ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rangaswamy Mookanahalli Column: ಕನ್ನಡ ಎನ್ನುವುದು ನಮ್ಮ ಗುರುತಾಗಬೇಕು..

ನಾವಿರುವುದು ಕರ್ನಾಟಕದಲ್ಲಿ, ಕನ್ನಡ ನಮ್ಮ ಮಾತೃಭಾಷೆ, ಹೀಗಾಗಿ ಇಲ್ಲಿ ಓದುವ ಪ್ರತಿ ಯೊಬ್ಬರಿಗೂ ಕನ್ನಡ ಕಡ್ಡಾಯವಾಗಬೇಕು. ಹಿಂದಿ ಎನ್ನುವ ವಿಷಯವನ್ನು ವಿದ್ಯಾರ್ಥಿಗಳ ಆಯ್ಕೆಗೆ ಬಿಡಬೇಕು. ಅದನ್ನು ಮೂರನೇ ಭಾಷೆಯನ್ನಾಗಿ ಕೂಡ ಆಯ್ಕೆ ಮಾಡಿಕೊಳ್ಳುವಂತಿರ ಬೇಕು. ಅಂದರೆ ಇಲ್ಲಿ ಓದುತ್ತಿರುವ ವಿದ್ಯಾರ್ಥಿಯ ಮಾತೃಭಾಷೆ ತೆಲುಗು ಇದ್ದಲ್ಲಿ ಕನ್ನಡ, ಇಂಗ್ಲಿಷ್ ಜತೆಗೆ ತೆಲುಗನ್ನು ಮೂರನೇ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಬೇಕು.

ವಿಶ್ವರಂಗ

ನಾನು ಹತ್ತನೇ ತರಗತಿ ಪಾಸಾದದ್ದು 1990ರಲ್ಲಿ. ಅವತ್ತಿನ ದಿನದಲ್ಲಿ ಹಿಂದಿ ಭಾಷೆ ಒಂದು ವಿಷಯವಾಗಿತ್ತು. ಆದರೆ ಅದು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎನ್ನುವಂತಿತ್ತು. ಈ ವಿಷಯದ ಬಗ್ಗೆ ಬಹಳ ಸೀರಿಯಸ್ಸಾಗಿ ಯಾರೂ ಮಾತಾಡುತ್ತಿರಲಿಲ್ಲ. ನಮ್ಮ ಶಾಲೆಯಲ್ಲಿ ಹಿಂದಿ ಭಾಷೆಯ ಬೋಧನೆ ಬಗ್ಗೆ ಕೂಡ ಸೀರಿಯಸ್ ಆಗಿರಲಿಲ್ಲ.

‘ಖಾಲಿ ಪೇಪರ್ ಕೊಟ್ಟರೆ ನಪಾಸಾಗುತ್ತೀರಿ ಎಚ್ಚರ, ಹೀಗಾಗಿ ಏನಾದರೂ ಬರೆದು ಬನ್ನಿ’ ಎನ್ನುವ ಮಾತುಗಳನ್ನು ಗುರುಗಳು ಹೇಳುತ್ತಿದ್ದರು. ಅವತ್ತಿಗೆ ಬೇಕಾದ ಒಂದಷ್ಟು ಕಲಿತದ್ದು ಬಿಟ್ಟರೆ, ಇಂದಿಗೆ ನನಗೆ ನನ್ನ ಹೆಸರನ್ನು ಕೂಡ ಹಿಂದಿಯಲ್ಲಿ ಬರೆಯಲು ಬರುವುದಿಲ್ಲ.

ಪರೀಕ್ಷೆಯಲ್ಲಿ ಹೇಗೂ ಬಿಟ್ಟಪದ ತುಂಬುವುದು, ಹೊಂದಿಸಿ ಬರೆಯುವುದು ಹೀಗೆ ಮಕ್ಕಳು ಹೆಚ್ಚಿನ ಭಾಷಾಜ್ಞಾನವಿಲ್ಲದೆ ಪಾಸಾಗಲು ಎಷ್ಟು ಅಂಕಗಳಿಸಬೇಕೋ ಅಷ್ಟು ಸುಲಭವಾಗಿ ತೆಗೆಯುವಂಥ ವ್ಯವಸ್ಥೆ ಅಂದಿನ ದಿನದಲ್ಲಿತ್ತು. ಒಟ್ಟಾರೆ ಹಿಂದಿ ಬರುವುದಿಲ್ಲ ಎನ್ನುವ ಕಾರಣಕ್ಕೆ ನಾನು ನಪಾಸಾಗಲಿಲ್ಲ. ಅದು ಬುದ್ದಿ ತಿಳಿಯದ ದಿನಗಳು.

ಒಂದು ಭಾಷೆಯನ್ನು ಕಲಿಯುವುದು ನಮಗೆ ಲಾಭ ಎಂದು ಅರಿವಿರದ ದಿನಗಳು. ಹೀಗಾಗಿ ಹಿಂದಿ ಕಲಿಯಲಿಲ್ಲ. ಕಲಿಯದೆಯೂ ಪಾಸು ಮಾಡಿದ ಅಂದಿನ ವ್ಯವಸ್ಥೆಗೆ ಸಾವಿರ ನಮನಗಳು. ಹೀಗೆ ನಮನವನ್ನು ಅರ್ಪಿಸಲು ಕಾರಣವಿದೆ. ನಾನು ಹತ್ತನೇ ತರಗತಿ ನಪಾಸಾಗಿದ್ದರೆ? ನನ್ನ ಭವಿಷ್ಯ ಏನಾಗಿರುತ್ತಿತ್ತು? ಗೊತ್ತಿಲ್ಲ.

ಇದನ್ನೂ ಓದಿ: Rangaswamy Mookanahalli Column: ಬದುಕನ್ನು ಬದಲಿಸುವ ಶಕ್ತಿಯಿರುವುದು ಕಲಿಕೆಗೆ

ಪಾಸಾದ ಕಾರಣ ಅದು ಮುಂದೆ ನನ್ನ ಮೊದಲ ಕೆಲಸಕ್ಕೆ ಎಂದು ದುಬೈಗೆ ಕರೆದೊಯ್ದಿತು. ಅಲ್ಲಿ ಹಿಂದಿ ಭಾಷೆಯನ್ನು ಸ್ಪಷ್ಟವಾಗಿ ಮಾತಾಡಲು ಕಲಿತೆ. ಇಂದಿಗೆ ಕನ್ನಡದಷ್ಟೇ ಸುಲಲಿತವಾಗಿ ಹಿಂದಿ ಭಾಷೆಯನ್ನು ಮಾತಾಡಬಲ್ಲೆ. ಆದರೆ ಬರೆಯಲು ಮತ್ತು ಓದಲು ಬರುವುದಿಲ್ಲ.

ನೀವು ನನ್ನನ್ನು ಅಜ್ಞಾನಿ ಎಂದುಕೊಂಡರೂ ಪರವಾಗಿಲ್ಲ. ಆದರೆ ಸತ್ಯ ಹೇಳದೆ ಇರುವುದು ಮಾತ್ರ ಸಾಧ್ಯವಿಲ್ಲ. ಅದೇನೆಂದರೆ ನನಗೆ ಸ್ಪೇನ್ ಎನ್ನುವ ದೇಶವಿದೆ ಎನ್ನುವುದು ಗೊತ್ತಿರಲಿಲ್ಲ. ಇನ್ನು ಸ್ಪ್ಯಾನಿಷ್ ಎನ್ನುವ ಭಾಷೆಯಿದೆ ಎನ್ನುವುದು ಹೇಗೆ ಗೊತ್ತಾಗಬೇಕು? ನಮ್ಮ ಚರಿತ್ರೆಯಲ್ಲಿ ಫ್ರೆಂಚರು, ಡಚ್ಚರು, ಪೋರ್ಚುಗೀಸರು, ಬ್ರಿಟಿಷರು ಎಂದು ಓದಿದ್ದೆವು. ಆದರೆ ಸ್ಪ್ಯಾನಿಷ್ ಹೆಸರು ಕೇಳಿರಲಿಲ್ಲ.

ಬದುಕು ನನ್ನನ್ನು 23ನೇ ವಯಸ್ಸಿಗೆ ಸ್ಪೇನ್ ದೇಶಕ್ಕೆ ಕರೆದುಕೊಂಡು ಹೋಯ್ತು. ಮೂರು ತಿಂಗಳ ಕಾಲಾವಧಿಯಲ್ಲಿ ನಾನು ಸ್ಪ್ಯಾನಿಷ್ ಭಾಷೆಯನ್ನು ಕಲಿತೆ. ಓದುವುದು, ಬರೆಯು ವುದು, ಮಾತಾಡುವುದು ಎಲ್ಲವೂ ಬರುತ್ತದೆ. ಕನ್ನಡದ ನಂತರ ಅತಿ ಹೆಚ್ಚು ಬಳಸುವ ಭಾಷೆ ಇಂದಿಗೂ ಸ್ಪ್ಯಾನಿಷ್.

ಆ ನಂತರದ್ದು ಇಂಗ್ಲಿಷ್. ಹಿಂದಿ ಭಾಷೆ ದುಬೈನಲ್ಲಿರುವಾಗ ಉಪಯೋಗಿಸಿದ್ದು ಬಿಟ್ಟರೆ ಮತ್ತದು ನನಗೆ ಹೆಚ್ಚು ಉಪಯೋಗಕ್ಕೆ ಬಂದಿಲ್ಲ. ಮನುಷ್ಯನಿಗೆ ಅವಶ್ಯಕತೆ ಎನ್ನುವುದು ಎಲ್ಲವನ್ನೂ ಕಲಿಸುತ್ತದೆ. ನಮ್ಮ ದೇಶದ ಹಿಂದಿ ಭಾಷೆ ಇಂದಿಗೂ ನನಗೆ ಓದಲು ಮತ್ತು ಬರೆಯಲು ಬರುವುದಿಲ್ಲ. ಆದರೆ ದೂರದ ಯುರೋಪಿನ ಸ್ಪ್ಯಾನಿಷ್ ಜತೆಗೆ ಪೋರ್ಚುಗೀಸ್, ಇಟಾಲಿಯನ್ ಬರುತ್ತದೆ.

ಏಕೆಂದರೆ ಅದು ನನಗೆ ಅನ್ನದ ದಾರಿ ಒದಗಿಸಿಕೊಟ್ಟಿತು. ಹಿಂದಿ ನನಗೆ ಆ ಅವಕಾಶವನ್ನು ತೆರೆದುಕೊಟ್ಟಿದ್ದರೆ ನಾನು ಅದನ್ನು ಕೂಡ ಕಲಿತಿರುತ್ತಿದ್ದೆ. ಎಷ್ಟು ಭಾಷೆ ಕಲಿತರೂ ಅಷ್ಟೂ ಒಳ್ಳೆಯದು ಎಂದು ನನ್ನ ಭಾವನೆ. ಆದರೆ ಹಿಂದಿ ಭಾಷೆ ಬರುವುದಿಲ್ಲ ಎನ್ನುವ ಒಂದೇ ಕಾರಣಕ್ಕೆ ಬೇರೆ ಸಬ್ಜೆಕ್ಟ್‌ʼಗಳಲ್ಲಿ ಉತ್ತಮ ಅಂಕ ತೆಗೆದ ವಿದ್ಯಾರ್ಥಿಯನ್ನು ನಪಾಸು ಮಾಡುವುದಕ್ಕೆ ನನ್ನ ವಿರೋಧವಿದೆ.

ನಾವಿರುವುದು ಕರ್ನಾಟಕದಲ್ಲಿ, ಕನ್ನಡ ನಮ್ಮ ಮಾತೃಭಾಷೆ, ಹೀಗಾಗಿ ಇಲ್ಲಿ ಓದುವ ಪ್ರತಿಯೊಬ್ಬರಿಗೂ ಕನ್ನಡ ಕಡ್ಡಾಯವಾಗಬೇಕು. ಹಿಂದಿ ಎನ್ನುವ ವಿಷಯವನ್ನು ವಿದ್ಯಾರ್ಥಿಗಳ ಆಯ್ಕೆಗೆ ಬಿಡಬೇಕು. ಅದನ್ನು ಮೂರನೇ ಭಾಷೆಯನ್ನಾಗಿ ಕೂಡ ಆಯ್ಕೆ ಮಾಡಿಕೊಳ್ಳುವಂತಿರಬೇಕು. ಅಂದರೆ ಇಲ್ಲಿ ಓದುತ್ತಿರುವ ವಿದ್ಯಾರ್ಥಿಯ ಮಾತೃಭಾಷೆ ತೆಲುಗು ಇದ್ದಲ್ಲಿ ಕನ್ನಡ, ಇಂಗ್ಲಿಷ್ ಜತೆಗೆ ತೆಲುಗನ್ನು ಮೂರನೇ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಬೇಕು.

ಅದೇ ರೀತಿ ವಿದ್ಯಾರ್ಥಿಗೆ ಹಿಂದಿ ಇಷ್ಟವಿದ್ದಲ್ಲಿ ಹಿಂದಿ, ಸಂಸ್ಕೃತ ಇಷ್ಟವಿದ್ದಲ್ಲಿ ಸಂಸ್ಕೃತ ಆಯ್ಕೆ ಮಾಡಿಕೊಳ್ಳುವ ಅವಕಾಶ ಇರಬೇಕು. ಇಂಗ್ಲಿಷ್ ಭಾಷೆಯಿಲ್ಲದೆ ಇಂದಿನ ಜಗತ್ತಿನಲ್ಲಿ ಬದುಕು ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ. ಹೀಗಾಗಿ ಕನ್ನಡ, ಇಂಗ್ಲಿಷ್ ಎರಡನ್ನೂ ಎಲ್ಲಾ ಮಕ್ಕಳು ಕಡ್ಡಾಯವಾಗಿ ಓದುವಂತಿರಬೇಕು. ಮಿಕ್ಕ ಯಾವುದೇ ಭಾಷೆಯಾಗಲಿ ಅದು ಹಿಂದಿಯೇ ಆಗಿರಬೇಕು ಎಂದಿಲ್ಲ, ಅದು ಆಯ್ಕೆಯ ವಿಷಯವಾಗಬೇಕು.

ಭಾಷೆಯ ಆಧಾರದ ಮೇಲೆ 1956ರಲ್ಲಿ ರಾಜ್ಯಗಳ ಪುನರ್ವಿಗಂಡನೆ ಮಾಡಿದ್ದು ಏಕೆ? ಅದು ರಾಜ್ಯಗಳ ಆಡಳಿತ ಸುಲಭವಾಗುತ್ತದೆ ಎನ್ನುವ ಕಾರಣಕ್ಕೆ, ಮಾತೃಭಾಷೆಯಲ್ಲಿ ಸಂವಹನ ಸುಲಭ, ಸರಾಗ ಎನ್ನುವ ಕಾರಣಕ್ಕೆ ಅಲ್ಲವೇ? ಈಗ ಅದು ಬದಲಾಗಿ ಹೋಗಿದೆಯೇ? ಹಿಂದಿ ಭಾಷೆಯನ್ನು ಗ್ರೇಡಿಂಗ್ ವ್ಯವಸ್ಥೆಗೆ ತಂದ ಕರ್ನಾಟಕ ಸರಕಾರ ಅಭಿನಂದಾರ್ಹ.

ಉತ್ತರ ಪ್ರದೇಶದ ಮಗು ಕನ್ನಡವನ್ನು ಮೂರನೇ ಭಾಷೆಯಾಗಿ ಕಲಿಯಬೇಕು ಮತ್ತು ಅದರಲ್ಲಿ ಆ ಮಗು ಅನುತ್ತೀರ್ಣನಾದರೆ ಒಂದು ವರ್ಷ ಮತ್ತೆ ಅದೇ ಕ್ಲಾಸು ರಿಪೀಟ್ ಮಾಡಬೇಕು ಎನ್ನುವುದನ್ನು ಅಲ್ಲಿನ ಸರಕಾರ ಒಪ್ಪುತ್ತದೆಯೇ? ಅಲ್ಲಿನ ಜನ ಒಪ್ಪುವರೇ? ಅದೇಕೆ ನಮ್ಮ ಮಕ್ಕಳು ಹಿಂದಿಯಲ್ಲಿ ನಪಾಸಾದರೆ ಒಂದು ವರ್ಷದ ನಷ್ಟವನ್ನು ಅನುಭವಿಸಬೇಕು? ಮತ್ತೆ ಹೇಳುತ್ತೇನೆ, ಬದುಕು ದೊಡ್ಡದು, ಅವಕಾಶಗಳು ಮತ್ತು ಅವಶ್ಯಕತೆಗಳು ಬಿದ್ದಲ್ಲಿ ಹಿಂದಿಯಲ್ಲ ಯಾವುದೇ ಭಾಷೆಯನ್ನಾದರೂ ಮನುಷ್ಯ ಕಲಿಯುತ್ತಾನೆ.

ಅದಕ್ಕೆ ಉದಾಹರಣೆಯಾಗಿ ನಾನಿದ್ದೇನೆ. ಹತ್ತನೇ ತರಗತಿವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ ನನಗೆ ಕನ್ನಡ ಬಿಟ್ಟು ಬೇರಾವ ಭಾಷೆಯೂ ಅತ್ಯುತ್ತಮವಾಗಿ ಬರುತ್ತಿರಲಿಲ್ಲ. ಇವತ್ತಿಗೆ ಐದಾರು ಭಾಷೆಗಳ ಮೇಲೆ ಹಿಡಿತವಿದೆ. ಇವೆಲ್ಲದರ ಸಾರಾಂಶವಿಷ್ಟೆ - ಭಾಷೆ ಎಂದಿಗೂ ಹೇರಿಕೆಯಾಗಬಾರದು.

ಇದರರ್ಥ ಹಿಂದಿ ಕಲಿಯಬಾರದು ಎಂದು ಕೂಡ ಅಲ್ಲ, ಆದರೆ ಅದು ಆಯಾ ವ್ಯಕ್ತಿಗೆ ಬಿಟ್ಟದ್ದು. ‘ಏಕಭಾರತ ಶ್ರೇಷ್ಠ ಭಾರತ’ ಎನ್ನುವುದರ ಬಗ್ಗೆ ತಕರಾರಿಲ್ಲ. ಆದರೆ ಭಾರತ ಕ್ಕೊಂದು ಭಾಷೆಯ ಮುಖ ಕೊಡಬೇಕು, ಮತ್ತದು ಹಿಂದಿಯಾಗಿರಬೇಕು ಎಂದರೆ ಅದಕ್ಕೆ ವಿರೋಧವಿದೆ.

ನೀವು ಯುರೋಪಿಗೆ ಭೇಟಿಕೊಟ್ಟು ನೋಡಿ, ಅ ಭಾಷೆಯ ಬಗ್ಗೆ ಅದೆಷ್ಟು ಪ್ರೀತಿಯಿದೆ ಎನ್ನುವುದು ತಿಳಿದುಬರುತ್ತದೆ. ನಾನು 18 ವಸಂತಗಳನ್ನು ಕಳೆದ ರಾಜ್ಯದ ಹೆಸರು ಕತಾಲೋನ್ಯ, ಬಾರ್ಸಿಲೋನಾ ರಾಜಧಾನಿ. ಈ ರಾಜ್ಯದ ಜನಸಂಖ್ಯೆ 80 ಲಕ್ಷ ದಾಟುವು ದಿಲ್ಲ. ಆದರೆ ಇವರು ನಾವು ಪ್ರತ್ಯೇಕ ದೇಶ ಎಂದು ಕರೆದುಕೊಳ್ಳುತ್ತಾರೆ.

ದಶಕಗಳಿಂದ ಸ್ಪೇನಿನಿಂದ ಸ್ವಾತಂತ್ರ್ಯ ಪಡೆದುಕೊಳ್ಳಲು ಹೋರಾಡುತ್ತಿದ್ದಾರೆ. ಬಾಸ್ಕೊ ಎನ್ನುವ ಇನ್ನೊಂದು ರಾಜ್ಯದ ಕಥೆಯೂ ಸೇಮ್. ಅವರು ತಮ್ಮನ್ನು ತಾವು ‘ಪಾಯಿಸ್ ಬಾಸ್ಕೊ’ ಎಂದು ಕರೆದುಕೊಳ್ಳುತ್ತಾರೆ. ಅಂದರೆ ಬಾಸ್ಕೋ ದೇಶ ಎಂದರ್ಥ.

ಯುರೋಪಿನ ತುಂಬೆ ಇಂಥ ಹತ್ತಾರು ಸಂಘರ್ಷಗಳು ನಿಮಗೆ ಕಾಣ ಸಿಗುತ್ತವೆ. ಹತ್ತಿಪ್ಪತ್ತು ಲಕ್ಷ ಜನ ಮಾತಾಡುವ ಭಾಷೆಯ ಜನ ತಮ್ಮದೇ ಆದ ಅಸ್ಮಿತೆಯಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಾವು ಇದೇ ರೀತಿ ಹೊಡೆದಾಡಬೇಕು ಎನ್ನುವ ಕಾರಣಕ್ಕೆ ಈ ಸಾಲು‌ ಗಳನ್ನು ಬರೆದಿಲ್ಲ. ನಾವು ಹೀಗೆ ಮಾಡಬೇಕು ಎನ್ನುವುದು ಕೂಡ ನನ್ನ ಅಭಿಪ್ರಾಯವಲ್ಲ. ಆದರೆ ಏಳು ಕೋಟಿಗೂ ಮೀರಿದ ಜನರಿರುವ ಕನ್ನಡ ನಾಡಿನಲ್ಲಿ ‘ಕನ್ನಡವೇ ಸಾರ್ವಭೌಮ’ ಎನ್ನುವ ಮಾತನ್ನು ಹೇಳದೆ ಇರಲು ಮಾತ್ರ ಸಾಧ್ಯವಿಲ್ಲ.

ಈಗಾಗಲೇ ಡೆಮೊಗ್ರಾಫಿ ಬದಲಾಗುತ್ತಿದೆ. ಕನ್ನಡ ಜನತೆಯ ಫರ್ಟಿಲಿಟಿ ರೇಟ್ 1.5 ಎನ್ನುತ್ತದೆ ಅಂಕಿ-ಅಂಶ. ಅಂದರೆ ಪ್ರತಿ ಇಬ್ಬರು ಕನ್ನಡಿಗರ ಜಾಗದಲ್ಲಿ ಒಂದೂವರೆ ಕನ್ನಡಿಗ ಹುಟ್ಟುತ್ತಿದ್ದಾನೆ. ಇನ್ನಷ್ಟು ಸರಳವಾಗಿ ಹೇಳಬೇಕೆಂದರೆ ಕರ್ನಾಟಕದಲ್ಲಿ ಮಕ್ಕಳ ಜನನ ಪ್ರಮಾಣವು ಕುಸಿತವನ್ನು ಕಂಡಿದೆ.

ಕನ್ನಡ ನಾಡು ಕನ್ನಡ ನಾಡಾಗಿಯೇ ಉಳಿದುಕೊಳ್ಳಲು ಬೇಕಿರುವ ಫರ್ಟಿಲಿಟಿ ರೇಟ್ ಎರಡು! ಅದಕ್ಕಿಂತ ಕಡಿಮೆಯಾದರೆ ಅದನ್ನು ‘ಪಾಯಿಂಟ್ ಆಫ್ ನೋ ರಿಟರ್ನ್’ ಎನ್ನಬಹುದು. 2025ರ ಅಂಕಿ-ಅಂಶದ ಪ್ರಕಾರ ಕನ್ನಡಿಗರ ಫರ್ಟಿಲಿಟಿ ರೆಟ್ ಒಂದೂವರೆ. ಇದರರ್ಥ ಮುಂದಿನ ಮೂರು ದಶಕದಲ್ಲಿ ಕನ್ನಡ ನಾಡಿನಲ್ಲಿ ಕನ್ನಡ, ಕನ್ನಡಿಗ ಸಾರ್ವಭೌಮ ಎಂದು ಹೇಳಿಕೊಳ್ಳಲು ಸಾಧ್ಯವಿರುವುದಿಲ್ಲ.

ರೈಲ್ವೆ ನೇಮಕಾತಿ, ರೈಲ್ವೆ ಪರೀಕ್ಷೆ ಸಹಿತ ಹಲವಾರು ಪರೀಕ್ಷೆಗಳನ್ನು ನಾವು ನಮ್ಮ ಮಾತೃ ಭಾಷೆಯಲ್ಲಿ ತೆಗೆದುಕೊಳ್ಳಲು ಆಗುತ್ತಿಲ್ಲ. ಕರ್ನಾಟಕದ ಹಳ್ಳಿಗಳಲ್ಲಿ ಕೂಡ ನಾವು ಬ್ಯಾಂಕು ಗಳಲ್ಲಿ ಹಿಂದಿ ಭಾಷಿಕರನ್ನು ಕಾಣಬಹುದು. ಹೀಗೇಕಾಗುತ್ತದೆ? ಏಕೆಂದರೆ ಅವರು ತಮ್ಮ ಮಾತೃಭಾಷೆಯಲ್ಲಿ ಪರೀಕ್ಷೆಗಳನ್ನು ಬರೆಯುತ್ತಾರೆ. ಯಾರು ತಮ್ಮ ಮಾತೃಭಾಷೆಯಲ್ಲಿ ಅಧ್ಯಯನ ಮಾಡುತ್ತಾರೋ ಅವರಿಗೆ ವಿಷಯಜ್ಞಾನ ಹೆಚ್ಚಾಗಿರುತ್ತದೆ ಎನ್ನುವುದು ಇವತ್ತಿಗೆ ಸಾಬೀತಾಗಿರುವ ಅಂಶ.

ಚೀನಾ, ಜಪಾನ್ ಮತ್ತು ಯುರೋಪಿನ ದೇಶಗಳು ಇದಕ್ಕೆ ಉದಾಹರಣೆಯಾಗಿ, ಸಾಕ್ಷಿಯಾಗಿ ನಿಂತಿವೆ. ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರ ಹೋದ ನಂತರ ಯುರೋಪಿ ಯನ್ ಒಕ್ಕೂಟದಿಂದ ಇಂಗ್ಲಿಷ್ ಭಾಷೆಯನ್ನು ತೆಗೆದು ಹಾಕಲಾಗಿದೆ. ಗಮನಿಸಿ ಯುರೋಪಿ ಯನ್ ಒಕ್ಕೂಟದ ಪಾರ್ಲಿಮೆಂಟಿನಲ್ಲಿ ಎಲ್ಲಾ ಸದಸ್ಯ ದೇಶಗಳವರು ಆಯಾ ಭಾಷೆಯಲ್ಲಿ ಮಾತಾಡುತ್ತಾರೆ. ಇಂಗ್ಲಿಷ್ ಕೂಡ ಒಂದು ಭಾಷೆಯಾಗಿತ್ತು ಅಷ್ಟೇ, ಇವತ್ತಿಗೆ ಅದನ್ನೂ ತೆಗೆದುಹಾಕಿದ್ದಾರೆ. ಏಕೆಂದರೆ ಬ್ರಿಟನ್ ಇವತ್ತಿಗೆ ಸದಸ್ಯ ರಾಷ್ಟ್ರವಲ್ಲ!

ಕನ್ನಡಿಗ ಮಾತ್ರ ತನ್ನ ಮಾತೃಭಾಷೆಯ ಉಪಯೋಗ ಪಡೆದುಕೊಳ್ಳಲು ಆಗುತ್ತಿಲ್ಲ. ಇದಕ್ಕೆ ನಾವು ಕೇಂದ್ರ ಸರಕಾರವನ್ನೂ ಸಂಪೂರ್ಣ ದೂಷಿಸುವಂತಿಲ್ಲ. ಬಹಳಷ್ಟು ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ ಓದಲು, ಬರೆಯಲು ಬರುವುದಿಲ್ಲ ಎನ್ನುವುದನ್ನು ಹೆಮ್ಮೆ ಎನ್ನುವಂತೆ ಹೇಳಿಕೊಳ್ಳುತ್ತಾರೆ.

ನಮ್ಮನ್ನು ನಾವು ಗೌರವಿಸಿಕೊಳ್ಳದಿದ್ದರೆ ಬೇರೆಯವರು ಹೇಗೆ ಗೌರವಿಸಿಯಾರು? ಎನ್ನುವ ಸಾಮಾನ್ಯಜ್ಞಾನ ಕನ್ನಡಿಗನಲ್ಲಿ ಜಾಗೃತವಾಗಬೇಕಿದೆ. ಕನ್ನಡ ನಾಡಿಗೆ ಕೆಲಸಕ್ಕಾಗಿ ವಲಸೆ ಬಂದ ಅನ್ಯರಾಜ್ಯದ ಜನರು ಇಲ್ಲಿನ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು.

ಕನ್ನಡ ಕಲಿಯದೇ ಇಲ್ಲಿ ಬದುಕಬಹುದು ಎನ್ನುವ ದಾಷ್ಟಿಕತೆ ಅವರಲ್ಲಿ ಬಂದದ್ದು ಹೇಗೆ? ಅದಕ್ಕೆ ಕಾರಣರಾರು ಎನ್ನುವುದನ್ನು ಕೂಡ ನಾವು ವಿಮರ್ಶೆ ಮಾಡಿಕೊಳ್ಳಬೇಕು. ಸಂವಹನದ ಪ್ರಾರಂಭವನ್ನು ಕನ್ನಡದಲ್ಲಿ ನಾವು ಮಾಡಲು ಶುರುಮಾಡಿದರೆ ನಿಧಾನ ವಾಗಿ ಅವರು ಕನ್ನಡ ಕಲಿಯುತ್ತಾರೆ. ಆದರೆ ನಮ್ಮಲ್ಲಿ ಆ ಒಗ್ಗಟ್ಟು ಎಲ್ಲಿಂದ ತರುವುದು? ಹಿಂದಿಯ ಬಗೆಗಿನ ಕರ್ನಾಟಕ ಸರಕಾರದ ಧೋರಣೆ ಸರಿಯಿದೆ ಎಂದ ತಕ್ಷಣ, ತತ್ವ -ಸಿದ್ಧಾಂತದ ಅಡಿಯಲ್ಲಿ ವ್ಯಕ್ತಿಯನ್ನು ಅಳೆಯಲಾಗುತ್ತದೆ.

ಯಾವುದನ್ನು ನಾವು ಚರ್ಚಿಸಬೇಕು ಆ ವಿಷಯವನ್ನು ಬಿಟ್ಟು ವಿಷಯ ಎಲ್ಲಿಗೋ ಹೋಗುತ್ತದೆ. ಅದು ಧರ್ಮ, ರಾಷ್ಟ್ರೀಯತೆಯ ಕಡೆಗೆ ತಿರುಗುತ್ತದೆ. ಹಿಂದಿ ಬೇಡವೆನ್ನುವ ನೀವು ಉರ್ದು ಬಗ್ಗೆ ಚಕಾರವೆತ್ತುವುದಿಲ್ಲ ಎನ್ನಲಾಗುತ್ತದೆ. ಒಟ್ಟಾರೆ ಕನ್ನಡ, ಕನ್ನಡಿಗ, ನಮ್ಮ ಅಸ್ಮಿತೆ ಬಗ್ಗೆಯ ಚರ್ಚೆ ಬಿಟ್ಟು ವಿಷಯಾಂತರವಾಗುತ್ತದೆ.

ಹಿಂದಿ ಬೇಡ ಎನ್ನುವುದು ಬರಹದ ಉದ್ದೇಶವಲ್ಲ. ಹಿಂದಿ ಕಡ್ಡಾಯ, ಆ ವಿಷಯದಲ್ಲಿ ಪಾಸಾಗಬೇಕು ಎನ್ನುವುದು ತಪ್ಪು ಎನ್ನುವುದು ಮತ್ತು ಹಿಂದಿ ಭಾಷೆಯನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಗ್ರೇಡಿಂಗ್ ಸಿಸ್ಟಮಿಗೆ ತಂದಿರುವುದು ಸರಿ ಎನ್ನುವುದನ್ನು ಹೇಳುವು ದಷ್ಟೇ ಈ ಬರಹದ ಉದ್ದೇಶ.

ಎಲ್ಲರೂ ಅವರವರ ಅವಶ್ಯಕತೆಗೆ ತಕ್ಕಂತೆ ಭಾಷೆಯನ್ನು ಕಲಿಯುತ್ತಾರೆ. ನಮ್ಮ ಮಾತೃ ಭಾಷೆಯಲ್ಲದ ಬೇರೆ ಭಾಷೆಯಲ್ಲಿ ನಪಾಸಾದರೆ ಅದು ವಿದ್ಯಾರ್ಥಿಯ ಸಮಯವನ್ನು, ಆತನ ಆತ್ಮವಿಶ್ವಾಸವನ್ನು ಕಳೆಯುತ್ತದೆ. ಇಂಥ ವ್ಯವಸ್ಥೆಗೆ ಧಿಕ್ಕಾರ. ಇವತ್ತಿನ ಗ್ರೇಡಿಂಗ್ ವ್ಯವಸ್ಥೆಗೆ ನನ್ನ ಜೈಕಾರ.

ನೆನಪಿರಲಿ ಮೊದಲಿಗೆ ನಾವೊಬ್ಬ ಉತ್ತಮ ಕನ್ನಡಿಗನಾಗಬೇಕು. ಆಗ ಮಾತ್ರ ನಾವು ಉತ್ತಮ ಭಾರತೀಯರಾಗಬಹುದು. ಆದರೆ ಎಲ್ಲದರಲ್ಲೂ ಒಡಕು ಸೃಷ್ಟಿಸುವ ಇಂದಿನ ದಿನಗಳಲ್ಲಿ ನೈಜ ಉದ್ದೇಶಗಳು ಮಾತ್ರ ಸುದ್ದಿಯಾಗದೆ ಸಾಯುತ್ತವೆ.

ರಂಗಸ್ವಾಮಿ ಎಂ

View all posts by this author