ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Dayanand Lingegowda Column: ಕನ್ನಡಿಗರು ವೃತ್ತಿಪರತೆಯನ್ನು ಬೆಳೆಸಿಕೊಳ್ಳಬೇಕಿದೆ...

ಇನ್ನು ವ್ಯವಸಾಯದ ಕೆಲಸಕ್ಕೆ, ಮನೆ ಅಳಿಯನಿಗಿಂತಲೂ ಚೆನ್ನಾಗಿ ನೋಡಿಕೊಂಡರೂ ಜನರು ಸಿಕ್ಕುವುದಿಲ್ಲ. ಇಲೆಕ್ಟ್ರಿಕ್ ಮತ್ತು ಕೊಳಾಯಿ ಕೆಲಸದವರು ಅರ್ಧ ಕೆಲಸವನ್ನು ಮಾಡಿ ಬಿಟ್ಟು ಹೋಗು ವುದುಂಟು; ಅದನ್ನು ಪೂರ್ತಿ ಮಾಡಿಸುವುದಕ್ಕೆ ಬೇರೆಯವರನ್ನು ಹಿಡಿದುಕೊಂಡು ಬರಬೇಕು. ಹೀಗೆ ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ, ಸ್ಥಳೀಯ ಕನ್ನಡಿಗರ ವೃತ್ತಿಪರತೆಯು ಹೊರರಾಜ್ಯ ದವರಿಗಿಂತ ಕಡಿಮೆ ಎನಿಸುತ್ತದೆ.

ಸದಾಶಯ

ಡಾ.ದಯಾನಂದ ಲಿಂಗೇಗೌಡ

ವೃತ್ತಿಪರತೆಯ ಕೊರತೆಯ ಕಾರಣವೋ ಏನೋ, ನೀವು ಯಾವುದಾದರೂ ಒಳ್ಳೆಯ ಸ್ಟಾರ್ ಹೋಟೆಲ್ ಅಥವಾ ರೆಸಾರ್ಟ್‌ಗಳಿಗೆ ಹೋದರೆ ಅಲ್ಲಿ ಕನ್ನಡಿಗರು ಸಿಗುವುದೇ ಇಲ್ಲ. ಕನ್ನಡದ ಗಗನಸಖಿಯರು ಸಂಖ್ಯೆಯಲ್ಲಿ ವಿರಳ. ಸಾಮಾನ್ಯ ಜನಗಳಾದ ನಾವೇ, ಕನ್ನಡಿಗ ರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಹಿಂದು-ಮುಂದು ನೋಡುವಾಗ, ಇನ್ನು ದೊಡ್ಡ ದೊಡ್ಡ ಕಂಪನಿಗಳನ್ನು ನಡೆಸುವವರು ವೃತ್ತಿಪರತೆ ಇಲ್ಲದಿರುವ ಜನರನ್ನು ‘ಕನ್ನಡಿಗರು’ ಎಂಬ ಕಾರಣಕ್ಕೆ ಏಕೆ ತೆಗೆದುಕೊಳ್ಳುತ್ತಾರೆ?

ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದಾಗ ಬಹಳ ಖುಷಿಯಾಗಿತ್ತು. ಆ ಸಂತೋಷಕ್ಕೆ ಒಂದೆರಡು ಪ್ರಮುಖ ಕಾರಣಗಳಿದ್ದವು. ಒಂದು, ಮಕ್ಕಳಿಗೆ ಕನ್ನಡದ ವಾತಾವರಣ ಸಿಗುತ್ತದೆ ಎಂಬುದು, ಇನ್ನೊಂದು ಕರ್ನಾಟಕದ ಊಟವನ್ನು ಪ್ರತಿನಿತ್ಯ ಮಾಡಬಹುದು ಎಂಬುದು. ಬೆಂಗಳೂರಿಗೆ ಬಂದಾಗ, ಹೊಸದಾಗಿ ಬಾಡಿಗೆಗೆ ಪಡೆದ ಮನೆಯನ್ನು ಸಾದ್ಯಂತವಾಗಿ ಸ್ವಚ್ಛಗೊಳಿಸುವ ಅಗತ್ಯ ವಿತ್ತು.

ಹೆಂಡತಿಯು ‘ಮೊದಲು ಆನ್‌ಲೈನ್ ಆಪ್‌ನಲ್ಲಿ ಬುಕ್ ಮಾಡಿ’ ಎಂದರೂ, ಅದರಲ್ಲಿ ಬೇರೆ ಭಾಷೆ ಯವರೇ ಕೆಲಸಕ್ಕೆ ಬರಬಹುದು ಎಂದುಕೊಂಡು, ನಮ್ಮ ಕನ್ನಡಿಗರಿಗೇ ಕೆಲಸ ಕೊಡೋಣ ಎನಿಸಿತು. ಬಂದ ಹೊಸದರಲ್ಲಿ ಸ್ವಲ್ಪ ಕನ್ನಡ ಪ್ರೇಮ ಜಾಸ್ತಿ ನೋಡಿ? ಅದಕ್ಕೆ. ಮನೆಯನ್ನು ಸ್ವಚ್ಛಗೊಳಿಸಲು ಸುತ್ತಮುತ್ತ ಕರ್ನಾಟಕದವರು ಯಾರಾದರೂ ಇದ್ದಾರೆಯೇ ಎಂದು ವಿಚಾರಿಸಿದೆ.

ನಂತರ, ಸ್ವಚ್ಛ ಮಾಡಲು ಅವರಿಗೆ ಕೊಡಬೇಕಾಗುವ ಹಣದ ಕುರಿತು ಖಾತ್ರಿಪಡಿಸಿಕೊಂಡೆ. ನಂತರ, ಮನೆ ಸ್ವಚ್ಛಗೊಳಿಸಲು ಆನ್‌ಲೈನ್ ವೇದಿಕೆಯಲ್ಲಿ (ಆಪ್‌ನಲ್ಲಿ) ನಿಗದಿಯಾಗಿರುವ ಹಣವನ್ನು ಹೋಲಿಕೆ ಮಾಡಿ ನೋಡಿದಾಗ, ನಾನು ಮಾತನಾಡಿದ ಕೆಲಸದವರು ಹೇಳಿದ ಮೊತ್ತವು ದುಬಾರಿಯಾಗಿರುವುದು ಕಂಡು ಬಂತು.

ಇದನ್ನೂ ಓದಿ: Dr Dayanand Lingegowda Column: ತಟ್ಟೆಕಾಸು, ದೇವರ ಅಸ್ತಿತ್ವದ ಸುತ್ತಮುತ್ತ...

ಅದೂ ಅಲ್ಲದೆ, ಆಪ್‌ನವರು ಕೆಲವೊಂದು ಯಂತ್ರಗಳನ್ನು ಉಪಯೋಗಿಸಿ ಸ್ವಚ್ಛಗೊಳಿಸುವ ಭರವಸೆಯನ್ನೂ ನೀಡಿದ್ದರು. ಇಲ್ಲಿನವರದೋ ಕೈನಿಂದ ಸ್ವಚ್ಛ ಮಾಡುವ ಕೆಲಸ ಮಾತ್ರ. ಬುದ್ಧಿಯು ‘ಆನ್‌ಲೈನ್‌ನಲ್ಲಿ ಬುಕ್ ಮಾಡು’ ಎಂದರೂ, ಹೃದಯವು ‘ಕನ್ನಡಿಗರಿಗೆ ಕೆಲಸ ಕೊಡು’ ಎನ್ನುತ್ತಿತ್ತು.

ಸರಿ, ಸ್ವಲ್ಪ ಅಳೆದು ತೂಗಿ, ‘ಕನ್ನಡ ಪ್ರೇಮದ ಹುಚ್ಚಿನಲ್ಲಿ ಸ್ವಲ್ಪ ಹಣ ಹೋದರೂ ಪರವಾಗಿಲ್ಲ, ನಮ್ಮ ಕರ್ನಾಟಕದವರಿಗೇ ಕೆಲಸ ಕೊಡೋಣ’ ಎಂದುಕೊಂಡು ಬರಲು ಹೇಳಿದೆ. ಸ್ವಲ್ಪ ಚೌಕಾಸಿ ಮಾಡಲು ಯತ್ನಿಸಿದಾಗ ಅವರು, ‘ಮೊದಲು ನಮ್ಮ ಕೆಲಸ ನೋಡಿ, ಆಮೇಲೆ ನೀವೇ ನಿಗದಿ ಮಾಡಿದ್ದಕ್ಕಿಂತ ಹೆಚ್ಚಾಗಿ ಹಣ ಕೊಡುತ್ತೀರಿ’ ಎಂದಾಗ ಮರುಮಾತಿಲ್ಲದೆ ಒಪ್ಪಿಕೊಂಡೆ. ಆದರೆ, ಮನೆಯನ್ನು ಸ್ವಚ್ಛ ಮಾಡಲು ಬಂದವರು ರಸ್ತೆಯನ್ನು ಗುಡಿಸುವವರಂತೆ ಮನೆಯನ್ನು ಗುಡಿಸು ತ್ತಿರುವುದನ್ನು ನೋಡಿ ನನಗೆ ‘ಯಾಕೋ ಮಿಸ್ ಹೊಡಿತಾ ಇದೆಯಲ್ಲಾ?’ ಎನಿಸಿತು. ಕೇಳಿದ್ದಕ್ಕೆ, “ಸರ್, ನಮ್ಮ ಕೆಲಸ ಮುಗಿದ ಮೇಲೆ ನೀವೇ ನೋಡಿ, ಆಮೇಲೆ ಮಾತನಾಡಿ" ಎಂದು ಸಮಜಾಯಿಷಿ ಕೊಟ್ಟು ಕೆಲಸ ಮುಂದುವರಿಸಿದರು.

ಅದಕ್ಕೆ ನಾನು, “ಸ್ವಲ್ಪ ಹೊರಗೆ ಹೋಗಿ ಬರುತ್ತೇನೆ, ಅಷ್ಟರಲ್ಲಿ ಕೆಲಸ ಮುಗಿಸಿರಿ" ಎಂದು ಹೇಳಿ ಹೋದೆ. ಹಿಂದಿರುಗಿದಾಗ ಮನೆಯ ನೆಲವನ್ನು ನೀರಿನಿಂದ ತೊಳೆದು ಒರೆಸುತ್ತಿದ್ದರು. ಹೇಗೆ ಸ್ವಚ್ಛಗೊಳಿಸಿದ್ದಾರೆ ಎಂದು ಪರೀಕ್ಷಿಸಲು ನಾನು ಮುಂದಾಗುತ್ತಿದ್ದಂತೆ, “ಸರ್, ನೆಲ ತೇವವಾಗಿದೆ, ಗಲೀಜು ಮಾಡಬೇಡಿ. ಅಲ್ಲದೆ ಈಗ ಕತ್ತಲೆಯಾಗಿದೆ. ನೀವು ನಾಳೆ ನೋಡಿದರೆ ಒಳ್ಳೆಯದು, ನಾವು ಇಲ್ಲೇ ಇರುತ್ತೇವೆ" ಎಂದು ಹೇಳಿ ಹಣವನ್ನು ಪಡೆದುಕೊಂಡು ಹೋದರು. ‘ಸರಿ’ ಎಂದುಕೊಂಡು ನಾನು ಮಾರನೆಯ ದಿನ ಬಂದು ನೋಡಿದರೆ, ಕಪಾಟುಗಳನ್ನು ಸ್ವಚ್ಛ ಮಾಡಿರಲಿಲ್ಲ, ಫ್ಯಾನ್ ಮೇಲಿನ ಗಲೀಜು ಹಾಗೇ ಇತ್ತು, ಬಾತ್‌ರೂಮ್ ಸ್ಥಿತಿ ನೋಡುವಂತಿರಲಿಲ್ಲ. ಹೀಗಾಗಿ ಫೋನ್ ಮಾಡಿ ಕೇಳಿದರೆ, “ಸರ್, ಈಗ ಬರುತ್ತೇವೆ, ಎಲ್ಲವನ್ನೂ ಸರಿ ಮಾಡಿಕೊಡುತ್ತೇವೆ" ಎಂದು ಹೇಳಿದ ಆಸಾಮಿ ಮತ್ತೆ ನನ್ನ ಕರೆಗಳನ್ನು ಸ್ವೀಕರಿಸಲೂ ಇಲ್ಲ!

Screenshot_4 R

ಈ ವಿಷಯವು ಹೆಂಡತಿಯ ಗಮನಕ್ಕೆ ಬರುವ ಮುಂಚೆಯೇ ಸರಿಪಡಿಸಿಬಿಡೋಣ ಅಂದುಕೊಂಡು, ಮತ್ತೆ ಆನ್‌ಲೈನ್ ಆಪ್‌ನಲ್ಲಿ ಬುಕ್ ಮಾಡಿ ಕೆಲಸ ಮಾಡಿಸಿಕೊಂಡೆ! ಇನ್ನು, ಅಡುಗೆಯವರ ಕಥೆ. ಕರ್ನಾಟಕದ ಊಟವೇ ಬೇಕೆಂದು ಕನ್ನಡಿಗ ಅಡುಗೆಯವರಿಗೆ ಬಹಳಷ್ಟು ಹುಡುಕಾಡಿದೆವು.

ಬಂದವರದು ಹಲವಾರು ಪ್ರಶ್ನೆಗಳು- “ಮನೆಯಲ್ಲಿ ಎಷ್ಟು ಜನ? ಎಷ್ಟು ಬಾರಿ ಅಡುಗೆ ಮಾಡಬೇಕು? ಊಟಕ್ಕೆ ಎಷ್ಟು ತರಹದ ಪಲ್ಯ ಮಾಡಬೇಕು? ಚಪಾತಿ ಮಾಡಬೇಕೋ ಇಲ್ಲವೋ? ಎಲ್ಲಾ ದಿನವೂ ಮುದ್ದೆ ಮಾಡಲು ಸಾಧ್ಯವಿಲ್ಲ. ಪಾತ್ರೆ ಕಡಿಮೆ ಬಿದ್ದರೆ ನಾವು ಅಡುಗೆಯನ್ನೇ ನಿಲ್ಲಿಸುತ್ತೇವೆಯೇ ಹೊರತು, ಪಾತ್ರೆ ತೊಳೆದುಕೊಂಡು ಬಳಸುವುದಿಲ್ಲ. ಭಾನುವಾರ ಬರುವುದಿಲ್ಲ. ತಿಂಗಳಿಗೆ ೩ ದಿನ ಹೆಚ್ಚುವರಿ ರಜೆ ಬೇಕಾಗುತ್ತೆ...." ಹೀಗೆ ಹಲವಾರು ಪ್ರಶ್ನೆಗಳು ಮತ್ತು ಷರತ್ತುಗಳ ನಡುವೆಯೇ ಹೇಗೋ ಓರ್ವ ಕೆಲಸದವಳನ್ನು ಹೊಂದಿಸಿಕೊಂಡೆವು. ಮೊದಲು ಆಕೆ ಚೆನ್ನಾಗಿಯೇ ಕೆಲಸ ಮಾಡಿದಳು, ನಂತರ ಶುರುವಾಯಿತು ನೋಡಿ- “ನಮ್ಮ ಗಂಡನಿಗೆ/ಮಕ್ಕಳಿಗೆ/ಅತ್ತೆಗೆ/ಮಾವ ನಿಗೆ ಹುಷಾರಿಲ್ಲ. ನಮ್ಮ ಸ್ನೇಹಿತನ ಮದುವೆ, ಬಂಧುಗಳ ಮಗನ ಮುಂಜಿ, ಹಾಗೆ-ಹೀಗೆ ಎನ್ನುತ್ತಾ ತಿಂಗಳಿಗೆ ಒಂದಷ್ಟು ರಜೆಗಳು.

ಬಂಧು-ಬಳಗ ಅಂತ ಇರೋವಾಗ ಏನೋ ಒಂದಿಷ್ಟು ಕಷ್ಟಗಳು-ಕಮಿಟ್‌ಮೆಂಟುಗಳು ಇರುತ್ತವೆ ಅಂತ ಅವನ್ನೂ ಸಹಿಸಿದ್ದಾಯಿತು. ಸ್ವಲ್ಪ ದಿನಗಳ ನಂತರ ಸಾಲ ಕೇಳಲು ಶುರುಮಾಡಿಕೊಂಡಳು. ಮಗನಿಗೆ ಹುಷಾರಿಲ್ಲ ಅಂತ ಅಥವಾ ಮಗನಿಗೆ ಶಾಲೆಗೆ ಸೇರಿಸಲು ಹಣ ಬೇಕು ಅಂತ ಹೀಗೆ ಸಾಲಕ್ಕೆ ನೆಪಗಳು.

“ಹುಷಾರಿಲ್ಲದಿದ್ದರೆ ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬಾ, ಉಚಿತವಾಗಿ ಚಿಕಿತ್ಸೆ ಕೊಡಿಸುತ್ತೇನೆ" ಎಂದು ಹೇಳಿದರೆ, ಹೋದವಳು ಸುದ್ದಿಯೇ ಇಲ್ಲ. ಇದು ಒಬ್ಬರು-ಇಬ್ಬರ ಕಥೆಯಲ್ಲ, ಎಷ್ಟೇ ಅಡುಗೆಯವರನ್ನು ಬದಲಾಯಿಸಿದರೂ ಅವರದ್ದೇ ಆದ ಕಿರಿಕ್ಕುಗಳು. ಅವನ್ನೆಲ್ಲಾ ಅನುಭವಿಸಿದ ನಂತರ ಓರ್ವ ಬಂಗಾಳಿಯನ್ನು ಅಡುಗೆಗೆ ಇಟ್ಟುಕೊಂಡೆವು, ಶೇ.99ರಷ್ಟು ಸಮಸ್ಯೆಗಳು ಪರಿಹಾರ ವಾದವು.

ಆದರೆ ಪಶ್ಚಿಮ ಬಂಗಾಳದಿಂದ ಕರ್ನಾಟಕಕ್ಕೆ ಬಂದರೂ, ಮತ್ತೆ ಬಂಗಾಳಿ ಊಟವನ್ನೇ ಮಾಡುವ ಪರಿಸ್ಥಿತಿ ಮಾತ್ರ ತಪ್ಪಲಿಲ್ಲ! ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಸ್ಥಳೀಯ ಗಾರೆ ಕೆಲಸದವರದ್ದೂ ಇದೇ ಹಣೆಬರಹ; ಸಣ್ಣ ಪುಟ್ಟ ಕೆಲಸಕ್ಕೆ ಊಟ-ತಿಂಡಿ, ಗುಂಡು-ತುಂಡು, ತೀರ್ಥ-ಪ್ರಸಾದ ಎಲ್ಲವನ್ನು ಕೊಟ್ಟರೂ, ಎರಡನೇ ದಿನವೂ ಬರುತ್ತಾರೆ ಎಂಬುದಕ್ಕೆ ಖಾತ್ರಿಯಿಲ್ಲ.

ಇನ್ನು ವ್ಯವಸಾಯದ ಕೆಲಸಕ್ಕೆ, ಮನೆ ಅಳಿಯನಿಗಿಂತಲೂ ಚೆನ್ನಾಗಿ ನೋಡಿಕೊಂಡರೂ ಜನರು ಸಿಕ್ಕುವುದಿಲ್ಲ. ಇಲೆಕ್ಟ್ರಿಕ್ ಮತ್ತು ಕೊಳಾಯಿ ಕೆಲಸದವರು ಅರ್ಧ ಕೆಲಸವನ್ನು ಮಾಡಿ ಬಿಟ್ಟು ಹೋಗುವುದುಂಟು; ಅದನ್ನು ಪೂರ್ತಿ ಮಾಡಿಸುವುದಕ್ಕೆ ಬೇರೆಯವರನ್ನು ಹಿಡಿದುಕೊಂಡು ಬರಬೇಕು. ಹೀಗೆ ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ, ಸ್ಥಳೀಯ ಕನ್ನಡಿಗರ ವೃತ್ತಿಪರತೆಯು ಹೊರರಾಜ್ಯದವರಿಗಿಂತ ಕಡಿಮೆ ಎನಿಸುತ್ತದೆ.

ನಮ್ಮ ಆಸ್ಪತ್ರೆಯಲ್ಲೂ ಅಷ್ಟೇ, ಕೇರಳದ ದಾದಿಯರ ವೃತ್ತಿಪರತೆಯನ್ನು ಕನ್ನಡಿಗ ದಾದಿಯರಿಂದ ನಿರೀಕ್ಷಿಸುವುದು ಕಷ್ಟ. ತಮಿಳುನಾಡಿನ ತಂತ್ರಜ್ಞರು, ಕೆಲವು ಕೆಲಸ ಗೊತ್ತಿಲ್ಲದಿದ್ದರೂ ಹೇಗಾದರೂ ತಿಳಿದುಕೊಂಡು ಅವನ್ನು ಮಾಡಿಕೊಡುತ್ತಾರೆ. ಆದರೆ ನಮ್ಮ ಕರ್ನಾಟಕದವರು ಕೆಲಸ ಗೊತ್ತಿಲ್ಲ ದಿದ್ದರೆ ‘ಹೊಸದಾಗಿ ಕಲಿತು ಕೆಲಸ ಮಾಡೋಣ’ ಎಂಬ ಹುಮ್ಮಸ್ಸು ತೋರುವುದು ಕಡಿಮೆ.

ಮಾರವಾಡಿಗಳು ನಡೆಸುವ ಯಾವುದಾದರೂ ಬಟ್ಟೆ ಅಂಗಡಿಗೆ ಒಮ್ಮೆ ಹೋಗಿ ನೋಡಿ, ಅವರು ಹೇಗಾದರೂ ಮಾಡಿ (ತಮಗೆ ಬರೋ ಲಾಭಾಂಶದಲ್ಲಿ ಸ್ವಲ್ಪ ಕಡಿಮೆಯಾದರೂ ಪರವಾಗಿಲ್ಲ), ನಿಮಗೆ ಮನವರಿಕೆ ಮಾಡಿಕೊಟ್ಟು, ಸಾಮಾನು ತೆಗೆದುಕೊಳ್ಳುವಂತೆ ಪ್ರೇರೇಪಿಸುತ್ತಾರೆ; ಅದೇ ಕನ್ನಡಿಗರು ನಡೆಸುವ ಅಂಗಡಿಗಳಿಗೆ ಹೋಗಿನೋಡಿ, ಅವರು ಹೆಚ್ಚು ಒತ್ತಾಯ ಮಾಡುವುದಿಲ್ಲ.

‘ಬೇಕಾದರೆ ತೆಗೆದುಕೊಳ್ಳಿ, ಇಲ್ಲವಾದರೆ ಬಿಟ್ಟುಬಿಡಿ’ ಎನ್ನುವಂತಿರುತ್ತದೆ ಅವರ ಮುಖದ ಛಾಯೆ, ಮನಸ್ಥಿತಿ. ಇನ್ನು, ಕನ್ನಡದ ಪ್ರಕಾಶಕರ ವೃತ್ತಿಪರತೆಯನ್ನು ವರ್ಣಿಸಲು ಕನ್ನಡ ಪದಗಳು ಸಾಕಾ ಗುವುದಿಲ್ಲ!

ಈ ರೀತಿಯ ವರ್ತನೆ ಬಹುಶಃ ಎಲ್ಲಾ ರಾಜ್ಯಗಳ ಸ್ಥಳೀಯರಲ್ಲೂ ಇರಬಹುದು. ಮುಂದುವರಿದ ರಾಷ್ಟ್ರಗಳಲ್ಲಿಯೂ ‘ಸ್ಥಳೀಯ-ವಿದೇಶಿ ತಿಕ್ಕಾಟ’ ಇದ್ದದ್ದೇ. ಬಂಗಾಳಿಗಳು ಪಶ್ಚಿಮ ಬಂಗಾಳದಲ್ಲಿ ಕೆಲಸ ಮಾಡದೆ ಸೋಮಾರಿತನ ತೋರಬಹುದು; ಆದರೆ ಹೊರರಾಜ್ಯಕ್ಕೆ ಬಂದರೆ ಅವರಿಗೆ ಕಡಿಮೆ ಸಮಯದಲ್ಲಿ ಹೆಚ್ಚು ಸಂಪಾದನೆ ಮಾಡುವುದು ಬಿಟ್ಟು ಬೇರಾವುದೇ ಗುರಿ ಇರುವುದಿಲ್ಲ.

ಅವರ ಸಂಬಂಧಿಕರು ಬೇರೆ ರಾಜ್ಯಗಳಲ್ಲಿ ಇರುತ್ತಾರಾದ್ದರಿಂದ, ಅವರ ಮನೆಯ ಕಾರ್ಯಕ್ರಮಗಳಿಗೆ ಹೋಗುವ ಅಗತ್ಯವೂ ಇರುವುದಿಲ್ಲ. ಹಾಗಾಗಿ ಇಂಥ ಕೆಲಸಗಾರರು ವರ್ಷಕ್ಕೊಮ್ಮೆ ದೀರ್ಘರಜೆ ತೆಗೆದುಕೊಳ್ಳುತ್ತಾರೆ. ಮಿಕ್ಕ ಸಮಯದಲ್ಲಿ, ‘ಹಗಲು-ರಾತ್ರಿ ದುಡಿದು ಸಾಧ್ಯವಾದಷ್ಟು ದುಡ್ಡು ಸಂಪಾದನೆ ಮಾಡಬೇಕು’ ಎಂಬ ಆಲೋಚನೆ ಅವರ ತಲೆಯಲ್ಲಿರುತ್ತದೆ.

ಆದ್ದರಿಂದ ನಾಳೆ ಮಾಡುವ ಕೆಲಸವನ್ನು ಇಂದೇ ಮಾಡಲು ಪ್ರಯತ್ನಿಸುತ್ತಾರೆ, ಗಡಿಯಾರ ನೋಡದೆ ದುಡಿಯುತ್ತಾರೆ. ಆದರೆ ನಮ್ಮ ಸ್ಥಳೀಯ ಕನ್ನಡಿಗರಿಗೆ, ‘ನಾವು ಶಾಶ್ವತವಾಗಿ ಇಲ್ಲೇ ಇರುವುದರಿಂದ, ಇಂದು ಮಾಡುವ ಕೆಲಸವನ್ನು ನಾಳೆ ಮಾಡಿದರೂ ನಡೆಯುತ್ತದೆ’ ಎಂಬ ಮನೋಭಾವ. ವೃತ್ತಿಪರತೆಯ ಕೊರತೆಯ ಕಾರಣವೋ ಏನೋ, ನೀವು ಯಾವುದಾದರೂ ಒಳ್ಳೆಯ ಸ್ಟಾರ್ ಹೋಟೆಲ್ ಅಥವಾ ರೆಸಾರ್ಟ್‌ಗಳಿಗೆ ಹೋದರೆ ಅಲ್ಲಿ ಕನ್ನಡಿಗರು ಸಿಗುವುದೇ ಇಲ್ಲ.

ಕನ್ನಡದ ಗಗಮನಸಖಿಯರು ಸಂಖ್ಯೆಯಲ್ಲಿ ವಿರಳ. ಸಾಮಾನ್ಯ ಜನಗಳಾದ ನಾವೇ, ಕನ್ನಡಿಗರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಹಿಂದು-ಮುಂದು ನೋಡುವಾಗ, ಇನ್ನು ದೊಡ್ಡ ದೊಡ್ಡ ಕಂಪನಿ ಗಳನ್ನು ನಡೆಸುವವರು ವೃತ್ತಿಪರತೆ ಇಲ್ಲದಿರುವ ಜನರನ್ನು ‘ಕನ್ನಡಿಗರು’ ಎಂಬ ಕಾರಣಕ್ಕೆ ಏಕೆ ತೆಗೆದುಕೊಳ್ಳುತ್ತಾರೆ? ಆದ್ದರಿಂದ, ಕನ್ನಡಿಗರಿಗೆ ಕರ್ನಾಟಕದಲ್ಲಿ ಕೆಲಸವು ಸಿಗದಿರುವುದಕ್ಕೆ ವೃತ್ತಿ ಪರತೆಯ ಕೊರತೆ ಬಹುಮುಖ್ಯ ಕಾರಣ, ಅದಕ್ಕೆ ಬೇರೆಯವರನ್ನು ದೂಷಿಸಿ ಪ್ರಯೋಜನವಿಲ್ಲ.

ಕನ್ನಡಾಂಬೆ ನಮ್ಮ ತಾಯಿ, ಸರಿ. ಆದರೆ, ಆಕೆ ಕೆಲವರಿಗೆ ಮಾತ್ರ ನೇರವಾಗಿ ಅನ್ನ ಕೊಡಲು ಸಾಧ್ಯ. ಕನ್ನಡ ಪ್ರಾಧ್ಯಾಪಕರು, ಕರ್ನಾಟಕ ಸರಕಾರದಲ್ಲಿ ಕೆಲಸ ಮಾಡುವರು ಇಂಥವರಿಗೆ ‘ಕನ್ನಡ’ ಎಂಬುದು ಬಹುಶಃ ಅನ್ನ ಕೊಡುವ ಭಾಷೆ. ಇತರರು ತಮ್ಮ ಅನ್ನವನ್ನು ತಾವೇ ದುಡಿದು ಕೊಳ್ಳ ಬೇಕು. ಅನ್ನವನ್ನು ದುಡಿದುಕೊಳ್ಳಲು ವೃತ್ತಿಪರತೆ, ಕೌಶಲ, ಬದ್ಧತೆ ಎಲ್ಲಾ ಬೇಕು; ಇಲ್ಲವಾದರೆ ಯಾರು ಕೂಡ ‘ಕನ್ನಡಿಗರು’ ಎಂಬ ಕಾರಣದಿಂದ ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ. ಕೆಳಗಿನಿಂದ ಹಿಡಿದು ಮೇಲಿನ ಹಂತದವರೆಗೆ ಕನ್ನಡಿಗರು ವೃತ್ತಿಪರತೆಯನ್ನು ಮೆರೆದಾಗ ಮಾತ್ರವೇ ಅವರು ಅನ್ಯರಾಜ್ಯದವರ ಜತೆ ಸ್ಪರ್ಧಿಸಿ ಕೆಲಸವನ್ನು ದಕ್ಕಿಸಿಕೊಳ್ಳಲು ಸಾಧ್ಯ.

ಅದನ್ನು ಮಾಡದೆಯೇ ಬರೀ ಇತರ ರಾಜ್ಯದವರನ್ನು ದೂಷಿಸಿಕೊಂಡು, ‘ಅವರು ನಮ್ಮ ಕೆಲಸ ವನ್ನು ಕಸಿಯುತ್ತಿದ್ದಾರೆ’ ಎಂದು ಬೈದುಕೊಂಡು ದಿನದೂಡುತ್ತಿದ್ದರೆ ಅದರಿಂದ ನಮ್ಮ ಏಳಿಗೆ ಯಾಗುವುದಿಲ್ಲ. ಸರಕಾರದಿಂದ ದೊರಕುವ ಉಚಿತ ಅಕ್ಕಿ, ಅಕೌಂಟಿಗೆ ಬಂದು ಬೀಳುವ ಸಣ್ಣ ಮೊತ್ತದ ಹಣ ಇವುಗಳು ಶಾಶ್ವತವಲ್ಲ ಎಂಬುದನ್ನು ಕನ್ನಡಿಗರು ಮನಗಾಣಬೇಕು.

ಕೊನೇಮಾತು: ದೇಶದ ಮೂಲೆಮೂಲೆಗಳಿಂದ ಬಂದ ಜನರು ನಮ್ಮ ರಾಜ್ಯದಲ್ಲಿದ್ದಾರೆ. ಇದರ ಬಗ್ಗೆ ಸ್ಥಳೀಯರು ಆಕ್ಷೇಪಿಸುವುದುಂಟು. ಆದರೆ ಅದನ್ನು ನಕಾರಾತ್ಮಕವಾಗಿ ತೆಗೆದುಕೊಳ್ಳುವ ಬದಲು, ‘ಇದು ರಾಷ್ಟ್ರದ ಎಲ್ಲಾ ಜನರಿಗೂ ಕನ್ನಡವನ್ನು ಕಲಿಸುವ ಅವಕಾಶ’ ಎಂದು ಭಾವಿಸಿ, ಈ ಬೆಳವಣಿಗೆಯ ಉಪಯೋಗವನ್ನು ಪಡೆದುಕೊಳ್ಳುವುದು ಒಳ್ಳೆಯದು. ಅವರಿಗೆ ಕನ್ನಡವನ್ನು ಹೇಗೆ ಕಲಿಸಬಹುದು ಎಂಬುದರ ಬಗ್ಗೆ ಹೆಚ್ಚಿನ ಕೆಲಸ ಆಗಬೇಕಿದೆ.

ಹೀಗೆ ಇತರರಿಗೆ ಕನ್ನಡವನ್ನು ಕಲಿಸುವುದರಿಂದ, ಅವರೊಂದಿಗೂ ಕನ್ನಡದಲ್ಲಿ ವ್ಯವಹರಿಸುವು ದರಿಂದ, ಕನ್ನಡದ ವಿಸ್ತರಣೆಗೆ/ವ್ಯಾಪಕತೆಗೆ ಒಳ್ಳೆಯ ಅವಕಾಶ ಸಿಕ್ಕಂತಾಗುತ್ತದೆ.

(ಲೇಖಕರು ಇಂಟರ್‌ವೆನ್ಷನಲ್ ರೇಡಿಯೊಲೊಜಿ)