ಒಂದೊಳ್ಳೆ ಮಾತು
ಕುರುಕ್ಷೇತ್ರದ ಧರ್ಮಸಂಗ್ರಾಮವು ಭೀಕರತೆಯ ಪರಮಕಾಷ್ಠೆಯನ್ನು ತಲುಪಿತ್ತು. ಅಧರ್ಮದ ಸಂಹಾರಕ್ಕಾಗಿ ಪಾರ್ಥನು ಗಾಂಡೀವವನ್ನು ಝಳಪಿಸುತ್ತಿದ್ದರೆ, ಅತ್ತ ಕರ್ಣನು ತನ್ನ ವಿಜಯ ಧನುಸ್ಸಿನಿಂದ ಶರ ವರ್ಷವನ್ನೇ ಸುರಿಸುತ್ತಿದ್ದನು. ಆ ಇಬ್ಬರು ಮಹಾ ರಥಿಕರ ದ್ವಂದ್ವಯುದ್ಧವನ್ನು ಕಂಡು ಸ್ವರ್ಗದಲ್ಲಿ ದೇವತೆಗಳೂ ವಿಸ್ಮಯದಿಂದ ನಿಶ್ಚಲರಾಗಿ ನಿಂತಿದ್ದರು. ಅರ್ಜುನನು ಸಂಧಿಸಿದ ಪ್ರಚಂಡ ಬಾಣಗಳ ರಭಸಕ್ಕೆ ಕರ್ಣನ ರಥವು ಧೂಳೆಬ್ಬಿಸುತ್ತಾ ಹತ್ತಾರು ಧನುಸ್ಸುಗಳಷ್ಟು ದೂರ ಹಿಂದಕ್ಕೆ ಸರಿಯುತ್ತಿತ್ತು. ಆದರೆ ಕರ್ಣನು ಎದೆಯುಬ್ಬಿಸಿ, ಮಂತ್ರಪೂರ್ವಕವಾಗಿ ಬಿಡುತ್ತಿದ್ದ ತೀಕ್ಷ್ಣ ಶರಗಳು ಬಂದು ತಾಗಿದಾಗ, ಅರ್ಜುನನ ನಂದಿಘೋಷ ರಥವು ಕೇವಲ ಎರಡು ಬೆರಳಿನಷ್ಟು ಮಾತ್ರ ಹಿಂದಕ್ಕೆ ಚಲಿಸುತ್ತಿತ್ತು.
ಆದರೆ ಈ ದೃಶ್ಯವನ್ನು ಕಂಡ ರಥದ ಸೂತ, ಸಾಕ್ಷಾತ್ ಜಗನ್ನಾಥನಾದ ಶ್ರೀಕೃಷ್ಣನು ಪ್ರತಿ ಬಾರಿಯೂ ಕರ್ಣನ ಅಸ್ತ್ರಪ್ರಯೋಗವನ್ನು ನೋಡಿ, ಸಾಧು! ಕರ್ಣಾ ಸಾಧು! ಎಂತಹ ಅದ್ಭುತ ಶೌರ್ಯ ನಿನ್ನದು! ಎಂದು ಮುಕ್ತಕಂಠದಿಂದ ಶ್ಲಾಘಿಸತೊಡಗಿದನು. ತನ್ನ ಪರಾಕ್ರಮಕ್ಕೆ ಜಗದೊಡೆಯನಿಂದ ಒಂದೂ ಮೆಚ್ಚುಗೆಯ ಮಾತು ಸಿಗದೆ, ಎದುರಾಳಿಯ ಅಲ್ಪ ಚಲನೆಗೇ ಶ್ಲಾಘನೆ ವ್ಯಕ್ತವಾಗುತ್ತಿರುವುದನ್ನು ಕಂಡು ಅರ್ಜುನನ ಅಂತರಂಗದಲ್ಲಿ ಸೂಕ್ಷ್ಮವಾದ ಅಹಂಕಾರ ಮತ್ತು ಮತ್ಸರಗಳು ತಲೆಯೆತ್ತಿದವು.
ಇದನ್ನೂ ಓದಿ: Roopa Gururaj Column: ನಾಮದ ಬಲವೊಂದಿದ್ದರೇ ಸಾಕೋ ! ಭಗವಂತನ ನಾಮಸ್ಮರಣೆಯ ಮಹತ್ವ
ಸಹನೆಯಿಳಿದ ಪಾರ್ಥನು, ಹೇ ಮಧುಸೂದನಾ! ನನ್ನ ಬಾಣದ ಪ್ರಹಾರಕ್ಕೆ ಆ ರಾಧೇಯನ ರಥವು ಧೂಳೀಪಟವಾಗುವಂತೆ ಹತ್ತಾರು ಗಜಗಳಷ್ಟು ದೂರ ತಳ್ಳಲ್ಪಡುತ್ತಿದೆ. ಆದರೆ ಆತ ಬಿಟ್ಟ ಬಾಣಕ್ಕೆ ನಮ್ಮ ರಥವು ಕಿಂಚಿತ್ತೂ ಅಲುಗಾಡದೆ ಕೇವಲ ಎರಡು ಇಂಚು ಸರಿದಿದೆ. ಹೀಗಿರುವಾಗ ನನ್ನ ಭುಜಬಲವನ್ನು ಕಡೆಗಣಿಸಿ, ಶತ್ರುವಿನ ಅಲ್ಪ ಶೌರ್ಯವನ್ನು ಹೊಗಳುವುದರ ಔಚಿತ್ಯವೇನು ಕೃಷ್ಣಾ? ಎಂದು ರೋಷದಿಂದ ನುಡಿದನು.
ಅರ್ಜುನನ ಈ ಗರ್ವದ ಮಾತುಗಳನ್ನು ಕೇಳಿ ಜಗದೋದ್ಧಾರಕನಾದ ಕೃಷ್ಣನು ಮಂದಸ್ಮಿತನಾಗಿ ಇಂತೆಂದನು: ಎಲೈ ಪಾರ್ಥಾ, ಮತ್ಸರದಿಂದ ಕಣ್ಣು ಮಂಜಾಗಿರುವ ನಿನಗೆ ಸತ್ಯದ ದರ್ಶನ ವಾಗುತ್ತಿಲ್ಲ. ಒಮ್ಮೆ ಕಣ್ಣು ತೆರೆದು ನಿನ್ನ ರಥದ ಮಹಿಮೆಯನ್ನು ನೋಡು. ನಿನ್ನ ರಥದ ಧ್ವಜಾಗ್ರ ದಲ್ಲಿ ಸಾಕ್ಷಾತ್ ರುದ್ರಾವತಾರಿಯಾದ, ಅತುಲಿತ ಬಲಧಾಮ ಪವನಪುತ್ರ ಹನುಮಂತನು ನೆಲೆಸಿದ್ದಾನೆ.
ರಥದ ಚಕ್ರಗಳ ಕೆಳಗೆ ಭೂಭಾರವನ್ನು ಧರಿಸಿರುವ ಆದಿಶೇಷನ ಅದೃಶ್ಯ ಶಕ್ತಿಯಿದೆ. ಇನ್ನು ರಥದ ಮಧ್ಯದಲ್ಲಿ ಇಡೀ ಬ್ರಹ್ಮಾಂಡವನ್ನೇ ತನ್ನ ಉದರದಲ್ಲಿ ಧರಿಸಿರುವ, ಚರಾಚರ ಸೃಷ್ಟಿಯ ನಿಯಾಮಕನಾದ ನಾನು ಸಾರಥಿಯಾಗಿ ಕುಳಿತಿದ್ದೇನೆ. ಮಹಾರಥಿಗಳ ಮಹಾಭಾರವನ್ನೇ ಒಡಲಲ್ಲಿ ಹೊತ್ತು ನಿಂತಿರುವ ಈ ದಿವ್ಯ ರಥವನ್ನು ಬ್ರಹ್ಮಾಸ್ತ್ರದಿಂದಲೂ ಅಲುಗಾಡಿಸಲು ಅಸಾಧ್ಯ. ಅಂತಹ ತ್ರಿಲೋಕ ಭಾರವನ್ನು ಹೊತ್ತ ರಥವನ್ನು ಕರ್ಣನ ಬಾಣವು ಕೇವಲ ಎರಡು ಇಂಚುಗಳಷ್ಟಾದರೂ ಹಿಂದಕ್ಕೆ ತಳ್ಳಿತೆಂದರೆ, ಆತನ ತಪಶ್ಯಕ್ತಿ ಮತ್ತು ಬಿಲ್ಲುಗಾರಿಕೆಯ ಪರಾಕ್ರಮವು ಎಂತಹ ಅಸಾಧಾರ ಣವಾದುದು ಎಂಬುದನ್ನು ಊಹಿಸಬಲ್ಲೆಯಾ? ಶ್ರೀವಾಸುದೇವನ ಪರಮಸತ್ಯದ ನುಡಿಗಳನ್ನು ಕೇಳುತ್ತಿದ್ದಂತೆಯೇ ಅರ್ಜುನನ ಅಹಂಕಾರವು ಕರಗಿ ನೀರಾಯಿತು.
ತಾನು ಗಳಿಸಿದ ವಿಜಯವೆಲ್ಲವೂ ತನ್ನ ಸ್ವಂತ ಸಾಮರ್ಥ್ಯದಿಂದಲ್ಲ, ಬದಲಿಗೆ ತನ್ನ ಬೆನ್ನ ಹಿಂದೆ ನಿಂತಿರುವ ದೈವಬಲ ಹಾಗೂ ಸಂತರ ಆಶೀರ್ವಾದದಿಂದ ಮಾತ್ರ ಸಾಧ್ಯವಾಗಿದೆ ಎಂಬ ಜ್ಞಾನೋದಯವಾಯಿತು.
ಪಾರ್ಥನು ತಕ್ಷಣವೇ ಗಾಂಡೀವವನ್ನು ಕೆಳಗಿಟ್ಟು, ಪರಮಾತ್ಮನ ಪಾದಗಳಿಗೆ ಭಕ್ತಿಯಿಂದ ಶಿರಬಾಗಿ ನಮಸ್ಕರಿಸಿದನು. ನಮಗೆ ನಾವು ಸಾಧಿಸಿದ ಯಶಸ್ಸು ತಂದು ಕೊಡುವ ನೆಮ್ಮದಿಗಿಂತ, ಆ ಯಶಸ್ಸಿನ ಬೆನ್ನ ಬರುವ ‘ನಾನೇ ಎಲ್ಲ’ ಎಂಬ ಅಹಂಕಾರ ಕೊಡುವ ಮಬ್ಬು ಹೆಚ್ಚು ಅಪಾಯಕಾರಿ. ಅಹಂಕಾರ ಕಣ್ಣಿಗೆ ಆವರಿಸಿದಾಗ ನಮ್ಮ ನಿಜವಾದ ಸಾಮರ್ಥ್ಯದ ಮಿತಿ ಕಾಣಿಸುವುದಿಲ್ಲ; ಜೊತೆಗೆ ಎದುರಾಳಿಯ ಶ್ರಮ ಹಾಗೂ ಯೋಗ್ಯತೆಯನ್ನು ಗೌರವಿಸುವ ಮನಸ್ಥಿತಿಯೂ ಇಲ್ಲವಾಗುತ್ತದೆ. ನಾವು ಏರಿದ ಎತ್ತರಕ್ಕೆ ನಮ್ಮ ಶ್ರಮ ಎಷ್ಟು ಕಾರಣವೋ, ಅಷ್ಟೇ ಅದೃಶ್ಯವಾಗಿ ನಿಂತ ದೈವಕೃಪೆ ಯೂ ಕಾರಣ ವಾಗಿರುತ್ತದೆ. ಎದುರಾಳಿಯ ಯೋಗ್ಯತೆಯನ್ನು ಗೌರವಿಸಿ, ಅಹಂಕಾರವನ್ನು ತೊರೆದು ವಿನಮ್ರ ಭಾವದಿಂದ ಬದುಕಿದಾಗ ಬದುಕು ಅರ್ಥ ಪೂರ್ಣವಾಗುತ್ತದೆ.