ಒಂದೊಳ್ಳೆ ಮಾತು
‘ಕಥಾಸರಿತ್ಸಾಗರ’ದ ಕಥಾಪೀಠದಲ್ಲಿ ಬರುವ ಗುಣಾಢ್ಯ ಹಾಗೂ ಸಾತವಾಹನ ರಾಜನ ಮುಂದಿನ ಪ್ರಸಂಗ, ಕೇವಲ ಒಂದು ಪ್ರಾಚೀನ ಕಥೆಯಷ್ಟೇ ಅಲ್ಲ; ಮಾಡಿದ ತಪ್ಪನ್ನು ತಿದ್ದಿಕೊಂಡು ಬದುಕಿ ನಲ್ಲಿ ಸಾರ್ಥಕತೆ ಕಾಣುವುದು ಹೇಗೆಂಬುದಕ್ಕೆ ಸಾರ್ವಕಾಲಿಕ ನಿದರ್ಶನವಾಗಿದೆ. ವಿಂಧ್ಯಾಟವಿಯ ಅರಣ್ಯದಲ್ಲಿ ಗುಣಾಢ್ಯನು ರಕ್ತದಲ್ಲಿ ಬರೆದ ಆರು ಲಕ್ಷ ಶ್ಲೋಕಗಳನ್ನು ಬೆಂಕಿಗೆ ಆಹುತಿ ಕೊಟ್ಟ ನಂತರ, ಕೊನೆಗೆ ಉಳಿದಿದ್ದು ಕೇವಲ ಒಂದು ಲಕ್ಷ ಶ್ಲೋಕಗಳು ಮಾತ್ರ. ಅರಣ್ಯಕ್ಕೆ ಓಡಿಬಂದ ಸಾತವಾಹನ ರಾಜನು, ಪ್ರಾಣಿಗಳೂ ಮಂತ್ರಮುಗ್ಧವಾಗಿ ಕಣ್ಣೀರಿಡುತ್ತಾ ನಿಂತಿದ್ದ ಆ ದಿವ್ಯ ಕಾವ್ಯದ ಶಕ್ತಿಯನ್ನು ಕಂಡು ದಂಗಾಗಿ ಹೋದನು.
ಆ ಕ್ಷಣದಲ್ಲಿ ರಾಜನಲ್ಲಿದ್ದ ಅಧಿಕಾರದ ಮದ, ವಿದ್ವತ್ತಿನ ಅಹಂಕಾರವೆಲ್ಲ ಕರಗಿ ನೀರಾದವು. ಆತ ಕಣ್ಣೀರು ಸುರಿಸುತ್ತಾ ಗುಣಾಢ್ಯನ ಪಾದಗಳಿಗೆ ಬಿದ್ದು ಕ್ಷಮೆ ಯಾಚಿಸಿದನು. ಆಗ ಗುಣಾಢ್ಯನು ತನ್ನ ಪೂರ್ವಾಪರ ವನ್ನು ವಿವರಿಸಿದನು: ಹೇ ರಾಜಾ, ನಾನು ಪೂರ್ವಜನ್ಮದಲ್ಲಿ ಕೈಲಾಸದ ಗಣ ಮಾಲ್ಯವಂತ. ಪಾರ್ವತಿಯ ಶಾಪದಿಂದ ಮರ್ತ್ಯಲೋಕದಲ್ಲಿ ಜನಿಸಿದ್ದೆ. ಶಿವನು ಪಾರ್ವತಿಗೆ ಹೇಳಿದ ಈ ದಿವ್ಯ ಕಥೆಗಳನ್ನು ನಿನಗೆ ತಲುಪಿಸಿ, ಲೋಕದಲ್ಲಿ ಪ್ರಚಾರ ಮಾಡಿದಾಗ ಮಾತ್ರ ನನಗೆ ಶಾಪವಿಮೋಚನೆಯಾಗಬೇಕಿತ್ತು.
ಇದನ್ನೂ ಓದಿ: Roopa Gururaj Column: ತನ್ನ ಉದ್ದಟತನದಿಂದ ಕಾಡುಪಾಲಾದ ಮಹಾಮೇಧಾವಿ ಗುಣಾಢ್ಯ
ಈಗ ಉಳಿದಿರುವ ಈ ಒಂದು ಲಕ್ಷ ಶ್ಲೋಕಗಳ ಕಥೆಯೇ ನರವಾಹನದತ್ತನ ಚರಿತ್ರೆ. ಇದನ್ನು ನಿನಗೆ ಒಪ್ಪಿಸು ತ್ತಿದ್ದೇನೆ, ಸ್ವೀಕರಿಸು ಎಂದು ಆ ಗ್ರಂಥವನ್ನು ರಾಜನ ಕೈಗಿತ್ತನು. ಆ ನಂತರ ಗುಣಾಢ್ಯನು ತನ್ನ ಇಬ್ಬರು ಪ್ರಮುಖ ಶಿಷ್ಯರಾದ ಗುಣದೇವ ಮತ್ತು ನಂದಿದೇವರನ್ನು ರಾಜನಿಗೆ ಪರಿಚಯಿಸಿ, ಇವರು ಈ ಗ್ರಂಥದ ರಹಸ್ಯ ಮತ್ತು ವ್ಯಾಖ್ಯಾನವನ್ನು ಬಲ್ಲವರು; ಇವರನ್ನು ಗೌರವದಿಂದ ನೋಡಿಕೋ ಎಂದು ಆಜ್ಞಾಪಿಸಿ ದನು.
ತಕ್ಷಣವೇ ಗುಣಾಢ್ಯನು ಯೋಗಮಾರ್ಗದಿಂದ ತನ್ನ ನಶ್ವರ ಶರೀರವನ್ನು ತ್ಯಜಿಸಿ, ಕೈಲಾಸದಲ್ಲಿ ಮರಳಿ ಶಿವನ ಗಣಪದವಿಯನ್ನು ಅಲಂಕರಿಸಿದನು. ಇತ್ತ ಸಾತವಾಹನ ರಾಜನಿಗೆ ಪಶ್ಚಾತ್ತಾಪದ ಬೆಂಕಿ ತೀವ್ರವಾಗಿ ಕಾಡತೊಡಗಿತು. ತನ್ನ ಅಜ್ಞಾನದಿಂದಾಗಿ ಲೋಕಕ್ಕೆ ಸಿಗಬೇಕಿದ್ದ ಆರು ಲಕ್ಷ ಶ್ಲೋಕಗಳ ಅಪೂರ್ವ ಜ್ಞಾನನಿಧಿ ಭಸ್ಮವಾಗಿಹೋಯಿತಲ್ಲ ಎಂಬ ಕೊರಗು ಅವನನ್ನು ಹಿಂಡಿ ಹಿಪ್ಪಿ ಮಾಡಿತು. ಆದರೆ ಆತ ಕೇವಲ ಕಣ್ಣೀರಿಡುತ್ತಾ ಕುಳಿತುಕೊಳ್ಳಲಿಲ್ಲ.
ತನ್ನ ತಪ್ಪಿಗೆ ಪ್ರಾಯಶ್ಚಿತ್ತವಾಗಿ, ಉಳಿದ ಆ ಒಂದು ಲಕ್ಷ ಶ್ಲೋಕಗಳ ನ್ನಾದರೂ ಜಗತ್ತಿಗೆ ಮುಟ್ಟಿಸಲು ಸಂಕಲ್ಪಿಸಿದನು. ರಾಜನು ಆ ರಕ್ತಸಿಕ್ತ ತಾಳೆಗರಿಗಳ ಗ್ರಂಥವನ್ನು ಅತ್ಯಂತ ಭಕ್ತಿ-ಗೌರವಗಳಿಂದ ತನ್ನ ರಾಜಧಾನಿ ಪ್ರತಿಷ್ಠಾನಪುರಕ್ಕೆ ತಂದನು. ಗುಣಾಢ್ಯನ ಶಿಷ್ಯರಾದ ಗುಣದೇವ ಮತ್ತು ನಂದಿ ದೇವರನ್ನು ರಾಜಮರ್ಯಾ ದೆಯಿಂದ ಸತ್ಕರಿಸಿ, ಅವರಿಂದ ಸಂಪೂರ್ಣ ಕಥೆ ಯನ್ನು ಪೈಶಾಚೀ ಭಾಷೆಯ ಸವಿಸ್ತಾರವಾಗಿ ಕೇಳಿ ತಿಳಿದುಕೊಂಡನು.
ನಂತರ, ಈ ದಿವ್ಯ ಗ್ರಂಥ ಹೇಗೆ ಭೂಮಿಗೆ ಬಂತು ಎಂಬುದನ್ನು ವಿವರಿಸುವ ‘ಕಥಾ ಪೀಠ’ ಎಂಬ ಸುಂದರ ವಾದ ಪೀಠಿಕೆಯನ್ನು ರಾಜನೇ ಸ್ವತಃ ರಚಿಸಿ, ಮೂಲ ಕೃತಿಗೆ ಜೋಡಿಸಿದನು. ಅಷ್ಟಕ್ಕೇ ನಿಲ್ಲದೆ, ಆ ಗ್ರಂಥದ ಪ್ರತಿಗಳನ್ನು ವಿದ್ವಾಂಸರಿಂದ ಬರೆಸಿ, ದೇಶ-ವಿದೇಶಗಳಲ್ಲಿ ಪ್ರಚಾರವಾಗುವಂತೆ ವ್ಯವಸ್ಥೆ ಮಾಡಿದನು. ಹೀಗೆ ರಾಜನ ತಿದ್ದುವಿಕೆಯ ಪ್ರಯತ್ನದಿಂದಾಗಿ, ಆ ಒಂದು ಲಕ್ಷ ಶ್ಲೋಕಗಳ ಬೃಹತ್ಕಥೆ’ ಮೂರೂ ಲೋಕಗಳಲ್ಲಿ ಅಮರ ಕಾವ್ಯ ವಾಗಿ ಪ್ರಸಿದ್ಧಿ ಪಡೆಯಿತು.
ಮನುಷ್ಯರಾಗಿ ನಾವು ಸಹಜವಾಗಿ ತಪ್ಪುಗಳನ್ನು ಮಾಡುತ್ತೇವೆ; ಅಜ್ಞಾನ, ಅಹಂಕಾರ ಅಥವಾ ದುಡು ಕಿನಿಂದ ಕೆಲವೊಮ್ಮೆ ಸರಿಪಡಿಸಲಾಗದಂತಹ ಅನಾಹುತಗಳೂ ನಡೆದುಹೋಗುತ್ತವೆ. ಸಾತವಾಹನನ ಕೈಯಿಂದಲೂ ಅಂತಹದ್ದೇ ಘೋರ ಪ್ರಮಾದ ನಡೆದುಹೋಗಿತ್ತು. ಆದರೆ ನಿಜವಾದ ಮಾನವೀಯತೆ ಇರುವುದು ಕಳೆದುಹೋದದ್ದನ್ನು ನೆನೆದು ಬರೀ ಕಣ್ಣೀರಿಡುವುದರಲ್ಲಿ ಅಲ್ಲ; ಉಳಿದುಕೊಂಡಿರುವುದನ್ನು ಹೇಗೆ ಕಾಪಾಡಿಕೊಳ್ಳುತ್ತೇವೆ ಮತ್ತು ಕೈಜಾರಿದ ಮೌಲ್ಯಕ್ಕೆ ಹೇಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇವೆ ಎಂಬುದರಲ್ಲಿ. ಬದುಕಿನಲ್ಲಿ ಸಂಬಂಧಗಳಿರಲಿ, ಅವಕಾಶಗಳಿರಲಿ ಅಥವಾ ಸದ್ಗುಣಗಳಿರಲಿ ತಪ್ಪಿನ ಅರಿವಾದ ತಕ್ಷಣವೇ ಅಹಂಕಾರವನ್ನು ಬದಿಗಿಟ್ಟು ತಲೆಬಾಗ ಬೇಕು.
ಉಳಿದಿರುವ ಒಳ್ಳೆಯತನವನ್ನು ಹೃದಯಪೂರ್ವ ಕವಾಗಿ ಸ್ವೀಕರಿಸಿ, ಅದನ್ನು ಜತನದಿಂದ ಬೆಳೆಸು ವುದೇ ನಿಜವಾದ ಜಾಣ್ಮೆ. ಆಗಿ ಹೋದ ನಷ್ಟಕ್ಕಿಂತ, ಎಚ್ಚೆತ್ತು ಕೊಂಡು ಸರಿಪಡಿಸುವ ಸದಾಶಯವೇ ನಮ್ಮನ್ನು ಜೀವನದಲ್ಲಿ ಉದಾತ್ತ ಚಿಂತನೆಗೆ ಹಚ್ಚುತ್ತದೆ. ಇಂತಹ ಸದಾಶಯಗಳೇ ನಮ್ಮ ನಿಜವಾದ ಬೆಳವಣಿಗೆಯ ಹಾದಿ.