ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

K V Chandramouli column: ಕಸ್ತೂರಿ ವರದಿ: ವೈಜ್ಞಾನಿಕ ಪುನರ್‌ ಪರಿಶೀಲನೆಯೇ ಮಾರ್ಗ

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 27 ಜುಲೈ 2026ರಂದು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ ಕುರಿತು ಕರಡು ಅಧಿಸೂಚನೆಯನ್ನು ಪ್ರಕಟಿಸಿದ್ದು, ಅದರ ಕುರಿತು ಅಭಿಪ್ರಾಯಗಳನ್ನು ಸಲ್ಲಿಸಲು ಸೆ.25ರವರೆಗೆ ಅವಕಾಶವಿತ್ತು. ಇದು ಕೇವಲ ಹಳೆಯ ವರದಿ ಯನ್ನು ಒಪ್ಪಬೇಕೇ ಅಥವಾ ತಿರಸ್ಕರಿಸಬೇಕೇ ಎಂಬ ಪ್ರಶ್ನೆಯಲ್ಲ. 2013ರ ವೈಜ್ಞಾನಿಕ ಶಿಫಾರಸು ಗಳನ್ನು 2026ರ ನೆಲದ ವಾಸ್ತವಿಕತೆ, ಸ್ಥಳೀಯ ಜೀವನೋಪಾಯ ಮತ್ತು ಇಂದಿನ ಪರಿಸರ ಅಪಾಯ ಗಳೊಂದಿಗೆ ಹೇಗೆ ಹೊಂದಿಸಬೇಕು ಎಂಬ ಪ್ರಶ್ನೆ.

ಕಾಡು ಪಾಡು

ಕೆ.ವಿ.ಚಂದ್ರಮೌಳಿ

ಪಶ್ಚಿಮ ಘಟ್ಟಗಳು ಭಾರತದ ಅತ್ಯಂತ ಅಮೂಲ್ಯವಾದ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ. ಜೈವವೈವಿಧ್ಯ, ನದಿಗಳ ಉಗಮ, ಮಳೆನೀರು ಸಂಗ್ರಹ, ಮಣ್ಣಿನ ಸಂರಕ್ಷಣೆ ಹಾಗೂ ದಕ್ಷಿಣ ಭಾರತದ ಹವಾಮಾನ ಸಮತೋಲನದಲ್ಲಿ ಪಶ್ಚಿಮ ಘಟ್ಟಗಳ ಪಾತ್ರ ಅಪಾರ. ಆದ್ದರಿಂದ ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಅಗತ್ಯವನ್ನು ಯಾರೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಆದರೆ ಸಂರಕ್ಷಣೆಯ ಹೆಸರಿನಲ್ಲಿ ತಲೆತಲಾಂತರಗಳಿಂದ ಕೃಷಿ, ತೋಟಗಾರಿಕೆ ಮತ್ತು ಸಣ್ಣ ಪ್ರಮಾಣದ ಜೀವನೋಪಾಯದ ಮೇಲೆ ಅವಲಂಬಿತವಾಗಿರುವ ಜನರಲ್ಲಿ ಅನಿಶ್ಚಿತತೆ ಉಂಟಾಗುವುದೂ ನ್ಯಾಯಸಮ್ಮತವಲ್ಲ. ಈ ಎರಡೂ ವಾಸ್ತವಗಳ ನಡುವೆ ಸಮತೋಲನ ಕಂಡುಕೊಳ್ಳುವುದೇ ಕರ್ನಾಟಕದ ಮುಂದಿರುವ ನಿಜವಾದ ಸವಾಲು.

ಇಂದು ಈ ಚರ್ಚೆ ಮತ್ತೊಮ್ಮೆ ಮಹತ್ವ ಪಡೆದಿದೆ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 27 ಜುಲೈ 2026ರಂದು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ ಕುರಿತು ಕರಡು ಅಧಿಸೂಚನೆಯನ್ನು ಪ್ರಕಟಿಸಿದ್ದು, ಅದರ ಕುರಿತು ಅಭಿಪ್ರಾಯಗಳನ್ನು ಸಲ್ಲಿಸಲು ಸೆ.25ರವರೆಗೆ ಅವಕಾಶವಿತ್ತು. ಇದು ಕೇವಲ ಹಳೆಯ ವರದಿಯನ್ನು ಒಪ್ಪಬೇಕೇ ಅಥವಾ ತಿರಸ್ಕರಿಸಬೇಕೇ ಎಂಬ ಪ್ರಶ್ನೆಯಲ್ಲ. 2013ರ ವೈಜ್ಞಾನಿಕ ಶಿಫಾರಸುಗಳನ್ನು 2026ರ ನೆಲದ ವಾಸ್ತವಿಕತೆ, ಸ್ಥಳೀಯ ಜೀವನೋಪಾಯ ಮತ್ತು ಇಂದಿನ ಪರಿಸರ ಅಪಾಯಗಳೊಂದಿಗೆ ಹೇಗೆ ಹೊಂದಿಸಬೇಕು ಎಂಬ ಪ್ರಶ್ನೆ.

ಗಾಡ್ಗಿಲ್ ವರದಿ: ಮೊದಲ ವೈಜ್ಞಾನಿಕ ಪ್ರಯತ್ನ ಪಶ್ಚಿಮ ಘಟ್ಟಗಳ ಪರಿಸರ ಮಹತ್ವವನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಅವುಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪಶ್ಚಿಮ ಘಟ್ಟ ಪರಿಸರ ತಜ್ಞರ ಸಮಿತಿಯನ್ನು 4 ಮಾರ್ಚ್ 2010ರಂದು ಪ್ರೊ.ಮಾಧವ ಗಾಡ್ಗಿಲ್ ಅವರ ಅಧ್ಯಕ್ಷತೆಯಲ್ಲಿ ರಚಿಸಿತು. ಸಮಿತಿಯು ತನ್ನ ವರದಿಯನ್ನು 30 ಆಗ 2011ರಂದು ಸಲ್ಲಿಸಿತು.

ಇದನ್ನೂ ಓದಿ: K V Chandramouli Column: ಭ್ರಷ್ಟಾಚಾರದ ಅಂಕಿ ಅಂಶಗಳಾಚೆಗೆ: ಬೇರು ಎಲ್ಲಿದೆ ?

ಗಾಡ್ಗಿಲ್ ಸಮಿತಿಯ ವಿಧಾನವು ಪಶ್ಚಿಮ ಘಟ್ಟಗಳನ್ನು ಒಂದು ಸಮಗ್ರ ಭೂದೃಶ್ಯ ಪರಿಸರ ವ್ಯವಸ್ಥೆ ಎಂದು ಪರಿಗಣಿಸಿ, ಪರಿಸರ ಸೂಕ್ಷ ತೆಯ ವಿವಿಧ ಹಂತಗಳನ್ನು ಗುರುತಿಸುವುದಾಗಿತ್ತು. ವರದಿಯಲ್ಲಿ ಪರಿಸರ ಸೂಕ್ಷ್ಮ ವಲಯ 1, 2 ಮತ್ತು 3 ಎಂಬ ವರ್ಗೀಕರಣದ ಚಿಂತನೆಯೂ ಇತ್ತು. ಈ ವಿಧಾನದಲ್ಲಿ ಅರಣ್ಯ, ಭೂಪ್ರದೇಶದ ಇಳಿಜಾರು, ಅರಣ್ಯ ಆವರಣ, ನದೀತೀರದ ಅರಣ್ಯ, ಸ್ಥಳೀಯ ಸಸ್ಯವರ್ಗ ಮತ್ತು ಅಪರೂಪದ ಜೀವಿಗಳಂತಹ ಹಲವು ಪರಿಸರ ಸೂಚಕಗಳು ಪರಿಗಣಿಸಲ್ಪಟ್ಟಿ ದ್ದವು. ಆದರೆ ವರದಿ ಸಾರ್ವಜನಿಕವಾದ ನಂತರ ಕೇಂದ್ರ ಸರ್ಕಾರಕ್ಕೆ 1700ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದವು.

ರಾಜ್ಯ ಸರ್ಕಾರಗಳು, ಕೇಂದ್ರ ಸಚಿವಾಲಯಗಳು ಮತ್ತು ಇತರ ಪಾಲುದಾರರು ವಿವಿಧ ಆಕ್ಷೇಪಣೆ ಗಳು ಮತ್ತು ಸಲಹೆಗಳನ್ನು ನೀಡಿದರು. ಹಾಗಾದರೆ ಕಸ್ತೂರಿರಂಗನ್ ಸಮಿತಿ ಏಕೆ ರಚನೆಯಾ ಯಿತು? ಇಲ್ಲಿ ಒಂದು ಪ್ರಮುಖ ವಿಷಯವನ್ನು ಸ್ಪಷ್ಟಪಡಿಸುವುದು ಅಗತ್ಯ. ಕಸ್ತೂರಿ ರಂಗನ್ ಸಮಿತಿಯನ್ನು ಗಾಡ್ಗಿಲ್ ವರದಿಯನ್ನು ಸರಳವಾಗಿ ತಪ್ಪು ಎಂದು ಘೋಷಿಸಲು ರಚಿಸಲಾಗಲಿಲ್ಲ. ಗಾಡ್ಗಿಲ್ ವರದಿಗೆ ಬಂದ ವ್ಯಾಪಕ ಪ್ರತಿಕ್ರಿಯೆಗಳು, ರಾಜ್ಯಗಳ ಅಭಿಪ್ರಾಯಗಳು, ಅಭಿವೃದ್ಧಿ ಮತ್ತು ಸಂರಕ್ಷಣೆಯ ನಡುವಿನ ಸಂಘರ್ಷ, ಸ್ಥಳೀಯ ಜನರ ಹಕ್ಕುಗಳು ಹಾಗೂ ಕೇಂದ್ರ-ರಾಜ್ಯ ಸಂಬಂಧಗಳ ಸಾಂವಿಧಾನಿಕ ಪರಿಣಾಮಗಳು ಇತ್ಯಾದಿಗಳನ್ನು ಸಮಗ್ರವಾಗಿ ಪರಿಶೀಲಿಸಲು ಮುಂದಿನ ಹಂತದ ಅಧ್ಯಯನ ಅಗತ್ಯವಾಯಿತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 17 ಆಗ 2012ರಂದು ಡಾ.ಕೆ.ಕಸ್ತೂರಿರಂಗನ್ ಅವರ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಕಾರ್ಯಪಡೆಯನ್ನು ರಚಿಸಿತು. ಈ ಕಾರ್ಯಪಡೆಗೆ ಗಾಡ್ಗಿಲ್ ವರದಿಯನ್ನು ಸಮಗ್ರ ಮತ್ತು ಬಹುವಿಷಯಾಧಾರಿತವಾಗಿ ಪರಿಶೀಲಿಸುವ ಜವಾಬ್ದಾರಿ ನೀಡಲಾಗಿತ್ತು.

Western Ghats

ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಅಗತ್ಯಗಳ ಜೊತೆಗೆ ಜೈವವೈವಿಧ್ಯ ಸಂರಕ್ಷಣೆ, ಸ್ಥಳೀಯ ಮತ್ತು ಆದಿವಾಸಿ ಸಮುದಾಯಗಳ ಹಕ್ಕುಗಳು, ಅರಣ್ಯವಾಸಿಗಳ ಅಗತ್ಯಗಳು, ಹವಾಮಾನ ಬದಲಾವಣೆ, ವಿಶ್ವ ಪಾರಂಪರಿಕ ತಾಣಗಳು ಹಾಗೂ ಕೇಂದ್ರ-ರಾಜ್ಯ ಸಂಬಂಧಗಳನ್ನೂ ಪರಿಗಣಿಸಬೇಕೆಂದು ಸೂಚಿಸಲಾಗಿತ್ತು.

ಹೀಗಾಗಿ ಗಾಡ್ಗಿಲ್ ವರದಿ- ಸಾರ್ವಜನಿಕ ಮತ್ತು ರಾಜ್ಯಮಟ್ಟದ ಪ್ರತಿಕ್ರಿಯೆಗಳು- ಕಸ್ತೂರಿರಂಗನ್ ಕಾರ್ಯಪಡೆ ಎಂಬುದು ಒಂದು ನಿರಂತರ ನೀತಿ ಪರಿಶೀಲನಾ ಪ್ರಕ್ರಿಯೆ ಎಂದು ಅರ್ಥಮಾಡಿ ಕೊಳ್ಳಬೇಕು. 2013ರ ವೈಜ್ಞಾನಿಕ ವರದಿ- ಆದರೆ 2026ರ ನೆಲದ ವಾಸ್ತವಿಕತೆ: ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆ ತನ್ನ ವರದಿಯನ್ನು 2013ರಲ್ಲಿ ಸಲ್ಲಿಸಿತು.

ಅದರ ಶಿಫಾರಸುಗಳ ಆಧಾರದ ಮೇಲೆ ಪಶ್ಚಿಮ ಘಟ್ಟಗಳ ಒಂದು ಭಾಗವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸುವ ಪ್ರಕ್ರಿಯೆ ಮುಂದುವರಿಯಿತು. ಆದರೆ ಒಂದು ಮೂಲಭೂತ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ: 2013ರಲ್ಲಿ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ 2026ರ ಭೂಬಳಕೆ, ಜನಸಂಖ್ಯೆ, ರಸ್ತೆ, ವಸತಿ, ಕೃಷಿ, ಅರಣ್ಯ ಸ್ಥಿತಿ, ಮಳೆ ಮಾದರಿ ಮತ್ತು ಭೂಕುಸಿತ ಅಪಾಯಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವೇ? ಕಳೆದ ಹದಿಮೂರು ವರ್ಷಗಳಲ್ಲಿ ಭೂಬಳಕೆಯಲ್ಲಿ ಬದಲಾವಣೆ ಗಳಾಗಿವೆ.

ಹೊಸ ರಸ್ತೆಗಳು ನಿರ್ಮಾಣವಾಗಿವೆ. ಕೆಲವು ಪ್ರದೇಶಗಳಲ್ಲಿ ನಗರೀಕರಣ ಹೆಚ್ಚಾಗಿದೆ. ಕೆಲವು ಕಡೆ ಕೃಷಿ ಮತ್ತು ತೋಟಗಾರಿಕೆ ವಿಸ್ತರಿಸಿದೆ. ಹವಾಮಾನ ಬದಲಾವಣೆಯಿಂದ ಅತಿವೃಷ್ಟಿ ಮತ್ತು ಭೂಕುಸಿತದ ಅಪಾಯಗಳ ಸ್ವರೂಪವೂ ಬದಲಾಗುತ್ತಿದೆ. ಆದ್ದರಿಂದ 2013ರ ವರದಿಯನ್ನು ತಿರಸ್ಕರಿಸುವುದಕ್ಕಿಂತ, ಅದನ್ನು ವೈಜ್ಞಾನಿಕ ಮೂಲಾಧಾರವಾಗಿ ಪರಿಗಣಿಸಿ, 2026ರ ಹೊಸ ದತ್ತಾಂಶದೊಂದಿಗೆ ಪುನರ್ ಪರಿಶೀಲಿಸುವುದು ಹೆಚ್ಚು ಅರ್ಥಪೂರ್ಣ ವಿಧಾನವಾಗಬಹುದು.

ಕಸ್ತೂರಿ ರಂಗನ್ ವರದಿಯ ಪ್ರಮುಖ ಮಿತಿಗಳು

೧. ಉಪಗ್ರಹ ದತ್ತಾಂಶ ಮಾತ್ರ ಅಂತಿಮ ಆಧಾರವಾಗಬಾರದು: ಉಪಗ್ರಹ ದತ್ತಾಂಶ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆಗಳು ವಿಶಾಲ ಪ್ರದೇಶಗಳನ್ನು ಗುರುತಿಸಲು ಅತ್ಯಂತ ಉಪಯುಕ್ತ. ಆದರೆ ಉಪಗ್ರಹ ಚಿತ್ರವು ಒಂದು ಸರ್ವೇ ನಂಬರ್‌ನಲ್ಲಿ ತಲೆತಲಾಂತರಗಳಿಂದ ಕೃಷಿ ಮಾಡು ತ್ತಿರುವ ಕುಟುಂಬದ ಇತಿಹಾಸವನ್ನು ತಿಳಿಸುವುದಿಲ್ಲ. ಅದು ಸಣ್ಣ ನೀರಿನ ಮೂಲ, ಸಾಂಪ್ರದಾ ಯಿಕ ಬೆಳೆ, ಹಳೆಯ ಮನೆ ಅಥವಾ ಸ್ಥಳೀಯ ಜೀವನೋಪಾಯದ ಮಹತ್ವವನ್ನು ಸಂಪೂರ್ಣವಾಗಿ ವಿವರಿಸಲಾರದು. ಆದ್ದರಿಂದ ಉಪಗ್ರಹ ನಕ್ಷೆ ಪ್ರಾರಂಭಿಕ ವೈಜ್ಞಾನಿಕ ಸಾಧನವಾಗಿರಬೇಕು; ಅಂತಿಮ ತೀರ್ಪಿನ ಏಕೈಕ ಆಧಾರವಾಗ ಬಾರದು.

  1. ಇಡೀ ಗ್ರಾಮವನ್ನು ಒಂದೇ ಪರಿಸರ ಘಟಕವಾಗಿ ಪರಿಗಣಿಸುವ ಸಮಸ್ಯೆ: ಒಂದು ಗ್ರಾಮದ ನೈಸರ್ಗಿಕ ಅರಣ್ಯ, ಕಾಫಿ ತೋಟ, ಅಡಿಕೆ ತೋಟ, ಭತ್ತದ ಗದ್ದೆ, ಮನೆಗಳು ಮತ್ತು ವಾಣಿಜ್ಯ ಪ್ರದೇಶಗಳು ಇರಬಹುದು. ಹೀಗಿರುವಾಗ ಇಡೀ ಗ್ರಾಮವನ್ನೇ ಒಂದೇ ರೀತಿಯ ಪರಿಸರ ಅಪಾಯದ ಪ್ರದೇಶವೆಂದು ಪರಿಗಣಿಸುವುದು ಸೂಕ್ತವೇ ಎಂಬ ಪ್ರಶ್ನೆ ಎದುರಾಗುತ್ತದೆ.

೩. ಸೂಕ್ಷ್ಮ ಮಟ್ಟದ ನಕ್ಷೆ ಅಗತ್ಯ: ಭವಿಷ್ಯದ ಪರಿಸರ ಸೂಕ್ಷ್ಮ ಪ್ರದೇಶ (ESA) ಗುರುತಿಸುವಿಕೆಯಲ್ಲಿ ಭೂಖಂಡ/ಸೂಕ್ಷ್ಮ ಜಲಾನಯನ ಮಟ್ಟದ ನಕ್ಷೆ ಹೆಚ್ಚು ಪರಿಣಾಮಕಾರಿ. ಇಳಿಜಾರು, ಮಣ್ಣಿನ ಸ್ವರೂಪ, ಅರಣ್ಯದ ಸಾಂದ್ರತೆ, ಜಲಾನಯನ ಮಹತ್ವ, ಜೀವವೈವಿಧ್ಯ, ಭೂಕುಸಿತ ಅಪಾಯ ಮತ್ತು ಭೂಬಳಕೆಯನ್ನು ಒಟ್ಟಾಗಿ ಪರಿಗಣಿಸಬೇಕು.

೪. 2013ರ ಮಾಹಿತಿಯನ್ನು 2026ಕ್ಕೆ ನವೀಕರಿಸಬೇಕು: ಹೊಸ ಭೌಗೋಳಿಕ ದತ್ತಾಂಶ, ಅರಣ್ಯ ದತ್ತಾಂಶ, ಜೀವವೈವಿಧ್ಯ ದಾಖಲೆಗಳು, ಭೂಕುಸಿತ ನಕ್ಷೆಗಳು, ಹವಾಮಾನ ಅಪಾಯದ ನಕ್ಷೆಗಳು ಮತ್ತು ಭೂದಾಖಲೆಗಳನ್ನು ಸಂಯೋಜಿಸಬೇಕು.

೫. ಸ್ಥಳಮಟ್ಟದ ವಾಸ್ತವ ಪರಿಶೀಲನೆ ಅಗತ್ಯ: ಸ್ಥಳಮಟ್ಟದ ವಾಸ್ತವ ಪರಿಶೀಲನೆ ಅತ್ಯಂತ ಮುಖ್ಯ. ಗ್ರಾಮದ ಹೆಸರು ಬದಲಾಗಿದೆಯೇ? ಗ್ರಾಮ ವಿಭಜನೆಯಾಗಿದೆಯೇ? ಆಡಳಿತಾತ್ಮಕ ಗಡಿ ಬದಲಾಗಿದೆಯೇ? ಈಗಾಗಲೇ ಸಂರಕ್ಷಿತ ಅರಣ್ಯ ಅಥವಾ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿ ಯೊಂದಿಗೆ ಅತಿಕ್ರಮಣವಿದೆಯೇ? ಯಾವ ಭಾಗ ನಿಜವಾಗಿ ಕೃಷಿಭೂಮಿ? ಇಂತಹ ಪ್ರಶ್ನೆಗಳಿಗೆ ಸ್ಥಳ ಪರಿಶೀಲನೆಯ ಮೂಲಕ ಉತ್ತರ ಕಂಡುಕೊಳ್ಳಬೇಕು.

೬. ಕಾನೂನುಬದ್ಧ ಕೃಷಿ ಮತ್ತು ಪರಿಸರ ಹಾನಿಕಾರಕ ಚಟುವಟಿಕೆಗಳನ್ನು ಒಂದೇ ರೀತಿಯಲ್ಲಿ ನೋಡಬಾರದು: ಹಳೆಯ ಕಾಫಿ ತೋಟವನ್ನು ಹೊಸ ಕಲ್ಲುಗಣಿ ಯೋಜನೆ ಯೊಂದಿಗೆ ಹೋಲಿಸ ಲಾಗದು. ಅಸ್ತಿತ್ವದಲ್ಲಿರುವ ಭತ್ತದ ಗದ್ದೆಯನ್ನು ಹೊಸ ಗಣಿಗಾರಿಕಾ ಯೋಜನೆಯೊಂದಿಗೆ ಹೋಲಿಸಲಾಗದು. ಗ್ರಾಮದ ಹಳೆಯ ಮನೆಯನ್ನು ಹೊಸ ದೊಡ್ಡ ವಾಣಿಜ್ಯ ಕಟ್ಟಡ ಯೋಜನೆಯೊಂದಿಗೆ ಹೋಲಿಸಲಾಗದು. ಆದ್ದರಿಂದ ಅಪಾಯಾಧಾರಿತ ನಿಯಂತ್ರಣ ಅಗತ್ಯ.

೭. ಸ್ಥಳೀಯ ಜ್ಞಾನಕ್ಕೂ ವೈಜ್ಞಾನಿಕ ಮೌಲ್ಯವಿದೆ: ಸ್ಥಳೀಯ ರೈತರಿಗೆ ತಮ್ಮ ಪ್ರದೇಶದ ನೀರಿನ ಹರಿವು, ಹಳೆಯ ಕೆರೆ, ಜಲಧಾರೆ, ಮಣ್ಣಿನ ಸ್ವರೂಪ, ಮಳೆ ಮಾದರಿ ಮತ್ತು ಭೂಕುಸಿತ ಸಂಭವಿಸುವ ಸ್ಥಳಗಳ ಬಗ್ಗೆ ದೀರ್ಘಕಾಲದ ಅನುಭವವಿರುತ್ತದೆ. ಈ ಸ್ಥಳೀಯ ಜ್ಞಾನವನ್ನು ವೈಜ್ಞಾನಿಕ ದತ್ತಾಂಶದೊಂದಿಗೆ ಸಂಯೋಜಿಸಬೇಕು.

೮. ಪರಿಸರದ ಹೊರುವ ಸಾಮರ್ಥ್ಯವನ್ನು ಪರಿಗಣಿಸಬೇಕು: ಒಂದು ಪ್ರದೇಶ ಎಷ್ಟು ರಸ್ತೆ, ಕಟ್ಟಡ, ಪ್ರವಾಸೋದ್ಯಮ, ನೀರಿನ ಬಳಕೆ ಮತ್ತು ಮಾನವ ಚಟುವಟಿಕೆಯನ್ನು ಪರಿಸರ ಹಾನಿಯಾಗದೆ ತಡೆದು ಕೊಳ್ಳಬಲ್ಲದು ಎಂಬುದೇ ಅದರ ಹೊರುವ ಸಾಮರ್ಥ್ಯ. ಇದು ವಿಶೇಷವಾಗಿ ಭೂಕುಸಿತ, ಅತಿವೃಷ್ಟಿ ಮತ್ತು ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಮಹತ್ವದ್ದಾಗಿದೆ.

೯. ಗಡಿಗಳ ದೋಷಗಳನ್ನು ನಿಯತಕಾಲಿಕವಾಗಿ ಸರಿಪಡಿಸಬೇಕು: ಗ್ರಾಮದ ಗಡಿ ಬದಲಾವಣೆ, ಆಡಳಿತಾತ್ಮಕ ಪುನರ್ವಿಂಗಡಣೆ, ಹೆಸರುಗಳ ವ್ಯತ್ಯಾಸ ಮತ್ತು ಈಗಾಗಲೇ ಸಂರಕ್ಷಿತ ಪ್ರದೇಶ ಗಳೊಂದಿಗೆ ಉಂಟಾಗುವ ಅತಿಕ್ರಮಣಗಳನ್ನು ನಿಯತಕಾಲಿಕ ಪುನರ್ಪರಿಶೀಲನೆ ಮೂಲಕ ಸರಿಪಡಿಸಬೇಕು.

  1. ನೈಸರ್ಗಿಕ ಅರಣ್ಯ ಮತ್ತು ಕೃಷಿಭೂಮಿಯನ್ನು ಒಂದೇ ಕಣ್ಣಿನಿಂದ ನೋಡಬಾರದು: ನೈಸರ್ಗಿಕ ಅರಣ್ಯ, ವನ್ಯಜೀವಿ ಸಂಚಾರ ಮಾರ್ಗಗಳು, ಪ್ರಮುಖ ಜಲಾನಯನ ಪ್ರದೇಶಗಳು, ಅಪರೂಪದ ಜೀವವೈವಿಧ್ಯ ಪ್ರದೇಶಗಳು ಮತ್ತು ಅತ್ಯಂತ ಭೂಕುಸಿತ ಅಪಾಯದ ಪ್ರದೇಶಗಳಿಗೆ ಕಟ್ಟುನಿಟ್ಟಿನ ಸಂರಕ್ಷಣೆ ಅಗತ್ಯ. ಆದರೆ ತಲೆತಲಾಂತರಗಳಿಂದ ಕಾನೂನುಬದ್ಧವಾಗಿ ಕೃಷಿ ಮತ್ತು ತೋಟಗಾರಿಕೆ ನಡೆಸುತ್ತಿರುವ ಭೂಮಿಯನ್ನು ಅದೇ ಮಟ್ಟದ ಅಪಾಯದ ವರ್ಗಕ್ಕೆ ಸೇರಿಸುವುದು ಸೂಕ್ತವೇ ಎಂಬುದನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕು. ಇಲ್ಲಿ ಮುಖ್ಯವಾದುದು ಭೂಮಿಯ ಹೆಸರಲ್ಲ, ಪರಿಸರ ಅಪಾಯದ ಮಟ್ಟ.

ಇತರ ಪಶ್ಚಿಮ ಘಟ್ಟ ರಾಜ್ಯಗಳ ಅನುಭವದಿಂದ ಕಲಿಯಬೇಕಾದ ಪಾಠ: ಪಶ್ಚಿಮ ಘಟ್ಟಗಳು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು- ಈ ಆರು ರಾಜ್ಯಗಳಲ್ಲಿ ವ್ಯಾಪಿಸಿರುವ ಈ ಪರ್ವತ ಪರಿಸರ ವ್ಯವಸ್ಥೆಗೆ ಒಂದೇ ರಾಷ್ಟ್ರೀಯ ಸಂರಕ್ಷಣಾ ಉದ್ದೇಶವಿದ್ದರೂ, ಪ್ರತಿ ರಾಜ್ಯದ ಭೂಬಳಕೆ ಮತ್ತು ಸಾಮಾಜಿಕ ಪರಿಸ್ಥಿತಿ ವಿಭಿನ್ನವಾಗಿದೆ. ಗಾಡ್ಗಿಲ್ ವರದಿಗೆ ಬಂದ ರಾಜ್ಯಮಟ್ಟದ ಪ್ರತಿಕ್ರಿಯೆಗಳ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ಕಾರ್ಯಪಡೆಗೆ ಆರು ರಾಜ್ಯಗಳೊಂದಿಗೆ ಸಂವಾದ ನಡೆಸುವ ಜವಾಬ್ದಾರಿಯನ್ನೇ ನೀಡಲಾಗಿತ್ತು. ಹೀಗಾಗಿ ರಾಜ್ಯಗಳ ಅನುಭವದಿಂದ ದೊರೆಯುವ ಮುಖ್ಯ ಪಾಠವೆಂದರೆ, ಒಂದೇ ಪರಿಸರ ಗುರಿ ಇರಬಹುದು; ಆದರೆ ಅದರ ಭೌಗೋಳಿಕ ಮತ್ತು ಸಾಮಾಜಿಕ ಜಾರಿಯ ವಿಧಾನ ಒಂದೇ ಆಗಿರಬೇಕೆಂದಿಲ್ಲ.

ಸಂವಿಧಾನ ಮತ್ತು ಕಾನೂನು- ಪರಿಸರ ಸಂರಕ್ಷಣೆಯೂ ಜೀವನೋಪಾಯವೂ: ಪಶ್ಚಿಮ ಘಟ್ಟಗಳ ಸಂರಕ್ಷಣೆ ಕೇವಲ ಆಡಳಿತಾತ್ಮಕ ನೀತಿಯ ಪ್ರಶ್ನೆಯಲ್ಲ; ಅದು ಸಾಂವಿಧಾನಿಕ ಚೌಕಟ್ಟು ಮತ್ತು ವಿವಿಧ ಪರಿಸರ ಕಾನೂನುಗಳೊಂದಿಗೆ ಸಂಬಂಧ ಹೊಂದಿದೆ. ಭಾರತ ಸಂವಿಧಾನದ ಅನುಚ್ಛೇದ 48ಎ ರಾಜ್ಯವು ಪರಿಸರವನ್ನು ರಕ್ಷಿಸಿ ಸುಧಾರಿಸಲು ಹಾಗೂ ಅರಣ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಲು ಪ್ರಯತ್ನಿಸಬೇಕೆಂದು ನಿರ್ದೇಶಿಸುತ್ತದೆ. ಅನುಚ್ಛೇದ 51ಎ(ಜಿ) ಪ್ರತಿಯೊಬ್ಬ ನಾಗರಿಕನಿಗೂ ನೈಸರ್ಗಿಕ ಪರಿಸರವನ್ನು ರಕ್ಷಿಸಿ ಸುಧಾರಿಸುವ ಮೂಲಭೂತ ಕರ್ತವ್ಯವನ್ನು ವಿಧಿಸುತ್ತದೆ. ಇದೇ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್‌ನ ನ್ಯಾಯಶಾಸ್ತ್ರದಲ್ಲಿ ಅನುಚ್ಛೇದ 21ರ ಜೀವಿಸುವ ಹಕ್ಕಿನ ವ್ಯಾಪ್ತಿಯಲ್ಲಿ ಆರೋಗ್ಯಕರ ಪರಿಸರದ ಮಹತ್ವವನ್ನು ಗುರುತಿಸಲಾಗಿದೆ. ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಯಾವುದೇ ನಿರ್ಬಂಧವನ್ನು ಕಾರಣರಹಿತವಾಗಿ ಹೇರುವಂತಿಲ್ಲ. ಅನುಚ್ಛೇದ 14ರ ಸಮಾನತೆ ಮತ್ತು ಅನ್ಯಾಯರಹಿತ ಆಡಳಿತದ ತತ್ವ, ಅನುಚ್ಛೇದ 19(1)(ಜಿ) ರ ವೃತ್ತಿ/ವ್ಯವಹಾರದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಹಕ್ಕುಗಳು ಹಾಗೂ ಅನುಚ್ಛೇದ 300ಎ ಆಸ್ತಿ ಹಕ್ಕಿನ ಕಾನೂನುಬದ್ಧ ರಕ್ಷಣೆಯನ್ನೂ ಆಡಳಿತವು ಗಮನದಲ್ಲಿಡ ಬೇಕಾಗುತ್ತದೆ.

(ಮುಂದುವರಿಯಲಿದೆ)