ಒಡಲಾಳ
ಸುರೇಂದ್ರ ಪೈ, ಭಟ್ಕಳ
ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಕಲಿಯುವ ಮಕ್ಕಳಿಗೆ ತ್ರಿಭಾಷಾ ಸೂತ್ರದ ಉಪಯೋಗ ದೊಂದಿಗೆ ಇಂದಿನ ಅಗತ್ಯಕ್ಕೆ ತಕ್ಕಂತೆ ಸ್ಕಿಲ್ ಎಜುಕೇಶನ್, ಕೃತಕ ಬುದ್ಧಿಮತ್ತೆ, ತಾರ್ಕಿಕ ಚಿಂತನೆಯ ವಿಷಯ ಗಳನ್ನು ಹತ್ತನೇ ತರಗತಿಗೆ ಹಂತ ಹಂತವಾಗಿ ಕಡ್ಡಾಯ ವಿಷಯ ವನ್ನಾಗಿಸುತ್ತಿದೆ. ಈ ಹೊಸ ನಿಯಮದಿಂದ ಲಕ್ಷಾಂತರ ಮಕ್ಕಳು ಕನ್ನಡವನ್ನೇ ಪ್ರಥಮ ಭಾಷೆಯನ್ನಾಗಿ ಓದುವ ಅವಕಾಶ ಸಿಕ್ಕಿದೆ.
ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯಲ್ಲಿ ತ್ರಿಭಾಷಾ ಸೂತ್ರದ ಅಳವಡಿಕೆ ಹಾಗೂ ಹಿಂದಿ ಹೇರಿಕೆಯ ಕುರಿತಂತೆ ತೀವ್ರ ವಿರೋಧ ಇರುವುದು ಎಲ್ಲರಿಗೂ ಗೊತ್ತಾ? ಇದರ ನಡುವೆಯೇ ಕೇಂದ್ರ ಪಠ್ಯಕ್ರಮ ಅಳವಡಿಸಿಕೊಂಡಿರುವ ಸಿಬಿಎಸ್‌ಇ ಶಾಲೆಗಳಿಗೆ ಪ್ರಸಕ್ತ ಸಾಲಿನಿಂದಲೇ 6-8 ನೇ ತರಗತಿಯಿಂದಲೇ ತ್ರಿಭಾಷಾ ಸೂತ್ರದ ಅಳವಡಿಸಿಕೊಳ್ಳುವ ಕುರಿತು ಆದೇಶ ಹೊರಡಿಸಲಾಗಿದೆ.
ಹಾಗಂತ ಅಯ್ಯೋ ಮತ್ತೆ ಹಿಂದಿ ಹೇರಿಕೆ ಕಡ್ಡಾಯ ಮಾಡುವ ಕೇಂದ್ರ ಸರಕಾರದ ಹುನ್ನಾರಕ್ಕೆ ಜಯ ಸಿಕ್ಕಿತು ಎಂದು ಗಾಬರಿಗೊಳ್ಳುವ ಅಗತ್ಯವಿಲ್ಲ. ಬದಲಾಗಿ ಕರ್ನಾಟಕದ ಕನ್ನಡಪರ ಜನತೆಗೆ ಇಂದು ಸಂತಸದ ಸುದ್ದಿ ಇದೆ. ಆದರೆ, ಕೇಂದ್ರ ಶಿಕ್ಷಣ ಇಲಾಖೆ ಸಿಬಿಎಸ್‌ಇ ಹೊರಡಿಸಿರುವ ತ್ರಿಭಾಷಾ ಸೂತ್ರದ ಹೊಸ ಆದೇಶವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಸಾಮಾಜಿಕ ಮಾಧ್ಯಮ ದಲ್ಲಿ ಒಂದಿಷ್ಟು ಜನರು ಸಂಘಟನೆಗಳ ಹೆಸರಿನಲ್ಲಿ ಕನ್ನಡಕ್ಕೆ ಅನ್ಯಾಯವಾಗಿದೆ.
ಕೇಂದ್ರ ಸರಕಾರ ತ್ರಿಭಾಷಾ ನೀತಿಯ ಮೂಲಕ ಕನ್ನಡ ಭಾಷೆಯನ್ನು ದ್ವಿತೀಯ ಭಾಷೆಯಿಂದ ತೃತೀಯ ಭಾಷೆಗೆ ತಳ್ಳುವ ಪ್ರಯತ್ನ ಮಾಡುತ್ತಿದೆ ಎಂದೆಲ್ಲಾ ಬೊಬ್ಬಿಡುತ್ತಿದ್ದಾರೆ. ಇದರಿಂದ ಸಾಕಷ್ಟು ಜನರು ಇದನ್ನೇ ನಿಜವೆಂದು ಭಾವಿಸಿ ಸಿಬಿಎಸ್‌ಇ ಶಾಲೆ ಹಾಗೂ ಕೇಂದ್ರ ಸರಕಾರದ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Surendra Pai Column: ರಾಜ್ಯ ಶಿಕ್ಷಣ ಪದ್ಧತಿ ಬದಲಾವಣೆಗೆ ಇದು ಸಕಾಲ
ವಾಸ್ತವದಲ್ಲಿ ಸಿಬಿಎಸ್‌ಇ ಪಠ್ಯಕ್ರಮ ಅನುಸರಿಸುವ ಶಾಲೆಯ 6 ರಿಂದ 8ನೇ ತರಗತಿಯ ಎನ್‌ಸಿಇ ಆರ್‌ಟಿ ಪಠ್ಯಪುಸ್ತಕಗಳು ಎನ್‌ಇಪಿ -2020 ( NEP-2020) ಹಾಗೂ ಎನ್‌ಸಿಎ-ಎಸ್‌ಇ-2023 ( NCFSE- 2023) ಚೌಕಟ್ಟಿನ ಅನ್ವಯ ಕಳೆದ ವರ್ಷವೇ ಬದಲಾವಣೆಗೊಂಡಿರುತ್ತದೆ. ಇದೀಗ ಪ್ರಸಕ್ತ ಸಾಲಿನ 9ನೇ ಪಠ್ಯಕ್ರಮ ಹಾಗೂ ಪಠ್ಯಪುಸ್ತಕದಲ್ಲಿ ಬದಲಾವಣೆಯಾಗಿದೆ.
ಈ ಕುರಿತಂತೆ ಕೇಂದ್ರ ಶಿಕ್ಷಣ ಇಲಾಖೆ ಅತ್ಯಂತ ವ್ಯವಸ್ಥಿತವಾಗಿ, ಪೂರ್ವಯೋಜಿತವಾಗಿ ತನ್ನೆಲ್ಲಾ ಸಿಬಿಎಸ್‌ಇ ಶಾಲೆಗಳಿಗೆ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಏಪ್ರಿಲ್ 2 ರಂದು ಅಧಿಕೃತವಾಗಿ ಆದೇಶ ಹೊರಡಿಸಿತ್ತು. ಜತೆಗೆ ಸಿಬಿಎಸ್‌ಇ ಚೇರ್ಮನ್ ಸ್ವತಃ ಎರಡೂವರೆ ಗಂಟೆಗಳ ಅವಧಿಯ ವಿಶೇಷ ವೆಬಿನಾರ್ ಆಯೋಜಿಸುವ ಮೂಲಕ ಹೊಸ ಬದಲಾವಣೆಯ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಿರು ತ್ತಾರೆ.
ಜತೆಗೆ ಮುಂದಿನ ವರ್ಷ ಹತ್ತನೇ ತರಗತಿಯ ಪಠ್ಯಕ್ರಮ ಬದಲಾವಣೆ ಬಗ್ಗೆಯೂ ಮಾಹಿತಿ ನೀಡಿ ದ್ದಾರೆ. ಇಷ್ಟು ಮಾತ್ರವಲ್ಲದೇ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟು (NCFSE- 2023)ಬಹುಭಾಷಾ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ಮತ್ತು ಕಲಿಯುವವರಲ್ಲಿ ಭಾಷಾ ಪ್ರಾವೀಣ್ಯತೆ, ಸಾಂಸ್ಕೃತಿಕ ತಿಳಿವಳಿಕೆ ಮತ್ತು ರಾಷ್ಟ್ರೀಯ ಏಕೀಕರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ 1, 2, 3 ಮಾದರಿಯ ಅಡಿಯಲ್ಲಿ ಎರಡು ಸ್ಥಳೀಯ ಭಾರತೀಯ ಭಾಷೆಗಳ ಬೋಧನೆಯನ್ನು ಶಿಫಾರಸು ಮಾಡುತ್ತದೆ.
ಹಾಗಾಗಿ ಪ್ರಸಕ್ತ ವರ್ಷದಿಂದಲೇ ಸಿಬಿಎಸ್‌ಇ ಶಾಲೆಗಳಲ್ಲಿ 6ನೇ ತರಗತಿಯಿಂದಲೇ ಮೂರು ಭಾಷೆ ಗಳ ಕಲಿಕೆಗೆ ಆದ್ಯ ನೀಡಿಲಾಗಿದೆ. ಅಂದರೆ ಮಕ್ಕಳು ಈ ವರ್ಷದಿಂದ 1, 2 ಹಾಗೂ 3 ಮಾದರಿಯ ತ್ರಿಭಾಷೆಯ ಸೂತ್ರ ಕಲಿಯಬೇಕು. ಈ ನಿಯಮವೇ 2029-30ರ ಅವಧಿಯಲ್ಲಿ 9ನೇ ತರಗತಿ ಹಾಗೂ 2030-31ರಲ್ಲಿ ಹತ್ತನೇ ತರಗತಿಗೆ ಅಳವಡಿಕೆ ಆಗಲಿದೆ.
ಈ ಹೊಸ ನಿಯಮದ (NCFSE-2023) ಪ್ರಕಾರ ಸಿಬಿಎಸ್‌ಇ ಶಾಲೆಯಲ್ಲಿ ಕಲಿಯುವ ಮಕ್ಕಳು 1 ಮಾದರಿಯಲ್ಲಿ ‘ಹಿಂದಿ, ಇಂಗ್ಲೀಷ್, ಉರ್ದು, ಕನ್ನಡ’ ಈ ನಾಲ್ಕು ಭಾಷೆಗಳಲ್ಲಿ ಒಂದನ್ನು ಮೊದಲ ಭಾಷೆಯನ್ನಾಗಿ ಅಧ್ಯಯನ ಮಾಡಬಹುದು. ಉದಾಹರಣೆಗೆ ಮಕ್ಕಳು ಕನ್ನಡವನ್ನು ಪ್ರಥಮ ಭಾಷೆಯನ್ನಾಗಿಆಯ್ಕೆ ಮಾಡಿಕೊಂಡರೆ, 2 ಮಾದರಿಯ ದ್ವಿತೀಯ ಭಾಷಾ ವಿಷಯವನ್ನು ‘ಹಿಂದಿ, ಇಂಗ್ಲೀಷ್ ಅಥವಾ ಉರ್ದು’ ಈ ಮೂರು ಭಾಷಾ ವಿಷಯದಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳ ಬೇಕು.
ಉದಾಹರಣೆಗೆ ವಿದ್ಯಾರ್ಥಿ ಪ್ರಥಮ ಭಾಷೆ ಕನ್ನಡವನ್ನಾಗಿ, ದ್ವಿತೀಯ ಭಾಷೆಯನ್ನು ಇಂಗ್ಲೀಷ್ ಆಯ್ಕೆ ಮಾಡಿಕೊಂಡರೆ, ಇನ್ನೂ 3 ಮಾದರಿಯಲ್ಲಿ ವಿದ್ಯಾರ್ಥಿ ಈಗಾಗಲೇ ಆಯ್ಕೆ ಮಾಡಿಕೊಂಡಿ ರುವ ಪ್ರಥಮ, ದ್ವಿತೀಯ ಭಾಷೆ ವಿಷಯಗಳನ್ನು ಹೊರತುಪಡಿಸಿ ಭಾರತದ ಇನ್ನುಳಿದ 42 ಪ್ರಾದೇಶಿಕ ಭಾಷೆಯಲ್ಲಿ ಒಂದನ್ನು ತೃತೀಯ ಭಾಷೆಯನ್ನಾಗಿ ಓದಬಹುದು.
ಜತೆಗೆ ಅದೇ 42 ಪ್ರಾದೇಶಿಕ ಭಾಷೆಯಲ್ಲಿ ಒಂದನ್ನು 2 ಮಾದರಿಯ ದ್ವಿತೀಯ ಭಾಷೆಯನ್ನಾಗಿಯೂ ಆಯ್ಕೆ ಮಾಡಿಕೊಂಡು ಓದಬಹುದು. ಇದು ಪ್ರಸುತ್ತ 6ನೇ ತರಗತಿಯಿಂದಲೇ ಅನುಷ್ಠಾನ ವಾಗಲಿದ್ದು, ವಿದ್ಯಾರ್ಥಿಗಳು ಅವುಗಳನ್ನೇ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲೂ ಅಧ್ಯಯನ ಮಾಡಬೇಕು. ಈ ಹೊಸ ನಿಯಮದಿಂದ ಕರ್ನಾಟಕಕ್ಕೆ ವಿಶೇಷ ಪ್ರಾಧ್ಯಾನತೆ ಸಿಕ್ಕಂತಾಗಿದೆ.
ನಮ್ಮ ರಾಜ್ಯದ ಮಕ್ಕಳು ಸೇರಿದಂತೆ ಬೇರೆ ರಾಜ್ಯದ ಆಸಕ್ತ ವಿದ್ಯಾರ್ಥಿಗಳು ಕನ್ನಡವನ್ನು ತಮ್ಮ ಪ್ರಥಮ ಭಾಷೆಯನ್ನಾಗಿ ಇನ್ನೂ ಮುಂದೆ ಅಧ್ಯಯನ ಮಾಡಬಹುದು. ಈ ಮೊದಲು ಹಿಂದಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಒಂದನ್ನು ಮಾತ್ರ ಕಡ್ಡಾಯವಾಗಿ ಪ್ರಥಮ ಭಾಷೆಯನ್ನಾಗಿ ಅಧ್ಯಯನ ಮಾಡಬೇಕಿತ್ತು. ಆಗ ಕರ್ನಾಟಕದಲ್ಲಿ ಕನ್ನಡವನ್ನು ದ್ವಿತೀಯ ಭಾಷೆಯನ್ನಾಗಿ ಸಿಬಿಎಸ್‌ಇ ಶಾಲೆಯಲ್ಲಿ ಕಲಿಸಲಾಗುತ್ತಿತ್ತು.
ಆದರೆ ಈ ವರ್ಷದಿಂದ 6ನೇ ತರಗತಿಯಿಂದಲೇ ಕನ್ನಡವನ್ನು (ಸಿರಿಗನ್ನಡ, ತಿಳಿಗನ್ನಡ) ಪಠ್ಯಪುಸ್ತಕ ವನ್ನು ಪ್ರಥಮ ಭಾಷೆಯನ್ನಾಗಿ ಓದಬಹುದು. ಈ ಹೊಸ ನಿಯಮದಿಂದ ಮಕ್ಕಳಿಗೆ ಬಹುಭಾಷಾ ಕಲಿಕೆಯ ಉತ್ತೇಜನ ಸಿಗುವುದು ಮಾತ್ರವಲ್ಲದೇ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಓದುವ ಹಾಗೂ ಹಿಂದಿ, ಇಂಗ್ಲೀಷ್ ಭಾಷೆಯನ್ನು ಕಡ್ಡಾಯ ಪ್ರಥಮ ಭಾಷೆಯ ಕಲಿಕೆಯ ಒತ್ತಡದಿಂದ ನಿರಾಳ ಸಿಗಲಿದೆ.
ಕೇಂದ್ರ ಶಿಕ್ಷಣ ಇಲಾಖೆಯ ಈ ಹೊಸ ನಿಯಮದಿಂದ ಲಕ್ಷಾಂತರ ಮಕ್ಕಳು ಕನ್ನಡವನ್ನೇ ಪ್ರಥಮ ಭಾಷೆಯನ್ನಾಗಿ ಓದುವ ಅವಕಾಶ ಸಿಕ್ಕಿದ್ದು ಮಾತ್ರವಲ್ಲ ಬಹುಭಾಷೆಯನ್ನು ಮುಕ್ತವಾಗಿ ಕಲಿಯುವ ಆಯ್ಕೆಯನ್ನು ಒದಗಿಸಿದಂತಾಗಿದೆ. ಇಲ್ಲಿ ಭಾಷಾ ವಿಷಯದ ಆಯ್ಕೆ ಸಂಪೂರ್ಣವಾಗಿ ವಿದ್ಯಾರ್ಥಿಯ ಆಯ್ಕೆಗೆ ಸಂಬಂಧಿಸಿದ್ದು, ಹಾಗೂ ಶಾಲೆಗಳು ಮಕ್ಕಳ ಆಯ್ಕೆಯನ್ನು ಗೌರವಿಸಿ ಅದಕ್ಕೆ ತಕ್ಕಂತೆ ಬೋಧನೆ ಮಾಡುವ ಹೊಣೆಯನ್ನು ಹೊಂದಬೇಕಿದೆ.
ಇದರೊಂದಿಗೆ ಸಿಬಿಎಸ್‌ಇ ಶಾಲೆಗಳ ಪರೀಕ್ಷಾ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿರ್ದಿಷ್ಟ ಅಂಕ ಪಡೆಯುವ ನಿಯಮವನ್ನು ಬದಲಾಯಿಸಿದೆ. ಇಷ್ಟು ದಿನ 80 ವಾರ್ಷಿಕ ಪರೀಕ್ಷೆಯ ಲಿಖಿತ ಅಂಕಗಳು ಹಾಗೂ 20 ಆಂತರಿಕ ಅಂಕಗಳು ಸೇರಿ ಒಟ್ಟು 100ಕ್ಕೆ 33 ಅಂಕ ಬಂದರೆ ಉತ್ತೀರ್ಣ ಎಂಬ ನಿಯಮವಿತ್ತು. ಇದನ್ನೇ ನಮ್ಮ ರಾಜ್ಯ ಶಿಕ್ಷಣ ಇಲಾಖೆ ಪರೀಕ್ಷಾ ಫಲಿತಾಂಶ ಹೆಚ್ಚಿಸುವ ಉದ್ದೇಶದಿಂದ ಈ ವರ್ಷದಿಂದಲೇ 100 ಕ್ಕೆ 33 ಪಾಸ್ ಅಂಕವೆಂದು ಆದೇಶ ನೀಡಿತ್ತು. ಆದರೆ ಸಿಬಿಎಸ್‌ಇ ಮಾತ್ರ ಮಕ್ಕಳ ಕಲಿಕಾ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಬಯಸದೇ ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಪರೀಕ್ಷಾ ನೀತಿಯಲ್ಲೂ ಗುಣಮಟ್ಟ ಕಾಯ್ದುಕೊಳ್ಳಲು ಮುಂದಾಗಿದೆ.
ಹೊಸ ನಿಯಮದ ಪ್ರಕಾರ ಪ್ರಸಕ್ತ ಸಾಲಿನಿಂದ ಹತ್ತನೇ ತರಗತಿ ವಿದ್ಯಾರ್ಥಿಗಳು ವಿಷಯವಾರು 80 ಲಿಖಿತ ಅಂಕಗಳಿಗೆ ಶೇ.33 ಅಂಕ ಪಡೆಯಬೇಕು. ಹಾಗೂ ಆಂತರಿಕ 20 ಅಂಕಗಳಲ್ಲಿ ಪ್ರತ್ಯೇಕವಾಗಿ ಶೇ.33 ಅಂಕ ಗಳಿಸಬೇಕು. ಅಂದರೆ 80ಕ್ಕೆ ಕನಿಷ್ಠ 26.5 ಅಂಕಗಳನ್ನು ಹಾಗೂ 20 ಆಂತರಿಕ ಅಂಕಗಳಲ್ಲಿ ಕನಿಷ್ಠ 7 ಅಂಕಗಳನ್ನು ಪಡೆಯಲೇ ಬೇಕು.
ಒಂದೊಮ್ಮೆ 80 ಅಂಕಗಳಲ್ಲಿ 26.6 ಕ್ಕಿಂತ ಕಡಿಮೆ 25 ಅಂಕ ಪಡೆದು 20 ಆಂತರಿಕ ಅಂಕದಲ್ಲಿ 8 ಅಂಕ ಪಡೆದರೂ ಸಹ ಫೇಲ್ ಆಗುತ್ತಾರೆ. ಈ ನಿಯಮದ ಲಿಖಿತ ಪರೀಕ್ಷೆಯನ್ನು ವಿದ್ಯಾರ್ಥಿಗಳು ಗಂಭೀರವಾಗಿ ಪರಿಗಣಿಸುವಂತೆ ಮಾಡಿದೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಕಲಿಕೆಯನ್ನು ಹೊಂದಿ, ಪೂರ್ವ ತಯಾರಿ ಹೊಂದುವಂತೆ ಶೈಕ್ಷಣಿಕ ವರ್ಷದ ಪ್ರಾರಂಭದ ಅಣಿಯಾಗಲು ಅವಕಾಶ ನೀಡಿದೆ.
ಕೇಂದ್ರೀಯ ಶಿಕ್ಷಣ ಇಲಾಖೆಯು 2026-27 ರಿಂದ 2030-31 ರ ತನಕ ಐದು ವರ್ಷಗಳ ಪರೀಕ್ಷಾ ನೀತಿ, ಪಠ್ಯಕ್ರಮ ಅಳವಡಿಕೆ, ಅಂಕಗಳ ಹಂಚಿಕೆ, ಗ್ರೇಡಿಂಗ್ ನಿಯಮ, ಪಠ್ಯಪುಸ್ತಕ ಬದಲಾವಣೆ, ಅದಕ್ಕೆ ಪೂರಕವಾದ ನಿರಂತರ ಶಿಕ್ಷಕರ ತರಬೇತಿ ಕಾರ್ಯಕ್ರಮದ ಯೋಜನೆಯ ಸಂಪೂರ್ಣ ಚಿತ್ರಣದ ರೂಪುರೇಷೆಯನ್ನು ಎಲ್ಲ ಸಿಬಿಎಸ್‌ಇ ಶಾಲೆಗಳಿಗೆ ಅತ್ಯಂತ ಪೂರ್ವಯೋಜಿತವಾಗಿ ನೀಡಿದೆ.
ಇದರಿಂದ ಶಾಲೆ, ಆಡಳಿತ ಮಂಡಳಿ, ವಿದ್ಯಾರ್ಥಿಗಳು, ಪಾಲಕರು ಎಲ್ಲರಿಗೂ ಒಂದು ಸ್ಪಷ್ಟವಾದ ಚಿತ್ರಣ ದೊರಕಿದೆ. ಎಲ್ಲರೂ ಬದಲಾವಣೆಗ ಬೇಕಾದ ಸೂಕ್ತ ತಯಾರಿ ಮಾಡಿಕೊಳ್ಳಲು ಎರಡು ವರ್ಷಗಳ ಕಾಲಾವಕಾಶ ಸಿಗುವಂತೆ ಮಾಡಿದೆ. ಆದರೆ, ನಮ್ಮ ರಾಜ್ಯ ಶಿಕ್ಷಣ ಇಲಾಖೆ ಮಾತ್ರ ನಮ್ಮ ಮಕ್ಕಳು ಬಹುಭಾಷೆ ಕಲಿಯಬಾರದು ದ್ವಿಭಾಷಾ ನೀತಿಯೇ ಸರಿ ಎಂದು ಪಟ್ಟು ಹಿಡಿದು ಕುಳಿತಿದೆ.
ಇದಕ್ಕೆ ಒಂದಿಷ್ಟು ಸಂಘಟನೆಗಳ ಬೆಂಬಲ ಬೇರೆ. ಹೌದು ಕರ್ನಾಟಕದ ಆಡಳಿತ ಭಾಷೆಯ ದೃಷ್ಟಿ ಯಿಂದ ಕನ್ನಡ ಕಡ್ಡಾಯವಾಗಬೇಕು. ಹಾಗೂ ಎಲ್ಲೂ ಹಿಂದಿ ಸೇರಿದಂತೆ ಬೇರೆ ಭಾಷೆಗಳ ಹೇರಿಕೆ ಆಗಬಾರದು. ಇನ್ನೂ ಪ್ರಾಥಮಿಕ ,ಪ್ರೌಢ ಶಾಲೆಗಳಲ್ಲೂ ಸಹ ಕನ್ನಡವನ್ನು ಕಡ್ಡಾಯ ಪ್ರಥಮ ಭಾಷೆಯನ್ನಾಗಿಸಬೇಕು ಒಪ್ಪೋಣ. ಹಾಗಂತ ಇತರೆ ಭಾಷೆ ಕಲಿಯಬಾರದು, 100ಕ್ಕೆ 33 ಬಂದರೆ ಪಾಸ್ ಮಾಡುತ್ತೇವೆ ಎಂಬ ಮುಂದಾಲೋಚನೆ ಇಲ್ಲದ ಘೋಷಣೆ, ಆದೇಶ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅಪಾಯ.
ಇಷ್ಟು ದಿನ ಕೇಂದ್ರ ಸರಕಾರದ ತ್ರಿಭಾಷಾ ನೀತಿಯಿಂದ ಕನ್ನಡಕ್ಕೆ ಅಪಾಯವಾಗಲಿದೆ, ಕನ್ನಡ ತುಳಿತಕ್ಕೆ ಒಳಗಾಗಲಿದೆ ಎಂದೆಲ್ಲಾ ಊಹಾಪೋಹದ ಮಾತುಗಳನ್ನಾಡಿದೇವು. ಆದರೆ, ಪ್ರಸುತ್ತ ಸಿಬಿಎಸ್‌ಇ ಶಾಲೆಗಳು ಅನುಸರಿಸುತ್ತಿರುವ ನೀತಿಯಿಂದ ಮಕ್ಕಳು ಅವರ ಆಸಕ್ತಿಗೆ ತಕ್ಕಂತೆ ಕನ್ನಡ ವನ್ನು ಪ್ರಥಮ ಭಾಷೆ, ದ್ವಿತೀಯ ಭಾಷೆ ಅಥವಾ ತೃತೀಯ ಭಾಷೆ ಹೀಗೆ ಮೂರರಲ್ಲೂ ಕಲಿಯುವ ಅವಕಾಶ ಸಿಕ್ಕಿದೆ.
ಇದನ್ನೇಲ್ಲಾ ನೋಡಿದಾಗ ನಮ್ಮ ಮಕ್ಕಳಿಗೆ ರಾಜ್ಯ ಪಠ್ಯಕ್ರಮಕ್ಕಿಂತಲೂ ಸಿಬಿಎಸ್‌ಇ ಪಠ್ಯಕ್ರಮ ಶಾಲೆಗಳು ಎಲ್ಲ ವಿಧದಲ್ಲೂ ಒಳ್ಳೆಯದು ಎಂದೆನಿಸದೆ ಇರಲಾರದು. ಇನ್ನಾದರೂ ರಾಜ್ಯ ಶಿಕ್ಷಣ ಇಲಾಖೆ ಶಿಕ್ಷಣ ನೀತಿಯನ್ನು ರೂಪಿಸುವಾಗ ಇಂತಹ ಹತ್ತಾರು ಮುಂದಾಲೋಚನಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.
ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಕಲಿಯುವ ಮಕ್ಕಳಿಗೆ ತ್ರಿಭಾಷಾ ಸೂತ್ರದ ಉಪಯೋಗದೊಂದಿಗೆ ಇಂದಿನ ಅಗತ್ಯಕ್ಕೆ ತಕ್ಕಂತೆ ಸ್ಕಿಲ್ ಎಜುಕೇಶನ್, ಕೃತಕ ಬುದ್ಧಿಮತ್ತೆ, ತಾರ್ಕಿಕ ಚಿಂತನೆಯ ವಿಷಯ ಗಳನ್ನು ಹತ್ತನೇ ತರಗತಿಗೆ ಹಂತ ಹಂತವಾಗಿ ಕಡ್ಡಾಯ ವಿಷಯವನ್ನಾಗಿಸುತ್ತಿದೆ. ಅದಕ್ಕೆ ಬೇಕಾದ ಪೂರಕ ನೀತಿಗಳನ್ನು, ತರಬೇತಿಗಳನ್ನು ನೀಡಲು ಮುಂದಾಗಿದೆ. ಹೀಗಿರುವಾಗ ನಾವು ಮಾತ್ರ ಕಳಪೆ ಮಟ್ಟದ ಶಿಕ್ಷಣ ನೀಡುತ್ತಾ, ಸರಳ ಪ್ರಶ್ನೆಪತ್ರಿಕೆ, ಕಳಪೆ ಪರೀಕ್ಷಾ ಪದ್ಧತಿ ಅಳವಡಿಕೆಯಿಂದ, ಬೋರ್ಡ್ ಪರೀಕ್ಷೆಯಲ್ಲಿ ನೂರಕ್ಕೆ ನೂರು ಬಂತು ಎಂದು ಹೇಳಿ ಬೀಗುವುದರಿಂದ ಯಾವ ಸುಧಾರಣೆಯೂ ಸಾಧ್ಯವಾಗದು.