ಸಂಪಾದಕೀಯ ಸದ್ಯಶೋಧನೆ
1978ರ ಸುರೇಶ್ ರಾಮ್ ಮತ್ತು ಸುಷ್ಮಾ ಚೌಧರಿ ಅವರ ಲೈಂಗಿಕ ಹಗರಣವು ಭಾರತೀಯ ರಾಜಕೀಯ ಇತಿಹಾಸದ ಗತಿಯನ್ನೇ ಬದಲಿಸಿತು. ಆದರೆ ಈ ಇಡೀ ಹಗರಣದ ಸೂತ್ರಧಾರಿಯಾಗಿ, ದೆಹಲಿಯ ನಿರ್ಜನ ರಸ್ತೆಯಲ್ಲಿ ಕಾರನ್ನು ಅಡ್ಡಗಟ್ಟಿ ಆ ಕುಪ್ರಸಿದ್ಧ ಪೋಲರಾಯ್ಡ್ ಫೋಟೋ ಗಳನ್ನು ವಶಪಡಿಸಿಕೊಂಡಿದ್ದು ಕೇವಲ 30 ವರ್ಷದ ಒಬ್ಬ ರಾಜಕೀಯ ಕಾರ್ಯಕರ್ತ. ಆತನೇ ಇಂದಿನ ರಾಷ್ಟ್ರೀಯ ಲೋಕ ದಳದ ಹಿರಿಯ ಮುತ್ಸದ್ದಿ ಹಾಗೂ ಜನತಾ ದಳ ಯುನೈಟೆಡ್ (ಒಜೆಡಿಯು) ಪ್ರಮುಖ ರಾಷ್ಟ್ರೀಯ ನಾಯಕ ಕಿಶನ್ ಚಂದ್ ತ್ಯಾಗಿ (ಕೆ.ಸಿ.ತ್ಯಾಗಿ). ಪಶ್ಚಿಮ ಉತ್ತರ ಪ್ರದೇಶದ ಒಬ್ಬ ಸಾಮಾನ್ಯ ಗ್ರಾಮೀಣ ಯುವ ನಾಯಕ, ಈ ಒಂದೇ ಒಂದು ಘಟನೆಯಿಂದ ದೆಹಲಿಯ ಅಧಿಕಾರದ ಕಾರಿಡಾರ್‌ನಲ್ಲಿ ಹೆಮ್ಮರವಾಗಿ ಬೆಳೆದ ಕಥೆ ಅತ್ಯಂತ ರೋಚಕ.
1970ರ ದಶಕದ ಕೊನೆಯಲ್ಲಿ ಜನತಾ ಪಕ್ಷದೊಳಗೆ ತೀವ್ರ ಆಂತರಿಕ ಸಂಘರ್ಷ ನಡೆಯುತ್ತಿತ್ತು. ಪ್ರಧಾನಿ ಮೊರಾರ್ಜಿ ಮತ್ತು ರಕ್ಷಣಾ ಸಚಿವ ಜಗಜೀವನ್ ರಾಮ್ ಒಂದು ಬಣದಲ್ಲಿದ್ದರೆ, ಸಮಾಜ ವಾದಿ ಸಿದ್ಧಾಂತದ ಚೌಧರಿ ಚರಣ್ ಸಿಂಗ್ ಮತ್ತು ರಾಜ್ ನಾರಾಯಣ್ ಮತ್ತೊಂದು ಬಣದಲ್ಲಿದ್ದರು. ಚರಣ್ ಸಿಂಗ್ ಅವರನ್ನು ಪ್ರಧಾನಿ ಗಾದಿಯಲ್ಲಿ ಕೂರಿಸಲು ರಾಜ್ ನಾರಾಯಣ್ ಹಗಲಿರುಳು ತಂತ್ರ ರೂಪಿಸುತ್ತಿದ್ದರು.
ಇದನ್ನೂ ಓದಿ: Vishweshwar Bhat Column: ಸುರೇಶ್-ಸುಷ್ಮಾ ಪ್ರಕರಣ
ಇಂಥ ಸಮಯದಲ್ಲಿ, ಜಗಜೀವನ್ ರಾಮ್ ಮಗ ಸುರೇಶ್ ರಾಮ್ ರಹಸ್ಯ ಪ್ರಣಯದಾಟದ ಫೋಟೋಗಳನ್ನು ಹಿಡಿದು ತಂದ ಕೆ.ಸಿ.ತ್ಯಾಗಿ, ರಾಜ್ ನಾರಾಯಣ್ ಮತ್ತು ಚರಣ್ ಸಿಂಗ್ ಅವರ ಕಣ್ಣಿಗೆ ದೇವದೂತನಂತೆ ಕಂಡರು. ದೆಹಲಿಯ ರಾಜಕೀಯ ಚದುರಂಗದಾಟದಲ್ಲಿ ಎದುರಾಳಿ ಬಣವನ್ನು ಸಂಪೂರ್ಣವಾಗಿ ಧ್ವಂಸ ಮಾಡಬಲ್ಲ ಬ್ರಹ್ಮಾಸ್ತ್ರವನ್ನು ಈ ಯುವಕ ತಂದುಕೊಟ್ಟಿದ್ದ.
ಈ ಒಂದೇ ಒಂದು ಸಾಹಸದಿಂದ ಕೆ.ಸಿ.ತ್ಯಾಗಿ ರಾತ್ರೋರಾತ್ರಿ ಜನತಾ ಪಕ್ಷದ ಸಮಾಜವಾದಿ ಬಣದ ಕಣ್ಣಲ್ಲಿ ಹೀರೋ ಆಗಿ ಹೊರಹೊಮ್ಮಿದರು. ಚರಣ್ ಸಿಂಗ್ ಅತ್ಯಂತ ನಂಬಿಕಸ್ಥ ಮತ್ತು ಆಪ್ತ ವಲಯದಲ್ಲಿ ತ್ಯಾಗಿ ಅವರಿಗೆ ಪ್ರಮುಖ ಸ್ಥಾನ ಸಿಕ್ಕಿತು. ಕೆ.ಸಿ.ತ್ಯಾಗಿ ಮುಂದೆ ಬೆಳೆದು ದೊಡ್ಡ ನಾಯಕ ರಾದ ನಂತರ ತಮ್ಮ ಅನೇಕ ಸಂದರ್ಶನಗಳಲ್ಲಿ ಆ ಐತಿಹಾಸಿಕ ರಾತ್ರಿಯ ಘಟನೆಯನ್ನು ಮುಕ್ತವಾಗಿ ನೆನಪಿಸಿಕೊಂಡಿದ್ದಾರೆ.
ಅವರ ಮಾತುಗಳ ಹೇಳುವುದಾದರೆ- ‘ನಾವು ಅಂದು ಮಾಡಿದ್ದು ರಾಜಕೀಯ ಹೋರಾಟದ ಒಂದು ಭಾಗವಾಗಿತ್ತೇ ಹೊರತು ನಮ್ಮ ನಡುವೆ ಯಾವುದೇ ವೈಯಕ್ತಿಕ ದ್ವೇಷವಿರಲಿಲ್ಲ. ಆ ದಿನಗಳಲ್ಲಿ ತುರ್ತು ಪರಿಸ್ಥಿತಿಯ ಕಹಿ ನೆನಪುಗಳು ಹಸಿಯಾಗಿದ್ದವು ಮತ್ತು ರಾಜಕೀಯ ಮೌಲ್ಯಗಳಿಗಾಗಿ ದೊಡ್ಡ ಹೋರಾಟ ನಡೆಯುತ್ತಿತ್ತು. ಆದರೆ, ಆ ಪೋಲರಾಯ್ಡ್ ಫೋಟೋಗಳು ಇಷ್ಟೊಂದು ದೊಡ್ಡ ಮಟ್ಟದ ರಾಜಕೀಯ ಭೂಕಂಪ ಸೃಷ್ಟಿಸುತ್ತವೆ ಮತ್ತು ದೇಶದ ಪ್ರಧಾನಿ ಅಭ್ಯರ್ಥಿಯೊಬ್ಬರ ಬದುಕನ್ನು ಹೀಗೆ ಮುಗಿಸುತ್ತವೆ ಎಂದು ನಾವು ಅಂದುಕೊಂಡಿರಲಿಲ್ಲ.’
ತ್ಯಾಗಿ ಅವರ ಪ್ರಕಾರ, ಅವರ ಮೂಲ ಉದ್ದೇಶ ಸುರೇಶ್ ರಾಮ್ ಅವರನ್ನು ಬ್ಲ್ಯಾಕ್‌ಮೇಲ್ ಮಾಡುವುದಾಗಲಿ ಅಥವಾ ಹಣ ವಸೂಲಿ ಮಾಡುವುದಾಗಲಿ ಆಗಿರಲಿಲ್ಲ. ಕೇವಲ ತಮ್ಮ ಸಮಾಜ ವಾದಿ ನಾಯಕರಿಗೆ ರಾಜಕೀಯ ಅನುಕೂಲ ಮಾಡಿಕೊಡುವುದು ಮತ್ತು ಎದುರಾಳಿ ಬಣದ ನೈತಿಕತೆಯನ್ನು ಪ್ರಶ್ನಿಸುವುದಷ್ಟೇ ಅವರ ಗುರಿಯಾಗಿತ್ತು. ಆದರೆ ರಾಜಕೀಯದ ಚಾಣಕ್ಯರು ಆ ಫೋಟೋಗಳನ್ನು ಬಳಸಿದ ರೀತಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿತು.
1978ರ ಆ ಘಟನೆಯ ನಂತರ ಕೆ.ಸಿ.ತ್ಯಾಗಿ ರಾಜಕೀಯ ಮುನ್ನಡೆಗೆ ಯಾವುದೇ ಅಡೆತಡೆ ಎದುರಾಗ ಲಿಲ್ಲ. ಚರಣ್ ಸಿಂಗ್ ಆಶೀರ್ವಾದದಿಂದ ಪಶ್ಚಿಮ ಉತ್ತರ ಪ್ರದೇಶದಲ್ಲಿ ಪ್ರಬಲ ಯುವ ನಾಯಕ ನಾಗಿ ಹೊರಹೊಮ್ಮಿದ ಅವರು, ಮುಂದೆ ಲೋಕದಳ ಮತ್ತು ಜನತಾ ದಳದ ಸ್ಥಾಪನೆ ಯಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಕಾಲದಲ್ಲೂ ತ್ಯಾಗಿ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿದ್ದರು. 1989ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಹಾಪುರ್ ಕ್ಷೇತ್ರದಿಂದ ಜನತಾ ದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಜಯ ಸಾಽಸುವ ಮೂಲಕ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿ ದರು.
ಸಮಾಜವಾದಿ ಸಿದ್ಧಾಂತಕ್ಕೆ ಬದ್ಧರಾಗಿದ್ದ ತ್ಯಾಗಿ, ನಂತರದ ದಿನಗಳಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಶರದ್ ಯಾದವ್ ಅವರೊಂದಿಗೆ ಕೈಜೋಡಿಸಿದರು. ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ವಕ್ತಾರರಾಗಿ ದೀರ್ಘಕಾಲ ಸೇವೆ ಸಲ್ಲಿಸಿದರು. ಜೆಡಿಯು ಪಕ್ಷದ ಅತ್ಯಂತ ಪ್ರಭಾವಿ ಧ್ವನಿಯಾಗಿ ಬೆಳೆದ ಇವರನ್ನು ಪಕ್ಷವು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿತು.
ರಾಷ್ಟ್ರೀಯ ಮಾಧ್ಯಮಗಳಲ್ಲಿ ಪಕ್ಷದ ನಿಲುವುಗಳನ್ನು ಅತ್ಯಂತ ತಾರ್ಕಿಕವಾಗಿ ಮತ್ತು ನಯವಾಗಿ ಮಂಡಿಸುವ ಮುತ್ಸದ್ದಿ ನಾಯಕನಾಗಿ ಅವರು ಗುರುತಿಸಿಕೊಂಡರು. ಹಿಂದಿನ ವರ್ಷವಷ್ಟೇ ತ್ಯಾಗಿ ಜೆಡಿಯು ತೊರೆದು ರಾಷ್ಟ್ರೀಯ ಲೋಕ ದಳ ಸೇರಿದರು.