಿಂತ ಖುಷಿ ಮತ್ತೇನಿದೆ?" ಎಂದು ಮಂತ್ರಿ ಮಗನಿಗೆ ಹೇಳಿದ. ಮಗನಿಗೆ ಖುಲಾಸೆ ಪದದ ಅರ್ಥ ಗೊತ್ತಾಗಲಿಲ್ಲ. “ಅಪ್ಪ, ಖುಲಾಸೆ ಅಂದ್ರೆ ಏನು?" ಅಂತ ಕೇಳಿದ. “ಅಷ್ಟೂ ಗೊತ್ತಾಗುವುದಿಲ್ಲವಾ? ಖುಲಾಸೆ ಅಂದ್ರೆ ನಾನು ಏನೂ ಮಾಡಿಲ್ಲ ಅಂತ ಅರ್ಥ" ಎಂದ ಮಂತ್ರಿ. ಅದಕ್ಕೆ ಮಗ ಹೇಳಿದ: “ಈ ಮಾತನ್ನು ನಮ್ಮ ಕಾಲೇಜಿನಲ್ಲೂ ಎಲ್ಲರೂ ಹೇಳ್ತಾರೆ. ನಿನ್ನಪ್ಪ ಏನೂ ಮಾಡಲ್ಲ ಅಂತ".

ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ..

ಇದು ಬಹಳ ಹಿಂದೆ ಯೋಗಿ ದುರ್ಲಭಜೀ ಹೇಳಿದ ಒಂದು ತಮಾಷೆ ಪ್ರಸಂಗ. ಮೊಬೈಲ್ ಫೋನ್ ಇಲ್ಲದ ಕಾಲದಲ್ಲಿ ನಡೆದ ಪ್ರಸಂಗವಿದು. ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಕೆಲವರು ತಪ್ಪಾಗಿ ಭಾವಿಸುತ್ತಾರೆ ಎಂಬುದನ್ನು ವಿವರಿಸಲು ಅವರು ಈ ಘಟನೆ ಹೇಳಿದ್ದರು. ಯುವ ವಿದ್ಯಾರ್ಥಿ ಯೊಬ್ಬ ಲೈಬ್ರರಿಯಿಂದ ಹೊರಡುವಾಗ ರಾತ್ರಿ ಹತ್ತು ಗಂಟೆಯಾಗಿತ್ತು.

ಲೈಬ್ರರಿಯಿಂದ ನಿರ್ಗಮಿಸಿ ದವರಲ್ಲಿ ಅವನೇ ಕೊನೆಯವನಾಗಿದ್ದ. ಪಾರ್ಕಿಂಗ್ ತಾಣದಲ್ಲಿ ನಿಲ್ಲಿಸಿದ್ದ ಕಾರನ್ನು ಸ್ಟಾರ್ಟ್ ಮಾಡಬೇಕು ಎಂದು ಚಾವಿ ತಿರುವಿದರೆ, ಬ್ಯಾಟರಿ ಡೆಡ್ ಆಗಿತ್ತು. ಮೆಕಾನಿಕ್‌ಗೆ ಫೋನ್ ಮಾಡಿ ಕರೆಯೋಣ ಅಂದರೆ ಫೋನ್ ಬೂತ್ ದೂರದಲ್ಲಿತ್ತು.

ಬೇರೆ ದಾರಿ ಕಾಣದೇ ಹತ್ತಿರದಲ್ಲಿರುವ ಲೇಡೀಸ್ ಹಾಸ್ಟೆಲ್‌ಗೆ ಹೋದ. ಬಾಗಿಲಲ್ಲಿ ಯುವತಿ ಯೊಬ್ಬಳು ಕುಳಿತಿದ್ದಳು. ತನ್ನ ಸಮಸ್ಯೆಯನ್ನು ಅವಳಿಗೆ ಹೇಳಿದ. ಅವಳು ಹಾಸ್ಟೆಲ್ ವರಾಂಡ ದಲ್ಲಿರುವ ಫೋನ್ ತೋರಿಸುತ್ತಾ, “ಪರವಾಗಿಲ್ಲ, ಒಳಗೆ ಹೋಗಿ, ಫೋನ್ ಮಾಡಿ" ಎಂದು ಹೇಳಿದಳು. ಆತ ಒಳ ಬಂದು ಮೆಕಾನಿಕ್‌ಗೆ ಫೋನ್ ಮಾಡಿದ. ಮೆಕಾನಿಕ್‌ಗೆ ಸರಿಯಾಗಿ ಕೇಳಿಸು ತ್ತಿರಲಿಲ್ಲ.

ಹೀಗಾಗಿ ಯುವಕ ಜೋರಾಗಿ ಕಿರುಚುತ್ತಿದ್ದ. ಆ ಹೊತ್ತಿನಲ್ಲಿ ಗಂಡಸಿನ ದನಿಯನ್ನು ಕೇಳಿದ ಮೊದಲ ಮಹಡಿಯಲ್ಲಿದ್ದ ಹಾಸ್ಟೆಲ್ ಸಂಘದ ಸೆಕ್ರೆಟರಿ ಗಾಬರಿಗೊಂಡಳು. ಬಾಗಿಲಲ್ಲಿ ಕುಳಿತಿದ್ದ ಯುವತಿಗೆ ಹೇಳಿದಳು- “ಏನಮ್ಮಾ, ಯಾವನೋ ಗಂಡಸು ಹಾಸ್ಟೆಲ್ ಒಳಗೆ ಬಂದಂತಿದೆ. ರಾತ್ರಿ ಹತ್ತು ಗಂಟೆ ನಂತರ, ಹಾಸ್ಟೆಲ್ ಒಳಗೆ ಗಂಡಸರನ್ನು ಒಳಬಿಡಬಾರದು ಎಂಬುದು ಗೊತ್ತಿಲ್ಲವಾ?". ಅದಕ್ಕೆ ಬಾಗಿಲಲ್ಲಿ ನಿಂತವಳು ಜೋರಾಗಿ ಹೇಳಿದಳು- “ಪರವಾಗಿಲ್ಲ ಬಿಡಮ್ಮ, ಅವನ ಬ್ಯಾಟರಿ ಡೆಡ್ ಆಗಿದೆಯಂತೆ".

ಹೀಗೊಂದು ಸಂಭಾಷಣೆ

ಕೆಲವು ವರ್ಷಗಳ ಹಿಂದೆ, ನಾನು ಸ್ವೀಡನ್ ರಾಜಧಾನಿ ಸ್ಟಾಕ್ ಹೋಮ್‌ಗೆ ಹೋದಾಗ ಅಲ್ಲಿ ಕೇಳಿದ್ದು. ಒಮ್ಮೆ ಅಮೆರಿಕದ ಪ್ರವಾಸಿಗ ಸ್ಟಾಕ್‌ಹೋಮ್‌ನಲ್ಲಿ ಬಸ್ಸಿನಲ್ಲಿ ಹೋಗುತ್ತಿದ್ದ. ಅವನ ಪಕ್ಕದಲ್ಲಿ ಸ್ವೀಡಿಷ್ ಪ್ರಜೆ ಕುಳಿತಿದ್ದ. ಇಬ್ಬರೂ ಪರಸ್ಪರ ಪರಿಚಿತರಾದರು. ಹರಟೆ ಹೊಡೆಯ ಲಾರಂಭಿಸಿದರು. ಅಮೆರಿಕನ್ ಪ್ರಜೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ- “ಜಗತ್ತಿನಲ್ಲಿಯೇ ಅಮೆರಿಕ ದಂಥ ಪ್ರಜಾಸತ್ತಾತ್ಮಕ ದೇಶ ಮತ್ತೊಂದಿಲ್ಲ. ವೈಟ್ ಹೌಸಿಗೆ ಹೋಗಿ ಅಧ್ಯಕ್ಷನನ್ನು ಭೇಟಿ ಮಾಡಬಹುದು. ಅವನ ಜತೆ ಕೈಕುಲುಕಬಹುದು. ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಬಹುದು. ಇವೆ ಬೇರೆ ದೇಶಗಳಲ್ಲಿ ಸಾಧ್ಯವಿಲ್ಲ. ಅದರಲ್ಲೂ ನಿಮ್ಮ ದೇಶದಲ್ಲಂತೂ ಸಾಧ್ಯವೇ ಇಲ್ಲವೇನೋ?".

ಇದೇನು ಅಮೆರಿಕನ್ ಪ್ರವಾಸಿಗ ತನ್ನ ದೇಶದ ಬಗ್ಗೆ ಬಹಳ ಬಡಾಯಿ ಕೊಚ್ಚಿಕೊಳ್ಳುತ್ತಾನಲ್ಲ ಎಂದು ಸ್ವೀಡಿಷ್ ಪ್ರಜೆಗೆ ಅನಿಸಿತು. ಆತ ಅಷ್ಟು ಹೇಳಿದ ನಂತರ ತಾನೂ ತನ್ನ ದೇಶದ ಬಗ್ಗೆ ಹೇಳದಿದ್ದರೆ ಹೇಗೆ ಎಂದು ಅನಿಸಿತು. “ನಿಮ್ಮದೇನು ಮಹಾ? ನಮ್ಮ ದೇಶದಲ್ಲಿ ರಾಜ ಮತ್ತು ಶ್ರೀಸಾಮಾನ್ಯ ಒಂದೇ ಬಸ್ಸಿನಲ್ಲಿ ಕುಳಿತುಕೊಂಡು ಪ್ರಯಾಣ ಮಾಡುತ್ತಾರೆ,

ಗೊತ್ತಾ?" ಎಂದ ಸ್ವೀಡಿಷ್ ಪ್ರಜೆ. ಅಷ್ಟೊತ್ತಿಗೆ ಮುಂದಿನ ಸ್ಟಾಪ್ ಬಂತು. ಸ್ವೀಡಿಷ್ ಪ್ರಜೆ ಬಸ್ಸಿನಿಂದ ಇಳಿದು ಹೋದ. ಅವರಿಬ್ಬರ ಸಂಭಾಷಣೆಯನ್ನು ಮತ್ತೊಬ್ಬ ಕೇಳಿಸಿಕೊಳ್ಳುತ್ತಿದ್ದ. “ನಿಮ್ಮ ಪಕ್ಕ ದಲ್ಲಿ ಕುಳಿತಿದ್ದವ ಯಾರು ಗೊತ್ತಾಯಿತಾ?" ಎಂದು ಕೇಳಿದಕ್ಕೆ ಅಮೆರಿಕದ ಪ್ರವಾಸಿಗ ಗೊತ್ತಿಲ್ಲ ಎಂದು ತಲೆ ಅಡಿಸಿದ. “ಆತನೇ ಸ್ವೀಡನ್‌ನ ಆರನೇ ರಾಜ ಗುಸ್ತಾಫ್ ಅಡಾಲ್ಫ್!"